ಪಾಸಿಟಿವ್ ಆಗಿರೋಣ

ಲೇಖನ

ಪಾಸಿಟಿವ್ ಬಂದಾಗ

ಪಾಸಿಟಿವ್ ಆಗಿರೋಣ

ಶೋಭಾ ಹಿರೇಕೈ.ಕಂಡ್ರಾಜಿ

Hands, Fingers, Positive, Bracelets

ಕೊರೋನಾ ಕಥೆ ೧, ೨ ,೩. ,೪… ಅಂತ ಡೈರಿ ಪುಟ ತುಂಬಿಸಿಟ್ಟವಳಿಗೆ, ಮುಂದಿನ ಕಥೆ ಅನ್ನುವಷ್ಟರಲ್ಲಿ ಕೊರೊನಾ ಹೋಗಿ ನನ್ನ ತವರಿನ  ಬಾಗಿಲ ಬಡಿದು ಹೊಸ್ತಿಲ ದಾಟಿಯೇ ಬಿಡುತ್ತದೆ ಅಂದು ಕೊಂಡಿರಲಿಲ್ಲ.   ನನಗೆ ಹೋಗಲಾಗದ ಅಸಹಾಯಕತೆ.  ಫೋನಿನಲ್ಲೇ.. ಆ ಕಷಾಯ, ಈ ಕಷಾಯ,  ಆ ಸೊಪ್ಪು, ಎಲೆ,   ಬೇರು,ಬೀಜ  , ಬಿಸಿ ಬಿಸಿ ನೀರು, ನಿಗಿ ನಿಗಿ ಉಗಿ ಹೀಗೇ.. ಗೊತ್ತಿರುವ ಎಲ್ಲಾ ಮನೆ ಮದ್ದುಗಳನ್ನೆಲ್ಲ ಹೇಳುವುದೇ ಆಯಿತು. ಎಂಟು   ದಿನದೊಳಗೆ ಗಟ್ಟಿ ಇರುವ ಎಲ್ಲರೂ ಗಟ್ಟಿಯಾಗಿ, ಅಪ್ಪನನ್ನು ಮಾತ್ರ ಆಸ್ಪತ್ರೆಗೆ  ಸೇರಿಸುವ  ಅನಿವಾರ್ಯತೆ   ಬಂದೇ ಬಿಟ್ಟಿತು.  ಬೇರೆ ಕಾರಣಕ್ಕೆ  ಆಸ್ಪತ್ರೆ  ಸೇರಿಸುವದಾದರೆ ರೋಗಿಯ ಜೊತೆಗೇ ಒಬ್ಬರು, ಇನ್ನು ಆಸ್ಪತ್ರೆಯ  ಹೊರಗಿನ ಕಟ್ಟೆ ಮೇಲೆ  ಧೈರ್ಯಕ್ಕೆ ಇನ್ನಿಬ್ಬರು   ಹೋಗಲೇ ಬೇಕಿತ್ತು. ಈಗ ಕೊರೊನಾ  ಕಾರಣ!   ರೋಗಿಯ ಜೊತೆ ಹೋಗುವುದಿರಲಿ , ಮುಟ್ಟುವಂತಿಲ್ಲ, ಮಾತಾಡುವಂತಿಲ್ಲ,ನೋಡುವಂತೆಯೂ ಇಲ್ಲ.  ಈ ನಿರ್ಬಂಧಕ್ಕೆ  ರೋಗಿಯ ಜೊತೆ ಮನೆಯವರು, ಬಂಧುಗಳೆಲ್ಲ  ಕಂಗಾಲಾಗುವುದೇ ಆದರೂ..  ರೋಗ ಎದುರಿಸಲು ಇದು ಅನಿವಾರ್ಯ  ಕೂಡಾ.  ಅಪ್ಪನನ್ನೂ ಈ ಅನಿವಾರ್ಯತೆಗೆ  ಒಗ್ಗಿಸಲು ಮನೆ ಮಂದಿಯೆಲ್ಲ ಒಂದಿಡೀ ದಿನ ತೆಗೆದುಕೊಂಡರು.”ಅಲ್ಲಿ ಒಬ್ಬರೇ ಇರಬೇಕು ಮನೆಯವರು ಇರಲ್ಲ,, ಫೋನ್ ರಿಸೀವ್ ಮಾಡಬೇಕು, ಔಷಧಿ ಸರಿಯಾಗಿ ತಗೋಬೇಕು,  ಏನೇ ಬೇಕಾದರೂ ಸಿಸ್ಟರ್ ಕಡೆ ಹೇಳಬೇಕು.  