ಕಣ; ಒಕ್ಕಲು ಸಂಸ್ಕೃತಿಯ ತಾಣ

ಲೇಖನ

ಕಣ:

ಒಕ್ಕಲು ಸಂಸ್ಕೃತಿಯ ತಾಣ

ಕಾಂತರಾಜು ಕನಕಪುರ

Indian farmers harvesting paddy in Sivasagar, a district of Assam | People  of the world, Farmer, Agriculture farming

ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು

ಮೇಟಿಯಿಂರಾಟಿ ನಡೆದುದಲ್ಲದೆ ದೇಶ

ದಾಟವೇ ಕೆಡುಕು;- ಸರ್ವಜ್ಞ

ಒಕ್ಕಲುತನ ಎಂಬುದು ಯಾವುದೇ ಸಮಾಜದ ಬಹುಮುಖ್ಯ ಕಾಯಕ. ಉಳಿದ ಎಲ್ಲಾ ಕಾಯಕಗಳು ಅದರ ಆಧಾರಲ್ಲಿಯೇ ರೂಪುಗೊಳ್ಳುವಂತಹವುಗಳು. ರೈತನೊಬ್ಬನೇ ನಿಜವಾದ ಸ್ವಾವಲಂಬಿ ಉಳಿದ ಎಲ್ಲರೂ ಅದೆಷ್ಟೇ ಉನ್ನತ ಸ್ಥಾನಮಾನ ಹೊಂದಿದ್ದರೂ, ಎಷ್ಟೇ ದೊಡ್ಡ ಸಾಧನೆ ಮಾಡಿದ್ದರೂ, ಅದೆಷ್ಟೇ ದೊಡ್ಡ ಅಧಿಕಾರಸ್ಥರಾಗಿದ್ದರೂ  ಅನ್ನಕ್ಕಾಗಿ ಅವನ ಮೇಲೆ ಅವಲಂಬಿತರು. ಈ ಹಿನ್ನೆಲೆಯಲ್ಲಿಯೇ ಸರ್ವಜ್ಞನು ಕೋಟಿವಿದ್ಯೆಗಳಿಗಿಂತ ಮೇಟಿ ವಿದ್ಯೆ ಮೇಲು ಎಂದಿರುವುದು. ಒಕ್ಕಲು ಮಕ್ಕಳಿಗೆ ಒಕ್ಕಣೆಯ ಕಾಲ ಅಥವಾ ಸುಗ್ಗಿ ಕಾಲ ಬಹಳ ಮಹತ್ವದ ಕಾಲ. ವರ್ಷದ ದುಡಿತದ ಫಲವನ್ನು ಕಾಣುವ ಹರ್ಷದ ಸಮಯ. ಹಾಗೆಯೇ ಒಕ್ಕಣೆ ಪ್ರಕ್ರಿಯೆಯಲ್ಲಿ ಕಣದ ಪಾತ್ರ ಗಣನೀಯವಾದುದು. ಒಕ್ಕಣೆ ಮತ್ತು ಕಣ ಎಂಬುದು ಅವಿಭಜಿತ ಕಲ್ಪನೆಗಳು.

