ಅಂಕಣ ಬರಹ

ಇದಿರ ಉಭಯದ ಸಂದ ಕಡಿವಲ್ಲಿ

ಕೊಡಲಿಯವ

Buy Vachana (Kannada): A Collection of Shivasharanas' Vachanas Book Online  at Low Prices in India | Vachana (Kannada): A Collection of Shivasharanas'  Vachanas Reviews & Ratings - Amazon.in

ಸತ್ತಿಗೆ ಕಾಯಕದ ಮಾರಿತಂದೆ ವಚನಕಾರರಲ್ಲಿ ಬಹಳ ವಿಶಿಷ್ಟವಾಗಿ ನಿಲ್ಲುವವನು. ನೇರ ನುಡಿ ವಚನಕಾರರೆಲ್ಲರಲ್ಲಿ ಸಾಮಾನ್ಯವಾದರೂ ತರ್ಕಬುದ್ದಿಯನ್ನು ತನ್ನ ವಚನಗಳಲ್ಲಿ ಖಂಡಿಸುವ ಗುಣದಿಂದ ಈತ ಮುಖ್ಯನಾಗುತ್ತಾನೆ. ಸತ್ತಿಗೆ ಕಾಯಕದ ಬಗೆಗೆ ಸಿದ್ದನಂಜೇಶನೆಂಬ ಕವಿ ತನ್ನ ಗುರುರಾಜ ಚಾರಿತ್ರ ಎಂಬ ಕೃತಿಯಲ್ಲಿ ‘ಒಬ್ಬ ಮಾಹೇಶನು ಶಿವಪ್ರಸಾದದ ದಾಸವಾಳಗಳನ್ನು ಮುಡಿದು ಬೇಸಿಗೆಯ ಬಿಸಿಲಲ್ಲಿ ಹೋಗುತ್ತಿರಲು ಒಂದು ಹದ್ದು ಆ ಹೂವನ್ನು ಮಾಂಸವೆಂದು ಬಗೆದು ಆತನ ತಲೆಯ ಮೇಲೆಯೇ ಛತ್ರಿಯಂತೆ ಹಾರಿ ಬಂತು. ಆತ ಒಂದು ಊರನ್ನು ಪ್ರವೇಶಿಸಲು, ಹದ್ದು ಮರದ ಮೇಲೆ ಕುಳಿತು ಸಿಡಿಲು ಬಡಿದು ಸತ್ತಿತು. ಶರಣನಿಗೆ ನೆರಳುಕೊಟ್ಟ ಫಲದಿಂದ ಅದು ಮರುಜನ್ಮದಲ್ಲಿ ಚಕ್ರವರ್ತಿಯಾಗಿ ಹುಟ್ಟಿತು’ ಎಂಬ ಕಥೆಯನ್ನು ಹೇಳಿದ್ದಾನೆ.೧  ಇದು ಅಪಾಯ ಮಾಡಲು ಬಂದರೂ, ಅದರಿಂದ ಆದ ಸಹಾಯ. ಅಪ್ರಜ್ಞಾಪೂರ್ವಕ ಕಾಯಕದಿಂದ ಪಡೆದ ಮುಕ್ತಿ ಮತ್ತು ಪ್ರತಿಫಲವನ್ನು ಈ ಕಥೆಯು ತಿಳಿಸುತ್ತದೆ. ಪ್ರಜ್ಞಾಪೂರ್ವಕವಾಗಿಯೇ ಮನುಷ್ಯ ನೆರಳನೀವ ಕಾಯಕ ಮಾಡಿದರೆ ಉಂಟಾಗುವ ಲಾಭವಾದರೂ ಏನು ? ಎಂಬುದಕ್ಕೆ ಸತ್ತಿಗೆ ಕಾಯಕದ ಮಾರಿತಂದೆಯ ವಚನಗಳಲ್ಲಿ ಸಾಕ್ಷಿಗಳು ದೊರೆಯುತ್ತವೆ. ಇವನೊಬ್ಬನೇ‌ ಅಲ್ಲದೆ ಸತ್ತಿಗೆಯ ಚಾಮಯ್ಯನೆಂಬ ಮತ್ತೊಬ್ಬ ವಚನಕಾರನೂ ಇದ್ದಾನೆ.೨  ಸತ್ತಿಗೆ ಕಾಯಕದ ಮಾರಯ್ಯ ಛತ್ರಿ ( = ಸತ್ತಿಗೆ ) ಹಿಡಿಯುವ ಪ್ರಧಾನ ಕಾಯಕದೊಂದಿಗೆ ಮರ ಕಡಿಯುವ, ಪಂಜು ಹಿಡಿಯುವ ಕಾಯಕಗಳನ್ನೂ ಮಾಡುತ್ತಿದ್ದ ಎಂದು ಹೇಳಿದ್ದಾರೆ.೩  ಅದಕ್ಕೆ ಅವನ ವಚನವೊಂದರ ಧ್ವನಿಯನ್ನು ವಾಚ್ಯವಾಗಿ ಸಾಕ್ಷಿಯನ್ನಾಗಿ ಹಿಡಿದಿದ್ದಾರೆ. ಆದರೆ ಅದೊಂದು ಬಹು ವಿಸ್ತಾರವಾದ ಆಳ ವಾಗ್ವಾದದ ಇತಿಹಾಸವನ್ನು ತನ್ನೊಳಗೆ ಹುದುಗಿಸಿಕೊಂಡಿದೆ.

