ಮಾಜಿ ಪ್ರದಾನಿಯವರ ಅನುವಾದಿತ ಕಥೆ

ಅನುವಾದಿತತ ಕಥೆ

ಮಾಜಿ ಪ್ರದಾನಿಯವರ

ಅನುವಾದಿತ ಕಥೆ

ಗೊಲ್ಲರ ರಾಮವ್ವ(ಕೊನೆಯ ಭಾಗ)

ತೆಲುಗು ಮೂಲ:ಪಿ.ವಿ.ನರಸಿಂಹರಾವ್

ಕನ್ನಡಕ್ಕೆ:ಚಂದಕಚರ್ಲ ರಮೇಶ್ ಬಾಬು

ಭಾಗ – ೨ ರಿಂದ                ಭಾಗ- ೩

ಹಾಲು ಕರೆಯೋ ಸಮಯ ಕಳೀತಾ ಇದೆ. ಮನೆ ಹೊರಗಡೆ ಕಟ್ಟಿ ಹಾಕಿದ ಎಮ್ಮೆಗಳು ಕರುಗಳಿಗಾಗಿ ಕೂಗ್ತಾ ಇವೆ. ಹಾಗೇ ಒಳಗಡೆ ಕರುಗಳು ಕೂಡ ವಿಲಪಿಸುತ್ತಿವ

ಹಾಲು ಕರೆಯಬೇಕೆನ್ನುವ ಆತ್ರ ಒಂದುಕಡೆ. ಹಸಿವಿನ ಸಂಕಟ ಮತ್ತೊಂದು ಕಡೆ. ಆದರೇ ಹಾಲು ಕರೀತಾ ಇಲ್ಲ ಯಾರೂ. ದಿನಾಲೂ ಆದರೇ ಈ ವೇಳೆಗೆ ಜುಂಯಿಜುಂಯಿ ಅನ್ನುತ್ತ ಕೇಳಿಬರುವ ಪಯಸ್ಸಂಗೀತ ಪೂರ್ತಿ ನಿಂತು ಹೋಗಿದೆ. ಹೆದರಿಕೆಯಿಂದ ಗ್ರಾಮದಲ್ಲಿನ ಎಲ್ಲ ಜೀವ ಲಕ್ಷಣಗಳೂ ಕಾಣದಾಗಿವೆ. ಸಾವಿನ ಸಮಯದ ಕೊನೆಯ ಚಲನೆಯು ಸಹ ಇಲ್ಲ. ಸುಡುಗಾಡಿನಲ್ಲಿಯ ಬೆಂಕಿಯ ಚಟಪಟ ಸಹ ಇಲ್ಲ. ಆ ಗ್ರಾಮದಲ್ಲಿ ಅನಾದಿಕಾಲದಿಂದ ಬರೀ ನಿಶಬ್ದವೇ ಇದ್ದ ಹಾಗೆ ಅನಿಸ್ತಾ ಇದೆ.

ರಾಮವ್ವ, ಮಲ್ಲಮ್ಮ ಇಬ್ಬರೂ ಕಾವಲಾಗಿದ್ದಾರೆ. ಯುವಕ ಸುಖವಾಗಿ ನಿದ್ರೆ ಮಾಡ್ತಾ ಇದಾನೆ. ಇರುವೆಯ ಸಪ್ಪಳವಾದರೂ ಎದ್ದು ಬಿಡುವಷ್ಟು ನಿದಾನವಾಗಿದಾರೆ ಆ ಗ್ರಾಮದ ಪ್ರಜೆಗಳು. ಆದರೇ ಆ ಇರುವೆ ಸಹ ಸದ್ದು ಮಾಡ್ತಾ ಇಲ್ಲ. ರಾತ್ರಿ ನಡೆದ ಆ ಭಯಂಕರ ಘಟನೆಗೆ ಕಾರಣನಾದ ಆ ಯುವಕ ಮಾತ್ರ ನಿದ್ರಿಸ್ತಾ ಇದಾನೆ. ಉಳಿದ ಗ್ರಾಮವೆಲ್ಲಾ ಉಸಿರು ಬಿಗಿ ಹಿಡಿದು ಕಾಯ್ತಾ ಇದೆ.

ಯಾತಕ್ಕೋ ? ಯಾರಕೋಸ್ಕರವೋ ? ಯಾಕೋ? ಅದೆಲ್ಲಾ.. ಎಲ್ಲರಿಗೂ ಗೊತ್ತು…. ಹಳೇಕಥೆ….

ರಾಮವ್ವ ಯೋಚಿಸುತ್ತಿದ್ದಳು. ಯಾರೋ ಕಾಂಗ್ರೆಸಿನವರು ಊರಿಗೆ ಬಂದಿದಾರಂತ ಹೇಳಿ ಈಗಾಗಲೇ ನಾಲ್ಕು ನಿರ್ದೋಷಿಗಳನ್ನು ಸುಟ್ಟು ಕೊಂದಿದ್ದಾರೆ. ಮತ್ತೆ ಈಗ ! ಇಬ್ಬರು ಪೋಲೀಸರು ಸತ್ತಿದ್ದಾರೆ. ಠಾಣೆ ಭಗ್ನಾವಾಗಿದೆ.

