ನೆನಪು
ಅಜ್ಜಿಮನೆಯ ಬಾಲ್ಯಸ್ಮೃತಿ
ಹೇಮಚಂದ್ರ ದಾಳಗೌಡನಹಳ್ಳಿ
ನಾನು ನನ್ನ ಅಜ್ಜಿಯ ಊರಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಕಲಿತದ್ದು. ನಾನು ಅಜ್ಜಿಯ ಮನೆಗೆ ಹೋಗಿದ್ದೇ ಅಥವಾ ಅಜ್ಜಿ ನನ್ನನ್ನು ತನ್ನೂರಿಗೆ ಕರಕೊಂಡು ಹೋಗಿದ್ದೇ ಒಂದು ಆಕಸ್ಮಿಕ. ನಮ್ಮ ತಂದೆ ತಾಯಿಗೆ ನಾವು ನಾಲ್ವರು ಮಕ್ಕಳು. ನಾನು ಕೊನೆಯವನು. ಒಂದು ದಿನ ನನ್ನಪ್ಪನ ತಾಯಿಗೆ ಯಮನ ಕರೆ ಬಂತೆಂದು ಎಲ್ಲರೂ ತೀರ್ಮಾನಿಸಿ, ಒಳಗೆ ಅವನ ಕೋಣ ನುಗ್ಗಲು ಕಷ್ಟವೆಂದೋ ಏನೋ ಅಜ್ಜಿಯನ್ನು ಹೊರಜಗುಲಿಯ ಮೇಲೆ ಮಲಗಿಸಿ ಬೀಳ್ಕೊಡುಗೆ ಕೊಡುವ ತಯಾರಿ ಮಾಡಿಕೊಳ್ಳುತ್ತಿದ್ದರಂತೆ. ನನ್ನಮ್ಮ ಕಿರಿ ಸೊಸೆ. ‘ತಂದೆಗೆ ತಲ್ಮಗ ತಾಯಿಗೆ ಕಿರಿಮಗ’ -ಗಾದೆಯ ಶಾಸನವಿತ್ತು. ಈಗಲೂ ಇದೆ. ಹಾಗಾಗಿ ಮುಖ್ಯಪಾತ್ರಧಾರಿಯಾದ ನನ್ನಮ್ಮ ನಾವು ನಾಲ್ವರೂ ಮಕ್ಕಳನ್ನು ಮಲಗಿಸಿ ಕರ್ತವ್ಯನಿರತರಾಗಿದ್ದಾರೆ. ನನ್ನ ತಾಯಿಯ ತಾಯಿ ಮಕ್ಕಳನ್ನು ನೋಡಿಕೊಂಡು ಬರಲೆಂದು ತನ್ನ ಒಬ್ಬಳೇ ಮಗಳನ್ನು ಕಳುಹಿಸಿದ್ದಾರೆ. ನನ್ನ ತಾಯಿ ಬಂದು ನೋಡಿದಾಗ ಯಮನ ಪಾಶ ನನಗೇ ಬಿದ್ದಿತ್ತಂತೆ. ಯಾರ ಯಡವಟ್ಟೋ..ಅಜ್ಜಿಯ ಜಾಗ ಬದಲಿಸಿದ್ದು ಅವನ ಗೊಂದಲಕ್ಕೆ ಕಾರಣವೋ ಏನೋ ಯಾರಿಗೆ ತಾನೆ ಹೇಗೆ ತಿಳಿದೀತು!!? ನಾನು ನಾಲಿಗೆ ಹೊರಚಾಚಿ ಪ್ರಜ್ಞೆತಪ್ಪಿ ಬಿದ್ದುದನ್ನು ನೋಡಿ ಮಗ ಸತ್ತನೆಂದೇ ತೀರ್ ಮಾನಿಸಿ ಜೋರು ಕಿರುಚಿದ್ದಾರೆ. ಅಜ್ಜಿಯ ಬೀಳ್ಕೊಡುಗೆಗೆ ಸೇರಿದ್ದವರೆಲ್ಲಾ ನನ್ನ ವರ್ಗಾವಣೆ ತಡೆಯಲು ಬಂದು ತಂತಮ್ಮ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬಾಲಗ್ರಹವೆಂದು ಹೇಳಿ ಕಲಗಚ್ಚು ಸುರಿದಿದ್ದಾರೆ ನನ್ನ ಮೇಲೆ. ನನ್ನ ಇಂದ್ರಿಯಗಳು ಎಚ್ಚೆತ್ತಿಲ್ಲ. ಕೊನೇ ಪ್ರಯತ್ನ ಅಂತ ತಾಳಿಯನ್ನು ದೀಪದಿಂದ ಕಾಯಿಸಿ ಸುಡಲು ಹೇಳಿದ್ದಾರೆ ಒಬ್ಬರು. ನನ್ನ ತಾಯಿ ಸತ್ತ ಮಗನಿಗೆ ಸುಡಲೇಬೇಕಲ್ಲ ಅಂತ ಕಣ್ಮುಚ್ಚಿ ಮುಖವೆಲ್ಲಾ ಸುಟ್ಟಿದ್ದಾರೆ. ಜಗ್ಗಿಲ್ಲ ನಾನು. ಮೂಗಿನ ಮೇಲೆ ಇಟ್ಟಾಗ ಕಿರುಚಿದೆನಂತೆ. ಕಟ್ ಕಟ್ ಮಾಡಿ ಉಸಿರಾಡುತಿದ್ದ ಅಜ್ಜಿ ಗೊಟಕ್ ಅಂದ್ರಂತೆ. ಅಂತೂ ಬದುಕಿದೆ. ಈಗಾಗಿದ್ದರೆ !!!! ?ಹೇಗೋ ನಾನೀಗ ನನ್ನ ಸಾವಿನ ಘಟನೆಯನ್ನು ಕಥೆಯಾಗಿಸುವಂತಾಗಿದ್ದೇನೆ.ಇದರಿಂದ ಭಿತಗೊಂಡ ನನ್ನಜ್ಜಿ ಆಗ ನನ್ನನ್ನು ತನ್ನೂರಿಗೆ ಕರ್ಕೊಂಡು ಹೋದ್ರು.