ಸತ್ತಿಗೆ ಕಾಯಕದ ಮಾರಿತಂದೆಯ ಕಾಲವನ್ನು ಕವಿಚರಿತಕಾರರು  ಸು. ೧೫೦೦ ಎಂದಿದ್ದಾರೆ.೪  ಆದರೆ ಇವನ ವಚನವೊಂದರಲ್ಲಿ ‘ಸಂಗನಬಸವಣ್ಣಂಗೆ ನೆಳಲು ಹಿಂಗಿದಾಗವೇ ಕಾಯಕ’ ಎಂಬ ಸಾಲೊಂದು ಬರುವುದರಿಂದ ಸತ್ತಿಗೆ ಕಾಯಕದ ಮಾರಿತಂದೆಯು ಬಸವಣ್ಣನವರ ಕಿರಿಯ ಸಮಕಾಲೀನನಿರಬೇಕೆಂದು ತೋರುತ್ತದೆ.೫  ಬಸವಣ್ಣನವರಿಗೆ “ಸಂಗನಬಸವ” ಎಂಬ ಅಡ್ಡ ಹೆಸರು ಸಹಾ ಇದೆ ಎಂಬ ಕಲಬುರ್ಗಿಯವರ ಮಾತನ್ನು ಮತ್ತು ಬಸವಣ್ಣನವರ ಬದುಕಿನ ಮೇಲೆ ಬೆಳಕನ್ನು ಚೆಲ್ಲುವ ಅರ್ಜುನವಾಡ ಶಾಸನದ ಆರಂಬಿಕ ಸಾಲುಗಳನ್ನೊಮ್ಮೆ ನೆನಯಿರಿ. ಅದರಲ್ಲಿಯೂ ಗನಬಸವನ ಅಗ್ರಜ ಎಂಬ ಸಾಲುಗಳು ಬರುತ್ತವೆ. ಸತ್ತಿಗೆ ಕಾಯಕದ ಮಾರಿತಂದೆಯ ಕಾಲವು ಕವಿಚರಿತಕಾರರು ಹೇಳುವ ೧೫೦೦ ಅಲ್ಲ, ಬಸವಣ್ಣನವರ ಕಾಲವೇ ಈತನ ಕಾಲವಾಗುತ್ತದೆ. ಮತ್ತು ಅವನ ಕಾಯಕನಿಷ್ಟೆಯ ಕುರಿತ ಮಾತುಗಳು ಈ ಮಾತಿಗೆ ಪುಷ್ಟಿ ಕೊಡುತ್ತವೆ.೬  ಡಿ. ಎಲ್. ನರಸಿಂಹಾಚಾರ್ಯರು “ಈ ವಚನದಿಂದ ಈ ಮಾರಿತಂದೆಯು ಬಸವನ ಕಾಲದಲ್ಲಿದ್ದು ಅವನ ಅನುಯಾಯಿಯಾಗಿ ತನ್ನ ಕಾಯಕವಾದ ಛತ್ರಿಹಿಡಿಯುವುದನ್ನು ಬಸವಣ್ಣನವರಿಗಾಗಿ ಮಾಡುತ್ತಿದ್ದನೆಂದು ಗೊತ್ತಾಗುವುದಿಲ್ಲವೇ ? ಇದರಿಂದ ಇವನ ಕಾಲ ಸುಮಾರು ೧೧೬೫ ರಲ್ಲಿದ್ದನೆಂದು ಹೇಳಬಹುದು” ಎಂದಿದ್ದಾರೆ.೭  ಡಿ. ಎಲ್. ಎನ್ ಅವರು ಆಧಾರವಾಗಿ ಪ್ರಸ್ತಾಪಿಸಿ ಕೊಟ್ಟಿರುವ ವಚನ ಮತ್ತು ಬಸವ ಯುಗದ ಮಹಾಸಂಪುಟ ೧ ರಲ್ಲಿ ಸಾಕ್ಷಿಯಾಗಿ ಕೊಟ್ಟಿರುವ ವಚನ ಒಂದೇ‌ ಆಗಿದ್ದು ಸಂಗನ ಎಂಬ ಪದವು ಡಿ. ಎಲ್. ಎನ್ ರ ಆಧಾರದ ವಚನದಲ್ಲಿ ಇಲ್ಲ. ಒಟ್ಟಾರೆಯಾಗಿ ಸತ್ತಿಗೆ ಕಾಯಕದ ಮಾರಿತಂದೆಯು ಸತ್ತಿಗೆ ಹಿಡಿವ ಕಾಯಕವನ್ನು ಮಾಡುತ್ತಾ ಬಸವಕಲ್ಯಾಣದಲ್ಲಿ ಬಸವಣ್ಣನವರೊಡನೆ ಸಮಕಾಲೀನನಾಗಿ ಇದ್ದನೆಂದು ತೀರ್ಮಾನ ಮಾಡಬಹುದು. ಅವನ ಸತ್ತಿಗೆಯು ಎಂತಹದ್ದೆಂಬುದನ್ನು ಆತನೇ ತನ್ನೊಂದು ವಚನದಲ್ಲಿ ವಿವರಿಸಿದ್ದಾನೆ.

