ವಾರದ ಕಥೆ

ಅಂತರಂಗದೊಳಗಿನ  ಧ್ವನಿ

Image result for photos of one bhk house in mumbai

ಮುಂಬೈಯಲ್ಲಿ ಬಾಡಿಗೆ ಮನೆನೇ ಚಂದವಿತ್ತು.ನಮ್ಮ ಕಟ್ಟಡದಲ್ಲಿಯೇ ನಮ್ಮೂರಿನವರು ಮತ್ತೊಬ್ಬ ಕನ್ನಡದ ಪರಿವಾರದವರಾದರೂ ಇದ್ರು.ಈ  ಸ್ವಂತ ಮನೆಗೆ ಬಂದ ಮೇಲೆ ಕನ್ನಡದವರು ಅಪರೂಪ ಅಂತಿದ್ದಳು ಕಾವ್ಯ. ಸುಮಾರು ಮೂರ್ನಾಲ್ಕು ವರ್ಷಗಳ ನಂತರ ಪಕ್ಕದ ಮನೆಗೆ ಕನ್ನಡದವರು ಬಾಡಿಗೆಗೆಂದು ಬಂದರು. ಆದರೆ ಗಂಡ- ಹೆಂಡತಿಯರಿಬ್ಬರೂ ಮಿತಭಾಷಿಕರು. ಮಕ್ಕಳಿಲ್ಲದ ಆಕೆ ಸದಾ ಒಂಟಿಯಾಗಿರಲು ಬಯಸುತ್ತಿದ್ದಳು.” ಏನ್ ಜನಾನೋ ಏನೋ, ತ್ರೀ ಬಿ ಎಚ್ ಕೆ ಯ ಅಷ್ಟ ದೊಡ್ಡ ಮನ್ಯಾಗ ದಿನವೆಲ್ಲ ಅವರೊಬ್ಬರ್ ಹೆಂಗ ಇರ್ತಾರೋ ಏನೋ” ಅಂತ ಗಂಡನಿಗೆ ಹೇಳಿದ್ರೆ ಅದು ಅವರವರ ಇಷ್ಟ ಬಿಡು ಅಂತಿದ್ರು .ಪಕ್ಕದ ಮನೆಯ ಆಕೆ ಎಲ್ಲಿಯಾದರೂ  ಎದುರಿಗೆ ಕಂಡರೆ ಮುಗುಳ್ನಗೆಯೊಂದು ಅವರ ಮುಖದಲ್ಲಿ ಸದಾ ತೇಲಿಬರುತ್ತಿತ್ತು .ಕಾವ್ಯಳೆ ಮಾತಿಗೆಳೆದರು ಅಷ್ಟೇ ಹಃ, ಹ್ಞೂ ಅವರ ಬಾಯಿಂದ ಬರುವ ಶಬ್ದಗಳು . ಬಂದ ಒಂದೆರಡು ತಿಂಗಳಲ್ಲಿ

ಕೇಬಲ್ನವನ ಮತ್ತು ಹಾಲಿನವನ ಫೋನ್ ನಂಬರಿಗೆಂದು ಕಾವ್ಯಳ ಮನೆ ಬಾಗಿಲಿಗೆ ಬಂದಿದ್ದಷ್ಟೇ.ಮನೆಯ ಒಳಗೆ ಬಾ ಅಂತ ಕರೆದರೂ ಬರುತ್ತಿರಲಿಲ್ಲ.ಒಂದಿನ ಮುಂಜಾನೆ ಕಾವ್ಯ ಮನೆಯ ಮುಂದೆ ಕಸಗುಡಿಸುತ್ತಿದ್ದಳು.ಪಕ್ಕದ ಮನೆಯ ಆಕೆ ರಂಗೋಲಿ ಹಾಕುತ್ತಿದ್ದರು.ಇದ್ದಕ್ಕಿದ್ದಂತೆ ಮೂರ್ಛೆ ಬಂದಂತಾಗಿ ಬಿದ್ದು ಬಿಟ್ಟರು.ತಕ್ಷಣವೇ ಡಾಕ್ಟರ್ ಬಳಿ ಹೋಗಿ ಬಂದರು.ಬಿ.ಪಿ.ಹೆಚ್ಚಾಗಿ ಈ ರೀತಿ ಆಗಿದೆ ಅಂದ್ರು ಡಾಕ್ಟರ್. “ನೋಡ್ರಿ ನಂಗ ಅರಾಮ್ ಇಲ್ಲದ್ದು ಡ್ಯೂಟಿಯಿಂದ ಬಂದ ನಮ್ ಮನಿಯವರ ತನಕ ಹೋಗುದ ಬ್ಯಾಡ್ರಿ, ಭಾಳ್ ಥ್ಯಾಂಕ್ಸ್ ನಿಮಗ ಅಂದ್ರು. ಹೋಗ್ಲಿ ಬಿಡ್ರಿ ಮನಸ್ಯಾಗ ಮೊದ್ಲು ಮಾನವೀಯತೆ ಇರಬೇಕ್ರೀ,ನಂಬಿಕೆ ವಿಶ್ವಾಸ ಮುಖ್ಯ …..ಇರೋವಷ್ಟು ದಿನ ಒಳ್ಳೆವರಾಗಿರಬೇಕು  ಅಂತೇಳಿ ಅವರ ಮನೆಯಲ್ಲಿ ಒಂದರ್ಧ ಗಂಟೆ ಕುಳಿತು ಮನೆಗೆ ವಾಪಸ್ಸದಳು.ರಾತ್ರಿ ಮನೆಗೆ ಬಂದ  ಗಂಡನಿಗೆ ಮಕ್ಕಳಿಬ್ಬರು ವಿಷಯ ತಿಳಿಸಿದ್ರು.”ಹೌದ್ರಿ ಅವ್ರು ಈಗ ಅರಾಮ್ ಅದಾರು” ಅಂದಳು.ನಂತರದ ದಿನಗಳಲ್ಲಿ ಅವರು ಒಂದಿಷ್ಟು ಸಲುಗೆಯಿಂದ ಮಾತನಾಡಲಿಕ್ಕೆ ಶುರುಮಾಡಿದರು

ಕಾವ್ಯಗಿಂತಲೂ ವಯಸ್ಸಿನಲ್ಲಿ 18- 20 ವರ್ಷ ದೊಡ್ಡವರಾಗಿದ್ದ ಅವರನ್ನು ಏನೆಂದು ಕರೆಯುವುದು?….

ಬಡಕಲು ಶರೀರ ಮುಗ್ದ ನಡೆಯ ಅವರನ್ನ ದೊಡ್ಡಕ್ಕಾ ಅಂತಾನೇ ಕರೆಯಲು ಶುರು ಮಾಡಿದಳು ಕಾವ್ಯ. ಆಗೊಮ್ಮೆ ಈಗೊಮ್ಮೆ ಪ್ರೀತಿಯಿಂದ ‘ಪ್ರೇಮಕ್ಕ’ ಅಂತ ಹೆಸರಿಡಿದು ಕೂಗುತ್ತಿದ್ದಳು . ರಂಗೋಲಿ ಯಾವ ದಿಕ್ಕಿಗೆ ಹಾಕಬೇಕು, ದೇವರಪೂಜೆ, ಉಪವಾಸ ವೃತ  ಕಲಿಸಿದವರೇ  ಪ್ರೇಮಕ್ಕಾ.ಬರಬರುತ್ತ ಕಾವ್ಯಳೊಂದಿಗೆ ತುಂಬಾ ಆತ್ಮೀಯರಾಗಿ ಬಿಟ್ಟರು.