ಮೋಹನಮೂರ್ತಿಯ ಮಹಾಪುರಾಣ

ಹಾಸ್ಯ ಲೇಖನ

ಮೋಹನಮೂರ್ತಿಯ

ಮಹಾಪುರಾಣ

ಟಿ.ಎಸ್.ಶ್ರವಣ ಕುಮಾರಿ

Symptoms of Indian middle class family – Monika

ಸಾಯಿಮೋಹನ ಮೂರ್ತಿ ನಮ್ಮ ಶಾಖೆಯಲ್ಲಿ ರೆಕಾರ್ಡ್‌ಕೀಪರ್‌ ಆಗಿ ಕೆಲಸ ಮಾಡುತ್ತಿದ್ದ. ʻಮೋಹಕʼವೆಂದು ಬಣ್ಣಿಸುವಂತಿಲ್ಲದಿದ್ದರೂ ಕುರೂಪಿಯ ಗುಂಪಿಗಂತೂ ಸೇರಿಸುವ ಹಾಗಿರಲಿಲ್ಲ. ಮುಖದಲ್ಲಿ ಸದಾ ಒಂದು ಬಗೆಯ ಆತಂಕ ನೆಲೆಮಾಡಿದ್ದು ಅದು ಪೆದ್ದುಕಳೆಯೊಂದಿಗೂ ಸೇರಿಕೊಂಡು ನೋಡಿದ ತಕ್ಷಣ ʻಏನೋ ಸರಿಯಾಗಿಲ್ಲʼ ಎನ್ನುವ ಭಾವನೆ ಹುಟ್ಟಿಸುತ್ತಿತ್ತಷ್ಟೇ. ಮಾತಾಡುವಾಗ ಬಾಯಿಂದ ಮೊದಲು ಹೊರಡುತ್ತಿದ್ದದ್ದು ತೆಲುಗು. ಕನ್ನಡದಲ್ಲಿ ದಬಾಯಿಸಿದರೆ ಮಾತ್ರಾ ಸಂಭಾಷಣೆ ಕನ್ನಡಕ್ಕೆ ತಿರುಗುತ್ತಿತ್ತು.  ಬೆಳಗ್ಗೆ ಬರುವಾಗಲೇ ಹಾಜರಿ ಪುಸ್ತಕ ಆಗಲೇ ಮ್ಯಾನೇಜರ ಟೇಬಲ್ಲಿಗೆ ಹೋಗಿದೆಯೇನೋ ಎನ್ನುವಂತ ಗಡಿಬಿಡಿಯಿಂದ, ಆತಂಕದಿಂದಲೇ ಬರುತ್ತಿದ್ದವನು ಯಾರು ಬೇಕಾದರೂ ಸಹಿಮಾಡುತ್ತಿರಲಿ, ಅವರನ್ನು “ರೋಂತ ಒತ್ಕೋಮ್ಮ/ಒತ್ಕೋಪ್ಪ” ಅನ್ನುತ್ತಾ ಎಗ್ಗಿಲ್ಲದೆ ಹೆಂಗಸರನ್ನಾಗಲೀ, ಗಂಡಸರನ್ನಾಗಲೀ ಭುಜಮುಟ್ಟಿ, ಅಕ್ಷರಶಃ ಪಕ್ಕಕ್ಕೆ ಸರಿಸಿ ಆತುರಾತುರದಿಂದ ಒಂದು ಸಹಿಮಾಡಿ ಏನೋ ಘನಕಾರ್ಯವಿರುವಂತೆ ಸರ್ಕೀಟ್‌ ಹೊರಡುತ್ತಿದ್ದ. ಹಾಗಾಗಿ ಅವನು ಬರುತ್ತಿರುವ ಸುಳಿವು