ಕಳ್ಳ ಬಂದೂಕು

ಕಥೆ

ಕಳ್ಳ ಬಂದೂಕು

ಗಣಪತಿ ಹೆಗಡೆ

Joseph Egg | Side-by-Side Self-Priming Pellet-Lock Shotgun | British,  London | The Metropolitan Museum of Art

ಅರವತ್ತು- ಎಪ್ಪತ್ತು ವರ್ಷಗಳ ಹಿಂದಿನ ಮಾತು. ನಮ್ಮೂರು ವಾತಾವರಣದಲ್ಲಿ ‘ಘಟ್ಟದ ಕೆಳಗಿನ ಕರಾವಳಿ’ ಅಂತ ಹೇಳಿಸಿಕೊಂಡರೂ ಮಲೆನಾಡಿನ ಪರಿಸರವಿದೆ. ಬೆಟ್ಟ ಕೊಳ್ಳಗಳು, ಮರಗಳಿಂದ ಕೂಡಿದ ಅರಣ್ಯ ಪ್ರದೇಶ ಇವುಗಳಿಂದ ನಮ್ಮೂರು ಮಲೆನಾಡಿನ ಪ್ರದೇಶದ ಹಾಗೆ ಕಾಣುತ್ತದೆ. ಹಳ್ಳಿಗಳ ಬದುಕು, ಜಮೀನುದಾರಿಕೆಯ ಕೊನೆಯ ಹಂತದಲ್ಲಿ ಇತ್ತು. ಬಹುಶಃ ಪೋಲೀಸ್ ಪಟೇಲ್ ಎನ್ನುವದು ಇದೇ ಜಮೀನುದಾರಿಕೆಯ ಅವಿಭಾಜ್ಯ ಅಂಗವಾಗಿತ್ತು. ಜಮೀನುದಾರರಿಗೆ ಇರದೇ ಇರುವ ರಾಜಕೀಯ ಹಾಗೂ ಸರಕಾರೀ ಅಧಿಕಾರ ಪೋಲೀಸ್ ಪಟೇಲರಿಗೆ ಇತ್ತು. ಸಾಮಾಜಿಕವಾಗಿ ಜಮೀನುದಾರರೂ ಹಾಗೂ ರಾಜಕೀಯವಾಗಿ ಪೋಲೀಸ್ ಪಟೇಲರೂ ಹಳ್ಳಿಗಳನ್ನು ಅಕ್ಷರಶಃ ಆಳುತ್ತಿದ್ದರು. ಹಳ್ಳಿಗಳಲ್ಲಿಯ ಎಷ್ಟೋ ಗಲಾಟೆ-ಜಗಳಗಳು ಪೋಲೀಸ್ ಸ್ಟೇಶನ್ನನ್ನು ಏರುತ್ತಿರಲಿಲ್ಲ. ಬಹಳಷ್ಟು ಕಡೆಗಳಲ್ಲಿ ಪೋಲೀಸ್ ಪಟೇಲರೇ ಜಮೀನುದಾರರೂ ಆಗಿರುತ್ತಿದ್ದರು. ಇಲ್ಲದೆ ಇದ್ದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಜಮೀನುದಾರರೂ, ಕ್ರಿಮಿನಲ್ ಸಮಸ್ಯೆಗಳನ್ನು ಪೋಲೀಸ್ ಪಟೇಲರೂ ನಿರ್ವಹಿಸುತ್ತಿದ್ದರು. ರೆವಿನ್ಯೂ ಅಥವಾ ಪೋಲೀಸ್ ಇಲಾಖೆಯ ಅಧಿಕಾರಿಗಳು ಈ ಜಮೀನುದಾರ ಅಥವಾ ಪೋಲೀಸ್ ಪಟೇಲರನ್ನು ಬಿಟ್ಟು ತಮ್ಮ ಕಾರ್ಯ ನಡೆಸುತ್ತಿರಲಿಲ್ಲ. ನಿರ್ಣಯವೂ ಅವರು ಹೇಳಿದ ಹಾಗೇ ಆಗುತ್ತಿತ್ತು.

ಹಳ್ಳಿಗಳಲ್ಲಿ ದೊಡ್ಡಮನುಷ್ಯರ ಹತ್ತಿರ ಕಾಡುತೋಸು ಅಥವಾ ಡಬಲ್ ಬ್ಯಾರಲ್ ಬಂದೂಕು ಇರುವದು ಸಾಮಾನ್ಯವಾಗಿತ್ತು. ಅದನ್ನು ಇಟ್ಟುಕೊಳ್ಳಲು ಪರವಾನಗಿ ಪತ್ರದ ಅವಶ್ಯಕತೆ ಇದ್ದರೂ ‘ದೊಡ್ಡ ಮನುಷ್ಯರಿಗೆ’ ಪರವಾನಗಿ ಪತ್ರ ಪಡೆಯುವದು ಕಷ್ಟವಾಗಿರಲಿಲ್ಲ. ಆತ್ಮರಕ್ಷಣೆಗಾಗಿ, ಹಂದಿ ಮುಂತಾದ ಪ್ರಾಣಿಗಳಿಂದ ಬೆಳೆಗಳ ರಕ್ಷಣೆಗಾಗಿ, ಕಳ್ಳರು-ಕಾಕರಿಂದ ಚರಾಸ್ತಿಗಳನ್ನು ರಕ್ಷಿಸಿಕೊಳ್ಳುವದಕ್ಕಾಗಿ ಕಾಡುತೋಸಿನ ಉಪಯೋಗವಾಗುತ್ತಿತ್ತು. ಕೆಲವರು ‘ದೊಡ್ಡಸ್ತಿಕೆಯನ್ನು’ ತೋರಿಸಲೂ ಸಹ ಕಾಡುತೋಸು ಇಟ್ಟುಕೊಳ್ಳುತ್ತಿದ್ದರು.

ಸಾಮಾನ್ಯ ಜನರು, ಡಬಲ್ ಬ್ಯಾರಲ್ ಬಂದೂಕು ಇರಲಿ ಸಿಂಗಲ್ ನಳಿಕೆ ಬಂದೂಕನ್ನೂ ಇಟ್ಟು ಕೊಳ್ಳಲು ಸಾಧ್ಯವಿರಲಿಲ್ಲ. ಅದರ ಅವಶ್ಯಕತೆಯಾದರೂ ಏನಿದೆ ಹೇಳಿ. ಆಸ್ತಿ ಇದ್ದರಲ್ಲವೇ ರಕ್ಷಿಸಿಕೊಳ್ಳಲು. ಇದ್ದ ಆಸ್ತಿಯೂ ಜಮೀನುದಾರರದು. ಕೇವಲ ಸಾಗುವಳಿ ಇವರದು. ಮೂಲ ಗೇಣಿಯೋ ಅಥವಾ ಪಾಲುಗೇಣಿಯೊ. ಆದ್ದರಿಂದ ಬಂದೂಕು ಬೇಕೆಂದರೂ ಸಹ ಇಟ್ಟುಕೊಳ್ಳಲು ಕಾರಣವೇ ಇರಲಿಲ್ಲ. ಹಾಗಿದ್ದಮೇಲೆ ಪರವಾನಿಗೆ ಎಲ್ಲಿಯದು?.

ಆದರೆ ಬಹಳಷ್ಟು ಜನರು ಕಳ್ಳ ಬಂದೂಕನ್ನು ಹೊಂದಿರುತ್ತಿದ್ದರು. ಬಂದೂಕನ್ನು ತಯಾರಿಸುವ ಆಚಾರಿ ಚಂದಾವರದಲ್ಲಿ ಇದ್ದಿದ್ದನು. ಅವನಿಗೆ ಬಂದೂಕು ತಯಾರಿಸುವ ಲೈಸೆನ್ಸ್ ಇತ್ತು. ಪರವಾನಿಗೆ ಹೊಂದಿದ ಬಂದೂಕು ಆದಲ್ಲಿ ಸೂಕ್ಷ್ಮವಾಗಿ ಅವನ ಹೆಸರು ಹಾಗೂ ಬಂದೂಕು ನಂಬರ್ ಬರೆದಿರುತ್ತಿದ್ದನು. ಇಲ್ಲವಾದಲ್ಲಿ ಹೆಸರು ಹಾಗೂ ನಂಬರ್ ಇರುತ್ತಿರಲಿಲ್ಲ ಅಷ್ಟೆ.

