ಹಂದೆಯ ಕೈಯಲ್ಲಿನ ವಜ್ರಾಯುಧ

ಲೇಖನ

ಹಂದೆಯ ಕೈಯಲ್ಲಿನ ವಜ್ರಾಯುಧ

ಹೇಮಚಂದ್ರ ದಾಳಗೌಡನಹಳ್ಳಿ

hemachandra

11 Corruption poster ideas | corruption poster, corruption, meaningful  pictures

ಒಮ್ಮೆ ಬಸ್ಸಿನಲ್ಲಿ ಪ್ರಯಾಣ ಮಾಡಿತಿದ್ದೆ. ನನ್ನ ಪಕ್ಕದ ಸೀಟಿನಲ್ಲಿ ಮೂರು ಜನ 45-50 ರ ಆಸುಪಾಸಿನ ಮಹಿಳಾಮಣಿಗಳು ಕುಳಿತಿದ್ದರು. ಬಸ್ಸು ಮಿನಿ ಸಮಾಜ ಇದ್ದಂತೆ. ಸೂಕ್ಷ್ಮಗ್ರಾಹಿಯಾದರೆ ನಮ್ಮ ಸಮಾಜದ ಇಡೀ ಸ್ಥಿತಿ-ಗತಿಯನ್ನು ಅಳೆದು ತೂಗಿಬಿಡಬಹುದು. ಒಬ್ಬಾಕೆ ‘ಆ ಮೇಷ್ಟ್ರು ಮಗಳು ಓದ್ತಿನಿ ಓದ್ತಿನಿ ಅಂತ ಓದುತ್ಲೇ ಅದೆ,  ಆಲೆಯ ಇಪ್ಪತ್ತೈದು ಆಗಿರ್ಬೋದು ಇನ್ನೂ ಮದ್ವೇನೇ ಆಗಿಲ್ಲಾ..’ ಇನ್ನೂ ಪೂರ್ಣವಿರಾಮ ಹಾಕಿರಲೇ ಇಲ್ಲ. ಆಗಲೇ ಇನ್ನೊಬ್ಬಳು ತನ್ನ ತುತ್ತೂರಿ ಊದಲು ಪುಂಗಿ ಸಿದ್ಧಪಡಿಸಿಕೊಂಡು.’ಸಿಟೀಲಿ ಓದ್ತಾವೆ ಅದ್ಯಾರ್ನ ನೋಡ್ಕಂಡಿದಾವೋ ಬುಡು. ಮೊನ್ನೆ ನಾನೇ ನೋಡ್ದೆ ಮೈಸೂರಿಂದ ಅದ್ಯಾವ್ದೋ ಹೈದನ್ ಜೊತೆ ಕೂಟ್ರಲ್ಲಿ ಬಂದ್ ಹೋದ್ಲು!’ ಅಂತ ಊದಿದಳು. ಜೊತೆಗೆ ‘ಈ ಓದ್ ದಾವು ಹೆಂಗೆ ಅಂತ ಹೆಂಗೇಳದು ಬುಡು ಅದೇನಾರೆ ಆಗ್ಲಿ ನಮ್ ನಾಗಣ್ಣ ಒಳ್ಳೇ ಅಳಿಯನ್ನ ಹೊಡ್ದಕಣಕ್ಕಾ. ತಾಲೋಕಾಫೀಸ್ನಲ್ಲಿ ಕೆಲ್ಸ್ವಂತೆ, ಸಂಬ್ಳ ಎಷ್ಟು ನಾಗಣ್ಣ ನಿನ್ ಅಳಿಯಂಗೆ ಅಂದ್ರೆ, ಸಂಬ್ಳಾ ಯಾಕವ್ವಾ ಕೇಳಿಯೇ ಗಿಂಬ್ಳಾನೇ ಏನಿಲ್ಲಾಂದ್ರೂ ತಿಂಗ್ಳಿಗೆ ಎಪ್ಪತ್ರಿಂದ ಒಂದ್ಲಕ್ಷ ಬತ್ತದೆ ಅಂತ ಬೀಗ್ತಾನೆ’ ಅಂತ ಹೇಳಿ ಅಗಿದ ಕಡ್ಡಿಪುಡೀನ ಕಿಟಕಿಯಿಂದ ಆಚೆ ಉಗಿದಳು. ಇನ್ನೊಬ್ಬಳು ಅವ್ನ್ ಹೇಳಾದೂ ಸರಿ, “ನನ್ ತಂಗೀ ಮಗ್ಳನ್ನಾ ಕಾಲೇಜ್ ಲಚ್ಚರ್ರು, ಜಾಸ್ತಿ ಸಂಬ್ಳ ಅಂತಾ ಸೈಟ್ ಕೊಟ್ಟು  ಮದ್ವೆ ಮಾಡ್ದೊ. ಹತ್ತೊರ್ಷ ಆಯ್ತು ಕೊಟ್ಟಿರೋ ಸೈಟಲ್ಲೂವೆ ‘ಮನೆ ಕಟ್ಟಾಕೆ  ದುಡ್ ಬೇಡ್ವಾ’ ಅಂತಾ ರಾಗ ಎಳೀತಾನೆ!? ಇನ್ನೂ ಬೈಕ್ನಲ್ಲೇ ಓಡಾಡ್ತಾನೆ!? ನಮ್ ಈರಪ್ಪಾಜಿ ಮೇಷ್ಟ್ರಾಗಿದ್ನಲ್ಲಾ  ಅವ್ನು ಸತ್ತೋಗಿದ್ಕೆ ಅವ್ನ್ ಮಗಂಗೆ ಬಿಇಓ ಆಫೀಸ್ನಲ್ಲಿ ಬರೆಯೋ ಕೆಲ್ಸ ಕೊಟ್ರಂತೆ, ಒಂದೇ ವರ್ಷಕ್ಕೆ ಕಾರ್ ತಗಂಡೋಡ್ತಾನೆ, ಅವ್ನ್ ಶೋಕಿನಾ ಅವ್ರಪ್ಪ ಅಷ್ಟೊರ್ಷ ಗೇದ್ರೂ ಮಾಡಾಕಾಗ್ನಿಲ್ಲ ಬುಡು” ಅಂತಾ ಹೇಳೊದ್ರೊಳಗೆ ಇನ್ನೊಬ್ಳು ತನ್ನ ಪ್ಲೇಟು ಹಾಕೊಕೆ ರೆಡಿಯಾಗಿದ್ಲು. ‘ಆ ಮೇಷ್ಟ್ರು ಕೆಲ್ಸಾನೂ ಒಂದ್ ಕೆಲ್ಸ್ವಾ ಬುಡು ಸಂಬ್ಳ ಬುಟ್ರೆ ಇನ್ನೇನ್ ಸಿಕ್ಕಾತ್ತು ಪಾಪ’ ಅಂದ್ಲು ಕಂಡಕ್ಟರ್ ವಿಷಲ್ ಹೊಡ್ದ. ಬಸ್ ನಿಲ್ತು. ಇವ್ರೆಲ್ಲಾ ತಡಬಡಾಯಿಸಿಕೊಂಡು ಎದ್ದು ಬಾಗಿಲಲ್ಲೇ ಇಳಿದರು.         ಭ್ರಷ್ಟಾಚಾರದ ನೇಣಿನ ಕುಣಿಕೆಯೊಳಗೆ ನಲುಗುತ್ತಿರುವ ನಾವು  ಭ್ರಷ್ಟವಿಮುಕ್ತ ವಾತಾವರಣಕ್ಕಾಗಿ ಹಂಬಲಿಸಿ ಆಶಿಸುವ ಈ ಸಂದರ್ಭದಲ್ಲಿ ನಮ್ಮ  ಬಹುಸಂಖ್ಯಾತ ಸಾಮಾನ್ಯ ಜನರ ಈ ಫೋಷಕ ನಿಲುವನ್ನು ನೋಡಿದರೆ ಇದರ ಬೇರಿನ ಗಟ್ಟಿತನದ ಗಾಢತೆಗೆ ಬೆರಗಾಗಿ ಸೋಲಬೇಕಾಗುತ್ತದೆ. ಇದಕ್ಕು ಮೊದಲು ನಿತ್ಯದಂತೆ ಮೊನ್ನೆ ಯೋಗಾಭ್ಯಾಸಕ್ಕಾಗಿ ಪಾರ್ಕಿಗೆ ಹೋಗಿದ್ದೆ. ನಮ್ಮ ಜೊತೆಗೆ ಒಬ್ಬರು ನಿವೃತ್ತ ಬ್ಯಾಂಕ್ ಉದ್ಯೋಗಿ‌ ಕೂಡ ಬರುತ್ತಾರೆ. ಅವರು ಅಂದೇಕೋ ಬೇಸರದಲ್ಲಿದ್ದರು. ಕೆಣಕಿದೆ. ‘ಏನ್ ಸಾರ್ ಬೇಸರದಲ್ಲಿದ್ದೀರಿ’  ಇಂಥದೊಂದು ಪ್ರಶ್ನೆಯ ನಿರೀಕ್ಷೆಯಲ್ಲಿದ್ದರು;  ಯಾರಿಂದಲಾದರೂ. ತಕ್ಷಣ ಹೇಳಿದರು ಅದೇ ಬೇಸರದಲ್ಲಿ’ ವ್ಯವಸ್ಥೆ ಕುಲಗೆಟ್ಟು ಹೋಗಿದೆ ಸರ್. ಇಷ್ಟೊಂದು ಹಿಂಸೆ ಕೊಡಬಾರ್ದು. ಈ ಇಳಿವಯಸ್ಸಲ್ಲಿ ನಂಗೆ ಅಂತ ಅಲಾಟ್ ಆದ ಒಂದು ಸೈಟ್ನ ಹೆಂಗೊ ಕಷ್ಟಪಟ್ಟು ಕೊಂಡುಕೊಂಡೆ. ಈಗ ಖಾತೆ ಮಾಡಿಸಿಕೊಳ್ಳೋಕೆ ಹೋದ್ರೆ  ಮೂವತ್ತು ಸಾವಿರ ಕೇಳುದ್ರು, ಇಪ್ಪತ್ತು ಕೊಟ್ಟು ಬಂದೆ. ಇನ್ನೂ ಹತ್ತು ಕೊಡಬೇಕು ಸಾರ್’ ಅನ್ನುವುದರೊಳಗೆ ಅವರ ಧ್ವನಿ‌ ಶಕ್ತಿ ಕಳೆದುಕೊಂಡಷ್ಟು ನಿತ್ರಾಣವಾಯ್ತು. ಅವರ ಬಗ್ಗೆ ಮರುಕ ಕೋಪ ಎರಡೂ ಒಟ್ಟಿಗೇ ಆಯ್ತು ನನಗೆ. ಒಂದು ಖಾತಾ ಮಾಡಿಸಿಕೊಳ್ಳಲು ಒಬ್ಬ ಅಕ್ಷರಸ್ಥ, ಸರ್ಕಾರಿ ಉದ್ಯೋಗದಲ್ಲಿದ್ದವರು ತಮ್ಮ ಬಳಿ ಹಣವಿರುವುದರಿಂದ ಹೊಟ್ಟೆ ಉರಿಸಿಕೊಂಡೊ ಹೇಗೋ ಕೊಟ್ಟು ತಮ್ಮ‌ ಕೆಲಸ ಮಾಡಿಸಿಕೊಳ್ಳುವ ಸುಲಭ ಮಾರ್ಗ ಎಂದುಕೊಂಡು ನಿಟ್ಟುಸಿರು ಬಿಡುತ್ತಾರೆ. ಆದರೆ ಬೆವರು ಬಸಿದು ಬದುಕ ಸಾಗಿಸುತಿರುವ ರೈತ!?, ಬಡ ಕೂಲಿಕಾರ್ಮಿಕರ ಗತಿ ಏನಾಗಬೇಕು?? ಎಷ್ಟೋ ಜನ ಇದರಿಂದ ರೋಸಿ‌ ಹೋಗಿ ಸರಕಾರ ಜಾರಿಗೆ ತರುತ್ತಿರುವ ಬಡವರ ಉದ್ಧಾರಕ್ಕಾಗಿನ ಎಷ್ಟೋ ಯೋಜನೆಗಳ ಲಾಭ ಪಡೆಯಲು