ದಾರಾವಾಹಿ

ಅದ್ಯಾಯ-05

ಈಶ್ವರಪುರದ ಹೃದಯಭಾಗದಿಂದ ಸುಮಾರು ಮೂರು ಕಿಲೋಮೀಟರ್ ದೂರದ ಸಣ್ಣದೊಂದು ಊರು, ದೈವದ ಓಣಿ. ಬಹಳ ಹಿಂದೆ ಈ ಊರಿಗೆ ಸರಿಯಾದ ಹೆಸರಿರಲಿಲ್ಲವಂತೆ. ಆದ್ದರಿಂದ ಈ ಊರಿಗೆ ಇಂಥ ಹೆಸರು ಬರಲು ಕಾರಣವಾದ ಕಥೆಯೊಂದಿದೆ. ಸುಮಾರು ನಾಲ್ಕೈದು ಶತಮಾನದ ಹಿಂದೆ ಇಲ್ಲಿ ತೊಮರ ಎಂಬೊಬ್ಬ ಮರ ಕಡಿಯುವ ಕಾಯಕದವನಿದ್ದನಂತೆ. ಅವನು ಆಗೀಗೊಮ್ಮೆ ಘಟ್ಟದ ಮೇಲೂ ಹೋಗಿ ಬರುತ್ತಿದ್ದನಂತೆ. ಅಲ್ಲಿ ಒಮ್ಮೆ ಅವನು ಕಡಿಯುತ್ತಿದ್ದ ದೈತ್ಯ ಮರವೊಂದರಲ್ಲಿ ಕಾರಣಿಕದ ದೈವವೊಂದು ನೆಲೆಸಿತ್ತಂತೆ. ಅದನ್ನು ತಿಳಿಯದ ತೊಮರನು ಆ ಮರವನ್ನು ಕಡಿದುರುಳಿಸಿದನಂತೆ. ಅದರಿಂದ ನೆಲೆ ತಪ್ಪಿದ ದೈವವು ಅಸಹನೆಗೊಂಡು,‘ಎಲವೋ ಮಾನವ, ಅನಾದಿಕಾಲದಿಂದಲೂ ನಾನು ಈ ವೃಕ್ಷವನ್ನೇ ಆಶ್ರಯಿಸಿರುವಂಥ ದೈವಶಕ್ತಿ. ನೀನಿಂದು ನನ್ನ ನಿವಾಸವನ್ನೇ ನಾಶ ಮಾಡಿರುವಿ. ಆದರೂ ಅದು ನಿನ್ನ ತಪ್ಪಲ್ಲ. ವಿಧಿ ನಿಯಮ. ನನಗೀಗ ಬದಲಿ ನೆಲೆಯ ಅಗತ್ಯವಿದೆ. ನನ್ನನ್ನು ನಿನ್ನೂರಿಗೆ ಕರೆದುಕೊಂಡು ಹೋಗಿ ನಂಬಿ ಪೂಜಿಸುತ್ತಿಯಾದರೆ ನಿನ್ನ ಬಡತನವನ್ನು ನಿವಾರಿಸಿಕೊಡುತ್ತೇನೆ!’ ಎಂದು ಅಶರೀರವಾಣಿಯಾಯಿತಂತೆ.

ದೈವದ ಮಾತು ಕೇಳಿದ ತೊಮರ ರೋಮಾಂಚಿತನಾಗಿ ಕೂಡಲೇ ಒಪ್ಪಿದನಂತೆ. ಆದರೆ ದೈವವು ಅವನ ಊರಿಗೆ ಬರಲು ಒಂದು ಶರತ್ತನ್ನು ವಿಧಿಸಿತಂತೆ. ‘ನಾನು ನಿನ್ನ ಊರಿಗೆ ಬಂದು ನಿನ್ನ ಮನೆಯನ್ನು ಪ್ರವೇಶಿಸುವ ತನಕ ಯಾವುದೇ ಕಾರಣಕ್ಕೂ ನೀನು ನನ್ನ ಮೇಲೆ ಅನುಮಾನಗೊಂಡು ಹಿಂದಿರುಗಿ ನೋಡಬಾರದು. ಈ ಮಾತನ್ನು ಮೀರಿದೆಯಾದರೆ ನೀನೆಲ್ಲಿ ನನ್ನನ್ನು ನೋಡುತ್ತೀಯೋ ಅಲ್ಲೇ ನೆಲೆಗೊಳ್ಳುತ್ತೇನೆ!’ ಎಂದು ಎಚ್ಚರಿಸಿತಂತೆ. ಅದಕ್ಕಾತನೂ ಭಯಭಕ್ತಿಯಿಂದ ಸಮ್ಮತಿಸಿ ದೈವವನ್ನು ತನ್ನೂರಿನತ್ತ ಕರೆದೊಯ್ಯತೊಡಗಿದನಂತೆ. ಆ ಶಕ್ತಿಯು ತನ್ನ ಬೆನ್ನ ಹಿಂದೆ ಅನತಿ ದೂರದಲ್ಲಿ ನಡೆದು ಬರುವಾಗ ಅದರ ಕಾಲ ಗಗ್ಗರಗಳಿಂದ ಘೈಲ್, ಘೈಲ್, ಘೈಲ್, ಘೈಲ್! ಎಂದು ಹೊಮ್ಮುತ್ತಿದ್ದ ಝೇಂಕಾರದಿಂದಲೇ ಅದು ತನ್ನನ್ನು ಹಿಂಬಾಲಿಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತ ನಡೆಯುತ್ತಿದ್ದನಂತೆ. ಆದರೆ ತನ್ನ ಮನೆಯತ್ತ ಸಾಗುವ ಕಡಿದಾದ ಓಣಿಯೊಂದನ್ನು ಪ್ರವೇಶಿಸುತ್ತಲೇ ಗಗ್ಗರಗಳ ಸದ್ದು ಹಠತ್ತಾಗಿ ನಿಂತಿತಂತೆ. ಅವನಿಗೆ ತಟ್ಟನೆ ಸಂಶಯ ಮೂಡಿದ್ದರಿಂದ ಒಂದು ಕ್ಷಣ ದೈವದಾಜ್ಞೆಯನ್ನು ಮೀರಿ ಹಿಂದಿರುಗಿ ನೋಡಿಬಿಟ್ಟನಂತೆ!

   ಅವನ ಮನೆಯ ದೈವವಾಗಿ ಅವನ ಕುಟುಂಬವನ್ನು ಉದ್ಧರಿಸಬೇಕೆಂದು ಬಂದಿದ್ದ ಆ ಶಕ್ತಿಗೆ ಅವನ ವರ್ತನೆ ನಿರಾಶೆ ತರಿಸಿತಂತೆ. ಅದು ಕೂಡಲೇ ಅಲ್ಲಿನ ಆಲದ ಮರವೊಂದರ ಬುಡದಲ್ಲಿ ಅದೃಶ್ಯವಾಯಿತಂತೆ. ಆಗ ತೊಮರನಿಗೆ ತನ್ನ ತಪ್ಪಿನರಿವಾಯಿತಂತೆ. ಅವನು ದುಃಖದಿಂದ ದೈವದೊಡನೆ ಬಗೆಬಗೆಯಾಗಿ ಕ್ಷಮೆಯಾಚಿಸಿದನಂತೆ. ಆದರೂ ದೈವವು ಕರಗಲಿಲ್ಲವಂತೆ. ಕೊನೆಗೆ ವಿಧಿಯಿಲ್ಲದೆ ಆ ಮರದ ಬುಡದಲ್ಲಿಯೇ ಅದನ್ನು ನಂಬಿಕೊಂಡು ಬಂದನಂತೆ. ಆನಂತರ ಆ ಶಕ್ತಿಯು ಊರ ದೈವವಾಗಿ ನೆಲೆಗೊಂಡಿತಂತೆ. ಅಂದಿನಿಂದ ಈ ಗ್ರಾಮಕ್ಕೆ ದೈವದ ಓಣಿ ಎಂಬ ಹೆಸರು ಬಂತುಎಂದು ಊರ ಹಿರಿಯರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಆಗಾಗ ಈ ಕಥೆಯನ್ನು ಹೇಳುತ್ತಿರುತ್ತಾರೆ.

ಇದೇ ದೈವದ ಓಣಿಯ ಅನಂತರಾಮ ಮತ್ತು ವನಜಾಕ್ಷಿಯ ಏಕೈಕ ಪುತ್ರ ಏಕನಾಥ. ಆರನೇ ತರಗತಿಯವರೆಗೆ ಈಶ್ವರಪುರದ ಮೈನ್ ಶಾಲೆಯಲ್ಲಿ ಚುರುಕಾಗಿ ಕಲಿಯುತ್ತಿದ್ದ ಹುಡುಗನಿಗೆ ವಿಧಿಯು ಮುಂದಿನ ವಿದ್ಯಾಭ್ಯಾಸವನ್ನು ಹಣೆಯಲ್ಲಿ ಬರೆದಿರಲಿಲ್ಲವೇನೋ. ಅವನು ಹುಟ್ಟಿದ ಕೆಲವು ವರ್ಷಗಳ ನಂತರ ಅಪ್ಪ ಅಸ್ತಮಪೀಡಿತನಾಗಿಹಾಸಿಗೆ ಹಿಡಿಯುತ್ತಿದ್ದುದನ್ನುಮತ್ತು ಅಮ್ಮ ಅಕ್ಕಪಕ್ಕದ ಬ್ರಾಹ್ಮಣರ, ಕೊಂಕಣಿಗರ ಮನೆಗೆಲಸ ಮಾಡುತ್ತ ತನ್ನನ್ನೂ ಅಪ್ಪನನ್ನೂ ಎರಡು ಹೊತ್ತಿನ ತುತ್ತಿಗೆ ತತ್ವಾರವಾಗದಂತೆ ಸಾಕುತ್ತಿದ್ದವಳ ಕಷ್ಟವನ್ನೂ ಕಾಣುತ್ತ ಬಂದವನು ಮುಂದೆ ಓದಲು ಮನಸ್ಸಿಲ್ಲದೆ ವಿದ್ಯೆಗೆ ತಿಲಾಂಜಲಿಯಿಟ್ಟ. ಅದೇ ವರ್ಷ ತಾಯಿಯ ತಮ್ಮ ವಾಸುದೇವ ಮುಂಬೈಯಿಂದ ಬಂದವನು ಮರಳಿ ಹೊರಟಾಗ ಅವನೊಡನೆ ಮುಂಬೈಗೆ ಹೊರಟು ಹೋದ.

                                                                                ***

ಕೇರಳದ ತಾಂತ್ರಿಕ ಪೆದುಮಾಳರು, ಮುಂಬೈ ನಗರಿಯ ಧಾರ್ಮಿಕ ವಲಯದಲ್ಲಿ ಸಾಕಷ್ಟು ದೊಡ್ಡ ಹೆಸರು ಮಾಡಿದವರು. ಅವರು ವಾಸುದೇವನ ಕ್ಯಾಂಟೀನಿಗೆ ಚಹಾ ಕುಡಿಯಲು ಬರುತ್ತಿದ್ದ ಸಂದರ್ಭದಲ್ಲಿ,‘ತಮಗೊಬ್ಬ ಸಹಾಯಕ ಹುಡುಗನ ಅಗತ್ಯವಿತ್ತು ಮಾರಾಯಾ. ನಿಮ್ಮೂರಿನವನಾದರೆ ಒಳ್ಳೆಯದಿತ್ತು!’ ಎಂದು ಹೇಳಿದ್ದರು. ಆವಾಗ, ವಾಸುದೇವನಿಗೆ ತನ್ನ ಅಕ್ಕನ ಮಗ ಏಕನಾಥನ ನೆನಪಾಗಿತ್ತು. ಆ ವರ್ಷ ಎಪ್ರಿಲ್ ತಿಂಗಳ ರಜೆಯಲ್ಲಿ ಊರಿಗೆ ಬಂದವನು ಅಕ್ಕನಿಗೂ, ಭಾವನಿಗೂ ಪೆದುಮಾಳರ ವೃತ್ತಾಂತವನ್ನೂ, ಅವರ ಜನಪ್ರಿಯತೆಯನ್ನೂ ಒಂದಕ್ಕೆರಡು ಮಾಡಿ ಹೊಗಳುತ್ತ,‘ನಮ್ಮ ಏಕನಾಥ ಅಂಥ ವಿದ್ವಾಂಸರೊಡನೆ ಸೇರಿ ತಾಂತ್ರಿಕ ವಿದ್ಯೆಗಳನ್ನು ಕಲಿತನೆಂದರೆ ಆಮೇಲೆ ಈಶ್ವರಪುರದಲ್ಲಿ ಅವನನ್ನು ಮೀರಿಸುವ ತಾಂತ್ರಿಕರೂ, ಶ್ರೀಮಂತರೂ ಯಾರೂ ಇರಲಾರರು! ಅದು ನಮ್ಮ ಮನೆತನಕ್ಕೊಂದು ಹೆಮ್ಮೆಯ ವಿಚಾರವಲ್ಲವಾ!’ ಎಂದು ಭವಿಷ್ಯ ನುಡಿದು ಅವರನ್ನು ಒಪ್ಪಿಸಿದ. ಆದರೂ ಇರುವ ಒಬ್ಬನೇ ಮಗ ತಮ್ಮಿಂದ ದೂರವಾಗಿ ಪರವೂರಿನಲ್ಲಿ ಜೀತ ಮಾಡುವುದನ್ನು ತಾಯಿ ವನಜಾಕ್ಷಿಗೆ ನೆನೆಸಿಕೊಳ್ಳಲೂ ಕಷ್ಟವಾಗುತ್ತಿತ್ತು. ಆದರೆ ಮಗನ ಭವಿಷ್ಯದ ಕುರಿತು ಯೋಚಿಸಿ ತಣ್ಣಗಾಗುತ್ತಿದ್ದಳು. ಆದರೂ ಅವನು ಹೊರಡುವ ದಿನ ಬಹಳವೇ ದುಃಖಿಸಿದಳು. ಅದನ್ನು ಕಂಡ ವಾಸುದೇವ ಸಿಟ್ಟಾಗಿ ಅಕ್ಕನನ್ನು ಚೆನ್ನಾಗಿ ಜರೆದು ಮೃದುವಾಗಿ ಬುದ್ಧಿವಾದವನ್ನೂ ಹೇಳಿ ಏಕನಾಥನನ್ನು ಅವಳಿಂದ ಕಿತ್ತುಕೊಂಡಂತೆಯೇ ಹೊರಡಿಸಿಕೊಂಡು ಹೋಗಿ ಪೆದುಮಾಳರ ಮನೆಯಲ್ಲಿ ಬಿಟ್ಟ.

ಏಕನಾಥನೂ ಅಮ್ಮನ ಮೇಲಿದ್ದ ಸಂಸಾರದ ಹೊರೆಯನ್ನು ಇಳಿಸಲೆಂದೇ ಮುಂಬೈಯಲ್ಲಿ ದುಡಿಯಲು ಮನಸ್ಸು ಮಾಡಿದ್ದ. ಮುಂಬೈಗೆ ಹೋಗುವುದೆಂದು ನಿಶ್ಚಯಿಸಿದ ಮೇಲೆ ಆ ಮಹಾನಗರಿಯ ಬಗ್ಗೆ ಅವನು ತನ್ನ ಮುರುಕಲು ಕೋಣೆಯಲ್ಲಿ ಕುಳಿತು ರಮ್ಯವಾದ ಕನಸು ಕಾಣತೊಡಗಿದ್ದ. ಆ ಪರವೂರಿನಲ್ಲಿ ದುಡಿಯುತ್ತ ತಾನೊಬ್ಬ ಆಗರ್ಭ ಶ್ರೀಮಂತನಾಗಿ ಅಮ್ಮ ಅಪ್ಪನನ್ನು ಸುಖದ ಸುಪ್ಪತ್ತಿಗೆಯಲ್ಲಿರಿಸಬೇಕು. ಅದೊಂದೇ ತನ್ನ ಜೀವನದ ಗುರಿ! ಎಂದೆಲ್ಲ ಯೋಚಿಸುತ್ತ ರೋಮಾಂಚನಗೊಳ್ಳುತ್ತಿದ್ದ. ಆದರೆ ಮುಂಬೈಗೆ ಬಂದು ಪೆದುಮಾಳರ ಮನೆಯಲ್ಲಿ ದುಡಿಯತೊಡಗಿದ ಮೇಲೆ ಅವನ ಸುಂದರ ಕನಸುಗಳೆಲ್ಲ ನುಚ್ಚುನೂರಾಗಿಬಿಟ್ಟವು! ಪೆದುಮಾಳರ ಮನೆ ಅವನಿಗೆ ತನ್ನನ್ನು ನಿಷ್ಕರುಣೆಯಿಂದ ದುಡಿಸುತ್ತ ದಂಡಿಸುವ ಕಾರಾಗ್ರಹದಂತಾಗಿತ್ತು. ಅಲ್ಲಿ ತಾನೊಬ್ಬ ಜೀವಾವಧಿ ಶಿಕ್ಷೆಗೊಳಗಾದ ಬಾಲ ಕೈದಿಯಂತೆಯೂ ಅದರ ಕ್ರೂರ ಜೈಲರುಗಳಾಗಿ ಪೆದುಮಾಳರು ಮತ್ತವರ ಪತ್ನಿ ಅಂಬುಜಮ್ಮನೂ ಎಂಬುದು ಖಚಿತವಾಗಲು ಅವನಿಗೆ ಬಹಳ ದಿನ ಬೇಕಾಗಲಿಲ್ಲ. ಮುಂಜಾನೆ ನಾಲ್ಕು ಗಂಟೆ ಹೊಡೆಯುತ್ತಿದ್ದಂತೆಯೇ ಪೆದುಮಾಳರು ಅಥವಾ ಅಂಬುಜಮ್ಮಾ ಏಕನಾಥನನ್ನು ಎಡಗಾಲಿನಿಂದ ಒದ್ದು, ತಿವಿದು ಎಬ್ಬಿಸುತ್ತಿದ್ದರು. ಅವನು ಎದ್ದು ಮುಖ ತೊಳೆಯುತ್ತಲೇ ಅಂದಿನ ಪೂಜಾ ಕೈಂಕರ್ಯಗಳಿಗೆ ಬೇಕಾದ ಪರಿಕರಗಳನ್ನು ಹೊಂದಿಸುವ ಕೆಲಸಕಾರ್ಯಗಳನ್ನಾರಂಭಿಸಬೇಕಿತ್ತು. ಅದು ಮುಗಿಯುತ್ತಲೇ ಯಜಮಾನ್ತಿಗೆ ಅಡುಗೆಗೆ ಸಹಾಯ ಮಾಡಬೇಕಿತ್ತು. ಅನಂತರ ಇಬ್ಬರ ಬಟ್ಟೆಬರೆಗಳನ್ನೂ ಒಗೆಯಬೇಕಿತ್ತು. ವಿಶಾಲ ಮನೆಯನ್ನು ಗುಡಿಸಿ, ಒರೆಸಿ ಶುಚಿಗೊಳಿಸುವವರೆಗಿನ ಎಲ್ಲಾ ಕೆಲಸಕಾರ್ಯಗಳನ್ನೂ ಅವರು ಆ ಎಳೆಯ ಹುಡುಗನಿಂದಲೇ ಮಾಡಿಸುತ್ತಿದ್ದರು. ಇದರಿಂದ ಬಳಲಿ ಬೆಂಡಾಗುತ್ತಿದ್ದ ಬಾಲಕ ಮೊದಮೊದಲು ಅಷ್ಟೊಂದು ದುಡಿಯಲು ಶಕ್ತಿಯಿಲ್ಲದೆ ಕೋಣೆ ಸೇರಿ ಅಳುತ್ತ ಕುಳಿತುಬಿಡುತ್ತಿದ್ದ. ಆಗೆಲ್ಲ ಯಜಮಾನ, ಯಜಮಾನ್ತಿಯಿಂದ ಪೊರಕೆ ಅಥವಾ ದಪ್ಪಗಾಲಿನ ಬೀಸು ಒದೆತಗಳು ಅವನ ದುಃಖದ ಉಸಿರುಗಟ್ಟಿಸುತ್ತಿದ್ದವು. ಹಾಗಾಗಿ ಹುಡುಗನಿಗೆ ಅಂಥ ದೈಹಿಕ ನೋವು ಹಿಂಸೆಗಿಂತ ನಿಷ್ಕರುಣೆಯ ಚಾಕರಿಯೇ ಲೇಸು ಎಂದೆನಿಸಿ ಅವನ ಅಳು ಆಕ್ರಂದನದ ಸೊಲ್ಲಡಗಿತು. ಅಂದಿನಿಂದ ಉಸಿರೆತ್ತದೆ ಜೀತದ ಯಂತ್ರವಾದ.

