ಅಂಕಣ ಬರಹ

.

ರಾಮಕೃಷ್ಣ ಗುಂದಿ ಅವರ ಆತ್ಮಕಥೆ18

ಆತ್ಮಾನುಸಂಧಾನ

ಆಡುಂಬೊಲದಿಂದ ಅನ್ನದೇಗುಲಕ್ಕೆ!

ನಾಡು ಮಾಸ್ಕೇರಿಯಲ್ಲಿ ಕಳೆದ ಪ್ರಾಥಮಿಕ ಶಿಕ್ಷಣದ ಕಾಲಾವಧಿ ಹಲವು ಬಗೆಯ ಜೀವನಾನುಭವಗಳಿಗೆ ಕಾರಣವಾಯಿತು. ಕೇರಿಯ ಯಾವ ಮನೆಯಲ್ಲಿ ಯಾರೂ ಹೊಟ್ಟೆ ತುಂಬ ಉಂಡೆವೆಂಬ ಸಂತೃಪ್ತಿಯನ್ನು ಕಾಣದಿದ್ದರೂ ಅಪರಿಮಿತವಾದ ಜೀವನೋತ್ಸಾಹಕ್ಕೆ ಕೊರತೆಯೆಂಬುದೇ ಇರಲಿಲ್ಲ. ಅಸ್ಪ್ರಶ್ಯತೆಯ ಬಗ್ಗಡವೊಂದು ಜಾತಿಗೇ ಅಂಟಿಕೊಂಡಿದ್ದರೂ ಅದನ್ನು ಅಷ್ಟೊಂದು ಗಂಭೀರವಾಗಿ ನಾವೆಂದೂ ಪರಿಗಣಿಸಲಿಲ್ಲ. ಊರಿನ ದೇವಾಲಯಗಳಿಗೆ ಹೋದರೆ ಕಂಪೌಂಡಿನ ಆಚೆಯೇ ನಮ್ಮ ನೆಲೆಯೆಂಬ ಅರಿವು ಮಕ್ಕಳಾದ ನಮಗೂ ಇತ್ತು. ಚಹಾದಂಗಡಿಗಳಲ್ಲಿ ಬೇಲಿಯ ಗೂಟಕ್ಕೆ ಸಿಗಿಸಿಟ್ಟ ಗ್ಲಾಸುಗಳನ್ನು ನಾವೇ ತೊಳೆದುಕೊಂಡು ಮೇಲಿಂದ ಹೊಯ್ಯುವ ಚಹಾ ಕುಡಿಯುವುದು ನಮಗೆ ಸಹಜ ಅಭ್ಯಾಸವಾಗಿತ್ತು. ಕಿರಾಣಿ ಅಂಗಡಿಗಳಲ್ಲೂ ಬೇಕಾದ ಸಾಮಾನು ಪಡೆಯಲು ಮೇಲ್ಜಾತಿಯ ಗ್ರಾಹಕರಿದ್ದರೆ ಅವರಿಂದ ಮಾರು ದೂರದ ಅಂತರವಿಟ್ಟುಕೊಂಡೇ ನಮಗೆ ಬೇಕಾದ ವಸ್ತುಗಳನ್ನು ಕೊಂಡು ಬರುವುದು ನಮಗೆ ಸಹಜ ರೂಢಿಯಾಗಿತ್ತು.

ನಮ್ಮನ್ನು ಎಲ್ಲರಿಗಿಂತ ಭಿನ್ನವಾಗಿ ಪ್ರತ್ಯೇಕವಾಗಿ ಸಮಾಜವು ಪರಿಗಣಿಸುತ್ತದೆ ಎಂಬ ಅರಿವೇ ಮೂಡದ ಅಪ್ರಬುದ್ಧ ವಯಸ್ಸಿನ ಹಂತವದು. ಇದೊಂದು ಸಹಜ ಸಾಮಾಜಿಕ ಕ್ರಿಯೆ ಎಂದು ಒಪ್ಪಿಕೊಂಡಿರುವುದರಿಂದ ನಾವು ಬಹುಶಃ ಆ ದಿನಗಳಲ್ಲಿ ಯಾವುದನ್ನೂ ಪ್ರಶ್ನಿಸದೇ ನಿರಾಳವಾಗಿದ್ದುದೇ ಬಾಲ್ಯದ ಬದುಕು ಅಷ್ಟೊಂದು ಉಲ್ಲಾಸದಾಯಕವಾಗಿಯೇ ಕಳೆದು ಹೋಯಿತು.

ಸಮಾನ ವಯಸ್ಸಿನ ನಾರಾಯಣ ವೆಂಕಣ್ಣ, ನಾರಾಯಣ ಮಾಣಿ, ಹೊನ್ನಪ್ಪ ವೆಂಕಣ್ಣ, ಗಣಪತಿ ಬುದ್ದು, ಕೃಷ್ಣ ಮಾಣಿ, ನಾನು ಮತ್ತು ನನ್ನ ತಮ್ಮ ನಾಗೇಶ ಎಲ್ಲರೂ ಸೇರಿ ಕಷ್ಟ ಸುಖಗಳನ್ನು ಹಂಚಿಕೊಂಡೇ ಬೆಳೆದೆವು. ಕೇರಿಯ ಎಲ್ಲರ ಮನೆಗಳಲ್ಲಿಯೂ ಕ್ಷೀಣವಾದ ಹಸಿವಿನ ಆಕ್ರಂದನವೊಂದು ಸಹಜವೆಂಬಂತೆ ನೆಲೆಸಿತ್ತು. ಹಾಗಾಗಿಯೇ ಬಹುಶಃ ನಮ್ಮ ಗೆಳೆಯರ ಬಳಗ ನಿತ್ಯವೂ ಹೊರಗೆ ಏನನ್ನಾದರೂ ತಿಂದು ಖಾಲಿ ಹೊಟ್ಟಗೆ ಕೆಲಸ ಕೊಡುವ ತವಕದಲ್ಲಿಯೇ ಇರುತ್ತಿತ್ತು.

ಬೆಳೆದು ನಿಂತ ಯಾರದೋ ಶೇಂಗಾ ಗದ್ದೆಗಳಲ್ಲಿನ ಶೇಂಗಾ ಗಿಡಗಳನ್ನು ಕಿತ್ತು ತಂದು ಸುಟ್ಟು ತಿನ್ನುವುದಾಗಲಿ, ಗೆಣಸಿನ ಹೋಳಿಗಳಿಂದ ಗೆಣಸು ಕಿತ್ತು ಬೇಯಿಸಿ ತಿನ್ನುವುದಾಗಲಿ, ಕೊಯ್ಲಿಗೆ ಬಂದ ಭತ್ತದ ಕದಿರನ್ನು ಕೊಯ್ದು ತಂದು ಹುರಿದು ಕುಟ್ಟಿ ಅವಲಕ್ಕಿ ಮಾಡಿ ಮೇಯುವುದಾಗಲಿ, ಗೇರು ಹಕ್ಕಲಿಗೆ ನುಗ್ಗಿ ಗೇರು ಬೀಜಗಳನ್ನು ಕದ್ದು ತರುವುದಾಗಲಿ, ಯಾರದೋ ಮಾವಿನ ತೋಪಿನಲ್ಲಿಯ ಮಾವಿನ ಕಾಯಿ ಹಣ್ಣುಗಳನ್ನು ಉದುರಿಸಿ ತಿನ್ನುವುದಾಗಲಿ, ಹಳ್ಳದ ದಂಡೆಗುಂಟ ಬೆಳೆದು ನಿಂತ ತೆಂಗಿನ ಮರಗಳನ್ನು ಹತ್ತಿ ಎಳೆನೀರು ಕೊಯ್ದು ಕುಡಿಯುವುದಾಗಲಿ ನಮಗೆ ಅಪರಾಧವೆಂದೇ ಅನಿಸುತ್ತಿರಲಿಲ್ಲ. ಸಂಬಂಧಪಟ್ಟವರು ಒಂದಿಷ್ಟು ಬೈದಿರಬಹುದಾದರೂ ಅದರಾಚೆಗೆ ಯಾವ ದೊಡ್ಡ ಶಿಕ್ಷಯೇನನ್ನೂ ಕೊಡುತ್ತಿರಲಿಲ್ಲ. ಇದರಿಂದ ನಮಗೆಲ್ಲ ಇದೊಂದು ಮಕ್ಕಳಾಟಿಕೆಯ ಸಹಜ ಕ್ರಿಯೆ ಎಂದೇ ಅನಿಸುತ್ತಿತ್ತು. ಹಾಗಾಗಿಯೇ ನಾವು ನಮ್ಮ ದಾಂದಲೆ, ವಿನೋದಗಳನ್ನು ನಿರಾತಂಕವಾಗಿಯೇ ಮುಂದುವರಿಸಿದ್ದೆವು.

