ಪುನರ್ಜನ್ಮ

ಕಥೆ

ಪುನರ್ಜನ್ಮ

ಮೊನಿಕ ಮತಾಯಸ್

“ನಾನೇ ಯಾಕೆ ದೇವರೆ?ನಿಮಗೆ ಬೇರೆ ಯಾರೂ ಸಿಕ್ಕಿಲ್ವಾ?” ನನ್ನ ದೃಷ್ಟಿ ಮುಂದೆ ಕಾಣುವ ಕಾರಂಜಿ ಮೇಲೆ ಏಕಾಗ್ರಿತವಾಗಿತ್ತು.

ಮನೆ ಹತ್ತಿರದ ಪಾರ್ಕ್ನಲ್ಲಿರುವ ಬೆಂಚಿನಲ್ಲಿ ಕುಳಿತು ನನ್ನಷ್ಟಕ್ಕೆ ಯೋಚಿಸುತ್ತಿದ್ದೆ.

“ಆಶಾ,, ಕ್ಯಾನ್ಸರ್ ನಿನ್ನ ಅಂಗಾಂಗಗಳಿಗೆ ಹಬ್ಬಿದೆ. ನಿನಗೆ ಹೆಚ್ಚೆಂದರೆ ನಾಲ್ಕು ಆರು ತಿಂಗಳು ಉಳಿದಿದೆ.” ಡಾ.ರಾವ್ ಅವರ ಮಾತುಗಳು ಬೇಡವೆಂದರೂ ನನ್ನ ಕಿವಿಗೆ ಅಪ್ಪಳಿಸುತ್ತಿದ್ದವು.

“ನನಗೆ ಮದುವೆಯಾಗಿ ಇಪ್ಪತ್ತೈದು ವರ್ಷ ಆಯಿತು. ನನ್ನ  ಗಂಡ ಅವರ ಕೆಲಸದಲ್ಲಿ ತುಂಬಾ ವ್ಯಸ್ತರಾಗಿರುತ್ತಾರೆ. ಹಾಗಂತ ಅವರಿಗೆ ನನ್ನ ಮೇಲೆ ಪ್ರೀತಿ ಇಲ್ಲ ಅಂತೇನಲ್ಲ.ಬರಬರುತ್ತಾಪ್ರೀತಿನೂ ಮಾಯವಾಗಲು ಆರಂಬಿಸುತ್ತದಲ್ಲವೆ?ಅವರಿಗೆ ನನ್ನ ಬಗ್ಗೆ ವಿಚಾರಿಸಲು ಸಮಯವಿಲ್ಲ. ನನಗೆ ಇಬ್ಬರು ಮುದ್ದು ಮಕ್ಕಳು. ಸವಿತಾ ಮತ್ತು ಕವಿತಾ. ಸವಿತಾಳಿಗೆ ಹದಿನೈದು ವರ್ಷ. ಕವಿತಾಳಿಗೆ ಹನ್ನೆರಡು. ಅವರು ಇನ್ನೂ ಚಿಕ್ಕವರು ಆದ್ರೂ ದೊಡ್ಡವರಂತೆ ವರ್ತಿಸುತ್ತಾರೆ. ಅಮ್ಮ ಕೇವಲ ಅಡುಗೆ ಮಾಡುವವಳು ಮತ್ತು ಪಾತ್ರೆ ತೊಳೆದು ಮನೆಯ ಸ್ವಚ್ಚತೆ ಕಾಪಾಡುವವಳು ಎಂಬುದು ಅವರ ಅನಿಸಿಕೆ. ಅವರ ಭವಿಷ್ಯದ ಬಗ್ಗೆ ನನಗೆ ತುಂಬಾ ವ್ಯಥೆಯಾಗುತ್ತಿದೆ. ನನ್ನ ನಂತರ ನನ್ನ ಹಾಗೆ ನನ್ನ ಮಕ್ಕಳನ್ನು ಯಾರು ನೋಡಿ ಕೊಳ್ಳುವರು. ಹೇಗೆ ಇದನ್ನೆಲ್ಲಾ ನನ್ನ ಯಜಮಾನರಿಗೆ ಅರಿವು ಮಾಡಿಸಲಿ. ಏನೇ ಆದ್ರೂ ನನಗೆ ಹೋಗಲೇಬೇಕು. ದೇವರೇ ನೀನೇ ನನ್ನ ಕುಟುಂಬವನ್ನು ಕಾಪಾಡಪ್ಪ.” ತನ್ನಷ್ಟಕ್ಕೇ  ಕುಳಿತು ಅಳುವುದರ ವಿನಹಾ  ಬೇರೆ ದಾರಿ ನನ್ನಲ್ಲಿರಲಿಲ್ಲ.“ಆಶಾ, ನಿನ್ನ ಮಕ್ಕಳು ಈಗ ದೊಡ್ಡವರಾಗಿದ್ದಾರೆ. ಎಷ್ಟು   ಸಮಯ ಅಂತ ಅವರನ್ನ  ನಿನ್ನ ಸೆರಗಲ್ಲಿ ಬಚ್ಚಿಟ್ಟುಕೊಳ್ತೀಯ? ಈ ಪ್ರಪಂಚವನ್ನು ಎದುರಿಸೋ ಶಕ್ತಿ ಅವರಿಗೆ ಕಲಿಸು. ಇಷ್ಟು ಸಮಯ ನಿನ್ನ ಬದುಕನ್ನು ನಿನ್ನ ಕುಟುಂಬಕ್ಕಾಗಿ ಸೀಮಿತವಾಗಿರಿಸಿದೆ, ಇನ್ನು ಉಳಿದ ಕೆಲವು ದಿನಗಳು ನಿನಗಾಗಿ ನೀನು ಜೀವಿಸು ಆಶಾ” ನನ್ನ ಅಂತರಂಗ ನುಡಿಯಿತು.

