ನೀಳ್ಗಥೆ
ಇಂಚುಪಟ್ಟಿ
ಗಣಪತಿ ಹೆಗಡೆ
‘”ಸರಿಯಾಗಿ ನೋಡೋ. ನೀನೀಗ ಸಣ್ಣವನಲ್ಲ. ರಬ್ಬರು, ಪೆನ್ಸಿಲ್ಲು, ಶಾರ್ಪನರ್, ಇಂಚುಪಟ್ಟಿ ಎಲ್ಲಾ ಸರಿಯಾಗಿ ಇಟ್ಟು ಕೊಳ್ಳಲು ಕಲಿತಿರಬೇಕಪ್ಪ. ಅದಕ್ಕೇ ಒಂದು ಪೋಚ್ ತೆಗೆಸಿ ಕೊಟ್ಟಿದ್ದೇನೆ. ಕೆಲಸ ಮುಗಿದ ಕೂಡಲೇ ಅದರಲ್ಲಿ ಹಾಕಿ ಇಟ್ಟು ಕೊಳ್ಳಲು ಹೇಳಿದ್ದೇನೆ ನಿನಗೆ.ಇಷ್ಟಾದರೂ ಸ್ಕೂಲಲ್ಲಿ ಬೇರೆ ಮಕ್ಕಳು ಕದಿದಿರಬಹುದು ಅಂತ ಹೇಳಲಿಕ್ಕೆ ನಾಚಿಕೆಯಾಗುವದಿಲ್ಲವೇ? ನಿನ್ನದನ್ನು ಮಾತ್ರ ಯಾಕೆ ಕದಿಯುತ್ತಾರೆ? ಅವರ ಅಪ್ಪ ಅಮ್ಮ ಅವರಿಗೆ ತೆಗೆಸಿಕೊಡುವದಿಲ್ಲವೇ? ಅಥವಾ ನೀನೇ ಅವರಿಗೆ ಕೊಟ್ಟು ಶುಭಗನಾಗುತ್ತೀಯೋ? ನಿನಗೆ ಬೇಕಾದಾಗಲೆಲ್ಲಾ ಕೊಡಿಸಲು ನಾವೇನು ಅಂಗಡಿ ಇಟ್ಟಿದ್ದೇವೆಯೋ? ಈಗ ನೀನು ಕೇ.ಜಿ.ಯಲ್ಲ”‘ ಒಂದನೇ ತರಗತಿಯಲ್ಲಿ ಓದುತ್ತಿರುವ ಮಗ ಅವಿನಾಶನಿಗೆ, ಅಮ್ಮ ಲಾವಣ್ಯ ಗದರಿಸುತ್ತಿದ್ದಳು. ‘ಎಲ್ಲಾ ನಿನ್ನಪ್ಪನದೇ ಗುಣ. ಬೇಜವಾಬುದಾರಿಗಳು.’ ಮೊನ್ನೆ ಮಳೆಗಾಲದಲ್ಲಿ ಕೊಡೆಯನ್ನು ಕಳೆದುಕೊಂಡು ಬಂದ ಗಂಡನನ್ನು, ಇಂಚು ಪಟ್ಟಿಯನ್ನು ಕಳೆದುಕೊಂಡು ಬಂದ ಒಂದನೇ ಕ್ಲಾಸಿನ ಮಗನ ಜೊತೆ ಸಮೀಕರಿಸಿ ಮಾತನಾಡಿದ್ದಳು. ಇಂಚುಪಟ್ಟಿ ಒಂದನೇ ಕ್ಲಾಸಿನ ಅವಿನಾಶನಿಗೆ ಕಂಪಲ್ಸರಿ ಬೇಕು ಅಂತ ಇರಲಿಲ್ಲ. ನಾಲ್ಕುದಿನದ ಹಿಂದೆ ಅಂಗಡಿಗೆ ಹೋದಾಗ ಆರಿಂಚಿನ ಬಣ್ಣದ ಇಂಚುಪಟ್ಟಿಯನ್ನು ನೋಡಿ ಗಲಾಟೆಮಾಡಿ ತಂದುಕೊಂಡಿದ್ದನು. ಮಗನ ಹಟಕ್ಕೆ ದೊರೆತ ಜಯವೋ ಅಥವಾ ಪಕ್ಕದ ಮನೆಯ ಮೀನಾಕ್ಷಿಯಲ್ಲಿ ಹೇಳಿಕೊಳ್ಳಲು ಲಾವಣ್ಯಳಿಗೇ ಮನಸ್ಸಿತ್ತೋ ಅಂತೂ ಅವಿನಾಶನ ಸ್ಕೂಲ್ ಬೇಗಿನಲ್ಲಿ ಜಾಗಪಡೆಯಲು ಆರಿಂಚಿನ ಇಂಚುಪಟ್ಟಿ ಅವಕಾಶಪಡೆದಿತ್ತು. ಆದರೆ ಶಾಲೆಗೆ ತೆಗೆದು ಕೊಂಡು ಹೋಗಬೇಡ ಅಂತ ಹೇಳಿದರೂ ಕೇಳದೆ ಅತ್ತು ಕರೆದು ‘ಪೋಚಿ’ ನಲ್ಲಿ ಹಾಕಿಸಿಕೊಂಡಿದ್ದನು. ಹೇಗೂ ತಂದುಕೊಂಡಿದ್ದಾನೆ. ತೆಗೆದುಕೊಂಡು ಹೋಗಲಿ ಅಂತ ಲಾವಣ್ಯ ಅಸ್ತು ಎಂದಿದ್ದಳು. ಆದರೆ ಮೀನಾಕ್ಷಿಗೆ ತೋರಿಸುವದರೊಳಗೇ ಮಗ ಅಪರೂಪದ ಇಂಚುಪಟ್ಟಿಯನ್ನು ಕಳೆದು ಕೊಳ್ಳುವದೆಂದರೇನು? ಅದೂ ಬೇರೆ ಹುಡುಗರಿಗೆ ತೋರಿಸಬೇಡ ಅಂತ ತಾನು ಹೇಳಿರುವಾಗ? ಮಗನಿಗೂ ಇಂಚುಪಟ್ಟಿ ಹೇಗೆ ಕಳೆದಿದೆ ಅಂತ ಗೊತ್ತಿರಲಿಲ್ಲ. ಬೇರೆ ಹುಡುಗರಿಗೆ ತೋರಿಸಬೇಡ ಅಂತಾದಲ್ಲಿ ಯಾಕೆ ಒಯ್ಯಬೇಕು ಎನ್ನುವ ತರ್ಕ ಅವಿನಾಶನಿಗೆ ಅರ್ಥವಾಗಲಿಲ್ಲ. ತಾನು ಬೇರೆಯವರಿಗೆ ಕಾಣುವ ಹಾಗೆ ಪೋಚಿನ ಜಿಪ್ಪನ್ನು ಎಳೆದು ತೋರಿಸಿದ್ದು ಹೌದು. ಪುನಃ ಮನೆಗೇ ತಂದ ನೆನಪು. ಕಾಣುವದಿಲ್ಲ ಎನ್ನುವ ಕಾರಣಕ್ಕೆ ಕಳೆದಿದೆ ಎಂದಿದ್ದಾನೆ. ‘ಇಲ್ಲ ಮನೆಗೇ ತಂದಿದ್ದೇನೆ ಅಂತ ಗಟ್ಟಿಯಾಗಿ ಹೇಳಬೇಕು’ ಅಂದು ಕೊಂಡವ ತಾಯಿಯಲ್ಲಿ ಕಣ್ಣು ತಿಕ್ಕುತ್ತಾ ಹೇಳಿದ ‘ನೀನು ಗದರಿಸಿದುದರಿಂದ ಹಾಗೆ ಹೇಳಿದೆ ಅಷ್ಟೇ. ನಾನು ಶಾಲೆಯಲ್ಲಿ ಬಿಡಲಿಲ್ಲ. ಮನೆಗೇ ತಂದಿದ್ದೇನೆ. ನಾನು ಸುಳ್ಳು ಹೇಳುವದಿಲ್ಲ.’ ‘ಶಾಲೆಯಲ್ಲಿ ಯಾರಾದರೂ ಇಂಚುಪಟ್ಟಿಯ ಮೇಲೆ ಕಣ್ಣು ಹಾಕಿದ್ದರೋ?’ ಲಾವಣ್ಯ ಮಗನಲ್ಲಿ ‘ಕ್ರಿಮಿನಲ್ ವಿಚಾರಣೆ’ ನಡೆಸಿದಳು. ಇದೇ ಸಂದರ್ಭದಲ್ಲಿ ಕೆಲಸದಾಳು ಲಕ್ಷ್ಮಿಯ ಮಗ ಪುಟ್ಟನಿಗೆ ಮೊನ್ನೆ ಇದೇ ಇಂಚುಪಟ್ಟಿಯನ್ನು ತೋರಿಸಿದ ನೆನಪಾಯಿತು. ಅವನು ಕೈಯಲ್ಲಿ ತೆಗೆದುಕೊಂಡು ಮುಟ್ಟಿ ತಿರುಗಿಸಿ ನೋಡಿ ಅವಿನಾಶನಿಗೆ ತಿರುಗಿ ಕೊಟ್ಟಿದ್ದು ನೆನಪಾಯಿತು. ‘ಮೊನ್ನೆ ನನ್ನ ಕೈಯಿಂದ ಕಸಿದು ಕೊಂಡಿದ್ದ ಪುಟ್ಟ. ಆಮೇಲೆ ನಾನು ತೆಗೆದುಕೊಂಡೆ.’ ವಿಷಯವನ್ನು ತನಗೆ ಬೇಕಾದ ಹಾಗೆ ತಿರುಚಿ ಅಮ್ಮನಿಗೆ ಹೇಳಿದ ಅವಿನಾಶ. ಪುಟ್ಟ, ಅವಿನಾಶನ ವಯಸ್ಸಿನವನೇ. ಆರು ತಿಂಗಳು ಹಿರಿಯವ. ಕೆಲಸದಾಕೆ ಲಕ್ಷ್ಮಿಯ ಮಗ. ಲಕ್ಷ್ಮಿಯ ಮನೆ ಲಾವಣ್ಯಳ ಮನೆಯ ಪಕ್ಕದಲ್ಲಿಯೇ ಇದೆ. ಅವಳ ಗಂಡ ಸುಧಾಕರನಿಗೆ ಒಂದು ಅಂಗಡಿಯಲ್ಲಿ ದಿನಸಿ ಕೊಡುವ ಕೆಲಸ. ಪಾಪ ಬಡತನದಲ್ಲಿಯ ಬದುಕು. ಲಕ್ಷ್ಮಿ ಬೆಳಗಿನ ಹೊತ್ತು ಮನೆಯಲ್ಲಿ ಅಡಿಗೆ ಮಾಡಿಟ್ಟು, ಇನ್ನೊಂದು ಬಡಾವಣೆಯಲ್ಲಿ ಕೆಲಸ ಮಾಡುತ್ತಿದ್ದಳು. ಮಧ್ಯಾಹ್ನ ಮನೆಗೆ ಹೋಗಿ ಊಟ ಮಾಡಿ ಸಾಯಂಕಾಲ ಲಾವಣ್ಯಳ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ಪುಟ್ಟ, ಸರಕಾರೀ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ. ಅಪ್ಪ ಸುಧಾಕರ ಮಗನಿಗೆ ಊಟ ಹಾಕಿ ಶಾಲೆಗೆ ಬಿಟ್ಟು ಅಂಗಡಿಗೆ ಹೋಗುತ್ತಿದ್ದ. ಮಗನಿಗೆ ಮಧ್ಯಾಹ್ನ ಶಾಲೆಯಲ್ಲಿಯೇ ಊಟ. ಸಾಯಂಕಾಲ ಶಾಲೆ ಬಿಟ್ಟವನು ಸೀದಾ ಲಾವಣ್ಯಳ ಮನೆಗೇ ಬಂದು ಅಮ್ಮ ಲಕ್ಷ್ಮಿಯ ಜೊತೆ ಮನೆಗೆ ಹೋಗುತ್ತಿದ್ದ. ಪಾಪ, ಪುಟ್ಟನನ್ನು ನೋಡಿದ ಲಾವಣ್ಯ, ಪ್ರೀತಿಯಿಂದ ತಿನ್ನಲು ಏನಾದರೂ ಕೊಡುತ್ತಿದ್ದಳು. ಅಂದು ರವಿವಾರ. ಸಾಮಾನ್ಯವಾಗಿ ರವಿವಾರ ಮಧ್ಯಾಹ್ನ ಊಟವಾದ ಮೇಲೆ ಲಕ್ಷ್ಮಿಯ ಜೊತೆ ಮಗ ಪುಟ್ಟನೂ ಬರುತ್ತಿದ್ದ. ಮಗ ಅವಿನಾಶನಿಗೂ ಜೊತೆಯಲ್ಲಿ ಆಡಲು ಅನುಕೂಲವಾಗಿತ್ತು. ಇದರಿಂದ ಲಕ್ಷ್ಮಿಯ ಜೊತೆ ಲಾವಣ್ಯಳಿಗೂ ಅನುಕೂಲವಾಗುತ್ತಿತ್ತು. ಆಗಾಗ ಅವಿನಾಶನ ಜೊತೆ ಆಟ ಆಡುವಾಗ ಅವನ ಆಟಿಗೆಗಳನ್ನೂ ಪುಟ್ಟ ಹಂಚಿ ಕೊಳ್ಳುತ್ತಿದ್ದನು. ಉಳಿದ ಮಕ್ಕಳಲ್ಲಾಗುವ ಹಾಗೆ ಸಣ್ಣಪುಟ್ಟ ಜಗಗಳೋ ಮನಸ್ತಾಪಗಳೋ ಇವರಲ್ಲೂ ನಡೆಯುತ್ತೆನ್ನಿ. ಒಮ್ಮೊಮ್ಮೆ ಆಟಿಗೆಯನ್ನು ಪುಟ್ಟ ಮುರಿದೋ ಅಥವಾ ಕಳೆದೋ ಮಾಡುತ್ತಿದ್ದ. ಇದರಿಂದ ಲಕ್ಷ್ಮಿಗೆ ಮುಜುಗರವಾಗುತ್ತಿತ್ತು. ಪಾಪ ತಾನು ಕೆಲಸದವಳು. ತನ್ನ ಮಗನಿಂದ ಅವರಿಗೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕಾಗಿ ಮಗನಿಗೆ ಗದರಿಸುತ್ತಿದ್ದಳು. ಲಾವಣ್ಯಳೇ ಲಕ್ಷ್ಮಿಗೆ ಸಮಾಧಾನ ಮಾಡುತ್ತಿದ್ದಳು. ಆದರೆ ಇಂಚುಪಟ್ಟಿಯನ್ನು ಪುಟ್ಟನೇ ತೆಗೆದುಕೊಂಡಿರಬಹುದೆಂದು