ಊರನ್ನೆಲ್ಲಾ ಸುಟ್ಟು ದಗ್ಧ ಮಾಡಿ, ಊರಿನವರನ್ನೆಲ್ಲಾ ಕೊಂದುಹಾಕಿದರೂ ಆಶ್ಚರ್ಯವೇನಿಲ್ಲ. ಅದೊಂದು ಹಬ್ಬಾನೇ ಅವರಿಗೆ ! ಯಾವುದಾದರೊಂದು ಮನೆಗೆ ಪೋಲೀಸರು ಬಂದು ಕೊಲೆ, ಮಾನಭಂಗ ಮಾಡುವುದು, ಪಕ್ಕದ ಮನೆಯವರು ಏನೂ ಮಾತಾಡದ ಹಾಗೆ ಆಗುವುದು, ಹೀಗೆ ಒಂದೊಂದು ಮನೆ ತರ ಎಲ್ಲ ಮನೆಗಳಿಗೂ ಅದೇ ಗತಿಯಾಗುವುದು… ಇದರಿಗಿಂತ ಊರಿನವರನ್ನೆಲ್ಲಾ ಒಂದೇ ಸಲ ಕೊಂದು ಹಾಕೋದು ಒಳ್ಳೇದಲ್ಲಾ ?  ಈ ನಾಯಿ ಸಾವಿಗಿಂತ  ಹತ್ತೂ ಜನದ ಜೊತೆ ಸತ್ತರೂ ಒಳ್ಳೇದೇ ! ಬದುಕಿದ್ರೂ ಒಳ್ಳೇದೇ ! 

ನಿದ್ದೆಯಲ್ಲಿದ್ದ ಯುವಕನ ತಲೆ ನೇವರಿಸುತ್ತಿದ್ದ ರಾಮವ್ವ ಗೊಣಗಿದಳು. ” ಅಬ್ಬ! ಏನ್ ಹುಡುಗ ! ಇನ್ನಾ ಎಷ್ಟು ಜನ ಇಂಥಾ ಹುಡುಗರು ಸಾಯಬೇಕೋ !”

ಹಠಾತ್ತಾಗಿ ಬಜಾರಿನಲ್ಲಿ ಮೋಟಾರ್ ಟ್ರಕ್ಕಿನ ಸದ್ದು ಕೇಳಿಬಂತು. ಎಲ್ಲೆಲ್ಲೂ ಬೂಟುಗಾಲುಗಳ ತಟತಟ ಸದ್ದು ಕೇಳಿಬಂತು. ಏನೋ ಒದರಾಟ, ತುರಕ ಭಾಷೆಯಲ್ಲಿ ಬೈಗುಳ, ದುರ್ಭಾಷೆಗಳು, ಪ್ರಗಲ್ಭಗಳು… ನಡು ನಡುವೆ ಛಟಿಲ್ ಛಟಿಲ್ ಎನ್ನುವ ಚಾವಟಿ ಏಟು….

” ಅಯ್ಯೋ ! ಸತ್ತೆ !ಸತ್ತೆ! ನಿಮ್ಮ ಗುಲಾಮನು. ನನಗ್ಗೊತ್ತಿಲ್ಲ. ಅಯ್ಯೋ! ಅಮ್ಮಾ! ವಾಮ್ಮಾ!” ಅನ್ನುವ ಕೂಗುಗಳು.

ಮುಗಿಲು ಮುಟ್ಟುವ ಆಕ್ರೋಶಗಳು, ಅವುಗಳನ್ನ ಮೀರಿಸುವ ಕ್ರೂರ ಘೋಷಣೆಗಳು, ಒಂದರಮೇಲೊಂದು ಸ್ಬರ್ಥೆಗಿಳಿದಿದ್ದವು. ಕಂಡವರನ್ನು ಕಂಡ ಹಾಗೇ ಬಜಾರಿಗೆ ಎಳೆಯಲಾಗುತ್ತಿತ್ತು. ಎರಡು ಗಳಿಗೆ ಕೆಳಗೆ ಶ್ಮಶಾನವನ್ನ ಹೋಲುತ್ತಿದ್ದ ಗ್ರಾಮ ಈಗ ಯಮಪುರಿಯನ್ನ ಹೋಲುತ್ತಿತ್ತು.

ಮಲ್ಲಮ್ಮ ನಡುಗಲಾರಂಭಿಸಿದಳು. ಯುವಕ ದಿಗ್ಗಂತ ಎದ್ದು ಕೂತ. ಅವನ ಗಾಢ ನಿದ್ರೆ ಹಾರಿಹೋಗಿತ್ತು. ಮುದುಕಮ್ಮನ ಕೈಯಿಂದ ರಿವಾಲ್ವಾರ್ ತೊಗೊಂಡು ಅದಕ್ಕೆ ಗುಂಡು ಹತ್ತಿಸಿದ. ಹೊರಗೆ ಕೇಳಬರುತ್ತಿದ್ದ ಗಲಾಟೆ ಒಂದೆರಡು ನಿಮಿಷ ಕೇಳಿದನೋ ಇಲ್ಲವೋ … ಅವನಲ್ಲಿ ಎಲ್ಲಿಲ್ಲದ ಆವೇಶ ಆವರಿಸಿತು. .

