ಪದಗಳು

ಲೇಖನ

ಲಾವಣಿಪದ /ಗೀಗೀಪದ

ಶಾಲಿನಿ ಆರ್.

ಜನಪದ ಕಾವ್ಯದ ಕಥಾತ್ಮಕ ಭಾಗವನ್ನು ಕುರಿತದ್ದಾಗಿದೆ ಲಾವಣಿ/ ಗೀಗೀಪದಗಳು. ಲಾವಣಿ/ ಗೀಗೀಪದಗಳು ಮುಖ್ಯವಾಗಿ ಒಂದು ಹಾಡ್ಗತೆ. “ಕಥೆ ಹೇಳುವ ಗೀತೆ ಅಥವಾ ಗೀತೆಯಲ್ಲಿ ಹೇಳಿದ ಕಥೆ”. ಇವು ಕ್ರಿಯೆಯ ಮೇಲೆ ಹೆಚ್ಚು ಒತ್ತು ನೀಡುತ್ತದೆ. ಕ್ರಿಯೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಕ್ರಮವನ್ನು ಅನುಸರಿಸುತ್ತದೆ. ಕ್ರಿಯೆ ಸಾಮಾನ್ಯವಾಗಿ ವಸ್ತುವಿನ ಸ್ವರೂಪದ್ದಾಗಿರುತ್ತದೆ. ಹಾಗೆಯೇ, ಇವುಗಳಲ್ಲಿ ಸರಳತೆ ಸಹ ಒಂದು ಅಂಶವಾಗಿದೆ. ಈ ಪದಗಳಲ್ಲಿ/ ಹಾಡುಗಾರಿಕೆಯಲ್ಲಿ ಏಕ ಘಟನೆಯ ಮೇಲೆ ನಿಂತಿದೆ ಎಂಬುದು ಇನ್ನೊಂದು ಲಕ್ಷಣ. ಒಂದೇ ಘಟನೆಯ ಮೇಲೆ ನಡೆಯುವ ಕಥನ ಗೀತೆಗೆ ಮಾತ್ರ ಇದನ್ನು ಅನ್ವಯಿಸಬಹುದು. ಆದರೆ ದೀರ್ಘಕಾವ್ಯಗಳಿಗೆ ಇದನ್ನು ಅನ್ವಯಿಸಲಾಗುವುದಿಲ್ಲ.

ಆಶುರಚನೆ ಮತ್ತು ಸಂಪ್ರದಾಯಗಳು ಎರಡು ಸೂತ್ರಗಳು.

ಲಾವಣಿ:-

ಲಾವಣಿ ಸಂಪ್ರದಾಯವು ಉತ್ತರ ಕರ್ನಾಟಕದಲ್ಲಿ ವಿಶಿಷ್ಟವಾಗಿ ಕಂಡು ಬರುತ್ತದೆ. ಉತ್ತರ ಕರ್ನಾಟಕದ ಭಾಗಗಳಾದ ಬೆಳಗಾವಿ, ಬಿಜಾಪುರ, ಕಲಬುರಗಿ (ಗುಲ್ಬರ್ಗಾ), ಬೀದರ್, ರಾಯಚೂರು, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲಿ ಪ್ರಾದೇಶಿಕ ವೆತ್ಯಾಸಗಳೊಂದಿಗೆ ಈ ಸಂಪ್ರದಾಯ ಅಸ್ತಿತ್ವದಲ್ಲಿದೆ. ದಕ್ಷಿಣ ಕರ್ನಾಟಕದ ಕೆಲವು ಭಾಗದಲ್ಲೂ ಕೂಡ ಲಾವಣಿ ಎಂಬ ಒಂದು ಪ್ರಕಾರವಿದ್ದರೂ ಉತ್ತರದಷ್ಟೂ ವೈವಿದ್ಯ ಅದಕ್ಕಿಲ್ಲ.