ಲಾವಣ್ಯಳಿಗೆ ಒಮ್ಮೆ ಅನಿಸಿತು. ಇರಬಾರದೇಕೆ? ಬಾಲ ಮನಸ್ಸು. ಅಪರೂಪದ ವಸ್ತುವಿಗೆ ಆಸೆ ಸಹಜ. ಒಮ್ಮೆ ಅವಿನಾಶನ ಜೊತೆ ಕೇಳಿದ್ದು ಅದರ ಮೇಲಿನ ಆಸೆಯಿಂದ ಇದ್ದಲ್ಲಿ ತಪ್ಪಲ್ಲ. ಒಮ್ಮೆ ‘ಹೋದರೆ ಹೋಗಲಿ. ಹೇಗೂ ಪಕ್ಕದ ಅಂಗಡಿಯಲ್ಲೇ ಸಿಕ್ಕುತ್ತದೆಯಲ್ಲ. ಹೊಸದನ್ನು ಕೊಂಡರಾಯಿತು.’ ಅಂತ ಅನಿಸಿತು. ಆದರೂ ‘ಪಾಪ ಮಗ ಅವಿನಾಶ ಪ್ರೀತಿಯಿಂದ ಕೊಂಡಿದ್ದು. ಅದೇಬೇಕು ಅಂತ ಅನಿಸುವದು ಸಹಜ. ಒಮ್ಮೆ ಪುಟ್ಟನನ್ನೇ ಕೇಳೋಣ’ ಎಂದವಳು ಪುಟ್ಟನನ್ನು ಕರೆದು ‘ಪುಟ್ಟ, ಸುಳ್ಳು ಹೇಳಬೇಡ. ನೀನು ಇಂಚುಪಟ್ಟಿಯನ್ನು ತೆಗೆದುಕೊಂಡಿದ್ದೀಯಾ? ‘ಅಂತ ಪುಸಲಾಯಿಸುವ ಹಾಗೆ ಕೇಳಿದಳು. |
ಸಮೀಪದಲ್ಲಿಯೇ ಇದ್ದ ಲಕ್ಷ್ಮಿ ಇದನ್ನು ಕೇಳಿಸಿ ಕೊಳ್ಳುತ್ತಿದ್ದಳು. ಅವಳಿಗೆ ಅವಮಾನವಾಯಿತು. ತನ್ನ ಮಗ ಕಳ್ಳ ಅಂತ ಹೇಳಿದುದನ್ನು ಸಹಿಸಿಕೊಳ್ಳಲು ಆ ತಾಯಿಗೆ ಅದೆಷ್ಟು ಕಷ್ಟವಾಯಿತೋ ಏನೋ? ಅದೂ ತಾನು ಕೆಲಸಮಾಡುವ ಮನೆಯ ಯಜಮಾನಿತಿಯಿಂದ. ಲಾವಣ್ಯ ಪುಸಲಾಯಿಸಿ ಮಾತನಾಡಿಸುವ ತನ್ನ ಮಗನನ್ನು ಕೈ ಹಿಡಿದು ಎಳೆದಳು. ಅಡಿಗೆಮನೆಯಲ್ಲಿದ್ದ ಸವುಟನ್ನು ಹುಡುಕಿ ಕೊಂಡು ಬಂದವಳೇ ಮಗನಿಗೆ ಬಡಿಯಲು ಪ್ರಾರಂಭಿಸಿದಳು. ಏನಾಗುತ್ತಿದೆಯೆಂದು ಲಾವಣ್ಯಳಿಗೆ ತಿಳಿಯುವ ಮೊದಲೇ ಪುಟ್ಟುವಿನ ಮೈಮೇಲೆ ಬಾಸುಂಡೆಗಳಾದವು. ಲಾವಣ್ಯ ಸವುಟನ್ನು ಕಸಿದುಕೊಂಡು ಪುಟ್ಟನನ್ನು ಎಳೆದು ಕೊಂಡಳು.