ಸಿಕ್ಕೊಡನೆ, ಯಾರೇ ಆದರೂ ತಮ್ಮಿಂತಾವೇ ರಾಜಮರ್ಯಾದೆ ಕೊಟ್ಟು ಮಾರುದೂರ ಸರಿದು ನಿಲ್ಲುತ್ತಿದ್ದರು. ಹೀಗೆ ರಾಜಾರೋಷವಾಗಿ ಹೊರಗಿದ್ದ ಹಣ್ಣು, ಹೂವು, ತರಕಾರಿಗಳ ಮಾರುಕಟ್ಟೆಗೆ ಇನ್‌ಸ್ಪೆಕ್ಷನ್‌ಗೆ ಹೊರಟು, ಎಲ್ಲರ ಯೋಗಕ್ಷೇಮ, ಕುಶಲವನ್ನು ವಿಚಾರಿಸಿಕೊಂಡು ಎಲ್ಲೆಲ್ಲಿ ಏನೇನು ಹೊಸ ಸರಕುಗಳು ಬಂದಿವೆ ಎನ್ನುವ ಸರ್ವೆ ಮಾಡಿ, ಬ್ಯಾಂಕಿಗೆ ಕಾಫಿ, ಟೀ ಬರುವ ಸಮಯಕ್ಕೆ ಸರಿಯಾಗಿ ವಾಪಸಾಗುತ್ತಿದ್ದ. ಕಾಫಿಯ ಹುಡುಗನೊಂದಿಗೆ ಜಗಳವಾಡಿ ಎರೆಡೆರೆಡು ಲೋಟ ಕಾಫಿಯನ್ನೋ, ಟೀಯನ್ನೋ ಕುಡಿದು ಮಹಡಿಯ ಮೇಲಿದ್ದ ರೆಕಾರ್ಡ್‌ರೂಮಿನೊಳಗೆ ಹೋಗಿ ಮೇಜಿನ ಮೇಲೆ ಬಿದ್ದಿದ್ದ ವೋಚರುಗಳ ಕಟ್ಟನ್ನು ಸ್ವಲ್ಪ ಹೊತ್ತು ಅತ್ತಿಂದಿತ್ತ, ಇತ್ತಿಂದತ್ತ ಇಡುತ್ತಾ ಆಟವಾಡಿ, ಬಿಸಾಡಿದ್ದ ಹಳೆಯ ಸೋಫಾಮೇಲೆ ಪೇಪರುಗಳ ಕಟ್ಟನ್ನು ತಲೆದಿಂಬಾಗಿಟ್ಟುಕೊಂಡು ಥೇಟ್‌ ಅನಂತಶಯನನ ಭಂಗಿಯಲ್ಲಿ ಒರಗಿ ಸಶಬ್ದವಾಗಿ ಗೊರಕೆ ಹೊಡೆಯುತ್ತಾ ಪವಡಿಸಿರುತ್ತಿದ್ದ. ಕತ್ತಲೆಯ ಗೂಡಾಗಿದ್ದ ಮಹಡಿಯ ಮೇಲೆ ಸಿಸ್ಟಮ್‌ ರೂಮು, ರೆಕಾರ್ಡ್‌ ರೂಮು, ಊಟದ ಕೋಣೆ, ಶೌಚಾಲಯ ಬಿಟ್ಟರೆ ಸದಾ ಜನರು ಇರುವಂತ ಯಾವುದೇ ಮುಂಗಟ್ಟೆಗಳಾಗಲೀ, ವಿಭಾಗಗಳಾಗಲೀ ಇಲ್ಲದೆ, ಅವನನ್ನು ಗಮನಿಸುವವರು ಯಾರೂ ಇಲ್ಲದಿದ್ದದ್ದು ಅವನ ಈ ಶಯನ ಮಹೋತ್ಸವಕ್ಕೆ ಹೇಳಿಮಾಡಿಸಿದಂತಿತ್ತು.

