ಅಂಕಣ ಬರಹ

ರಂಗ ರಂಗೋಲಿ

ಹೃದಯ ರಂಗಸ್ಥಳ

[ಆ ತೆರೆದ ಅಂಗಣದ ಖಾಲಿ ಕುರ್ಚಿಗಳ ನಡುವಿನಿಂದ ಕತ್ತಲನ್ನು ನೂಕುತ್ತ ಬಂದಂತೆ ಆಕೆ ಯಾರನ್ನೋ ಅರಸುತ್ತಿದ್ದರು. ಆಗಷ್ಟೇ ಸುರಿದ ಮಳೆ ನಿಂತಾಗಿನ ಮೌನದಂತೆ ರಂಗ ತೆರವಾಗಿತ್ತು. ಪರಿಕರಗಳನ್ನು ನಮ್ಮವರು ತೆಗೆದಿಡುತ್ತಿದ್ದರು. ಸೈಡ್ ವಿಂಗ್ ನ ಕತ್ತಲಿನಲ್ಲಿ ಸಪೂರ ದೇಹದ ಹೆಣ್ಣು ಯಾವುದೋ ನೆರಳಿನಂತೆ ನಿಂತಿದ್ದರು.ಅದುಮಿಟ್ಟ ಅಳುಕೊಂದು ಅವರನ್ನು ಅಲ್ಲೇ ಹಿಡಿದಿರಿಸಿತ್ತು. ನಮ್ಮ ಕಲಾವಿದರೊಬ್ಬರು ಗಡಿಬಿಡಿಯಲ್ಲಿ ರಂಗದ ಮೇಲಿದ್ದ ನಾಟಕದ ಪರಿಕರ ಎತ್ತಿಡುವಾಗ ಗಮನಿಸಿ ಬಳಿ ಬಂದು

‘ ಯಾರು ಬೇಕಿತ್ತು?’

‘ ಸೌಜನ್ಯ’ ಅವರನ್ನು.

ಒಂದೆರಡು ನಿಮಿಷ ಅಷ್ಟೇ. ನೋಡಿ ಹೋಗುವೆ.’

‘ ಅಲ್ಲಿ ಒಳಗಿದ್ದಾರೆ’

ಆಕೆ ಮತ್ತೂ ಹಿಂಜರಿದು ಗೋಡೆಯಾಸರೆ ಪಡೆದು ನಿಂತೇ ಇದ್ದಾರೆ. ಒಳಗಡೆ ಬಂದ ಸಹನಟ ಸಂತೋಷ

‘ ಓಯ್,ಪೂರ್ಣಿಮಕ್ಕ, ನಿಮ್ಮ ಯಾರೋ ಫ್ರೆಂಡ್, ಹೊರಗೆ ಕಾಯುತ್ತಿದ್ದಾರೆ”

” ಯಾರು ಮಾರಾಯ,ನಿಂಗೆ ಗುರ್ತಿಲ್ವಾ”

‘ ಹೋಗಿ ಹೋಗಿ” ಆತ ಓಡಿದ.

ಹೊರಬಂದೆ. ಹಚ್ಚಿದ ಬಣ್ಣವಿನ್ನೂ ಇಳಿದು ಹೋಗಿಲ್ಲ. ಯಾರಿರಬಹುದು ನನ್ನ ಗೆಳತಿ. ನಾಟಕ ಮುಗಿದ ತಕ್ಷಣ ಒಂದಷ್ಟು ಜನ ಅಭಿನಂದಿಸಿ ಹೋಗಿಯಾಗಿದೆ. ನಂತರವೇ  ಮೇಕಪ್ ತೆಗೆಯೋಣ ಅಂತ ನಿಧಾನಿಸಿದ್ದೆ.