ಈ ನಡುವೆ ಮಾವ ವಾಸುದೇವ ಅಳಿಯನನ್ನು ನೋಡಿಕೊಂಡು ಹೋಗಲು ಆಗಾಗ ಬರುತ್ತಿದ್ದ. ಆಹೊತ್ತು ಏಕನಾಥನಿಗಾಗುವ ಆನಂದ, ದುಃಖವನ್ನು ಹೇಳತೀರದು. ತನ್ನವರ ಮಾತು ಹಾಗಿರಲಿ ತನ್ನೂರಿನದ್ದೂ ಒಂದೇ ಒಂದು ಪರಿಚಯದ ಮುಖವನ್ನು ಕಾಣದೆ ಅನಾಥರಲ್ಲಿ ಅನಾಥನಂತಿದ್ದ ಹುಡುಗನಿಗೆ ಮಾವನನ್ನು ಕಾಣುತ್ತಲೇ ಕಾರ್ಗತ್ತಲ ಬಾನಿನಲ್ಲಿ ನೂರು ನಕ್ಷತ್ರಗಳು ಹೊಳೆದಷ್ಟು ಖುಷಿಯಾಗುತ್ತಿತ್ತು. ಮಾವ ಬಂದವನು ಪೆದುಮಾಳರೊಂದಿಗೆ ಮಾತುಕತೆಯಾಡಿ ಯಾವಾಗ ತನ್ನತ್ತ ಬರುತ್ತಾನೋ ಎಂದು ತೀವ್ರ ಚಡಪಡಿಕೆಯಿಂದ ಕಾಯುತ್ತಿದ್ದ. ಅವನು ಎದ್ದು ನಗುತ್ತ ತನ್ನತ್ತ ಹೆಜ್ಜೆಯಿಡುತ್ತಲೇ ಪೆದುಮಾಳರ ಕಣ್ಣು ತಪ್ಪಿಸಿ ಮಾವನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ತನ್ನ ಪಾಳು ಕೋಣೆಗೆ ಎಳೆದೊಯ್ಯುತ್ತಿದ್ದ. ಅಲ್ಲಿ ಒತ್ತರಿಸಿ ಬರುತ್ತಿದ್ದ ದುಃಖದಿಂದ ಮಾವನನ್ನು ಬಿಗಿದಪ್ಪಿ ಗಳಗಳನೇ ಅಳುತ್ತ,‘ಹೇ, ಮಾವಾ ನಿನ್ನ ದಮ್ಮಯ್ಯ ಮಾರಾಯಾ…! ಒಮ್ಮೆ ಈ ಜೈಲಿನಿಂದ ನನ್ನನ್ನು ಬಿಡಿಸಿ ಅಮ್ಮನ ಹತ್ತಿರ ಕರೆದೊಯ್ದು ಬಿಡೋ. ಇಲ್ಲಿ ನಾಯಿಗಿಂತಲೂ ಕಡೆಯಾಗಿ ದುಡಿದು ಸಾಯಲು ನನ್ನಿಂದ ಸಾಧ್ಯವಿಲ್ಲವೋ. ವಿಪರೀತಆಯಾಸವಾಗಿ ಸ್ವಲ್ಪ ವಿಶ್ರಾಂತಿಗೆ ಕುಳಿತರೂ ಸಾಕು, ದನಕ್ಕೆ ಬಡಿವಂತೆ ಬಡಿಯುತ್ತಾರೋ. ನಿನ್ನ ಕಾಲು ಹಿಡಿತೇನೆ ಮಾವಾ ಊರಿಗೆ ಕರೆದುಕೊಂಡು ಹೋಗೋ…!’ ಎಂದು ವಾಸುದೇವನ ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡು ದೀನನಾಗಿ ಅಂಗಲಾಚುತ್ತಿದ್ದ.

ಅದರಿಂದ ವಾಸುದೇವನೂ ಅವಕ್ಕಾಗುತ್ತ ಅಕ್ಕನ ಮಗನ ಹೀನಾವಸ್ಥೆಯನ್ನು ಕಂಡು ಮರುಗುತ್ತಿದ್ದ. ಆದರೆ ಅವನನ್ನು ಕರೆದುಕೊಂಡು ಬಂದು ತಮಗೊಪ್ಪಿಸಿದ ಖುಷಿಗೆ ಪೆದುಮಾಳರು ಗರಿಗರಿಯಾದ ನೂರರ ಇಪ್ಪತ್ತು ನೋಟುಗಳನ್ನು ಸರಸರನೇ ಎಣಿಸಿ ಭಕ್ಷೀಸು ನೀಡಿದ್ದನ್ನು ನೆನೆಯುತ್ತಲೇ ಅವನ ಕರುಣೆಮಬ್ಬಾಗುತ್ತಿತ್ತು. ಹಾಗಾಗಿ ಅಳಿಯನ ಕಷ್ಟಕ್ಕೆ ಸ್ಪಂದಿಸುವ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುತ್ತ,‘ಅಳಬೇಡ ಏಕನಾಥ, ನನ್ನ ಮಾತನ್ನು ಗಮನವಿಟ್ಟು ಕೇಳು. ಇಲ್ಲಿನ ಕೆಲಸ ಕಷ್ಟವೆಂದು ನಿರಾಶನಾಗಬೇಡ. ನೀನಿಲ್ಲಿ ದುಡಿಯದಿದ್ದರೆ ಅಲ್ಲಿ ನಿನ್ನ ಅಪ್ಪನಿಗೆ ಔಷಧಿಯೂ ಇಲ್ಲ, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವವರೂ ಇಲ್ಲ. ಅವರಿಬ್ಬರೂ ಸುಖವಾಗಿರಬೇಕಾದರೆ ನೀನಿಲ್ಲಿ ಎಲ್ಲಾ ಕಷ್ಟಗಳನ್ನು ನುಂಗಿಕೊಂಡು ಪೆದುಮಾಳರಿಂದ ತಾಂತ್ರಿಕ ವಿದ್ಯೆಗಳನ್ನು ಕಲಿತು ದೊಡ್ಡ ಜನವಾಗಬೇಕು. ಅದಕ್ಕೆ ಮನಸ್ಸು ಮಾಡು! ಪೆದುಮಾಳರಿಗೂ ಅವರ ಪತ್ನಿಗೂ ವಿಧೇಯನಾಗಿ ನಡೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೋ. ನಿನ್ನ ಮೇಲೆ ಅವರಿಗೆ ಅಭಿಮಾನ ಹುಟ್ಟಿತೆಂದರೆ ಒಂದು ದಿನ ಇಡೀ ಮುಂಬೈಗೆ ನೀನು ರಾಜಮಾಂತ್ರಿಕನಂತೆ ಮೆರೆಯುತ್ತಿ ನೋಡುತ್ತಿರು!’ ಎಂದು ಬುದ್ಧಿವಾದದ ರೂಪದಲ್ಲಿ ಹುಡುಗನ ಮುಗ್ಧ ಮನಸ್ಸಿಗೆ ಆಮಿಷವನ್ನೂ ತುರುಕಿಸುತ್ತಿದ್ದ. ಮಾವನ ಬಾಯಲ್ಲಿ ಅಪ್ಪ, ಅಮ್ಮನ ಮಾತು ಹೊರಟ ಮರುಕ್ಷಣ ಏಕನಾಥ ಮೃದುವಾಗುತ್ತಿದ್ದ. ಮುದುಡಿ ಕುಳಿತು ತನ್ನನ್ನೇ ಪಿಳಿಪಿಳಿ ದಿಟ್ಟಿಸುತ್ತಿದ್ದ ಅಳಿಯನ ತಲೆಯನ್ನು ನಿಸ್ಸಾರವಾಗಿ ನೇವರಿಸುತ್ತಿದ್ದ ವಾಸುದೇವ ಮತ್ತಲ್ಲಿ ನಿಲ್ಲದೆ ರಪ್ಪನೆ ಹೊರಟು ಬಿಡುತ್ತಿದ್ದ. ಇತ್ತ ಏಕನಾಥನ ಕೋಣೆಯ ಗೋಡೆಗೆ ಕಿವಿಯಾಗಿ ಮಾವ, ಅಳಿಯನ ಮಾತುಕತೆಯನ್ನು ಆಲಿಸುತ್ತ ನಿಲ್ಲುತ್ತಿದ್ದ ಅಂಬುಜಮ್ಮ, ಎರಡಾಳಿನಷ್ಟು ದುಡಿಯುವ ಹುಡುಗನೆಲ್ಲಿ ತಮ್ಮ ಕೈತಪ್ಪುತ್ತಾನೋ ಎಂಬ ಆತಂಕದಿಂದ ಚಡಪಡಿಸುತ್ತಿದ್ದರು. ಆಗೆಲ್ಲ ಹುಡುಗ ತಮ್ಮ ಮೇಲೆ ಮಾಡುವ ಆರೋಪದ ಸಣ್ಣಪುಟ್ಟ ತುಣುಕುಗಳು ಅವರಕಿವಿಗೂ ಬಿದ್ದು ಮೈಯೆಲ್ಲ ಉರಿಯುತ್ತಿತ್ತು. ಆದರೆ ಕೊನೆಯಲ್ಲಿ ವಾಸುದೇವ ಅವನಿಗೆ ನೀಡುವ ಉಪದೇಶ ಕೇಳುತ್ತ ಸ್ಥಿಮಿತಕ್ಕೆಬರುತ್ತಿದ್ದರು. ವಾಸುದೇವ ಹೊರಗೆ ಬರುತ್ತಲೇ ಅವನನ್ನು ನಗುತ್ತ ಪಡಸಾಲೆಗೆ ಕರೆದೊಯ್ದು ಬಿಸಿಬಿಸಿ ಪುಳಿಯೊಗರೆಯನ್ನೂ, ಕಾಫಿಯನ್ನೂ ಕೊಟ್ಟು ಎದುರು ಕುಳಿತು ಉಪಚರಿಸುತ್ತಿದ್ದರು. ವಾಸುದೇವನೂ ಅವರೆಡೆಗೆ ಧನ್ಯತೆಯ ದೃಷ್ಟಿ ಬೀರುತ್ತ ಚೂರೂ ಸಂಕೋಚಿಸದೆ ಉಪಹಾರ ಕಬಳಿಸುತ್ತಿದ್ದ.

