ಕವಿತೆ
ಜೋಡಿ ಬಾಗಿಲು
ಒಂದು ನಡು ವಯಸ್ಸಿನ ಕವಿತೆ
ಮಹಾದೇವ ಕಾನತ್ತಿಲ
ಮಹಡಿ ಎರಡು ಹತ್ತಲೇ ಬೇಕು
ಹತ್ತೂ ಹತ್ತೂ ಇಪ್ಪತ್ತೂ ಅಂತ
ಸೆಳೆಯುತ್ತವೆ ಮೆಟ್ಟಿಲುಗಳು
ಕರೆದೊಯ್ಯುತ್ತವೆ ಪುಟ ಪುಟ
ನೋಡಿ! ಚಂದ ಕುಸುರಿಯ
ಜೋಡಿ ಬಾಗಿಲುಗಳು
ಹೊಂದಿಸಿದ ಜೋಡೆತ್ತು ಹೆಗಲುಗಳು
ಈ ಯುಗಳ ಬಾಗಿಲುಗಳು
ಒಳಗಡೆ ಒಂದಕ್ಕೊಂದು ಕೂಡಿ
ಕೊಂಡಿ ಸಿಕ್ಕಿಸಿದರೆ ಮನೆಯೊಳಗೆ
ಖಾಸಾ ಖಾಸಗಿ ಜಗತ್ತು!
ಘಮ ಘಮ ಗಮ್ಮತ್ತು
ಜೋಡಿ ಜೀವ ಹಣ್ಣು ತರಕಾರಿ
ಬೆಳ್ಳಿ ಬಂಗಾರ ಖರೀದಿ
ಮುರಿದ ಚಾಳೀಸು ರಿಪೇರಿ
ಇಯರ್ಲೀ ಹೆಲ್ತ್ ಚೆಕಪ್
ಹೊರಗೆ ಕಾಲಿಟ್ಟರೆ
ಆಕೆ ನೆನಪಿಸುತ್ತಾಳೆ
ಓಯ್! ಇವರೇ!!
ಬಾಗಿಲುಗಳ ಕೂಡಿಸಿ
ಹೊರಗಿಂದ ಬೀಗ ಹಾಕಿದಿರಾ?.
ಭದ್ರ ಭದ್ರ! ಮನೆ ಪಟ್ಟ ಭದ್ರ!!
ಜೋಡಿ ಬಾಗಿಲುಗಳು
ನಲವತ್ತು ವರ್ಷ ಹಳೆಯವು!
ತವರು ಮನೆಯ ಹೆಬ್ಬಲಸಿನ ಹಲಗೆಯವು!
ಅಮ್ಮ ತಿಕ್ಕಿ ಕೊಳೆ ತೊಳೆದು,
ಅಪ್ಪ ಗೀಸುಳಿ ಎಳೆದೆಳೆದು
ನಯವಿನಯ ಸಂಪ್ರದಾಯ
ಆಚಾರ್ಯರು ಕೆತ್ತಿದ ಕುಸುರಿ
ವಿಶ್ವ-ಕರ್ಮ ಕೂಡಿಸಿದ
ತೆರೆಯುವ ಮುಚ್ಚುವ
ಕದ ಕಲಾವಿದ.
ನಾನು ಕರೆಗಂಟೆ ಒತ್ತಿದೆ!
ಒಂದಲ್ಲ ಎರಡಲ್ಲ ಭರ್ತಿ ಐದಡಿ!
ಅವರು ಅವರೇ!
ಕೂದಲು ಮಾತ್ರ ಬೆಳ್ಳಿ,
ಮುಖಸಿರಿ ಬಂಗಾರ ಕುಸುರಿ
ಅಂಗಳ ಕಂಗಳ ಕದ ತೆರೆದರು
ರಂಗ ತರಂಗಿಣಿ ಮುಗುಳ್ನಕ್ಕರು
ಬಲಗಡೆ ತ್ರೀ ಸೀಟರು
ಎಡಗಡೆ ಸೊಂಟ ಸರ್ತ
ಮಾಡಲು ಸಾಂಚು ಮಂಚ
ನಡುವೆ ನಯನಯ
ಚಾಯ ಟೀಪಾಯ
ನಲವತ್ತಿಂಚು ಟಿವಿ ಪರದೆ
ನಾಟಕ ಆಡಿ ಬಚ್ಚುವುದಿಲ್ಲ ಅದಕ್ಕೇ.
ಡೈನಿಂಗ್ ಟೇಬಲ್ಲು ದೊ..ಡ್ಡದು
ಕಣ್ಣು ಕಣ್ಣು ದೋಸೆ
ಉಡುಪಿಯ ತವರಿನ ಕೂಸೇ
ಅನ್ನಮಯ್ಯ ಸಾರಮ್ಮಯ್ಯ
ಹೈದರಾಬಾದ್ ನ ಪಪ್ಪುಚಾರು
ಚಟ್ನಿಪುಡಿ ಜೋಡಿ ಕೋಸಂಬರಿ
ಒಂದು ಚಂದದ ಹಾರ್ಮೋನಿಯಂ ಹೊರಕೋಣೆಯಲ್ಲಿ ಹಾರ್ಮೋನ್
ಸಂಗೀತ ನುಡಿಸುತ್ತಿತ್ತು
ಅದನ್ನು ಯಾರೋ ಯುವ ಸಂಗೀತ ದಂಪತಿಗೆ ಕೊಟ್ಟಾಯಿತು
ಈಗ ಒಳಕೋಣೆಯಲ್ಲಿ
ತಂಬೂರಿಯ ಶ್ರುತಿ, ಇಬ್ಬರೂ
ಒಳಗೊಳಗೇ ಸ್ವರ ಹೊಂದಿಸಿ
ಎದೆ ಮೀಟಿ ಹಾಡುತ್ತಾರೆ
ಕೃಷ್ಣ ರಾಧೆಯರ ಮೂರ್ತಿ ದೇವರ ಕೋಣೆಯಲ್ಲಿ ನೃತ್ಯ ಭಂಗಿಯಲ್ಲಿ ಓಲಾಡಿದಂತೆ.