ವಾರದಲ್ಲಿ ಎರಡು ಸಲಾನಾದ್ರು ಗಂಟೆಗಟ್ಟಲೇ ಬಂದು ಕಾವ್ಯನ ಮನೇಲಿ ಹರಟೆ ಹೊಡೀತಿದ್ರು.ಅವರು ಸಾಂಬಾರು ಪುಡಿ, ಚಟ್ನಿ ,ಹಪ್ಪಳ  ಹೀಗೆ ಹೊಸ,ಹೊಸ ಅಡುಗೆ ಮಾಹಿತಿ ಹೇಳಿದಾಗ ಕಾವ್ಯ ಅದನ್ನೆಲ್ಲ ಒಂದು ಡೈರಿಯಲ್ಲಿ ಬರೆದುಕೊಳ್ಳುವಾಗ “ಐ ಇದೇನಿದು ಇಷ್ಟೊಂದ್ ದೊಡ್ಡ ಡೈರಿ ಅಂದಾಗ “ನಾ ಆಗಾಗ ಕಥೆ ,ಕವನ,ಲೇಖನ ಬರೀತಿನ್ರಿ” ಅಂದಳು.ಹೌದೇನು ನಾನು ದೇವರ ಭಜನೆ ಹಾಡ್ತೀನಿ ಅಂದ್ರು.”ಹಂಗಾರ ಈ ಸಲ ನಮ್ಮ ಸಂಘದ ವತಿಯಿಂದ ನಡೆಯೋ ಕನ್ನಡ  ರಾಜ್ತೋತ್ಸವಕ್ಕ ಬರ್ರಿ ” ಅಂದಳು ಕಾವ್ಯ. ಒಲ್ಲೆ, ಒಲ್ಲೆ ಅಂತಾನೆ ಬಂದ ಪ್ರೇಮಕ್ಕನ  ‘ಪಾಂಡುರಂಗ ವಿಠ್ಠಲ’ ಹಾಡಿಗೆ  ಮೊದಲ ಪ್ರೈಜೂ ಬಂತು.ಮಾರನೇ ದಿನ ಅವರ ಮನಿಗಿ ಕರದು ತಮಗಾದ ಸಂತೋಷ ಹಂಚಿಕೊಂಡರು.ಇಷ್ಟೊಂದೆಲ್ಲ ಟ್ಯಾಲೆಂಟ್ ಇರೋ ನೀವು ಯಾಕ್ ಯಾವುದ್ರಾಗೂ ಆಸಕ್ತಿ ತೋರ್ಸೋದಿಲ್ಲ ಅಂದಾಗ, “ಮನಿ ದೊಡ್ಡದಾದಷ್ಟು ಮನಸ್ಗೋಳು ದೂರ ಅಕ್ಕಾವಂತ, ಅದು ಖರೇನ್ ಐತಿ….  ಅಂತ ಮನೆ,ಮನಸ್ಥಿತಿ ಬಗ್ಗೆ ಹೇಳ್ಕೊಂಡ್ರು. “ನೀ ಇರು ಸಣ್ಣ ಮನಿ ಮಾರಿ ದೊಡ್ಡ ಮನಿ ತುಗೊಬ್ಯಾಡಾ” ಅಂದಾಗ ” ನೀವು ಎಲ್ಯಾರ ಹಂಗ ಆಶೀರ್ವಾದ ಮಾಡಬಿಡಬ್ಯಾಡ್ರಿ ದೊಡ್ಡಕ್ಕ, ಮುಂಜಾನಿ ಮತ್  ಮೂರುಸಂಜಿಲಿ ಬಾತ್ರೂಮಿಗೆ ಒಬ್ಬರೋಗಿ ಹತ್ತ ನಿಮಿಷ ಆತಂದ್ರ ಹೊರಗಿನ ಮೂವರೂ ಆವಾಜ್ ಕೊಡುದು ಅಕ್ಕೆತ್ರಿ ಯಾಕಂದ್ರ ನಮ್ದು ಒನ್ ಬಿ ಎಚ್ ಕೆ ಮನಿ, ಅಟ್ಯಾಚ್ ಬಾತ್ ರೂಮ್ ಟೌಲೆಟ್ಟ್ ಅದರಿ….