ಬೆಳಗ್ಗೆ ಪಟ್ಟಾಗಿ ಬಾರಿಸಿಬಂದಿದ್ದ ತಿಂಡಿ ಅರಗಿ ಹೊಟ್ಟೆ ಮತ್ತೆ ಕೂಗುವಾಗ ಎಚ್ಚರಾಗುತ್ತಿತ್ತೇನೋ, ಎದ್ದವನಿಗೆ ತಾನೆಲ್ಲಿದ್ದೇನೆ, ಕನಸೋ, ನಿಜವೋ ಎಂದು ಇಹಕ್ಕೆ ಬರಲು ಒಂದಷ್ಟು ಸಮಯವಾಗುತ್ತಿತ್ತು. ಸರಿ, ಎದ್ದವನೇ ಮುಖ ತೊಳೆದುಕೊಳ್ಳಲು ವಾಶ್‌ ಬೇಸಿನ್ನಿಗೆ ಹೋದನೆಂದರೆ ಇಡೀ ಶಾಖೆಗೆ ಅವನು ನಿದ್ರಾ ಪರ್ವದಿಂದ ಈಚೆಗೆ ಬಂದಿದ್ದಾನೆಂದು ಅರಿವಾಗುತ್ತಿತ್ತು. ಜೋರಾಗಿ ನಲ್ಲಿಯನ್ನು ತಿರುಗಿಸಿಕೊಂಡು ಸೀನುತ್ತಾ, ಕ್ಯಾಕರಿಸುತ್ತಾ, ಉಗಿಯುತ್ತಾ ಚಿತ್ರವಿಚಿತ್ರ ಸದ್ದುಗಳನ್ನು ಮಾಡುತ್ತಾ, ಲೈಫ್‌ಬಾಯ್‌ ಸೋಪನ್ನು ಹತ್ತಾರು ಬಾರಿ ಮುಖಕ್ಕೆ, ಕೈಗೆ, ಕಾಲಿಗೆ ಹಚ್ಚಿ ತೊಳೆದು, ಹಚ್ಚಿ ತೊಳೆದು, ಕಡಿಮೆಯೆಂದರೆ ಹದಿನೈದು ನಿಮಿಷಗಳಾದರೂ ಅವನ ಈ ಮಾರ್ಜನ ಕಾರ್ಯಕ್ರಮ ಜರಗುತ್ತಿತ್ತು. ಆ ಭಯಂಕರ ಶಬ್ಧಗಳಿಂದಲೇ ಎಲ್ಲರೂ ಅದೆಷ್ಟು ಭಯಭೀತರಾಗಿರುತ್ತಿದ್ದರೆಂದರೆ ಹೋಗಿ ಪ್ರತ್ಯಕ್ಷ ದರ್ಶನ ಮಾಡುವ ಧೈರ್ಯ ಯಾರಿಗೂ ಇರಲಿಲ್ಲ. ಕೆಳಗಿನಿಂದ ಯಾರಾದರೂ “ಟ್ಯಾಂಕಿನಲ್ಲಿ ಸ್ವಲ್ಪ ನೀರು ಉಳ್ಸೋ” ಎಂದೋ, “ಸ್ನಾನ ಮಾಡ್ಬೇಡ, ಬರೀ ಮುಖ ತೊಳ್ಕೊಂಡು ಬಾ ಸಾಕು” ಎಂತಲೋ ಒಂದು ಆವಾಜ್‌ ಹಾಕುವ ತನಕ ನಿರಾತಂಕವಾಗಿ ತನ್ನ ಅಭಿಷೇಕದ ಕಾರ್ಯಕ್ರಮವನ್ನು ಮುಂದುವರೆಸಿಕೊಂಡಿರುತ್ತಿದ್ದ. ಸುತ್ತಲೂ ನೀರು ಚೆಲ್ಲಿ, ಕೊಚ್ಚೆಯಾಗಿ, ಅದೆಷ್ಟು ರಂಪ ರಾದ್ಧಾಂತವಾಗಿರುತ್ತಿತ್ತೆಂದರೆ, ಅವನ ಮಹಾಮಜ್ಜನವಾದ ನಂತರ ಶಾಖೆಯ ಇನ್ಯಾರೂ ಆ ವಾಶ್‌ಬೇಸಿನ್ನಲ್ಲಿ ಕೈ, ಮುಖ ತೊಳೆಯುವುದಾಗಲೀ, ಲೈಫ್‌ಬಾಯ್‌ ಸೋಪನ್ನು ಸೋಕುವ ಧೈರ್ಯವನ್ನಾಗಲೀ, ಸಾಹಸವನ್ನಾಗಲೀ ಮಾಡುತ್ತಿರಲಿಲ್ಲ. ಅಲಿಖಿತವಾಗಿ ಅದರ ಪೂರ್ತಿ ಹಕ್ಕು ಸ್ವಾಮ್ಯ ನಮ್ಮ ಮೋಹನಮೂರ್ತಿಯದೇ ಆಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ!