“ಅವರು ಎಷ್ಟೆಂದರೂ ನನ್ನ ಮಕ್ಕಳು, ನನಗಲ್ಲದೆ ಬೇರೆ ಯಾರಿಗೆ ಅವರ ಚಿಂತೆ ಇರಬೇಕು?ನಾನು ಹೋದಮೇಲೆ ಅವರ ಗತಿ ಏನಾಗಬಹುದೋ ದೇವರೇ ಬಲ್ಲ” ನನಗೆ ಪುನಹ ದುಃಖ ಉಕ್ಕಿಬಂತು.ತನ್ನ ಕೆನ್ನೆಯ ಮೇಲೆ ಕೈಯಾಡಿಸಿ ತಲೆ ತಿರುಗಿಸಿ ನೋಡುವಾಗ ಸೂರ್ಯ ಪಶ್ಚಿಮದಲ್ಲಿ ತನ್ನನ್ನೇ ಸಾಗರದಲ್ಲಿ ಅಡಗಿಸಲುತಯಾರಾಗಿದ್ದನು. ನಾನು ದೀರ್ಘಶ್ವಾಸ ಸೇವಿಸಿ ಎದ್ದುನಿಂತೆ.ತಂಪಾದ ಗಾಳಿ ನನ್ನ ದೇಹವನ್ನು ಚುಂಬಿಸಿದಾಗ ಒಮ್ಮೆಲೇ ಮೈ ಜುಮ್ಮೆಂದಿತು. ನಾನು ಮನೆ ಕಡೆಗೆ ಹೆಜ್ಜೆಹಾಕಿದೆ.

“ಅಮ್ಮಾ, ಹೊಟ್ಟೆ ತುಂಬಾ ಹಸೀತಿದೆ. ರಾತ್ರಿಗೆ ಊಟಕ್ಕೆ ಏನಮ್ಮಾ?” ಮನೆಬಾಗಿಲು ತೆಗೆದ ನನ್ನ ಮಗಳು ಸವಿತಾ, ನಾನು ಎಲ್ಲಿಗೆ ಹೋಗಿದ್ದೆ ಎಂದು ವಿಚಾರಿಸದೆ ತನ್ನ ಬಗ್ಗೆ ಚಿಂತಿತಳಾದಳು. “ಏನಿದೆ ಫ್ರಿಜ್ಜಲ್ಲಿ ನೋಡ್ತೀನಮ್ಮಾ?” ನಾನು ಅಡುಗೆಮನೆಗೆ ನಡೆದೆ.

ನನಗಾಗಿ ಒಂದು ಲೋಟ ಕಾಫಿ ಮಾಡಿ ಸಮಧಾನದಿಂದ ಕುಡಿಯುತ್ತೇನೆ ಎಂದು ಕುಳಿತುಕೊಳ್ಳುವಾಗ ಸುಧಾಕರ್ ಆಫೀಸ್ ಕೆಲಸ ಮುಗಿಸಿ ಮನೆಯೊಳಗೆ ನುಗ್ಗಿದರು.

“ನನಗೂ ಒಂದು ಲೋಟ ಕಾಫಿ ಮಾಡೇ ಪ್ಲೀಜ್. ನಾನು ಚೇಂಜ್ಮಾಡ್ಕೊಂಡುಬರ್ತೀನೀ” ಅವರು ತಮ್ಮ ಕೋಣೆ ಕಡೆಗೆ ಹೊರಟಾಗ ನಾನು ಪುನಃ ಎದ್ದು ಗ್ಯಾಸ್ ಆನ್ಮಾಡಿದೆ.

“ಇವತ್ತು ಆಫಿಸಲ್ಲಿ ಏನಾಯ್ತು ಗೊತ್ತಾ?” ಕಾಫಿ ಸವಿಯುವಾಗ ಸುಧಾಕರ್ ಮಾತಾಡುತ್ತಲೇ ಹೋಗುತ್ತಿದ್ದರು. ನನ್ನ ಮನಸ್ಸು ನನ್ನ ಪರವಾನಿಗೆ ಇಲ್ಲದೆ ಎಲ್ಲಿಗೋ ತೆರಳಿತ್ತು.