     ಸಾಂಪ್ರದಾಯಿಕವಾಗಿ ಲಾವಣಿಗಳನ್ನು ಬಯಲು ಲಾವಣಿ ಮತ್ತು ಮೇಳ ಲಾವಣಿಯೆಂದೂ ಕರೆಯಲಾಗುತ್ತದೆ. ಬಯಲು ಲಾವಣಿಯಲ್ಲಿ ಹೆಸರೇ ಹೇಳುವಂತೆ ಒಬ್ಬನೇ ಲಾವಣಿಯನ್ನ ಹೇಳುತ್ತಾನೆ. ಅಂತಾ ಸಂದರ್ಭ ಈಗಲೂ ಇದೆ. ಆದರೆ ಮೇಳ ಲಾವಣಿಯಲ್ಲಿ ಡಪ್ಪು, ತುಂತುಣಿ ತಾಳಗಳೊಂದಿಗೆ ಹಾಡಲಾಗುತ್ತದೆ.

        ಇದು ಉತ್ತರ ಭಾಗದ ಒಂದು ಜನಪ್ರಿಯ ಸಂಪ್ರದಾಯ ಲಾವಣಿಗಳನ್ನು ಗೀಗಿ ಡಿಪ್ಪಿನ ಹಾಡು, ಹಾಡಕ್ಕಿ, ಶಾಯರಿ, ಹರದೇಶಿ – ನಾಗೇಶಿ, ಕಲ್ಗಿ – ತುರಾಯಿ, ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಅವುಗಳಲ್ಲಿ ಹರದೇಶಿ -ನಾಗೇಶಿ ಸಂಪ್ರದಾಯವನ್ನೆ ಕಲ್ಲಿ ತುರಾ ಸವಾಲ್ – ಜವಾಬು ಪದಗಳು ಎಂದು ಕರೆಯಲಾಗುತ್ತದೆ. ಕನ್ನಡದ ಲಾವಣಿಯ ಇತಿಹಾಸವನ್ನು ಮರಾಠಿಯ ಪೇಶ್ವೆಯ ಕಾಲಕ್ಕೆ ಕೊಂಡೊಯ್ಯೊಲಾಗುತ್ತದೆ. ಪೇಶ್ವೆಯರ ಕಾಲದಲ್ಲಿ ಸೈನಿಕರನ್ನು ಹುರಿದುಂಬಿಸಲು ಪೊವಾಡಗಳೆಂಬ ವೀರರ ಕಥನ ಕವನಗಳೇ ಆಗಿದೆ. ನಮ್ಮಲ್ಲಿಯೂ ಸಂಗೊಳ್ಳಿರಾಯಣ್ಣ, ಕಿತ್ತೂರು ಚೆನ್ನಮ್ಮ, ಸರ್ಜಪ್ಪ ನಾಯಕ ಮುಂತಾದ ಅನೇಕ ಲಾವಣಿಗಳು ಈ ಮಾದರಿಯವು ಎಂದು ಮೇಲ್ಮಟ್ಟಕ್ಕೆ ಒಪ್ಪಿಕೊಳ್ಳಬಹುದಾದರೂ, ಮರಾಠಿಯ ಪೋವಾಡಗಳು ಕನ್ನಡದಲ್ಲಿರುವಂತೆ ಜಾನಪದೀಯ ರಚನೆಗಳು.

       ಲಾವಣಿ ಹಾಡುಗಳು ಬಹಳ ವಿಸ್ತಾರವಾದವುಗಳಲ್ಲಿ ಮಹಾಕಾವ್ಯದ ವ್ಯಾಪ್ತಿ ಇದಕ್ಕೆ ಹೊರತಾದುದು. ಹೆಚ್ಚೆಂದರೆ ಒಂದು ಗಂಟೆಯ ಅವಧಿಯಲ್ಲಿ ಒಂದು ಸಖಿ ಮುಖ್ಯ. ಹಾಡು ಹಾಗೂ ಖ್ಯಾಲಿಯನ್ನು ಬಳಸಬೇಕಾಗುತ್ತದೆ. ನಾಡ ವಿಡಂಬನೆ ಹಾಸ್ಯಮಯ ಪ್ರಸಂಗಗಳು ಲಾವಣಿಯಲ್ಲಿ ಎದ್ದು ಕಾಣುವ ಅಂಶಗಳು. ಮುಖ್ಯವಾಗಿ ಶೃಂಗಾರ ಮತ್ತು ವೀರತೆಗೆ ಹೆಚ್ಚು ಅವಕಾಶವಿರುತ್ತದೆ. ಅದು ಸವಾಲ್ ಜವಾಬ್ ವಿಚಾರದಲ್ಲಿ ಅದರ ಕಾಲವನ್ನು ಒಂದು ಗಂಟೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅದು ಸಂದರ್ಭಾನುಸಾರ ಬೆಳೆಯುತ್ತದೆ. ಲಾವಣಿ ಸಾಹಿತ್ಯ ಪರಂಪರೆಯಲ್ಲಿ ಬೀಬೀ ಇಂಗಳಗಿ ಭಾಗದ ಲಾವಣಿಕಾರರು, ತೇರದಾಳ ಭಾಗದ ಲಾವಣಿಕಾರರು, ಹಲಕುಂದ ಭಾಗದ ಲಾವಣಿಕಾರರು ಎಂಬ ಪ್ರದೇಶಿಕ ವಿವರಗಳನ್ನು ಗಮನಿಸುವುದು ಸೂಕ್ತವೆನಿಸುತ್ತದೆ.

ಗೀಗೀಪದ :-

        ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿರುವ ಗೀಯ ಗೀಯ ಗೀಗೀ ಹರೇ ಗೀಯ ಗಾ ಎಂಬ ಪಲ್ಲವಿಯೊಂದಿಗೆ ಹಾಡುವ ಒಂದು ಜನಪದ ಗೀತಸಂಪ್ರದಾಯ.

         ಈ ಗೀಗೀ ಪದದ ಜನನವಾದುದು 1875ರಲ್ಲಿ. ಮೊದಲಿನಿಂದಲೂ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ಮಾಯಾಮ್ಮನ ಜಾತ್ರೆಯಲ್ಲಿ ಕನ್ನಡ ಲಾವಣಿಕಾರರೂ ಮರಾಠಿ ಲಾವಣಿಕಾರರೂ ಕೂಡಿ ವಾದದ ಲಾವಣಿಗಳನ್ನು ಹಾಡುತ್ತಿದ್ದರು. 1875ರ ಮಾಯಮ್ಮನ ಜಾತ್ರೆಯಲ್ಲಿ ಮರಾಠಿ ಲಾವಣಿಕಾರರು ಡಪ್ಪು ಉಪಯೋಗಿಸಿ ಲಾವಣಿ ಹಾಡಿದರು. ಅದೇ ದಿನ ರಾತ್ರಿ ಕನ್ನಡಿಗರು ಡಪ್ಪು, ತುಂತುಣಿ, ತಾಳ ಬಾರಿಸಿ ಮೇಳ ಮಾಡಿದರು. ತುಂತುಣಿ, ತಾಳ ಬಾರಿಸುವವರು ಗೀಗೀ ದನಿ ಎಳೆದರು. ಈ ರಚನೆ ಮಾಡಿದವರಲ್ಲಿ ತೇರದಾಳ ಅಣ್ಣು ಯಂಕಾರಾಮ ಮುಖ್ಯನಾದವ. ಇವನೇ ಗೀಗೀ ಶ್ರುತಿ ಹಾಕಿ, ಶ್ರುತಿದೇವ (ಗಣಪತಿ) ಶ್ರುತಿದೇವಿ (ಸರಸ್ವತಿ) ಎಂದು ಹಾಡಿ ಗೀಗೀ ಪದಗಳ ಜನಕನೆಂದು ಕರೆಯಿಸಿಕೊಂಡ. ಅನಂತರ ಚಿಂಚಲಿ ಜಾತ್ರೆಯಲ್ಲಿ ಹಾಡುಗಳನ್ನು ಕೇಳಲು ಜನ ಕೂಡುವ ಸ್ಥಳ (ನಾಕಾಕಟ್ಟೆ) ಗೀಗೀಕಟ್ಟೆ ಎಂದು ಹೆಸರಾಯಿತು. ಗೀಗೀ ಮೇಳದವರಿಗೆ ಚಿಂಚಲಿ ಮೂಲಸ್ಥಳವಾಯಿತು. ಕನ್ನಡ ಲಾವಣಿಯೇ ಗೀಗೀ ಪದವಾಗಿ ಮಾರ್ಪಟ್ಟಿತು. ಅನಂತರ ಕನ್ನಡ ಗೀಗೀ ಪದ ಮರಾಠಿ ಜೀಜೀ ಪದಗಳ ಹುಟ್ಟಿಗೆ ಕಾರಣವಾಯಿತು.