ಜಲಕ್ರೀಡೆಯ ನಂತರ ಒಂದಷ್ಟು ಹೊತ್ತು ಮತ್ತೆ ವೋಚರುಗಳ ಬಂಡಲನ್ನು ಅತ್ತ ಇತ್ತ ಮಾಡುತ್ತಿರುವಾಗ ದಿನವೂ ಅವನಣ್ಣ ಬಂದು ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದ. ಊಟದ ನಂತರ ಮತ್ತೆ ಬಿಟ್ಟು ಹೋಗುತ್ತಿದ್ದ. ಬೆಳಗ್ಗೆ ಸಂಜೆ ಬ್ಯಾಂಕಿಗೆ ಬರುವುದೂ, ಹೋಗುವುದೂ ಪ್ರಾಯಶಃ ಅವನ ಎಸ್ಕಾರ್ಟಿನಲ್ಲೇ ನಡೆಯುತ್ತಿತ್ತೇನೋ. ಬೆಂಗಳೂರಿನ ನಟ್ಟನಡುವಿನಲ್ಲಿ ಈಗಿಪ್ಪತ್ತೈದು ವರ್ಷಗಳ ಹಿಂದೆಯೇ ಕೋಟಿಗಟ್ಟಲೇ ಬೆಲೆಬಾಳುವ ಅವರ ಕುಟುಂಬದ ದೊಡ್ಡ ಆಸ್ತಿಯೊಂದಿದೆಯೆಂಬ ಸುದ್ದಿಯಿತ್ತು. ಅದು ಏನೇನೋ ತಕರಾರುಗಳಿಂದ ಕೋರ್ಟಿನ ಮೆಟ್ಟಿಲು ಹತ್ತಿದ್ದಕ್ಕೇ ಇವನಿಗೆ ಈ ರೀತಿ ಒಂದೆರಡು ಸುತ್ತು ಹಾಗೆಹೀಗೆ ಆಗಿದೆಯೆಂಬ ಸುದ್ಧಿಯೂ ಇತ್ತು. ಹಾಗಾಗಿ ಆಸ್ತಿ ವಿಲೇವಾರಿ ಆಗುವ ತನಕ ಅಣ್ಣಂದಿರು ಇವನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕಾದ್ದು ಅವಶ್ಯಕವಾಗಿತ್ತು. ಪ್ರಾಯಶಃ ಈ ಆಸ್ತಿಯ ಆಕರ್ಷಣೆಗೇ ಇರಬೇಕು, ತಡವಾಗಿಯಾದರೂ ಅವನಿಗೆ ಮದುವೆಯಾಗಿತ್ತು; ಒಬ್ಬ ಮಗನೂ ಇದ್ದ. ಬ್ಯಾಂಕಿನ ಒಂದೆರಡು ಕಾರ್ಯಕ್ರಮಗಳಿಗೆ ಅವರಿಬ್ಬರನ್ನೂ ಕರೆದುಕೊಂಡು ಬಂದಿದ್ದ, ಆಕೆ ಬುದ್ಧಿವಂತಳಂತೆಯೇ ಕಾಣುತ್ತಿದ್ದಳು; ಮಗನೂ ಮುದ್ದಾಗಿದ್ದ.