ಕಣದ ತಯಾರಿ

ಕಣ ಒಂದು ಅಭೂತಪೂರ್ವ ಕಲ್ಪನೆ. ನಿಜಕ್ಕೂ ಇಂತಹ ಉತ್ಕೃಷ್ಟ ಕಲ್ಪನೆಯನ್ನು ಸಾಕಾರಗೊಳಿಸಿಕೊಂಡ ನಮ್ಮ ಪೂರ್ವಜರಿಗೆ ನಾವು ತಲೆ ಬಾಗಲೇಬೇಕು. ನಮ್ಮ ಬಾಲ್ಯದ ಬಹಳ ಕಾಡುವ ನೆನಪುಗಳಲ್ಲಿ ಕಣದ ಅನುಭವವೂ ಒಂದು. ಕಣದ ತಯಾರಿ ಎಂದರೆ ಅದು ಸುಲಭದ ಕಾರ್ಯವಲ್ಲ. ಬೆಳೆಯ ಕಟಾವಣೆ ಆದ ನಂತರ ಬೆಳೆದ ಬೆಳೆಯ ಪ್ರಮಾಣಕ್ಕೆ ಅನುಗುಣವಾಗಿ ಕಣದ ತಯಾರಿ ಮಾಡಬೇಕು. ಮೊದಲಿಗೆ ಕಣ ಮಾಡುವ ಜಾಗದಲ್ಲಿ ಬೆಳೆ ಕಟಾವಣೆ ಮಾಡಿದ ನಂತರ ಉಳಿದ ಕೂಳೆಗಳನ್ನು ಸಲಿಕೆಯಿಂದ ಕೆತ್ತಿ ಹಸನು ಮಾಡಿ ಕಸ ಕಡ್ಡಿಗಳನ್ನು ಹೆಕ್ಕಿ ಅಚ್ಚುಕಟ್ಟು ಮಾಡುವುದು. ನಂತರ ವರ್ತುಲಾಕೃತಿಯ ಸಮತಟ್ಟು ಪ್ರದೇಶ ಸಿದ್ಧಪಡಿಸಿ, ಮಧ್ಯದಲ್ಲಿ ಮೇಟಿಯನ್ನು ನೆಡುವುದು. ಮೇಟಿಗೆ ಚೆನ್ನಾಗಿ ಬಲಿತಿರುವ ಕಕ್ಕೆ(ಸ್ವರ್ಣ ಪುಷ್ಪ) ಬೇವು, ಬನ್ನಿ ಅಥವಾ ಜಾಲಿ ಮರವನ್ನು ಬಳಸಲಾಗುತ್ತಿತ್ತು. ಇದಾದ ನಂತರ ಕಣಕ್ಕೆ ನೀರು ಹಾಯಿಸುವುದು ಗಂಡಸರು ಹೊಳೆಯಿಂದಲೋ ಅಥವಾ ಕೆರೆಯಿಂದಲೋ ಅಡ್ಡೆಯಲ್ಲಿ ನೀರು ಸಾಗಿಸಿದರೆ ಹೆಂಗಸರು ಅವರಿಗೆ ಸರಿಸಮನಾಗಿ ಎರಡು ಚೌರಿಗೆಗಳಲ್ಲಿ ನೀರು ಸಾಗಿಸಿ ಕಣದ ತುಂಬಾ ನೀರು ಸುರಿದು ಮಣ್ಣನ್ನು ಮೆದುಗೊಳಿಸುವ ಕೆಲಸದಲ್ಲಿ ನಿರತರಾಗುವರು. ನೀರು ಸುರಿಯುವಾಗಲೇ ಅಲ್ಲಲ್ಲಿ ಕಂಡುಬರುವ ತಗ್ಗು-ದಿಣ್ಣೆಗಳನ್ನು ಸರಿಮಾಡಿ ಸಮತಟ್ಟು ಮಾಡಬೇಕು ಸಲಿಕೆಗೆ ಸಿಗದ ಕೂಳೆಗಳನ್ನು ಕೀಳಬೇಕು. ಮಾರನೆಯ ದಿನ ಹಿಂದಿನ ದಿನ ಚೆನ್ನಾಗಿ ನೀರು ಕುಡಿದು ಮೃದುವಾದ ನೆಲವನ್ನು ಮೇಟಿಗೆ ಸಾಲಾಗಿ ಒಂದರ ಪಕ್ಕ ಒಂದು ಹಸುಗಳನ್ನು ಕಟ್ಟಿ ಚೆನ್ನಾಗಿ ತುಳಿಸಿ ಗಟ್ಟಿಗೊಳಿಸುವುದಲ್ಲದೆ, ಕುರಿ ಮತ್ತು ಮೇಕೆಗಳಿಂದಲೂ ನೆಲ ತುಳಿಸಿ ಹದಮಾಡಬೇಕು.