ಗೀಗೀ ಪದಗಳಲ್ಲಿ ಮುಖ್ಯ ಗೀಗೀ ಹಾಡುಗಾರ ‘ಡಪ್ಪಿಗೆ’ ಗತ್ತಿನ ಕಡಿತ (ಪೆಟ್ಟು) ಹಾಕಿ ಪದ ಹಾಡುತ್ತಾನೆ. ಅವನ ಹಿಂದೆ ತುಂತುಣಿ ಹಾಗೂ ತಾಳ ಹಿಡಿದ ಇಬ್ಬರು ತಾಳ ಮತ್ತು ಲಯಗಳನ್ನೊಳಗೊಂಡ ಗೀಗೀ ದನಿ ಬೀರುತ್ತಾರೆ. ಜನಾಕರ್ಷಣೆಗಾಗಿ ರಮ್ಯವಾಗಿ ಡಪ್ಪು, ತುಂತುಣಿ ಮತ್ತು ತಾಳನುಡಿಸುತ್ತಾರೆ. ಡಪ್ಪು ವರ್ತುಳಾಕಾರದ 5-7.5ಸೆಂಮೀ. ದಪ್ಪವಾದ, 1.20-1.5ಮೀ ಪರಿಘವಿರುವ ಗಾಲಿಗೆ ಮತ್ತು ಅದಕ್ಕಿಂತ ಸಣ್ಣದಾದ ಕಬ್ಬಿಣದ ವರ್ತುಲಕ್ಕೆ ಸೇರಿದಂತೆ ಆಡಿನ ಚರ್ಮದಿಂದ ಹಲಗೆ ತಯಾರಿಸಿ ಎಡಗೈಯಲ್ಲಿ ಹಿಡಿದು ಬಲಗೈಯಿಂದ ಹದರು ಹಚ್ಚಿ ಬೆರಳು ಆಡಿಸಿ ಬಡಿದು ನಾದ ಹೊರಡಿಸುವ ವಾದ್ಯ. ತುಂತುಣಿ ಮರದ ತುಂಡಿನ 2.5ಸೆಂ.ಮೀ ಸಿಲಿಂಡರಿನಾಕಾರದ್ದಾಗಿದ್ದು, ಹಿಂಬದಿಗೆ ಮೇಕೆಯ ಆಡಿನ ಚರ್ಮವನ್ನು ಬಿಗಿದು ಒಂದು 90ಸೆಂಮೀ. ಬಿದರಿನ ತುಂಡನ್ನು ಸಿಲಿಂಡರಿಗೆ ಜೋಡಿಸಿ, ಅದರ ತುದಿಯಲ್ಲಿ ಒಂದು ಬೆಣೆಯನ್ನು ಕೂರಿಸಿ ತಂತಿಯನ್ನು ಬೆಣೆಗೂ ಹಿಂಬದಿಯ ಚರ್ಮದ ಮಧ್ಯಕ್ಕೂ ಜೋಡಿಸಿ ತಯಾರಿಸಿದ, ಬಲಗೈಯಲ್ಲಿ ಹಿಡಿದ ಕಡ್ಡಿಯಿಂದ ತಂತಿಯನ್ನು ಮಿಡಿದು ನಾದ ಹೊಮ್ಮಿಸುವ ವಾದ್ಯ. ಗೀಗೀ ಮೇಳದವರಿಗೆ ಚಾಲು (ಆರಂಭ) ನುಡಿತ, ಏರು ನುಡಿತಗಳೂ ಮುಖ್ಯ. ಇಳುವಿನಲ್ಲಿ ಸೌಮ್ಯ ಸಂಗೀತವಿರುತ್ತದೆ. ಒಮ್ಮೇಳವಾಗಿ (ಸಂಗಡಿಗರು) ಹಾಡುವುದು, ಬಾರಿಸುವುದು ಸಾಗುತ್ತದೆ