 ಆವರಿಸಿಕೊಂಡಿದ್ದ ಸೌಜನ್ಯಳಿಂದ ಕಳಚಿಕೊಂಡು ಮತ್ತೆ ವಾಸ್ತವ ಜಗದ ನಾನು ಆಗುವ ನಡೆಗೆ ನಡೆಯಬೇಕು. ಆದರೂ ಭಾವಗುಂಗು ದೇಹದಿಂದ ಮಸ್ತಿಷ್ಕದೆಡೆಗೆ ಆವರಿಸಿ ಸಣ್ಣನೆ ಗುನುಗುತ್ತಿತ್ತು. ನಾಟಕವೆಂದರೆ ಅಭಿನಯಿಸುವುದೆಂದರೆ ಅದೇ ತಾನೇ!. ಮೊದಲು ತುಂಬಿಕೊಳ್ಳುವುದು. ಆಮೇಲೆ ತುಂಬಿಕೊಂಡದ್ದನ್ನು ಇಳಿಸಿ ನಿರಾಳತೆಯನ್ನು ಅನುಭವಿಸುವುದು. ಅದುವರೆಗೆ ಅರಿವಿರದ ಅದಾವುದೋ ದಿವ್ಯತೆ ತುಂಬಿಕೊಂಡು ಸುಖದ ತುರೀಯಾವಸ್ಥೆಗೆ ತಲುಪುವುದು. ಬಣ್ಣಬಣ್ಣದ ಕಂಪಿನ ಹೂಗಳು ಇಲ್ಲಿ ಅರಳುತ್ತವೆ.

ಆಗಲೇ ನನ್ನ ಕಾಣಲು ಬಂದವರನ್ನು ನೋಡಲು ಹೊರಬಂದೆ. ಪ್ರೇಕ್ಷಕರು ಎದ್ದು ಹೋಗಿ ಖಾಲಿ  ಕುರ್ಚಿಗಳೊಡನೆ ನೀರವತೆ ತುಂಬಿಕೊಂಡ ಬಯಲು ಅನುಸಂಧಾನ ನಡೆಸುತ್ತಿತ್ತು. ಜೊತೆಗೆ ಮೌನ ರಾಗ ಮಿಡಿವ  ಇರುಳು.

ಆಕೆ ನನ್ನ ಬಳಿ ಬಂದರು. ಸ್ಟೇಜಿನ ಲೈಟ್ ನಮ್ಮ ಮೇಲೆ ಮಂದವಾಗಿ ಪ್ರತಿಫಲಿಸುತ್ತಿತ್ತು.

‘ ನಮಸ್ತೆ”

” ನಮಸ್ತೆ”

ನಾನು ತುಸುಗೊಂದಲ ತೋರಗೊಡದೆ ಆತ್ಮೀಯತೆಯ ನಗೆ ನಕ್ಕೆ.

” ನಾಟಕ ನೋಡಿದೆ.”

” ಹೌದಾ,ಹೇಗನಿಸ್ತು”

” ಕೊನೆಯ ದೃಶ್ಯ ಪರಿಣಾಮಕಾರಿಯಾಗಿ ಇತ್ತಂತೆ. ಆದರೆ ನಾನು ನೋಡಿಲ್ಲ.”

” ನೀವೂ..”

” ಇದ್ದೆ. ಆಚೆಕಡೆ ಹೋದೆ. ನೋಡುವ ಮನಸ್ಥಿತಿ ಇರಲಿಲ್ಲ…ನೋಡಿ, ನಿಮ್ಮನ್ನು ನೋಡಿದ್ರೆ ನನ್ನ ತಾಯಿ ಬಂದಂತಾಯಿತು.”

ಆಕೆ ಬಿಕ್ಕಿದಳು, ಹರಿದಳು..

” ಸಮಾಧಾನ ಮಾಡಿಕೊಳ್ಳಿ”

” ನೀವು ಅಭಿನಯಿಸಿದ್ದು ಅಭಿನಯ ಅನಿಸಲಿಲ್ಲ. ನಿಜ ಅನಿಸಿಬಿಡ್ತು. ಅದು ನಮ್ಮನೆ ಕಥೆಯೇ ಆಗಿತ್ತು. ನೀವು ನಮ್ಮ ಅಮ್ಮ. ಸ್ಟೇಜಿನಲ್ಲಿ ಆ ನೋವು, ತಳಮಳ ಅನುಭವಿಸುತ್ತ ನೀವು ಓಡಾಡುತ್ತಿದ್ರೆ, ನನಗೆ ನನ್ನ ಅಮ್ಮನೇ ಕಾಣ್ತಾ ಇದ್ರು.

ನಿಮಗೆ ಕೊಡಲು ಏನೂ ಇಲ್ಲ ನನ್ನಲ್ಲಿ. ಬರುವಾಗ ನಾಟಕ ಮುಗಿಯುವಾಗ ತಡವಾಗಿ ಹಸಿವೆಯಾದ್ರೆ ಅಂತ ಈ crack jak ಬಿಸ್ಕಿಟ್ ತಂದಿದ್ದೆ. ಎರಡು ತೆಗೆದಾಗಿದೆ. ತಗೋತೀರಾ.

