ಗಝಲ್
ಡಾ. ಗೋವಿಂದ ಹೆಗಡೆ
ಸುಳಿಬಾಳೆಯಂಥ ಹೆಣ್ಣು ನೀನು ತಿಳಿಯದ್ದು ನನ್ನ ತಪ್ಪು
ಆಲಿಕಲ್ಲ ಮಳೆಯಂತೆ ಸುರಿದೆ, ಸುರಿದಿದ್ದು ನನ್ನ ತಪ್ಪು
ಕನಸಿನ ಪುಟದಲ್ಲಿ ಬರೆದೊಂದು ಹಾಡಂತೆ ಕಂಡೆನೇ ನಿನ್ನ
ಎತ್ತಿ ಅಪ್ಪಿದೆ ನೀ ಗರುಕೆಯೆಸಳ, ಹೆಚ್ಚು ಬಯಸಿದ್ದು ನನ್ನ ತಪ್ಪು
ಎದೆ ಕೊರೆದ ದುಗುಡಕ್ಕೆ ಹೊರದಾರಿ ಬಯಸಿದವಳು ನೀನು
ಕಿವಿಯಾದ ಮಾತ್ರಕ್ಕೆ ಆಸರೆ ನಾನೆಂದು ಉಬ್ಬಿದ್ದು ನನ್ನ ತಪ್ಪು
ಫೋಲ್ ವಾಲ್ಟ್ ನಲ್ಲಿ ಜಿಗಿದು ದಾಟಿ ಕೋಲನ್ನು ಕೈ ಬಿಡುವರು
ಮಣ್ಣಿಗೆಸೆದೆ ನೀನೆಂದು ಮರುಗುತ್ತ ಉಳಿದಿದ್ದು ನನ್ನ ತಪ್ಪು
ದಾಟಿ ಹೋಗಿದ್ದೀ ನೀನು ಗೊತ್ತು,ಮರಳಿ ಹರಿಯದು ನದಿ
ಬಿದ್ದ ಪಕಳೆಯನೆತ್ತಿ ಸಖೀ,ತುಟಿಗೊತ್ತಿ ಕಳಲಿದ್ದು ನನ್ನ ತಪ್ಪು
ಪ್ರೀತಿಯ ಪರಾಕಾಷ್ಠೆ ಯ ಅಭಿವ್ಯಕ್ತಿ ಈ ಸುಂದರ ಗಜಲ್ನಲ್ಲಿದೆ. ಡಾ. ಗೋವಿಂದ ಹೆಗಡೆ ಅವರ ಗಜಲ್ ಗೇಯತೆ ಮತ್ತು ಪ್ರಬುದ್ಧ ಭಾಷಾ ಪ್ರಯೋಗದ ಲಕ್ಷಣ ಹೊಂದಿದೆ.
ತಪ್ಪೇನಿಲ್ಲ, ನೆನಪಿಗೆ ಬಂದದ್ದಕ್ಕೆ ಇಂತಹ ಒಳ್ಳೆಯ ಕವಿತೆ!