ಮಧ್ಯಾಹ್ನದ ಊಟದ ನಂತರ ಮತ್ತೊಂದು ವರಸೆ ನಿದ್ರೆ, ಮತ್ತೊಂದು ಜಲಕ್ರೀಡೆಯ ನಂತರ ಒಂದು ಚೀಲದೊಂದಿಗೆ ಮಾರುಕಟ್ಟೆಯ ಕಡೆಗೆ ಎರಡನೆಯ ಸರ್ಕೀಟ್‌ ಹೊರಡುತ್ತಿತ್ತು. ಬೆಳಗ್ಗೆ ನೋಡಿಕೊಂಡು ಬಂದಿದ್ದ ಹಣ್ಣು, ತರಕಾರಿ, ಹೂವುಗಳನ್ನು ಸ್ಯಾಂಪಲಿಗೆಂಬಂತೆ ಒಂದೆರಡು, ಒಂದು ಮುಷ್ಟಿ, ಒಂದು ಬೊಗಸೆ ಎಂಬಂತೆ ತನ್ನ ಚೀಲದಲ್ಲಿ ತುಂಬಿಕೊಳ್ಳುತ್ತಿದ್ದ. ಎಂದೂ ಅದಕ್ಕೆ ದುಡ್ಡು ಕೊಟ್ಟಿದ್ದಂತೂ ಇಲ್ಲ. ಪುಣ್ಯವೆಂದರೆ ದಿನವೂ ಒಬ್ಬರ ಬುಟ್ಟಿಗೇ ಕೈಹಾಕುತ್ತಿರಲಿಲ್ಲ; ಒಂದೊಂದು ದಿನ ಒಬ್ಬೊಬ್ಬರ ಸರಕು. “ಏಮಣ್ಣಾ ಎಪ್ಪುಡೂ ಇಲಾ ತೀಸ್ಕೊನೆಳ್ತಾವು, ಒಕ ನಾಡೂ ಡಬ್ಬಿಚ್ಚಿಲ್ಲೆ” ಎಂದು ಯಾರಾದರೂ ಗೊಣಗಿದರೆ, “ನಾಲ್ಗು ಉಲೂಕಾಯಿ ತೀಸ್ಕೊಂಟೆ ಎಂತೀವಲ್ಲ, ರೆಂಡು ವಂಕಾಯಿಕೂ ಡಬ್ಬೀವಲ್ನಾ, ಬಿಡ್ಡ ತಿನ್ನೇಕು ಒಕ ಪಂಡು ಎತ್ಕೊನ್ನಾನು, ನಾಲ್ಗು ಪೂಲು ದೇವಡ ಮೀದು ಪೆಟ್ತಾನು, ನೀಕೇ ಪುಣ್ಯಮು” ಎಂದು ದಬಾಯಿಸಿಕೊಂಡು ಅಂತೂ ಮರುದಿನಕ್ಕೆ ಮನೆಗೆ ಬೇಕಾಗುವಷ್ಟು ಗ್ರಾಸವನ್ನು ಪಟಾಯಿಸಿಕೊಂಡು ಬರುತ್ತಿದ್ದ. ಹೀಗೆ ಬಿಟ್ಟಿಯಾಗಿ ತೆಗೆದುಕೊಂಡು ಬರುತ್ತಿದ್ದುದಕ್ಕೆ ಪ್ರತಿಯಾಗಿ ಪ್ರತಿ ಜನವರಿಯೂ ಎಲ್ಲ ಮುಂಗಟ್ಟೆಗಳಲ್ಲೂ ಎರಡು, ನಾಲ್ಕು ಕ್ಯಾಲೆಂಡರುಗಳನ್ನು ಲಪಟಾಯಿಸಿಕೊಂಡು ಅವರೆಲ್ಲರಿಗೂ ಬ್ಯಾಂಕಿನ ಕ್ಯಾಲೆಂಡರುಗಳನ್ನು ಕೊಟ್ಟು ಬರುತ್ತಿದ್ದ. ಬ್ಯಾಂಕಿನ ಯಾವುದೇ ಕಾರ್ಯಕ್ರಮಗಳಿಗೆ ತರಿಸಿದ ತಿಂಡಿ ಬಟವಾಡೆಯಾದ ತಕ್ಷಣ ಮಿಕ್ಕಿದ್ದಷ್ಟನ್ನೂ ಯಾರನ್ನೂ ಕೇಳದೆ ತುಂಬಿಕೊಂಡು ಹೋಗಿ ಅವರಿಗೆಲ್ಲಾ ಹಂಚಿಬರುತ್ತಿದ್ದ. ಎಷ್ಟರ ಮಟ್ಟಿಗೆಂದರೆ ಯಾರಾದರೂ ತಿಂಡಿಯನ್ನಿಟ್ಟು ಏನೋ ಕೆಲಸಕ್ಕೆಂದು ಎದ್ದು ಹೋಗಿದ್ದರೆ ಬರುವಷ್ಟರಲ್ಲಿ ಅದು ಮಾಯವಾಗಿರುತ್ತಿತ್ತು. ಕಳ್ಳ ಯಾರೆಂದು ಗೊತ್ತಿದ್ದರೂ ʻಹಾಳಾಗಿ ಹೋಗಲಿʼ ಎಂದು ಸುಮ್ಮನಾಗುತ್ತಿದ್ದದ್ದೇ ಹೆಚ್ಚು. ಕೇಳಿದರೆ ತಾನೇ ಒಪ್ಪಿಕೊಳ್ಳುತ್ತಿದ್ದನೇ, “ನಾಕೇಮಿ ತೆಲೀದು, ನೇ ತೀಸ್ಕೋಲೇದು” ಎಂದು ಅಮಾಯಕನಂತೆ ಮುಖಮಾಡಿದರೆ ಇನ್ನೇನು ಮಾಡಲಾದೀತು?