ತತ್ವವು ಕಾವು ನಿಜನಿಶ್ಚಯದ ಬಿದಿರು ಭಕ್ತಿಜ್ಞಾನ ವೈರಾಗ್ಯ

ಇಂತೀ ತ್ರಿವಿಧ ಮುಪ್ಪುರಿಗೂಡಿದ ನೂಲಿನಲ್ಲಿ

ಕಟ್ಟುಗಳ ಕಟ್ಟಿ ಅಹಂಕಾರ ಗರುವದ ನಿರುತವ ಬಿಡಿಸಿ

ಭಕ್ತಿ ಸತ್ಯಕ್ಕೆ ತಲೆವಾಗುವಂತೆ ಭಾಗ ಒಪ್ಪುವ ಮಾಡಿ

ಕರ್ಕಶ ಮಿಥ್ಯವೆಂಬ ಸಿಗುರೆದ್ದಡೆ ಕತ್ತಿಹಾಕಿ

ಛತ್ರಕ್ಕೆ ಹೆಚ್ಚು ಕುಂದಿಲ್ಲದಂತೆ ವರ್ತುಳಾಕಾರಕ್ಕೆ

ಚಿತ್ತವಸ್ತುವಿನಲ್ಲಿ ತೊಲಗದಂತೆ ಶಾಶ್ವತವಾಗಿ

ಅಷ್ಟಾವಧಾನವೆಂಬ ಕಪ್ಪಡವ ಕವಿಸಿ

ಚತುಷ್ಟಯಂಗಳೆಂಬ ಸೆರಗು ತಪ್ಪದೆ ಕತ್ತರಿಸಿ

ಚಿತ್ತ ಹೆರೆಹಿಂಗದೆ ಲೆಕ್ಕಣಿಕೆಯಲ್ಲಿ ಚಿತ್ರವ ಬರೆದು

ಅಧಮ ಊರ್ಧ್ವವೆಂಬುದಕ್ಕೆ ಬಲುತೆಕ್ಕೆಯನಿಕ್ಕಿ

ಸರ್ವಮರ್ಮಂಗಳೆಂಬ ಬೆಣೆಗೀಲನಿಕ್ಕಿ

ಹಿಡಿವುತ್ತಿದ್ದೆ ಛತ್ರವ ನೆಳಲಿಲ್ಲದಂತೆ

ಐಘಂಟೇಶ್ವರಲಿಂಗಕ್ಕೆ ಬಿಸಿಲುಮಳೆಗಾಳಿಗೆ ಹೊರಗಾಗಬೇಕೆಂದು ೮

ಈ ಸತ್ತಿಗೆ ಕಾಯಕದ ಮಾರಿತಂದೆಯ ಒಟ್ಟೂ ೧೦ ವಚನಗಳು ಇದುವರೆವಿಗೂ ದೊರೆತಿವೆ. ಐಘಂಟೇಶ್ವರಲಿಂಗ ಎಂಬ ಅಂಕಿತನಾಮವನ್ನು ಇವು ಹೊಂದಿವೆ. ಅವನ ಒಂದು ಅತ್ಯದ್ಭುತ ವಚನವು ಹೀಗಿದೆ. ಇದೇ ವಚನವನ್ನು ಬಳಸಿ ಅವನ ಕಾಯಕವೆಂದು ಮಹಾಸಂಪುಟ ಸಂಪಾದಕರು ವ್ಯಾಖ್ಯಾನವನ್ನು ಮಾಡಿರುವುದು.