ಲಾಬಿ ಮಾಡಲಾಗದೆ ಅದರಿಂದ ವಂಚಿತರಾಗುಳಿಯುತ್ತಿರುವುದು ಕಠೋರ ಸತ್ಯ. ಹಾಗಂತ ನಮ್ಮಲ್ಲಿ ಆಳುವ ಸರ್ಕಾರಗಳನ್ನೇನೂ ದೂರುವಂತಿಲ್ಲ. ವಿದ್ಯಾರ್ಥಿಗಳಿಗೆ ನೋಟ್ಸ್ ಕೊಟ್ಟು ಬೋಧಿಸಿದ್ದನ್ನು ದಾಖಲೆ ಮಾಡಿಟ್ಟುಕೊಳ್ಳುವ ಬೋಧಕರಂತೆ ಕಾಯ್ದೆ ಕಾನೂನು ರೂಪಿಸಿ ಜಾರಿಗೆ ತಂದು ಕೈ ತೊಳೆದುಕೊಂಡಿದೆ: ಭಾರತೀಯ ದಂಡ ಸಂಹಿತೆ-೧೮೬೦ಆದಾಯ ತೆರಿಗೆ ಕಾಯ್ದೆ-೧೯೬೧ಭ್ರಷ್ಟಾಚಾರ ತಡೆ ಕಾಯ್ದೆ-೧೯೮೮ಹಣಕಾಸು ಅಕ್ರಮ ವಹಿವಾಟು ನಿಯಂತ್ರಣ ಕಾಯ್ದೆ-೨೦೦೨ಕರ್ನಾಟಕ ಸಕಾಲ ಸೇವೆಗಳಮಾಹಿತಿ ಹಕ್ಕು ಕಾಯ್ದೆ-೨೦೦೫ ಅಧಿನಿಯಮ-೨೦೧೧ತಿದ್ದುಪಡಿ ಅಧಿನಿಯಮ-೨೦೧೪..ಇಷ್ಟೆಲ್ಲಾ ಕಾಯ್ದೆಗಳು ಪ್ರಜಾ-ಪ್ರಭುಗಳಿಗಾಗಿ ಮಂತ್ರಿಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳು. ತಮ್ಮ ಸೇವೆಯನ್ನು ಪಡೆಯಲು ಸುಲಭವಾಗಲೆಂದು. ಆದರೆ ಇಷ್ಟು ಕಾಯ್ದೆಗಳ ಬಗ್ಗೆ   ಒತ್ತಟ್ಟಿಗಿರಲಿ, ಇಷ್ಟು ಕಾಯ್ದೆಗಳಿವೆ ಅನ್ನುವ ಅರಿವು ಎಷ್ಡು ಮಂದಿಗಿದೆ!? ಸಾಮಾನ್ಯ ಜನ ತಿಳಿವಳಿಗೆವಿದೂರರಾಗಿ ಲಂಚ ಪಡೆವವರನ್ನು ಯಾರೇನೂ ಮಾಡಲಾಗಲ್ಲ ಅನ್ನೋ‌ತೀರ್ಮಾನಕ್ಕೆ ಬಂದು ತಾವು ದುಡಿದು ದುಡಿದು ಹಣ್ಣಾದದ್ದು ಸಾಕು, ತಮ್ಮ ಮಕ್ಕಳು ಅಳಿಯ ಲಂಚ ಪಡೆಯೊ ಕೆಲಸಕ್ಕೆ ಹೋಗಲಿ ಅಂತ ಸಹಜವಾಗಿ  ಆಸೆ ಪಡುತ್ತಾರೆ.  ಭ್ರಷ್ಟಿಗಳಿಗಿರುವ  ಕಾನೂನು ತೊಡಕುಗಳು ಇದರ ಅರಿವಿರದ ಜನರ ಮೂರ್ಖತನದಿಂದ ನಿವಾರಣೆಯಾಗಿ ಅವರ ಕುಕೃತ್ಯ ಸುಗಮಿಸುತಿದೆ. 