ಆರೋಗ್ಯದ ಏರು ಪೇರನ್ನು ತಕ್ಷಣ ಹೇಳಬೇಕು.  ಡಾಕ್ಟರ್ಸ್, ನರ್ಸಗಳ  ಡ್ರೆಸ್ ನೋಡಿ ಹೆದರ ಬಾರದು, ಊಟ ತಿಂಡಿ ಸರಿ ಮಾಡಿ  ಧೈರ್ಯವಾಗಿ ಇರಬೇಕು, “ಹೀಗೇ..  ಮೊದಲ ಬಾರಿಗೆ ಮನೆ ಬಿಟ್ಟು ಅಳುತ್ತಾ ಹಾಸ್ಟೆಲ್ ಗೆ ಹೊರಟ  ಮಕ್ಕಳಿಗೆ  ಬುದ್ಧಿ ಹೇಳುವಂತೆ ಹೇಳಿದ್ದರು.  ಮಾತಾಡಲೂ ಆಗದ ಅಪ್ಪ ಹುಂ  ಹುಂ ಅನ್ನುತ್ತಿದ್ದ ಎನ್ನುವುದನ್ನು  ಇಲ್ಲಿ ಕೇಳಿಸಿಕೊಂಡ ನಾವು, ಮತ್ತೆ ಅಲ್ಲಿ  ಅಪ್ಪನನ್ನು ಆಸ್ಪತ್ರೆಗೆ  ಕಳಿಸಲು ತಯಾರಾಗುತಿದ್ದ ಮನೆ ಮಂದಿಯೆಲ್ಲ  ಅತ್ತೇ ಬಿಟ್ಟಿದ್ದರು. ಇನ್ನು  ಆಸ್ಪತ್ರೆ  ಸೇರಿದ ಮೇಲೆ ಅಲ್ಲಿಯ ಪರಿಸ್ಥಿತಿ    ನಮಗೇನೂ ಗೊತ್ತಾಗುತ್ತಲೇ ಇರಲಿಲ್ಲ, ವೈದ್ಯರು ಗಳನ್ನು ಕೇಳದ ಹೊರತು.  ಅಪರೂಪಕ್ಕೊಮ್ಮೆ ಅಪ್ಪ ಕಾಲ್ ರಿಸೀವ್ ಮಾಡಿದರೂ ಅವನು ಎಲ್ಲಿದ್ದಾನೆಂಬುದನ್ಬು ಮರೆತಂತೆ ಮಾತಾಡಿ ನಮ್ಮ  ಕೈಕಾಲು ಬಿಡಿಸಿ ಬಿಡುತಿದ್ದ. ಮಾನಸಿಕ ವಾಗಿ ಅಪ್ಪ ಕುಗ್ಗುತಿದ್ದಾನೆ ಎಂಬ ಚಿಂತೆ ಎಲ್ಲರನ್ನೂ ಕಾಡ ತೊಡಗಿತು. “ವೈಧ್ಯರುಗಳ ಅತ್ಯುತ್ತಮ ಸೇವೆ, ತಾತ ಎಂದು ಕರೆಯುವ ದಾದಿಯರ ಆರೈಕೆ ,  ಉತ್ತಮ ಊಟ, ಔಷಧೋಪಚಾರ ಇದ್ದರೂ ಅಪ್ಪ   ಸುಧಾರಿಸುವ ಲಕ್ಷಣ ಕಾಣುವುದಿಲ್ಲ,, ತಾನೂ ಕೂಡಾ ಅಣ್ಣ  ಗುಣಮುಖನಾಗದೆ  ಬರುವುದಿಲ್ಲ”  ಎಂದು ಅದೇ ವಾರ್ಡನಲ್ಲಿ  ಚಿಕಿತ್ಸೆ ಪಡೆದು ಡಿಸ್ಚಾರ್ಜ ಆದರೂ.. ಮನೆಗೆ ಬರಲೊಪ್ಪದ  ಚಿಕ್ಕಪ್ಪ ಹೇಳಿದಾಗ  ವಾಸ್ತವ  ಕಣ್ಣಿಗೆ ಕಟ್ಟಿತ್ತು.  ವೈಧ್ಯರು ಕೂಡಾ  “ಮತ್ತೇನೂ  ಸಮಸ್ಯೆ ಇಲ್ಲ.  ಮನೆಗೆ ಕರೆದುಕೊಂಡು ಹೋಗಿ ಪ್ರೀತಿಯ ಆರೈಕೆಯ ಅವಶ್ಯಕತೆ ಇದೆ “ಅಂದಾಗ..  ಆ ಮಾತಿಗೇ.. ಕಾದಿದ್ದವರಂತೆ ಅಂದೇ ಅಪ್ಪನನ್ಬು ಮನೆಗೆ ಕರೆ ತರಲಾಯಿತು. 