ಒಂದು ಹಿಡಿವಲ್ಲಿ ಸತ್ತಿಗೆಯವ

ಇದಿರ ಉಭಯದ ಸಂದ ಕಡಿವಲ್ಲಿ ಕೊಡಲಿಯವ

ಹಿಂದುಮುಂದಣ ತಮವನೊಂದುಗೂಡಿ

ಕೆಡಿಸುವುದಕ್ಕೆ ಪಂಜಿನವ

ಇದು ಅಂದು ಬಂದ ಬೆಸದ ಕಾಯಕ

ಐಘಂಟೇಶ್ವರಲಿಂಗವಿದ್ದಲ್ಲಿಯೆ ಬೆಸನಿಲ್ಲದಿರಬೇಕು ೯

ಈ ವಚನವು ಮೇಲ್ನೋಟಕ್ಕೆ ಮೂರು ಬೇರೆ ಬೇರೆ ಕಾಯಕಗಳನ್ನು ಹೇಳುತ್ತಲೇ ಒಂದು ತನ್ನ ಸಮಕಾಲೀನ ಸ್ಥಿತಿಗೆ ಸ್ಪಂದಿಸುವ ಗುಣವನ್ನು ಹೊಂದಿದೆ. ಸತ್ತಿಗೆ ಕಾಯಕದ ಜೊತೆಗೇ ಮರ ಕಡಿವವನು ಮತ್ತು ಪಂಜು ಹಿಡಿವವನು ಇವನೆಂಬ ವ್ಯಾಖ್ಯಾನವು ಮೂಡಲು ಇದೇ ಕಾರಣ, ಆದರೆ ಇದೊಂದು ಬಾಹ್ಯ ಕಾರ್ಯಗಳನ್ನು ರೂಪಕಗಳಾಗಿ ಕೊಡುತ್ತಾ ಆಂತರಿಕವಾದ ಬೋಧೆಯನ್ನೂ ಮಾಡುತ್ತಿದೆ. ನೆರಳನ್ನು ಕೊಡುವ ಸತ್ತಿಗೆಯನ್ನು ಹಿಡಿವ, ಎರಡು ಭಾಗ ಮಾಡುವ ಕೊಡಲಿಯ ಕಾಯಕ ಮತ್ತು ಕತ್ತಲೆಯಲ್ಲಿ ಬೆಳಕನ್ನೀಯುವ ಪಂಜನ್ನು ಹೊತ್ತು ನಡೆವ ವ್ಯಕ್ತಿಯೊಬ್ಬನ ರೂಪ ವಚನದ ಓದಿನಿಂದ ಕಣ್ಣಮುಂದೆ ಬರುತ್ತದೆ. ಆದರೆ ವಚನದ ಓದಿನಲ್ಲಿ ಕೊಕ್ಕೆಯಾಗಿ ಇದಿರು, ಉಭಯ, ಸಂದು, ಹಿಂದುಮುಂದಣ ತಮ ಪದಗಳು ನಿಲ್ಲಿಸುತ್ತವೆ. ಪ್ರತಿಯೊಂದು ಪದವೂ ಬಹುದೊಡ್ಡ ಬದುಕಿನ ತತ್ವವೊಂದನ್ನು ಕಟ್ಟಿಕೊಡುತ್ತಿದೆ.