“ನಿನ್ನಲ್ಲಿ ಮಾತಾಡೋಕ್ಕಿಂತ ಬಾಯ್ಮುಚ್ಕೊಂಡು ಕೂತ್ಕೊಳ್ಳೊದು ಒಳ್ಳೇದು” ಕೋಪದಿಂದ ಕಾಫಿ ಮುಗಿಸಿ ಲೋಟವನ್ನು ಸಿಂಕಲ್ಲಿ ಎಸೆದು ತನ್ನ ಕೋಣೆ ಕಡೆಗೆ ನಡೆದರು.

“ಯಾರಾದ್ರೂ ಒಮ್ಮೆ ನನ್ನನ್ನು ಕೇಳಿ ನಾನು ಹೇಗಿದ್ದೀನಂತ” ಜೋರಾಗಿ ಕಿರುಚುವ ಮನಸ್ಸಾಯ್ತು. ಆದ್ರೂ ತಡ್ಕೊಂಡು ಸಂಜೆ ಅಡುಗೆ ತಯಾರಿಸಲು ವ್ಯಸ್ತಳಾದೆ.

“ಅಮ್ಮಾ, ನನಗೆ ಸ್ವಲ್ಪ ಲೆಕ್ಕ ಹೋಮ್ವರ್ಕ್ಗೆ ಸಹಾಯ ಮಾಡ್ತೀಯಾ ಪ್ಲೀಜ್?” ಕವಿತಾ ನನ್ನ ಬಳಿ ಬಂದು ತನ್ನ ಪುಸ್ತಕ ಬಿಡಿಸಿದಳು.

“ನನಗೆ ತುಂಬಾ ತಲೆನೋಯ್ತಿದೆಯಮ್ಮಅಪ್ಪನತ್ರ ಅಥವಾ ಅಕ್ಕನತ್ರ ಕೇಳಮ್ಮಾ” ತಲೆಗೆ ಕೈಹಿಡಿದು ಕಣ್ಣುಮುಚ್ಚಿಕೊಂಡೆ.

“ಆಯ್ತಮ್ಮಾ” ನನ್ನ ವಾಕ್ಯ ಮುಗಿಯುವ ಮೊದಲೇ ಅವಳು ಓಡಿ ಹೋದಳು.    

ಊಟ ಮಾಡುವಾಗ ಎಲ್ಲರೂ ಅವರವರ ಮೊಬೈಲಿನಲ್ಲಿ ವ್ಯಸ್ತರಾಗಿದ್ದರು.ಅವರಿಗೆಡಿಸ್ಟರ್ಬ್ಮಾಡಲು ಮನಸ್ಸಾಗದೆ ನಾನು ಮೌನವಾಗಿ ಊಟ ಮಾಡಿ ಎದ್ದೆ. ಎಲ್ಲಾ ದಿನದಂತೇ ಆ ದಿನವೂ ಮುಗಿಯಿತು.

                                                    ****     

“ಆಶಾ, ನಾನು ಕೇಳ್ತಿರೋದು ಸತ್ಯನಾ? ಡಾ! ರಾವ್ ನಿನ್ನ ಆರೋಗ್ಯ ವಿಚಾರಿಸಲು ಫೋನ್ಮಾಡಿದ್ರು. ನಾನು ಆಶ್ಚರ್ಯಪಟ್ಟಿದ್ದಕ್ಕೆ ನನಗೆ ವಿವರಿಸಿ ಹೇಳಿದರು. ನನ್ನಿಂದ ಯಾಕೆ ಇಷ್ಟು ದೊಡ್ಡ ವಿಷಯ ಮುಚ್ಚಿಟ್ಟೆ ಆಶಾ?” ಸುಧಾಕರ್  ಮಾತಾಡುತ್ತಲೇ ಹೋಗುತ್ತಿದ್ದರು.

“ನಿಮ್ಮತ್ರ ಹೇಳಲು ನೀವು ಅವಕಾಶನೇ ಕೊಟ್ಟಿಲ್ಲರೀ” ನಾನು ತಲೆತಗ್ಗಿಸಿದೆ.

“ಕ್ಷಮಿಸು  ಆಶಾ. ಆಫೀಸ್ ಕೆಲಸದಲ್ಲಿ ತುಂಬಾನೇ ಬಿಝಿ ಆಗ್ಬಿಟ್ಟೆ, ನಿನ್ನ ಆರೋಗ್ಯದ ಬಗ್ಗೆ ವಿಚಾರಿಸಲೂ ನನಗೆ ಸಮಯವಿಲ್ಲದಾಯ್ತು. ಕ್ಷಮಿಸು ಆಶಾ.” ಅವರ ಬಿಗಿ ಅಪ್ಪುಗೆ ನನಗೆ ಸಾಂತ್ವನ ನೀಡಿತು.