ಮೂರನೆಯ ದಿನ ಕಣಕ್ಕೆ ಅಂತಿಮ ರೂಪ ಕೊಡುವುದು ಕಣದ ಸ್ಥಳಕ್ಕೆ ಹಸುವಿನ ಸಗಣಿಯಿಂದ ಸಾರಿಸುವುದು. ಕಣ ಒಣಗಿದ ನಂತರ ಒಲೆ ಬೂದಿಯಿಂದ ಕಣದ ಸುತ್ತಲೂ ವರ್ತುಲಾಕಾರವಾಗಿ ಗೆರೆ ಎಳೆಯುವುದು ಮತ್ತು ಮೇಟಿಯ ಸುತ್ತಲೂ ಒಂದು ವರ್ತುಲವನ್ನು ಹಾಕಿ, ಮೇಟಿಯಿಂದ ಹೊರಟು ನಾಲ್ಕು ದಿಕ್ಕುಗಳಿಗೂ ನಾಲ್ಕು ಗೆರೆ ಎಳೆದು, ಗೆರೆಯ ತುದಿಗಳಲ್ಲಿ ತೆನೆಯ ಚಿತ್ರವನ್ನು ಮೂಡಿಸುವುದು.  ಹಾಗೆಯೇ ಹಿಂದೆ ದೇವ ಮೂಲೆ (ಈಶಾನ್ಯ ದಿಕ್ಕು) ಯಲ್ಲಿ ಒಂದು ಚಿಕ್ಕ ಗುಂಡಿ ತೆಗೆದು ನೀರು ತುಂಬಿ ಒಂದು ಚಿಕ್ಕ ಕಲ್ಲಿನ ಚಪ್ಪಡಿ ಇಟ್ಟು ಪೂಜಿಸಲಾಗುತ್ತಿತ್ತು. ಗೋಮಯದ ಗಣಪನಿಗೆ ಅಣ್ಣೆ ಹೂ, ಹೊನ್ನೆಯ ಹೂ, ತುಂಬೆ ಹೂ ಮತ್ತು ಗರಿಕೆಯಿಂದ ಸಿಂಗರಿಸಿ ಮೇಟಿಯ ಮೇಲಿಟ್ಟು ಪೂಜೆ ಮಾಡಿದರೆ ಅಲ್ಲಿಗೆ ಒಕ್ಕಣೆಯ ಕಾರ್ಯಕ್ಕೆ ಕಣ ಸಿದ್ಧವಾಯಿತು ಎಂದರ್ಥ.