ಅದ ದೊಡ್ಡ ಗೋಳು ಅಂದಾಗ ನೀ ಬಿಡು ಏನಾರ ಮಾತ್ ಹೇಳಿ ನನ್ನ ದುಃಖ ಮರಸ್ತಿ ,ಅದಕ್ಕ ದಿನಕ್ಕ ಒಂದ ಸಲ ಆದ್ರೂ ನಿನ್ನ ಭೇಟಿ ಆಗ್ಬೇಕು ಅಂತೇಳಿ ಬರ್ತೀನಿ, ನಾಸ್ಟಾಕ ಏನ್ ಮಾಡಿದ್ದಿ ಅಂದ್ರು ಅದರೀ ಬಡವರ ಮನಿ ಕಾಂಕ್ರೀಟ್ಟು, ಹೊಟ್ಟಿ ತುಂಬಿಸೋ ಉಪ್ಪಿಟ್ಟು ಅಂದ ಕಾವ್ಯನ ಮಾತಿಗಿ, “ಕುಂತಲ್ಲೇ ಕವನ ಕಟ್ಟಿ ಬಿಡ್ತಿ ನೋಡು ನೀನು” ಅನ್ನೋರು. “ಪ್ರೇಮಕ್ಕಾ ಮೊನ್ನೆ ಒಂದ್ ಭಾವಗೀತಿ ಬರದೇನರಿ ಅದು ನಿಮ್ಮ ದನಿಗಿ ಭಾಳ್ ಸೂಟ್ ಅಕ್ಕೆತಿ ನಾ ಧಾಟಿ  ಹೇಳ್ತೀನಿ ನೀವು ಹಾಡಾ ಹೇಳ್ರಿ ಅಂದದ್ದಕ್ . ಏ ಅವೆಲ್ಲ ನಂಗ್ ಬಗಿಹರಿಯುದಿಲ್ಲ  ಬಿಡು,ದೇವರ ನಾಮಾ ಆದ್ರ ಹೇಳಬಹುದು ಅಂದ್ರು.ನೀವ್ ಏನ್ರಿ ಹಿಂಗ್ ಅಂತೀರಿ ಪ್ರಯತ್ನ ಮಾಡಿ ಬ್ಯಾರೆ,ಬ್ಯಾರೆ ಟೈಪ್ ಹಾಡಾ ಟ್ರೈ ಮಾಡಿದ್ರ ನಿಮಗೂ ಕಾನ್ಪಿಡೆನ್ಸ್ ಬರತೈತಿ. ನಿಮ್ಮ ವಾಟ್ಸಾಪ್ಕ್ ಕಳಸಿನ್ರಿ ನಿಮಗ ಟೈಮ್ ಇದ್ದಾಗ ಹಾಡ್ರಿ ಅಂತ ಅಂದಿದ್ದಕ್ಕ ಒತ್ತಾಯದ ಮ್ಯಾಲ ಹ್ಞೂ ಗುಟ್ಟಿದ್ರು. “ಏನು ಬಾಜು ಮನ್ಯಾಗ ಭಾಳ ಜೋರ್ ನಗಾಕತ್ತಿದ್ರಿ ,ಇತ್ತೀಚಿಗಿ ಅವರು ಒಂದಿಟ್ ನಗುದು ಕೆಲಿದು ಮಾಡ್ತಾರಲ್ಲ” ಅಂತ ಕಾವ್ಯನ ಯಜಮಾನರು  ಅಂದಾಗ ಏನೋ ನೆಂಪಾಗಿ ನಗಾಕತ್ತಳು ಕಾವ್ಯ.  “ಏನ್ ಮಾತು ಅಂತ ನಮಗೂ ಹೇಳಿದ್ರ  ನಾವೂ ನಗತಿವಿ  ಅಂದ್ರು, ಮೊನ್ನೆ  ಪ್ರೇಮಕ್ಕಾ ನಾನು ಕಾಯಿಪಲ್ಲೆ ತಗೊಂಡು ವಾಪಸ್ ಬರುಮುಂದ 15 -20 ನಿಮಿಷದಾಗ ನಮ್ಮ ಮಾತ್ ಕೇಳಿದ ರಿಕ್ಷಾ ಡ್ರೈವರ್ ಯಾವ ಭಾಷೆ ನಿಮ್ದು ,ಅದೇಷ್ಟರ ಸ್ಪೀಡ್ ಆಗಿ  ಮಾತಾಡ್ತೀರಿ ಅಂದ. ಅಕ್ಕಾ ಮತ್ತು ನಾನು ನಕ್ಕೊಂತ್ ಅವನ ಜೋಡಿ ಹಿಂದಿ ಮಾತಾಡಿ ಅವನ್ನೂ ನಗಸಿದ್ವಿ  ಅಂದಳು ಕಾವ್ಯ.  ” ನೀ ಬಿಡು ಕಲ್ಲ, ಮಣ್ಣ,ಗಿಡ ಮಾತಾಡ್ಸಿ ಬರ್ತಿ ಇನ್ನ ಜನಾ ಏನ್ ಮಹಾ ಅಂತ ಅವರೂ ನಗಾಕತ್ತರು .ಒಂದಿನ ಹಿಂಗ ಮಾತಾಡ್ತಿರಬೇಕಾದ್ರ ಪ್ರೇಮಕ್ಕಾ ಇನ್ನೇನು ಲಾಕಡೌನ್  ಮುಗ್ಯಾಕ್ ಬಂತು ಮುಂದಿನ ತಿಂಗಳು  ನಮ್ಮ ಸ್ವಂತ  ಮನಿಗಿ ಹೊಕ್ಕೆವಿ ,ಗೃಹ ಪ್ರವೇಶ ಸಿಂಪಲ್ ಆಗಿ ಮಾಡ್ತೀವಿ ನೀನು ತಪ್ಪಸಬ್ಯಾಡಾ ನೋಡು ಅಂತಂದಾಗ “ಅಲ್ಲಿ ಹೋದ ಮೇಲೆ ನನ್ನ ಮರೆಯಬೇಡಿ ಆಗಾಗ ನಮ್ ಮನಿ ಕಡೆನೂ ಒಂದಿಟ್ ಹನಿಕಿ ಹಾಕೊಂತ್ ಇರ್ರಿ ದೊಡ್ಡಕ್ಕಾ” ಅಂದಾಗ ಈ ಎರಡು ವರ್ಷದಲ್ಲಿ ನಿನ್ನ ಜೊತೆ ಕಳೆದ ಪ್ರತಿ ದಿನಾನೂ ನಾ ಮರೆಯುದಿಲ್ಲ.ಇವತ್ತು ನಾ ಇಷ್ಟು ಬದಲಾಗೇನೀ ಅಂದ್ರ ಅದಕ್ಕ ನೀನು ಒಂದ್ ರೀತಿ  ಕಾರಣ ನೀ ಅವತ್ತ ಕೊಟ್ಟ ಭರವಸೆ,ಆಶ್ವಾಸನೆ ನನಗ ಧೈರ್ಯ ತುಂಬಿದ್ವು, ಇಲ್ಲ ಅಂದ್ರ ನಾ ಎಲ್ಲಿ ಹುಚ್ಚಿ ಆಗಿ ಬಿಡತಿದ್ನೇನೋ” ಅಂತ ಕಾವ್ಯಾನ್ನ ತಬ್ಬಿಕೊಂಡು ಅಳಲಿಕ್ಕೆ ಶುರು ಮಾಡಿದರು. “ಏ ಏನ್ರಿ ಪ್ರೇಮಕ್ಕಾ ನೀವು ಹಿಂಗೆಲ್ಲ ಅಳುದಾದ್ರ  ನಾ ನಿಮ್ ಜೋಡಿ ಮಾತಾಡಂಗಿಲ್ಲರಿ ಅಂತಂದಾಗ….. ನೀನ್ ಸುಮ್ಮಿರುವಾಕಿ ,ಏನಾರ ನೆಪ ಹೇಳ್ಕೊಂಡು ಮತ್ತ ಓಡಿ ಬರ್ತಿ ಮಾತಾಡಸಾಕ ಅಂದರು. ಅದು ಖರೇನ್ ಬಿಡ್ರಿ ಅಂದಳು.ಅವತ್ತು ಪ್ರೇಮಕ್ಕಾರು ಮನಿ ಸಾಮಾನು ಶಿಫ್ಟ್ ಮಾಡಾಕತ್ತಿದ್ರು ,ಒಂದ್ಸಲ ನೀರಿಗಂತ, ಮತ್ತೊ0ದ್ಸಲ ಸ್ಟೂಲ್ ಕೊಡು ಅಂತ ಬರ್ತಾನ್ ಇದ್ರು ಕಾವ್ಯನ ಮನೆಗೆ . ಎಲ್ಲಾ ಪ್ಯಾಕ್ ಮಾಡಿ ಹೊರಡುವಾಗ  ಪಕ್ಕದಲ್ಲೇ ಅವರ  ಗಂಡ ಇದ್ದಿದ್ರಿಂದಾನೋ ಏನೋ ಅವರು “ಹೋಗಿ ಬರ್ತೇವಿ ಕಾವ್ಯ ,ಮನಿ ಕಡೆ ಬಾ,ಮಕ್ಕಳು ಜೋಪಾನ ಅಂತಷ್ಟ ಹೇಳಿದ್ರು. ಅವರ ಕಣ್ಣುಗಳು ಮಾತ್ರ ನಾ ನಿನ್ನ ಮೇಲಿಟ್ಟ ನಂಬಿಕೆಗೆ ನೀ ಯಾವಾಗ್ಲೂ ಆಪ್ತಳಾಗಿ ಇರುತ್ತಿ  ಅಂತ ಹೇಳಿದಂತೆ ಭಾಸವಾಯಿತು.