ಏಕದೇವೋಪಾಸನೆ, ಶಿವನೇ ಎಲ್ಲವೂ ಎಂಬ ವಚನಕಾರರಿಗೆ ‘ಇದಿರು’ ಅಗಿದ್ದಿದ್ದುದು ವೈಧಿಕ, ಜೈನರ ಕಡೆಗೂ, ‘ಉಭಯ’ ಎಂಬುದು ಎರಡೆಂಬ ಶರಣರಲ್ಲದವರ ಕಲ್ಪನೆಯ ಸ್ವರ್ಗ ಮರ್ತ್ಯಗಳೆಂಬುದನ್ನೂ, ‘ಸಂದು’ ಎಂಬುದಕ್ಕೆ ‘ಅನುಮಾನ’ ಎಂಬ ಅರ್ಥವೂ ಇರುವುದರಿಂದ ಎರಡೆಂಬುವವರ ಅನುಮಾನ ಪರಿಹರಿಸಿ ವಾಸ್ತವವೇ, ಮರ್ತ್ಯವೇ ಮುಖ್ಯವೆಂಬ ಆಶಯವನ್ನೂ, ‘ಹಿಂದುಮುಂದಣ ತಮ’ ಎಂಬುದಂತೂ ಭೂತ ಮತ್ತು ಭವಿಷ್ಯಗಳ ಯೋಚನೆಯಿಂದ ಬಿಡುಗಡೆ ಹೊಂದಿ ವಾಸ್ತವವೇ ಸತ್ಯವೆಂಬುದನ್ನು ಸಾದರ ಪಡಿಸುತ್ತಿವೆ. ಮೇಲು ನೋಟದ ಕಾಯಕಗಳಷ್ಟೇ ಅಲ್ಲದೇ ಆ ಕಾಲದ ಸಮಾಜದ ಕೆಲವು ವಿನಯಗಳನ್ನು ಪ್ರಶ್ನಿಸುತ್ತಿದೆ. ವಚನಕಾರರೆಲ್ಲರೂ ನೇರವಾಗಿಯೇ ಪ್ರಶ್ನಿಸಿದರೆ ಈತ ಬೆಡಗಿನ ಕ್ರಮದಲ್ಲಿ ಪ್ರಶ್ನಿಸುವುದಾದರೂ ಏಕೆ ? ಎಂಬ ಪ್ರಶ್ನೆ ಮೂಡದೇ ಇರದು. ಹಣಬಲ, ಅಧಿಕಾರಬಲ, ಜನಬಲದಲ್ಲಿ ಇರುವವರು ನೇರವಾಗಿ ಮಾತನಾಡಿಯೂ ದಕ್ಕಿಸಿಕೊಳ್ಳಬಹುದು, ಆದರೆ ಇವುಗಳು ಇಲ್ಲದವರು ಮಾತಾಡಿದರೆ ಕಷ್ಟಕ್ಕೆ ಗುರಿಯಾಗುವುದು ಸದ್ಯದ ಪರಿಸ್ಥಿತಿಯಲ್ಲೇ ಗಮನಕ್ಕೆ ಬರುತ್ತಿರುವಾಗ, ಅಂದು ಈ ಸಮಸ್ಯೆ ಹೆಚ್ಚಾಗಿ ಇರಬಹುದು ಎನಿಸದೆ ಇರದು. ಮತ್ತೊಂದು ಹಾದಿಯಲ್ಲಿ ಹೇಳುವುದಾದರೆ ಬುದ್ದಿವಂತರ ಒಂದು ಮಾತು ನೂರು ಅರ್ಥಕ್ಕೆ ಎಡೆ ಮಾಡಿಕೊಡುವುದಕ್ಕಾಗಿಯೇ ಅಂತಹಾ ಭಾಷೆಯನ್ನು ಬಳಸುತ್ತಾರೆನ್ನುವುದೇ ಆದರೆ ಈ ಎರಡೂ ಅಂಶಗಳು ಸತ್ತಿಗೆ ಕಾಯಕದ ಮಾರಿತಂದೆಯ ಮೇಲಿನ ವಚನಕ್ಕೆ ಕಾರಣವೆನ್ನಬಹುದು.