ಮುದುಕಮ್ಮನ ಸ್ಥಿತಿ ಹೇಳುವ ಹಾಗಿರಲಿಲ್ಲ. ಅದು ಹೆದರಿಕೆಯಾಗಿರಲಿಲ್ಲ. ನೋವಾಗಿರಲಿಲ್ಲ. ದುಃಖವಂತೂ ಆಗಿರಲಿಲ್ಲ. ಅಪೂರ್ವವಾದ ನಿಶ್ಚಲತೆ, ಗಾಂಭೀರ್ಯ ಅವಳಲ್ಲಿ ಪ್ರವೇಶಿಸಿದವು. ಹೊರಗಿನ ಹಾಹಾಕಾರ ಕಿವಿಗಳಿಗೆ ಬೀಳುತ್ತಿದ್ದ ಹಾಗೇ ಅವಳಲ್ಲಿ ಕೂಡ ಒಂದು ರೀತಿಯ ಉದ್ವೇಗ ಕಾಣಿಸಿಕೊಳ್ಳ ತೊಡಗಿತು. 

ರಿವಲ್ವಾರಿನಲ್ಲಿ ಗುಂಡು ತುಂಬಿ ಯುವಕ ಎದ್ದು ನಿಂತ. ಬಾಗಿಲ ಬಳಿಗೆ ನಡೆದ. ಚಿಲಕದ ಮೇಲೆ ಕೈಹಾಕಿದ. ತೆಗೆಯಬೇಕೆನ್ನುವಲ್ಲಿ ಅವನ ಕೈಯ ಮೇಲೆ ಮತ್ತೊಂದು ಕೈ ಬಿತ್ತು. ಅದು ಉಕ್ಕಿನ ಕೈ ಎನಿಸುವಷ್ಟು ಗಟ್ಟಿಯಾಗಿ ಅವನ ಕೈಗೆ ತಗುಲಿತು. ಅವನು ಆಶ್ಚರ್ಯದಿಂದ ಹಿಂತುರಿಗಿ ನೋಡಿ “ಆ” ಎಂದ.

ಮುದುಕಮ್ಮನದೇ ಆ ಉಕ್ಕಿನ ಕೈ.

“ಎಲ್ಲಿಗೆ” ಅಂತ ಪ್ರಶ್ನಿಸಿದಳು ಮುದುಕಮ್ಮ. .. ಯುವಕನ ಮಾತು ಹೊರಡಲಿಲ್ಲ. ತುಪಾಕಿ ಗುಂಡುಗಳ ನಡುವೆ ಹೋರಾಡುವ ಆ ವೀರ ಯುವಕ… ರಾಕ್ಷಸನನ್ನಾದರೂ ಎದುರಿಸುವ ಆ ಶೂರ ಶಿರೋಮಣಿ…. ದೇಶದ ಒಳಿತಿಗಾಗಿ ಪ್ರಳಯವನ್ನಾದರೂ ಧಿಕ್ಕರಿಸುವ ಆ ತರುಣ ಸಿಂಹ… ಎಪ್ಪತ್ತು ವರ್ಷ ವಯಸಿನ ಒಂದು ಮುದುಕಿಯ ಪ್ರಶ್ನೆಗೆ ಅಂಜಿದ.

“ಎಲ್ಲಿಗೇನವ್ವಾ? ಆಕಡೆಯೋ ಈಕಡೆಯೋ ಆಗಿಬಿಡಬೇಕು. ಅಲ್ಲಿ ಅಷ್ಟು ಹಿಂಸೆ ನಡೀತಿದ್ರೇ ಅದಕ್ಕೆ ಕಾರಣನಾದ ನಾನು ಅಡಗಿರಬೇಕಾ? ಅಡಗಿದರೂ ಅದೆಷ್ಟು ಹೊತ್ತು ? ನಿನ್ ಮನೆ ಏನು ಹುಡುಕಲ್ಲಾ ?  ನನ್ನಿಂದ ನಿಮಗೂ ಅಪಾಯ. ನನ್ನ ಹೋಗಲು ಬಿಡು ಅವ್ವಾ!”

ಮುದುಕಮ್ಮ ಏನೂ ಮಾತಾಡಲಿಲ್ಲ. ಯುವಕನ ಕೈ ಹಿಡಿಕು ಹಿಂದಕ್ಕೆಳೆದಳು. ಮಂತ್ರ ಮುಗ್ಧನ ತರ ಅವನು ಅವಳನ್ನ ಹಿಂಬಾಲಿಸಿದ.

ಹೊರಗೆ ಗದ್ದಲ ಜಾಸ್ತಿ ಯಾಯಿತು. ಬೂಟುಗಾಲಿನ ಶಬ್ದ ಗುಡಿಸಿಲ ಹತ್ತಿರವಾಯಿತು. ಮೂರು ನಾಲ್ಕು ಜನ ಗುಡಿಸಿಲನ್ನು ಹಾಸಿ ಪಕ್ಕದ ಮನೆಗೆ ಹೋದರು. ಅದರ ಹಿಂದೇ

“ರಾಮೀ ಕೀ ಗುಡ್ಸಿ ಯಹೀಹೈ ” ಎನ್ನುವ ಮಾತು ಕೇಳಿಬಂದಿತು.

ಮತ್ತೆ ಯುವಕ ಹೊರಗಿನ ಬಾಗಿಲ ಕಡೆಗೆ ಹೊರಟ. ಆದರೇ ಮುದುಕಮ್ಮ ಅವನನ್ನ ದೂಡಿದಳು. ರಿವಲ್ವಾರ್ ಅವನ ಕೈಯಿಂದ ಕಸಿದುಕೊಂಡಳು. ಮಿಣುಕುತ್ತಿದ್ದ ದೀಪವನ್ನ ಆರಿಸಿದಳು. ಮಲ್ಲಮ್ಮನ್ನ ಕರೆದು ಹೇಳಿದಳು.