ಈ ನಂಬಿಕೆಗಳೇ ಹಾಗೆ ಒಂದು ಸಲ ಬಂದ್ರೆ ಅಷ್ಟು ಸುಲಭಕ್ಕೆ ಹೋಗೋದಿಲ್ಲ.ಅವರಿಗೆ ದುಃಖ ಇದ್ದದ್ದು ಎಲ್ಲರಿಗೂ ಗೊತ್ತಿತ್ತು ಆದ್ರೆ ಆ ದುಃಖಕ್ಕೆ ಕಾರಣ  ಗೊತ್ತಿದ್ದ ಕೆಲವೇ ಕೆಲವು  ಆತ್ಮೀಯರಲ್ಲಿ ಕಾವ್ಯಾನೂ ಒಬ್ಬಳು.ಸ್ವಂತ ಮನೆಗೆ ಹೋದ ಮೇಲೆಯೂ ಆಗಾಗ ತಿಂಡಿ,ತಿನಿಸು ತೆಗೆದುಕೊಂಡು ಮನೆಗೆ ಬರ್ತಿದ್ರು ಪ್ರೇಮಕ್ಕಾ . ಕಾವ್ಯ ಕೂಡಾ ಕೆಲವು ಸಲ ಅವರ  ಮನೆಗೆ ಹೋಗಿದ್ದಳು.ಅವರು ಮೊದಲಿಂತಿರದೆ ಬದಲಾಗಿದ್ದರು ಏನೇ ಬಂದರು ಎದುರಿಸುವ ಛಲ ಅವರ ಮಾತುಗಳಲ್ಲೇ ಗೊತ್ತಾಗುತ್ತಿತ್ತು.ಮೊನ್ನೆ ಫೋನ್ ಮಾಡಿದ್ದ ಪ್ರೇಮಕ್ಕಾ ತುಂಬಾ ಖುಷಿಯಾಗಿದ್ರು”ಕಾವ್ಯ ನೀ ಇನ್ನೂ ಫೇಸ್ಬುಕ್ ನೋಡಿಲ್ಲೇನು ಅಂದ್ರು.ಯಾಕ್ರೀ ಅಂದಳು, ಅದಕ್ಕ ಲಗೂನ್ ನೋಡ ಮತ್ತ, ಅಂದಂಗ ನೀ ನಂಗ ಫ್ರೆಂಡ್ ಅದಿ ಇಲ್ಲೊ ಅಂದಾಗ “ಏನ್ರಿ ದೊಡ್ಡಕ್ಕಾ ವಿಶೇಷ ನೀವೂ ನನ್ನಂಗ ಮಜಾಕ್ ಮಾಡಾಕತ್ತಿರಿ ನೀವ ಅಲ್ಲೇನು ನಾಕ ದಿನದ ಹಿಂದ್ ನಂಗ ಫ್ರೆಂಡ್ ರಿಕ್ವೆಸ್ಟ್ ಕಳಸಿದ್ರಿ ನಾ ಅವತ್ತ ಆಕ್ಷೇಫ್ಟ್ ಮಾಡಿನಲ್ಲ” ಹಿಂಗ ನಕ್ಕೊಂತ ಇರ್ರಿ, ನಿಮ್ಮ ಮುಖಕ್ಕ ನಗೀನ  ಚಂದ ಆಗ ಒಂದ ಕಳೆ ಬರುದು” ಅಂದಳು. “ಹೊಗಳಿದ್ದ ಸಾಕು ಮೊದ್ಲು ಫೇಸ್ಬುಕ್ ನೋಡು, ನೀ ಬರದ ಭಾವಗೀತಿ ಹಾಡಿನಿ .