     ನಮ್ಮದು ಪ್ರಜಾಪ್ರಭುತ್ವ ವ್ವವಸ್ಥೆ. ಪ್ರಜಾ ಸರ್ಕಾರದ ಆಳ್ವಿಕೆ. ಅಂದರೆ ಪ್ರಜೆಗಳಿಂದ ಆಯ್ಕೆಯಾದವರು ಪ್ರಜೆಗಳ ಪ್ರತಿನಿಧಿಗಳಾಗಿ, ಅವರ ಪರವಾಗಿ ಆಡಳಿತ ನಡೆಸುತ್ತಾರೆ. ನಮ್ಮಲ್ಲಿ ಪ್ರಧಾನ ಮಂತ್ರಿಯಾದರೂ ಮಂತ್ರಿಯೇ ಹೊರತು ರಾಜನಲ್ಲ. ಪ್ರಜೆಗಳೇ ಪ್ರಭುಗಳು. ಪ್ರಜಾಪ್ರಭುಗಳ ಯೋಗಕ್ಷೇಮ ನೋಡಿಕೊಳ್ಳಲು ಅವರ ವಿವಿಧ ಸೇವೆಗಾಗಿಯೇ ಮಂತ್ರಿಸರ್ಕಾರ ವಿವಿಧ ಇಲಾಖೆಗಳನ್ನು ತೆರೆದು ಅಧಿಕಾರಿ ಸಿಬ್ಬಂದಿ-ಸೇವಕರನ್ನು ನೇಮಕ ಮಾಡಿರುತ್ತದೆ. ಆ ಸೇವೆಗಾಗಿ ಅವರಿಗೆಲ್ಲಾ ವೇತನ ಪಾವತಿಯಾಗುತ್ತದೆ. ಆ ವೇತನ  ಪ್ರಜಾಪ್ರಭುಗಳು ತಾವು ಪಡೆಯುವ ಎಲ್ಲಾ ಸೇವೆಗಳಿಗೆ ಪಾವತಿಸುವ ತೆರಿಗೆ ರೂಪದ ಸಂಗ್ರಹಿತ ಹಣದಿಂದ ಬಟವಾಡೆಯಾಗುತ್ತದೆ. ಆ ನೌಕರರು ತಮ್ಮ ಸೇವೆ ಮಾಡಲೆಂದೇ ಬಂದವರಾದ್ದರಿಂದ ಅವರಿಗೆ ಗೌರವ ಕೊಡಬೇಕು. ದಾಸ್ಯತನವ ಅವರ ಮುಂದೆ ತೋರಿಸಬೇಕಾಗಿಲ್ಲ ಅನ್ನೋದು ಪ್ರತಿಯೊಬ್ಬರ ತಲೆ ಹೊಗಬೇಕು.        ಇನ್ನು ಗಾಂಧೀಜಿಯವರ ಕನಸ‌ ಕೂಸಾಗಿದ್ದ ಸ್ಥಳೀಯ ಸಂಸ್ಥೆಗಳ ರೂಪದಲ್ಲಿ ಆಡಳಿತ ವಿಕೇಂದ್ರೀಕರಣ ನೀತಿಯ ಜಾರಿಗಾಗಿ ಅಸ್ತಿತ್ವಕ್ಕೆ ಬಂದ ಗ್ರಾಮಪಂಚಾಯ್ತಿಗಳ ಚುನಾವಣೆಯಲ್ಲಿ ಅಭ್ಯರ್ಥಿಗಳು ಸುರಿಯುವ ಹಣದ ಲೆಕ್ಕ ಕೇಳಿದರೆ ಭ್ರಷ್ಟಾಚಾರ ವಿರೋಧಿ ವ್ಯಕ್ತಿಯ ಬಾಯಿ ಕಟ್ಟಿಹೋಗುತ್ತದೆ. ಐದು ವರ್ಷದ ಅವಧಿಯ ಪಂಚಾಯಿತಿ ಸದಸ್ಯತ್ವದಧಿಕಾರಕ್ಕಾಗಿ   