ಕವಿತೆ ಮೂಕವಾಗಿದೆ

ಕವಿತೆ

ಕವಿತೆ ಮೂಕವಾಗಿದೆ

ಶಂಕರಾನಂದ ಹೆಬ್ಬಾಳ

ಒಡಲ ಸೀಳಿಬಂದ ಹಸುಳೆಯಂತೆ ಅಳುತ
ಮೂಕ ಕಂಡ ಕನಸಿನಂತೆಯೆ ಹೇಳದೆಯೆ
ಒಳಗೊಳಗೆ ಕೊರಗಿ ಮರುಗಿ ನಲುಗಿ
ನನ್ನ ಕವಿತೆ ಮೂಕವಾಗಿದೆ…

ಕ್ರೌರ್ಯಕ್ಕೆ ತುತ್ತಾದ ಅಬಲೆಯ ನೆನೆದು
ದುರುಳರ ಅಟ್ಟಹಾಸಕ್ಕೆ ಬಲಿಯಾಗಿ
ಚಕಾರವೆತ್ತದೆ ಬಸವನಂತೆ ತಲೆಯಾಡಿಸಿ
ನನ್ನ ಕವಿತೆ ಮೂಕವಾಗಿದೆ…

ಸೆಗಣಿಯ ಹುಳುವಂತೆ ತೊಳಲಾಡಿ
ಬರಬಿದ್ದ ನಾಡಿನ ನೋವಿನ ನುಡಿಯಾಗಿ
ಹೇಳಲಾಗದೆ ಕಣ್ಣೀರ ಕಡಲಲ್ಲಿ
ನನ್ನ ಕವಿತೆ ಮೂಕವಾಗಿದೆ….

ಶೋಷಿತರ ಬೆವರ ಹನಿ ಹರಿಯುವಂತೆ
ಬಾರುಕೋಲಿನ ಹೊಡೆತಕ್ಕೆ ಸಿಕ್ಕ ಕೋಣದಂತೆ
ಸುಳಿಗೆ ಸಿಕ್ಕ ದೋಣಿಯಂತೆ ವಿಲವಿಲನೆ ಒದ್ದಾಡಿ
ನನ್ನ ಕವಿತೆ ಮೂಕವಾಗಿದೆ…

ಮೌಢ್ಯಗಳ ಖಂಡಿಸುವ ದನಿಯಾದೆ
ರೆಕ್ಕೆ ಮುರಿದ ಹಕ್ಕಿಯಂತಾಗಿ
ಬಿರುಗಾಳಿಗೆ ಸಿಕ್ಕ ತೆರೆಗಲೆಯಂತೆ
ನನ್ನ ಕವಿತೆ ಮೂಕವಾಗಿದೆ

**********

Leave a Reply

Back To Top