ರೈತರು ಈ ಬಂದೂಕುಗಳಲ್ಲಿ ಸಾಮಾನ್ಯವಾಗಿ ಕಾಡತೋಸು ಅಥವಾ ಬುಲೆಟ್ ಬಳಸುತ್ತಿರಲಿಲ್ಲ. ತೆಂಗಿನ ಕಾಯಿಯನ್ನು, ಬಾಳೆಗೊನೆ ಹಾಗೂ ಬೆಳೆದ ತರಕಾರಿಗಳನ್ನು ತಿನ್ನುವ ಕೋಡ ಹಾಗೂ ಮಂಗಗಳು ರೈತರ ಬಂದೂಕಿಗೆ ಗುರಿಯಾಗಿರುತ್ತಿದ್ದವು. ಒಮ್ಮೊಮ್ಮೆ ಗದ್ದೆಯಲ್ಲಿ ಬೆಳೆದ ಭತ್ತದ ಪೈರಿಗೂ ಈ ಮಂಗ-ಕೋಡಗಳು ಹಾವಳಿ ಕೊಡುತ್ತಿದ್ದವು. ನವಿಲುಗಳಿಂದಲೂ ರಕ್ಷಣೆ ಬೇಕಿತ್ತು. ಆನೆ ಹಾಗೂ ಕಾಡುಕೋಣಗಳ ಹಾವಳಿ ನಮ್ಮೂರಲ್ಲಿ ಇರಲಿಲ್ಲ. ಹಂದಿಯ ಹಾವಳಿ ಇದ್ದರೂ ಸಹ ಬಂದೂಕಿನಿಂದ ಹೊಡೆಯುವ ಬದಲಾಗಿ ‘ಹೊಲ’ ಮಾಡಿ ಕೊಲ್ಲುತ್ತಿದ್ದರು. ಅದು ಬೆಳೆಯ ರಕ್ಷಣೆಗಿಂತ ಹೆಚ್ಚಾಗಿ ತಿನ್ನುವ ಸಲುವಾಗಿ ಹೊಲ ಮಾಡುವದು ಜಾಸ್ತಿ.

ಆದರೆ ಈ ತರಹದ ‘ಬೇಟೆಗಾಗಿ’ ಬಂದೂಕಿನಲ್ಲಿ ‘ಚರೆ’ ಯನ್ನು ಬಳಸುತ್ತಿದ್ದರು. ಈ ತರಹದ ಚರೆಗಳು ದೇಹವನ್ನು ಹರಡಿ ಪ್ರವೇಶಿಸುತ್ತವೆ. ಆದ್ದರಿಂದ ಸಾವಿಗಿಂತ ನೋವಿನಿಂದ ಬಳಲುವದೇ ಹೆಚ್ಚಾಗಿರುತ್ತದೆ. ಇದರಿಂದ ಮಂಗಗಳ ಉಪಟಳ ಕಡಿಮೆಯಾಗುತ್ತಿದ್ದವು. ಇದರಿಂದ ಯಾರಿಗೂ ತೊಂದರೆಯಾಗುತ್ತಿರಲಿಲ್ಲ. ಒಮ್ಮೊಮ್ಮೆ ಮಾತ್ರ ಚಿರತೆಯ ಹಾಗಿರುವ ‘ಬರಕ’ ಗಳು ಕೋಳಿ, ನಾಯಿ ಮರಿ, ಆಕಳು ಕರುಗಳನ್ನು ಒಯ್ಯುವದು ಗೊತ್ತಾದಾಗ ‘ಗುಂಡನ್ನು’ ಬಳಸುತ್ತಿದ್ದರು.

ಪೋಲೀಸ್ ಇಲಾಖೆಯವರಿಗೆ ಈ ರೀತಿಯ ಬಂದೂಕುಗಳನ್ನು ರೈತರು ಹೊಂದಿರುವದು ಗೊತ್ತಿತ್ತು. ರೈತರಿಗೆ ಇದರಿಂದಾಗ ಬಹುದಾದ ಅನುಕೂಲತೆಗಳನ್ನು ಅವರು ಬಲ್ಲವರಾಗಿದ್ದರು. ಮತ್ತು ಎಲ್ಲಾ ರೈತರು ಧಾರಾಳವಾಗಿ ಬಳಸುವ ಹಾಗೂ ಹಿಡಿದಿರುವ ‘ಕತ್ತಿಯ’ ಹಾಗೆಯೆ ಇದರ ಕಡೆ ಲಕ್ಷ್ಯ ವಹಿಸುತ್ತಿರಲಿಲ್ಲ. ಕತ್ತಿಯನ್ನು ಕೇವಲ ಹೊಲದಲ್ಲಿ ಮಾತ್ರ ಬಳಸುವದಿಲ್ಲ ರೈತರು. ಕತ್ತಿ ರೈತರ ‘ಆಯುಧ’. ಸದಾಕಾಲ ಅವರ ಜೊತೆ ಇರುತ್ತದೆ. ಆದ್ದರಿಂದ ಕತ್ತಿಯನ್ನು ಪೇಟೆಯಕಡೆಗೆ ಹೋಗುವಾಗಲೂ ಒಯ್ಯುತ್ತಾರೆ ರೈತರು.

ಒಮ್ಮೆ ನಾರಾಯಣ ರಾವ್ ಎನ್ನುವ ಹವಾಲ್ದಾರ್ ನಮ್ಮ ಏರಿಯಾಗೆ ವರ್ಗವಾಗಿ ಬಂದರಂತೆ. ಇವರು ಬಹಳ ಕಟ್ಟುನಿಟ್ಟಾದ ಅಧಿಕಾರಿಯಾಗಿದ್ದರಂತೆ. ಘಟ್ಟದ ಮೇಲೆ ಯಾವುದೇ ಊರಾಗಿರಲಿ, ಮುಂಡಗೋಡ ಇರಲಿ, ಗುಲಬರ್ಗಾ ಇರಲಿ ಅಥವಾ ಬೆಂಗಳೂರಿನವನೇ ಇರಲಿ ನಮ್ಮೂರಿನವರ ಮಟ್ಟಿಗೆ ಇವನು ‘ಘಾಟೀ’ ಮನುಷ್ಯ. ಇವನೊಡನೆ ವ್ಯವಹರಿಸುವಾಗ ಎಚ್ಚರಿಕೆ ಅವಶ್ಯ ಅಂತ ಪೋಲೀಸ್ ಪಟೇಲನಿಂದ ಹಿಡಿದು ಕೃಷಿ ಕಾರ್ಮಿಕನ ತನಕ ಇದೇ ಅಭಿಪ್ರಾಯ.

ಇವರಿಗೆ ನಮ್ಮೂರಿನ ಕೆಲವು ರೈತರ ಹತ್ತಿರ ಕಳ್ಳ ಬಂದೂಕು ಇರುವ ವಿಷಯ ಗೊತ್ತಾಯಿತು. ಯಾವುದಾದರೂ ಒಬ್ಬ ರೈತನಿಂದ ಕಳ್ಳ ಬಂದೂಕನ್ನು ಜಪ್ತಿ ಮಾಡಿದಲ್ಲಿ ಎಲ್ಲರಿಗೂ ಬುದ್ಧಿ ಬರುತ್ತದೆ ಅಂತ ಆ ಹವಾಲದಾರರಿಗೆ ಅನಿಸಿರಬೇಕು. ಒಮ್ಮೆ ಒಬ್ಬ ಪೋಲೀಸ ಪ್ಯಾದೆ ಬರಮನನ್ನು ಕರೆದುಕೊಂಡು ಊರಿನ ಒಂದು ‘ಕೊಪ್ಪಕ್ಕೆ’ ಬಂದರಂತೆ. ಅಲ್ಲಿಯ ಕೊಪ್ಪದ ಗೌಡ ರಾಮಪ್ಪನಲ್ಲಿ ಹೋಗಿ ಒಂದು ಕಳ್ಳ ಬಂದೂಕನ್ನು ಜಪ್ತಿಮಾಡಿಕೊಂಡು ಪೋಲೀಸ್ ಸ್ಟೇಶನ್ನಿಗೆ ಬರಲು ಹೇಳಿ ಸ್ಟೇಶನ್ನಿಗೆ ಹೊರಟರು ಹವಾಲ್ದಾರ ನಾರಾಯಣರಾಯರು.

