ನಂಜು ನಾಟುವ ಮನಗಳಿಗೆ

ಕವಿತೆ

ನಂಜು ನಾಟುವ ಮನಗಳಿಗೆ

ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ

Person Inside Dark Hallway

ಕದಲದೆ ನಿಲ್ಲದಿರು
ಕೊರಕಲು ದಾಟು
ಕೊಳಲ ಉಸಿರಿಗೆ
ಕಳವಳ ಕರಗುವುದು

ಮೂಕವಾಗದಿರು
ನಾಕದ ತೂಕವೂ ಸ್ಥಗಿತ
ಪಾದರಸವಾಗು
ಮುತ್ತಿನ ತಳ ಕಾಣುವೆ

ಕಲ್ಲಾಗಿ ಕರಗದಿರು
ಕಳೆಯುವೆ
ಮೆಲ್ಲನೆದ್ದರೆ
ಬೆಳೆಯುವೆ

ನಡೆಯುತ್ತಿರು
ನಿರಾಳವಾಗಿರುವೆ
ನಿನ್ನನು ತುಳಿದ ಗುರುತಿನಲ್ಲೇ ಲೋಕವು ಮರಳುವುದು

ಅಹಂಕಾರಿಯಾಗದಿರು
ಬಾಳು ಬಹು ಭಾರ
ಒಡವಳಿದು ಸಾಗು
ಬದುಕು ಹಗುರ

ಅತಿಯಾಸೆಯಿರೆ
ನಶೆಯಲಿ ಮುಳುಗುವಿ
ಸಹನೆಯಲಿ ಬೆಳಗು
ಚೆಂದ ತೋರುವಿ

ಕರಗದಿರು ಕತ್ತಲೆಯಲಿ
ಕಾಲ ಮೀರಿತು
ಬೆಳಕು ಬಿತ್ತು
ಜಗವು ನಿನ್ನದೆ

ಹುಸಿಯ ನುಡಿಯದಿರು
ಜೀವನದಲಿ ಸೋಲುವಿ
ಸತ್ಯಕೆ ಜೀವ ತುಂಬು
ಈ ನೆಲದಲ್ಲಿರುವಿ

ಅಳಿಸು ಹಾಕು
ಅನುಮಾನದ ನಿಶಾನೆ
ಉಸಿರಿರುವರೆಗೆ
ಬಸವಳಿಯುವುದು ಸೋಲು

ಕನಸು ಕಾಣು
ನೆನಸಾಗುವ ಕಾಲವಿದೆ
ವಿಷ ಅಥವಾ ಅಮೃತ
ಬಯಸದಿರು

ಓಡಿ ಬಾ…ಬೆಳಕಿನತ್ತ
ನಿನ್ನ ದೂರುಗಳು-
ಕತ್ತಲೆಯಲಿ ಉಳಿಯಬಾರದು
ಪ್ರಾರಂಭವೀಗ ಬದುಕು

ಎಳೆದ ಗೆರೆಗಳು
ಗೀಚಿದ ಗಾಯಗಳೆ,
ಸ್ಥಾವರ ಬದಲಾಯಿಸು
ಅಮುಲ್ಯ ಸಮಯವಿದೆ

ಕಾಲದ ಹಾಗೆ
ಬೆತ್ತಲೆಯಾಗದಿರು
ಕತ್ತಲೆಯಲಿ ಕನ್ನಡಿ ನಗುವುದು
ನಿನಗೆ ನೀನೆ ದೀವಿಗೆಯಾಗು

ಮನ್ನಿಸು,ದುರ್ಬಲರ
ಅವರೆದೆಗೆ ದೀಪ ಮುಡಿಸು
ನಂಜು ನಾಟುವ ಮನಗಳಿಗೆ
ಬೊಗಸೆಯಗಲ
ಅರ್ಥ ಕಾಣಲಿ

ನೀನೂ ಬೆಳೆ
ಮುಳುಗುವ ಹೊಳೆಯಲಿ
ಕಳೆಯುವವರ ಹಿಡಿದೆಳೆ
ಅವರೂ ಹೆಜ್ಜೆ ಮೂಡಿಸಲಿ

ತೊಳೆದು ಬಿಡು
ಒಳಬೇಗುದಿಯ ಬೆವರನು
ಹೆರಳ ಬಿಡಿಸಿ,
ನಾಳೆಗೆ ಉತ್ತರವಾಗುವಿ

ನೀನೀಗ-
ಎಲ್ಲರೊಳಗೂ ಒಂದಾಗು
ಹೊಸ ಹಾದಿಗಾಗಿ
ಪ್ರೀತಿಗಾಗಿ…..
ನೀತಿಗಾಗಿ…..
ಬೆಳಕಿಗಾಗಿ….

*************************

Leave a Reply

Back To Top