“ಇದೇನು ಲಕ್ಷ್ಮಿ. ಹೀಗೆ ಮಗನಿಗೆ ಹೊಡೆಯುತ್ತಿರುವೆ. ಅವನೇನು ತಪ್ಪು ಮಾಡಿದ್ದಾನೆ ಅಂತ. ಅವನೇ ಕದ್ದಿದ್ದಾನೆ ಅಂತ ಯಾರು ಹೇಳಿದರು? ಅವಿನಾಶ ಏನೋ ಒಮ್ಮೆ, ಪುಟ್ಟ ಕೇಳಿದ ಅಂತ ಹೇಳಿದ್ದನ್ನು ದೊಡ್ಡದು ಮಾಡಿದೆ ನೀನು. ಅವಿನಾಶನೇ ಎಲ್ಲೋ ಯಾಕೆ ಕಳೆದಿರಬಾರದು? ನೀನು ಹೀಗೆ ಹೊಡೆದು ಅವನ ಕೈಯೋ ಕಾಲೋ ಮುರಿದರೆ ಗತಿ ಏನು?” ಅಂದಳು.
“ನಿಮಗೆ ಗೊತ್ತಿಲ್ಲಮ್ಮ. ಕೈಕಾಲು ಮುರಿಯುವದಲ್ಲ. ಅವನು ಸತ್ತರೂ ಚಿಂತೆ ಇಲ್ಲ. ಅವನಿಗೆ ಏನು ಕಡಿಮೆಯಾಗಿದೆ ಅಂತ ಇಂಚುಪಟ್ಟಿ ಕೇಳಬೇಕಿತ್ತು. ಅವನಿಗೇನು ಬೇಕಿತ್ತೇ ಇದು?. ನಾವು ಏನು ಕಡಿಮೆ ಮಾಡಿದ್ದೇವೆ ಅವನಿಗೆ ಅಂತ? ಪುಸ್ತಕ, ಪಟ್ಟಿ, ಯೂನಿಫಾರ್ಮ್, ಶೂ ಎಲ್ಲವನ್ನೂ ಶಾಲೆಯವರು ಕೇಳಿದ ಹಾಗೇ ಕೊಡಿಸಿದ್ದೇವೆ. ನಾನು ಮನೆಗೆ ಹೋದವನು ನೋಡುತ್ತೇನೆ. ಅಲ್ಲೆಲ್ಲೋ ಇಟ್ಟಿರಬೇಕು ಅವನು.” ಅಂತ ಹೇಳಿ ಮನಸ್ಸಿನ ನೋವನ್ನು ಕಾರಿಕೊಂಡಳು.
ಲಾವಣ್ಯ ಗಾಯಕ್ಕೆ ಹಚ್ಚುವ ಮುಲಾಮನ್ನು ಲಕ್ಷ್ಮಿಗೆ ಕೊಟ್ಟು ಹಚ್ಚಲು ಹೇಳಿದಳು. ಉಳಿದ ಮುಲಾಮನ್ನು ಮನೆಗೇ ಒಯ್ಯಲು ಹೇಳಿ ಕಟ್ಟಿಯೂ ಕೊಟ್ಟಳು. ಪುಟ್ಟನಿಗೆ ತಿಂಡಿಯನ್ನು ಕೊಟ್ಟು, ಮನೆಗೆ ಒಯ್ಯಲು ಸ್ವಲ್ಪ ಕಟ್ಟಿಯೂ ಕೊಟ್ಟಳು.
ಘಟನೆಗಳ ಕುರಿತಾಗಿ ಏನೂ ಅರ್ಥವಾಗದಿದ್ದರೂ ಸಹ ಪುಟ್ಟ ಇಂಚುಪಟ್ಟಿಯನ್ನು ಕದ್ದೊಯ್ದ ಕಾರಣಕ್ಕೇ ಅವನ ಅಮ್ಮ ಬಡಿದಿರಬೇಕೆಂದು ನಿರ್ಣಯಿಸಿದ್ದ ಅವಿನಾಶ. ಆದರೂ ಪೆಟ್ಟುತಿಂದು ನೋವಿನಿಂದ ಪುಟ್ಟ ಅಳುವದನ್ನು ನೋಡಿ ಕರುಳು ಚುರ್ರೆಂದಿತ್ತು.