ಅಲ್ಲಿ ನನ್ನ ಅಜ್ಜಿ ಅವರ ಒಬ್ಬನೇ ಮಗ ಹಾಗೂ ನನ್ನಜ್ಜಿಯ ಅವ್ವ- ನನ್ನ ಮುತ್ತಜ್ಜಿ ಇದ್ದರು. ನಾನು ಒಂದನೇ ತರಗತಿಯ ಪ್ರಾರಂಭ ಹಂತದಲ್ಲಿದ್ದಾಗ ಮಾವನಿಗೆ ಮದುವೆಯಾಯಿತು. ನನ್ನತ್ತೆ ಏನಾದರೊಂದು ನೆವಕೆ ಚಿಕ್ಕದೊಂದು ಕೊಠಡಿಯಲ್ಲಿ ಊರು ಮಾರಮ್ಮ ತಡಿಕೆಯೊಳಗೆ ಅಡಗಿಕೊಂಡಂತೆ ಕುಳಿತಿರುತಿದ್ದರು.ರಾಣಿ ಶೋಕಗೃಹ ಹೊಕ್ಕುತಿದ್ದಂತೆ. ನಮ್ಮಾವ ಊರಮಾರಮ್ಮನ ಹೊತ್ತು ಬರುವವ ಚಾಟಿ ಬೀಸುವಂತೆ ಚಾಟಿಕೋಲು ತೆಗೆದುಕೊಂಡು ಬಹಲ್ದರೆ ಹಾಕುತಿದ್ದ. ಹೆಂಡತಿಗೆ ಹೊಡೆದರೆ ಮುಗೀತು. ರಂಪಾಟರವ ಗುಣಿತವಾಗಿ ಮರ್ಯಾದೆ ಹಾಳೆಂದು, ಸುಮ್ಮನಿರಲೂ ಆಗದೆ ತನ್ನ ಕೋಪಕ್ಕೆ ಹೊರದಾರಿ ತೋರಲು ಮಾರ್ಗ ಹುಡುಕುವಾಗ ಏನಾದರೂ ತುಂಟಾಟ ಮಾಡಿ ನಾನು ಸಿಗುತಿದ್ದೆ. ಹೊಡೆಸಿಕಿಂಡು ಮೈಮೇಲೆ ಬಾಸುಂಡೆ ನೋಡಿಕೊಂಡು ಬಿಕ್ಕಳಿಸುತಿದ್ದ ನನ್ನನ್ನು ನನ್ನಜ್ಜಿ ಬಾಚಿ ತಬ್ಬಿಕೊಂಡು.”ಅನ್ನೇಕಾರ ಮಗಾ ಏನ್ಮಾಡಿತ್ಲಾ ಹಿಂಗೆ ಬಾಸುಂಡೆ ಬರಂಗೆ ಹೊಡಿಯಂತದಾ” ಎಂದು ತನ್ನ ಮಗನಿಗೆ ಬೈದು ಬಾಸುಂಡೆಗೆಲ್ಲಾ ಹರಳೆಣ್ಣೆ ಹಚ್ಚಿ, ಗುಲ್ಕನ್ ಬ್ರೆಡ್ ತರಿಸಿ ತಿನ್ನಿಸುತಿದ್ದರು. ನನಗೊ ಚಾಟಿ ಏಟಿಗಿಂತ ಗುಲ್ಕನ್ ಬ್ರೆಡ್ ಸವಿ ಮುಖ್ಯವಾಗಿ ನೋವು ಮರೀತಿದ್ದೆ. ಕೆಲವೊಮ್ಮೆ ಗಲ್ಕನ್ ಬ್ರೆಡ್ ತಿನ್ನಬೇಕೆನಿಸಿದಾಗ ಅಜ್ಜಿ ಕೊಡಿಸದಿದ್ದರೆ ‘ಮಾವನ್ ಕೈಲಿ ಹೊಡ್ಸಿಕೊಳ್ಲಾ’ ಅಂದ್ರೆ ಸಾಕು ಕಣ್ಣೀರು ತೊಟ್ಟಿಕ್ಕುತಿತ್ತು ಅಜ್ಜಿಗೆ. ಕೊಡಿಸುತಿತ್ತು. ಇನ್ನು ಅಲ್ಲಿಯ ಶಾಲೆಯ ಅನುಭವ ಹೇಳದಿದ್ದರೆ ಕಥೆ ವಗ್ಗರಣೆ ಇಲ್ಲದ ಚಿತ್ರಾನ್ನ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಗಂಗಾಧರ ಮೇಷ್ಟ್ರು. ತುಂಬಾ ಒಳ್ಳೆಯವರು. ಚನ್ನಾಗಿ ಕಲಿಸುತಿದ್ದರು. ಶಾಲೆ ಊರಿಗೊಂದೇ. ಊರಿನ ಧನಿಕ-ಧರಿದ್ರ ಸವರ್ಣೀಯ-ಅವರ್ಣೀಯ ಭೆದವಿಲ್ಲದೆ ಎಲ್ಲರೂ ಅಲ್ಲೇ ಸೇರಿ ಓದುತಿದ್ದೆವು. ಊರಿನ ಭಾವೈಕ್ಯತೆಯ ಕೇಂದ್ರ ಅದು. ಆ ಶಾಲೆಯಲ್ಲಿ ಗಡಿಯಾರವಿರಲಿಲ್ಲ. ಒಂದು ಬೆಳಕು ಹೆಂಚು ಹಾಕಿಸಿದ್ದರು, ಅದೇ ಗಡಿಯಾರ. ನಾವು ಕೂರುತಿದ್ದ ಹಾಸುಮಣೆಗಳಲ್ಲಿ ಮುಂದಿನ ಸಾಲಿನ ಹಾಸುಮಣೆಯ ಬಳಿ ಬೆಳಕುಹೆಂಚಿಂದ ಬೆಳಕು ಬಿದ್ದರೆ ಹನ್ನೊಂದಾಗುತಿತ್ತು. ನಾಲ್ಕನೇ ತರಗತಿಯವರೇ ಅಲ್ಲಿ ದೊಡ್ಡ ಗಂಡಸರು. ನನಗೋ ಬೇಗ ನಾಕನೇತರಗತಿಯಾಗುವಾಸೆ.ಕಸ ಗುಡಿಸಿಸಿ, ಪ್ರೇಯರ್ ಮಾಡಿಸಿ, ಒಳಗೆ ಕೂರಿಸಿ, ಆ ಬೆಳಕು ಅಲ್ಲಿಗೆ ಬರೋ ವರೆಗೆ ಕಾದು, ಮೇಷ್ಟ್ರು ಬಾರದಿದ್ರೆ ರಜೆ ಘೋಷಿಸುವ ಅಷ್ಟೂ ಅಧಿಕಾರ ಬೇಕಂದ್ರೆ ನಾಕನೇ ತರಗತಿ ಎಂಬ ಒಂದೇ ಯೋಗ್ಯತೆ ಸಾಕಾಗಿತ್ತು. ಒಂದು ದಿನ ನಾನು ಮುಂದಿನ ಮಣೆಯ ಮೇಲೆ ಕೂತು ಸ್ವಲ್ಪ ಮುಂದೆ ಚಿಗಿಸಿಬಿಟ್ಟಿದ್ದೆ. ಯಾರೂ ಗಮನಿಸಿರಲಿಲ್ಲ. ಚಿಗಿಸಿದ್ದು ಸ್ವಲ್ಪವೇ. ಆದರೆ ಒಂದು ಗಂಟೆ ವ್ಯತ್ಯಾಸವಾಗಿಬಿಟ್ಟಿತ್ತು. ಅ ದಿನ ಎಲ್ಲಾ ಪ್ರಕ್ರಿಯೆ ಒಂದು ಗಂಟೆ ಮೊದಲು ನಡೆದು, ಹನ್ನೊಂದಾಯಿತೆಂದು ನಾಕನೇ ತರಗತಿಯ ದೊಡ್ಡ ಗಂಡ್ಸು ಸಿದ್ದೇಶ ಘೋಷಿಸಿದ ರಜೆಗೆ ಖುಷಿಗೊಂಡು ಚಲ್ಲಾಪಿಲ್ಲಿಯಾಗಿ ಓಡುತಿದ್ದ ನಮಗೆ ಧುತ್ತೆಂದು ಅಡ್ಡಲಾದ ಗಂಗಾಧರ ಮೇಷ್ಟ್ರ ಲೂನಾ ಯಮನ ಕೋಣವಾಯ್ತು. ‘ಇನ್ನೂ ಹತ್ತು ಗಂಟೆ ಈಗ್ಲೇ ಯಾಕೊ ಬಿಟ್ಟೆ’ ಎಂದು ಮೇಷ್ಟ್ರು ಸಿದ್ದೇಶನಿಗೆ ಗದರಿಸಿದಾಗಲೇ ನಾನು ಒಂದು ಗಂಟೆಯ ವ್ಯತ್ಯಾಸ ಮಾಡಿದ್ದು ನನಗೆ ಗೊತ್ತಾಗಿದ್ದು. ನಾನಾಗ ಮೂರನೆ ತರಗತಿಯ ಪ್ರಾರಂಭ. ಇಪ್ಪತ್ತರ ವರೆಗೆ ಮಗ್ಗಿ, ಕಾಗುಣಿತ, ಒಂದು ಎರಡರ ಮಗ್ಗಿ ಇನ್ನೂರರವರೆಗೆ ಕಲಿಸುವುದು ನಮ್ಮ ಗುರುವಿನ ಸ್ವಯಂ ಗುರಿ. ನನಗೆ ಹದಿನೆಂಟರ ಮಗ್ಗಿ ಸರಿಯಾಗಿ ಬರಲಿಲ್ಲ. ಒಬ್ಬಳು ಹುಡುಗಿಗೆ ಹದಿನಾರರ ಮಗ್ಗಿ ಬರಲೇ ಇಲ್ಲ. ಅವಳ ಜೊತೆ ನನ್ನನ್ನೂ ಕಿಟಕಿಯ ಬಾಗಿಲಿಗೆ ಕೈ ಹಸ್ತ ಲಾಕ್ ಮಾಡಿ ನೇತುಹಾಕಿದರು. ನನ್ನ ಸ್ವಾಭಿಮಾನಕ್ಜೆ ಭಾರೀ ಘಾಸಿಯಾಯಿತು.