ಮಧ್ಯಕಾಲೀನ ಕನ್ನಡ ನಾಡಿನಲ್ಲಿ ವೈಧಿಕ ಮತ್ತು ಜೈನ ಧರ್ಮಗಳು ಪ್ರಭಲವಾದ ಪೈಪೋಟಿಯನ್ನು ಮಾಡುತ್ತಲೇ ಸಂಖ್ಯೆ ಮತ್ತು ಬಲದಲ್ಲಿ ಶಕ್ತಿಸಂವಯವಾಗುವ ಹಾದಿಯನ್ನು ಹಿಡಿದಿದ್ದ ವಿಷಯವು ಇತಿಹಾಸದ ಅವಲೋಕನದಿಂದ ತಿಳಿದು ಬರುತ್ತದೆ. ಈ ಎರಡೂ ಧರ್ಮಗಳು ಮಾಡುತ್ತಿದ್ದುದು ಪುನರ್ ಜನ್ಮವನ್ನು ನಂಬುತ್ತವೆ. ಧರ್ಮದ ತತ್ವ, ದರ್ಶನಗಳ ಮುಖೇನ ವಾದ ಪ್ರತಿವಾದಗಳ ಪೂರ್ವಪಕ್ಷ ಮತ್ತು ಉತ್ತರಪಕ್ಷಗಳು ಸೃಷ್ಟಿಸಿದ್ದ ವಾಗ್ವಾದದ ಮಾದರಿಗಳ ಬಹುದೊಡ್ಡ ಪರಂಪರೆಯನ್ನು ಸೃಷ್ಟಿಮಾಡಿವೆ. ಇದಕ್ಕೆ ಶಾಸ್ತ್ರ ಮತ್ತು ಸೃಜನಶೀಲ ಪಠ್ಯಗಳ ರಾಶಿಯೇ ಸಾಕ್ಷಿಯಾಗಿವೆ. ಇವೆಲ್ಲವುಗಳೂ ತಮ್ಮ ತತ್ವಗಳಲ್ಲಿನ ಯಾವುದೋ ಒಂದು ಅನುಮಾನವನ್ನು ಪರಿಹರಿಸಿಕೊಳ್ಳು ಒಂದು ನಂಬಿಕೆಯನ್ನು ತಮ್ಮ ತತ್ವಗಳನ್ನು ವ್ಯಾಸವಾಗಿ ಮಾಡಿಕೊಂಡು ಉಗಮ, ಬೆಳವಣಿಗೆಗಳ ಕ್ರಮದಲ್ಲಿ ಚಲನೆ ಪಡೆದಿವೆ. ಇವೆಲ್ಲವುಗಳ ಅನುಮಾನ ಪರದ ಬಗೆಗೆ ಮತ್ತು ಇಹದ ಬದುಕಿನ ಕ್ರಮಗಳನ್ನು ಪಲ್ಲಟಗೊಳಿಸುವ, ನಿರ್ದೇಶಿಸುವ ಮತ್ತು ಪುನಶ್ಚೇತನಗೊಳಿಸಿ ಮತ್ತೊಂದನ್ನು ಸೃಷ್ಟಿಸುವ ಕಡೆಗಿವೆ. ಈ ಚಿಂತನಾಲಹರಿಯ ಪರಂಪರೆ ಮತ್ತು ಆಚರಣೆಗಳಲ್ಲಿನ ವೈವಿಧ್ಯತೆ, ವೈರುಧ್ಯಗಳನ್ನು ಗಮನಿಸಿ ನೇರವಾಗಿ ಅವುಗಳಲ್ಲಿನ ಬಹುದೊಡ್ಡ ಚಿಂತನೆಯ ಆಳವನ್ನೇ ಶರಣತತ್ವದಲ್ಲಿ ನಿಂತ ‘ಇದಿರ ಸಂದು’ ಎಂದು ಕರೆದುಬಿಡುತ್ತಾನೆ. ಆ ಇದಿರ ಸಂದಿಗೆ ಕೊಟ್ಟ ದಿಟ್ಟ ಉತ್ತರದ ಹಾಗೆ ಸತ್ತಿಗೆ ಕಾಯಕದ ಮಾರಿತಂದೆಯ ವಚನದ ಸಾಲುಗಳು ಇವೆ. ಮೇಲೆ ಕೊಕ್ಕೆಯಾಗಿ ಸಿಕ್ಕ ಪದಗಳೆಂದು ಕೊಟ್ಟಿರುವ ಎಲ್ಲವೂ ಪರ್ಯಾಯ ನಿರ್ಮಾಣದಲ್ಲಿನ ಮೂಲ ನೆಲೆಯಾದ ಇಹದಲ್ಲಿನ ಬದುಕುವ ಕ್ರಮ, ಪರದ ಕಲ್ಪನೆಯಿಂದ ಬಿಡುಗಡೆ ಹೊಂದುವ ಆಶಯ, ವಾಸ್ತವದ ಕತ್ತಲಿನಿಂದ ಬಿಡುಗಡೆ, ಒಂದನ್ನು ನಂಬಿ ಉಳಿದ ಅನುಮಾನಗಳಿಂದ ದೂರಾಗಿ ಪರಿಹಾರಬಕಂಡುಕೊಳ್ಳುವ ಕಡೆಗೆ ಚಲನೆ ಪಡೆದಿವೆ. ಆ ಆಶಯಕ್ಕೆ ಹಾದಿ ಮಾಡಲು ಕೊಡಲಿ, ಹಾದಿ ಕಾಣಿಸಲು ಪಂಜು, ಆ ನಂಬಿಕೆಯೇ ನೆಳಲಾಗುತ್ತದೆನ್ನುವುದನ್ನು ಸಾರಲು ಸತ್ತಿಗೆ, ಭವಾವಳಿ/ ಪುನರ್ಜನ್ಮಗಳು ಇಲ್ಲವೆಂಬುದಕ್ಕೆ ಹಿಂದುಮುಂದಣ, ಅಂತಹಾ ನಂಬಿಕೆಯನ್ನೇ ಕೆಡವಲು ತಮ ಪದಗಳು ಕೆಲಸ ಮಾಡುತ್ತಿವೆ ಎನಿಸುತ್ತದೆ.