“ಹುಡುಗೀ ! ನಿನ್ನೆ ಆಲದ ಮರ ಕಟ್ಲಿಕ್ಕೆ ಕೊಟ್ಟಿದ್ದೆನಲ್ಲಾ ? ಆ ಹೊದಿಕೆ ಶಾಲು ತೊಗೊಂಬಾ ! ಎಲ್ಲಿಟ್ಟಿದ್ದೀಯೋ ನೋಡಿ ತೊಗೊಂಬಾ! ಏ ಹುಡುಗಾ ! ಈ ಹೊದಿಕೆ ಉಟ್ಟುಕೋ ! ಶಾಲು ತಲೆಗೆ ಸುತ್ತಿಕೋ ! ಊ ! ಅದೇನದು ಅಷ್ಟು ಹೊತ್ತು ! ಮಲ್ಲೀ ನಿನ್ನ ಕೈಯ ಎರಡೂ ಕಂಕಣ ಅವನಿಗೆ ಕೊಡು. ತೆಳ್ಳಗಿದ್ದಾನೆ. ಹಿಡಿತಾವೇಳು ! ಸರಿ ! ಒಂದು ದಿಷ್ಟಿ ದಾರವಿದ್ದರೇ ಒಳ್ಳೇದಾಗಿತ್ತು ! ಈಗೆಲ್ಲಿ ಸಿಗುತ್ತೆ ಬಿಡು ? ಇಲ್ದಿದ್ರೂ ಸರಿ. ಆ ಹುಡುಗನ ಚಡ್ಡಿ ಗಂಜಿ ಮಡಿಕೆ ಕೆಳಗೆ ಬಚ್ಚಿಡು ಹುಡುಗೀ ! ಆ ! ಗೊಲ್ಲರ ವೇಷ ಹಾಕಿದೀಯಾ ಹುಡುಗಾ ! ಹಾಗೇ ಕಾಣ್ತಾ ಇದೀಯಾ ! ಯಾರಾದ್ರು ಮಾತಾಡ್ಸಿದ್ರೆ ಗೊಲ್ಲರ ತರ ಮಾತಾಡಬೇಕು !”

“ಸರಿ ” ಎಂದ ಯುವಕ.

ಅವನ ಹಾಗೆ ಅಡಗಿ ಕೆಲಸ ಮಾಡುವವರಿಗೆ ಈ ತರದ ಗೊಲ್ಲರ ವೇಷಗಳು ಮಾಮೂಲೇ. ಯುವಕ ಸಂಸಿದ್ಧನಾದ. ವೇಷ ತಯಾರಾಯಿತು. ಇನ್ನು ಹೇಗಾದರೂ ಹೊರಬೀಳುವುದು ಮಾತ್ರ ಉಳಿದಿತ್ತು. ಮುದುಕಮ್ಮನ ಆಜ್ಞೆಗೆ ಕಾಯುತ್ತಿದ್ದ.

ಹಠಾತ್ತಾಗಿ ಬಾಗಿಲ ಮೇಲೆ ದಬಾ ದಬಾ ಅಂತ ನಾಲ್ಕೈದು ಪೆಟ್ಟು ಬಿದ್ದವು. ” ಏ ರಾಮೀ! ಬಾಗಿಲು ಕಿ ಖೋಲ್ ” ಎನ್ನುವ ಕರ್ಕಶ ಸ್ವರ ಕೇಳಿಸಿತು. ಕೆಲವರು ಬೂಟುಗಾಲಿನವರು ಆ ಮನೆ ಸುತ್ತುವರೆದು ನಿಲ್ಲುವ ಸದ್ದು ಕೇಳಿತು. ಇನ್ನೇನಿದೆ ? ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಗೊಲ್ಲರ ವೇಷ ಹಾಕಿದ್ದೆಲ್ಲಾ ವ್ಯರ್ಥಾನೇ. ಯುವಕನ ಕೈ ರಿವಾಲ್ವಾರ್ ಗಾಗಿ ಹುಡುಕಿತು. ಆದ್ರೆ ಮುದುಕಮ್ಮನ್ನ ಕೇಳುವ ಧೈರ್ಯ ಬರಲಿಲ್ಲ.

ಮುದುಕಮ್ಮ ಗುಸುಗುಸು ಶುರುಮಾಡಿದಳು. ” ಮಲ್ಲೀ! ಆ ಮೂಲೆಗೆ ಮಂಚ ಹಾಕಿ ಕಂಬಳಿ ಹಾಕು. ಹುಡುಗಾ ! ಅದರಲ್ಲಿ ಮಲಗು. ಊ ! ಮಲಗು “

ಯುವಕನಿಗೇನು ಮಾಡಬೇಕೋ ತೋಚಲಿಲ್ಲ. ಕೊನೆಗೆ ಸಿಕ್ಕಿ ಬೀಳುವುದೇ ಹಣೆಯಲ್ಲಿ ಬರೆದ ಹಾಗಿದೆ. ಮಂಚದ ಮೇಲೆ ಮಲಗುವುದರಿಂದ ಏನು ಪ್ರಯೋಜನವೋ ಅವನಿಗೆ ಅರ್ಥವಾಗಲಿಲ್ಲ. ತಪ್ಪಿದ್ದಲ್ಲದ ಹಾಗೆ ಮಲಗಿದ.