ಕಣ ಒಕ್ಕಲು ಮಕ್ಕಳಿಗೆ ಅತ್ಯಂತ ಪವಿತ್ರವಾದ ತಾಣ, ಭೂಮಿತಾಯಿ ಬೆಳೆಸಿದ ಬೆಳೆಯು ತಿನ್ನುವ ರೂಪ ಪಡೆಯುವುದು ಕಣದಲ್ಲೇ ಹಾಗಾಗಿ ಕಣಕ್ಕೆ ಪೂಜ್ಯ ಭಾವ. ಪ್ರತೀ ವರ್ಷ ಕಣ ಮಾಡಲಾಗುವ ಪಾತಿಗೆ, ಕಣದ ಪಾತಿ ಎಂತಲೇ ಅಭಿದಾನ ಉಳಿದ ಪಾತಿಗಳಿಗಿಂತ ಅದಕ್ಕೊಂದು ವಿಶೇಷ ಗೌರವ. ಅದು ಬೆವರ ಬದುಕಿನ ಪದಕ. ಕಣ ಸಿದ್ಧವಾಗುತಿದ್ದಂತೆಯೇ ಕಣದ ಪಕ್ಕದಲ್ಲಿಯೇ ಒಂದು ಚಿಕ್ಕ ಗುಡಿಸಲನ್ನು ಹಾಕುವುದು ಅಗತ್ಯವಾದ ಕೆಲಸ. ರಾತ್ರಿ ಧಾನ್ಯ ತುಂಬಿದ ಕಣವನ್ನು ಕಾಯಲು ಈ ಚಿಕ್ಕ ಗುಡಿಸಲನ್ನು ಬಳಸಲಾಗುತಿತ್ತು. ನಂತರ ಕಣದಲ್ಲಿ ಒಕ್ಕಣೆಯ ಕಾರ್ಯ ಪ್ರಾರಂಭಗೊಳ್ಳುವುದು.   ಬೆಳ್ಳಂಬೆಳಿಗ್ಗೆ ಕಟಾವು ಮಾಡಿರುವ ಬೆಳೆಯನ್ನು ಬಣವೆಯಿಂದ ಕಣದಲ್ಲಿ ಗಡಿಯಾರದ ಚಲನೆಯಂತೆ ಅರಿ ಹಾಸಬೇಕು ಸೂರ್ಯನ ಬಿಸಿಲು ಏರಿದಂತೆ ಒಕ್ಕಣೆಯ ಗುಂಡನ್ನು ಹಸುಗಳಿಗೆ ಕಟ್ಟಿ ಹಾಸಿದ ಅರಿಯ ಮೇಲೆ ಹರಿಸಬೇಕು. ಗುಂಡು ಹೊಡೆದ ನಂತರ, ಮೆರೆಯಿಂದ ಅರಿ ತಿರುವಿಹಾಕಬೇಕು ಹಿಂದೆಯೇ ಗುಂಡು ಹರಿಸುವುದು ಮತ್ತು ಚಿಕ್ಕ ಬಡಿಗೆಗಳಿಂದ ಅರಿಯನ್ನು ಧಾನ್ಯ ಕಾಳುಗಳು ಉದುರುವ ಹಾಗೆ ಬಡಿಯಬೇಕು. ಸಂಜೆ ಸಮೀಪಿಸುತ್ತಿದ್ದಂತೆ ಹುಲ್ಲನ್ನು ಎತ್ತಿ ಕಣದ ಪಕ್ಕದಲ್ಲಿ ರಾಶಿ ಹಾಕುವುದು. ನಂತರ ಯಾದ ಆಡಿಸುವುದು (ಹುಲ್ಲು ಬೇರ್ಪಟ್ಟ ನಂತರ ಉಳಿದ ಕಡ್ಡಿಗಳನ್ನು ಮುಳ್ಳಿನ ಕೋಲಿನಿಂದ ತೆಗೆಯುವುದು). ಒಕ್ಕಣೆಯಾದ ಧಾನ್ಯವನ್ನು ಮೇಟಿಯ ಸುತ್ತಲೂ ರಾಶಿ ಹುಯ್ಯಲಾಗುತ್ತದೆ. ಮೊದಲ ದಿನದ ಹುಲ್ಲು ಬೀಳುತಿದ್ದ ಹಾಗೆ ಕೇವಲ ಅಸ್ಥಿಪಂಜರದ ಹಾಗಿದ್ದ ಕಣದ ಗುಡಿಸಲು ಹುಲ್ಲು ಹೊದ್ದು ವಾಸ ಯೋಗ್ಯವಾಗಿ ಬದಲಾಗುತಿತ್ತು. ಕಣದ ಗುಡಿಸಲಿನಲ್ಲಿ ಹಾಸಲು ಹೊದೆಯಲು ಎಲ್ಲದಕ್ಕೂ ಹುಲ್ಲು ಮಾತ್ರ.

ಇನ್ನು ಕಣದಲ್ಲಿ ಬಳಕೆಯಾಗುವ ಸಾಮಾನ್ಯ ಸಲಕರಣೆಗಳಿಗೆ ಮತ್ತು ತಿನ್ನುವ ತಿನಿಸುಗಳಿಗೂ ವಿಶೇಷ ಅಭಿದಾನಗಳನ್ನೇ ನೀಡಲಾಗಿದೆ. ಉದಾಹರಣೆಗೆ, ಊಟ-ಕವಳ, ರೊಟ್ಟಿ-ಕಜ್ಜಾಯ, ಕಾಳುಗಳು-ರಜ, ಕುಡುಗೋಲು-ಬಸವ, ಪೊರಕೆ-ಚವರ, ಮೊರ-ಕೊಂಗ, ವಂದರಿ-ಬಂಡಿ, ಗಾಳಿ-ವಾಸುದೇವ ಇತ್ಯಾದಿ. ಕಣದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಈ ವಿಶಿಷ್ಟ ಹೆಸರುಗಳನ್ನೇ ಬಳಸಬೇಕು. ಕಣದಲ್ಲಿ ಯಾವುದೇ ಕಾರಣಕ್ಕೂ ಚಪ್ಪಲಿ ಬಳಕೆ ನಿಷಿದ್ಧ.