ಬಂದೂಕನ್ನು ಜಪ್ತಿ ಮಾಡಿದಾಗ ಪಂಚನಾಮೆ ಮಾಡಿಸಿ ರಾಮಪ್ಪ ಹಾಗೂ ಅಕ್ಕ ಪಕ್ಕದ ಮೂರ್ನಾಲ್ಕು ಜನರ ಸಹಿ ತೆಗೆದು ಕೊಂಡರು ಹವಾಲದಾರರು. ಒಂದು ಪ್ರತಿಯನ್ನು ರಾಮಪ್ಪನಿಗೆ ಅವನ ಸ್ವೀಕೃತಿಯೊಂದಿಗೆ ಕೊಟ್ಟು ಬಂದೂಕು ಹಾಗೂ ಮೂಲಪ್ರತಿಯೊಂದಿಗೆ ಹೊರಟಿದ್ದರು.

ಏನಿದ್ದರೂ ಒಮ್ಮೆ ಪೋಲೀಸ್ ಪಟೇಲರನ್ನು ನೋಡಿಯೇ ಸ್ಟೇಶನ್ನಿಗೆ ಹೋಗೋಣ ಅಂತ ಬರಮ ಹವಾಲ್ದಾರರಲ್ಲಿ ಒತ್ತಾಯಿಸಿದ. ಒಮ್ಮೆ ಹಿಂದೆ ಮುಂದೆ ನೋಡಿದ ಹವಾಲ್ದಾರರು ಆಮೇಲೆ ಬರಮನ ಒತ್ತಾಯಕ್ಕೆ ಒಪ್ಪಿದರು. ಪೋಲೀಸ್ ಪಟೇಲನಲ್ಲಿ ಹೇಳಿದಲ್ಲಿ ಈ ಕಳ್ಳ ಬಂದೂಕಿನ ವ್ಯವಹಾರ ನಿಂತೀತು ಅಂತ ಗ್ರಹಿಸಿ ಅರ್ಧದಾರಿಯಿಂದಲೇ ಪಟೇಲರ ಮನೆಯತ್ತ ಕಾಲು ಹಾಕಿದರು, ಬರಮನ ಜೊತೆ.

ಇಷ್ಟರಲ್ಲಿ ರಾಮಪ್ಪ ಹೆದರಿಕೊಂಡು ಪಟೇಲ ಗೋಪಾಲ ಹೆಗಡೆಯವರ ಮನೆಗೆ ಬಂದ.

ಮುಂದಿನ ಕಥೆಯನ್ನು ಅವರವರ ಮಾತುಕತೆಯಲ್ಲಿಯೇ ಕೇಳಿ.

ರಾಮಪ್ಪ: ಅಬ್ಬೆರೆ, ವಡೀದೀರು ಅವ್ರೈರ?

ಸಾವಿತ್ರಮ್ಮ: ಇದೆಂತದ ರಾಮಪ್ಪ. ಮುಖಯೆಲ್ಲ ಕೆಂಪಾಗೋಗದೆ?. ಮಾತೇ ಬರೂದಿಲ್ಲ? ಬೆವ್ರಿಳೀತದೆ.

ರಾ: ಅಬ್ಬೆರೆ ಭಾನ್ಗಡ್ಯಾಗೋಗದೆ. ಅರ್ಜೆಂಡ್ ವಡೀದೀರ್ಬೇಕು.

ಸಾವಿತ್ರಮ್ಮ: ತಡೆ. ಅವ್ರು ತೋಟದ್ಕಡೆಗೆ ಹೋಗವ್ರೆ. ಬರೂ ಹೊತ್ತಾಯ್ತು. ಮೊದ್ಲು ಕುಡೂಕೆ ಮಜ್ಗೆ ತತ್ತೆ. ಕುಡೀಲಾಗೂದು.

ರಾ: ಆಗೂದು. ತನಿ. ವಡೀದೀರು ಬರೂಮಟ ಕುಡ್ದ್ಮುಗಿಸ್ಕಳ್ತೆ.

( ಅಷ್ಟರಲ್ಲಿ ಪಟೇಲ ಗೋಪಾಲ ಹೆಗಡೆಯವರು ಬರುವರು)

ಪಟೇಲ: ರಾಮಪ. ಯಂತ ಆಗದ್ಯ ನಿಂಗೆ? ಗಾಬ್ರ್ಯಾದಾಗೆ ಕಾಣ್ತದೆ.

ರಾ: ದೊಡ್ಡ ಬಾನ್ಗಡ್ಯಾಗೋಗದೆ ಇವತ್ತು. ಕೊಪ್ಕೆ ಪೋಲೀಶ್ರು ಬಂದಿದ್ರು.

ಪ: ಅರೆ, ಹೌದನ. ಇಲ್ಬರ್ಲೇ ಇಲ್ಲ. ಸೀದಾ ಕೊಪ್ಪಕ್ಕೇ ಹೋದ್ರ ಯೇನ. ಯಷ್ಟ್ಜನ ಬಂದಿದ್ರು?

ರಾ: ಒಬ್ಬ ಬರ್ಮ. ಮತ್ತೊಬ್ಬ ಘಾಟಿ ಹವಾಲ್ದಾರ.

ಪ: ಬಹುಶ ಇಲ್ಬಂದ್ಹೋದ್ರನ. ನಾನಿರ್ಲಿಲ್ಲ ನೋಡು. ಹಾಗೇ ಹೋಗಿರಿರು. ತೊಂದ್ರೆ ಇಲ್ಲಬಿಡು. ನಾ ಕುಮಟೆಕಡೆ ಹೋದಾಗ್ನೋಡ್ತೆ.

ರಾ: ಇಲ್ಬರ್ಲಿಲ್ವನ. ಬರ್ಮ ಹೇಳ್ಯ. ಶೀದಾ ಬಂದೀರು ಹೇಳಿ. ಅದ್ಕೆ ನಾ ಓಡ್ಬಂದ್ಯೆ.

ಪ: ಆಯ್ತು. ಯಂತ ಆಯ್ತು ಹೇಳಾದ್ರೂ ಹೇಳು. ಗಾಬ್ರಾಗ್ಬೇಡ. ನಾ ನೋಡ್ಕಳ್ತೆ. ನಿಂಗೆ ಬರ್ಮ ಹೊಸ್ಬ್ನನ?

ರಾ: ಕೊಪ್ಕ ಬಂದವ್ರು ಶೀದಾ ನಮ್ಮನೀಗೆ ಬಂದ್ರು. ಬರ್ಮ ನಂಗೆ ಗೊತ್ತವ್ನೆ ಬಿಡಿ. ಎರ್ಡ ಬೊಂಡ ಇಳ್ಸ್ಕೊಟ್ಟೆ ಅವ್ರಗೆ. ಅದ್ನ ಕುಡ್ದ್ರು ಹೇಳಿ. ಬರ್ಮನ ಕೂಡೆ ವಡೀದೀರ್ಬರ್ಲಿಲ್ವನ್ರ ಕೇಳ್ದೆ. ಆಗ ಘಾಟೀ ಮನ್ಶ ‘ಅವ್ರೆಲ್ಲಾ ಯಾಕೆ ಬರಬೇಕು? ಬೇಕಾದ್ರೆ ನಾವು ಕರೆಸ್ತೇವೆ’ ಹೇಳ್ದ.

ಪಟೇಲರಿಗೆ, ಇಲ್ಲಿ ಏನೋ ಆಗಿದೆ ಎನ್ನುವ ವಾಸನೆ ಬಂದಿತು. “ಈಗ ಇಲಾಖೆಯನ್ನು ಬಿಡುವ ಹಾಗೂ ಇಲ್ಲ. ಈ ಮಕ್ಳು ಏನನ್ನಾದರೂ ಮಾಡಿ ನನ್ನ ಹತ್ತಿರ ಬರುವದು ಮಾಮೂಲಿ. ಈಗ ಬಂದಿರುವ ನಾರಾಯಣರಾವ್ ಸ್ವಲ್ಪ ಅಧಿಕಪ್ರಸಂಗಿ ಅಂತ ಕೇಳಿದ್ದೇನೆ. ಅವನೂ ಏನಾದರೂ ಅಧಿಕ ಪ್ರಸಂಗತನ ಮಾಡಿರಬಹುದು. ಏನಿದ್ದರೂ ಎಚ್ಚರಿಕೆಯಿಂದ ಇರುವದು ಒಳ್ಳೆಯದು” ಎಂದುಕೊಂಡು ರಾಮಪ್ಪನಲ್ಲಿ ಹೇಳಿದರು.