ಮತ್ತೆ ಬಾಗಿಲ ಮೇಲೆ ದಬದಬ!

“ಏ ರಾಮೀ ! ಬಾಕ್ಲು ತೆಗಿತಿಯಾ ಇಲ್ಲಾ… ಬೇಗ್ನೆ.. ಹರಾಂಜಾದೀ ! ಮಾತಾಡೇ ! ನಿನ್ ಚರ್ಮ ತೆಗಿತೀವಿ ! ಫೌರನ್ ಬಾಕ್ಲು ತೆಗಿದಿದ್ರೆ ತೋಡ್ ದಾಲ್ತೇ ದೇಖ್ “

ಮುದುಕಮ್ಮ ಆಗಲೇ ನಿದ್ರೆಯಿಂದ ಎದ್ದಹಾಗೆ ಆಕಳಿಸುತ್ತಾ ಮೈಮುರಿದ ಹಾಗೆ ಸದ್ದು ಮಾಡುತ್ತಾ ಅಸ್ಪಷ್ಟವಾಗಿ ಆರಂಭಿಸಿದಳು.

“ಯಾರಲೇ ಅದು ಅರ್ಧರಾತ್ರಿ ಕಳ್ಳನ ತರ ಬಂದು ಬಾಗಿಲು ಬಡಿಯೋದು ? ಕಳ್ಳ ನನ್ಮಕ್ಳು ಅಂತ ಕಾಣತ್ತೆ. ನಿಮ್ ಮನೆ ಹಾಳಾಗ ! ಪೋಲೀಸಿನೋರು ಗಸ್ತುಗ್ಬಂದ್ರೆ ನಿಮ್ ಬೆನ್ನು ಮುರಿಯತ್ತೆ “

ಹೊರಗಿನವರು ” ನಾವೇ ಪೋಲೀಸಿನವರು” ಅಂತ ಏನೋ ಹೇಳ ಹೋದರು. ಮುದುಕಮ್ಮ ಕೇಳಿಸಿಕೊಳ್ಳಲಿಲ್ಲ. ಗಟ್ಟಿ ಗಟ್ಟಿ ಮಾತು, ನಡುನಡುವೆ ಗುಸುಗುಸು.

“ಕಾಲಾ ಹಾಳಾಗಿ ಹೋಯ್ತು! ಯಾರ ಮನೆಯಲ್ಲಿ ಅವ್ರನ್ನ ಮಲಗಾಕೆ ಬಿಡೋದಿಲ್ಲ. ರಾತ್ರಿ ಇಲ್ಲ ಹಗಲಿಲ್ಲ. ಸಾಯಿಸ್ತಾರೆ. ಏ ಹುಡುಗಿ ! ಹುಡುಗನ ಮಂಚಕ್ಕೆ ಆ ದಪ್ಪ ಕಟ್ಟಿಗೆ ಅಡ್ಡ ಇಡು. ನನ್ನೇನ್ ದೋಚಿಕೊಳ್ತೀರೋ ಮುದುಕೀನ್ನ ? ನನ್ಹತ್ರ ಏನಿದೆ ಅಂತ ? ಕಳ್ರಾದರೇ ನನ್ಹತ್ರ ಇರೋ ಒಡವೆ ತಲೆಗಿಷ್ಟು ಅಂತ ತೊಗೊಳ್ಳಿ. ಏಳ್ಳಿಕ್ಕಾಗಲ್ಲ. ಬಾಗಿಲು ಮುರೀತೀರೋ ಹೇಗೆ ? ನಿಲ್ರಿ. ನಿಲ್ರಿ. ನಿಮ್ ಕುದುರೀನ್ನ ಸ್ವಲ್ಪ ಕಟ್ಟಿಹಾಕಿದ್ರೆ ತಪ್ಪಾ? ಏಳ್ಳಿಕ್ಕಾಗದ ಮುಂಡೆ ನಾನು. ಚೆಂಗುಚೆಂಗು ಅಂತ ಕುಣಕೋತಾ ಬರ್ಲಿಕ್ಕೆ?

“ಮಲ್ಲೀ! ಇನ್ನೇನೂ ಮಾತಾಡ್ಬೇಡ ! ಹೋಗಿ ಆ ಹುಡುಗನ ಮಗ್ಗುಲಲ್ಲಿ ಮಲಗು! ಊ ! ನಡೀ! ಇನ್ನ ವಡೀರಿ ! ಎದ್ದು ತೆಗೆಯೋವರ್ಗೂ ನಿಮಗೆ ಪುರುಸೊತ್ತಿ ಇಲ್ಲಂದ್ರೇ ವಡದೇ ಬಿಡ್ರಿ. ಮನೆ ಒಳಗ್ಬಂದು ನನ್ಹತ್ರ ಇರೋವೆಲ್ಲಾ ತಲೆಗೊಂದು ಅಂತ ದೋಚಿಕೊಳ್ರಿ…! ದೀಪ ಹಚ್ಚೋಣ ಅಂದ್ರೆ ಒಲೆ ಯಲ್ಲಿ ಬೆಂಕಿ ಇಲ್ಲ. ಈ ಮಲ್ಲಿ ಮುಂಡೆಗೆ ಅದೆಷ್ಟು ಸಲ ಹೇಳಿದೀನಿ ಸಂಜೆ ಹೊತ್ನಾಗೆ ವಲಿ ಆರಿಸಬೇಡ ಅಂತ. ದೇಬೇ ಮುಂಡೆ! ಇನ್ನ ನಿನ್ನೆ ಗಂಡ ಬಂದಿದಾನೆ. ಹಿಡಿಲಿಕ್ಕೇ ಆಗಲ್ಲ. ಏನ್ಕೆಲ್ಸ ಹೇಳಿದ್ರೂ ಕೇಳಿಸಿಕೊಳ್ಳಲ್ಲ. ನಡುವಿನಲ್ಲೇ ಬಿಟ್ಬಿಡ್ತಾಳೆ. ಗಂಡನ್ನ ನೋಡಿ ಮುರಿಸಿಹೋಗ್ತಿದಾಳೆ. ಸೋಗುಲಾಡಿ!