ಭೂತನ ಸೇವೆ

ಒಕ್ಕಣೆಯ ಕೆಲಸ ಮುಕ್ತಾಯದ ಹಂತಕ್ಕೆ ಬರುವ ದಿನ ಭೂತನ ಸೇವೆ ಮಾಡಲಗುತ್ತದೆ. ಒಕ್ಕಣೆ ಆಗಿ ಮೇಟಿಯ ಸುತ್ತಲೂ ಹಾಕಿದ್ದ ಧಾನ್ಯದ ರಾಶಿಯನ್ನು ಕಣದ ಪೂರ್ವ ದಿಕ್ಕಿನಲ್ಲಿ ಒಂದೆಡೆ ರಾಶಿ ಮಾಡುವುದು. ರಾಶಿಯ ತಳದಲ್ಲಿ ಬಸವನಿಂದ ವರ್ತುಲಾಕೃತಿಯಲ್ಲಿ ಒಂದು ಗೆರೆ ಹಾಕಿ ನೆತ್ತಿಯಲ್ಲಿ ಬಸವನನ್ನು ಇಟ್ಟು, ರಾಶಿಗೆ ಕಣಗಿಲೆ ಹೂ ಇಟ್ಟು,  ರಾಶಿಯ ಪಕ್ಕದಲ್ಲಿ ಸಗಣಿಯ ಗಣಪನನ್ನು ಮಾಡಿ ಪೂಜಿಸಲಾಗುವುದು. ಕಣ ಮಾಡಿದ ಮೊದಲ ದಿನದಂದು ಕಣದ ಸುತ್ತಲೂ ಮತ್ತು ಮೇಟಿಯಿಂದ ಹೊರಟು ನಾಲ್ಕು ದಿಕ್ಕಿಗೆ ಗೆರೆ ಎಳೆದು ಗೆರೆ ತುದಿಗೆ ಧಾನ್ಯದ ಚಿತ್ರ ಬಿಡಿಸುವುದು. ದೇವ ಮೂಲೆಯಲ್ಲಿ ಕಣದ ಕೆಲಸದಲ್ಲಿ ಸಹಾಯ ಮಾಡಿದ ಸಲಕರಣೆಗಳ ಚಿತ್ರ ಬಿಡಿಸಿ ಅವುಗಳಿಗೂ ಗೌರವ ಸಲ್ಲಿಸಲಾಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಮಾಡಬೇಕಾಗಿರುವುದು ಭೂತನ ಸೇವೆ, ಕಣದ ಪೂರ್ವ ದಿಕ್ಕಿನಲ್ಲಿ ಮೂರು ಚಿಕ್ಕ ಚಪ್ಪಡಿ ಕಲ್ಲುಗಳನ್ನು ಬಳಸಿ ಭೂತನ ದೇವಸ್ಥಾನ ಕಟ್ಟಿ, ನುಣುಪಾದ ಕಲ್ಲುಗಳನ್ನು ಭೂತನನ್ನು ಮಾಡಿ ಅದರಲ್ಲಿರಿಸಿ, ಅಲ್ಲೇ ಪಕ್ಕದಲ್ಲಿ ಒಲೆ ಹೂಡಿ ಬೆಲ್ಲದ ಅನ್ನ ಮಾಡಿ ಭೂತನಿಗೆ ಮತ್ತು ಮೇಟಿಗೆ ಎಡೆ ಇರಿಸಿ ಪೂಜೆ ಸಲ್ಲಿಸಿ, ಕಣದಲ್ಲಿ ನೆರೆದವರೆಲ್ಲರೂ ಪ್ರಸಾದ ಸ್ವೀಕರಿಸಿ ಧಾನ್ಯದ ಹೊಟ್ಟು ತೂರುವುದನ್ನು ಪ್ರಾರಂಭಿಸುವುದು.