          ಗೀಗೀ ಮೇಳದಲ್ಲಿ ಮೊದಲಿಗೆ ಹರದೇಶಿ (ತುರಾಯಿ) ಗೀಗೀ ಮೇಳ, ನಾಗೇಶಿ (ಕಲ್ಕಿ) ಗೀಗೀ ಮೇಳ ಎಂದು ಗಂಡು-ಹೆಣ್ಣಿನ ವಾದದ ಮೇಳಗಳು ಪ್ರಾರಂಭವಾದವು. ಗಂಡಸರ ಪಂಗಡ ಪುರುಷನನ್ನು (ಶಿವ) ಹೆಚ್ಚುಮಾಡಿ ಹಾಡುವುದು, ಹೆಂಗಸರ ಪಂಗಡ ಸ್ತ್ರೀಯನ್ನು (ಶಕ್ತಿ) ಹೆಚ್ಚುಮಾಡಿ ಹಾಡುವುದು ಸಂಪ್ರದಾಯವಾಯಿತು. 1925ರಿಂದ ಈಚೆಗೆ ಗೀಗೀ ಮೇಳದವರು ಲೌಕಿಕ ಹಾಡುಗಾರರಾಗಿ ಮಾರ್ಪಟ್ಟರು. ರಾಷ್ಟ್ರೀಯ ಗೀಗೀಮೇಳಗಳು ಹುಟ್ಟಿಕೊಂಡವು. ಭಾರತದೇಶ, ದೇಶದ ಜನ, ದೇಶದ ಸ್ಥಿತಿ, ಸಂಸ್ಕೃತಿ, ರೀತಿ, ನೀತಿ ಇತ್ಯಾದಿ ಕುರಿತು ಗೀಗೀ ಪದಗಳು ಪ್ರಾರಂಭವಾದವು. ಇಂಥ ಗೀಗೀಮೇಳಗಳಲ್ಲಿ ಹುಲಕುಂದ ಗೀಗೀ ಮೇಳ ಮುಖ್ಯವಾದ್ದು. ಹುಲಕುಂದದ ಭೀಮಸಿಂಗ ಕವಿ, ಶಿವಲಿಂಗ, ಪಾಂಡುರಂಗ, ಚನಬಸು, ಕಂದಭೀಮಸಿಂಗ ಇವರು ಗೀಗೀ ಗಂಗೋತ್ರಿಯನ್ನೇ ಹರಿಸಿದರು. ತಿಗಡೊಳ್ಳಿ ಗೀಗೀಮೇಳ, ಹೊಸೂರು ಗೀಗೀ ಮೇಳ, ಹೊಸಕೋಟೆ ತಮ್ಮಣ್ಣನ ಗೀಗೀಮೇಳ, ಗೋಕಾಂವಿ ಗೀಗೀ ಮೇಳ, ಬಿದರೆ ಗೀಗೀ ಮೇಳ, ರಾಯಚೂರು ಗೀಗೀ ಮೇಳ, ಬೆಳಗಾಂವಿ ಗೀಗೀ ಮೇಳ, ಬಿಜಾಪುರ ಗೀಗೀಮೇಳ, ಕಲಬುರ್ಗಿ ಗೀಗೀಮೇಳ, ಚಿತ್ರದುರ್ಗ ಗೀಗೀಮೇಳ, ಬೆಂಗಳೂರು ಗೀಗೀಮೇಳ, ಇತ್ಯಾದಿ ಮೇಳಗಳು ಹುಟ್ಟಿಕೊಂಡು ರಾಷ್ಟ್ರದ ಸ್ವಾತಂತ್ರ್ಯಹೋರಾಟ ಕಾಲದಲ್ಲಿ ಜನಜಾಗೃತಿಯನ್ನುಂಟುಮಾಡಿದವು. ಜ್ಞಾನಪ್ರಸಾರಕಾರ್ಯ ಕೈಗೊಂಡವು. ಇಂದು ಕರ್ನಾಟಕದಲ್ಲಿ ಎರಡು ನೂರಕ್ಕೂ ಹೆಚ್ಚು ಗೀಗೀ ಮೇಳಗಳಿವೆಯೆಂದು ತಿಳಿದುಬರುತ್ತದೆ.