ಅವಳ ಮೇಲೆ ಕೈ ಹಾಕಿ ಮಲಗು ಹುಡುಗಾ ! ನೋಡೊವ್ರಿಗೆ ಅನುಮಾನ ಬರಬಾರದು.

ಇನ್ನ ನನ್ಕೈಲಾಗಲ್ಲ ತಂದೇ! ಈ ಮಲ್ಲಿಮುಂಡೆ ಏಳಲ್ಲ. ಓ ಮಲ್ಲೀ ! ಓ ಮಲ್ಲಿಗಾ ! ಊಹೂ ! ಇವರು ಏಳಲ್ಲ. ನನಗಾ ದೀಪ ಸಿಗಲ್ಲ ಈ ಕತ್ಲಾಗೆ. ಇವರ ವಯಸಿಗಿಷ್ಟು ! ಬಜಾರಿನಲ್ಲಿ ಇಷ್ಟು ಗದ್ದಲ ಆಗ್ತಿದ್ರೆ ಗೊರಕೆ ಹೊಡೆದು ನಿದ್ರೆ ಮಾಡ್ತಿದಾರೆ. ಈ ತುಂಟ ಹುಡುಗ್ರನ್ನ ಏನ್ಮಾಡ್ಲಿ ? ಕಣ್ಮುಂದೆ ಮಗ, ಸೊಸೆ ಕಣ್ಮುಚ್ಚಿಕೊಂಡು ಹೋದ್ರು. ಈ ಹುಡುಗೀನ್ನ ನನ್ನ ಮಡಿಲಿಗೆ ಹಾಕಿದ್ರು. ಏಟು ಹಾಕಿದ್ರೆ ರಗಳೆ. ಹಾಕದಿದ್ರೆ ಬುದ್ದಿ ಬರಲ್ಲ. ಇದೇನು ಪೀಡೆ ತಂದಿಟ್ಟೆ ತಂದೇ ನನ್ನ ಪ್ರಾಣಕ್ಕೆ ! ಎಲ್ಲಿದೀಯೋಮಗನೇ ! ನನ್ಮಗನೇ! ಮುದುಕಿನ್ನ ಬಿಟ್ಟು ಹೋದೆಯಲ್ಲಾ ಮಗನೇ ! ನಾ ಏನ್ಮಾಡ್ಲಿ ಮಗನೇ! ನನ್ಮಗನೇ!”

ಮುದುಕಮ್ಮ ಆರ್ಭಾಟದಲ್ಲಿ ಅಳಲಾರಂಭಿಸಿದಳು. ಹೊರಗಿನವರು ನಾನಾ ತರ ಮಾತಾಡ್ತಾಇದ್ದರು. “ಪಾಪ ಹೋಗ್ಲಿ ! ” ಅಂತ ಒಬ್ಬರೆಂದರೇ ” ಹಾಗೇನಿಲ್ಲ ! ಆ ಮುದುಕಿ ಮಹಾ ಬದ್ಮಾಷ್…” ಅಂತ ಮತ್ತೊಬ್ಬರು, ಹೀಗೆ ಒಟ್ಟಾರೆ ತಲಾಶೀ ಆಗಲೇಬೇಕು ಅಂತ ತೀರ್ಮಾನಿಸಿದರು.

ಒಳಗಿನಿಂದ ಗೊಣಗಾಟ ನಡೆದೇ ಇತ್ತು. ” ಅಪ್ಪಾ ! ತಂದೇ! ನಿಲ್ರೋ ಬಾಗಿಲು ತೆಗೆಯೋವರೆಗೆ. ಅಪ್ಪಾ ! ತಂದೇ!”

‘ತೋಡ್ ದೇವ್ರೇ ದರ್ವಾಜಾ” ಅಂತ ಹೊರಗೆ ಅಂತಾ ಇದ್ದ ಹಾಗೇ ಮುದುಕಮ್ಮ ಬಾಗಿಲು ತೆಗೆದಳು. ಇಬ್ಬರು ಪೋಲೀಸರು ಬಾಗಿಲು ತಳ್ತಾ ಇದ್ದು, ಅದು ತೆಗೀತಾನೇ ಒಬ್ಬರ ಮೇಲೊಬ್ಬರು ಬಿದ್ದರು.

ಅವರು ಹಾಗೆ ಬಿದ್ದ ತಕ್ಷಣ ಮುದುಕಮ್ಮ ಗಟ್ಟಿಯಾಗಿ ಚೀರಿದಳು. ಅವರು ಎದ್ದ ತಕ್ಷಣ ಅವರ ಕಾಲಿಗೆ ಬಿದ್ದ ಹಾಗೆ ಬಿದ್ದು ಅಳ ತೊಡಗಿದಳು.