“ಸಮಯ ಮೀರಿ ಹೋಯ್ತುರೀ. ನಾನು ಇನ್ನು ಕೆಲವೇ ದಿನದ ಅತಿಥಿ. ನಮ್ಮ ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ ಪ್ಲೀಜ್. ನೀವು ಮರು ಮದುವೆಯಾಗುವಿರಿ ಎಂದು ನನಗೆ ಭಾಷೆ ಕೊಡಿ” ನಾನು ಇನ್ನೂ ಬಿಗಿಯಾಗಿ ಅವರನ್ನು ಅಪ್ಪಿಕೊಂಡೆ.

“ಚಿಂತೆ ಮಾಡ್ಬೇಡ ಆಶಾ, ನಾನು ಪ್ರಸಿದ್ದ ಗೈನೆಕೋಲೊಜಿಸ್ಟ್ ಗೆ ನಿನ್ನ ರಿಪೋರ್ಟ್ ತೋರಿಸ್ತೀನಿ. ನಾನಿದ್ದೀನಿ ನೀನು ಹೆದರ ಬೇಡ.” ತುಂಬಾ ವರುಷಗಳ ನಂತರ ಈ ಸಾಂತ್ವನದ ಮಾತು ಕೇಳಿ ನನ್ನ ಹೃದಯ ಉಕ್ಕಿ ಬಂತು.

“ನಾನು ಎಲ್ಲಾ ವಿಚಾರಿಸಿ ಆಗಿದೇರಿ. ಏನೂ ಪ್ರಯೋಜನ ಇಲ್ಲ. ನನಗೆ ಒಂದು ಸಹಾಯ ಮಾಡ್ತೀರಾ. ಕವಿತಾ ಮತ್ತು ಸವಿತಾಳಿಗೆ ಈ ವಿಷಯ ಹೇಳೊ ಧೈರ್ಯ ನನಗಿಲ್ಲ. ನೀವು ಪ್ಲೀಜ್ ಈ ಸುದ್ದಿ ಅವರಿಗೆ ಹೇಳ್ತೀರಾ?” ನನ್ನ ಕಣ್ಣೀರನ್ನು ಅಡಗಿಸಲು ಸುಧಾಕರ್ ನ  ತೋಳುಗಳಲ್ಲಿ ತನ್ನನ್ನೇ ಅಡಗಿಸಿ ಕೊಂಡೆ.

****

ಅಂದು ಭಾನುವಾರವಾದುದರಿಂದ ಎಲ್ಲರೂ ಮನೆಯಲ್ಲೇ ಇದ್ದೆವು. ಬೆಳಗಿನ ಚಹಾ ಫಲಹಾರ ಮುಗಿಸಿದ ನಂತರ ನಾವು ನಾಲ್ಕು ಜನರು ದೇವರ ಕೋಣೆಯಲ್ಲಿ ಕುಳಿತುಕೊಂಡೆವು.

“ಕವಿತಾ, ಸವಿತಾ, ನಾನು ಮತ್ತು ನಿಮ್ಮಮ್ಮ ನಿಮಗೊಂದು ಸುದ್ದಿ ಹೇಳಲು ಬಯಸುತ್ತೇವೆ”

ಸುಧಾಕರ್ ಕವಿತಾ ಮತ್ತು ಸವಿತಾಳ ಕೈ ಹಿಡಿದು ಸಂಭಾಷಣೆ ಮುಂದುವರೆಸಿದರು.

“ಕವಿತಾ, ಸವಿತಾ ನಿಮ್ಮಮ್ಮನಿಗೆ ಕ್ಯಾನ್ಸರ್ ಆಗಿದೆ” ಸುಧಾಕರ್ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು.

ಏನೇಳ್ತಿದ್ದೀರಿ ಅಪ್ಪಾ, ಇದು ನಿಜನಾ ಅಮ್ಮಾ? ಅಂದ್ರೆ ನೀವು ಸಾಯ್ತೀರಾ?” ನನ್ನ ಮುಗ್ಧ ಮಗಳ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರ ಇರಲಿಲ್ಲ. ನಾನು ಕೇವಲ ತಲೆ ಅಲ್ಲಾಡಿಸಿದೆ. ಇಬ್ಬರೂ ನನ್ನ ಬಳಿ ಓಡಿ ಬಂದು ನನ್ನನ್ನು ಬಿಕ್ಕಿಬಿಕ್ಕಿ ಅಳುತ್ತಾ ಅಪ್ಪಿಕೊಂಡರು.