ಧಾನ್ಯ ತೂರುವುದು

ಒಕ್ಕಣೆಯ ಸಮಯದಲ್ಲಿ ಧಾನ್ಯಗಳಿಂದ ಹೊಟ್ಟನ್ನು ಬೇರ್ಪಡಿಸುವ ಬಹು ಮುಖ್ಯ ಘಟ್ಟ ಧಾನ್ಯ ತೂರುವುದು.  ಧಾನ್ಯ ತೂರುವುದು ಒಂದು ಕಲೆ, ಧಾನ್ಯವನ್ನು ಹೇಗೆಂದರೆ ಹಾಗೆ ತೂರುವಂತಿಲ್ಲ ಗಾಳಿಯ ವೇಗವನ್ನು ಆಧರಿಸಿ ಧಾನ್ಯವನ್ನು ಕೊಂಗ ಬಳಸಿ ಹದವರಿತು ತೂರಿದಾಗ ಮಾತ್ರ ಕಸಕಡ್ಡಿಗಳು ಮತ್ತು ಹೊಟ್ಟು ಬೇರ್ಪಡುತ್ತವೆ. ಕಣದಲ್ಲಿ ವಾಸುದೇವ ಸುಳಿಯುವ ಸ್ಥಳದಲ್ಲಿ ಉದ್ದಿಗೆ ಮಣೆ (ಧಾನ್ಯಗಳನ್ನು ತೂರಲು ಅನುವಾಗುವಂತೆ ಎತ್ತರದಲ್ಲಿ ಜೋಡಿಸಿದ ಮಣೆ) ಮೇಲೆ ಎತ್ತರದ ಆಸಾಮಿಗಳು ಮಣೆಯ ಎರಡು ಬದಿಗಳಲ್ಲಿ ನಿಂತು ಧಾನ್ಯಗಳನ್ನು ತೂರಬೇಕು. ಇಬ್ಬರು ಚವರ ಹಿಡಿದು ಗಾಳಿಯಲ್ಲಿ ತೂರಿಹೋಗದ ಕಸಕಡ್ಡಿಗಳನ್ನು ವಿಂಗಡಿಸಬೇಕು. ಕಣದಲ್ಲಿ ಗಾಳಿ ಬೀಸುವಿಕೆಯನ್ನು ಕಾಯುವುದು ಒಂದು ಕೆಲಸ. ಗಾಳಿ ಬೀಸದಿದ್ದಾಗ “ಓ…ವಾಸುದೇವೋ” ಎಂದು ಕರೆಯಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿಯೇ ʼ ಗಾಳಿ ಬಂದಾಗ ತೂರಿಕೋʼ ಎಂಬ ನುಡಿಗಟ್ಟು ಚಾಲ್ತಿಗೆ ಬಂದಿರುವುದು. ಕೆಲವೊಮ್ಮೆ ಒಕ್ಕಣೆಯ ಕೆಲಸ ಪೂರ್ಣಗೊಂಡು ಗಾಳಿ ಇರದ ಕಾರಣಕ್ಕೆ ಧಾನ್ಯ ತೂರಲು ದಿನಗಟ್ಟಲೆ ಕಾಯುತಿದ್ದದ್ದೂ ಉಂಟು. ಧಾನ್ಯ ತೂರಿದುದರಿಂದ ಉಳಿದ ಉಬ್ಬಲು(ಹೊಟ್ಟು) ಹಳೆಯ ವಸ್ತ್ರಗಳೊಳಗೆ ಸೇರಿ ಮುಂದಿನ ಒಕ್ಕಣೆಯವರೆಗೆ ತಲೆದಿಂಬುಗಳಾಗುತ್ತಿತ್ತು. ಕಣದಲ್ಲಿಯೇ ಉಳಿದ ಉಬ್ಬಲು ಮುಂದೆ ಮಳೆ ಹುಯ್ಯುವವರೆಗೆ ರಾಸುಗಳಿಗೆ ಮೇವಾಗುತ್ತಿತ್ತು.