ಮನೆಯ ವಾತಾವರಣಕ್ಕೇ ಅಪ್ಪ  ಈಗ ಈಗ ಚೇತರಿಸಿಕೊಳ್ಳುತ್ತಿದ್ದಾನೆ. ಸಕಾಲದಲ್ಲಿ ಸಿಕ್ಕ ಸೂಕ್ತ ಚಿಕಿತ್ಸೆ ಕೂಡಾ ಇದಕ್ಕೆ ಕಾರಣವಾಗಿದೆ.

   ಅಪ್ಪ ಮಾನಸಿಕವಾಗಿ ಗಟ್ಟಿಯಾಗಿ ಇರುವುದು ಅವನ ಮಾತಿನಿಂದ ಗೊತ್ತಾಗುತ್ತದೆ. ತಿಂಡಿ ಊಟ ಸರಿಯಾಗಿ ಮಾಡುತ್ತಾನೆ. ಕೊಟ್ಟಿಗೆಯವರೆಗೂ ನಡೆದುಕೊಂಡು ಹೋಗುತ್ತಾನೆ. ಮನೆಯ ಒಳಗೆಲ್ಲ ಓಡಾಡು ಅಂದರೆ  “ಸಣ್ಣ ಮಕ್ಕಳೆಲ್ಲ ಇದ್ದಾರಲ್ಲ “ಎಂಬ ಮುಂಜಾಗ್ರತೆಯಿಂದಲೂ ಮಾತಾಡುತ್ತಾನೆ. ಅದೇ ಹೊತ್ತಿಗೆ.. ”   ನನ್ನ ಪಕ್ಕದ  ಬೆಡ್ ನವರನ್ನು ಎಲ್ಲಿಗೆ ಒಯ್ದರು ಮಗಾ”  ಎಂದು ಕೇಳುತ್ತಾ  ಕೋವಿಡ್ ವಾರ್ಡನ್ನು ನೆನಪಿಸಿ ಕೊಳ್ಳುತ್ತಾನೆ.

ನನ್ನಪ್ಪನಂತೆ  ವಯಸ್ಸಾದ   ಅದೆಷ್ಟೋ ಅಪ್ಪಂದಿರು ಅವ್ವಂದಿರು ಕೋವಿಡ್ ವಾರ್ಡ್ ಸೇರುತ್ತಿದ್ದಾರೆ.ಕೊರೊನಾ ಪಾಸಿಟಿವ್ ಬಂದಾಗ  ಪಾಸಿಟಿವ್ ಚಿಂತನೆಗಳು ಬೇಕು ಎಂದು ಕೊಳ್ಳುವ ಮತ್ತದನ್ನೆಲ್ಲ ಅರಗಿಸಿಕೊಳ್ಳುವ  ವಯಸಲ್ಲ ಅದು. ಮೊಮ್ಮಕ್ಕಳ  ಬೆಚ್ಚುಗೆಯ ಅಪ್ಪುಗೆಯನ್ನು ಅನುಭವಿಸುತ್ತಲೋ.. ಕೊಟ್ಟಿಗೆಯ ಕರುಗಳ ಕೊರಳ್ಗಂಟೆಗಳ   ಕೇಳುತ್ತಲೋ.. ಗದ್ದೆಯ ತೆನೆಗಳ, ತೋಟದ ಗೊನೆಗಳ ನೋಡುತ್ತಲೋ.. ಕಾಲ ಕಳೆವ ಹಿರಿ ಜೀವಗಳಿಗೆ ಈ ರೋಗ  ಬಂದರೆ  ರೋಗಕ್ಕಿಂತ  ಆಸ್ಪತ್ರೆಗೆ  ಹೆದರಿ, ಮಾನಸಿಕ ಸ್ಥೈರ್ಯ  ಕಳೆದುಕೊಳ್ಳುವದಂತೂ ಸತ್ಯ. ಈ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿ ಗಳು ಮತ್ತು ಮನೆ ಮಂದಿಯೆಲ್ಕ ಹಿರಿಯರನ್ನು ಅತೀ ಕಿರಿಯ ಮಕ್ಕಳಂತೆ ನೋಡಿಕೊಳ್ಳುವುದು  ಕೂಡಾ ಅಷ್ಟೇ ಮುಖ್ಯ. ಹಿರಿಯರಾಗಲಿ, ಕಿರಿಯರಾಗಲಿ   ‘ಪಾಸಿಟಿವ್ ‘ಬಂದಾಗ  ಪಾಸಿಟಿವ್ ಆಗಿರುವುದು ಇನ್ನೂ ಮುಖ್ಯ.

*****

3 thoughts on “ಪಾಸಿಟಿವ್ ಆಗಿರೋಣ

  1. ತುಂಬಾ ಅಪ್ತ ಬರಹ. ಕೋವಿಡ್ ಕಾಲದ ಸಂಕಟದ ದಿನಗಳಲ್ಲಿ ಬದುಕು ಇನ್ನೂ ಇದೆ ಎಂಬುದರ ಆಶಾವಾದದಂತಿದೆ ಬರಹ .. ಮನಸ್ಸಿನ ಬೇಗುದಿಯ ಹೇಳುಕ ಈ ಕಥಾನಕ, ಕತೆಯೊಂದನ್ನು ಸಹೃದಯರ ಮುಂದಿಟ್ಟಂತೆ ಇದೆ…

  2. ಮನಮುಟ್ಟುವಂತಹ ಬರಹ. ಅಪ್ಪ ಬೇಗ ಚೇತರಿಸಿದು ಸಮಧಾನವಾಯ್ತು

  3. B positive. ತುಂಬಾ ಆಪ್ತವಾಗಿದೆ. ನೈಜತೆಯ ಸಂಕಷ್ಟ ಕಣ್ಮುಂದೆ. ಅಭಿನಂದನೆಗಳು. ಸಾಗಲಿ ಹೀಗೆ ಬರವಣಿಗೆ ಸಹೋದರಿ.

Leave a Reply

Back To Top