ಎಲ್ಲವೂಬರೀನೆನಪು

ಸಣ್ಣಕಥೆ

ಎಲ್ಲವೂಬರೀನೆನಪು

ಡಾ. ಪ್ರಶಾಂತ್ ಗಾಂವ್ಕರ್

ಅದು ಯಲ್ಲಾಪುರ ತಾಲೂಕಿನ ಒಂದು ಹಳ್ಳಿ. ಹೆಸರು ಕೊಡಸಳ್ಳಿ. ತೆಂಗು ಅಡಿಕೆ ಹಲಸು ಮಾವು ಬಕ್ಕೆ ಬೆಳೆವಂತ ಸೊಬಗಿನ ಹಳ್ಳಿ. ಹಳ್ಳಿಗರೆಲ್ಲ ಒಬ್ಬರಿಗೊಬ್ಬರು ಸಹಬಾಳ್ವೆಯಿಂದ ಬದುಕುತ್ತಿರುವ ಹಳ್ಳಿ. ಹತ್ತಿರವೇ ಭೂರಮೆಯ ಸೆರಗಿನಂತಿರುವ ಹರಿಯುವ ಸಿಹಿನೀರಿನ ಕಾಳಿ. ಹೆಸರಿಗಷ್ಟೇ ಸೀಮಿತವಾಗಿತ್ತು ಆ ರೌದ್ರತೆ. ಏಕೆಂದರೆ ಆ ಕಾಳಿಯೇ ಆ ಭೂಮಿಯ ಹಸಿರಿಗೆ, ಹಳ್ಳಿಗರ ಉಸಿರಿಗೆ ಕಾರಣ. ವರ್ಷಕ್ಕೊಮ್ಮೆ ನಡೆಸುವ ಹಳ್ಳಿಯ ದೇವಸ್ಥಾನದ ಹಬ್ಬದ ದಿನವನ್ನಂತೂ ಕಣ್ತುಂಬಿಕೊಳ್ಳುವುದೇ ಒಂದು ವಿಶೇಷ ಅನುಭವ. ಆ ಆಪ್ತತೆ, ಆ ಸಂಭ್ರಮ, ಆ ತೃಪ್ತಿ ಎಲ್ಲವನ್ನೂ ಅನುಭವಿಸಿಯೇ ತೀರಬೇಕು.

ಊರಲ್ಲೊಂದು ಮುದಿಜೀವ. ಹೆಸರು ತಿಮ್ಮಕ್ಕ.  ಇದೇ ತಿಮ್ಮಕ್ಕನ ಮನೆಯಿಂದ ಅಣತಿ ದೂರದಲ್ಲಿಯೇ ನದಿಯ ವೈಯ್ಯಾರ ದೃಗ್ಗೋಚರ. ಮದುವೆಯಾಗಿ ಬಂದ ಮನೆಯಲ್ಲಿ ತಿಮ್ಮಕ್ಕನಿಗೆ ತನ್ನವರೆಂದಿದ್ದ ಗಂಡನನ್ನೂ ದೇವರು ಕರೆಯಿಸಿಕೊಂಡಿದ್ದ. ಅಂದಿನಿಂದ ಊರವರೇ ತನ್ನವರು ತಿಮ್ಮಕ್ಕನಿಗೆ. ಆಗಿನ ಕಾಲದ ಪದ್ಧತಿಯಂತೆ ಬೋಳು ತಲೆಯಮೇಲೆ ಬಿಳಿಸೀರೆಯ ಸೆರಗು ಹೊದ್ದು, ಕುಂಕುಮಾಭರಣಗಳನ್ನೇ ಸೋಕಿಸದ ತಿಮ್ಮಕ್ಕನ  ಕಂಡೊಡನೆಯೇ ಅವಳ ಸ್ಥಿತಿ ಸ್ಪಷ್ಟ. ತನ್ನ ಓರಗೆಯವರಿಂದ ಹಿಡಿದು, ಮೊನ್ನೆ ಮೊನ್ನೆ ಹಡೆದ ಹೆಗಡೆಯವರ ಸೊಸೆಗೂ ಸೂಲಗಿತ್ತಿ ತಿಮ್ಮಕ್ಕ.