ಮಾರನೇ ದಿನ ಎಲ್ಲಾ ಮಗ್ಗಿ ಕಲಿತು ಒಪ್ಪಸಿಬಿಟ್ಟೆ. ಆದರೆ ಶಾಲೆಗೆ ಚಕ್ಕರ್ ಹೊಡೆಯಲು ಶುರುವಿಟ್ಟುಕೊಂಡೆ. ಜ್ವರವೆಂದರೆ ಮೈಮುಟ್ಟಿ ನೋಡುತಿದ್ದ ನಮ್ಮ ಮೇಷ್ಟ್ರ ಮಿತಿಯರಿತು ಹೊಟ್ಟೆನೋವಿನ ನೆಪ ಹೇಳಿ ಹೊರಬರುತಿದ್ದೆ. ಮನೆಯಲ್ಲಿ ಮಾವನ ಭಯ, ಶಾಲೆ ಅವಮಾನವಾದ ಸ್ಥಳ. ಕಾಲುವೆಗೆ ಹೋಗಿ ದಡದ ನೀರಲ್ಲೇ ಈಜಾಡಿ, ಹೆಸರುಕಾಯಿ ತಿನ್ನುತ್ತಾ ಕಾಲ ಕಳೆದು ಶಾಲೆ ಬಿಟ್ಟಾಗ ಮನೆ ಸೇರುತಿದ್ದೆ. ಒಂದು ರೀತಿಯ ಮಜವಾಗಿತ್ತು. ಒಂದು ದಿನ ಹೀಗೇ ಹೊರಬಂದಿದ್ದೇನೆ. ಅನುಮಾನಗೊಂಡ ನಮ್ಮಾವ ನನ್ನನ್ನು ಹಿಂಬಾಲಿಸುತ್ತಿರೋದು ನನಗೆ ಗೊತ್ತಾಗಿಲ್ಲ. ನಿರ್ವರ್ತಿತ ನಿಯಮನಾಗಿ ನಾನು ನೇರ ಕಾಲುವೆ ಹತ್ತಿರ ಹೋಗಿ ಕೋಮಣನಾದೆ. ಇನ್ನೇನು ಕಾಲುವೆಗೆ ಇಳಿಯಬೇಕು. ಓಡಿ ಬಂದ ನಮ್ಮಾವ ಅನಾಮತ್ತು ನನ್ನ ಅಪ್ಪಿಕೊಂಡು ‘ಯಾಕಪ್ಪಾ ನೀನು ಸಾಯೊವಂಥಾದ್ದು ಏನಾಯ್ತು!!!! ‘ ಎಂದು ಬಿಕ್ಕಳಿಸಿದರು. ಹೆಂಗರುಳು ನಮ್ಮಾವಂದು. ಮಾವನ ಪ್ರೀತಿಗೆ ಕರಗಿ, ನಿಜ ಮುಚ್ಚಿಟ್ಟು ಅವರು ತಿಳಿದ ಸುಳ್ಳನ್ನೇ ನಿಜವೆಂದು ನಾನೂ ಒಪ್ಪಿ, ‘ಸ್ಕೂಲು ಬಿಡ್ಸೊದಾದ್ರೆ ಬದುಕ್ತಿನಿ ಇಲ್ಲಾಂದ್ರೆ ಸಾಯ್ತಿನಿ’ ಎಂದು ಹಟ ಹಿಡಿದು ಸಂದರ್ಭವನ್ನು ನನಗೆ ಹಿತವೆಂದು ಅಂದುಕೊಂಡಿದ್ದಕ್ಕೆ ಬಳಸಿಕೊಂಡೆ. ಮಾವ ಒಪ್ಪಿಕೊಂಡು ಮನೆತನಕವೂ ಎತ್ತುಕೊಂಡೇ ಬಂದ್ರು. ಒಳಗೊಳಗೇ ಬಯಸಿದ್ದು ಗೆದ್ದ ಉಲ್ಲಾಸದಲ್ಲಿ ಮನಸು ಗರಿ ಬಿಚ್ಚಿ ಕುಣಿಯುತಿತ್ತು. ದುಃಖದಭಿನಯದಲ್ಲಿ ನಲಿವನ್ನು ಮುಚ್ಚಿದೆ. ಕೊನೆಗೆ ತೆನೆಭತ್ತದ ಗದ್ದೆಗೆ ಬೀಳುವ ಹಕ್ಕಿ ಹೊಡೆಯುವ ಕೆಲಸಕ್ಕೆ ಹೋಗ್ತಿನಿ ನಾಳೆಯಿಂದ ಎಂದು ನನ್ನ ಉದ್ಯೋಗ ಖಾತ್ರಿ ಮಾಡಿಕೊಂಡೆ. ಎಲ್ಲರ ಸಹಮತ ಸಿಕ್ತು.’ ಇವ್ನ್ ಹಣೇಲಿ ವಿದ್ಯೆ ಬರ್ದಿಲ್ಲ. ಆದಂಗಾಯ್ತದೆ. ಹೆಂಗೋ ಬದುಕ್ಲಿ. ಕೂಲಿ ನಾಲಿ ಮಾಡ್ಕೊಂಡು ಜೀವ್ನ ಮಾಡ್ಲಿ’ ಎಂಬ ತೀರ್ಮಾನಕ್ಕೆ ಬಂದ್ರು. ಬೆಳಗಾಯ್ತು. ನನ್ನ ಚಿಕ್ಕಮ್ಮ- ನನ್ನಮ್ಮನ ಚಿಕ್ಕಪ್ಪನ ಮಗಳು- ನನಗಿಂತ ಎಂಟ್ಹತ್ತು ವರ್ಷ ದೊಡ್ಡವಳು. ಋತುಚಕ್ರದಾರಂಭ ಆಗಿಲ್ಲದಿದ್ರಿಂದ ಮದುವೆಯಾಗಿರ್ಲಿಲ್ಲ ಅಂತ ಈಗ ಅನ್ಕೊಂಡಿದಿನಿ.ಅವಳ ಜೊತೆ ನಾನು ಸಹೋದ್ ಯೋಗಿ ಈಗ. ಅವಳು ಪ್ರಮೋಷನ್ ಆಗಿ ಬಾಸ್ ಆದಳು. ನಾನು ಟ್ರೈನಿ ತರಹ. ಅವಳು ಹೇಳಿದಂತೆ ಎಲ್ಲಾ ಕಡೆ ಓಡಾಡಿಕೊಂಡು ಹಕ್ಕಿ ಹಾರಿಸುತಿದ್ದೆ. ಇಷ್ಟವಾಗಿದ್ರಿಂದ ಆನಂದವಾಗ್ತಿತ್ತು. ಕಾಲುವೆಯಲ್ಲಿ ಬಿದ್ದು ದಡದಲ್ಲೇ ಹೊರಳಾಡಿದೆ. ತುಂಬಾ ಜನ ಸಹೋದ್ ಯೋಗಿಗಳ ಪರಿಚಯವಾಯ್ತು. ಬೈಯೋರಿಲ್ಲ ಹೊಡಿಯೋರಿಲ್ಲ ಎಲ್ಲಾ ತಾಪತ್ರಯಗಳಿಂದ ಮುಕ್ತರಾಗಿದ್ದೆವು. ಅರ್ಥೊ, ಇಳ್ಳೆದಾಂಡು, ಕಳ್ಕ ಕಾಳಿ, ಕಲ್ಲು ಆಟ, ಹೀಗೆ ನಾನಾ ಆಟ ಆಡೋದು, ಹಸಿವಾದ್ರೆ ಯಾರು ಯಾರದ್ದೋ ಗದ್ದೆಗೆ ಹೋಗಿ ಹೆಸರುಕಾಯಿ, ಸೊಪ್ಪು ಕಡ್ಲೆ, ತರಿದು ತಂದು ಗುಡ್ಡೆ ಹಾಕಿಕೊಂಡು ತಿನ್ನೋದು. ಸ್ವರ್ಗ ಹೇಗಿರುತ್ತೆ ಅಂತ ನನ್ನ ಅವತ್ತು ಕೇಳಿದ್ರೆ ಅದೇ ಆಗಿತ್ತು. ಇವತ್ತಿಗೂ ಹಾಗೇ ಅನಿಸುತ್ತದೆ.ಹರಿವ ನೀರೊಳಗೆ ಕೋಮಣವಾಗಿ ಕುಳಿತು, ಮಲಗಿ ಹೊರಳಾಡುವುದರಲ್ಲಿ ಸಿಗುವ ಸುಖ ಜೀವನದಲ್ಲಿ ಬೇರೆ ಎಲ್ಲೂ ಇಲ್ಲವೆಂದೇ ಭಾವಿಸಿದ್ದೆ. ಜೊತೆಗೆ ಹುಡುಗಿಯರೂ ಹಾಗೇ ಬಿದ್ದಿರುತಿದ್ದರು. ಲಿಂಗ, ಜಾತಿ,ವರ್ಣ,ಭಾಷೆ,ವರ್ಗ ಯಾವ ತಾರತಮ್ಯವಿಲ್ಲದೆ ಎಲ್ಲರೂ ಕಾಯೈಕ್ಯವಾಗಿ ಈಜಾಡುತಿದ್ದೆವು. ಸಂಜೆ ಮನೆಗೆ ಬರುವಾಗ ಉಲ್ಲಾಸದಿಂದ ಮನದಲ್ಲಿ ಖುಷಿಯ ಜೇನು ತುಂಬಿಕೊಂಡು ಬರುತಿದ್ದೆ. ರಾತ್ರಿ ಮಲಗಿ ಆ ಜೇನಸವಿಯ ಕನಸಲ್ಲಿ ತೇಲುತಿದ್ದೆ.