ಬೆವರು ಸುರಿದು ಸಂಪಾದಿಸಿದ ಯಾ ಸಾಲದ ಹಣಕ್ಕೆ ಸಾಲದ ಲಕ್ಷ ಲಕ್ಷ ಹಣದ ಹೊಳೆ ಹರಿಸಲು ಹಿಂದೆಮುಂದೆ ನೋಡುವುದಿಲ್ಲ. ಈ ನೆಪದಲ್ಲಿ ಪಾಳು ಬಿದ್ದ ದೇವಸ್ಥಾನಗಳು ಮರುಜೀವ ಪಡೆದು ಮಿಂಚುವುದೂ ಇದೆ. ಇನ್ನು ಯಾವುದಾದರೂ ಮೀಸಲಾತಿಯ ಕೆಳಗೆ ಸ್ಪರ್ಧೆ ಇಲ್ಲದೆ ಅನಿವಾರ್ಯವಾಗಿ  ಆಯ್ಕೆಯಾದ ಬಡಪಾಯಿ ಮುಂದಿನ ಚುನಾವಣೆಯ ಹೊತ್ತಿಗೆ ಸಾಮಾನ್ಯ ಅಭ್ಯರ್ಥಿಯಾಗಿ ಎಷ್ಟಾದರೂ ಹಣ ಖರ್ಚು ಮಾಡಲು ತಾನು ಸಿದ್ಧವಿರುವುದಾಗಿ ಘೋಷಿಸಿ ತೊಡೆ ತಟ್ಟುವುದರ ಹಿಂದಿನ‌ ಮರ್ಮ ಮುಗ್ಧತೆಯ ಸಾವು.   

    ನಮ್ಮ ಬಂಧುಗಳೊಬ್ಬರ ಊರಿಗೆ ಹೋಗ್ತಿದ್ದೆ.ಬಸ್ಟ್ಯಾಂಡಲ್ಲಿ ಒಂದಿಬ್ರು ಕೂತು ಮಾತಾಡಿಕೊಳ್ತಿದ್ರು. ನೋಡಿದರೆ ಸಾಕು ತುಂಬಾ ಬಡವರೆಂದು ಗೊತಾಗ್ತಿತ್ತು. ಅವರಿಗೆ ಗ್ರಾಮಪಂಚಾಯಿತಿಯಿಂದ ಕಟ್ಟಲು ಅನುದಾನ ಮಂಜೂರಾಗಿರುವ ವಿಷಯ ಕೇಳಿ ಸಂತೋಷವಾಯಿತು. ‘ಪರವಾಗಿಲ್ಲ ನ್ಯಾಯವಾಗಿ ಸಲ್ಲಬೇಕಾದವರಿಗೆ  ಸಂದಿದೆಯಲ್ಲ ನಿಮ್ಮ ಪಂಚಾಯಿತಿಯವರು ಒಳ್ಳೆಯವರು’ ಅಂದೆ “ಅಯ್ಯೋ ಹೋದ್ಸಾರಿನೇ ಆಗ್ಬೇಕಾಗಿತ್ತು ‘ನಿಮ್ ಜಾತಿಗೆ ಎರಡು ಮನೆ ಅಂತ ಇಟ್ಟಿದ್ದೊ ಛೇರ್ಮನ್ ತಮ್ಮಂಗೂವೆ ಆ ಪೂಜಾರಿ ನಂಜುಡುಂಗೂವೆ ಕೊಟ್ಬುಟ್ಟೊ’ ಅಂದಿದ್ರು ಈಗ ಸ್ವಲ್ಪ ಓಡಾಡಿದಕ್ಕೆ ಸಿಕ್ತು” ಅಂದಾಗ ನನಗೆ ಧಿಗಿಲಾಯ್ತು.   