ಪ: ನೋಡು ರಾಮಪ್ಪ. ಇಲಾಖೆ ಅವ್ರ ಕೈಲದೆ. ನಾ ಊರವ್ರ ಪಾರ್ಟಿ ಹೇಳಿ ಯಾವಾಗ್ಲೂ ಹೇಳ್ತ್ರು ಅವ್ರು. ಅದು ಹೌದೂಹೌದು. ಆದ್ರೇ ಡೈರೆಕ್ಟ್ಹೇಳ್ವಾಗಿಲ್ಲ ನೋಡು. ಯಂತ ಆಗದೆ ಹೇಳು. ನಾನವ್ನೆ. ಹೆದರ್ಬೇಡ.

ರಾ: ಬೊಂಡ ಕುಡ್ದ್ರ. ಬಂದೂಕ್ತಕಬಾ ಅಂದ್ರು. ನಾನ್ವಶಿ ಗಾಬ್ರ್ಯಾದೆ. ಬರ್ಮನ ಮುಖನೋಡ್ದೆ. ಯಂತಮಾಡೂದು ಗುತ್ತಾಗ್ಲಿಲ್ಲ ನೋಡಿ. ಅಂವ ಖದೀಮ. ಒಂದ್ಶಲ ತೋರ್ಶು. ಶರ್ಯಾಗಿದ್ಯ ಅಂತ್ವಂಶ್ಶಾರ್ನೋಡಿ ಕಡಿಶಾರ ಕೊಡ್ತ್ರು ಅಂದ. ನಾ ಶೀದಾ ವಳ್ಗ್ಹೋಗಿ ಬಂದೂಕ್ತಂದಕೊಟ್ಟೆ. ತಂದೂಕ್ಕೂಡ್ಲೆ ಹಾರ್ಬಟ ನೋಡ್ಬೇಕಿತ್ತು ನೀವು. ಯಾಪಾಟಿ ಹಾರ್ಬಟ ಅಂತ್ರಿ. ಕಡಿಶಾರಿಕೆ ಬಂದೂಕ್ಯೆತ್ಹಾಕ್ಕಂಡಿ ಟೇಶನ್ನಿಗೆ ಬರೂಕೆ ಹೇಳ್ಹೋದ್ರು. ನಾ ಶೀದಾ ಇಲ್ಲಿಗ್ವೋಡ್ಬಂದೆ.

ಪ: ಇದ್ಕ್ಯಂತಾ ಹೆದ್ರಕ್ಯ? ನಿಂದ್ಕಳ್ಬಂದೂಕ್ಕಲ್ವನ? ತಕಂಡ್ಹೋದ್ರಪ. ಬೇಕಾರ್ಮತ್ತೊಂದ್ಮಾಡ್ಸ್ಕಂಡ್ರಾಯ್ತು ಚಂದಾವರ್ಕ್ಹೋಗಿ.

ರಾ: ಬಂದೂಕನ್ವಿಸ್ಯ ಅಲ್ರ. ನನ್ಹತ್ರ ಬರೂಕ್ಹೇಳರೆ ನೋಡಿ. ಅದೇ ಹೆದರ್ಕಿ.

ಪ: ನಾಳೆಗೇ ಸ್ಟೇಶನ್ನಿಗೆ ಹೋಗ್ವ ಇಬ್ರೂವ. ಅಲ್ಲಿ ಪೋಜ್ದಾರ್ರೂ ಇರ್ತ್ರು. ನಾನೂ ಬರ್ತೆ ನಿನ್ಸಂಗ್ಡ. ತಪ್ಪಾಯ್ತು ಹೇಳ್ವಪ್ಕಂಡ್ರಾಯ್ತಪ. ದೊಡ್ಡವ್ರ ಮನ್ಸ್ಯಾವಾಗ್ಲೂ ದೊಡ್ದೇಯ. ಅವ್ರು ಬಂದ್ರು ಹೇಳ್ಕಾಣ್ಸ್ತದೆ. ಅಚ್ಗೋಗು. ಆಮೇಲ್ಬಾ.

ಹವಾಲ್ದಾರ ನಾರಾಯಣರಾಯರು ಪೋಲೀಸ ಬರಮನ ಜೊತೆ ಪಟೇಲರ ಮನೆಗೆ ಬಂದರು. ಇಬ್ಬರ ಕೈಯಲ್ಲಿಯೂ ಒಂದೊಂದು ದಂಡ. ಬಂದೂಕು ಪೋಲೀಸ್ ಬರಮನ ಕೈಯಲ್ಲಿತ್ತು.

ಹವಾಲದಾರರು: ನಮಸ್ಕಾರ ಪಟೇಲರೆ.

ಬರಮ: ನಮಸ್ಕಾರ್ವ್ರೋ ಹೆಗಡೇರು.

ಪ: ನಮಸ್ಕಾರ ರಾಯರೆ, ಬನ್ನಿ. ಬರಮ ಬಾ. ಕುಳಿತುಕೊಳ್ಳಿ.
ಬಾಯಾರಿಕೆಗೆ ತುರ್ತು ಏನಡ್ಡಿಯಿಲ್ಲ. ತಂಪಿಗೆ. ನೀರು? ಮಜ್ಜಿಗೆ?

ಸಾವಿತ್ರಮ್ಮ ನೀರು ಬೆಲ್ಲ ತಂದಿಟ್ಟು ಹೋಗುವರು.

ಪ: ಇದೇನೋ ಬರಮ ಪೋಲೀಸ್ ಕೈಲಿ ದಂಡದ ಜೊತೆ ಬಂದೂಕು. ಛಾನ್ಸು ಬಿಡು ನಿಂದು. ಚಡ್ಡಿ ಬದಲು ಪೇಂಟೂ ಬರಬಹುದು.

ಬರಮ: ಹಾಗಲ್ದ್ರ ಹೆಗಡೇರೆ. ಹವಾಲ್ದಾರರು ನಿಮ್ಮೂರ್ಕಡೆಗೆ ಬರಬೇಕು ಹೇಳ್ಮಾಡಿದ್ರೊ. ಬರ್ವಾಗ ಹೇಗೂ ಕೊಪ್ಪ ಹಾಯ್ಸೆ ಬರೂದು. ಯಾರೋ ನಿಮ್ಮೂರಲ್ಲಿ ಕಳ್ಬಂದೂಕದೆ ಹೇಳ್ದ್ರಂತೆ ಹವಾಲ್ದಾರರ ಹತ್ರ ತೋಂಡೀ ದೂರ್ಕೊಟ್ರಂತೆ. ಅಲ್ಹೊಕ್ಕಿ ನೋಡ್ಕಂಡೇ ನಿಮ್ಮನೆಗೆ ಬರ್ವಾ ಅಂದ್ರು. ಗೌಡರಮನೆ ರಾಮಪ್ಪ ಕಳ್ಬಂದೂಕು ಹೇಳ್ದ್ಕೂಡ್ಲೆ ತಂದ್ಕೊಟ್ಬಿಟ. ನಿಮ್ಹತ್ರ ಹೇಳೇ ಮುಂದ್ವರ್ಸ್ವ ಹೇಳಿ ಸಾಯ್ಬ್ರಿಗೆ ನಾನೇ ಹೇಳ್ದೆ.

ಪ: ಬರಮ, ನೀನು ಹೊಸಬ್ನೇನೋ ಈ ಊರಿಗೆ. ಒಂದೂರಲ್ಲಿ ಎರಡೋ ಮೂರೋ ಇರಬಹ್ದು ಅಂತದ್ದು. ಯಂತ ಹೊಡದಾಟಕ್ಕೆ, ಖೂನಿಗೆ ಬಳಸ್ತ್ರನ ಬಯಲು ಸೀಮೆಯ ಹಾಗೆ. ಚರೆಲಿ ಹೊಡ್ಯೂದು ಇದು. ಮಂಗನ, ಕಬ್ಬೆಕ್ನ ಓಡ್ಸೂಕೆ ಬಳಸ್ತ್ರು ಅಷ್ಟೇಯ. ರಾಯರೆ, ಇವರೆಲ್ಲಾ ಪಾಪದವರು. ಮೂಲತಃ ಜಗಳಕ್ಕೇ ಹೆದರುವವರು. ಅವರಿಗೆ ಅದನ್ನು ಕೊಟ್ಟು ಬಿಡುವದು ಒಳ್ಳೆಯದು. ಇದು ನನ್ನ ಅಭಿಪ್ರಾಯ.