ಒಂದು ವಾರ ಭತ್ತದ ಗದ್ದೆ ಕಾಯುವ ಹುಡುಗಿಯರ ನಡುವೆ ಕೃಷ್ಣನ ರಂಗಿನಾಟ, ನೀರಾಟ, ಬಾಲಾಟ ಆಡಿದೆ. ಇದೇ ಜೀವನದ ಪರಮಸುಖ ಎಂದುಕೊಂಡು, ಜೀವನಪೂರ್ತಿ ಇದರಿಂದ ವಂಚಿತನಾಗಲೇಬಾರದೆಂದು ತೀರ್ಮಾನಿಸಿಬಿಟ್ಟಿದ್ದೆ. ಆದರೆ ವಿಧಿಯಾಟ ಬೇರೆ. ನಮ್ಮ ಗಂಗಾಧರ ಮೇಷ್ಟ್ರು ಹೇಗೋ ವಿಷಯ ತಿಳಿದುಕೊಂಡು ನಾಲ್ಕನೇ ತರಗತಿಯ ಮಂಜನನ್ನು ಜೊತೆಯಲ್ಲಿ ಕರೆದುಕೊಂಡು ನನ್ನ ಸ್ವರ್ಗಕ್ಕೆ ಲಗ್ಗೆ ಹಾಕಿಬಿಟ್ಟರು. ಕಾಡಿನಲ್ಲಿದ್ದ ರಾಮನನ್ನು ಹುಡುಕಿ ಬಂದ ಭರತನ ಮೇಲೆ ದುಡುಕಿದ ಲಕ್ಷ್ಮಣನಾದೆ. ಮಂಜನ ಮೇಲೆ ಅಗಾಧ ಕೋಪ ಬಂದು ನನ್ನ ಕೈ ಬಿಲ್ಲಿಗೆ ಕಲ್ಬಾಣ ಹೂಡಿ ನಿಂತೆ. ಅಡ್ಡ ಬಂದ ಗುರು ನನ್ನ ಕಲ್ಬಾಣ ಪ್ರಯೋಗ ತಡೆದು ಮಂಜನನ್ನುಳಿಸಿದರು. ನನ್ನ ಬಳಿಯೇ ಬಂದ ಮೇಷ್ಟ್ರು ತಲೆ ನೇವರಿಸಿದರು. ಕಲ್ಲನ್ನು ಕೈ ಬಿಟ್ಟಿತು. ಅವರ ಪ್ರೀತಿಯ ಸುಖ ಸೋಲಿಸಿತು ನನ್ನ ಕೋಪವನ್ನು. ‘ನಿನಗೆಂದೂ ನಾನು ಹೊಡೆಯಲ್ಲ, ಬೈಯಲ್ಲ, ಇಷ್ಟೇ ಕಲಿಬೇಕು ಅಂತ ಕಡ್ಡಾಯ ಮಾಡಲ್ಲ ನೀನು ಶಾಲೆಗೆ ಬರ್ತಿಯಾ?’ ಅಂತ ಕೇಳಿದ ಅವರ ಪ್ರೀತಿ, ಕರುಣೆ ತುಂಬಿದ ಮಾತುಗಳಿಗೆ ಎದುರುತ್ತರ ಆಡದೆ ತಲೆಯಾಡಿಸಿದೆ. ನಾಳೆಯಿಂದ ಬರುವಂತೆ ಹೇಳಿ ತಲೆ ನೇವರಿಸಿ ಹೋದರು. ಹಾರಾಡುತಿದ್ದ ಹಕ್ಕಿಮನಸು ಚಿಂತೆಯ ಪಂಜರ ಸೇರಿತು. ಏನೋ ಬೇಸರ, ಕಸಿವಿಸಿ. ಆ ಮೇಷ್ಟ್ರು ಕಂಡರೆ ನನಗೆ ತುಂಬಾ ಪ್ರೀತಿ ಇತ್ತು. ನನ್ನಪ್ಪನ ಮಿತ್ರರು ಎಂಬ ಕಾರಣಕ್ಕೊ ಏನೊ. ಅತೀ ಪ್ರೀತಿಯವರಿಂದ ಆಗುವ ಅವಮಾನ ಎಂಥ ಕೆಟ್ಟ ನಿರ್ಧಾರ ಮಾಡಿಸುತ್ತದೆ!? ನನ್ನನ್ನು ವಿದ್ಯೆಯಿಂದಲೇ ವಿಮುಖಗೊಳಿಸಿತ್ತದು. ರಾತ್ರಿಯೆಲ್ಲಾ ನಿದ್ರೆ ಮಾಡಿದೆನೋ ಇಲ್ಲವೋ ಅದೂ ಗೊತ್ತಾಗಲಿಲ್ಲ. ಬೆಳಗಾಯ್ತು. ನಾನು ಏಳು ಗಂಟೆಯಷ್ಟೊತ್ತಿಗೆ ಏಳುತ್ತಿದ್ದೆ ಅಂತ ಗೊತ್ತು. ಯಾಕಂದ್ರೆ ‘ಏಳೋದು ಏಳ್ಗಂಟೆ ನೋಡೋದ್ ನಾಯ್ ಮುಖ’ಅಂತ ನನ್ನ ಮುತ್ತಜ್ಜಿ -ಸಣ್ಣಮ್ಮ- ಗೊಣಗೋದು. ಆ ಗೊಣಗುವುದರೊಳಗೆ ನಾನೆದ್ದಿರ್ತಿದ್ದೆ. ಶಾಲೆಗೆ ಹೋಗುವ ಸಮಯವಾಯ್ತು. ಗೆಳೆಯ ಮಹೇಶ ಮತ್ತು ಮಂಜುನಾಥ ನಮ್ಮನೆಗೇ ಬಂದರು. ಮೇಷ್ಟ್ರು ಅವರಿಗೆ ನನ್ನನ್ನು ಶಾಲೆಗೆ ಕರೆತರುವ ಸುಪಾರಿ ಕೊಟ್ಟಿದ್ದರು. ಸರಿ ಹೋದೆ. ಸಂಜೆಯ ತನಕವೂ ಗಂಗಾಧರ ಮೇಷ್ಟ್ರು ಪ್ರೀತಿಯ ಗಂಗೆಯಲ್ಲಿ ತೋಯ್ಸಿದರು. ಸಂಜೆ ಶಾಲೆ ಬಿಡೋದು ಅರ್ಧ ಗಂಟೆ ಮೊದಲು ತಾನು ಹೇಳಿಕೊಟ್ಟಂತೆ ಒಂದು ನಾಟಕ ಅಭಿನಯ ಮಾಡಬೇಕೆಂದು ನನ್ನನ್ನು ಒಪ್ಪಿಸಿದರು. ನನಗೆ ನಾಟಕ ನೋಡೋದು, ಅಭಿನಯಿಸೋದು ಅಂದ್ರೆ ತುಂಬಾ ಇಷ್ಟ. ನನ್ನಪ್ಪನಿಂದ ಬಂದ ಪಿತ್ರಾರ್ಜಿತಾಸಕ್ತಿ ಅನ್ಸುತ್ತೆ. ನಾಟಕದ ಕಥೆ ಏನಂದ್ರೆ : ಗೆಳೆಯ ಮಹೇಶ( ನನ್ನ ದೊಡ್ಡಮ್ಮನ ಅಣ್ಣನ ಮಗ) ಓದಿನಲ್ಲಿ ತುಂಬಾ ಅಸಕ್ತಿ ಬೆಳೆಸಿಕೊಂಡಿದ್ದ. ಅವರ ತಂದೆ ಕೂಡ ಮೇಷ್ಟ್ರು. ಈ ನಾಟಕದಲ್ಲಿ ಅವನು ಚನ್ನಾಗಿ ಓದಿ ಸರ್ಕಾರಿ ಕೆಲಸದಲ್ಲಿರುತ್ತಾನೆ. ಮದುವೆಯಾಗಿ ಸ್ವಂತ ಮನೆ ಕಟ್ಟಿಸಿಕೊಂಡು ಸುಖವಾಗಿರುತ್ತಾನೆ. ನಾನು ಓದದೇ ಕೂಲಿ ಮಾಡಿಕೊಂಡಿರುತ್ತೇನೆ. ನನ್ನ ಹೆಂಡತಿಗೆ ಏನೋ ಆರೋಗ್ಯ ತಪ್ಪಿ, ನನ್ನ ಬಳಿ ಹಣವಿಲ್ಲದೆ ಅವನ ಬಳಿ ಸಹಾಯ ಬೇಡಬೇಕು. ಅವನು, ಕೊಟ್ಟ ಸಾಲವನ್ನು ಹೇಗೆ ತೀರುಸ್ತಿಯಾ? ನೀನು ದುಡಿಯೋದು ನಿನಗೇ ಸಾಕಾಗಲ್ಲ, ನನ್ನಂಗೆ ನೀನೂ ಓದಿದ್ರೆ ಈ ಗತಿ ಬರ್ತಿತ್ತಾ!? ಹುಷಾರಾದ್ಮೇಲೆ ಅವ್ಳೇ ಬಂದು ನಮ್ಮನೆ ನೆಲ ವರ್ಸಿ, ಪಾತ್ರೆ ಮುಸ್ರೆ ತಿಕ್ಕಿ ಸಾಲ ತೀರುಸ್ಬೇಕಾಗ್ತದೆ. ನಿನ್ನ ನಂಬ್ಕೊಂಡ್ ಬಂದ್ಮೇಲೆ ಅನುಭವಿಸಬೇಕಲ್ಲಾ ಪಾಪ ಅವ್ಳು. ಅದ್ನ ಕಟ್ಕೊಂಡು ನಂಗೇನಾಗ್ಬೇಕು. ನೀನಂತೂ ಕೆಲಸಕ್ಕೆ ಬರ್ಬೇಡ ಅವಳನ್ನೇ ಕಳ್ಸೊದಾದ್ರೆ ದುಡ್ಡು ಕೊಡ್ತಿನಿ. ನೀನು ಕೆಲಸಗಳ್ಳ ಅಂತ ನನ್ನ ತುಚ್ಚವಾಗಿ ನೋಡಿ ಮಾತಾಡುತ್ತಾನೆ. ನಾನು ಆಗ ದೈನ್ಯತೆಯಿಂದ ನೀವು ಹೇಳಿದಂತಾಗಲಿ ನನ್ನದೇ ತಪ್ಪು; ನಾನೂ ಓದಿದ್ರೆ ಈ ಗತಿ ಬರ್ತಿರ್ಲಿಲ್ಲಾ ಅಂತ ಮಂಡಿಯೂರಿ ಅಳುತ್ತಾ ಅವನ ಮುಂದೆ ಕೈಯೊಡ್ಡಬೇಕು. ಆ ಕೊನೆಯ ಡೈಲಾಗು, ಅಭಿನಯ ಎರಡೂ ಮಾಡ್ಲಿಲ್ಲ ನಾನು. ‘ನಾನು ಮಾಡಲ್ಲ ಇದ್ನಾ ‘ ಅಂತ ಸೆಟೆದುಕೊಂಡು ನಿಂತೆ. ‘ನಾನೂ ಓದ್ತೀನಿ ಅವ್ನ್ ಮುಂದೆ ಕೈ ಚಾಚದಿಲ್ಲಾ’ ಅಂತ ಅಳುತ್ತಾ ಕಿರುಚಿದೆ. ತೆರೆ ಬೀಳ್ತು ಅಂದ ನಾಕನೇ ತರಗತಿ ಮಂಜ. ಮೇಷ್ಟ್ರು ರಂಗದ ಮೇಲೆ ಬಂದ್ರು. ನನ್ನನ್ನು ಬಿಗಿದಪ್ಪಿಕೊಂಡ್ರು. ಸ್ವಾಭಿಮಾನ ಭಂಗಿತನಾಗಿ ಸೆಟೆದು ಕಲ್ಲಂತಾಗಿದ್ದ ನಾನು ವಾಸ್ತವಕ್ಕೆ ಬಂದು ಮೃದುವಾದೆ. ‘ಹೌದು ನೀನು ಅವನಿಗಿಂತಾ ಬುದ್ಧಿವಂತ. ನೀನು ಓದೇ ಓದ್ತಿಯಾ’ ಅಂತಾ ಭವಿಷ್ಯ ನುಡಿದು ತಗೋ ಎಂದು ನನ್ನ ಕೈಗೆ ಪುಸ್ತಕಕೊಟ್ಟು ಮುಟ್ಟಿಸಿ ಧೀಕ್ಷೆ ಕೊಟ್ಟರು. ಅವತ್ತಿಂದ ಈ ಹೊತ್ತಿನ ವರೆಗೂ ಪುಸ್ತಕವೇ ನನ್ನ ಜೀವ ಜೀವನವಾಗಿಬಿಟ್ಟದೆ. ನಾಕನೇ ತರಗತಿಗೆ ಅಲ್ಲಿ ಉಳಿಯಲೂ ಇಲ್ಲ ಆ ವಯಸ್ಸಿಗೇ ದೊಡ್ಡ ಗಂಡಸಾಗಲೂ ಇಲ್ಲ ನಾನು. ನನ್ನೂರಿಗೆ ಬಂದೆ. ಅಲ್ಲಿ ಏಳನೇ ತರಗತಿ ವರೆಗೂ ಇದ್ದುದರಿಂದ ನಾನು ಮಗುವಾದೆ. ಅಲ್ಲಿಯ ಲಲಿತಮ್ಮ ಟೀಚರ್ ಅಮ್ಮ ಆಗಿದ್ದರು. ಅಜ್ಜಿಯ ಮನೆಯ ಬಾಲ್ಯದಾಟಗಳಲ್ಲಿ ನೆನಪ ಬುತ್ತಿಯಿಂದ ಸೋಸಿ ತೆಗೆದು ಕೊಟ್ಟಿದ್ದೇನೆ. ಪದಮರ್ಯಾದೆ ಮೀರಿಬಿಡಹುದಾದ ಆತಂಕದಲ್ಲಿ.
************************************************
Super
ಬಾಲ್ಯದ ನೆನಪುಗಳು ಅದ್ಭುತವಾಗಿ ೂಡಿಬಂದಿದೆ
ಸಿಹಿ ಕಹಿ ಬಾಲ್ಯದ ನೆನಪು ಈಗಿನ ಯೌವನದ ಹೊಳಪು
Nimma baravanige athi uttama
Superbb
Fantastic writing…
ಕಥೆಯನ್ನು ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ಬರೆದಿದ್ದೀರ. ಒಂದು ಮಗುವು ಯಾವ ರೀತಿಯಲ್ಲಿ ಯೋಚನೆ ಲಹರಿ ಯಲ್ಲಿ ತೊಡಗುತ್ತದೆ ಎಂಬುದನ್ನು ಅತ್ಯುತ್ತಮವಾಗಿ ಚಿತ್ರೀಸಿದ್ದೀರಾ ಜೊತೆಗೆ ಮನಸ್ಸಿಗೆ ಮುಟ್ಟುವ ಕಥೆಯಾಗಿದೆ. ನಿಮ್ಮ ಬರವಣಿಗೆ ಶೈಲಿ ಹಾಗೂ ಮಾತಿನ ದಾಟಿಯು.. ವರ್ಣನೆಯು ಅತ್ಯುತ್ತಮವಾಗಿದೆ ನಿಮ್ಮ ಬರವಣಿಗೆ ಹೀಗೆ ಸಾಗಲಿ. ನಿಲ್ಲದಿರಲಿ ಬರವಣಿಗೆಯ ಪಯಣ. ಉತ್ತಮ ಬರಹಗಾರ ಎಂದು ಹೇಳಲು ಇಷ್ಟ ಪಡುತ್ತೇನೆ.
ನವಿರು ನಿರೂಪಣೆ, ಸೊಗಸಾದ ಬರಹ