ಕಡೇ ಕಣ ಕಾಯುವುದು

ಕಣ ಕಾಯುವುದು ಗಂಡಸರ ಕೆಲಸ. ಒಕ್ಕಣೆಯ ಕಾರ್ಯ ಮುಗಿದ ನಂತರ ಧಾನ್ಯದ ರಾಶಿ ಮನೆಗೆ ಸಾಗಿಸಿದ ನಂತರ ಕೊನೆಯಲ್ಲಿ ಖಾಲಿ ಕಣ ಉಳಿಯುತ್ತದೆ. ನೆನ್ನೆಯವರೆಗೆ ಧಾನ್ಯದ ರಾಶಿ ತುಂಬಿ ತುಳುಕುತ್ತಿದ್ದ ಕಣ ಖಾಲಿಯಾಗಿ ಇರಬಾರದೆಂದು ಧಾನ್ಯಗಳನ್ನು ಮನೆಗೆ ಸಾಗಿಸುವಾಗ ಸ್ವಲ್ಪ ಕಣದಲ್ಲಿಯೇ ಉಳಿಸಿ ಅಂದು ರಾತ್ರಿ ತಪ್ಪದೇ ಕಣ ಕಾಯುತಿದ್ದರು. ಕೊನೆಯ ದಿವಸ ಕಣ ಕಾಯದಿರುವುದು ಒಂದು ತಪ್ಪು ಎಂದೇ ಪರಿಗಣಿತವಾಗಿರುತ್ತಿತ್ತು.

ಮೇಟಿ ಕೀಳುವುದು

ಯುಗಾದಿಯ ದಿನ ಸಂಜೆ ಮೇಟಿಗೆ ಪೂಜೆ ಸಲ್ಲಿಸಿ ಕಿತ್ತು ಮುಂದಿನ ಒಕ್ಕಣೆಯ ಕಾರ್ಯ ಪ್ರಾರಂಭಗೊಳ್ಳುವವರೆಗೆ ಮನೆಯಲ್ಲಿ ಜತನವಾಗಿ ಇಡಲಾಗುತ್ತದೆ. ಅಲ್ಲಿಗೆ ಒಂದು ವರ್ಷದ ಉತ್ಪಾದನಾ ಪ್ರಕ್ರಿಯೆ ಪೂರ್ಣಗೊಂಡು ಮತ್ತೆ ಮಂಗಾರು ಮಳೆಗೆ ರೈತ ಕಾಯತೊಡಗುತ್ತಾನೆ.

ಒಟ್ಟಿನಲ್ಲಿ, ಮುಂಗಾರಿನ ಮಳೆ ಪ್ರಾರಂಭಗೊಂಡಂತೆ ಹೊನ್ನೇರು ಪೂಜೆ (ಮೊದಲ ಉಳುಮೆ) ಯಿಂದ ಮೊದಲ್ಗೊಂಡು, ಗೊಬ್ಬರ ಹರಡಿ, ಕುಂಟೆ ಹೊಡೆದು, ಹಲುಬೆ ಆಡಿಸಿ, ಕಾಳು ಬಿತ್ತನೆ ಮಾಡಿ, ಹೊಲ ಹರಗಿ, ಕಳೆ ಕಿತ್ತು, ಬೆಳೆ ಕೊಯ್ದು, ಮೆದೆ (ಬಣವೆ) ಹಾಕಿ, ಕಣ ಮಾಡಿ, ಒಕ್ಕಣೆ ಮಾಡಿ, ಹಸನುಗೊಳಿಸಿ, ಮನೆಗೆ ಧಾನ್ಯ ತರುವ ವರೆಗೆ ಒಕ್ಕಲು ಮಕ್ಕಳ ಬೆವರ ಬದುಕಿಗೆ ಫಲದೊರೆಯುವುದು ಮತ್ತು ಅವರ ಶ್ರಮ ಸಾರ್ಥಕವಾಗುವುದು ಕಣದ ಮೂಲಕ ಎಂದರೆ ಅತಿಶಯೋಕ್ತಿ ಅಲ್ಲ.

ಮರೆಯಾದ ಕಣ ಸಂಸ್ಕೃತಿ

ಪ್ರಸ್ತುತ ಕಣ ಸಂಸ್ಕೃತಿ ಕಣ್ಮರೆಯಾಗಿದೆ ಎಂದರೂ ತಪ್ಪಾಗುವುದಿಲ್ಲ. ಕಣದ ಬದಲಿಗೆ ಒಕ್ಕಲು ಮಕ್ಕಳು ರಸ್ತೆಯನ್ನೇ ಕಣವನ್ನಾಗಿ ಬಳಸಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೂ ಇದು ಎರವಾಗುತ್ತಿದೆ. ರಾತ್ರಿ ಸಮಯದಲ್ಲಿ ಬೃಹತ್‌ ವಾಹನಗಳು ರಸ್ತೆಯಲ್ಲಿ ಮಲಗಿದ್ದ ರೈತರ ಮೇಲೂ ಹರಿದ ಉದಾಹರಣೆಗಳು ಇವೆ. ಕಣದೊಳಗೆ ಚಪ್ಪಲಿ ಧರಿಸಿ ಬರಬಾರದು ಎಂಬ ನಿಯಮದಿಂದ ಅಮೇಧ್ಯದ ಮೇಲೂ ಹರಿದ ವಾಹನಗಳ ಚಕ್ರ ಅನ್ನದ ಮೇಲೂ ಹರಿಸುವ ಮಟ್ಟಿಗೆ ಮುಂದುವರಿದಿದ್ದೇವೆ. ರಸ್ತೆಯ ಮೇಲೆ ಒಕ್ಕಣೆ ಮಾಡುವುದರಿಂದ ಹುಲ್ಲಿನ ಮೇಲೆ ವಾಹನಗಳ ಡೀಸೆಲ್‌, ಪೆಟ್ರೋಲ್‌ ಅಥವಾ ಗ್ರೀಸ್‌ ಸೋರಿ ಅದು ರಾಸುಗಳು ತಿನ್ನಲು ಯೋಗ್ಯವಾಗುವುದಿಲ್ಲ.

ತಿಳಿವಳಿಕೆ ಮೂಡಿಸಬೇಕಿದೆ

ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ಅಪಘಾತಗಳು ಸಂಭವಿಸುವ ಬಗ್ಗೆ ಪೊಲೀಸ್‌ ಇಲಾಖೆ, ಕೃಷಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳ ವತಿಯಿಂದ ರೈತರಿಗೆ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕಾಗಿದೆ. ಸಾಮೂಹಿಕ ಮತ್ತು ವೈಯುಕ್ತಿಕ ಕೃಷಿ ಕಣಗಳ ನಿರ್ಮಾಣಕ್ಕೆ ಕೃಷಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳ ಮೂಲಕ ಆರ್ಥಿಕ ಅನುದಾನವು ಲಭ್ಯವಿದ್ದು ಅದನ್ನು ಬಳಸಿಕೊಳ್ಳುವ ಮೂಲಕ ಮತ್ತೆ ಒಕ್ಕಲು ಸಂಸ್ಕೃತಿಯ ಪುನರುಜ್ಜೀವನಕ್ಕೆ ಮುಂದಡಿ ಇಡಬೇಕಾಗಿದೆ. ಒಕ್ಕಲು ಮಕ್ಕಳು ಕೂಡ ಈ ಕುರಿತು ಆಸಕ್ತಿ ತೋರಬೇಕಿದೆ.

************************

Leave a Reply

Back To Top