‘ನಿನ್ನ ಹುಡುಗನಿಗೆ ನಾವು ಹೇಳುವ ಒಂದೇ ಒಂದು ಕೆಲಸವನ್ನೂ ಸರಿಯಾಗಿ ಮಾಡುವ ಗುಣವಿಲ್ಲ ಮಾರಾಯಾ. ತುಂಬಾ ಹಠಮಾರಿ. ಅವನು ಮಾಡುವ ಪ್ರತಿಯೊಂದನ್ನೂ ಮತ್ತೊಮ್ಮೆ ನಾವೇ ಮಾಡಬೇಕಾಗುತ್ತದೆ ಕರ್ಮದ್ದು!’ ಎಂದು ಅಂಬುಜಮ್ಮ ದೂರುತ್ತಿದ್ದರು.

‘ಹೌದಾ ಅಂಬುಜಮ್ಮಾ ಛೇ! ಛೇ! ಏನು ಮಾಡುವುದು ಹೇಳಿ, ಅವನ ಮನೆಯಲ್ಲಿ ಸುಟ್ಟು ತಿನ್ನುವ ಬಡತನವಿದ್ದರೂ ಅಕ್ಕ ಅವನಿಗೊಂಚೂರೂ ಕಷ್ಟ ತಿಳಿಯದಂತೆ ಬೆಳೆಸಿಬಿಟ್ಟಳು. ಹಾಗಾಗಿ ಅವನ ಸ್ವಭಾವ ಸ್ವಲ್ಪ ಸೊಟ್ಟಗಿದೆ ಅಷ್ಟೇ. ಆದರೆ ಇನ್ನೂ ಸಣ್ಣ ಪ್ರಾಯ ಅಲ್ಲವಾ. ನೀವು ಸ್ವಲ್ಪ ಪ್ರೀತಿಯಿಂದ ನೋಡಿಕೊಂಡರೆ ಖಂಡಿತಾ ಹುಷಾರಾಗುತ್ತಾನೆ. ಊರಿನಲ್ಲಿ ಅವ್ನು ಎಂಥ ಚೂಟಿಯಾದ ಹುಡುಗ ಗೊತ್ತುಂಟಾ!’ ಎಂದು ಉದ್ಗರಿಸುವವನು ರಪ್ಪನೇ,‘ಏನೇ ಹೇಳಿ ಅಂಬುಜಮ್ಮಾ ನಿಮ್ಮ ಪುಳಿಯೊಗರೆಯಂತೂ ಅದ್ಭುತ!’ ಎಂದು ಹೊಗಳುತ್ತ ವಿಷಯವನ್ನು ಮರೆಸುತ್ತಿದ್ದ. ಅಂಬುಜಮ್ಮನೂ ಉಬ್ಬುತ್ತ,‘ಎಂಥ ಅದ್ಭುತವೋ ಕಾಣೆ. ಏನು ಮಾಡಿದರೂ ತಿನ್ನುವುದಕ್ಕಿರುವುದು ನಾವಿಬ್ಬರೇ ಅಲ್ಲವಾ. ನಿನ್ನಂಥ ಆಪ್ತೇಷ್ಟರು ಬಂದು ಹೋಗುತ್ತಿದ್ದರೆ ನಮಗೂ ಸಂತೋಷವಾಗುತ್ತದೆ ಮಾರಾಯಾ!’ ಎಂದು ಪರವೂರಿನ ಏಕಾಕಿತನದ ಬೇಸರವನ್ನು ಅವನೊಂದಿಗೆ ಹಂಚಿಕೊಳ್ಳುತ್ತ ಏಕನಾಥನ ಮೇಲಿನ ಅಸಹನೆಯನ್ನು ಮರೆಯುತ್ತಿದ್ದರು.

‘ಅಯ್ಯಯ್ಯೋ ಅಂಬುಜಮ್ಮಾ ನೀವು ಹಾಗನ್ನುತ್ತಿರಾದರೆ ನಾನು ದಿನಾಲು ಬಂದು ಪುಷ್ಕಳ ಭೋಜನ ಕತ್ತರಿಸಲು ಸಿದ್ಧ!’ ಎಂದು ವಾಸುದೇವ ಜೋರಾಗಿ ನಗುತ್ತಿದ್ದ. ಅದಕ್ಕೆ ಅಂಬುಜಮ್ಮನೂನಗುತ್ತ,‘ಅದಕ್ಕೇನಂತೆ ಮಾರಾಯಾ…ಖಂಡಿತಾ ಬಾ, ಯಾರು ಬೇಡಾಂತಾರೆ. ನೀನೂ ನಮ್ಮವನೇ ಅಲ್ಲವಾ…?’ ಎನ್ನುತ್ತಿದ್ದರು.

‘ಬರಬಹುದು ಅಂಬುಜಮ್ಮಾ. ಆದರೆ ಈ ಮುಂಬೈ ಟ್ರೈನ್‍ನಲ್ಲಿ ಒಮ್ಮೆ ಬರಬೇಕಾದರೇನೇ  ಅರೆಜೀವವಾಗುತ್ತದೆ. ಇನ್ನು ದಿನಾ ಬರುವಂತಾದರೆ ನಾನು ರೈಲಿನಲ್ಲೇ ಖೋತಾ ಹೊಡೆಯುವುದು ಗ್ಯಾರಂಟಿ!’ ಎಂದು ನಗುತ್ತ ಉತ್ತರಿಸುವ ವಾಸುದೇವ ಮೆತ್ತಗೆ ಅಲ್ಲಿಂದೆದ್ದು ಪೆದುಮಾಳರ ಕೊಠಡಿಯತ್ತ ನಡೆಯುತ್ತಿದ್ದ. ಅವರನ್ನೂ ಒಂದಷ್ಟು ಹೊತ್ತು ಗುಣಗಾನ ಮಾಡಿ ಅದಕ್ಕೆ ಪ್ರತಿಯಾಗಿ ಹಣದ ರೂಪದ ಆಶೀರ್ವಾದವನ್ನು ಪಡೆದು ಖುಷಿಯಿಂದ ಹಿಂದಿರುಗುತ್ತಿದ್ದ.

ಹಗಲಿರುಳೆನ್ನದೆ ಕಿಕ್ಕಿರಿದ ಜನಸಂದಣಿಯ ಪರಕೀಯ ರಾಜ್ಯದಲ್ಲಿ ಏಕನಾಥನ ಪಾಲಿಗೆ ತನ್ನವರು ಎಂದದುಇದ್ದುದು ವಾಸುದೇವ ಮಾವನೊಬ್ಬನೇ! ಆದರೆ ಅವನೇ ತನ್ನನ್ನು ನಡುನೀರಿನಲ್ಲಿ ಕೈಬಿಟ್ಟಿದ್ದು ಬಾಲಕನನ್ನು ತೀವ್ರ ಹತಾಶೆಗೆ ತಳ್ಳುತ್ತಿತ್ತು. ಆದ್ದರಿಂದ ವಿಧಿಯಿಲ್ಲದೆ ಪೆದುಮಾಳ ದಂಪತಿಯ ದಬ್ಬಾಳಿಕೆಯನ್ನು ಸಹಿಸಿಕೊಳ್ಳತೊಡಗಿದ. ತನ್ನ ಕುಟುಂಬದ ಕೆಟ್ಟ ಬಡತನದಿಂದಾಗಿಯೇ ತಾನಿಂದು ಹೆತ್ತವರನ್ನೂ ಹುಟ್ಟೂರನ್ನೂ ತೊರೆದು ಬರುವಂತಾಗಿದ್ದು. ಅಂಥ ದಾರಿದ್ರ್ಯವನ್ನು ಗೆದ್ದು ತೋರಿಸಬೇಕು. ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಲಾದರೂ ತಾನು ಇಲ್ಲಿನ ಕಷ್ಟಗಳನ್ನೆಲ್ಲ ನುಂಗಿಕೊಳ್ಳಬೇಕು ಎಂದು ನಿರ್ಧರಿಸಿದವನು ಆಮೇಲೆಇಷ್ಟಪಟ್ಟು ದುಡಿಯತೊಡಗಿದ. ಹುಡುಗನಲ್ಲಾದ ಬದಲಾವಣೆಯನ್ನು ಕಾಣುತ್ತ ಬಂದ ಪೆದುಮಾಳ ದಂಪತಿಯೂ ಮೃದುವಾಗುತ್ತ ಬಂದವರು ತಮ್ಮ ಹೊಡೆತ ಬಡಿತವನ್ನು ಸುಮಾರಾಗಿ ನಿಲ್ಲಿಸಿಬಿಟ್ಟರು. ಆದರೆ ಚಾಕರಿಯವನೊಬ್ಬನನ್ನು ಎಲ್ಲಿಡಬೇಕೋ ಅಲ್ಲಿಗಿಂತ ಮೇಲಿಡಲು ಅವರು ಇಷ್ಟಪಡಲಿಲ್ಲ. ಆದರೂ ಏಕನಾಥ ಸೈರಣೆಯಿಂದ ಬೆಳೆಯತೊಡಗಿದ.