ನೀವು ಚಿಕ್ಕವರು. ಆದರೆ ನನಗೆ ಅಮ್ಮ ನಿಮ್ಮ ಮೂಲಕ ಬಂದ ಹಾಗೆ..ಕ್ಷಮಿಸಿ. “

ಆಕೆಯೀಗ ಹಿಡಿದು ಬಿಟ್ಟ ಬಿಕ್ಕು ಎಳೆದೆಳೆದು ಉಸಿರು ಬಿಡುತ್ತಿದ್ದಾಳೆ. ನಾನು ಆಕೆಯ ಹೆಗಲ ಮೇಲೆ ಕೈಯಿರಿಸಿದೆ.

 ಆಕೆ ಮುಖವನ್ನು ಅಂಗೈಯಲ್ಲಿಟ್ಟು ತನ್ನ ತಾನು ನಿಯಂತ್ರಿಸಿಕೊಳ್ಳಲು ಯತ್ನಿಸುತ್ತಿದ್ದಳು. ಹಾಗೇ ನನ್ನ ಅಂಗೈಗೆ ಮಗುವಿನಂತೆ ಮುತ್ತಿಟ್ಟು ಕತ್ತಲ ರಾಶಿಯಲ್ಲಿ ನಡೆದು ಹೋದಳು.

ನಾನು ಸ್ತಬ್ಥಳಾದಂತೆ  ಕೆಲನಿಮಿಷ ನಿಂತಿದ್ದು ಕಾಲೆಳೆಯುತ್ತ ಗ್ರೀನ್ ರೂಮಿನೆಡೆಗೆ ನಡೆದೆ.

ಇದು ನನ್ನ ” ಸಂಬಂಧ” ನಾಟಕವು ಉಡುಪಿಯಲ್ಲಿ ರಾಜ್ಯಮಟ್ಟದ ತುಳು ನಾಟಕ ಸ್ಪರ್ದೆಯಲ್ಲಿ ಪ್ರದರ್ಶನಗೊಂಡಾಗ ನಡೆದ ಘಟನೆ. ಆ ಹೆಣ್ಣುಮಗಳು ಯಾಕೆ ನನ್ನ ಬಳಿ ಆ ಬಗೆಯ ವರ್ತನೆ ತೋರ್ಪಡಿಸಿದರು. ತೀರ ಅಪರಿಚಿತರೆದುರು ಅದೆಷ್ಟೋ ಕಾಲದಿಂದ ಅದುಮಿಟ್ಟ ಸಂಕಟ, ನೋವು ದಬ್ಬಕ್ಕನೆ ಕುಸಿದು ಬಿದ್ದದ್ದು ಹೇಗೆ? ನಾಟಕವೊಂದು ಪ್ರೇಕ್ಷಕನ ಮನಸ್ಸಿನೊಡನೆ ಆಪ್ತಸಮಾಲೋಚನೆ ನಡೆಸುವುದೇ? ಅದೆಂತಹ ಅದ್ಬುತ ಶಕ್ತಿ ಈ ಕಲೆಗೆ? ಆ ಪ್ರಸ್ತುತಿಗೆ?. ಇಷ್ಟಕ್ಕೂ ಸಾಧಾರಣ 35 ವರ್ಷದ ಹೆಂಗಸಿಗೆ ನಾಟಕ ಏನು ಮಾಡಿತು? ಯಾವ ಹಿನ್ನೆಲೆ?