“ಇದು ಅಳುವ ಸಮಯ ಅಲ್ಲ ಮಕ್ಕಳೆ. ಇನ್ನು ನಿಮ್ಮಮ್ಮನೊಂದಿಗೆ ಇರುವ ಈ ಕೆಲವು ದಿನಗಳನ್ನು ನಾವು ಅಮೂಲ್ಯ ದಿನಗಳನ್ನಾಗಿ ಮಾಡಬೇಕು.” ಕಣ್ಣೀರ ಧಾರೆ ಕಣ್ಣಿನಿಂದ ಸುರಿಯುತ್ತಿದ್ದರೂ ಮನಸ್ಸು ಗಟ್ಟಿ ಮಾಡಿ ಮಾತಾಡುತ್ತಿದ್ದರು ಸುಧಾಕರ್.

ಆ ದಿನದಿಂದ ನನಗೆ ಸಿಗುವ ಪ್ರೀತಿ ಹತ್ತುಪಾಲು ಜಾಸ್ತಿಯಾಯ್ತು. ನನ್ನ ಬೆಲೆ ನನ್ನ ಕುಟುಂಬಕ್ಕೆ ಈಗ ತಿಳಿದಿತ್ತು ಆದರೆ ಸಮಯ ಮೀರಿ ಹೋಗಿತ್ತು. ಅವರ ಪ್ರೀತಿಯಿಂದ ವಂಚಿತಗೊಳ್ಳಲು ನನಗಿಷ್ಟವಿರಲಿಲ್ಲ.. ನನ್ನಲ್ಲಿ ಇನ್ನೂ ಬದುಕಬೇಕೆಂಬ ಆಸೆ ಬಲವಾಯ್ತು. ಆದರೆ ಆ ಸೃಷ್ಟಿ ಕರ್ತನ ನಿರ್ಧಾರವನ್ನು ಬದಲಾಯಿಸಲು ಯಾರಿಂದ ಸಾಧ್ಯ?

                                           *****

“ಅಮ್ಮಾ, Happy Mother’s Day. ನೋಡು ನಿನಗಾಗಿ ನಾವು ಬ್ರೇಕ್ಪಾಸ್ಟ್ಮಾಗಿ ಏನು ತಂದಿದ್ದೀವಿ. ಮತ್ತು ಇದು ನಾನೆ ರಚಿಸಿದ ಕಾರ್ಡ್ಅಮ್ಮಾ. ಇವತ್ತು ನಿನ್ನ ದಿನ. ಇಡೀ ದಿನ ಆರಾಮ ಮಾಡಮ್ಮ. ನಾವು ನಿನಗೆ ತೊಂದರೆ ಮಾಡುವುದಿಲ್ಲ.” ಇಬ್ಬರೂ ನನ್ನನ್ನು ಅಪ್ಪಿಕೊಂಡು ನನ್ನ ಕೆನ್ನೆಗೆ ಮುತ್ತಿಕ್ಕಿ ಜಾಗ ಖಾಲಿಮಾಡಿದರು.

ಅವರು ತಂದ ಫಲಹಾರವನ್ನು ಬದಿಯಲ್ಲಿರಿಸಿ ನಾನು ಕಾರ್ಡ್ ಓದಲು ಆರಂಭಿಸಿದೆ.

“ನಮ್ಮ ಪ್ರೀತಿಯ ಅಮ್ಮಾ, ಅಮ್ಮನ ದಿನದ ಶುಭಾಶಯಗಳು. ಈ ಅಮ್ಮನದಿನ ನಮ್ಮ ಜೀವನದ ಕೊನೆಯ ಅಮ್ಮನ ದಿನವಾಗದಿದ್ದರೆ ಎಷ್ಟು  ಚೆನ್ನಾಗಿತ್ತು. ನಾವು ಯಾವತ್ತೂ ನಿನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. ನಿನ್ನನ್ನು ಮನೆ ಕೆಲಸದವಳಾಗಿ ನೋಡಿದೆವು. ಬಹುಶಃ ಅದರ ಕಾರಣ ದೇವರು ನಿನ್ನನ್ನು ನಮ್ಮಿಂದ ದೂರ ಒಯ್ಯುತ್ತಿದ್ದಾರೆ. ನಮ್ಮನ್ನು  ಕ್ಷಮಿಸಿ ಅಮ್ಮಾ.ಮರುಜನ್ಮವೆಂದ್ದಿದ್ದರೆ ನಾವು ಪುನಃ ನಿನ್ನ ಹೊಟ್ಟೆಯಲ್ಲೇ ಹುಟ್ಟಿ ಬರುವೆವು.

ನಿನ್ನ ಪ್ರೀತಿಯ ತಬ್ಬಲಿಗಳು

ಕವಿತಾ ಮತ್ತು ಸವಿತಾ”

ಓದಿ ನಾನು ಬಿಕ್ಕಿಬಿಕ್ಕಿ ಅತ್ತೆ. ಯಾಕೆ ದೇವರೆ ನನಗೆ ಈ ಶಿಕ್ಷೆ. ನನ್ನ ಮುದ್ದಾದ ಇಬ್ಬರು ಮಕ್ಕಳನ್ನ ಹೇಗೆ ಬಿಟ್ಟು ನಿನ್ನ ಬಳಿ ಬರಲಿ? ಅತ್ತು ಅತ್ತು ನನ್ನ ತಲೆದಿಂಬು ಒದ್ದೆಯಾಗಿತ್ತು. ಅಷ್ಟರಲ್ಲಿ ಡಾ! ರಾವ್ ಅವರ ಫೋನ್ಬಂತು.