ಏಕನಾಥ ದುಡಿದ ಸಂಬಳವನ್ನು ವಾಸುದೇವನೇ ತಿಂಗಳು, ತಿಂಗಳು ಬಂದು ಪೆದುಮಾಳರಿಂದ ತೆಗೆದುಕೊಂಡು ಹೋಗಿ ಒಂದಿಷ್ಟನ್ನು ಅವನ ಅಮ್ಮನಿಗೆ ಮನಿ ಆರ್ಡರ್ ಮಾಡುತ್ತಿದ್ದ. ಎರಡು ಮೂರು ವರ್ಷಗಳಿಗೊಮ್ಮೆ ಏಕನಾಥ, ಮಾವನೊಂದಿಗೆ ಊರಿಗೆ ಹೋಗಿ ಅಪ್ಪ ಅಮ್ಮನೊಡನೆ ಕೆಲವು ದಿನಗಳ ಕಾಲ ಇದ್ದು ಬರುತ್ತಿದ್ದ. ಆದರೆ ವಾಸುದೇವ ತನ್ನ ಸಂಬಳವನ್ನು ಅಮ್ಮನಿಗೆ ಪೂರ್ತಿಯಾಗಿ ತಲುಪಿಸುತ್ತಿಲ್ಲ ಎಂಬುದು ಒಮ್ಮೆ ಅಮ್ಮನಿಂದಲೇ ತಿಳಿದಾಗ ಆಘಾತಗೊಂಡ. ಅಂದಿನಿಂದ ಪೆದುಮಾಳರ ಮನವೊಲಿಸಿ ಸಂಬಳವನ್ನು ತಾನೇ ತೆಗೆದುಕೊಂಡು ಊರಿಗೆ ಕಳುಹಿಸತೊಡಗಿದ. ಅದನ್ನು ತಿಳಿದ ವಾಸುದೇವ ಆವತ್ತೊಮ್ಮೆ ಕೋಪದಿಂದ ಬಂದು ಏಕನಾಥನಿಗೆ ಬಾಯಿಗೆ ಬಂದಹಾಗೆ ಬೈದು ಹೋದವನು ಮತ್ತೆ ಅತ್ತ ತಲೆಹಾಕಲಿಲ್ಲ. ಏಕನಾಥನಿಗೂ ಅದೇ ಬೇಕಿತ್ತು. ಆವತ್ತಿನಿಂದ ಅವನೂ ಮಾವನ ಸಂಬಂಧವನ್ನು ಕಡಿದುಕೊಂಡ.

ಏಕನಾಥ ಮುಂಬೈಗೆ ಬಂದ ಐದು ವರ್ಷಗಳ ನಂತರ ಅವನ ಅಪ್ಪ ತೀರಿಕೊಂಡರು. ಆಗ ಊರಿಗೆ ಬಂದು ಅಪ್ಪನ ಶವ ಸಂಸ್ಕಾರ ಮಾಡಿ ಸಣ್ಣ ರೀತಿಯಲ್ಲಿ ಶ್ರಾದ್ಧಕಾರ್ಯವನ್ನು ಮುಗಿಸಿ ಅಮ್ಮನಿಗೆ ಧೈರ್ಯ ಹೇಳಿ ಹಿಂದಿರುಗಿದ. ವನಜಾಕ್ಷಮ್ಮನೂ ಈಗ ಹೊರಗೆ ದುಡಿಯಲು ತ್ರಾಣವಿಲ್ಲದೆ ಮನೆಯಲ್ಲಿ ಕುಳಿತು ಬತ್ತಿ ಹೊಸೆದು ದೇವಸ್ಥಾನಗಳ ಸುತ್ತಮುತ್ತದ ಅಂಗಡಿಗಳಿಗೆ ಮಾರುವ ಕಾಯಕ ಆರಂಭಿಸಿದ್ದಳು. ಜೊತೆಗೆ ಮಗನ ಒಂದಷ್ಟು ಸಂಪಾದನೆಯೂ ಅವಳ ಜೀವನೋಪಾಯಕ್ಕೆ ಸಾಕಾಗುತ್ತಿತ್ತು. ಆದ್ದರಿಂದ ದೀರ್ಘಕಾಲ ರೋಗ ಪೀಡಿತನಾಗಿದ್ದ ಗಂಡನ ಸಾವಿನಿಂದ ಬಿಡುಗಡೆ ದೊರೆತ ಸಣ್ಣ ಸಮಾಧಾನವೂ ಸೇರಿ ಒಂಟಿ ಜೀವನವನ್ನು ನೆಮ್ಮದಿಯಿಂದ ಕಳೆಯುತ್ತಿದ್ದಳು.

ಇತ್ತ, ಪೆದುಮಾಳರಿಗೂ ವಯಸ್ಸಾಗುತ್ತ ಬರುತ್ತಿತ್ತು. ಅವರು ಏಕನಾಥನ ಚುರುಕುತನವನ್ನೂ ವೃತ್ತಿನಿಷ್ಠೆಯನ್ನೂ ಕಾಣುತ್ತ ಬರುತ್ತಿದ್ದವರು ತಮ್ಮೆಲ್ಲ ಕೈಂಕರ್ಯಗಳಿಗೂ ಅವನನ್ನೇ ಅವಲಂಬಿಸತೊಡಗಿದರು. ಆದರೆ ಯಾವುದೇ ಪೂಜೆ ಪುನಸ್ಕಾರಗಳನ್ನೂ ಮಂತ್ರತಂತ್ರಗಳ ಮಹತ್ವವನ್ನೂ ಮತ್ತು ತಾಂತ್ರಿಕ ಕ್ರಿಯಾವಿಧಿಗಳ ಅಂತರಾಳವನ್ನೂ ಅವನಿಗೆ ಪೂರ್ಣವಾಗಿ ಕಲಿಸಲು ಅವರು ಕೊನೆಯವರೆಗೂ ಮನಸ್ಸು ಮಾಡಲಿಲ್ಲ. ಅನೇಕ ಬಾರಿ ಅವನೇ ಆಸಕ್ತಿಯಿಂದ ಮುಂದಾದಾಗಲೂ ಆ ವಿಧಿಯಾಚರಣೆಯಿಂದ ಅವನನ್ನು ಆದಷ್ಟು ದೂರವಿರಿಸಲು ಪ್ರಯತ್ನಿಸುತ್ತಿದ್ದರು. ಆದ್ದರಿಂದ ಏಕನಾಥನಿಗೆ ಅವರಿಂದ ಸರ್ವ ವಿದ್ಯೆಗಳೂ ಅರೆಬರೆ ಮಾತ್ರವೇ ತಿಳಿಯಲ್ಪಟ್ಟವು. ಗುರುಗಳ ಈ ಬಗೆಯ ಸಣ್ಣತನವನ್ನು ಏಕನಾಥನೂ ಗಮನಿಸುತ್ತ ಬರುತ್ತಿದ್ದ. ಆದರೆ ಒಂದಲ್ಲ ಒಂದು ದಿನ ತನ್ನ ಮೇಲೆ ಅವರಿಗೆ ಕರುಣೆ ಬಂದು ವಿದ್ಯೆಯನ್ನು ಧಾರೆಯೆರೆದಾರು ಎಂದೂ ನಂಬಿದ್ದ.‘ಯಾವುದಕ್ಕೂ ಕಾಲ ಕೂಡಿ ಬರಬೇಕು ಮಗಾ…ಆವಾಗ ನಾವೆಣಿಸಿದ್ದೆಲ್ಲವೂ ಸಿದ್ಧಿಸುತ್ತದೆ!’ ಎಂಬ ಅಮ್ಮನ ಮಾತನ್ನು ಆಗಾಗ ಸ್ಮರಿಸಿಕೊಳ್ಳುತ್ತ ಕಾಲ ಕಳೆಯುತ್ತಿದ್ದ. ಇದೇ ಆಶಾಭಾವನೆಯೊಂದಿಗೆ ಅವನ ಹತ್ತು ವರ್ಷಗಳು ಉರುಳಿ ಹೋದವು.

ಈ ನಡುವೆ ವಯಸ್ಸಾದ ಅಮ್ಮ ಊರಲ್ಲಿ ಒಂಟಿಯಾಗಿರುವುದನ್ನು ನೆನೆಯುತ್ತ ನೊಂದುಕೊಳ್ಳುತ್ತಿದ್ದ. ಅವಳನ್ನು ಮುಂಬೈಗೆ ಕರೆದುಕೊಂಡು ಬರುವುದೂ ಸಾಧ್ಯವಿರಲಿಲ್ಲ. ಆದ್ದರಿಂದ ಅಮ್ಮನ ಒತ್ತಾಯಕ್ಕೆ ಮಣಿದು ಅವಳಿಗಾದರೂ ಆಸರೆಯಾಗಲಿ ಎಂದುಕೊಂಡು ಅವಳು ಸೂಚಿಸಿದ ಕದಿಕೆಬೆಟ್ಟಿನ ಸುಬ್ಬಣ್ಣನ ಮಗಳು ದೇವಕಿಯನ್ನು ಮದುವೆಯಾದ. ಬಡ ಹೆಣ್ಣು ದೇವಕಿಯೂ ಅತ್ತೆಗೆ ತಕ್ಕ ಸೊಸೆಯಾಗಿ ಅವರನ್ನು ತಾಯಿಯಿಂತೆ ನೋಡಿಕೊಳ್ಳತೊಡಗಿದಳು. ತನ್ನ ಮನೆಗೆಲಸ ಮುಗಿಯುತ್ತಲೇ,‘ಅತ್ತೇ, ನನಗೂ ಬತ್ತಿ ಹೊಸೆಯಲು ಬರುತ್ತದೆ. ದೀಪ, ಆರತಿ ಮತ್ತು ಮಂಗಳಾರತಿಗೆ ಅಂತ ಮೂರು ನಾಲ್ಕು ಬಗೆಯ ಬತ್ತಿಗಳನ್ನು ನಾನೂ ಹೊಸೆದು ಅಮ್ಮನಿಗೆ ಕೊಡುತ್ತಿದ್ದೆ. ನಿಮಗೂ ಸ್ವಲ್ಪ ಸಹಾಯ ಮಾಡಲೇ…?’ ಎನ್ನುತ್ತ ಹತ್ತಿರ ಕುಳಿತುಕೊಳ್ಳುತ್ತಿದ್ದಳು. ಸೊಸೆಯ ಗೌರವಾದರ ಮತ್ತು ಅವಳಲ್ಲಿ ತುಂಬಿ ತುಳುಕುತ್ತಿದ್ದ ಜೀವನೋತ್ಸಾಹವು ವನಜಾಕ್ಷಮ್ಮನಿಗೆ ಬಹಳವೇ ಹಿಡಿಸಿದ್ದರಿಂದ ಅವರ ಬದುಕಿನಲ್ಲಿ ಮರಳಿ ಚೈತನ್ಯ ಮೂಡತೊಡಗಿತು.