ಹೌದು ಇದೆ.‌ ಇದು ಯಶವಂತ ದಳವಿಯವರ ಮರಾಠಿ ನಾಟಕ ‘ ಸಂಬಂಧ”. ನಾವು ಕನ್ನಡದಲ್ಲಿ ಕಟ್ಟಿದ್ದೆವು. ಇದು ನಮ್ಮ ಅಮೋಘದ ಕೊಡುಗೆ.  ಬಹಳ ಕಾಲದ ನಂತರ ಮತ್ತೆ ನಾಟಕ ಮಾಡಲೇಬೇಕೆಂಬ ಹುಚ್ಚು ಕನಸಿಗೆ ಬಿದ್ದಿದ್ದೆ. ಈ ಸಮಯ ನನಗೆ ನನ್ನದೇ ಆದ ವೇದಿಕೆ ನಿರ್ಮಾಣವಾಗಿತ್ತು. 2010ರಲ್ಲಿ ಅಭಿನಯದಿಂದ ನಾಲ್ಕು ಹೆಜ್ಜೆ ಹಿಂದೆ ಬಂದಂತೆ ಬಂದು ಕಲೆಯ ಮೋಹದಿಂದ ತಪ್ಪಿಸಿಕೊಳ್ಳಲಾಗದೆ ” ಸಿದ್ದತೆ” ” ಕರ್ಮಾಧೀನ್” ನಾಟಕ ಕೊಂಕಣಿ, ಕನ್ನಡದಲ್ಲಿ ಮಾಡಿದ್ದೆನಲ್ಲ. ಆದರೆ ಮತ್ತೆ ಇದನ್ನು ಪ್ರಸ್ತುತಗೊಳಿಸಬೇಕಾದರೆ ಒಂದು ರಂಗವೇದಿಕೆಯ ಹೆಸರು ಬೇಕಿತ್ತು. ರಂಗಭೂಮಿ ಉಡುಪಿ ತನ್ನದೇ ನಾಟಕಗಳನ್ನು ಮಾಡುವುದರಿಂದ ಅಲ್ಲಿ ಈ ನಾಟಕ ಮಾನ್ಯಗೊಳ್ಳಲಿಲ್ಲ. ಆಗ ನಾಟಕ ನಿರ್ದೇಶಕರಾದ ಕಾಸರಗೋಡು ಚಿನ್ನಾರವರು ಒಂದು ಸಲಹೆ ಇತ್ತರು. ಒಂದು ಸಂಸ್ಥೆ ಆರಂಭಿಸಿ, ನಿಮ್ಮ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಿಗೂ ಸಹಾಯವಾಗುವುದು.

 ಅದರಂತೆ ಪುಟ್ಟದಾಗಿ ನಮ್ಮ ಕುಟುಂಬದ ಆತ್ಮೀಯರಾದ ಕೋಟ ಶ್ರೀನಿವಾಸ ಪೂಜಾರಿಯವರು, ನಾಟಕದ ನಿರ್ದೇಶಕರು ಹಾಗೂ ನಾವು ದಂಪತಿಗಳು ದೀಪ ಹಚ್ಚಿ

” ಅಮೋಘ” ಎಂಬ ಕನಸನ್ನು ನನಸಾಗಿ ಅರಳಿಸಿದ್ದೆವು.

ನಾನು ಆ ಸಮಯ ಜೆ.ಸಿ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದೆ. ಜೆ.ಸಿ. ಎಂಬುದು ಹಲವು ಮಾರ್ಗಗಳು ಸೇರುವ ವೃತ್ತವಿದ್ದಂತೆ. ತರಬೇತಿ, ಮಾತು, ನಿರೂಪಣೆ ಮಾತ್ರವಲ್ಲದೆ ಸಾಹಿತ್ಯ, ಕಲೆಗೂ ಸುಪ್ತ ದೇಣಿಗೆಯನ್ನು ನೀಡುತ್ತಾ ಇರುವ ಸಂಸ್ಥೆ.

 ಆಗೆಲ್ಲ ಅನಿಸುತ್ತಿತ್ತು, ಇಲ್ಲಿಂದ ಬಹಳ ಪಡೆದುಕೊಂಡಿರುವೆ. ಯಾಕೆ ಇಲ್ಲಿರುವ ಸ್ನೇಹಿತರನ್ನು ಸೇರಿಸಿ ನಾಟಕ ಕಟ್ಟಬಾರದು..? ಹೊಸ ವಿಷಯದ ಬಿತ್ತು ಭಿತ್ತಿಯೊಳಗೆ ಬಿದ್ದರೆ ಮತ್ತೆ ಸುಮ್ಮನಾಗದು. ಅದೊಂದು ಸಂಚಲನ. ಗಮ್ಯ ತಲುಪಬೇಕು. ಇದೇ ಯೋಚನೆ ಸಾಗುತ್ತಿತ್ತು.