ಅದೇನೋ ನೀ ಹಗಲೆಲ್ಲ ಅಂತಿದ್ದೆಲ್ಲ ಬ್ಯಾಂಕ್ನ್ಯಾಗ ಪಾಸಬುಕ್ ಅಕೌಂಟ್ ಇಲ್ಲಂದ್ರು  ಫೇಸ್ಬುಕ್ ಅಕೌಂಟ್ ಮಾತ್ರ ಹೆಚ್ಚು ಕಮ್ಮಿ ಎಲ್ಲಾರೂನೂ ಇರ್ತಾವು  ಅಂತ….! ಲಗೂನ ಒಂದ್ ಲೈಕ್ ಕೊಡು” ಅಂತ ಫೋನ್ ಇಟ್ಟ ಬಿಟ್ರು. ಅಂತರಾಳದ ಆಳ ತಿಳಿದವರು ಯಾರು ನಿನ್ನಂತರಂಗದ ಧ್ವನಿಯ ಬಲ್ಲವರು ಯಾರು ಅನ್ನೋ ಕಾವ್ಯ ಬರೆದ ಭಾವಗೀತೆಯನ್ನ ಸುಶ್ರಾವ್ಯವಾಗಿ ಹಾಡಿ, ದೇವರ ಫೋಟೋದ ಜೊತೆ ಎಡಿಟ್  ಮಾಡಿ ಪೋಸ್ಟ್ ಮಾಡಿದ್ರು. ನಿಮ್ಮ ಆತ್ಮೀಯತೆಗೆ ನಾನೆಂದೂ ಪರಮಾಪ್ತಳು ಅಂತ  ಕಾಮೆಂಟ್ ಮಾಡಿ ಲೈಕ್ ಕೊಟ್ಟಳು ಕಾವ್ಯ. ವಾಪಸ್ಸು ಪ್ರೇಮಕ್ಕನಿಗೆ ಫೋನ್ ಮಾಡಿ “ನಿಮ್ಮ ಧ್ವನಿ ಅಷ್ಟ ಕೇಳಾಕತ್ತೆತಲ್ರಿ ನಿಮದೊಂದು ಫೋಟೋನಾದ್ರು ಪೋಸ್ಟ್ ಮಾಡಬಾರದಾ? ಅವಾಗ ನಿಮಗಿರೋ 433 ಫ್ರೆಂಡ್ಸ್ ಎಲ್ರೂ ಸೂಪರ್,  ಬ್ಯುಟಿಫುಲ್, ನೈಸ, ವೇರಿ ನೈಸ್,ಲವ್ಲಿ…..! ಅಂತ ಇಮೋಜಿ ಕಳ್ಸಿ ಲೈಕ್ ಕೊಡ್ತಿದ್ರು . ಈಗ ನೋಡ್ರಿ ಬರೇ ಹನ್ನೊಂದ ಲೈಕ್ ಬಂದಾವು ಅಂದಳು ಕಾವ್ಯ. “ಏ ನೀ ಸರಿಯಾಗಿ ನೋಡಿಲ್ಲ ಅಂತ ಕಾಣಸ್ತತಿ ನಿಂದೊಂದು ಲೈಕ್ ಸೇರಿಸಿ ಬರೋಬ್ಬರಿ ಒಂದ ಡಜನ್ ಲೈಕ್ ಆಗ್ಯಾವು ಒಂದಿಟ ಚಂದಂಗೆ ನೋಡು” ಅಂದಾಗ ಬಿದ್ದು,ಬಿದ್ದು ನಗೋ ಸರತಿ ಕಾವ್ಯನದಾಗಿತ್ತು. ಅವರ ಆತ್ಮೀಯತೆಯ ನಂಬಿಕೆ ಹೀಗೆ ಇರಿಸಿಕೊಳ್ಳಬೇಕೆಂಬ ಆಸೆ ಮತ್ತಷ್ಟು ಗಟ್ಟಿಯಾಗಿತ್ತು.ಅವರಂತರಾಳದ ಆಳವನ್ನೆಲ್ಲ ಅರಿತ ಕಾವ್ಯ ಅದನ್ನೆಲ್ಲ ತನ್ನಂತರಂಗದ ಧ್ವನಿಗಷ್ಟೇ ಸೀಮಿತಗೊಳಿಸಿಕೊಂಡು ತನ್ನ ಬರಹದಲ್ಲೂ ಅನಾವರಣಗೊಳಿಸದೆ ಆಗಾಗ ತನ್ನೊಳಗೆ ತಾನೇ ಆಲಿಸುವ

ಕ(ಕಿ)ವಿಯಾಗುತ್ತಾಳೆ.

****************************************

ಸರೋಜಾ ಶ್ರೀಕಾಂತ್ ಅಮಾತಿ,

Leave a Reply

Back To Top