ಹೀಗಿದ್ದ ಏಕನಾಥನ ದಾಂಪತ್ಯಕ್ಕೆ ಆರು ವರ್ಷ ತುಂಬುವ ಹೊತ್ತಿಗೆ ಇಬ್ಬರು ಮಕ್ಕಳಾದರು. ಇದೇ ಸಮಯದಲ್ಲಿ ಒಮ್ಮೆ ಅನಂತೇಶ್ವರ ದೇವರ ರಥೋತ್ಸವದ ಸಂದರ್ಭದಲ್ಲಿ ವನಜಾಕ್ಷಮ್ಮನಿಗೆ ಮಂಗಳಾರತಿಯ ಬತ್ತಿಗಾಗಿ ಹೆಚ್ಚಿನ ಬೇಡಿಕೆ ಬಂತು. ಅವರು ಸಂತೋಷದಿಂದ ಪರಶಿವನ ಸ್ಮರಣೆ ಮಾಡುತ್ತ ಕಾಯಕಕ್ಕೆ ಕುಳಿತವರು, ಬತ್ತಿ ಹೊಸೆಯುತ್ತಲ್ಲೇ ಶಿವನ ಪಾದ ಸೇರಿದರು. ಅಮ್ಮನ ಅಗಲುವಿಕೆಯಿಂದ ಏಕನಾಥ ಮತ್ತು ದೇವಕಿ ಕಂಗಾಲಾದರು. ಇದಾಗಿ ಕೆಲವು ದಿನಗಳಾಗುತ್ತ ಏಕನಾಥ ಮತ್ತೊಂದು ಚಿಂತೆಗೆ ಬಿದ್ದ. ಹೆಂಡತಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಮುಂಬೈಗೆ ಹೋಗಲು ಅವನ ಮನಸ್ಸು ಕೇಳಲಿಲ್ಲ. ಆದ್ದರಿಂದ ಅವರನ್ನು ತವರಿಗೆ ಕಳುಹಿಸಿಕೊಟ್ಟು ಮುಂಬೈಗೆ ಹಿಂದಿರುಗಿದ. ದೇವಕಿ ಪಾಪದ ಹೆಣ್ಣು. ಗಂಡನಿಗೆ ಪ್ರತಿಯಾಡದೆ ಮಕ್ಕಳೊಂದಿಗೆ ಮರಳಿ ತವರಿನ ಆಸರೆಗೆ ಬಿದ್ದಳು. ಆದರೆ ಇಂದಲ್ಲ ನಾಳೆ ಗಂಡ ತಮ್ಮನ್ನು ಮುಂಬೈಗೆ ಕರೆಸಿಕೊಳ್ಳಬಹುದು. ಹುಟ್ಟಿದಂದಿನಿಂದ ತನ್ನೂರನ್ನು ಬಿಟ್ಟು ಬೇರೆ ಊರನ್ನು ತಾನೆಂದೂ ಕಂಡವಳಲ್ಲ. ಮುಂಬೈ ಎಂಬ ಸಾವಿರ ಮೈಲು ದೂರದ ಸುಂದರ ನಗರಿಯಲ್ಲಿ ಬದುಕುವ ಅವಕಾಶ ದೇವರ ದಯೆಯಿಂದ ದೊರೆಯಿತೆಂದರೆ ಗಂಡ, ಮಕ್ಕಳೊಂದಿಗೆ ಸುಖವಾಗಿ ಬಾಳಬಹುದು. ಅಂಥ ದಿನ ಸದ್ಯದಲ್ಲೇ ಬರಲಿದೆ ಎಂದುಕೊಂಡು ಕಾಲಕಳೆಯುತ್ತಿದ್ದಳು. ಆದರೆ ಅವಳ ದುರಾದೃಷ್ಟಕ್ಕೆ ಎಷ್ಟು ಕಾದರೂ ಆ ಕಾಲ ಮಾತ್ರ ಬರಲೇಇಲ್ಲ. ಬದಲಿಗೆ ಗಂಡನಿಂದ ಒಂದಷ್ಟು ಹಣ ಮಾತ್ರ ತಿಂಗಳು ತಿಂಗಳು ತಪ್ಪದೆ ಬರುತ್ತಿತ್ತು. ಅದರಿಂದ ಅಪ್ಪನಿಗೆ ಭಾರವಾಗದೆ ತಾಳ್ಮೆಯಿಂದ ಬದುಕುತ್ತಿದ್ದಳು.

ಏಕನಾಥನಿಗೆ ಕೊನೆಗೂ ಪೆದುಮಾಳರಿಂದ ಪೂರ್ಣ ವಿದ್ಯಾಧಾರೆಯ ಭಾಗ್ಯ ಲಭಿಸಲಿಲ್ಲ. ಇನ್ನು ತಾನು ಇವರನ್ನು ನಂಬಿ ಕೂರುವುದೂ ಒಂದೇ, ಬಂಡೆಯ ಬಿರುಕಿನಲ್ಲಿ ಚಿಗುರುವ ಗಿಡವು ಹೆಮ್ಮರವಾಗಿ ಬೆಳೆಯುವುದೆಂದು ನಿರೀಕ್ಷಿಸುವುದು ಒಂದೇ! ಎಂದು ನಿರಾಶನಾಗಿಬಿಟ್ಟ.ತಾನುಗುರುಗಳು, ಯಜಮಾನರು ಎಂದು ಗೌರವಿಸುತ್ತ ಬಂದ ಪೆದುಮಾಳನೊಬ್ಬ ನಯವಂಚಕ ವ್ಯಕ್ತಿ ಎಂದುಅವನಿಗನ್ನಿಸಿಬಿಟ್ಟಿತು. ಹಾಗಾಗಿ ಆವತ್ತೊಂದು ದಿನ ರಾತ್ರೋರಾತ್ರಿ ನಿಂತ ನಿಲುವಿನಲ್ಲೇ ಮುಂಬೈ ನಗರಿಯನ್ನು ತೊರೆಯಲು ನಿರ್ಧರಿಸಿದ. ಯಾರಿಗೂ ತಿಳಿಸಲು ಮನಸ್ಸಾಗಲಿಲ್ಲ. ಜಿಗುಪ್ಸೆಯಿಂದ ಎದ್ದು ಒಂದಷ್ಟು ಬಟ್ಟೆಬರೆಗಳನ್ನು ಗಂಟು ಕಟ್ಟಿ ಪೆದುಮಾಳರ ಮನೆಯಿಂದ ಹೊರಬಿದ್ದ. ಆಟೋ ಹಿಡಿದು ಬಸ್ಸು ನಿಲ್ದಾಣಕ್ಕೆ ಬಂದ. ಆಗಷ್ಟೇ ಈಶ್ವರಪುರಕ್ಕೆ ಹೊರಟು ನಿಂತಿದ್ದ ‘ಕೆನರಾ ಪಿಂಟೋ’ ಬಸ್ಸು ಹತ್ತಿದ. ಅಗಾಧ ಜನಸಾಗರವನ್ನೇ ತೋಳತೆಕ್ಕೆಯಲ್ಲಿಟ್ಟುಕೊಂಡು ಮೆರೆಯುತ್ತಿದ್ದ ಮುಂಬೈ ಮಹಾನಗರವನ್ನು ನಿಧಾನವಾಗಿ ಹಿಂದಿಕ್ಕುತ್ತ ಬಸ್ಸು ಮುಂದೆ ಸಾಗುತ್ತಿತ್ತು. ಅದರೊಂದಿಗೆ ಏಕನಾಥನು ಕಂಡಿದ್ದ ಕನಸು ಮತ್ತು ಗುರಿಗಳೆಲ್ಲವೂ ಸಿಡಿದು ಚೂರುಚೂರಾಗಿ ಗಾಳಿಯಲ್ಲಿ ಲೀನವಾಗುತ್ತಿದ್ದವು. ಸೋಲಿನ ದುಃಖದಿಂದ ಅವನ ಕಣ್ಣಾಲಿಗಳು ತುಂಬಿಕೊಂಡವು. ಮನಸ್ಸು ಹಗುರವಾಗುವವರೆಗೆ ಬಿಕ್ಕಿಬಿಕ್ಕಿ ಅಳುತ್ತ ಸಾಗಿದ. ಸ್ವಲ್ಪಹೊತ್ತಿನಲ್ಲಿ ಮನಸ್ಸು ಖಾಲಿಯಾದಂತೆನಿಸಿ ನಿಧಾನವಾಗಿ ಕಣ್ಣುಮುಚ್ಚಿ ನಿದ್ರಿಸಲು ಪ್ರಯತ್ನಿಸಿದ.

                                                                                       ***

ಏಕನಾಥ ಊರಿಗೆ ಬಂದು ಈಗ್ಗೆ ಕೆಲವು ತಿಂಗಳು ಕಳೆದಿತ್ತು. ಆದರೆ ಸ್ವಂತ ಅಥವಾ ಸಹಾಯಕ ಉದ್ಯೋಗವೂ ಸಿಗದೆ ಆತಂಕದಿಂದ ಕಾಲ ಕಳೆಯುತ್ತಿದ್ದವನು ಆವತ್ತೊಂದು ರಾತ್ರಿಯಿಡೀ ಅದೇ ಚಿಂತೆಯಿಂದ ಹೊರಳಾಡಿದ. ಮುಂಜಾನೆ ಬೇಗನೇ ಎಚ್ಚರವಾಯಿತು. ಚೈತನ್ಯರಹಿತನಾಗಿ ಎದ್ದು ನಿತ್ಯಕರ್ಮ ಮುಗಿಸಿದ. ಬೇಕೋ ಬೇಡವೋ ಎಂಬಂತೆ ಒಂದು ಗಳಿಗೆ ಮನೆ ದೇವರ ಪೂಜೆಯನ್ನು ನೆರವೇರಿಸಿದ. ದೇವಕಿ ನೀಡಿದ ಒಂದಿಷ್ಟು ಒಣ ಅವಲಕ್ಕಿಯನ್ನು ತಿಂದು ಬೆಲ್ಲದ ಕಾಫಿಯನ್ನು ಕುಡಿದ. ಬಳಿಕ ಕಪ್ಪು ಬಿಳುಪಿನ ಪೋರ್ಟೆಬಲ್ ಟಿವಿಯಲ್ಲಿ ಬರುತ್ತಿದ್ದ,‘ಸಂಪತ್ತಿಗೆ ಸವಾಲ್’ ಸಿನೇಮಾ ನೋಡುತ್ತ ಕುಳಿತ. ಡಾ. ರಾಜ್‍ಕುಮಾರ್ ಅಭಿನಯ ಕಳೆಕಟ್ಟುತ್ತಿದ್ದಂತೆಯೇ ತನ್ನನ್ನು ಬೀದಿಗೆ ತಳ್ಳಿದ ಪೆದುಮಾಳನನ್ನು ನೆನೆದು ಅವನ ರಕ್ತ ಕುದಿಯಿತು. ಅದೇ ಹೊತ್ತಿಗೆ ಅವನ ವಾಕಿಟಾಕಿಯಂಥ ನೋಕಿಯಾ ಮೊಬೈಲ್‍ಗೆ, ಊರಿಗೆ ಬಂದ ನಂತರ ಮೊದಲ ಬಾರಿಗೆ ಹೊಸ ನಂಬರಿನ ಕರೆಯೊಂದು ಬಂತು. ಒಮ್ಮೆಲೆ ಬೆಚ್ಚಿಬಿದ್ದ. ಯಾಕೋ ಆತಂಕವಾಯಿತು. ಹತ್ತಿಕ್ಕಿಕೊಂಡು, ‘ನಮಸ್ಕಾರ, ಯಾರು ಮಾತಾಡೋದು…?’ ಎಂದ ಗಂಭೀರವಾಗಿ. 