ಹವಾಲ್ದಾರರು: ಪಟೇಲರೆ, ಬರಮ ಹೇಳಿದ್ದು ಅರ್ಧ ಸರಿ. ನೀವೇ ಹೇಳಿ ಈ ಬಂದೂಕು ಹೊಂದಲಿಕ್ಕೆ ಒಂದು ನಿಯಮ ಇಲ್ಲವೇನ್ರೀ? ಅದರಂತೆ ನಡೆಯಬೇಕೋ ಬೇಡವೋ? ನಮಗೆ ಅಧಿಕಾರ ಯಾಕೆ ಕೊಟ್ಟಿದ್ದಾರೆ ಸರಕಾರದವರು? ನಾವೇ ಅದನ್ನು ಮುರಿಯಬಹುದೇ? ಅವಶ್ಯಕತೆ ಇದ್ದಲ್ಲಿ ಅರ್ಜಿ ಹಾಕಲಿ. ನಾವೇ ಮುಂದೆ ನಿಂತು ಮಂಜೂರಿ ಮಾಡಿಸುತ್ತೇವೆ. ನಿಮ್ಮಂತವರೇ ಮುಂದೆ ನಿಂತು ಕಾಯ್ದೆ ಮುರಿದರೆ ಹೇಗೆ? ಏನಿದ್ದರೂ ಪೋಜದಾರರು ನೋಡಿಕೊಳ್ಳಲಿ. ಅವನಿಗೆ ಸ್ಟೇಶನ್ನಿಗೆ ಬರಲು ಹೇಳಿದ್ದೇನೆ. ನಮ್ಮ ಕೆಲಸ ನಾವು ಮಾಡಿದ್ದೇವೆ. ಬೇಕಾದರೆ ಪೋಜದಾರರಿಗೆ ಕೇಳಿಕೊಳ್ಳಲಿ ಅವನು. ನಾವು ತೆಗೆದುಕೊಂಡು ಹೋಗುವವರೆ. ನಮಸ್ಕಾರ ಬರುತ್ತೇವೆ.

ಪಟೇಲರಿಗೆ ಅವಮಾನವಾಯಿತು. ಈ ಸಣ್ಣ ಕಾರಣಕ್ಕಾಗಿ ತಮ್ಮನ್ನು ಕಾಯ್ದೆ ಮುರಿಯುವವರ ಸಾಲಿಗೆ ಸೇರಿಸಿದ್ದು ಸರಿ ಬರಲಿಲ್ಲ ಪಟೇಲರಿಗೆ. ತಮ್ಮ ಧ್ವನಿ ಬದಲಾಯಿಸಿದರು.

ಪ: ಅರೆ. ಇದೇನ್ರಿ ಅವಸರ ರಾಯರೆ. ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ಈ ವಿಷಯ ನಮ್ಮ ಪಟೇಲರ ಮೀಟಿಂಗಿನಲ್ಲಿಯೂ ಬಂದಿತ್ತು. ಪೋಜದಾರರೂ ಬಂದಿದ್ದರು. ನಾನೂ ಅನುಮೋದಿಸಿದ್ದೆ ಅದನ್ನು. ಈ ರೀತಿಯ ಬಂದೂಕುಗಳು ಇರುವದು ನಮ್ಮ ಊರಿನಲ್ಲಿ ಮಾತ್ರ ಅಲ್ಲ ನೋಡಿ. ಆದ್ದರಿಂದ ನಿಮ್ಮ ಇಲಾಖೆಯವರು ಈ ನಿಯಮವನ್ನು ಎಲ್ಲಾ ಕಡೆಗೆ ಸಮವಾಗಿ ನಿರ್ವಹಿಸಬೇಕಲ್ಲವೇ?. ಮತ್ತೆ ಅವರಿಗೆ ಪರ್ಯಾಯ ವ್ಯವಸ್ಥೆಯನ್ನೂ ಸೂಚಿಸುವದು ನಮ್ಮ ನಿಮ್ಮೆಲ್ಲರ ಕರ್ತವ್ಯವಲ್ಲವೇ?. ಮಂಗ, ಕೋಡ, ಬರಕ, ಕಬ್ಬೆಕ್ಕು ಇವುಗಳ ಪೀಡೆಯಿಂದ ಬಿಡುಗಡೆಗಾಗಿ ಚಿಟಬಿಲ್ಲಿನ ಬದಲಿಗೆ ಇದನ್ನು ಉಪಯೋಗಿಸುತ್ತಾರೆ. ಏನಿದ್ದರೂ ನಮ್ಮ ಊರಿನಿಂದಲೇ ಈ ಅಭಿಯಾನ ಪ್ರಾರಂಭವಾಗಲಿ.

ಹ: ನೋಡಿ. ನೀವು ತಿಳಿದವರು. ಆಗಲಿ ಬರುತ್ತೇವೆ. ಥೇಂಕ್ಸ.

ಪ: ಒಳ್ಳೆಯದು. ಆದರೆ ಬಂದೂಕು ತೆಗೆದುಕೊಂಡು ಹೊರಟಿದ್ದೀರಲ್ಲ. ಪಂಚನಾಮೆ ಕಾಪಿ ಒಮ್ಮೆ ಕೊಡಿ.

ಹವಾಲ್ದಾರರು ಪಂಚನಾಮೆ ಕಾಪಿ ತೋರಿಸಿದರು. ಇನ್ನೊಂದು ರಾಮಪ್ಪನಲ್ಲಿ ಇರುವದಾಗಿಯೂ ತಿಳಿಸಿದರು. ಇದು ತಮ್ಮದಲ್ಲವೆಂದು ರಾಮಪ್ಪ ಹೇಳಿಯಾನು ಅಂತ ಹವಾಲ್ದಾರರಲ್ಲಿ ಹೇಳಿ ಬಂದೂಕಿನ ಮೇಲೆ ತಮ್ಮ ಗುರುತನ್ನು ಮಾಡಿದರು ಪಟೇಲರು. ಹವಾಲದಾರ ಹಾಗೂ ಪೋಲೀಸ್ ಬರಮ ಕುಮಟಾಕ್ಕೆ ಹೂರಟರು. ಹೊರಡುವಾಗಲೇ ಸಾಯಂಕಾಲವಾಗಿತ್ತು.

ಕೂಡಲೇ ರಾಮಪ್ಪ ಪಟೇಲರ ಹತ್ತಿರ ಬಂದ. ಹೇಗಾದರೂ ಮಾಡಿ ಹವಾಲ್ದಾರರಿಗೆ ಬುದ್ಧಿ ಕಲಿಸಬೇಕೆಂದೂ ಪಟೇಲರಿಗೆ ಇತ್ತು. ಇವರು ರಾಮಪ್ಪನಲ್ಲಿ ಪಂಚನಾಮೆ ಕಾಪಿ ಇಸಕೊಂಡರು. “ಬರಮ ಹಾಗೂ ಹವಾಲದಾರರು ಕುಮಟಾಕ್ಕೆ ಸೈಕಲ್ಲಿನ ಮೇಲೆ ಸೀದಾ ರಸ್ತೆಯಲ್ಲಿ ಸುತ್ತು ಹಾಕಿ ಹೋಗುತ್ತಾರೆ. ಈಗಲೇ ಸಾಯಂಕಾಲವಾಗಿದೆ. ಅವರಿಗೆ ತಡ ಆಗಿಯೇ ಆಗುತ್ತದೆ. ನೀವು ಮಾನೀರ ಕೊಡ್ಲಿನ ಪಕ್ಕ ಬೆಟ್ಟ ಹಾಯಿಸಿ ಬೇಗ ಹೋಗಿರಿ. ಏಳೆಂಟು ಜನ ಮುಸುಕು ಹಾಕಿಕೊಂಡು ನಿಂತಿರಿ. ತಿರುವಿನಲ್ಲಿ ನಿಂತವರು ಗಲಾಟೆ ಮಾಡದೆ ಹವಾಲದಾರ ಅಲ್ಲಿಗೆ ಬಂದಕೂಡಲೇ ಬಂದೂಕನ್ನು ಕಸಿದುಕೊಂಡು ಸೀದಾ ಪಕ್ಕದ ಬೇಣಾದಾಟಿ ನಮ್ಮ ಮನೆಗೆ ಬಂದು ನನಗೆ ಬಂದೂಕು ಕೊಡಿ ಸಾಕು. ಜೊತೆಯಲ್ಲಿ ಸಾಧ್ಯವಾದರೆ ಆ ಪಂಚನಾಮೆ ಕಾಪಿಯನ್ನೂ ತಂದು ಕೊಡಿರಿ. ಮುಂದೆ ನಾನು ನೋಡಿಕೊಳ್ಳುತ್ತೇನೆ. ಕಂಪ್ಲೇಂಟ್ ಏನಾದರೂ ಇದ್ದರೂ ನನ್ನ ಮೂಲಕವೇ ಬರಬೇಕು” ಅಂದರು.