“ಆಶಾ, ಡಾ! ರಾವ್   ಮಾತಾಡ್ತಾ ಇದ್ದೀನಿ. ನಿನಗೊಂದು ಸಂತೊಷದ ಸುದ್ದಿ. ನಿನಗೆ ಕ್ಯಾನ್ಸರ್  ಇಲ್ಲಾ. ನಿಮ್ಮ ಹೆಸರಿನ ಇನ್ನೊಂದು ರೋಗಿಯ ರಿಪೋರ್ಟ್ ನಮ್ಮ ಲ್ಯಾಬ್ನಲ್ಲಿ ಅದಲಿಬದಲಿಯಾಗಿತ್ತು. ನಮ್ಮನ್ನು ಕ್ಷಮಿಸಿ.. ಇದು ಸಾಧಾರಣದ ತಪ್ಪಲ್ಲ. ನಿಮಗೇನಾದರು ಇದರ ಬಗ್ಗೆ ಮಾತಾಡ್ಲಿಕ್ಕಿದ್ರೆ ಬಂದು ಮಾತಾಡಬಹುದು.ನ ನಗೆ ವಿಷಯ

ಅರಿವಾದ ಕೂಡಲೇ ನಿಮಗೆ ಫ್ಹೋನ್ಮಾಡಿದೆ.ನಮ್ಮೆಲ್ಲರಪರವಾಗಿ ನಿಮ್ಮ ಹತ್ರ ಪುನಃ ಕ್ಷಮೆ ಕೇಳುತ್ತೇವೆ.”

ನಾನು ಕೇಳ್ತಿರೋದು ನಿಜ ಎಂದು ನಂಬಲು ನನಗೆ ಸಾದ್ಯವಾಗಲಿಲ್ಲ.

“ನನ್ನ ಜೀವನದ ಅತೀ ಉತ್ತಮ ಸಂತೋಷದ ಸುದ್ದಿ ನೀಡಿದ್ದಕ್ಕೆ ಧನ್ಯವಾದಗಳು ಡಾಕ್ಟರ್. ತಪ್ಪು ಎಲ್ಲರಿಂದಲೂ ಆಗ್ತದೆ. ನನಗೆ ಪುನರ್ಜನ್ಮ ನೀಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಇನ್ನೊಂದು ಪೇಶಂಟ್ ಹುಶಾರಾಗ್ಲಿ ಎಂದು ಪ್ರಾರ್ಥಿಸುತ್ತೇನೆ”

ನನ್ನ ಹೃದಯ  ಸಂತೋಷದಿಂದ ಕುಣಿಯುತಿತ್ತು.

“ಇಲ್ಲಮ್ಮಾ ಆ ಆಶಾ ಇನ್ನಿಲ್ಲ. ಇವತ್ತು ಬೆಳಿಗ್ಗೆ ಅವರು ಮೃತಪಟ್ಟರು . ಹಾಗಾಗಿ ನಮಗೆ ಗೊತ್ತಾಯ್ತು ರಿಪೋರ್ಟ್ ಅದಲಿಬದಲಿಯಾಗಿದೆಎಂದು.” ಡಾ! ರಾವ್  ಪಶ್ಚಾತ್ತಾಪದ ದನಿಯಿಂದ ಮಾತಾಡಿದರು.

ಡಾ! ರಾವ್ ಹತ್ರ ಮಾತಾಡಿ ಮುಗಿದ ನಂತರ ನಾನು ಜಿಂಕೆಯ ಹಾಗೆ ಜಿಗಿದು ಸುಧಾಕರ   ಮತ್ತು ಮಕ್ಕಳ   ಹತ್ರ ಓಡಿದೆ.

“ನಿಮಗೆಲ್ಲರಿಗೂ ಒಂದು ಸಂತೋಷದ ಸುದ್ದಿ ಇದೆ”

ನನ್ನ ಸಂತೋಷ ನನ್ನ ಮುಖದಲ್ಲಿ ಪ್ರಜ್ವಲಿಸುತಿತ್ತು.

“ಅಮ್ಮಾ, ನೀನು ಸಾಯುವುದಿಲ್ಲ ಎಂಬ ಒಂದು ಸುದ್ದಿ ಬಿಟ್ಟರೆ ನಮಗೆ ಬೇರೆ ಯಾವ ಸುದ್ದಿಯೂ ಸಂತೋಷದ್ದಲ್ಲ.” ಕವಿತಾ ಮುಖ ಬಾಡಿಸಿಕೊಂಡಳು.