         ಗೀಗೀ ಪದದ ಹಾಡುಗಾರರು ಸ್ತೋತ್ರ ಪದಗಳು, ಪೌರಾಣಿಕ ಪದಗಳು, ಐತಿಹಾಸಿಕ ಪದಗಳು, ಚಾರಿತ್ರಿಕ ಪದಗಳು, ಆರ್ಥಿಕ ಪದಗಳು, ಸಾಮಾಜಿಕ ಪದಗಳು, ನೈತಿಕ ಪದಗಳು, ಹಾಸ್ಯದ ಪದಗಳು, ಒಗಟಿನ ಪದಗಳು ಇತ್ಯಾದಿಗಳನ್ನು ಹಾಡುತ್ತಾರೆ. ಪದಗಳ ಮುಕ್ತಾಯದಲ್ಲಿ ಹಾಡು ರಚಿಸಿದ ಕವಿಯ ಊರು ಹೆಸರುಗಳಿರುತ್ತವೆ. ಗೀಗೀ ಪದಗಳು ಜನಮನವನ್ನು ತಿದ್ದುವ, ಜ್ಞಾನ ಹೆಚ್ಚಿಸುವ, ನೀತಿ ತಿಳಿಸುವ, ವೈಚಾರಿಕ ಜನಪದ ಪರಂಪರೆಯ ಗೀತೆಗಳಾಗಿವೆ. ಈ ಪದಗಳಲ್ಲಿ ಜಾನಪದ ಶಬ್ದಸಂಪತ್ತು ಬಹುವಾಗಿವೆ. ಉತ್ತರ ಕರ್ನಾಟಕದಲ್ಲಿ ಗೀಗೀ ಮೇಳ ಕಟ್ಟಿಕೊಂಡು ಗೀಗೀ ಪದ ಹಾಡುವವರು ಹೆಚ್ಚಾಗಿ ಮಹಿಳೆಯರು .ಪಂಗಡದಲ್ಲಿ ಒಬ್ಬರು ಮುಮ್ಮೇಳ ಹಾಡುಗಾರ್ತಿಯೂ ಹಿಮ್ಮೇಳಕ್ಕೆ ಈರ್ವರು ಪುರುಷರೂ ಇರುತ್ತಾರೆ. ಈ ಕಲೆ ಅವರ ಹೆಮ್ಮೆಯ ಪರಂಪರೆಯಾಗಿದೆ. ಹಾಡುಗಾರರು ತಮಗೆ ಸುಂದರವಾಗಿ ಕಾಣುವ ಇಷ್ಟವಾದ ಉಡುಗೆ ತೊಡುಗೆಗಳನ್ನು ಧರಿಸುತ್ತಾರೆ…

(ಸಂಗ್ರಹ)


ಗೀಗೀ ಪದ

ಬಂದಾರ ಬರ್ರಿ ತಂದೀನಿ ಕಥೆಯನ್ನ
ಕಿವಿಗೊಟ್ಟು ಕೇಳ್ರಿ ಮಾತಾ, ಮರೆತ, ನೀವಾ ಮಾತಾ ಮರೆತಾss
ಗೀಯ ಗೀಯಾ ಗಾ ಗೀಯ ಗೀಯಾ||