ಹಾಗೇ ಕೊಪ್ಪದ ಏಳೆಂಟು ಜನ ಹೋಗಿ ರಾತ್ರಿ ಹನ್ನೊಂದು ಘಂಟೆಗೆ ಬಂದೂಕನ್ನು ತಂದು ಪಟೇಲರಿಗೆ ಕೊಟ್ಟರು. ರಾತ್ರಿ ಬೆಳಗಾಗುವದರೊಳಗೆ ಬಂದೂಕು ಪುಡಿಪುಡಿಯಾಗಿ ಬಚ್ಚಲು ಒಲೆ ಸೇರಿತ್ತು. ಪಂಚನಾಮೆ ಕಾಪಿ ಕಪಾಟು ಸೇರಿತು.

ಇತ್ತ ಹವಾಲದಾರರು ಹಾಗೂ ಪೋಲೀಸ್ ಬರಮರಿಗೆ ಏನು ಆಗುತ್ತದೆ ಅಂತ ತಿಳಿಯುವದರೊಳಗೆ ಬಂದೂಕನ್ನು ಕಸಿದುಕೊಂಡು ಹೋಗಿದ್ದರು ಕೊಪ್ಪದವರು. ಜೊತೆಯಲ್ಲಿ ಪಂಚನಾಮೆಯ ಪ್ರತಿಯೂ ಹೋಗಿತ್ತು. ಬರಮನಿಗೂ ಯಾರು ಅಂತ ಗೊತ್ತಾಗಲಿಲ್ಲ. “ಹೇಗೂ ಕಳ್ಳ ಬಂದೂಕು ಅದು. ರಾಮಪ್ಪ ಅಂತೂ ಬರಲಿಕ್ಕಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಬೇರೆ ಬಂದೂಕನ್ನು ತಂದು ತೋರಿಸಿದರಾಯಿತು. ಪಂಚನಾಮೆಯ ವಿಷಯವನ್ನು ಪ್ರಸ್ತಾಪಿಸುವದೇ ಬೇಡ” ಅಂತ ಬುದ್ಧಿವಂತ ಹವಾಲದಾರರು ಬರಮನಿಗೆ ಹೇಳಿದರು. ಪಟೇಲರು ಬಂದೂಕಿನ ಮೇಲೆ ಗುರುತು ಮಾಡಿ ಆ ಗುರುತನ್ನು ಪಂಚನಾಮೆಯಲ್ಲಿ ಬರೆದದ್ದು ಹವಾಲದಾರರಿಗೆ ತಿಳಿದಿದ್ದರೂ ಇದರಲ್ಲಿಯ ಪಟೇಲರ ಬುದ್ಧಿವಂತಿಕೆಯ ಕಲ್ಪನೆ ಬರಲಿಲ್ಲ.

ಇಲಾಖೆಗೆ, ಹವಾಲದಾರರ ದುರಹಂಕಾರ ವರ್ತನೆಯ ಕುರಿತು ಬಹಳಷ್ಟು ದೂರುಗಳು ಬಂದಿದ್ದವು. ಸಾರ್ವಜನಿಕರಲ್ಲಿ ಸರಿಯಾಗಿ ವರ್ತಿಸುವದಿಲ್ಲ ಎನ್ನುವದೇ ಮುಖ್ಯವಾಗಿತ್ತು. ಇವುಗಳನ್ನು ಹವಾಲದಾರರಲ್ಲಿ ಹೇಳಿದ್ದರು ಕೂಡ. ಪಟೇಲರುಗಳನ್ನು ಮುದಿಟ್ಟುಕೊಂಡೇ ವ್ಯವಹರಿಸುವದು ಸರಿ ಎಂದರೂ ತಮ್ಮ ನಡೆಯನ್ನು ತಿದ್ದುಕೊಂಡಿರಲಿಲ್ಲ.

ಮಾರನೆಯದಿನ ಹತ್ತು ಘಂಟೆಯ ಬಸ್ಸಿಗೆ ರಾಮಪ್ಪನನ್ನು ಕರೆದುಕೊಂಡು, ಪಂಚನಾಮೆ ಕಾಪಿಯನ್ನು ಹಿಡಿದುಕೊಂಡೇ ಪೋಲೀಸ್ ಸ್ಟೇಶನ್ನಿಗೆ ಹೋದರು ಪಟೇಲರು. ಪೋಜದಾರರು ಸ್ಟೇಶನ್ನಿನಲ್ಲಿಯೇ ಇದ್ದರು. ಪೋಲೀಸ್ ಬರಮನೂ ಇದ್ದ. ಡ್ಯೂಟಿಗೆ ಹೋಗುವ ಅವಸರದಲ್ಲಿದ್ದ ಹಾಗೆ ಕಾಣಿಸಿತು. ಹವಾಲದಾರ ನಾರಾಯಣರಾಯರು ಕಾಣಿಸಲಿಲ್ಲ. ಬಹುಶಃ ಬಂದಿರಲಿಕ್ಕಿಲ್ಲ ಅಥವಾ ಬಂದು ಡ್ಯೂಟಿಗೆ ಹೋಗಿರಬಹುದು ಅಂತ ಊಹಿಸಿದರು. ಏನಿದ್ದರೂ ತಮ್ಮ ಕೆಲಸ ಪೋಜದಾರರಲ್ಲಲ್ಲವೇ? ಬರಮನೇ ಮುಂದೆ ನಿಂತು ಪಟೇಲರನ್ನು ಸ್ವಾಗತಿಸಿದ. ಒಳ ಪ್ರವೇಶಿಸಿದರು ಪಟೇಲರು. ಬಾಲಕ್ಕೆ ಬೇರೆ ಸ್ವಾಗತ ಬೇಕೆ?. ಬಸವನ ಜೊತೆ ಬಾಲವೂ ಪ್ರವೇಶಿಸಿತು ಪೋಲೀಸ್ ಸ್ಟೇಶನ್ ಅನ್ನು.

ಪೋಜದಾರರು: ಬನ್ನಿ ಪಟೇಲರೆ. ಬರಮ ಆ ಕುರ್ಚಿ ಈ ಕಡೆ ಹಾಕು.

ಬರಮ ಎರಡು ಖುರ್ಚಿ ಹಾಕಿದ. ಪಟೇಲರು ಖುರ್ಚಿಯ ಮೇಲೆ ಕುಳಿತರು. ಪಟೇಲರೇ ರಾಮಪ್ಪನಿಗೆ ಕುಳಿತುಕೊಳ್ಳಲು ಹೇಳಿದರು. ರಾಮಪ್ಪ ನೆಲಕ್ಕೆ ಕುಳಿತು ಕೊಂಡನು. ಪಟೇಲರ ಜೊತೆ ಸರಿಸಮನಾಗಿ ಖುರ್ಚಿಯ ಮೇಲೆ ಕುಳಿತು ಕೊಳ್ಳಬಹುದೆ ರಾಮಪ್ಪ?.

ಪೋಜದಾರರು: ಪಟೇಲರೆ ಇದೇನು ಪಟಾಲಂ ಕಟ್ಟಿಕೊಂಡು ಬಂದಿದ್ದು?