ಇದರ ಮುಂದಿನ ಹಂತವೆಂಬಂತೆ ನಿರ್ದೇಶಕ ‘ಬಾಸುಮಾ’ ರವರನ್ನು ಈ ಬಗ್ಗೆ ಮಾತನಾಡಿಸಿದೆ. ಬೇರೆ ಬೇರೆ ನಾಟಕಗಳ ತಗೊಂಡು ಇದಾದರೆ ಹೇಗೆ? ಎಂಬ ಪರೀಕ್ಷೆ.  ಆಗಲೇ ” ಸಂಬಂಧ” ನಾಟಕದ ಬಗ್ಗೆ ಕೇಳಿದ್ದೆ. ನಾಟಕದ ಪ್ರತಿಯೂ ಸಿಕ್ಕಿತು. ಇದರ ಸೂಕ್ಷ್ಮತೆ, ಬಹಳ ಇಷ್ಟವಾಯಿತು. ಮುಂಬೈನ “ಚಾಲ್ ” ನಲ್ಲಿ ( ಚಾಲ್ ಎಂದರೆ, ಮುಂಬಯಿಯ ಕೆಳಮಧ್ಯಮವರ್ಗದ ಜನರು ವಾಸಿಸುವ ಚಿಕ್ಕ ಚಿಕ್ಕ  ಸಾಲುಮನೆಗಳು) ನಡೆಯುವ ಕಥೆ. ದಂಪತಿಗಳಿಗೆ ಬುದ್ದಿ ಮಾಂದ್ಯ ಮಗನಿರುತ್ತಾನೆ. ಅವನ ಬದುಕು ಅನಾಥ ಆಗಬಾರದು ಎಂಬ ಕಾಳಜಿ ಮಗುವಿನ ತಂದೆಯದು. ಅದಕ್ಕಾಗಿ ಆತ ರಾತ್ರಿ ದುಡಿದು ಹಗಲು ಮನೆ ಮಗನ ನೋಡಿಕೊಳ್ಳುತ್ತಾ ಹಲವು ಆಫೀಸುಗಳ ಟೈಪಿಂಗ್ ಕೆಲಸವನ್ನೂ ಮಾಡುತ್ತಿರುತ್ತಾನೆ. ಹೆಂಡತಿ ಹಗಲು ಆಫೀಸಿನಲ್ಲಿ ದುಡಿತ. ಮಗನ ದೆಸೆಯಿಂದ ದಂಪತಿಗಳಿಗೆ ತಮಗೂ ತಮ್ಮದೇ ಆದ ವೈಯಕ್ತಿಕ ಬದುಕಿದೆ ಎಂಬುವುದೂ ಮರೆತಂತಿರುತ್ತದೆ.  ಆದರೆ ಪರಿಸ್ಥಿತಿಗಳು ಆಕೆಗೆ ಬದುಕಿನ ಕೊರತೆ,ಅವಶ್ಯಕತೆಗಳ ಬಗ್ಗೆ ತಿಳಿಸುತ್ತ ಹೋಗುತ್ತದೆ. ಬದುಕಿನ ಒತ್ತಡ, ಏಕತಾನತೆಯಿಂದ ಜರ್ಝರಿತಳಾಗುತ್ತಾಳೆ. ಒಂದು ಪ್ರೀತಿಯ ಮಾತು, ಆದರ, ಸಂತೈಕೆಗಾಗಿ ಮನ ಹಂಬಲಿಸುತ್ತದೆ.  ಕುಟುಂಬ,ಕನಸುಗಳ ಸಂಘರ್ಷ. ವಯಸ್ಸಿಗೆ ಬರುತ್ತಿರುವ ಮಗನ ಪಾಲನೆಯ ಸುತ್ತ ಕಥೆ ಸಾಗುತ್ತದೆ.

ನಾಟಕ ಪ್ರದರ್ಶನದ ನಂತರ,

ನನ್ನ ಹುಡುಕಿಕೊಂಡು ಬಂದ ಆ ಮಹಿಳೆಗೂ ಇದೇ ರೀತಿಯ ತಮ್ಮನೊಬ್ಬ ಇದ್ದಾನೆ. ಆಕೆಯ ತಾಯಿ ಆ ಮಗನ ಉಪಚಾರ ನಡೆಸುತ್ತಾಳೆ. ಉಳಿದವರು ಹೆಣ್ಣು ಮಕ್ಕಳು ತಮ್ಮ ಗಂಡನ ಮನೆಯಲ್ಲಿ, ತಮ್ಮ ಕುಟುಂಬದ ಜವಾಬ್ದಾರಿ ಗಳೊಂದಿಗೆ. ಆದರೆ ತವರ ಸಂಕಟ ಈ ಹೆಣ್ಣು ಮನಸ್ಸುಗಳನ್ನು ನಡುಗಿಸುತ್ತದೆ. ತಾಯ ಇಳಿಗಾಲದ ದುರ್ಬಲ ದೇಹದ ಒದ್ದಾಟ. ತಾಯ ಸಾವಿನ ಬಳಿಕ ಅನಾಥನಾದ ತಮ್ಮ..

