ಕವಿತೆ
ರಾಜು ಹೆಗಡೆಯವರ ಕವಿತೆಗಳು
ಸಂಜೆಯ ವಾಕಿಂಗ್
ಇನ್ನೂ
ಚುಕ್ಕಿಗಳು ಚಿಗುರದ
ಆಕಾಶ
ತೆಳುವಾಗಿ ಬೆಳಕು
ಕತ್ತಲೆ ಬೆರೆತು
ಉರಿಯುವ ಸಮಯ.
ಆಗಲೇ
ಲೈಟನ್ನು ಹೊತ್ತು
ಓಡುವ ಕಾರು, ಮೋಟಾರು.
ನಡೆಯಲಾರದೆ
ನಿಂತ ಬೀದಿ
ದೀಪಗಳು
ಕೂಗಿದರೆ ಮಾತ್ರ
ಕೇಳುವ ದೂರದ
ಸಾಲು ಮರಗಳಲ್ಲಿ
ಮೊರೆವ ಹಕ್ಕಿಗಳ
ಮೌನ
ಈಗಷ್ಟೇ ಬಿಟ್ಟು ಹೋದ
ಪ್ರೇಮಿಗಳ ಪಿಸು ಮಾತಿನ
ಬಿಸಿಯ ಹೀರುತ್ತ,
ಸಾವಕಾಶವಾಗಿ
ಒಂದೊಂದೆ ಹೆಜ್ಜೆಯಲ್ಲಿ
ದಾಟುತ್ತಿದ್ದೇನೆ ಮರಗಳನ್ನು
ದೀಪಗಳನ್ನು…..
————
೨
ತಿರುಮಲೇಶರ…..
ಅವರೀಗ
ಹೈದರಾಬಾದನಲ್ಲಿದ್ದಾರೆ
ಕಾರಡ್ಕದಿಂದ ಬಂದವರು
ಕಾಸರಗೋಡು, ಕೇರಳ, ತಿರುವ—
ನಂvಪುರಗಳಲ್ಲಿ ಇದ್ದು ಹೋಗಿದ್ದಾರೆ
ಹೆಗ್ಗೋಡಿನ ‘ಶಿಬಿರ’ದಲ್ಲಿ ಕುಳಿತಿದ್ದನ್ನು
ಸ್ವತ: ನೋಡಿದ್ದೇನೆ
ಎಷ್ಟೋ ಕೈಗಳಲ್ಲಿ, ಕಪಾಟಿನಲ್ಲಿ,
ಮನಸ್ಸಿನಲ್ಲಿ…..ಯೆಮೆನ್!
ಒಮ್ಮೆ ಸಾಲಾರ್‌ಜಂಗ್ ಮ್ಯೂಸಿಯಂಗೆ ಹೋದಾಗ
ನನಗೆ ಫಸ್ಟಿಗೆ ಹಂಬಲಾದದ್ದು
ಅವರ ಪದ್ಯವೇ.
ಸದ್ಯದಲ್ಲಿ ಕುಣಿದವರು
ಸದ್ದಿಲ್ಲದೇ ಹೋಗಿದ್ದಾರೆ
ಹುಗಿದ ನಿಧಿಯನ್ನು
ಹಾವಾದರೇನು, ಸುತ್ತಿರುಗಿ
ಸುಳಿದು ತೋರಿಸಿದ ಕತೆ ನಿಮಗೆ ಗೊತ್ತಿದೆ
ನಾವುಂಡ ಗಾಳಿಯನ್ನೂ
ಕನಸನ್ನೂ ಮೊದಲೇ ಕಂಡವರು
‘ಅವ್ಯಯ’ ವಾಗಿ ‘ಅಕ್ಷಯ’ವಾಗಿರುವವರು
ಕುಂಡೆ ತೊರಿಸುತ್ತಾ ಕಲಾಯಿ
ಹಾಕುವವರು
ಎಲ್ಲೋ ಹೋದ ಖತೀಜಾ
ಹೀಗೇ….
’ಆಮೆ’ಯಿಂದ ‘ಆನೆ’ಯವರೆಗೆ,
ಸಿಟ್ಟಿಲ್ಲದೆ ಕೂತವರು ಅದೆಷ್ಟು
ಮಂದಿ
ಬೆಳಗಿದ್ದಾರೆ ಎಷ್ಟೊಂದು
ದೊಂದಿ!
‘ಇರುವುದು ಇಲ್ಲವಾಗುವುದಿಲ್ಲ
ಇಲ್ಲದಿರುವುದು ಇರುವುದಿಲ್ಲ’
ಅಲ್ಲವೆ ಸರ್
ಅಥವ
ಇಲ್ಲವೇ.
************************************
ತಿರುಮಲೇಶ್ ಸರ್ ಕುರಿತು ಒಳ್ಳೆಯ ಪದ್ಯ
ಚೆನ್ನಾಗಿದೆ
ರಾಜು ಹೆಗಡೆಯವರ ಕವಿತೆಗಳು ತುಂಬಾ ಅರ್ಥಪೂರ್ಣವಾಗಿವೆ ಅಂದರೆ.ಸಾಲದೇನೋ. ಕವಿತೆಯ ಸಾಧ್ಯತೆಗಳನ್ನು ಪರಿಚಯಿಸುತ್ತವೆ.