ಜಗ ಬೆಳಗೋ ಸೂರ್ಯನಿಗೇ ಗ್ರಹಣ ತಪ್ಪದು. ಕಗ್ಗತ್ತಲ ರಾತ್ರಿಗೆ ಬೆಳುದಿಂಗಳ ಸೋಕಿಸಿ ಚಂದಗಾಣಿಸುವ ಚಂದ್ರನಿಗೂ ಗ್ರಹಣ ತಪ್ಪದು. ಇನ್ನು ಭುವಿಯ ಮೇಲಿನ, ಅದಾವುದೋ ಮೂಲೆಯ ಈ ಹಳ್ಳಿಗೆ ಗ್ರಹಣ ತಪ್ಪದೇ? ”ನಾವಿರುವುದು ಕಲಿಯುಗದಲ್ಲೇ ಹೌದು” ಎನ್ಮುವಂತಿತ್ತು ಆ ಸುದ್ದಿ. ಅದೇ ಸುದ್ದಿ, ಕಾಳಿಯ ಹರಿವನ್ನು ಅಡ್ಡಗಟ್ಟಿ, ಹಳ್ಳಿಗರ ಹಸನಾದ ಬಾಳ ಕತ್ತಲಾಗಿಸಿ, ಅದೆಷ್ಟೋ ದೂರದ ನಗರಿಗೆ ಬೆಳಕು ಕಾಣಿಸೊ ಯೋಜನೆ.

ತಿಮ್ಮಕ್ಕನಿಗೆ ಮದುವೆಯಾದ ಹೊಸತರಲ್ಲಿ ಮನೆಯವರು ಹೇಳಿದ ನೆನಪು ”ಈ ಯೋಜನೆ ಹುಟ್ಟಿದ್ದು 1960ರ ಆಸುಪಾಸಿನಲ್ಲಿ. ಕಾಳಿಯಾಶ್ರಯ ಪಡೆದ ಅದೆಷ್ಟೋ ಜನರ ಹೋರಾಟಕ್ಕೆ ಮಣಿದು ಇಲ್ಲಿಯವರೆಗೆ ಮುಂದೂಡಲ್ಪಟ್ಟಿದೆ ಅಷ್ಟೆ. ಇನ್ನು ಮುಂದೆ ಹೇಗೋ ಏನೋ. ಮೇಲಿನವರ ಓಡಾಟ ಅಧಿಕವಾಗಿದೆ. ಸದ್ಯದಲ್ಲೇ ಯೋಜನೆಗೆ ಮರುಜೀವ ಬಂದರೂ ಬರಬಹುದು” ಎಂದು. ಈ ಮಾತು ಕೇಳಿ ಸುಮಾರು ವರ್ಷಗಳೇ ಕಳೆದಿರಬಹುದು.

ಇಂದಿನ ಈ ಸುದ್ದಿ ಕೇಳಿ ದೌಡಾಯಿಸಿದ್ದಳು ತಿಮ್ಮಕ್ಕ ಹೆಗಡೆಯವರ ಮನೆಗೆ. ಸ್ವರ್ಗದಂತಿರುವ ಹಳ್ಳಿಯನ್ನು ಉಳಿಸಿಕೊಳ್ಳಬೇಕೆಂಬ ಹಂಬಲ. ಎಲ್ಲರಂತೆ. ಹೆಗಡೆಯವರ ಬಳಿ ಎಲ್ಲವನ್ನೂ ನೆನಪಿಸಿದಳು. ”ಹಳ್ಳಿಗರೆಲ್ಲ ಸೇರಿ ಹೋರಾಡೋಣ ಹೆಗಡೇರೆ. ಬೇರೆ ಎಲ್ಲಿ ಹೋದರೂ ಈ ಸ್ವರ್ಗ ಸುಖವಿಲ್ಲ” ಎಂಬ ಮಾತಿಗೆ ಹೆಗಡೆಯವರೂ ಗೋಣು ಅಲ್ಲಾಡಿಸಿ ”ಇಷ್ಟ್ ಬೇಗೆಲ್ಲಾ ಅನುಷ್ಠಾನಕ್ಕೆ ಬರದು. ಇಂತಹ ಸುದ್ದಿ ವರ್ಷಕ್ಕೊಮ್ಮೆ ಇದ್ದಿದ್ದೇ. ಏನೂ ಹೆದರುವ ಅವಶ್ಯಕತೆಯಿಲ್ಲ” ಎಂದುಬಿಟ್ಟರು.

