ವಾರದ ಕವಿತೆ
ಆದರೂ ನಾವು ಮರವಾಗಿದ್ದೇವೆ
ಸ್ಮಿತಾ ಅಮೃತರಾಜ್.
ತುಸು ತುಸುವೇ ನೀರುಣಿಸಿ
ಬಿಸಿಲ ಕೋಲು ಹಾಯಿಸಿ
ಆರದಂತೆ ತೇವ ಇಟ್ಟು ಮಡಿಲ ಶಾಖ ಕೊಟ್ಟು
ಜತನದಲಿ ಕಣ್ಣಲ್ಲಿ ಕಣ್ಣಿಟ್ಟು
ಕಾಲ ಕಾಲಕ್ಕೆ ಹದವರಿತು ಉಣಿಸಿದ್ದಕ್ಕೆ
ಕುಡಿಯೊಡೆದಿತ್ತು ಮೊಳಕೆ ಕಣ್ಣು
ಅಷ್ಟ ದಿಕ್ಕಿಗೂ ಚಾಚಿ ನಿರುಕು ನೋಟ
ಕುಡಿ ನೆಗೆದು ಕೊಡಿಗೇರುವ ಆಟ.
ಅಂಕೆ ಇಲ್ಲ ಶಂಕೆ ಇಲ್ಲ
ಎಳೆ ಕಾಂಡ ತೆಳು ತೊಗಟೆ
ಹರವಿಕೊಂಡಷ್ಟು ಹಬ್ಬುತ್ತಿದೆ
ಗಿಡಗಂಟಿ ಎಲೆ.
ಅಲೆಲೆ! ಕುಲುಕುಲು ನಗುವ ಸದ್ದು
ಬಯಲ ಬೇಲಿ ದಾಟಿಯೂ ಸರಿದು ಹೋಗುತ್ತಿದೆ
ಅಲೆ ಅಲೆ.
ಇನ್ನೇನು ಆಳಕ್ಕೆ ಬೇರನೂರಿ
ಭದ್ರವಾಗಿ ಬಿಡಬೇಕು
ಎದೆಯಾಳದ ಮೂಕ ದನಿಗಳಿಗೆಲ್ಲಾ
ರಾಗ ಕಟ್ಟಿ ಹಾಡಾಗಿಸಬೇಕು.
ಪಕ್ಕನೆ! ಬುಡದಿಂದ ಕಿತ್ತದಷ್ಟೇ ಗೊತ್ತು
ಅಬ್ಭಾ! ಅದೆಂಥಾ ಯಾತನೆ
ಶೃಂಗಾರಗೊಂಡ ಕುಂಡದಲ್ಲಿಟ್ಟು
ಹಸ್ತಾಂತರಿಸುವ ಹೊತ್ತು.
ಹೊಸ ಅಂಕಕ್ಕೆ ಕಕ್ಕಾಬಿಕ್ಕಿಯಾಗುತ್ತಲೇ
ಸಜ್ಜಾಗುವಾಗ ನುಗ್ಗಿ ನುಗ್ಗಿ ಒತ್ತರಿಸಿ ಬರುವ ಅಳು
ಜೊತೆ ಜೊತೆಗೆ ನನ್ನವರೆಲ್ಲರೂ ಬಿಕ್ಕಿ ಬಿಕ್ಕಿ
ಅತ್ತಂತೆ ಕೇಳಿಸಿದ್ದು ಯಾಕೋ ಅರ್ಥವಾಗಲೇ ಇಲ್ಲ
ಈವರೆಗೂ..ದೇವರಾಣೆಗೂ.
ಬಾಜ ಬಜಂತ್ರಿಯೊಂದಿಗೆ
ಹೊಸ ಬಯಲಿನೆಡೆಗೆ ಕನಸಿನ ಮೆರವಣಿಗೆ
ಆಹಾ! ಆ ಹಸಿ ಮಣ್ಣ ತಂಪು ಬೇರು ಸೋಕುವಷ್ಟರಲ್ಲಿ
ಪುಳಕವೆದ್ದು ಮತ್ತೊಮ್ಮೆ ಖುಷಿ ಮೇರೆ ಮೀರಿ..
ಇನ್ನೇನು ನಾನು ಬೇರಿಳಿಸಲಿದ್ದೇನೆ
ನಾನೂ ಮರವಾಗಲಿದ್ದೇನೆ.
ದೊರಗು ದೊರಗು ಮಣ್ಣು
ಆಲಸ್ಯದ ಬಯಲು ನಿಡುಸುಯ್ಯುವ ಗಾಳಿ
ಆಳ ಆಳಕ್ಕೆ ಸಾವರಿಸಿ ತೆವಳಿ
ಮೃದು ಮಣ್ಣ ಕಚ್ಚಿ ಹಿಡಿದು ಗಟ್ಟಿಯಾಗಿ
ಬೇರಿಳಿಸಬೇಕೆನ್ನುವಷ್ಟರಲ್ಲಿ..
ಮತ್ತೊಮ್ಮೆ ಕತ್ತು ಕುಲುಕಿಸಿ ನೆಟ್ಟಲ್ಲೇ ಅಲುಗಾಡಿಸಿ
ಕಿತ್ತಿಟ್ಟ ನೋವು
ಪದೇ ಪದೇ ಪುನರಾವರ್ತನೆಯ ಗೋಳು.