“ಹೌದು ನಾನು ಸಾಯುವುದಿಲ್ಲ ನನಗೆ ಕ್ಯಾನ್ಸರ್ ಇಲ್ಲ “

“ಏನು? ಇದು ನಿಜನಾ?”ಕವಿತಾ, ಸವಿತಾ ಸುಧಾಕರ್ ನನ್ನ ಹತ್ತಿರ ಓಡಿಬಂದು ನನ್ನನ್ನು ಅಪ್ಪಿಕೊಂಡರು.

“ಮತ್ತೆ ಆ ಡಾ! ರಾವ್  ಹೇಳಿದ್ದು ಸುಳ್ಳಾ? ನಾನು ಅವರನ್ನು ಬಿಡುವುದಿಲ್ಲ” ಸುಧಾಕರ್ ಕೋಪದಿಂದ ಮಾತಾಡುತ್ತಿದ್ದರು.

“ನಾನು ಹೋಗುತ್ತಿದ್ದ ಕ್ಲಿನಿಕ್ನಲ್ಲಿ ನನ್ನ ಹೆಸರಿನ ಇನ್ನೊಂದು ರೋಗಿ ಇದ್ದರು. ಲ್ಯಾಬ್ನಲ್ಲಿ ರಿಪೋರ್ಟ್ ಅದಲಿಬದಲಿಯಾಗಿತ್ತು. ಅದೆಲ್ಲಾ ಈಗ ಮುಖ್ಯವಲ್ಲ. ನನಗೆ ಪುನರ್ಜನ್ಮ ದೊರಕಿದೆ ಮತ್ತು ನನ್ನ ಕುಟುಂಬದವರಿಗೆ ನನ್ನ ಮೌಲ್ಯ ಗೊತ್ತಾಗಿದೆ. ನನಗಷ್ಟೇ ಸಾಕು” ನನ್ನ ಮಾತುಗಳಿಂದ ಸುಧಾಕರ್ಗೆ ಅವರ ತಪ್ಪಿನ ಅರಿವಾಯ್ತು ಅವರು ತನ್ನ ದೃಷ್ಟಿ ತಗ್ಗಿಸಿಕೊಂಡರು.

“ಹೌದು. ದೇವರು ನಿನ್ನನ್ನು ನಮ್ಮ ಪಾಲಿಗೆ ಬಿಟ್ಟುಕೊಟ್ಟಿದ್ದಾರೆ. ಇದಕ್ಕಿಂತ ಸಂತೋಷದ ವಿಷಯ ಬೇರೆ ಇಲ್ಲ.” ನನ್ನನ್ನು ಪುನ್ಹ ಅಪ್ಪಿಕೊಂಡರು ಸುಧಾಕರ್.

“ನಿಮಗೆ ಕೊಟ್ಟ ಭಾಷೆ ಹಿಂತೆಗೆದುಕೊಳ್ಳುತ್ತೇನೆ. ನೀವು ಇನ್ನು ಮರುಮದುವೆಯಾಗೋ ಯೋಚನೆ ಬಿಟ್ಟುಬಿಡಿ” ನಾನು ತುಂಟಾಟದ ನಗು ನಕ್ಕುಬಿಟ್ಟೆ.

“ಓ!!?” ಸುಧಾಕರ್  ಮುಗುಳ್ನಕ್ಕರು.

“ಆಪ್ಪಾ? ಬೇರೆ ಮದುವೆ ಬಗ್ಗೆ ಕನಸು ಕೂಡಾ ಕಾಣ್ಬೇಡ” ಕೋಪದಿಂದ ನುಡಿದಳು ಕವಿತಾ.

“ಇಲ್ಲಮ್ಮಾ ನಿಮ್ಮ ಅಮ್ಮನಂಥ ಮುತ್ತು ನನ್ನ ಜೀವನದಲ್ಲಿರುವಾಗ ಬೇರೆ ಹುಡುಗಿ ಬಗ್ಗೆ ಯೋಚಿಸುವುದೂ ದೊಡ್ಡ ಪಾಪ. ಆ ದೇವರು ನಿಮ್ಮಮ್ಮನನ್ನು ನಮ್ಮ ಪಾಲಿಗೆ ಬಿಟ್ಟುಕೊಟ್ಟು ಅವಳ ಮೌಲ್ಯ ತೋರಿಸಿಕೊಟ್ಟಿದ್ದಾರೆ ಅವಳು ನಮಗಾಗಿ ಅವಳ ಜೀವವನ್ನೇ ಮುಡಿಪಾಗಿಟ್ಟಳು. ಈಗ ನಮ್ಮ ಬಾರಿ. ನಮ್ಮ ಈ ಪ್ರೀತಿಯ ಕುಟುಂಬದ ಮೇಲೆ ಯಾರ ಕೆಟ್ಟ ದೃಷ್ಟಿ   ಬೀಳದಿರಲಿ ದೇವರೇ” ಸುಧಾಕರ್  ನಮ್ಮೆಲ್ಲರನ್ನು ತನ್ನ ಬಿಗಿಯಪ್ಪುಗೆಯಲ್ಲ ಅಡಗಿಸಿದರು.