ನಾಟಕ ಅವರಿಗೆ ತಮ್ಮ ತವರನ್ನು ಅನಾವರಣಗೊಳಿಸಿದಂತಾಗಿದೆ. ಹುದುಗಿಟ್ಟ ದುಃಖ ಕಟ್ಟೆಯೊಡೆದು ಹೊರನುಗ್ಗಿದೆ.

 ಇದು ರಂಗಭೂಮಿಗಿರುವ ಶಕ್ತಿ. ಒಳಗಿನ ಬಂಡೆಯನ್ನೂ ನೀರಾಗಿಸಬಲ್ಲದು. ನೋವಿಗೆ ಮಿಡಿಯಬಲ್ಲದು. ಬೇರೆಯವರಲ್ಲಿ ತನ್ನನ್ನು, ತನ್ನಲ್ಲಿ ಇತರರನ್ನು ಕಾಣುವ ಅಂತಃ ಶಕ್ತಿ ರಂಗಭೂಮಿ ಕರುಣಿಸುವುದು.

ಈ ನಾಟಕ ಪ್ರಸ್ತುತಿ ಗೊಳ್ಳುವ ಮುನ್ನ ಉಡುಪಿಯ ಹಲವು ಸ್ನೇಹಿತರು   ಲಘುವಾಗಿ  ಮಾತನಾಡಿದ್ದರು

” ಏನಿದು ಹೊಸ ಬಗೆ.. ವೇದಿಕೆ ಹತ್ತಿ ಮಾತನಾಡುವವರೆಲ್ಲ ಕಲಾವಿದರಾಗುವುದು ಸಾಧ್ಯವೇ? ನಿನಗೆ ಹುಚ್ಚು. ರಂಗ ಕಲಾವಿದರೇ ಇರಲಿಲ್ಲವೇ “

 ಆದರೆ ಚೌಕಟ್ಟುನಿಂದ ಹೊರಹಾರುವ ಬಂಡಾಯದ ಮನಸ್ಸಿಗೆ ಹೊಸದನ್ನು ಸೃಜಿಸುವ ಹುಮ್ಮಸ್ಸು. ರಂಗಭೂಮಿಯೆಂಬ ಸಾಗರದ ಬಳಿ ನಾನು ಪಡಕೊಂಡದ್ದೇನು, ಎಷ್ಟು ಆಯಾಮಗಳು..ಏನು ಬೊಗಸೆಗೆ ಬಿದ್ದಿದೆ. ಆ ಅನುಭವಗಳು..ಪ್ರತ್ಯಕ್ಷ ಹಾಗೂ ಪರೋಕ್ಷ. ಒಳಗಿರುವ ಮಗು ಸದಾ ಕುತೂಹಲದಿಂದ ಎಲ್ಲವನ್ನೂ ಗಮನಿಸುತ್ತಿರುತ್ತದೆ. ಆ ಮುಗ್ದತೆ, ಹಂಬಲ ನಾಲ್ಕು ಮನಸ್ಸುಗಳಲ್ಲಿ ತುಂಬಲು ಸಾಧ್ಯವಾದರೆ ಅದು ರಂಗದ ಸಾರ್ಥಕತೆ

“ಸಂಬಂಧ” ಗೆದ್ದಿತ್ತು.

ಈ ನಾಟಕದ ಅಭಿನಯಕ್ಕಾಗಿ ನನಗೆ ಪುಟ್ಟ ಪ್ರಶಸ್ತಿಯ ಗರಿ. ಆದರೆ ಅದನ್ನು ಮೀರಿ ಕಲಾ ಪ್ರಪಂಚದ ಹೊರಗಿದ್ದ ಒಂದಷ್ಟು ಮನಸ್ಸುಗಳಲ್ಲಿ ರಂಗುರಂಗಿನ ಲೋಕ ಸೃಷ್ಟಿಗೊಂಡು ಅವರೂ ಈಗ ನಾಟಕ ನೋಡುವ,  ಅಭಿನಯಿಸುವ ವ್ಯಾಮೋಹಕ್ಕೆ ಒಳಗಾದದ್ದು ಇದೆಯಲ್ಲ. ಅದಕ್ಕಿಂತ ದೊಡ್ಡ  ಪ್ರಶಸ್ತಿ ಇದೆಯೇ?.


ಫೋಟೊ ಆಲ್ಬಂ

****************************

ಪೂರ್ಣಿಮಾ ಸುರೇಶ್

ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿಪ್ರಸ್ತುತಿ 30 ಯಶಸ್ವೀಪ್ರದರ್ಶನಕಂಡಿದೆ.ಮಂಗಳೂರುವಿಶ್ವವಿದ್ಯಾನಿಲಯದಕೊಂಕಣಿಅಧ್ಯಯನಪೀಠದಸದಸ್ಯೆ. ಪ್ರಸ್ತುತರಾಜ್ಯಕೊಂಕಣಿಸಾಹಿತ್ಯಅಕಾಡಮಿಸದಸ್ಯೆ. “ಅಮೋಘಎಂಬಸಂಸ್ಥೆಹುಟ್ಟುಹಾಕಿಸಾಹಿತ್ಯಿಕಹಾಗೂಸಾಂಸ್ಕೃತಿಕಕಾರ್ಯಕ್ರಮಗಳಆಯೋಜನೆ. ಆಕಾಶವಾಣಿಕಲಾವಿದೆ.ಇದುವರೆಗೆ 3 ಕವನಸಂಕಲನಸೇರಿದಂತೆ 6 ಪುಸ್ತಕಗಳುಪ್ರಕಟಗೊಂಡಿವೆ. GSS ಕಾವ್ಯಪ್ರಶಸ್ತಿ,ಕನ್ನಡಸಾಹಿತ್ಯಪರಿಷತ್ತಿನದತ್ತಿಪ್ರಶಸ್ತಿ,GS Max ಸಾಹಿತ್ಯಪ್ರಶಸ್ತಿ. ಹಲವಾರುಕವಿಗೋಷ್ಠಿಯಲ್ಲಿಭಾಗವಹಿಸುವಿಕೆ

3 thoughts on “

  1. ಒಂದು ನಾಟಕದ ಅಭಿನಯದೊಳಗೆ ಎಷ್ಟೊಂದು ಆರ್ದ್ರ ಗೊಳಿಸುವ ಭಾವಗಳು.ಚೆಂದದ ನಿರೂಪಣೆ poorni.ಬರವಣಿಗೆಗೂ ಸೈ, ಅಭಿನಯಕ್ಕೂ ಸೈ ನೀನು

    1. ಸ್ಮಿತಾ ತುಂಬು ಅಕ್ಕರೆ. ಇಂತಹ ಮಾತುಗಳು ಬರೆಯಲು ಶಕ್ತಿ

  2. ರಂಗಭೂಮಿ ಕಲಾವಿದರ ಅಭಿನಯ ಪ್ರೇಕ್ಷಕರ ಮನಸ್ಸನ್ನೇಷ್ಟು
    ಹಿಡಿದಿಟ್ಟುಕೊಳ್ಳಬಹುದು,ಒಳ್ಳೆಯ ಲೇಖನ,ಪಾತ್ರದಲ್ಲಿ ಕಲಾವಿದರು ಮೆರೆದಾಗ ಪ್ರೇಕ್ಷಕರು ತಮ್ಮ ಜೀವನದ ಆಗುಹೋಗುಗಳನ್ನು ಗುರುತಿಸಿಕೊಂಡು ಭಾವುಕರಾಗುವುದು
    ಸ್ಪಂದಿಸುವುದು ,ಕಲಾವಿದರಿಗೆ ದೊಡ್ಡ ಬಹುಮಾನವೇ ಸರಿ.
    ಪೂರ್ಣಿಮಾ ಸುರೇಶವರಿಗೆ ಅಭಿನಂದನೆಗಳು
    ಮಾಲತಿಶ್ರೀನಿವಾಸನ್

Leave a Reply

Back To Top