‘ನಮಸ್ಕಾರ ಗುರೂಜಿ, ಹೇಗಿದ್ದೀರಿ…?’ ಎಂದು ಅತ್ತಲಿಂದ ಗಡುಸು ಧ್ವನಿಯೊಂದು ನಗುತ್ತ ಪ್ರಶ್ನಿಸಿತು. ಯಾರೆಂದು ಹೊಳೆಯದೆ ತಬ್ಬಿಬ್ಬಾದ. ಆದರೆ ತನ್ನನ್ನು ಯಾರೋ ಮೊದಲ ಬಾರಿಗೆ ‘ಗುರೂಜೀ…!’ ಎಂದು ಕರೆದದ್ದು ಅವನಮೈನವಿರೇಳಿಸಿತು. ಅರೆರೇ, ಪೆದುಮಾಳರನ್ನೂ ಎಲ್ಲರೂ ಹೀಗೆಯೇ ಕರೆಯುತ್ತಿದ್ದುದಲ್ಲವಾ? ಎಂದು ಆನಂದದಿಂದ ಅಂದುಕೊಂಡವನು,‘ನಾವು ಚೆನ್ನಾಗಿದ್ದೇವೆ. ತಾವು ಯಾರೆಂದು ತಿಳಿಯಲಿಲ್ಲವಲ್ಲಾ…?’ ಎಂದ ಅಚ್ಚರಿಯಿಂದ.

‘ಅಯ್ಯೋ ಗುರೂಜಿ, ನೀವೆಂಥದು ಮಾರಾಯ್ರೇ ನನ್ನನ್ನೇ ಮರೆತು ಬಿಡುವುದಾ! ಇನ್ನೂ ಗುರುತು ಸಿಕ್ಕಲಿಲ್ಲವಾ?’ ಎಂದು ಆ ಕಡೆಯಿಂದ ಅಪಹಾಸ್ಯದ ಮಾತು ಕೇಳಿಸಿತು. ಏಕನಾಥನಿಗೆ ಮುಜುಗರವಾಯಿತು.‘ಕ್ಷಮಿಸಿ. ತಾವು ಯಾರೆಂದು ಗೊತ್ತಾಗಲಿಲ್ಲ. ಹೌದೂ, ನಿಮಗೆ ಯಾವ ಗುರೂಜಿ ಬೇಕಿತ್ತು? ನಾವು ಮುಂಬೈ ಪೆದುಮಾಳ ಗುರೂಜಿಯವರ ಶಿಷ್ಯರು ಏಕನಾಥ ಗುರೂಜಿ ಅಂತ!’ ಎಂದು ಆ ಅನಾಮಿಕ ನೀಡಿದ ನಾಮಧೇಯವನ್ನೇ ತನ್ನದಾಗಿಸಿಕೊಂಡು ಅದಕ್ಕೂ ಒಂದು ಬಹುವಚನವನ್ನು ಸೇರಿಸಿಯೇ ಹೇಳಿದ.

‘ಹೌದು ಸ್ವಾಮೀ, ನಾನೂ ಅವರೊಂದಿಗೇ ಮಾತಾಡುತ್ತಿರುವುದು. ಅವರಿಗೆ ಮಾತ್ರ ನನ್ನ ಸ್ವರದಲ್ಲೂ ಪತ್ತೆಹಚ್ಚಲಾಗಲಿಲ್ಲ. ಇನ್ನೂ ಸ್ವಲ್ಪ ನೆನಪು ಮಾಡಿಕೊಳ್ಳಿ ಗುರೂಜೀ!’ ಎಂದ ಆ ಧ್ವನಿಯು ಮತ್ತೊಮ್ಮೆ ಗಟ್ಟಿಯಾಗಿ ನಕ್ಕಿತು. ತಥ್, ತೆರಿಕೇ! ಇವನ್ಯಾರೋ ಹಡಬೆಗೆ ಹುಟ್ಟಿದವನು ಬೆಳ್ಳಂಬೆಳ್ಳಗೆ ತಲೆ ತಿನ್ನುತ್ತಿದ್ದಾನಲ್ಲ? ಎಂದೆನಿಸಿತು ಏಕನಾಥರಿಗೆ. 

‘ಅರೇ ನೀವೇನ್ರೀ…! ಫೋನ್ ಮಾಡಿರೋರು ನೀವು. ಆವಿಷಯ ತಿಳಿಸುವುದನ್ನು ಬಿಟ್ಟು ಹೀಗೆ ಸತಾಯಿಸಿದರೆ ಹೇಗೆ? ನೀವ್ಯಾರೆಂದು ತಿಳಿಯುತ್ತಿದ್ದರೆ ನಾವೇಕೆ ಗುರುತಿಲ್ಲ ಅನ್ನುತ್ತಿದ್ದೆವು. ನಮ್ಮ ಮೊಬೈಲಲ್ಲಿ ನಿಮ್ಮ ಫೋಟೋ ಬೀಳುತ್ತದಾ?’ ಎಂದು ತಾವೂ ವ್ಯಂಗ್ಯವಾಗಿ ಉತ್ತರಿಸಿದರು.

‘ಛೇ,ಛೇ! ಸಿಟ್ಟಾಗಬೇಡಿ ಗುರೂಜಿ. ಸುಮ್ಮನೆ ತಮಾಷೆಗೆ ಮಾತಾಡಿದೆ ಅಷ್ಟೆ. ಪರವಾಗಿಲ್ಲ, ನನ್ನ ಪರಿಚಯ ನಾನೇ ಹೇಳುತ್ತೇನೆ. ಅದಕ್ಕಿಂತ ಮೊದಲು ಒಂದು ಕೆಲ್ಸ ಮಾಡುವ. ಸ್ವಲ್ಪ ಸಾವಿರದೊಂಬೈನೂರ ಎಪ್ಪತ್ತರ ಇಸವಿಯಾಚೆಗೆ ಹೋಗುವ. ಆಮೇಲೆ ಆಗಿನ ಪಂಚಾಯತ್ ಕಛೇರಿಯ ಎದುರಿನ ಮೈನ್ ಶಾಲೆಗೆ ಬರುವ. ಅಲ್ಲಿ ಒಂದನೆಯ ಕ್ಲಾಸಿನಿಂದ ಐದನೆಯ ಕ್ಲಾಸಿನವರೆಗೆ ನಿಮ್ಮ ಜೊತೆಯಲ್ಲಿದ್ದ ಶಂಕರ ಎಂಬವನ ನೆನಪುಂಟಾ ನಿಮಗೇ?’ ಎಂದ ಆ ಅನಾಮಿಕ ಮಾತು ನಿಲ್ಲಿಸಿ ಏಕನಾಥರ ಉತ್ತರಕ್ಕೆ ಕಾದ. ಆದರೂ ಅವರಿಗೆ ಹೊಳೆಯಲಿಲ್ಲ. ‘ಇಲ್ಲವಲ್ಲ…!?’ ಎಂದು ತಲೆ ಕೆರೆದುಕೊಳ್ಳುತ್ತ ಉತ್ತರಿಸಿದರು.

‘ಛೇಛೇ! ಇನ್ನೂ ಜ್ಞಾಪಕ ಬರಲಿಲ್ಲವಾ ಗುರೂಜೀ? ಅದೇ, ನಮ್ ಶಾಲೆಯ ಸಮೀಪದ ತೋಟದ ದೀರ್ಸಲೆ ಮೆಣಸು (ಜೀರಿಗೆ ಮೆಣಸು. ಇದೊಂದು ಅತ್ಯಂತ ಖಾರದ ಮೆಣಸಿನ ತಳಿ. ಇವರ ಹೆಡ್ ಮೇಸ್ಟ್ರು ತುಂಬಾ ಕೋಪಿಷ್ಠ ಮನುಷ್ಯನಾಗಿದ್ದುದರಿಂದ ಮಕ್ಕಳು ಹಿಂದುಗಡೆ ಅವರನ್ನುಹೀಗೆ ಕರೆಯುತ್ತಿದ್ದರು) ಹೆಡ್ಮೇಸ್ಟ್ರ ತೋಟದ ‘ಮುಂಡಪ್ಪ’ ಮಾವಿನ ಹಣ್ಣುಗಳನ್ನು ಕದ್ದು ತಿನ್ನಲು ನಿಮಗೆ ಆಸೆಯಾಗುತ್ತಿದ್ದುದು. ಮರ ಹತ್ತಲು ಗೊತ್ತಿಲ್ಲದ ನೀವು ನನ್ನನ್ನು ಪುಸಲಾಯಿಸಿ ಹತ್ತಿಸಿ ಹಣ್ಣುಗಳನ್ನು ಕಿತ್ತು ನಾವಿಬ್ಬರೂ ತಿನ್ನುತ್ತಿದ್ದುದಾದರೂ ನೆನಪಿದೆಯಾ ಇಲ್ವಾ…? ಆ ಶಂಕರನೇ ಮಾತಾಡುತ್ತಿರುವುದು!’ ಎಂದು ಶಂಕರ, ಏಕನಾಥರ ಹಳೆಯ ಕಥೆಯನ್ನು ನೆನಪಿಸಿ ಜೋರಾಗಿ ನಕ್ಕ. ಆಗ ಏಕನಾಥರಿಗೆ ಆವತ್ತಿನ ನೆನಪುಗಳೆಲ್ಲ ಮುನ್ನೆಲೆಗೆ ಬರಲಾರಂಭಿಸಿದವು. 