ಬಸವಣ್ಣನವರಿಗೆ ಸತ್ತಿಗೆ ಕಾಯಕವನ್ನು ಮಾಡುತ್ತಾ, ಅವರೊಂದಿಗೇ ಇದ್ದು ಅಧಿಕಾರ ಮತ್ತು ಧರ್ಮದ ಸಂಬಂಧಗಳನ್ನು ಹತ್ತಿರದಿಂದ ಬಲ್ಲ, ತಮ್ಮದೇ ತತ್ವಗಳನ್ನು ಹುಟ್ಟುಹಾಕಿಕೊಂಡು ಬಂದಿರುವ ವಿಸ್ತಾರವಾದ ಪರಂಪರೆಗೆ ಕೊಟ್ಟ ಮಾರ್ಮಿಕ ಉತ್ತರದಂತೆ ಈ ವಚನವಿದೆ.

***********************

ಅಡಿಟಿಪ್ಪಣಿಗಳು

೧. ಶಿವಶರಣ ಕಥಾರತ್ನಕೋಶ. ಸಂ. ಶಾಮರಾಯ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಪು ೪೭೫ (೧೯೬೭)

೨. ಶಿವಶರಣ ಕಥಾರತ್ನಕೋಶ. ಸಂ. ಶಾಮರಾಯ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಪು ೪೭೪ (೧೯೬೭)

೩. ಬಸವಯುಗದ ವಚನ ಮಹಾಸಂಪುಟ ೦೧. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಪು ೧೬೦೯ (೨೦೧೬)