ಆದರೂ ತಿಮ್ಮಕ್ಕನಿಗೆ ಪೂರ್ವಸೂಚನೆಯಾದಂತಿತ್ತು. ಒಬ್ಬಂಟಿಯಾದಾಗಿನಿಂದ ಪ್ರಕೃತಿಯೊಡನಿರುವ ಬಾಂಧವ್ಯ ಅವಳ ಒಳಮನಸ್ಸನ್ನು ಬಡಿದೆಬ್ಬಿಸಿತ್ತೋ ಏನೋ! ಸದ್ಯ ಹಕ್ಕಿಗಳ ಕಲರವವಿಲ್ಲ. ಆಗೊಮ್ಮೆ ಈಗೊಮ್ಮೆ ಕೇಳುವ ದನಗಳ ದನಿ ಈಗೀಗ ಯಾಕೋ ಹೆಚ್ಚಿದಂತಿದೆ. ತಂಗಾಳಿಗೆ ಮೈದೂಗುವ ಮರಗಳೂ ಗಾಳಿಗೆ ಸ್ಪಂದಿಸುತ್ತಿಲ್ಲ. ಹೂ ಬಿಡುವ ಆ ಮರ ಹೂ ಬಿಟ್ಟಿಲ್ಲ. ಮರಕ್ಕೆ ಬಳ್ಳಿ ಹಬ್ಬುತ್ತಿಲ್ಲ. ಪ್ರಕೃತಿ ಕೊಟ್ಟ ಈ ಎಲ್ಲ ಸೂಚನೆಯನ್ನೂ ಈ ಸುದ್ದಿಗೇ ತಳುಕುಹಾಕಿದ್ದಳು ತಿಮ್ಮಕ್ಕ. ತನ್ನವರೆಂಬ ಹಳ್ಳಿಗರಿಗೂ ಹೇಳಿದ್ದಳು. ಹೆಗಡೆಯವರಂತೆ ಆಡಿ ನಡೆದಿದ್ದರೆಲ್ಲ.

ಹೆಗಡೆಯವರಿಗೂ ಆ ದಿನ ಒಮ್ಮೆ ನಿಂತ ನೆಲ ಕುಸಿದಂತಾದದ್ದು ನಿಜವೇ. ಇನ್ನೊಂದು ವರ್ಷದಲ್ಲಿ ನದಿಯ ಹರಿವೇ ನಿಲ್ಲಲಿದೆ. ಸ್ವರ್ಗ ಮುಳುಗಲಿದೆ. ಬೇರೆಡೆ ವ್ಯವಸ್ಥೆ ಮಾಡಲಾಗಿದೆ. ತೆರಳಬೇಕು. ಪರಿಹಾರವಿದೆ. ಹೀಗಿತ್ತು ಸೂಚನಾ ಪತ್ರದ ಸಾರ. ಹೆಗಡೆಯವರದ್ದೂ ಸೇರಿ ಎಲ್ಲರ ಮನೆಯೇನು, ತಿಮ್ಮಕ್ಕನ ಮನದಲ್ಲೂ ಅದೇ ಆಘಾತ. ಹೆಗಡೆಯವರು ಹಳ್ಳಿಗರನ್ನೆಲ್ಲ ಸೇರಿಸಿ ನಡೆಸಿದ ಹೋರಾಟವೂ ನಡೆಯಲಿಲ್ಲ. ಕೊಡಸಳ್ಳಿಯ ಸಂಭ್ರಮದ ಕೊನೆಯ ವರ್ಷವೇನೋ ಎಂಬ ಭಾವನೆ ಮನದ ಮೂಲೆಯಲ್ಲಿ, ಆದರೂ ಹಿಂದೆಂದಿನಂತಹ ಆಪ್ತಭಾವದ ದಿನಗಳಿಗೆ ವರ್ಷವಾದದ್ದು ಗೊತ್ತೇ ಆಗಲಿಲ್ಲ.

ಸೂಚನಾ ಪತ್ರ ಕೆಲವರ ಮನೆಯಲ್ಲಿ ಮೂಲೆ ಸೇರಿತ್ತು. ಇನ್ನೂ ಅಲ್ಲೇ ಇದ್ದವರ ಮನದ ಮೂಲೆಯಲ್ಲೂ ಇತ್ತು.