ಪಟೇಲರೂ ಯಾರನ್ನಾದರೂ ಕರೆದುಕೊಂಡು ಬಂದಲ್ಲಿ ಹೇಳುವ ಕ್ರಮ ಇದು.

ಪಟೇಲರು: ರಾಯರೆ, ನಮ್ಮೂರವರದು ಇದು ಯಾವಾಗಲೂ ಇದ್ದದ್ದೇ. ಏನಾದರೂ ಮಾಡಿಕೊಳ್ಳುವದು. ಆಮೇಲೆ ಬಂದು ನನ್ನ ತಲೆ ತಿನ್ನುವದು. ನನಗಾದರೂ ಯಾಕೆ ಇವೆಲ್ಲಾ ಅಂತ ಎಷ್ಟೋ ಸಲ ನಿಮ್ಮ ಹತ್ತಿರ ಹೇಳಿಲ್ಲವೇ. ಈಗ ಮೊದಲಿನ ಹಾಗಲ್ಲ ನೋಡಿ. ಸ್ವಾತಂತ್ರ್ಯ ಬಂದಿದೆ ಈಗ. ನಮ್ಮ ಮಾತನ್ನು ಈ ಮಕ್ಕಳು ಕೇಳುವದಿಲ್ಲ. ಸರಕಾರವೂ ಮೊದಲಿನಂತಿಲ್ಲ ಬಿಡಿ. ನಮ್ಮ ಹಲ್ಲು ಕಿತ್ತಿದೆ. ಹೆಸರಿಗಷ್ಟೇ ಪೋಲೀಸ್ ಪಟೇಲರು ನಾವು. ಅತ್ತ ಊರಿನವರೂ ಮಾತು ಕೇಳುವದಿಲ್ಲ. ಇತ್ತ ಇಲಾಖೆಯವರೂ ಸಲಹೆ ಪರಿಗಣಿಸುವದಿಲ್ಲ. ಉಡಲಿಕ್ಕಿಲ್ಲ, ತೊಡಲಿಕ್ಕಿಲ್ಲ. ಆದರೂ ಅಲಂಕಾರಕ್ಕೆ ಈ ಹುದ್ದೆ. ಪೋಲೀಸ್ ಪಟೇಲ. ಸುತ್ತಾಡಲು ಬಿಟ್ಟ ದನ. ಆದರೆ ಹಗ್ಗ ಕಟ್ಟಿ ತಮ್ಮ ಮನೆಯ ಗೂಟಕ್ಕೆ ಬಿಗಿದಿದೆ ಇಲಾಖೆ.

ಪೋ: ನಿಮ್ಮ ಭಾಷಣ ಕಡೆಗೆ ಕೇಳೋಣ. ಮೊದಲು ವಿಷಯಕ್ಕೆ ಬನ್ನಿರಿ.

ಪ: ಇದು ನೋಡಿ. ಈ ಆಸಾಮಿ. ರಾಮಪ್ಪ ಅಂತ. ನಮ್ಮ ಒಕ್ಕಲು. ನಿಮ್ಮ ಹವಾಲ್ದಾರರು ಹಾಗೂ ಬರಮ ಇವನ ಮನೆಗೆ ಹೋಗಿದ್ದರಂತೆ.

ಫೋ: ಒಹೋ. ನಿಮ್ಮ ಏರಿಯಾದ ಹವಾಲದಾರರು ನಾರಾಯಣ ರಾವ್ ಅಂತ. ಇನ್ನೂ ಬರಲಿಲ್ಲ. ಈಗ ಬರಬಹುದು ಬಿಡಿ. ಆಮೇಲೆ ಮಾತನಾಡೋಣ.

ಪ: ನನಗೆ ಗೊತ್ತಿಲ್ಲವೇ ಅವರು. ಬಂದ ಎರಡೇ ತಿಂಗಳಲ್ಲಿ ತಮ್ಮ ಖದರ್ ತೋರಿಸಿದ್ದಾರೆ ಈ ಮಕ್ಕಳಿಗೆ. ಒಳ್ಳೆಯ ಜನ. ಕಾಯಿದೆ ಸರಿಯಾಗಿ ಅನುಷ್ಠಾನಕ್ಕೆ ಬರಬೇಕು ಅಂತ ಹಗಲಿರುಳು ಪ್ರಯತ್ನಿಸುತ್ತಾರೆ,ಪಾಪ. ಈ ನನ್ನ ಮಕ್ಕಳಿಗೆ ಅರ್ಥವಾಗಬೇಕಲ್ಲ ಅದೆಲ್ಲಾ.

ಪೋ: ಆಗಲಿ ಬಿಡಿ. ಇನ್ನು ಸುಧಾರಿಸಿಯಾರು ಜನ.

ಪ: ಆದರೆ ನೋಡಿ ಇವನ. ಇವನ ಮನೆಯಲ್ಲಿದ್ದ ಬಂದೂಕಿನ ತರಹದ ಒಂದು ಉಪಕರಣವನ್ನು ಹವಾಲದಾರರು ಜಪ್ತಿ ಮಾಡಿಕೊಂಡು ಬಂದಿದ್ದಾರಂತೆ. ಅದು ಬಂದೂಕು ಅಲ್ಲ ಅಂತ ಹೇಳಿದರೂ ಕೇಳಲಿಲ್ಲ ಅಂತ ಸುಳ್ಳೇ ಬೊಗಳುತ್ತಾನೆ ನನ್ನ ಹತ್ತಿರ. ಆಮೇಲೆ ಇಂದೇ ಸ್ಟೇಶನ್ನಿಗೆ ಬಂದು ಭೇಟಿಯಾಗು ಅಂತ ಹವಾಲದಾರರು ಹೇಳಿದ್ದಾರೆ ಅಂತಲೂ ಸೇರಿಸಿದ. ನನಗೆ ಇವತ್ತು ಒಂದು ಮದುವೆಗೆ ಹೋಗುವದಿತ್ತು. ಆದ್ದರಿಂದ ನೀನು ಇಂದು ಹೋಗಿ ಬಾ. ನಾಳೆ ಬೇಕಾದರೆ ನಾನೂ ಬರುತ್ತೇನೆ ಅಂತ ಹೇಳಿದೆ. ಆದರೂ ವರಾತ ಮಾಡಿದ.

ಪೋ: ನಾರಾಯಣರಾಯರು ಬರಲಿ. ಆಮೇಲೆ ಮಾತನಾಡೋಣ.

ಪ: ನನಗೆ ಸ್ವಲ್ಪ ಅವಸರವಿದೆ ರಾಯರೆ. ಮದುವೆಗೆ ಹೋಗುವದಿತ್ತು. ಕಡೆಯಲ್ಲಿ ಊಟಕ್ಕೆ ಅಂತ ಹೋದರೆ ಸರಿಯೆ ಹೇಳಿ?. ಇವನು ಜಪ್ತಿಯಾದ ಬಂದೂಕಿನ ಬಗ್ಗೆ ಒಂದು ಅರ್ಜಿಯನ್ನು ತಂದಿದ್ದಾನಂತೆ. ತಾನು ಕೊಡುತ್ತೇನೆ. ಧೈರ್ಯಕ್ಕೆ ನೀವು ಬನ್ನಿರಿ ಎಂದ. ಆಗಲಿ ಅಂತ ಅವನ ಜೊತೆಯಲ್ಲಿ ಬಂದೆ ಅಷ್ಟೇ. ನೀವು ಪಾಪ ಪುಣ್ಯ ಅಂತ ಏನೂ ನೋಡಬೇಡಿ. ಅದೆಲ್ಲಾ ಬೇಡ ಅಂದರೂ ಕೇಳಲಿಲ್ಲ. ಯಾವುದೋ ಹುಡುಗಾಟದ ಅಧಿಕಪ್ರಸಂಗಿ ಬರೆದು ಕೊಟ್ಟಿದ್ದಾನಂತೆ. ನಾನು ನೋಡಲೂ ಇಲ್ಲ. ಆದರೆ ನಿಮ್ಮಲ್ಲಿಗೆ ಬರುವ ಧೈರ್ಯ ಇಲ್ಲ ಅವನಿಗೆ. ‘ಬಾವಿಗೆ ಹಾರು’ ಅಂತ ಇವನನ್ನು ದೂಡಿದ್ದಾನೆ. ನಾವು ಬಿಡಲಿಕ್ಕೆ ಬರುತ್ತದೆಯೇ, ಹಿರಿಯರು?.