ಪ್ರತಿ ಶುಕ್ರವಾರ ಬ್ಯಾಂಕಿನಲ್ಲಿ ನಡೆಯುತ್ತಿದ್ದ ಶುಕ್ರವಾರದ ಪೂಜೆಯ ಪ್ರಸಾದಕ್ಕೆ ಕೇಟರಿಂಗ್‌ ನಡೆಸುತ್ತಿದ್ದ ಗ್ರಾಹಕರೊಬ್ಬರಿಂದ ಪ್ರಸಾದವನ್ನು ತರಿಸುವ ಏರ್ಪಾಡಾಗಿತ್ತು. ಅಂದಿನ ಕೇಟರಿಂಗ್‌ಗಾಗಿ ಮಾಡಿದ್ದ ಸಿಹಿಯನ್ನೇ ಎಲ್ಲರಿಗೂ ಹಂಚಿ ಒಂದೆರಡು ಮಿಗುವಷ್ಟನ್ನು ಕಳಿಸುತ್ತಿದ್ದರು. ಮಿಕ್ಕದ್ದೆಲ್ಲವೂ ತನ್ನ ಪಾಲೆಂದೇ ತೀರ್ಮಾನ ಮಾಡಿಕೊಂಡಿರುತ್ತಿದ್ದ ಮೋಹನಮೂರ್ತಿ ಟ್ರೇ ವಾಪಸ್ಸು ಬರುವುದೇ ತಡ, ಉಳಿದವನ್ನೆಲ್ಲಾ ಕವರಿಗೆ ಸುರಿದುಕೊಂಡು ತಕ್ಷಣವೇ ಜಾಗ ಖಾಲಿಮಾಡುತ್ತಿದ್ದ. ಕೆಲವು ಬಾರಿ ಮಿಕ್ಕ ಅಟೆಂಡರುಗಳೊಂದಿಗೆ ಇದರ ಸಲುವಾಗಿ ಜಗಳವಾದರೂ ತನ್ನ ಅಭ್ಯಾಸವನ್ನು ಗಟ್ಟಿಯಾಗಿ ಹಿಡಿದುಕೊಂಡು ಮಿಕ್ಕವರಿಗೆ ಕ್ಯಾರೇ ಎನ್ನದೆ ಸುಖವಾಗಿದ್ದ. ಎಲ್ಲದಕ್ಕೂ ಎಂದೋ, ಹೇಗೋ, ಒಂದು ಕೊನೆ ಬರುವ ಹಾಗೆ ಹೊಸ ಮ್ಯಾನೇಜರ್‌ ಆಗಮನದಿಂದ ಮೋಹನಮೂರ್ತಿಯ ಈ ಘನವಾದ ಅಭ್ಯಾಸಕ್ಕೆ ಕಡಿವಾಣ ಬಿತ್ತು. ತಿಕ್ಕಲುತನದಲ್ಲಿ ಇಬ್ಬರೂ ಪೋಟಿಗಿಳಿಯುವಂತಿದ್ದರು. ವ್ಯತ್ಯಾಸವೆಂದರೆ ಅವರು ಓದಿಕೊಂಡಿದ್ದರು, ಅಧಿಕಾರ ಕೈಯ್ಯಲ್ಲಿತ್ತು. ಇವನು ಎಸ್ಸೆಸ್ಸೆಲ್ಸಿ ಅದು ಹೇಗೆ ಪಾಸಾಗಿದ್ದನೋ, ಮೈಯೆಲ್ಲಾ ಹುಂಬತನವಿತ್ತು. ತೂಕಕ್ಕೆ ಹಾಕಿದರೆ ಮುಳ್ಳು ಆಚೆಈಚೆಯಿಲ್ಲ ಖಂಡಿತವಾಗಿ ಮಧ್ಯಕ್ಕೇ. ಇವನು ಮಿಕ್ಕ ತಿಂಡಿಗೆ ಮಾತ್ರಾ ಕೈಹಾಕಿದರೆ, ಅವರು ಪೂಜೆಗೆ ಒಡೆದ ಕಾಯಿ, ಬಾಳೆಹಣ್ಣಿಗೆ ಕೂಡಾ ತಾವೇ ವಾರಸುದಾರರೆಂಬಂತೆ ತಮ್ಮ ಟೇಬಲ್ಲಿಗೆ ತಂದಿಡಬೇಕೆಂದು ಕಟ್ಟಪ್ಪಣೆ ಮಾಡಿದ್ದರು. ಮಧುಮೇಹಿಯಾಗಿದ್ದರೂ ಮೋಹನಮೂರ್ತಿಗೆ ಅದರ ಭಯವಿರಲಿಲ್ಲ, ಅವರಿಗೊಂದಿಷ್ಟು ಕಾಳಜಿಯಿತ್ತಷ್ಟೇ. ಹಾಗಾಗಿ ಪ್ರತಿವಾರವೂ ಬರುವ ಸಿಹಿತಿಂಡಿಗಳ ಬದಲಾಗಿ ಕೋಸಂಬರಿ, ಗುಗ್ಗುರಿ, ಆಂಬೊಡೆ ಇಂತವನ್ನು ಪ್ರಸಾದಕ್ಕೆ ತರಿಸಬೇಕೆಂದು ಆಜ್ಞೆ ಹೊರಡಿಸಿದ್ದಲ್ಲದೆ ತಾವೇ ಶುಕ್ರವಾರ ಬೆಳಗ್ಗೆ ಖುದ್ದಾಗಿ ಕೇಟರರ್‌ ಬಳಿಗೆ ಹೋಗಿ ಅಂದಿನ ಮೆನು ಫಿಕ್ಸ್‌ಮಾಡಿಕೊಂಡು ಬರುತ್ತಿದ್ದರು. ತರುತ್ತಿದ್ದ ಮೂರುಬಟ್ಟಲಿನ ಊಟದ ಡಬ್ಬಿಯನ್ನು ತೊಳೆಸಿಟ್ಟುಕೊಂಡಿದ್ದು ಮಿಕ್ಕಿದ್ದೆಲ್ಲವನ್ನೂ ತುಂಬಿಕೊಂಡು ಹೋಗಲು ಆರಂಭವಾದಾಗ ಮೋಹನಮೂರ್ತಿಗೆ ತಡೆಯಲಾಗದ ದುಃಖವಾಯಿತು.