   ‘

‘ಓಹೋ ಆ ಶಂಕರನಾ ಮಾರಾಯಾ ನೀನು! ಅಲ್ಲ ಮಾರಾಯಾ, ಇಪ್ಪತ್ತು ವರ್ಷಗಳ ಹಿಂದಿನ ನೆನಪನ್ನು ಒಮ್ಮಿಂದೊಮ್ಮೆಲೇ ಕೆದಕಿ ಹೇಳಿ ಎಂದರೆ ಹೇಗೆ ಮಾರಾಯಾ? ಇದನ್ನು ಮೊದಲೇ ಹೇಳಲಿಕ್ಕೇನು ದಾಡಿಯಾಗಿತ್ತು ನಿಂಗೆ! ನಾವಿಲ್ಲಿ ಎಷ್ಟೊಂದು ಕಕ್ಕಾಬಿಕ್ಕಿಯಾದೆವು ಗೊತ್ತುಂಟಾ?’ ಎಂದು ಮುನಿಸಿನಿಂದಲೇ ಅಂದವರು, ಸತ್ತು ಹೋದವನೆಲ್ಲಾದರೂ, ಬೆಳ್ಳಂಬೆಳಗ್ಗೆ ಮಂಡೆ ಹಾಳು ಮಾಡಿಬಿಟ್ಟ! ಎಂದು ಒಳಗೊಳಗೇ ಬೈದುಕೊಂಡ ಬಳಿಕ ಆತ್ಮೀಯತೆ ತಂದುಕೊಂಡು, ‘ಇರಲಿ ಮಾರಾಯಾ, ಎಷ್ಟು ವರ್ಷವಾಯ್ತಾ ನಿನ್ನನ್ನು ನೋಡಿ! ಎಲ್ಲಿದ್ದೀ, ಹ್ಯಾಗಿದ್ದೀ…?’ ಎಂದರು ಆಸಕ್ತಿಯಿಂದ.

‘ನಾನು ಆರಾಮವಾಗಿದ್ದೇನೆ ಗುರೂಜಿ. ನಮ್ಮದೇನಿದ್ದರೂ ಊರಿನಲ್ಲೇ ಸಣ್ಣಪುಟ್ಟ ಟೆಂಟಿನಾಟ ಅಲ್ಲವಾ. ಇಲ್ಲಿಯ ವ್ಯವಹಾರಗಳನ್ನು ಬಿಟ್ಟು ಬೇರೆಲ್ಲಿಗೂ ಹೋಗುವ ಹಾಗಿಲ್ಲ. ನೀವಾದ್ರೆ ಬೊಂಬಾಯಿಯಲ್ಲಿ ಪೆದುಮಾಳ ಗುರೂಜಿಯವರೊಂದಿಗಿದ್ದು ದೊಡ್ಡ ಹೆಸರು ಮಾಡಿದವರು ಅಂತ ಪರಿಚಯದವರೊಬ್ಬರು ಮೊನ್ನೆ ತಾನೇ ಹೇಳಿದರು. ಹಾಗಾಗಿ ನನಗೆ ನಮ್ಮ ಗೆಳೆತನದ ನೆನಪಾಯಿತು. ಅವರಿಂದ ನಿಮ್ಮ ಫೋನ್ ನಂಬರ್ ತೆಗೆದುಕೊಂಡೆ. ಅಂದಹಾಗೆ ನಿಮಗೆ ಕರೆ ಮಾಡಲು ಇನ್ನೊಂದು ಮುಖ್ಯ ವಿಷಯವೂ ಇದೆ ಗುರೂಜಿ. ನಿಮ್ಮಿಂದ ನನಗೊಂದು ಜಂಬರ(ಕೆಲಸ)ವಾಗಬೇಕು. ಆದರೆ ಅದಕ್ಕಿಂತ ಮೊದಲು ನಿಮ್ಮನ್ನು ಭೇಟಿಯಾಬೇಕು. ಒಟ್ಟಿಗೆ ಕುಳಿತುಕೊಂಡು ಸುಮಾರು ಹೊತ್ತು ಕಷ್ಟ ಸುಖ ಮಾತಾಡಬೇಕು. ಆಮೇಲೆ ಉಳಿದ ಮಾತು. ನೀವು ಊರಿಗೆ ಬರುವುದು ಯಾವಾಗ?’ ಎಂದ ಶಂಕರ ಗಂಭೀರವಾಗಿ. ತಮ್ಮ ಬಾಲ್ಯದ ಗೆಳೆತನದ ನವಿರು ನೆನಪುಗಳು ಸೃಷ್ಟಿಸಿದ ಭಾವುಕತೆಯ ನಡುವೆಯೂ ಏಕನಾಥರು ಗೆಳೆಯನ ಬೇಡಿಕೆಯಲ್ಲಿದ್ದ ಆತಂಕದೆಳೆಯನ್ನು ಗಮನಿಸಿದರು. 

‘ಇನ್ನು ಯಾವ ಊರಿಗೆ ಬರುವುದು ಮಾರಾಯಾ? ಬಂದು ಆಗಲೇ ಒಂದು ತಿಂಗಳ ಮೇಲಾಯ್ತು. ನಮ್ಮ ಮನೆ ನಿನಗೆ ಗೊತ್ತುಂಟಲ್ಲವ. ಸಮಯವಿದ್ದರೆ ಯಾವಾಗಲೂ ಬಂದು ಹೋಗು. ಅರ್ಜೆಂಟಿನ ವಿಷಯವಾದರೆ ಫೋನಿನಲ್ಲೂ ಮಾತಾಡಬಹುದು’ ಎಂದರು ಕಾಳಜಿಯಿಂದ. ಶಂಕರನಿಗೆ ತಾನು ಅರಸುತ್ತ ಹೋದ ಬಳ್ಳಿ ಕಾಲಿಗೇ ತೊಡರಿದಂತಾಯಿತು. ಆದರೆ ಮಾತಿನಲ್ಲದನ್ನು ತೋರಿಸಿಕೊಳ್ಳದೆ, ಇಂಥ ಕೆಲವು ಗುರೂಜಿಗಳಿಗೆ ಬೆರಳು ತೋರಿಸಿದರೆ ಹಸ್ತವನ್ನೇ ನುಂಗುವ ದುರ್ಬುದ್ಧಿಯಿರುತ್ತದಂತೆ. ಆದ್ದರಿಂದ ವಿಷಯವನ್ನು ಅಷ್ಟೊಂದು ಮಹತ್ವದ್ದೆಂದು ತೋರಿಸಿಕೊಳ್ಳದೆಯೇ ಪರಿಹರಿಸಿಕೊಳ್ಳಬೇಕು! ಎಂದು ಯೋಚಿಸಿದವನು, ‘ಅಂಥ ದೊಡ್ಡ ಸಂಗತಿಯೇನೂ ಅಲ್ಲ ಗುರೂಜಿ. ಹಾಗಂತ ಫೋನಿನಲ್ಲೂ ಮಾತಾಡುವುದಲ್ಲ. ನಿಮಗೆ ಪುರುಸೋತ್ತಿದ್ದಾಗ ಮಾತಾಡಿದರಾಯ್ತು’ ಎಂದ ಹಗುರವಾಗಿ.

ಶಂಕರ ಎಂಥವನು, ಅವನ ಕಾರೋಬಾರು ಯಾವ ಬಗೆಯದು ಎಂಬುದನ್ನೆಲ್ಲ ಏಕನಾಥರೂ ಸ್ವಲ್ಪಮಟ್ಟಿಗೆ ಊರ ಕೆಲವು ‘ಬಾಯಿಸುದ್ದಿ’ ಮಾಧ್ಯಮಗಳಿಂದ ಅದಾಗಲೇ ತಿಳಿದುಕೊಂಡಾಗಿತ್ತು. ಆದ್ದರಿಂದ, ಮುಂಡೆ ಮಗನದ್ದು ಎಂಥದ್ದೋ ಕಿತಾಪತಿ ಇರಬೇಕು. ಬಾಲ್ಯದಲ್ಲೂ ಅವರಿವರಿಗೆ ಟೋಪಿ ಹಾಕಿಕೊಂಡೇ ಇದ್ದವನಲ್ಲವ. ಅಷ್ಟು ಬೇಗ ಹೇಗೆ ಸುಧಾರಿಯಾನು? ಅವನ ಯಾವುದೋ ತೊಂದರೆಗೆ ಪರಿಹಾರ ಬೇಕಿದೆ ಅಂತ ಕಾಣುತ್ತದೆ. ಅದು ಬಿಟ್ಟು ನಮ್ಮಿಂದ ಬೇರೇನು ಆಗಲಿಕ್ಕಿದೆ ಅವನಿಗೆ ಮಣ್ಣು! ಇರಲಿ. ಯಾವುದಕ್ಕೂ ಬುದ್ಧಿವಂತಿಕೆಯಿಂದ ಮುಂದುವರೆದರೆ ಸೈ!’ ಎಂದುಕೊಂಡ ಏಕನಾಥರೂ, ‘ಆಯ್ತು ಮಾರಾಯಾ, ಇವತ್ತು ಸಂಜೆ ಮನೆಯಲ್ಲೇ ಇದ್ದೇವೆ. ಸಾಧ್ಯವಾದರೆ ಬಂದು ಹೋಗು’ ಎಂದು ಸೂಚಿಸಿದರು.

‘ಓಹೋ, ಹೌದಾ ಗುರೂಜೀ ಆಯ್ತು, ಇವತ್ತೇ ಬರುತ್ತೇನೆ. ಮಿಕ್ಕಿದ್ದನ್ನು ಅಲ್ಲೇ ಮಾತಾಡುವ’ ಎಂದ ಶಂಕರ ಗೆಲುವಿನಿಂದ ಫೋನಿಟ್ಟ.


(ಮುಂದುವರೆಯುವುದು)

*********


ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

2 thoughts on “

Leave a Reply

Back To Top