ಪೋ: ಅದೆಂತ ಅರ್ಜಿಯಂತೆ? ನೀವು ಸ್ವಲ್ಪ ತಡೆಯಿರಿ. ನೋಡೋಣ ಏನು ಬರೆದಿದ್ದಾನೆ ಅಂತ.

ಪ: ರಾಮಪ್ಪ ನನ್ನ ಮುಖವನ್ನೇನು ನೋಡುತ್ತೀಯೆ? ರಾಯರಿಗೆ ಕೊಡು ಅರ್ಜಿಯನ್ನು. ಆಮೇಲೆ ಅನುಭವಿಸು. ನನ್ನನ್ನು ಮತ್ತೆ ಕೇಳಬೇಡ.

ಅರ್ಜಿಯನ್ನು ರಾಮಪ್ಪ ಪೋಲೀಸ ಬರಮನಿಗೆ ಕೊಟ್ಟ. ಪೋಲೀಸ ಬರಮ ಅದನ್ನು ಪೋಜದಾರರಿಗೆ ದಾಟಿಸಿದ.
ಪೋಜದಾರರು ಅರ್ಜಿಯ ಮೇಲೆ ಕಣ್ಣು ಹಾಯಿಸಿದರು.
“‘
ರಾಮಪ್ಪ ಬಲೀಂದ್ರ ಗೌಡ
ಕೊಪ್ಪ, ಪೋ: ಮೂರೂರು
ತಾ: ಕುಮಟಾ ( ಉ.ಕ.)
ಇವನಿಂದ
ಮಾನ್ಯ ಪೋಜದಾರರು
ಪೋಲೀಸ್ ಸ್ಟೇಶನ್
ಕುಮಟಾ, (ಉ.ಕ)

ಮಾನ್ಯರೆ,

ವಿಷಯ: ಹವಾಲ್ದಾರರಿಂದ ಜಪ್ತಾದ ನನ್ನ ಉಪಕರಣದ ಕುರಿತು.

ನಿನ್ನೆ ತಾರೀಕು ೦೭.೦೯.೧೯೫೪, ಗುರುವಾರ ಮದ್ಯಾಹ್ನ ಮೇಲೆ ಸುಮಾರು ನಾಲ್ಕು ಘಂಟೆಯ ಸುಮಾರಿಗೆ ಮಾನ್ಯ ಹವಾಲದಾರರು ಹಾಗೂ ಫೋಲೀಸಿನವರು ನಮ್ಮ ಮನೆಗೆ ಬಂದು ನಾನು ಇಟ್ಟುಕೊಂಡಿದ್ದ ಬಂದೂಕಿನಂತಹ ಉಪಕರಣವನ್ನು ಜಪ್ತಿ ಮಾಡಿ ತಂದಿರುತ್ತಾರೆ.

ನಾನು ಯಾವುದೇ ರೀತಿಯ ಬಂದೂಕನ್ನು ಹೊಂದಿರುವದಿಲ್ಲ ಅಂತ ಪ್ರಮಾಣಮಾಡಿ ಹೇಳುತ್ತೇನೆ. ಹವಾಲದಾರರು ಬಲವಂತವಾಗಿ ನನ್ನಲ್ಲಿರುವ ಉಪಕರಣವನ್ನು ಬಂದೂಕು ಅಂತ ಸುಳ್ಳು ಆಪಾದನೆ ಹೊರಿಸಿ, ನಾನು ಎಷ್ಟು ವಿನಂತಿಸಿಕೊಂಡರೂ ಕೇಳದೆ, ತಂದಿರುತ್ತಾರೆ. ಒತ್ತಾಯದಿಂದ ಪಂಚನಾಮೆಗೆ, ಜಪ್ತಿಯಾಗಿದ್ದು ಬಂದೂಕು ಅಂತ ಹೇಳಿ ಅಕ್ಕ ಪಕ್ಕದವರಿಂದ ಸಹಿ ಮಾಡಿಸಿಕೊಂಡಿರುತ್ತಾರೆ.

ಮಂಗ ಹಾಗೂ ಕೋಡಗಳನ್ನು ಓಡಿಸಲು ಒಂದು ಬಂದೂಕಿನಂತಹ ಉಪಕರಣವನ್ನು ನಮ್ಮ ಊರಿನ ಆಚಾರಿಯಿಂದ ನಾನು ಮಾಡಿಸಿಕೊಂಡಿದ್ದು ಇತ್ತು. ನನ್ನದು ಅಂತ ತಿಳಿಯಲು ಬುಡದ ಬಲಬದಿಗೆ ‘ರಾ’ ಅಂತ ಕೆತ್ತಿದ್ದು ಇರುತ್ತದೆ. ಅದನ್ನು ಪಂಚನಾಮೆಯಲ್ಲಿಯೂ ಸೂಚಿಸಿರುತ್ತಾರೆ. ಜಪ್ತಿಯಾದ ಉಪಕರಣವನ್ನು ಕೂಲಂಕುಶವಾಗಿ ತಪಶೀಲು ನಡೆಸಿದಲ್ಲಿ ಇದು ತಮ್ಮ ಅವಗಾಹನೆಗೆ ಬರುತ್ತದೆ.

ಆದ್ದರಿಂದ ತಾವು ಮೆಹರ್ ಬಾನಿನಿಂದ ಜಪ್ತಿಯಾದ ನನ್ನ ಉಪಕರಣವನ್ನು ನನಗೆ ಕೊಡಬೇಕೆಂದು ವಿನಮ್ರನಾಗಿ ಬೇಡಿಕೊಳ್ಳುತ್ತೇನೆ.

ಇತಿ ತಮ್ಮ ಆಜ್ಞಾನುವರ್ತಿ
( )
ಈ.ಹೆ.ಗು. ರಾಮಪ್ಪ ಬಲೀಂದ್ರ ಗೌಡನದು.
ಕುಮಟಾ.
ತಾ:೦೮.೦೯.೧೦೫೪. “

ಅಷ್ಟರಲ್ಲಿ ಹವಾಲದಾರ ನಾರಾಯಣರಾಯರು ಬಂದರು. ಪೋಜದಾರರು, ಹವಾಲದಾರರಿಗೆ ರಾಮಪ್ಪನ ಅರ್ಜಿಯನ್ನು ಕೊಟ್ಟು ತಪಶೀಲು ಮಾಡಲು ಹೇಳಿದರು. ಪಟೇಲರು ಅರ್ಜಿಯ ಇನ್ನೊಂದು ಕಾಪಿಗೆ ಸ್ವೀಕೃತಿ ರುಜು ಹಾಕಿಸಿ ರಾಮಪ್ಪನಿಗೆ ಕೊಡಿಸಿ, ತನಗೆ ಅರ್ಜೆಂಟ್ ಹೋಗಬೇಕು ಅಂತ ಹೇಳಿ ಪಂಚೆ ಸರಿಮಾಡಿಕೊಳ್ಳುತ್ತಾ, ನಾಳೆ ಬರುತ್ತೇನೆ ಎನ್ನುತ್ತಾ ಹೊರಟೇ ಬಿಟ್ಟರು. ರಾಮಪ್ಪ ನಾನೂ ಹೆಗಡೇರ ಜೊತೆ ನಾಳೆಗೆ ಬಂದು ಉಪಕರಣ ಒಯ್ಯುತ್ತೇನೆ ಅಂತ ಹೇಳಿ ಪಟೇಲರ ಹಿಂದೆಯೇ ಹೊರಟ. ಪೋಜದಾರರು ಹವಾಲದಾರ ನಾರಾಯಣ ರಾಯರಲ್ಲಿ ಅರ್ಜಿಯ ಕುರಿತು ಹೇಳಿಕೆ ಕೊಡಲು ಸೂಚಿಸಿದರು.

*******************

3 thoughts on “ಕಳ್ಳ ಬಂದೂಕು

  1. ವಾಸ್ತವಿಕೆಯ ಸುಂದರ ನಿರೂಪಣೆ,ಘಟನೆ ಕಣ್ಣ ಮುಂದೆ ನಡೆದಂತ ಅನುಭವ.

Leave a Reply

Back To Top