ಆ ವರ್ಷದ ಮಳೆಗಾಲದಾರಂಭ. ”ಇನ್ನೊಂದೇ ವಾರದ ಗಡುವು” ಇಲಾಖೆಯವರ ಘೋಷಣೆ. ಆಯಿತಲ್ಲ!! ಈ ನೆಲದ ಋಣ ತೀರಿತು. ಆಗಲೇ ಕೆಲವರು ಹೊಸ ಊರು ಸೇರಿದ್ದರು. ಸಂಭ್ರಮವಿಲ್ಲ. ಅಲ್ಲೊಂದು ಇಲ್ಲೊಂದು ಮನೆ, ತೆರಳುಳಿದ ಜನ. ಹಳ್ಳಿಯೆಲ್ಲ ಖಾಲಿ ಖಾಲಿ, ತಿಮ್ಮಕ್ಕನ ಮನಸ್ಸಿನಂತೆ.

ಎಲ್ಲವೂ ತಿಮ್ಮಕ್ಕನ ಕಣ್ಮುಂದೆ ನಡೆಯುತ್ತಿತ್ತು. ಎಲ್ಲವನ್ಮೂ ಎತ್ತೆತ್ತಿ ಗಾಡಿಯಲ್ಲಿ ತುಂಬಿಸುತ್ತಿದ್ದರು.

ಕಡಿದ ಅಡಿಕೆಯ ಮರಗಳು. ಸೊಗಸಿಲ್ಲದ ಕೆಂಪು ಹಸಿರು. ತನ್ನ ಮಡಿಲ ತುಂಬಿಸಿಕೊಳ್ಳುವ ಭಾಗ್ಯವಿಲ್ಲದಿದ್ದರೂ ಎಲ್ಲರ ಮಡಿಲು ತುಂಬಿಸಿದ ತಿಮ್ಮಕ್ಕನಿಗೆ ಪ್ರಕೃತಿಯ ಮಡಿಲು ಬರಿದಾದಂತನ್ನಿಸಿತ್ತು. ಈಗ ನನಗೂ ಈ ಪ್ರಕೃತಿಗೂ ವ್ಯತ್ಯಾಸವೇ ಇಲ್ಲವೆಂಬಂತೆ. ಮಡಿಲು ಖಾಲಿ ಖಾಲಿ.

ಇನ್ನೇನು, ಈ ದಾರಿಯಿರದು, ಮನೆಯಿರದು, ಅದಿರುವ ಜಾಗವಿರದು, ಈ ಹಲಸಿನ ಮರ, ಮಾವಿನ ಮರ, ಕಲ್ಪವೃಕ್ಷಗಳ ಸಾಲು, ಯಾವುದೂ ಇರದು, ಬರೀ ನೀರೇ ನೀರು. ನೆಲವ ಹಸಿರಾಗಿಸಿದ ಈ ನೀರು, ನಮ್ಮ ಉಸಿರಾದ ಈ ನೀರು ಇಲ್ಲೆಲ್ಲ ತನ್ನನ್ನು ತಾನು ವ್ಯಾಪಿಸಿಕೊಂಡುಬಿಡುತ್ತದೆಯಲ್ಲ. ಪಾಪ! ಆ ಕಾಳಿಯಾದರೂ ಏನು ಮಾಡಿಯಾಳು ತನ್ನ ಹರಿವಿಗೆ ಅಡ್ಡಬಂದರೆ? ತಾನು ಇಷ್ಟುದಿನ ಫಲವತ್ತಾಗಿಸಿದ ನೆಲ ತನ್ನದೇ ಸ್ವತ್ತು ಎಂಬಂತೆ ವ್ಯಾಪಿಸಿಬಿಡುವಳು. ಅವಳದೇನೂ ತಪ್ಪಿಲ್ಲ. ಇದು ಅವಳ ನೆಲ.

ಎಂದೆಲ್ಲ ಯೋಚಿಸುತ್ತಿದ್ದ ತಿಮ್ಮಕ್ಕನ ನೊಂದ ಹೃದಯ ತನ್ನ ಕೆಲಸವನ್ನೇ ಇಂದು ಮರೆತಿತ್ತು. ಹಳ್ಳಿ ಬಿಟ್ಟು ಹೋದವರ ಬಿಟ್ಟು, ಉಳಿದ ಹಳ್ಳಿಗರು, ಎಷ್ಟಾದರೂ ತಿಮ್ಮಕ್ಕ ನಮ್ಮವಳೇ ಎನ್ನುತ್ತ ಕಾರ್ಯ ಮುಗಿಸಿ ತಾವೂ ಹಳ್ಳಿ ಬಿಟ್ಟರು. ಹೊಸ ಊರಿಗೆ ಹುಮ್ಮಸ್ಸಿಲ್ಲದೇ ತೆರಳಿದ್ದರು. ಎಲ್ಲರಿಗೂ ಸ್ಬರ್ಗದಂತಹ ಕೊಡಸಳ್ಳಿ, ಕೊಡಸಳ್ಳಿಯ ಸಂಭ್ರಮ ಎಲ್ಲವೂ ಈಗ ಬರೀ ನೆನಪು ಮಾತ್ರ. ತಿಮ್ಮಕ್ಕನಂತೆ.