ಇವರು ಹೇಳೊ  ಹಾಗೆ ಛೇರ್ಮನ್ ತಮ್ಮ, ಪೂಜಾರಿ ನಂಜುಂಡ  ದೊಡ್ಡ ಹಿಡುವಳಿದಾರರು. ಈಗಾಗಲೇ ಮನೆ ಇರುವವರು. ಈಗೆಲ್ಲಾ ಆನ್ಲೈನ್ ವ್ಯವಹಾರ. ಪ್ರತಿಯೊಂದು ಹಂತದಲ್ಲೂ ಫೋಟೋ ಅಪ್ಲೋಡ್ ಮಾಡ್ಲೇಬೇಕು. ಅವರಿಬ್ಬರೂ ಮನೆ ಇರೋರು ಅದು ಹೇಗೆ ಇವೆಲ್ಲಾ ಪ್ರೋಸಸ್ ಮಾಡ್ಸುದ್ರು ಅಂತ ಯೋಚಿಸ್ತಿದ್ದೆ. ‘ದುಡ್ಡಿದ್ರೆ ಎಲ್ಲಾ ಆಯ್ತದೆ, ಮುಂಡೇ ಮಕ್ಳು ದುಡ್ಗೇ ಹುಟ್ಟವ್ರೆ ಕಣಪ್ಪ’ ಅಂದ್ರು. ‘ಸದ್ಯ ನಿಮಗಾದ್ರೂ ಹಾಗೇ ಮಾಡಿಕೊಟ್ಟಿದಾರಲ್ಲ ಬಿಡಿ’ ಅಂದಿದ್ದೇ ತಡ. ‘ ಅಯ್ಯೋ ಈ ಮುಂಡೆಮಕ್ಳು ಹಂಗೇ ಮಾಡ್ಕೊಟ್ಟಿದ್ದಾರಾs  ದುಡ್ಡು ಅಕೌಂಟ್ಗೆ ಬಂದ್ಮೇಲೆ ತಗ್ದು ಇಪ್ಪತ್ ಸಾವ್ರ ಕೊಡ್ಬೇಕಂತೆ ಅವ್ರ ಮಕ್ಳು ತಿನ್ನ ಸುಮ್ನಿರು ಪಾಪಿ ಮುಂಡೇ ಮಕ್ಳು. ಸಾಯೊವಾಗ ಇವ್ರೆಲ್ಲಾ ಸರ್ಯಾಗ್ ಸತ್ತಾರಾ, ಬರ್ಬಾರ್ದ್ ರೋಗ ಬಂದು ಕೊಳ್ತು ನಾರಿ ಸಾಯ್ತವೆ ಬಡವ್ರನ್ನ ಗೋಳ್ಹೂಯ್ಕೊತಾರೆ ಧರ್ವೇಸಿಗಳು’ ಅಂತಾ ಗೊತ್ತಿರುವ ಶಾಪಗಳನೆಲ್ಲಾ ಹಾಕುದ್ರು. ‘ಕೊಡ್ಬೇಡಿ ಕೊಡದಿದ್ರೆ ಏನ್ ಮಾಡ್ತಾರೆ’ ಅಂದೆ. ‘ಅದ್ಯಾವ್ದೋ ಪೇಪರ್ಗೆ ಸೈನ್ ಮಾಡ್ಸ್ಕೊಂಡವ್ರೆ ದುಡ್ ಕೊಟ್ಮೇಲೆ ಕೊಡ್ತಾರಂತೆ’.  ಅಂದ್ರು. ಅಬ್ಬಾ ಉಸಿರು ಕಟ್ಟಿಹೋಯ್ತು. ಇದು ಯಾವ್ದೋ ಒಂದು ಸ್ಥಳ, ಊರು, ಪಂಚಾಯ್ತಿಗೆ ಸಂಬಂಧಿಸಿದ್ದಲ್ಲ. ಎಲ್ಲಾ ಕಡೆಯೂ ವ್ಯಾಪಿಸಿರುವ ಭ್ರಷ್ಟ ವೈರಸ್. ಇದಕ್ಕೆ ಇರುವ ಕಾಯ್ದೆ ಚುಚ್ಚುಮದ್ದುಗಳನ್ನು ಹಾಕುವ ಹಾಕಿಸಿಕೊಳ್ಳುವ ಯಾರೂ ಸಿಗುತಿಲ್ಲ. ಎಷ್ಟೆಲ್ಲಾ ಕಾಯ್ದೆ ಕಾನೂನು, ತಂತ್ರಜ್ಞಾನ ಮುಂದುವರೆದಿದ್ದರೂ ನಡೆಯುತಿರುವ ಇಂಥ ಅನ್ಯಾಯಗಳನ್ನು ತಡೆಯಲಾಗುತಿಲ್ಲ. ಲಂಚ ಸ್ವೀಕಾರದ ಸಮಯದಲ್ಲೇ ಸಿಕ್ಕಿ ಬಿದ್ದ ಎಷ್ಡು ಖೂಳರಿಗೆ ಶಿಕ್ಷೆಯಾಗಿದೆ!?  ಕಾನೂನು ಮೊರೆ ಹೋದರೆ ಸಮಸ್ಯೆ ಬಗೆಹರಿದು ಮನೆ ಕಟ್ಟಿ ವಾಸ ಮಾಡುವುದು ಯಾವಾಗ!? ಕಾಯ್ದೆಗಳಿದ್ದರೂ ಅವುಗಳ ಬಗ್ಗೆ ತಿಳಿವಳಿಕೆಯ ಕೊರತೆ ಇಲ್ಲದೆ, ಕಾಯ್ದೆಗಳು ಹೇಡಿಯ ಬಳಿ ಇರುವ ವಜ್ರಾಯುಧಗಳಾಗಿದ್ದರೆ, ತಿಳಿದಿದ್ದರೂ ಸಮಯಮಿತಿಯೊಳಗೆ ಇತ್ಯರ್ಥವಾಗದ ಭಯ ಈ ಅವ್ಯವಸ್ಥೆಯೊಟ್ಟಿಗೇ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಒಪ್ಪುವಂತೆ ಮಾಡಿಬಿಟ್ಟಿದೆ. ಜನ ಜಾಗೃತಿಯಾಗದೇ ಯಾವ ಕಾಯ್ದೆಗಳಿಂದಲೂ ಲಾಭವಿಲ್ಲ. ಎಲ್ಲರೂ ಒಮ್ಮನಸಿನಿಂದ ಲಂಚ ಕೊಡುವುದೇ ಇಲ್ಲ ಎಂದು ಸಂಕಲ್ಪ ಮಾಡಿ ನಿಂತರೆ ಒಂದಷ್ಟು ಕಾಲ ಸಮಸ್ಯೆಯಾಗಬಹುದು. ಆದರೆ ಭ್ರಷ್ಟಿಗಳು ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲೇಬೆಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಯಾವುದೇ ಬದಲಾವಣೆ ಸಾಮಾನ್ಯ ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಾಧ್ಯ.       

**************************************************


One thought on “ಹಂದೆಯ ಕೈಯಲ್ಲಿನ ವಜ್ರಾಯುಧ

Leave a Reply

Back To Top