“ಸಾಯಿಸಿದ್ರಲ್ಲೋ! ಮುದುಕಿ ಪ್ರಾಣ ತೆಗಿದ್ರಿ. ಇನ್ನ ನೋಡ್ರಿ. ಹರೆಯದ ಹುಡುಗರು ಆ ಮಂಚದ ಮೇಲೆ ಮಲಗಿದಾರೆ. ಇಲ್ಲಿ ನಾನಿದೀನಿ. ಮಡಕೆಗಳದಾವೆ. ಚೆರಿಗೆ ಗಳದಾವೆ. ಹುಡುಗಿಯ ಕೊರಳಾಗೆ ಮಂಗಳಸೂತ್ರ ಇದೆ. ಹುಡುಗನ ಕೈಗೆ ಎರಡು ಕಡಗ ಇವೆ. ಏನ್ಬೇಕೋ ತೊಗೊಳ್ರಿ. ಕೊಲ್ಲಬೇಕಾದ್ರೇ ಮೊದಲು ನನ್ನ ಕೊಂದ್ಬಿಡ್ರಿ. ಹುಡುಗನ್ನ ಕೊಲ್ರಿ. ಆದ್ರೆ ಹುಡುಗಿ ಮುಂಡೆಯಾಗೋಕ್ಮುಂಚೆ ಅವಳಿಗೊಂದು ಗುಂಡು ಹಾರಿಸ್ಬಿಡ್ರಿ. ಇಬ್ಬರ್ನ ಒಮ್ಮೆಗೆ ಕೊಲ್ರಿ. ಅವಾಗಿಂದ ನನ್ ಪ್ರಾಣ ತೆಗೀತಾ ಇದೀರಿ. ಏನ್ ಸುರುಕೋತೀರೋ ಸುರುಕೊಳ್ರಿ.”

ಮಲ್ಲಮ್ಮ ಮೆಲ್ಲಗೆ ಕಣ್ಣು ಹೊಸೆಯುತ್ತಾ ಮಂಚದಿಂದ ಇಳಿದು, ಭಯದಿಂದ ಅಲ್ಲಿ ಇಲ್ಲಿ ನೋಡತೊಡಗಿದಳು. ಯುವಕ ಕೂಡ ಆಕಳಿಸುತ್ತಾ ಎದ್ದು ಮಂಚದ ಮೇಲೆ ಕೂತ.

ಪೋಲೀಸರು ಮುಖಮುಖ ನೋಡಿಕೊಂಡರು.

ಮುದುಕಮ್ಮನ ಧೋರಣಿ ಬದಲಾಗಲೇ ಇಲ್ಲ. ” ಇನ್ನೇನ್ಮಾಡ್ತಿರೋ ಮಾಡ್ರಿ… ತುಪಾಕಿ ಐತಲ್ಲ.. ಕೊಲ್ರಿ ನನ್ನ.. ಇನ್ನೆಷ್ಟು ದಿನ ಬದುಕ್ತೀನಿ ನಾನಾದ್ರೂ?”

ಯುವಕನ ಕಡೆಗೆ ಕೈ ತೋರಿಸುತ್ತಾ ಪೋಲೀಸ್ ಜಮಾದಾರ್ ಕೇಳಿದ.

“ಅವನ್ ಯಾರಂದೇ ? ಕಾಂಗ್ರೆಸಿ ನೋನಾ ?”

ಮುದುಕಮ್ಮ ತಲೆತಲೆ ಹೊಡಕೊಂಡು ಬಾಯಿ ಬಡಕೊತ ಕೂಗಾಡಸಾಗಿದಳು.” ಅವನು ಯಾರಾ ? ಯಾರ್ ಬೇಕಿದ್ರೆ ಅವರು ನಮ್ಮ ಮಗ್ಗುಲಾಗೆ ಮಲಗಾಕೆ ನಾವೇನು ಸಾನೇರಾ ? ನಿನ್ನ ಯಾರಾದ್ರಾ ಹಂಗೇ ಕೇಳಿದ್ರೇ ನಿನಗೆಂಗಿರ್ತದೆ ? ಈ ಮಾತುಗಳಿಂದಾ ಯಾಕ್ಮಾನ ಕಳೀತಿಯಾ ? ಕೊಂದ್ಬಿಡು ಸುಮ್ನೆ. ನನ್ಗೆ ಬುದ್ಧಿ ಬಂದಾಗಿನಿಂದ ಇಂಥ ಅಪಮಾನದ ಮಾತು ನಾನು ಕೇಳಿಲ್ಲ. ಈ ಮುದುಕಿಗೆ ಇವತ್ತು ಮರ್ಯಾದೆ ಹೋಯಿತು. ಇನ್ನ ನಾ ಯಾಕೆ ಬದುಕ್ಬೇಕು ? ಎಲ್ಲಾರಾ ನೇಣು ಹಾಕ್ಕೊಂಡು ಸಾಯ್ಬೇಕು ಅಷ್ಟೇ ! ಅವನು ನಮ್ ಮಲ್ಲನಲ್ಲಾ ? ಬೇಕಿದ್ರೆ ಊರ್ನೋರ್ನ ಕೇಳಿ ತಿಳ್ಕೊ. ಬೆಳಕು ಬಂದಮೇಲೆ ಪರೀಕ್ಷೆ ಮಾಡಿ ನೋಡ್ಕೊ. ಅಷ್ಟೇ ಆಗ್ಲೀ ಇಂಥಾ ಮರ್ಯಾದೆ ತೆಗಿಯೋ ಮಾತು ಬೇಕಾ? ನಾವಂಥವರಲ್ಲ ಸ್ವಾಮೋರೇ ! ಏನೋ ನಿಮ್ಮ ಪಾದದ ಹತ್ತಿರ ಬದುಕ್ತಾ ಇದೀವಿ. ಹೊರಗಿನವನು ಈ ಗೊಲ್ಲರ ರಾಮಿ ಮನೆಗ್ಬಂದು ತಪ್ಪಿಸಿಕೊಂಡು ಹೋಗೊದಾ ? ನಾನೇ ಅವನ್ನ ಹಿಡ್ಕೊಂಡ್ಬಂದು ನಿಮ್ ಪಾದಕ್ಕೆ ಒಪ್ಪಿಸಲ್ಲಾ?  ಗೊಲ್ಲರ ರಾಮಿ ಅಂದ್ರೆ ಎಂಥವಳು ಅಂತ ಊರಿನವರನ್ನ ಕೇಳಿ “