ಒಳ ಹಂಬಲ ಉಕ್ಕೇರಿ ಛಲ ಮೀರಿ
ಮೇಲ್ಪದರದಲ್ಲೇ ಬೇರ ಹರವಿ
ಕಣ್ಣ ಕಾವಲಿನ ಸುಪರ್ಧಿಯೊಳಗೇ
ಟೊಂಗೆಗಳೊಡೆದು ಟಿಸಿಲು ಚಾಚಿ
ಸೂರ್ಯನನ್ನೇ ಮರೆಮಾಚಿ
ಸುಡು ಸುಡು ಬಿಸಿಲನ್ನ ಉಂಡಷ್ಟೂ
ತಂಪು ತಂಪು ನೆಳಲ ಹಾಸು.
ತೊನೆಯುವ ಹಣ್ಣಿಗೆ ಹಕ್ಕಿಗಳು ಕೊಕ್ಕಿಳಿಸಿ
ಪುತಕ್ಕನೆ ಉದುರಿಸಿದ ಹಿಕ್ಕೆಯಲ್ಲೂ ಸಾರ ಹೀರಿ ಏರಿ
ಗುಣಗಾನ ಬಿರುದು ಬಾವಲಿಗಳ ಪದಕ
ಪ್ರತೀ ಎಲೆಗೂ ತೂಗಿಸಿಕೊಂಡು ಬೀಗುವಾಗಲೆಲ್ಲಾ..
ಇನ್ನಾದರೂ ನಾವು ಆಳಕ್ಕೆ ಬೇರನೂರಿ ಬಿಡಬಹುದೆಂದು
ಅಂದುಕೊಳ್ಳುತ್ತೇವೆ ಅಷ್ಟೆ.
ಆದರೂ ನಾವು ಮರವಾಗಿದ್ದೇವೆ
ಹಾಗಂತ ಎಲ್ಲರೂ ಅಂದುಕೊಂಡಿದ್ದಾರೆ.
ಒಡಲ ಚಿಗುರು ಕುಡಿಗಳಿಗೆ ಮಾತ್ರ ನಿಜಕ್ಕೂ
ಮರವಾಗುವುದು ಹೇಗೆಂದು ಕಿವಿಯಲ್ಲುಸುರಿ
ಪಾಠ ಮಾಡುತ್ತಿದ್ದೇವೆ.
ಸಧ್ಯ! ಯಾರೂ ಕೇಳಿಸಿಕೊಳ್ಳುತ್ತಿಲ್ಲವಷ್ಟೆ
*******
ಮನಮುಟ್ಟುವ ಸಾಲುಗಳು
ತುಂಬಾ ಚೆನ್ನಾಗಿದೆ ಸ್ಮಿತಾ
ಸುಂದರ ಕವನ ಸ್ಮಿತ
ಒಡಲ ಚಿಗುರು ಕುಡಿಗಳಿಗೆ ಮಾತ್ರ ಮರವಾಗವುದ ಕಿವಿಯಲ್ಲುಸುರಿ ಪಾಠ ಕಲಿಸುವ ನಾವು ಮರವಾಗಿದ್ದೇವೆಂದು ಅವರು ಅಂದುಕೊಂಡಿದ್ದಾರೆ…. ಎಂಥಾ ಚೆಂದ ಹೇಳಿರುವಿರಿ ಸ್ಮಿತಾ….
ಸ್ಮಿತಾ ಅಮೃತರಾಜ್ ಅವರ ಬರಹಗಳು ಹಾಗೆ, ಓದಲು ರಮ್ಯ, ಸಹಜ, ಸುಂದರವಾದ ಓದಿಗಿಸಿಕೊಳ್ಳುವ ಆಕರ್ಷಕ ಆಪ್ತ ಬರವಣಿಗೆ, ಕ್ಷಣ ಓದಿ ಯಾದ ಮೇಲೆ ಆ ಕವಿತೆಯ ಬೇರಿನ ಆಳದಲ್ಲಿ ಸಂಪೂರ್ಣ ಅರ್ಥ ಸಿಗುತ್ತದೆ.
– ವಿಜಯ ಅಮೃತರಾಜ್
ಬಹಳ ಇಷ್ಟವಾಯ್ತು ಸ್ಮಿತಾ… ಒಳ್ಳೆಯ ಕವನ..
ಸ್ಮಿತಾ “ಮಾತು ಮೀಟಿ ಹೋಗುವ ಹೊತ್ತು ” ಸಂಕಲನದಲ್ಲಿ ತುಂಬಾ ತುಂಬಾ ಇಷ್ಟವಾದ ಕವಿತೆ ಇದು. …… ಮತ್ತೆ ಮತ್ತೆ ಓದಿದೆ.
ಪುಟ್ಟ ಕುಂಡದಲ್ಲೂ ಮರವಾಗಿದ್ದೇವೆ ನಾವು
ಭಾಳ್ ಇಷ್ಟ ಆಯ್ತು ಸ್ಮಿತಾ