ನಮ್ಮ ಏಳನೆಯ ತರಗತಿಯ ಅಭ್ಯಾಸ ಪರೀಕ್ಷೆಗಳು ಮುಗಿಯುವವರೆಗೂ ನಾಡು ಮಾಸ್ಕೇರಿಯ ನಮ್ಮ ಬಾಲ್ಯದ ಸುಂದರ ಬದುಕಿಗೆ ಮಾಸ್ಕೇರಿ ಮತ್ತು ಅಲ್ಲಿನ ಕೆರೆ, ತೋಟ, ಬೇಣ, ಬಯಲುಗಳೆಲ್ಲ ನಮ್ಮೆಲ್ಲರ ಆಡುಂಬೊಲವಾದದ್ದು ನಿಜವೇ!

1965 ನೇ ಇಸ್ವಿ ಎಂದು ನೆನಪು. ನನ್ನ ಪ್ರಾಥಮಿಕ ಶಿಕ್ಷಣದ ಅವಧಿ ಮುಗಿದಿತ್ತು. ಮುಂದೆ ಹೈಸ್ಕೂಲು ಸೇರಬೇಕಿತ್ತು. ಅದೇ ಸಂದರ್ಭದಲ್ಲಿ ನಮ್ಮ ತಂದೆಯವರಿಗೆ ಅಂಕೋಲೆಯ ತೆಂಕಣಕೇರಿ ಎಂಬಲ್ಲಿಯ ಪ್ರಾಥಮಿಕ ಶಾಲೆಗೆ ವರ್ಗವಾಯಿತು. ನಾನು ಅಂಕೋಲೆಯಲ್ಲಿ ಹೈಸ್ಕೂಲು ಓದುವುದು ಸುಲಭವೇ ಆಯಿತು.

ಆದರೆ ನಮ್ಮ ತಂದೆಯವರಿಗೆ ನಮ್ಮ ಗೆಳೆಯರ ಇಡಿಯ ಗುಂಪು ಶಿಕ್ಷಣ ಮುಂದುವರಿಸಬೇಕು ಎಂಬ ಇಚ್ಛೆಯಿತ್ತು. ಇನ್ನೂ ಶಾಲೆಯ ಮೆಟ್ಟಿಲು ಹತ್ತದ ನಾರಾಯಣ ಮಾಣಿ ಎಂಬ ಗೆಳೆಯನನ್ನು ಬಿಟ್ಟು ಉಳಿದ ಎಲ್ಲರೂ ಪ್ರಾಥಮಿಕ ಶಿಕ್ಷಣದ ಕೊನೆಯ ಹಂತದಲ್ಲಿದ್ದರು. ನಾರಾಯಣ ವೆಂಕಣ್ಣ ಎಂಬುವವನು ಮಾತ್ರ ನನಗಿಂತ ಒಂದು ವರ್ಷ ಹಿರಿಯನಾಗಿದ್ದು ಹನೇಹಳ್ಳಿಯ ಆನಂದ್ರಾಶ್ರಮ ಹೈಸ್ಕೂಲು ಸೇರಿಕೊಂಡಿದ್ದ. ಆತನನ್ನು ಸೇರಿಸಿ ಎಲ್ಲರೂ ಅಂಕೋಲೆಯಲ್ಲಿ ಸರಕಾರಿ ವಿದ್ಯಾಥರ್ಿ ನಿಲಯಕ್ಕೆ ಸೇರಿ ಅಂಕೋಲೆಯಲ್ಲಿ ಶಿಕ್ಷಣ ಮುಂದುವರಿಸಿದರೆ ಸರಿಹೋಗಬಹುದು ಎಂಬುದು ತಂದೆಯವರ ಲೆಕ್ಕಾಚಾರವಾಗಿತ್ತು. ಅದಕ್ಕಾಗಿ ಅವರು ಎಲ್ಲ ಮಕ್ಕಳ ತಾಯಿ ತಂದೆಯರ ಮನ ಒಲಿಸಿ ಅಂಕೋಲೆಯ ಹಿಂದುಳಿದ ವರ್ಗ ವಸತಿನಿಲಯಕ್ಕೆ ಸೇರಿಕೊಳ್ಳಲು ಅನುಮತಿ ಪಡೆದುಕೊಂಡರು. ಮತ್ತು ಅವರೆಲ್ಲರ ಜೊತೆಯಲ್ಲಿ ನಾನು ಮತ್ತು ನನ್ನ ತಮ್ಮ ನಾಗೇಶನೂ ವಿದ್ಯಾಥರ್ಿ ನಿಲಯದಲ್ಲಿಯೇ ಉಳಿದು ಅಭ್ಯಾಸ ಮುಂದುವರಿಸಬೇಕೆಂದೂ ತೀಮರ್ಾನಿಸಿದರು.