ಮುಂಚಿನ ತೀವ್ರತೆಗೂ, ಈಗಿನ ವಿಧೇಯತೆಗೂ ಪೋಲೀಸರು ಸೋಜಿಗ ಗೊಂಡರು. ಏನನ್ಬೇಕೋ ಏನ್ಮಾಡ್ಬೇಕೋ ಅವರಿಗೆ ಗೊತ್ತಾಗಲಿಲ್ಲ.

“ಹೋಗ್ರೀ ಸ್ವಾಮೀ ! ಇಲ್ಲಿ ಏನೂ ಇಲ್ಲ. ಒಂದ್ವೇಳೆ ನನ್ಮಾತು ಸುಳ್ಳಾದ್ರೇ ನಾನೆಲ್ಲಿಗೂ ಓಡಿಹೋಗಲ್ಲ. ಇಲ್ಲೇ ಇರೋದು. ನನ್ಮಾತು ನಂಬ್ರಿ. ಇನ್ನ ನಮ್ಮನ್ನ ಗೋಳು ಹೊಯ್ಕೋಬೇಡ್ರಿ.”

ಪೋಲೀಸ್ ಜಮಾದಾರ್ ಸ್ವಲ್ಪ ಹೊತ್ತು ಯೋಚಿಸಿ ಹೇಳ್ದ ” ಅಚ್ಛಾ ! ನಾನು ಪಂಚನಾಮೆ ಮಾಡ್ಕೊಂಡು ಬರ್ತೀನಿ. ನಿನ್ ಬಯಾನ್ ತೊಗೊತೀನಿ. ಇವನ್ನ ಹಾಜಿರಿ ಮಾಡ್ಬೇಕು. ಇಲ್ಲಾ ನಿನ್ನ ಷೂಟ್ ಮಾಡ್ಬೇಕಾಗತ್ತೆ. ತಿಳ್ಕಾ “

ಜಮಾದಾರ ಹೊರಟ. ಮುದುಕಮ್ಮ ಮಂಚದ ಮೇಲೆ ಕೂತಳು. ಒಂದು ಕಡೆ ಮಲ್ಲಮ್ಮ. ಮತ್ತೊಂದು ಕಡೆ ಆ ಯುವಕ. ಅದೊಂದು ಅಪೂರ್ವ ಸಮ್ಮೇಳನವೆನಿಸಿತು ಯುವಕನಿಗೆ.

“ಅವ್ವಾ ! ನೀನು ಸಾಮಾನ್ಯಳಲ್ಲ. ಸಾಕ್ಷಾತ್ ಭಾರತ ಮಾತೆ ನೀನು ” ಅಂದ ಯುವಕ ಭಾವಪರವಶದಿಂದ.

“ಛೆ ಹೋಗು ! ತುಂಟು ಹುಡ್ಗ ! ನನ್ಗೇ ಹೆಸರಿಡ್ತೀಯಾ ….! ನನ್ನ ಹೆಸರು ಗೊಲ್ಲರ ರಾಮಿ ಅಷ್ಟೇ….! ಮತ್ತೆ ನೀ ಹೊರಡು. ಈ ಮಲ್ಲಿನ್ನ ಅತ್ತೆಮನೆಗೆ ಕರ್ಕೊಂಡು ಹೋಗ್ಬೇಕು. ಹೊತ್ತಾಗುತ್ತೆ.. ಊ ! ಹೊರಡು

ಮುದುಕಮ್ಮನ ಶಾಸನ ಉಲ್ಲಂಘನೆ ಮಾಡಲಾಗುವುದಿಲ್ಲವೆಂದು ಆ ಯುವಕನಿಗೇ ಮುಂಚೆನೇ ಗೊತ್ತು.

                                      ********************************

One thought on “ಮಾಜಿ ಪ್ರದಾನಿಯವರ ಅನುವಾದಿತ ಕಥೆ

  1. ಕುತೂಹಲ ಕಾಯ್ದುಕೊಂಡು ಹೋಗುವ ಸೊಗಸಾದ ಅನುವಾದ

Leave a Reply

Back To Top