ಮೋಹನಮೂರ್ತಿಯ ದುಃಖದ ಪರ್ವ ಹೀಗೇ ನಡೆಯುತ್ತಿರುವಾಗ ಬ್ಯಾಂಕಿನಲ್ಲಿ ಗೋಲ್ಡನ್‌ ಶೇಕ್‌ ಹ್ಯಾಂಡ್ ಬಂದು ಯಾರೋ ಅವನ ತಲೆಯಲ್ಲಿ ಹುಳಬಿಟ್ಟರು. ಅವನು ಪ್ರತಿಯೊಬ್ಬರಲ್ಲೂ ʻತೀಸ್ಕೊಂಟೆ ಮಂಚಿದಾ?ʼ ಎಂದು ಕೇಳಲು ಶುರುಮಾಡಿದ. ಬಂದ ಕೆಲ ಉತ್ತರಗಳು ಹೀಗಿದ್ದವು “ನೀನೀಗ ಕೆಲ್ಸ ಎಲ್ಮಾಡ್ತಿದ್ದೆ, ಏನೂ ವ್ಯತ್ಯಾಸ ಆಗಲ್ಲ ಬಿಡು” “ರಿಟೈರ್‌ ಆದ್ರೆ ಮನೇಲಿ ನಿದ್ರೆ ಮಾಡಕ್ಕೆ ಹೆಂಡತಿ ಬಿಡ್ತಾಳಾ?” “ರಿಟೈರ್‌ ಆದ್ಮೇಲೆ ತಿಂಗಳಿಗೆ ನಾಲ್ಕು ಲೈಫ್‌ಬಾಯ್‌ ಸೋಪು ನೀನೇ ಕೊಂಡ್ಕೋಬೇಕು. ಮನೆ ನೀರಿನ ಬಿಲ್ಲು ಜಾಸ್ತಿಯಾಗತ್ತೆ” “ತರಕಾರಿಗೆ ದುಡ್ಡುಕೊಟ್ಟು ತೊಗೋಬೇಕಾಗತ್ತೆ; ಯೋಚ್ನೆ ಮಾಡು” ನಮ್ಮ ಕಾರ್ಮಿಕ ಸಂಘದ ಸೆಕ್ರೆಟರಿ ಮುಂಜಾಗ್ರತಾ ಕ್ರಮವಾಗಿ “ನಿನ್ನ ಹೆಂಡ್ತೀನ ಕರ‍್ಕೊಂಡ್ಬಾಪ್ಪ. ನಿಮ್ಮಿಬ್ರನ್ನೂ ಕೂರಿಸ್ಕೊಂಡು ಹೇಳ್ತೀನಿ. ಅವರೊಪ್ಪಿದ್ರೆ ತೊಗೊಳೋವಂತೆ. ಇಲ್ದಿದ್ರೆ ನಾಳೆ ನಮ್ತಲೇಗೆ ತ‌ರ‍್ತೀಯ” ಎಂದರು. ನೂರಾರು ಜನರನ್ನು ಕೇಳಿ, ಹೆಂಡತಿ ಮತ್ತು ಅಣ್ಣನ ಅಪ್ಪಣೆಯನ್ನು ಪಡೆದು ಅಂತೂ ಬ್ಯಾಂಕಿಗೆ ಗೋಲ್ಡನ್‌ ಶೇಕ್‌ಹ್ಯಾಂಡ್‌ ಕೊಟ್ಟ. ನಿವೃತ್ತಿಯ ದಿನ ಮಾತಾಡಿದ ಕಾರ್ಮಿಕ ಸಂಘದ ಕಾರ್ಯದರ್ಶಿ “ನಮ್ಮ ಬ್ಯಾಂಕಿನಂತಹ ಘನತೆವೆತ್ತ ಉದಾತ್ತವಾದ ಸಂಸ್ಥೆ ಇನ್ನೊಂದಿಲ್ಲ. ಮೋಹನಮೂರ್ತಿಯಂತವರನ್ನೂ ಮೂವತ್ತು ವರ್ಷಗಳ ಕಾಲ ಸಂಬಳ ಕೊಟ್ಟು ಸಾಕಿದೆ. ನಿವೃತ್ತಿಯಿಂದ ಶ್ರೀಯುತರಿಗೆ ಅನುಕೂಲವಾಗುವುದೋ, ಸಂತೋಷವಾಗುವುದೋ ಗೊತ್ತಿಲ್ಲ. ಆದರೆ ಬ್ಯಾಂಕಿಗೆ ನಿರಂತರವಾಗಿ ಆಗುತ್ತಿರುವ ನಷ್ಟದ ಒಂದು ಭಾಗವಾದರೂ ನಿಲ್ಲುತ್ತದೆ. ದೇವರು ಇಂಥ ಸದ್ಬುದ್ಧಿಯನ್ನು ಕರುಣಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು. ಅವರನ್ನೂ, ಅವರ ಕುಟುಂಬವನ್ನೂ ಕಾಪಾಡಲಿ” ಎಂದು ಹಾರೈಸಿದರು ಎನ್ನುವಲ್ಲಿಗೆ ನಮ್ಮ ಮೋಹನಮೂರ್ತಿಯ ಮಹಾಪುರಾಣಕ್ಕೆ ಮಂಗಳವನ್ನು ಹಾಡೋಣ.

********************************************************

2 thoughts on “ಮೋಹನಮೂರ್ತಿಯ ಮಹಾಪುರಾಣ

  1. ಅಬ್ಬಾ! ಬ್ಯಾಂಕಿನ ಸಕಲ ಸಿಬ್ಬಂದಿ ಅದು ಹೇಗೆ ಅವನನ್ನು ಅಷ್ಟುವರ್ಷಗಳ‌ಕಾಲ ಸಹಿಸಿಕೊಂಡರೋ??

    ತೆಲುಗು, ತಮಿಳು‌ ವಾಕ್ಯಗಳಿಗೆ ಕನ್ನಡದ ಅರ್ಥ ಕೊಡದಿದ್ದರೆ ನಮ್ಮಂಥವರು ಅರ್ಥಮಾಡಿಕೊಳ್ಳಲಾರೆವು.

Leave a Reply

Back To Top