ಗೆಳೆಯರೆಲ್ಲರೂ ಒಟ್ಟಾಗಿ ಒಂದೇ ಕಡೆಯಲ್ಲಿ ನೆಲೆ ನಿಂತು ಓದುವ ಉತ್ಸಾಹದೊಂದಿಗೆ ನಾವೆಲ್ಲ ಸನ್ನದ್ಧರಾದೆವು.

ಅದೇ ವರ್ಷದ ಜೂನ್ ತಿಂಗಳು ಶಾಲೆಗಳು ಆರಂಭವಾಗುವ ಹೊತ್ತಿಗೆ ಸರಿಯಾಗಿ ನಾವು ಹಾಸ್ಟೆಲ್ಲಿಗೆ ಹೊರಟು ನಿಂತೆವು. ಕೇರಿಯಲ್ಲಿ ಅದು ಒಂದು ಬಗೆಯಲ್ಲಿ ದುಗುಡ ಇನ್ನೊಂದು ಬಗೆಯಲ್ಲಿ ಉತ್ಸಾಹ ತುಂಬಿದ ದಿನ.

ಕೇರಿಯ ಬಹುತೇಕ ಕುಟುಂಬಗಳಿಗೆ ಇದುವರೆಗೆ ತಮ್ಮ ಮಕ್ಕಳನ್ನು ಅಗಲಿ ಇದ್ದು ಅಭ್ಯಾಸ ಇರಲಿಲ್ಲ. ಇದೇ ಮೊದಲ ಬಾರಿಗೆ ಗಂಗಾವಳಿ ನದಿಯಾಚೆಗಿನ ಅಂಕೋಲೆಯಲ್ಲಿ ಬಿಟ್ಟು ಇರಬೇಕಾದ ಸಂಕಟದಲ್ಲಿ ತಾಯಿ ತಂದೆಯರು ನೊಂದುಕೊಂಡರು. ಆದರೆ ಅಕ್ಷರ ಕಲಿಕೆಯ ಆಸಕ್ತಿ ಎಲ್ಲ ತಾಯಂದಿರ ಹೃದಯದಲ್ಲಿ ಮೊಳಕೆಯೊಡೆಯುತ್ತಿದ್ದ ಕಾಲಮಾನದ ಪ್ರೇರಣೆ ಅವರೆಲ್ಲರ ಬಾಯಿ ಕಟ್ಟಿ ಹಾಕಿತ್ತು.