ಮಾರನೇ ದಿನ ಸೋಮವಾರ ಊಟಮಾಡಿ ಮಲಗಿದ ಲಾವಣ್ಯಳಿಗೆ ಎರಡು ಘಂಟೆಗೆ ಬೆಲ್ಲು ಬಾರಿಸಿದ್ದು ಕೇಳಿಸಿತು. ಬಾಗಿಲು ತೆರೆದರೆ ಎದುರಿನಲ್ಲಿ ಲಕ್ಷ್ಮಿ. ಯಾವಾಗಲೂ ಮೂರುವರೆಯ ನಂತರ ನಿದ್ದೆಯಿಂದೆದ್ದ ಮೇಲೆ ಬರುವವಳು ಇಂದು ಒಂದೂವರೆ ತಾಸು ಮೊದಲೇ ಬಂದಿದ್ದಳು. ಬಾಗಿಲು ತೆಗೆದಾಗ ಒಳಗೆ ಬಂದಳು ಲಕ್ಷ್ಮಿ.
‘ಮಗನಿಗೆ ಹೇಗಿದೆ ಲಕ್ಷ್ಮೀ?’ ವಿಚಾರಿಸಿದಳು ಲಾವಣ್ಯ. ಪುಟ್ಟನ ಅಳುವನ್ನು ಈಗಲೂ ನೆನಸಿಕೊಳ್ಳುತ್ತಿದ್ದಳು ಲಾವಣ್ಯ.
‘ಅವನಿಗೇನಾಗಿದೆ ಧಡಿಯನಿಗೆ. ಅವಿನಾಶನ ಇಂಚುಪಟ್ಟಿಯನ್ನು ಒಯ್ದವನು ಯಾರಿಗೂ ಕಾಣದ ಹಾಗೆ ಮರೆಯಾಗಿಟ್ಟಿದ್ದನು. ಇನ್ನೊಮ್ಮೆ ಜೋರುಮಾಡಿದ ಮೇಲೇ ಹೇಳಿದ. ತಗೊಳ್ಳಿ ಇಲ್ಲಿದೆ’ ಅಂತ ಲಾವಣ್ಯಳಿಗೆ ಕೊಟ್ಟಳು ಲಕ್ಷ್ಮಿ.
‘ಪೆಟ್ಟು ತಿಂದನಾದರೂ ಆಮೇಲೆ ಸತ್ಯವನ್ನು ಒಪ್ಪಿಕೊಂಡನಲ್ಲ ಹುಡುಗ’ ಅಂತ ಲಕ್ಷ್ಮಿಯಲ್ಲಿ ಪ್ರಶಂಸೆಮಾಡಿದಳು ಪುಟ್ಟನನ್ನು.
‘ಹೂಂ’ ಎಂದಷ್ಟೇ ಹೇಳಿದವಳು , ‘ಇಂದು ಸ್ವಲ್ಪ ಬೇಗನೆ ಹೋಗಬೇಕು. ಗಂಡ ಮಗನ ಜೊತೆ ದೇವಸ್ಥಾನಕ್ಕೆ ಹೋಗಬೇಕು. ಮಗ ನೇರವಾಗಿ ಮನೆಗೆ ಬರುತ್ತೇನೆ ಅಂತ ಹೇಳಿದ್ದಾನೆ’ ಅಂತ ಹೇಳಿದ ಲಕ್ಷ್ಮಿ ಅವಸರದಲ್ಲಿ ಕೆಲಸ ಪ್ರಾರಂಭಿಸಿದಳು. ಲಾವಣ್ಯ ಬೇಗನೆ ಎದ್ದುದರಿಂದ ಬೇರೆ ಕೆಲಸ ಇರಲಿಲ್ಲ.ಟೀ.ವಿ.ನೋಡಲು ಪ್ರಾರಂಭಿಸಿದಳು.