೪. ಕರ್ಣಾಟಕ ಕವಿಚರಿತೆ ೦೨. ಲೇ. ಆರ್. ನರಸಿಂಹಾಚಾರ್ಯ. ಕನ್ನಡ ಸಾಹಿತ್ಯ ಪರಿಷತ್ತು. ಪು ೧೧೭ (೨೦೧೫)

೫. ಕಂಬಳಕ್ಕೆ ಹೋದಲ್ಲಿ ಅವರಂಗವಹೊತ್ತು ಹೋಹನ್ನಕ್ಕ

     ಸಂಬಂಧಕ್ಕೆ ಕೂಲಿಯ ಮಾಡಿ ತಂದು ಸಂದುದೇ ಕಾಯಕದೊಳಗು

     ಎನ್ನಂಗದ ಸತ್ತಿಗೆ ಕಾಯಕ

     ಸಂಗನಬಸವಣ್ಣಂಗೆ ನೆಳಲು ಹಿಂಗಿದಾಗವೇ ಕಾಯಕ

     ಕಾಯಕ ನಿಂದುದೆಂಬ ಭಾಷೆ

     ಎನಗೆ ಐಘಂಟೇಶ್ವರಲಿಂಗವಿಲ್ಲಾ ಎಂಬ ಶಪಥ

ಬಸವಯುಗದ ವಚನ ಮಹಾಸಂಪು ೧. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ವ ಸಂ ೬೦೦ ಪು ೧೬೮೪ (೨೦೧೬)

೬. ಅರ್ಜುನವಾಡ ಶಾಸನದ ಮೂಲ ಪಠ್ಯ ಮತ್ತು ಅದರ ಮೇಲೆ ನಡೆದಿರುವ ಚರ್ಚೆಗಳು

     ೧. ಮಧುರಚೆನ್ನರ ಲೇಖನಗಳು. ಸಂ. ಗುರುಲಿಂಗಕಾಪಸೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಪು ೧ ರಿಂದ ೫ ( ೨೦೦೬ )

     ೨.ಶಾಸನ ಸಂಗ್ರಹ. ಸಂ. ಎ. ಎಂ. ಅಣ್ಣಿಗೇರಿ ಮತ್ತು ಡಾ. ಆರ್. ಶೇಷಶಾಸ್ತ್ರಿ. ಕನ್ನಡ ಸಾಹಿತ್ಯ ಪರಿಷತ್ತು. ಪು ೯೫. (೨೦೧೩)

     ೩. ಕನ್ನಡ ಶಾಸನ ಸಾಹಿತ್ಯ. ಸಂ. ಡಾ. ಎಂ. ಎಂ. ಕಲ್ಬುರ್ಗಿ. ಚೇತನ ಬುಕ್ ಹೌಸ್. ಪು ೨೬೯ (೨೦೧೧)

೭. ಪೀಠಿಕೆಗಳು ಲೇಖನಗಳು. ಲೇ. ಡಿ.‌ ಎಲ್. ನರಸಿಂಹಾಚಾರ್ಯ. ಡಿ. ವಿ. ಕೆ. ಮೂರ್ತಿ ಪ್ರಕಾಶನ. ಪು ೪೫೮ (೨೦೦೫)

೮. ಬಸವಯುಗದ ವಚನ ಮಹಾಸಂಪುಟ ೧. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ವ. ಸಂ ೬೦೨ , ಪು ೧೬೮೪ (೨೦೧೬)

೯. ಬಸವಯುಗದ ವಚನ ಮಹಾಸಂಪುಟ ೧. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ವ. ಸಂ. ೫೯೮. ಪು ೧೬೮೪ (೨೦೧೬)

**********

ಆರ್.ದಿಲೀಪ್ ಕುಮಾರ್

ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

2 thoughts on “

  1. ಸತ್ವಯುತ ಲೇಖನ.
    ಇಂಥಹ ಲೇಖನಗಳನ್ನು ಮತ್ತಷ್ಟು ಪ್ರಕಟಿಸಿ

  2. ಒಳ್ಳೆಯ ಸರಣಿ. ಇತರ ಬೇರೆ ಬೇರೆ ವಚನಕಾರರನ್ನು ಪರಿಚಯಿಸಿ.

Leave a Reply

Back To Top