ಅಂದು ಮುಂಜಾನೆ ಕಳೆದು, ಹೊತ್ತೇರುವ ಸಮಯಕ್ಕೆ ನಾವೆಲ್ಲ ನಮ್ಮ ನಮ್ಮ ಲಭ್ಯ ಬಟ್ಟೆ ಬರೆಗಳನ್ನು ಕೈ ಚೀಲದಲ್ಲಿ ತುಂಬಿ ಹೊರಟು ನಿಂತಾಗ ಕೇರಿಯ ಬಹುತೇಕ ಮಂದಿ ನಮ್ಮನ್ನು ಹಿಂಬಾಲಿಸಿ ಗಂಗಾವಳಿ ನದಿ ತೀರದವರೆಗೂ ನಡೆದು ಬಂದಿದ್ದರು. ಕಾಲುದಾರಿಯ ಪಯಣದುದ್ದಕ್ಕೂ ನಾವು ವಸತಿ ನಿಲಯದಲ್ಲಿ ಕೂಡಿ ಬಾಳುವ ಕುರಿತು ಓದಿನಲ್ಲಲ್ಲದೇ ಅನ್ಯ ವ್ಯವಹಾರಗಳಲ್ಲಿ ತೊಡಗದಿರುವಂತೆ, ಆರೋಗ್ಯದ ಕುರಿತು ಪರಸ್ಪರ ಕಾಳಜಿ ಪೂರ್ವಕ ಸಹಕರಿಸುವ ಸಲಹೆ ನೀಡುತ್ತಲೇ ಗಂಗಾವಳಿ ತೀರ ತಲುಪಿಸಿದ್ದರು. ನಾವೆಲ್ಲ ಒಂದು ಕತ್ತಲ ಲೋಕದ ಕರಾಳ ಬದುಕಿನಿಂದ ಬೆಳಕಿನ ಕಿರಣಗಳನ್ನು ಆಯ್ದುಕೊಳ್ಳಲು ನಕ್ಷತ್ರಲೋಕಕ್ಕೆ ಹೊರಟು ನಿಂತ ಯೋಧರೆಂಬಂತೆ ನಮ್ಮನ್ನು ಪ್ರೀತಿ ಅಭಿಮಾನ ಅಗಲಿಕೆಯ ವಿಷಾದ ತುಂಬಿದ ಕಣ್ಣುಗಳಿಂದ ನೋಡುತ್ತಲೆ ನಮ್ಮೆಲ್ಲರನ್ನು ದೋಣಿ ಹತ್ತಿಸಿ ನಾವೆಯು ಆಚೆ ದಡ ಸೇರುವವರೆಗೆ ಕಾದು ನಿಂತು, ನಾವು ಹತ್ತಿದ ಬಸ್ಸು ನಿರ್ಗಮಿಸುವವರೆಗೂ ನಮ್ಮ ಕಣ್ಣಳತೆಯಲ್ಲಿ ಕಾಣುತ್ತಲೇ ಇದ್ದರು.

ಅಂಕೋಲೆಯ ಲಕ್ಷ್ಮೇಶ್ವರ ಎಂಬ ಭಾಗದಲ್ಲಿ ಇರುವ ‘ಆಯಿಮನೆ’ ಎಂಬ ಕಟ್ಟಡದ ಮಹಡಿಯ ಮೇಲೆ ಇರುವ ವಿದ್ಯಾಥರ್ಿ ನಿಲಯಕ್ಕೆ ಬಂದು ತಲುಪಿದ ಬಳಿಕ ಎಲ್ಲರಿಗೂ ಹೊಸತೊಂದು ಬದುಕಿನ ಮಗ್ಗಲು ಪ್ರವೇಶಿಸಿದಂತೆ ಮೂಕ ವಿಸ್ಮಿತರಾಗಿದ್ದೆವು. ಈಗ ‘ಆಯಿಮನೆ’ ಇರುವ ಸ್ಥಳದಲ್ಲಿ ‘ಅಮ್ಮ’ ಎಂಬ ಹೆಸರಿನ ಭವ್ಯ ಬಂಗಲೆಯೊಂದು ಎದ್ದು ನಿಂತಿದೆ. ವಸತಿ ನಿಲಯದ ಮೇಲ್ವಿಚಾರಕರು ಅಲ್ಲಿಯ ಸಹಾಯಕರು ಮತ್ತೆ ನಮಗಿಂತ ಮೊದಲೇ ಪ್ರವೇಶ ಪಡೆದಿದ್ದ ಸಹಪಾಠಿಗಳು ನಮ್ಮನ್ನು ಪ್ರೀತಿಯಿಂದಲೇ ಕಂಡರು. ನಮ್ಮ ನಮ್ಮ ಪಾಲಿಗೆ ದೊರೆತ ಹಾಸಿಗೆ ಹೊದಿಕೆ ಪಡೆದು ಕೊಠಡಿಗಳನ್ನು ಸೇರಿ ನಮ್ಮ ನಮ್ಮ ನೆಲೆಗಳನ್ನು ಗುರುತಿಸಿಕೊಂಡಾದ ಬಳಿಕ ಮಧ್ಯಾಹ್ನವೂ ಆಗಿ ಊಟದ ಪಂಕ್ತಿಯಲ್ಲಿ ಕುಳಿತು ಯಾವ ಸಂಕೋಚವೂ ಇಲ್ಲದೇ ಹೊಟ್ಟೆ ತುಂಬ ಉಣ್ಣುತ್ತಿದ್ದಂತೆ ನಮ್ಮೆಲ್ಲರ ಮನಸ್ಸಿನಲ್ಲಿಯೂ ನಾಡುಮಾಸ್ಕೇರಿಯ ಆಡೊಂಬಲದಿಂದ ನಿಜವಾಗಿಯೂ ಅನ್ನದೇಗುಲಕ್ಕೆ ಬಂದು ಸೇರಿದೆವು ಎಂಬ ಸಂತೃಪ್ತ ಭಾವ ಅರಳತೊಡಗಿತ್ತು.