***************************

9 thoughts on “ಎಲ್ಲವೂಬರೀನೆನಪು

  1. ಕತೆ ಚೆನ್ನಾಗಿದೆ. ಮುಳುಗಡೆಯಾಗುವ ಪ್ರದೇಶದ ಜನರ ಭಾವನೆಗಳನ್ನು ಪ್ರಕೃತಿಯೂ ಗುರುತಿಸಿದ್ದನ್ನು ಲೇಖಕರು ಚೆನ್ನಾಗಿ ನಿರೂಪಿಸಿದ್ದಾರೆ.

  2. ಪ್ರಶಾಂತ್ ರೇ ನಿಮ್ಮ ಬರಹ ಅದ್ಭುತವಾಗಿದೆ… ಬಹಳ ಸುಂದರವಾಗಿ ಬರೆದಿದ್ದೀರಿ ನೈಜಕತೆ ಎನ್ನುವ ಹಾಗಿದೆ

  3. ನೈಜತೆಯು ಪರಿಪೂರ್ಣವಾಗಿ ಬಿಂಬಿತವಾಗಿದೆ…. ಮುಂದಿನ ಬರಹಕ್ಕೆ ಶುಭವಾಗಲಿ

  4. ಕತೆಯ ನಿರೂಪಣೆ ಚೆನ್ನಾಗಿದೆ. ಹಾಗೂ ಕತೆಯ ವಿಷಯ ಮನದ ಆಳಕ್ಕೆ ತಲುಪಿ ಅಭಿವೃದ್ಧಿಯ ಅಲೆಗೆ ಸಿಕ್ಕಿ ನೊಂದ ಎಷ್ಟೋ ಜೀವಗಳ ಕಥಾನಕವನ್ನು ತಿಳಿಸುತ್ತದೆ. ಅಭಿನಂದನೆಗಳು ಪ್ರಶಾಂತ್‌, ಇನ್ನೂ ಹೆಚ್ಚು ಬರಹಗಳು ನಿಮ್ಮಿಂದ ಬರಲಿ.

    1. ಧನ್ಯವಾದಗಳು.. ಪ್ರೋತ್ಸಾಹ ಸದಾ ಇರಲಿ. ಪ್ರಯತ್ನ ನನ್ನದಿದ್ದೇ ಇದೆ..

  5. ಪ್ರಶಾಂತ! ತುಂಬಾ ಸುಂದರವಾಗಿ ಕಥೆಯ ನಿರೂಪಣೆ ಬಂದಿದೆ. ಜೊತೆಗೆ ಭಾವನೆಗಳನ್ನು ತುಂಬಿ ಕತೆಗೂ ಒಂದು ಜೀವಕಳೆ ಬಂದಂತೆ ಅನಿಸಿತು. ನಾನು ಕೊಡಸಳ್ಳಿ ಗೆ ಅನೇಕ ಸಲ ಚಿಕ್ಕವನಿದ್ದಾಗ ಬಂದಿದ್ದೆ.ಅಲ್ಲಿಯ ಪ್ರಕೃತಿ ಮನೋಹರ ದೃಶ್ಯವನ್ನು , ಡ್ಯಾಮ್ ರಚನೆಯಾಗುತ್ತಿದ್ದ ದನ್ನು ಕಂಡಿದ್ದೆ .ಅಂತೂ ಭಾವನಾತ್ಮಕವಾಗಿ ಕಥೆಯ ನಿರೂಪಣೆಯನ್ನು ಮಾಡಿದ್ದಿ. ಧನ್ಯವಾದಗಳು. ಶುಭವಾಗಲಿ.
    ಶ್ರೀಧರ ಭಟ್ಟ ಬಾಲೀಗದ್ದೆ. ಉಜಿರೆ.

Leave a Reply

Back To Top