ಚೀನಾಕ ಹುಟ್ಟಿ ವಿಶ್ವವನ್ನೆ ಮೆಟ್ಟಿ ನಿಂತಾ,
ಬಣ್ಣದ್ಬದುಕು ಮಣ್ಣಾಗಿ ಹೋದ್ಹಂತ,
ಕಂತಿ ಕುಂತಿ ಕನಸೆಲ್ಲ ಕದಡಿದ್ಹಾಂಗ ನೀರಾಗ,
ನಾ ನೀ ಅನ್ನೊ ಸೊಕ್ಕಿನ ಮಂದೀಗಾ,
ಮಿಗಿಲೀನ ಬಾಳಪಾಠ ಕಲಿಸಿದಂತಾ,
ಕೊರೋನಾ  ಕಥಿಯನ್ನಾss,ಅರೇ!
ಗೀಯ ಗೀಯಾ ಗಾಗಿಯ ಗೀಯಾ…||೧||

ಮುಟಿಗಿವಳಗ ಬಾಳ್ ಐತಿ ಮೂರಾದಿನದಾಗ ನಿಂತೈತಿ
ಸಾವಿನ ಮುಂದ ಸಣ್ಣವರು ನಾವೆಲ್ಲ,
ಮನೆ ಮಾರು ತೊರೆದ ಮಕ್ಕಳನ್ನ
ಮರಳಿ ಮನೆಗೆ ಸೇರಿಸಿ,
ಇರೋದ್ರಾಗ ನೆಮ್ಮದಿಯಾಗಿರಿಯಂತಾ, ಹೇಳಿದ ಕೊರೋನಾ ಕಥಿಯನ್ನಾss ಅರೆ! ಗೀಯ ಗೀಯಾ ಗಾಗಿಯ ಗೀಯಾ…||೨||

ಬಣ್ಣದ ಬದುಕು ಬಯಲಿಗಾತು
ಸುಣ್ಣದ ಬಾಳು ಸವಾಲಾಯ್ತು
ಮೇಲು ಕೀಳು ಬಡವ ಬಲ್ಲಿದ
ಅಂಬೋ ಮಾತು ಬಲಿಯಾಯ್ತು,
ನಾವೆಲ್ಲ ಒಂದೆಂಬ,ಮಾನವೀಯತೆ
ಹರಿಸಿ, ಮನುಕುಲಕ ನಾವ್ಯರಂತ,
ಹೇಳಿದ ಕೊರೋನಾ ಕಥಿಯನ್ನಾss
ಅರೆ! ಗೀಯ ಗೀಯಾ ಗಾಗಿಯ ಗೀಯಾ||೩||

ತಿಂದು ತೇಗಿದ ಮಂದಿಗೆ ಅರೆಹೊಟ್ಟೆ ಮಾಡಿ, ದುಡ್ಡೇ ದೊಡ್ಡಪ್ಪನಲ್ಲಾ,
ಅತಿಯಾದ ಜೀವನದ್ಮತಿಗೆ
ಅವನತಿಯೇ ಸೂತ್ರವಿದಂತ,
ಮುಖಕೆ ನಿಜದ ಮುಖ್ವಾಡ ಹಾಕಿ
ದೇಹ ಮನಸ್ಸು ಶುದ್ದ ಮಾಡೋ ,
ಸರಳಾss ಸಮ್ಮಾನ ಸ್ಯಾನಿಟೈಸರ್ ಹಾಕಿದಂತಾss
ಕೊರೋನಾ ಕಥಿಯನ್ನಾss
ಅರೆ ಗೀಯ ಗೀಯ ಗಾಗಿಯ ಗೀಯಾ
||೪||

ಕಹಿಸತ್ಯ ಆದ್ರೂನು ಸಿಹಿಯಾಗಿ ಉಣಬೇಕ್ರಿ
ಜೀವದಾಗ ಏನೈತಿ,ಎನ್ ಕಟಕೊಂಡು
ಸಾಯೊದೈತಿ ,ನಂದಾs ಎಲ್ಲ ಅಂಬೋ ಮಾತು ಸುಳ್ಳೈತಿ, ಸರಳ ಸತ್ಯ ತಿಳಿರಿ,
ನಂಬಿಕೇನೆ ಜೀವನದ ಜೀವಾಳಂತ ಬಾಳ ಗೆಲಿರೀ, ಹೇಳಿದ ಕೊರೋನಾ ಕಥಿಯನ್ನಾsss…||೫||

ಶಾರು

*******************************************************

One thought on “ಪದಗಳು

Leave a Reply

Back To Top