*********************************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

10 thoughts on “

  1. ಮುಂದೇನಾಯಿತು ಎಂಬ ಕುತೂಹಲ ತಣಿಸಲು ಮುಂದಿನ ವಾರದ ವರೆಗೆ ಕಾಯಬೇಕಲ್ವೇ

  2. ಭಾವನಾತ್ಮಕವಾಗಿ ಪೋಣಿಸಿ ಬರೆದ ಲೇಖನ .ಅರ್ಥ ಪೂರ್ಣವಾದ ಬರಹ.
    ಹಾಗೆ ಇನ್ನೊಂದು ಮಾತು ನಿಮ್ಮ ಲೇಖನದಲ್ಲಿ ಬಂದ ಆಯಿ ಮನೆ ಜಾಗದಲ್ಲಿ ನಾವೀಗ ಮನೆ ಕಟ್ಟಿಕೊಂಡು ವಾಸವಾಗಿದ್ದೇನೆ

  3. ನಾಡುಮಾಸ್ಕೇರಿಯಿಂದ ಅಂಕೋಲೆಯತ್ತ …ಚೆನ್ನಾಗಿ ಮೂಡಿ ಬಂದಿದೆ.

  4. ಗುರೂಜಿ,
    ನಿವು ಒಬ್ಬ ಶಿಕ್ಷಕರ ಮಗನಾಗಿ ಇಷ್ಟೊಂದು ಕಷ್ಟ ಅನುಭವಿಸಿದಿರಿ ಅಂದರೆ ನಿಜಕ್ಕೂ ನಿಮ್ಮ ತಂದೆಯ ವರಿಗೆ ಒಂದು ದೊಡ್ಡ ನಮಸ್ಕಾರ.. ಮಗನ ಜೊತೆ ಬೇರೆ ಹುಡುಗರು ಬೆಳೆಯಲು ಎಂತಹ ಅದ್ಭುತ ಕೆಲಸ ಮಾಡಿದ್ದಾರೆ. ಮನಸ್ಸು ಮಾಡಿದರೆ ಮಗನನ್ನು ಒಳ್ಳೆಯ ಶಾಲೆಗೆ ಸೇರಿಸಬಹುದಾಗಿತ್ತು ಆದರೆ ಅವರು ಹಾಗೆ ಮಾಡಿಲ್ಲ. ಆಗಿನ ಗುರುಗಳ ಸಹಕಾರ ಬೇರೆನೆ.

    ನಿಮ್ಮ ತಂದೆ (ಗುರೂಜಿ) ಯವರಿಗೆ ನನ್ನ ನಮಸ್ಕಾರಗಳ ಅರ್ಪಣೆ.

    ಮುಂದುವರಿದ ಸಂಚಿಕೆ ಎದುರು ಕಾಯುವೆ….

  5. ಖಂಡಿತ….ನಮ್ಮ ತಂದೆಯವರ ಮು0ದಾಲೋಚನೆಯ ಕುರಿತು ನನಗೆ ತು0ಬಾ ಹೆಮ್ಮೆಯೆನಿಸುತ್ತದೆ

Leave a Reply

Back To Top