‘ಅಮ್ಮ ಅಮ್ಮ. ಬಾಗಿಲಿನಲ್ಲಿ ಬೆಲ್ಲಿದ್ದರೂ ಬಡಿದೇ ಹೇಳಬೇಕು ಅವಿನಾಶನಿಗೆ. ಬಾಗಿಲಬಳಿ ಹೋಗಿ ಬಾಗಿಲು ತೆರೆದಳು. ಕೈಯಲ್ಲಿ ಅದೇ, ಕಳೆದುಹೋದ ಇಂಚುಪಟ್ಟಿಯನ್ನು ಹಿಡಿದು ನಿಂತಿದ್ದನು ಅವಿನಾಶ. ಲಕ್ಷ್ಮಿ ಕೆಲಸ ಮುಗಿಸಿ ಹೊರಡಲು ಬಾಗಿಲಿಗೆ ಬಂದು ‘ಬರುತ್ತೇನೆ ಅಮ್ಮ’ ಅಂತ ಹೇಳಿದಳು. ಅವಿನಾಶ ‘ಅಮ್ಮ ಇಂಚುಪಟ್ಟಿ ಡೆಸ್ಕಿನೊಳಗೇ ಇತ್ತು. ಇದೋ ನೋಡು’ ಅಂತ ತೋರಿಸಿದನು. ಲಾವಣ್ಯ ಲಕ್ಷ್ಮಿಯ ಮುಖ ನೋಡಿದಳು. ಮುಖ ಕೆಳಗೆ ಹಾಕಿದ ಲಕ್ಷ್ಮಿ ಸರಸರ ಹೊರಟು ಹೋದಳು. ಲಾವಣ್ಯ ಅಪ್ರತಿಭಳಾದಳು.
ಮಗನ ಮೇಲೆ ಬಂದ ಕಳ್ಳತನದ ಅಪವಾದಕ್ಕೆ ಕೊನೆ ಹಾಡಲು ಅದೇ ಅಂಗಡಿಯಿಂದ ಇನ್ನೊಂದು ಇಂಚುಪಟ್ಟಿ ಖರಿದಿಸಿ ಲಾವಣ್ಯಳಿಗೆ ಕೊಟ್ಟಿದ್ದನ್ನು ಲಕ್ಷ್ಮಿ ಹೇಳಿರಲಿಲ್ಲ. ಮಗ ಅವಿನಾಶನ ಕೈಯಲ್ಲಿ ಅವನ ಇಂಚುಪಟ್ಟಿಯನ್ನು ಕಂಡ ಲಾವಣ್ಯಳಿಗೆ, ಲಕ್ಷ್ಮಿ ಮಾಡಿರಬಹುದಾದ ಕೆಲಸವನ್ನು ಊಹಿಸುವದು ಕಷ್ಟವಾಗಲಿಲ್ಲ. ‘ನಾಳೆ ಲಕ್ಷ್ಮಿಯಲ್ಲಿ ಕ್ಷಮೆ ಕೋರಬೇಕು’ ಎಂದು ಮನಸ್ಸಿನಲ್ಲೇ ಎಣಿಸಿದ ಲಾವಣ್ಯ ಕಣ್ಣಿನಿಂದ ಉದುರುವ ನೀರನ್ನು ಒರಸಿಕೊಂಡಳು.
***************
ಚೆನ್ನಾಗಿದೆ. ಕೆಲಸದಾಳು ಲಕ್ಷ್ಮಿ ಯ ಪಾತ್ರ ಮನದಲ್ಲಿ ಉಳಿಯುತ್ತದೆ
ಅನುಮಾನಕ್ಕಿಂತ ದೊಡ್ಡ ಖಾಯಿಲೆ ಯಾವುದು ಇಲ್ಲ.ಮನಸ್ಸಿನ ಚಿಂತನೆಗೆ ಮಸಿಯಂತೆ ಮುಚ್ಚುತ್ತದೆ.