ನಾಟಕ, ನಾಟಕದೊಳಗೆ ನಾಟಕ
ಮಾಯೆಯೋ ನಿಜವೋ
ಕರ್ಮವೋ ಛಾಯೆಯೋ
ನಿಜ ಸೂತ್ರದಾರನ ಹುಡುಕಾಟ
ಮನೆಯೊಳಗೇ ನಡೆದಿದೆ.
ಜತೆ ಜತೆಗೇ ನಡೆದ
ಹಾಡಿದ ನಾಟ್ಯರಂಗ ಸಂಗೀತ
ಎಷ್ಟೆಷ್ಟೋ ಚಂದ.
**************************
ತುಂಬ ಚೆಂದವಿದೆ. ಕುಸುರಿ ಮಾಡಿದ ಜೋಡಿ ಬಾಗಿಲು. ಒಳಗಡೆ ಕೊಂಡಿ ಸಿಕ್ಕಿಸಿದರೆ ತೀರ..ತೀರಾ ಖಾಸಗಿ ಜಗತ್ತು
ತುಂಬಾ ಧನ್ಯವಾದಗಳು ಪೂರ್ಣಿಮಾ ಅವರೇ.
ಕುಸುರಿ ಕೆತ್ತಿದ ಜೋಡಿ ಬಾಗಿಲಿನಾಚೆಯ ಖಾಸಗಿ ಜೀವಗಳು ವೃದ್ಧ ದಂಪತಿಗಳ ಪ್ರತೀಕೆಗಳು. ನುಡಿಸಲಾರದೆ ಕೊಟ್ಟುಬಿಟ್ಟ ಹಾರ್ಮೋನಿಯಂ ಉಡುಗಿಹೋದ ಶಕ್ತಿ. ಚಂದದ ಕವಿತೆ ಮಹದೇವರೆ!
ಸರ್, ತುಂಬಾ ಗಹನವಾದ ವಿಚಾರ ನಿಮ್ಮದು. ತುಂಬಾ ಧನ್ಯವಾದಗಳು
ನಿಜವಾದ ಸೂತ್ರಧಾರ ಯಾರು ಎಂಬ ಅನ್ವೇಷಣೆ ನಡೆದಿದೆ. ಮೈಯಲ್ಲಿ ಕಸುವಿದ್ದಾಗ ಮನ ಇಂತಹ ಜಿಜ್ಞಾಸೆಯಲ್ಲಿ ಅಷ್ಟಾಗಿ ತೊಡಗುವುದಿಲ್ಲ. ಮುಖ್ಯವಾಗಿ, ಮನಸ್ಸಿನ ಹುಮ್ಮಸ್ಸಿಗೆ ಶರೀರದ “ಸಾಥ್” ( ಸಹಕಾರ) ದೊರೆಯದಿದ್ದಾಗ ಸಂಗೀತ ಹೊಮ್ಮಿದೆ ಹಾರ್ಮೋನಿಯಂ ಬರೀ ಒಂದು ಒಣ ಉಪಕರಣವಾಗಿ ಉಳಿದು ಬಿಡುತ್ತದೆ.ಈ ಪ್ರತಿಮೆಯಲ್ಲಿ ಕವಿ ಮಹಾದೇವ ಅವರು ಬಹಳ ಮಹತ್ತರವಾದ ಸಂಗತಿಯನ್ನು ಬಿತ್ತರಿಸಿದ್ದಾರೆ. ಇಲ್ಲಿ ಉಮೇದು ಬರೀ ಶರೀರಕ್ಕೆ ಸಂಬಂಧಿಸಿದುದಲ್ಲ, ಮಾನಸಿಕವಾಗಿಯೂ ಉತ್ಸಾಹಗೊಂಡರೆ ಮಾತ್ರ ಸಂಗೀತ ಹುಟ್ಟುವುದು ಸಾಧ್- ಮನದಲ್ಲಿ ‘ ತನನನ’ ದ ಆವಿರ್ಭಾವವಾಗುವದು ಎಂಬ ಧ್ವನ್ಯರ್ಥವೂ ಕವನದ ಆಶಯದಲ್ಲಿ ಹಾಸುಹೊಕ್ಕಾಗಿದೆ. ಉತ್ತಮ ಕವಿತೆ. ಮಹಾದೇವ ಅವರಿಗೆ ಹಾರ್ದಿಕ ಅಭಿನಂದನೆಗಳು
ಪ್ರಹ್ಲಾದ ಸರ್, ಹೌದು, ಇದೊಂದು ಅನ್ವೇಷಣೆ, ಜೋಡಿ ಅನ್ವೇಷಣೆ. ನಿಮ್ಮ ಆಸ್ವಾದನಾಪ್ರಕೃತಿಯೂ, ತದನಂತರ ಅನಾವರಣವಾಗುವ ಯೋಚನಾ ಸರಣಿಯೂ ಕಾವ್ಯಕ್ಕೊಪ್ಪುವ ಭಾವ ಭಾಷೆ. ತುಂಬಾ ತುಂಬಾ ಧನ್ಯವಾದಗಳು