***************

22 thoughts on “ಪುನರ್ಜನ್ಮ

  1. ಸ್ವಂತ ಸಾವಿಗೆ ತಯಾರಿ ನಡೆಸುವುದು ಬಹು ಕಷ್ಟ. ಕಾನ್ಸರ್ ಡಯಾ ಗ್ನೋಸಿಸ್ ಹೊಂದಿದ ಬಳಿಕ ರೋಗ ಪಿಡಿತರಲ್ಲಿ ಇಂತಹ ದುಃಖ ಮಯ ಸಂದಿಗ್ದ ಉದ್ಭವಿಸುತ್ತದೆ. ಅಂತವರಿಗೆ ಅವರ ಸಾವು ಕ್ಯಾನ್ಸಲ್ ಎಂದು ತಿಳಿಸಿದಾಗ, ಇನ್ನೂ ಬದುಕುವುದು ಇದೆ ಎಂದಾಗ ವ್ಯಕ್ತಿಯಲ್ಲೂ ಅವರ ಪ್ರೀತಿ ಪಾತ್ರರಲ್ಲೂ ಉಂಟಾಗುವ ಭಾವನೆಗಳನ್ನು ಬಿಂಬಿಸುವ ಕಥೆಯಿದು. ಭಗಿನಿ ಮೋನಿಕಾ ಇಂತಹ ಸೂಕ್ಷ್ಮತೆಯನ್ನು ಅದ್ಬುತವಾಗಿ ಚಿತ್ರಿಸಿದ್ದಾರೆ. ಇಂತಹ ಅನೇಕ ಕಥೆಗಳನ್ನು ಕೊಂಕಣಿಯಲ್ಲಿ ಅವರು ಬರೆದಿದ್ದಾರೆ. ಅವರನ್ನು ಸಣ್ಣ ಕಥೆಗಳ ರಾಣಿ ಎನ್ನಬೇಕು

    ಜಿ ಜಿ ಲಕ್ಷ್ಮಣ ಪ್ರಭು

  2. Nice story Monica. Really punarjanma to a patient after hearing her report. Expect more stories dear.

  3. Heartfelt writing monica in a simplistic manner. You could have depicted a true cancer patient Kavita cured of all physical and emotional agony instead of mislabeled reports. Would have been inspirational for all ailing patients.
    My anisike good job

  4. ಸುಂದರವಾಗಿ ಹೆಣೆದ ಭಾವುಕ ಕ್ಷಣಗಳು. ಅಭಿನಂದನೆಗಳು ಮೋನಿಕಾ. ಇಂತಹ ಹಲವು ಕತೆಗಳು ನಿಮ್ಮಿಂದ ಓದುವಂತಾಗಲಿ.

    1. ನಿಮ್ಮ ಬರಹಗಳಿಂದ ಪ್ರೇರಿತವಾಗಿ ಮೂಡಿದೆ ಈ ಕಥೆ ಶೀಲಕ್ಕ. ನಿಮಗೆ ಧನ್ಯವಾದಗಳು.

  5. After a long time I made an attempt to read ” Real lifetime situations/happenings” at one go & that too in a situation like the one mentioned, the close-family surroundings makes its more frightening( interesting)… Nevertheless well written in a very simplistic manner.
    Well done dear Monica Mathias!

  6. ತುಂಬಾ ಸೊಗಸಾದ ಕತೆ.. ಓದುತ್ತಾ ಓದುತ್ತಾ ನಾನೂ ಬಾವುಕನಾಗಿ, ಆಶಾರವರ ಕ್ಯಾನ್ಸರ್ ಗುಣವಾಗಲಿ ದೇವರೇ, ಮುಂದಿನ ಸಾಲುಗಳಲ್ಲಿ ಸಂತಸದ ಸುಧ್ಧಿ ಓದುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದೆ.
    ಇಂತಹ ಇನ್ನೂ ಒಳ್ಳೊಳ್ಳೆಯ ಕತೆಗಳು ನಿಮ್ಮ ಲೇಖನಿಯಿಂದ ಮೂಡಿಬರಲಿ ಎಂದು ಹಾರೈಸುತ್ತೇನೆ

    1. ನಿಮ್ಮ ಮನ ಮುಟ್ಟುವ ಮಾತುಗಳಿಗೆ ಧನ್ಯವಾದಗಳು ಕ್ಲೈವ್.

  7. Really great Monica sister. As a nurse your doing great inspire of your busy schedule. Really heart touching story.

  8. Well written Monica. Beautiful story. Looking forward for more kannada short stories from you .God bless

Leave a Reply

Back To Top