ಲೇಖನ
ಮಾತು ಮನವನ್ನು ಅರಳಿಸಬೇಕು
ಮಾಲಾ ಕಮಲಾಪುರ್
ಭಾಷೆ ಮನುಷ್ಯನಿಗೆ ಲಭಿಸಿದ ದೈವ ದತ್ತ ವರ ವಾದರೆ ಮಾತು ನಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಮೂಲಕ ಅಮೂಲ್ಯ ಸಾಧನ ಆಗಿದೆ. ಮಾತು ನಮ್ಮ ಬದುಕನ್ನು ಕಟ್ಟುತ್ತದೆ. ಇದು ವ್ಯಕ್ತಿಯ ಬಿಚ್ಚಿಡುವ ಪಾರಿಜಾತದ ಪರಿಮಳದಂತೆ. ನಾವಾಡುವ ಮಾತು ಪುಷ್ಪದ ದಳದಂತೆ. ಮಾತಿನ ಬಳಕೆ ಬಲ್ಲವರು ಮಾಣಿಕ್ಕ್ಯ ತರುತ್ತಾರೆ. ಬಳಿಕೆ ಅರಿಯದವರು ಜಗಳ ತರುತ್ತಾರೆ.ಮನುಷ್ಯನು ಯಾವುದೇ ಲೌಕಿಕ ವಾದ ವಸ್ತು ಗಳಿಂದ ಅಲಂಕಾರ ಮಾಡಿಕೊಂಡರು ಶೋಭಿಸುವುದಿಲ್ಲ. ಆದರೆ ಒಳ್ಳೆಯ ಮಾತು ಮತ್ತು ಪ್ರಾಮಾಣಿಕ ಮಾತುಗಳಿಂದ ಅಲಂಕಾರ ದಿಂದ ಶೋಭಿಸುತ್ತಾನೆ. ಮನುಷ್ಯನ ಅಂತಸ್ತಾಗಲಿ, ಕುಲವಾಗಲಿ ಯಾವದು ಆತನ ಯಶಸ್ಸಿಗೆ ಕಾರಣವಾಗುವುದಿಲ್ಲ. ಮಧುರ ಮಾತೇ ಆತನ ಗೆಲುವಿಗೆ ಕಾರಣವಾಗುತ್ತದೆ.ಮಾತು ಮನವನ್ನು ಅರಳಿಸವೇಕು, ಹೃದಯತಣಿಸಿ ಜೀವಕ್ಕೆ ಕಳೆಯನ್ನು ತುಂಬ ಬೇಕು. ಶರಣರಾಗಲಿ, ದಾಸರಾಗಲಿ ತಮ್ಮ ನಡೆ ನುಡಿ ಸಾಮರಸ್ಯದ ಬೆಸುಗೆಯನ್ನೇ ಬೆಸೆದಿದ್ದಾರೆ.
ಅದಕ್ಕೆ ಬಸವಣ್ಣ ನವರು ನುಡಿದಡೇ ಮುತ್ತಿನ ಹಾರದಂತೆ ಇರಬೇಕು, ನುಡಿದರೆ ಮಾಣಿಕ್ಕ್ಯದ ದೀಪ್ತಿಯಂತಿರಬೇಕು, ನುಡಿದಡೆ ಸ್ಪಟಿಕದ ಸಲಾಕೆಯಂತಿರಬೇಕು ಎಂದು ಸಾರಿದ್ದಾರೆ.ನಾವು ಮಾತನಾಡುವಾಗ ಸಮಯ ಸಂಧರ್ಭ ಅವಲೋಕಿಸಿ ಮಾತನಾಡಬೇಕು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಪ್ರಚಲಿತ ಗಾದೆ ಮಾತು ಇದೆ ಮಾತಿಗೆ ಕ್ಷಮೆ ಕೇಳಬಹದು ಆದರೆ ಅದರಿಂದಾಗುವ ನೋವು ಶಮನವಾಗುವುದಿಲ್ಲ. ಪುರಾಣ ಕಾಲದಲ್ಲಿಯೂ ಋಷಿ ಮುನಿಗಳ ಮಾತು ಕೋಪ ತಾಪ ದಿಂದ ಹೊರ ಬಂದಾಗ ಶಾಪವಾಗುತ್ತಿತ್ತು. ಅವರು ಅರಳಿದ ಹೃದಯದಿಂದ ಮಾತು ವರವಾಗುತಿತ್ತು. ಬಲ್ಲವರು ಕಡಿಮೆ ಮಾತುಗಳಲ್ಲಿ ಮೌಲ್ಲ್ಯಾ ಧಾರಿತ ವಿಷಯಗಳನ್ನು ಬಿಚ್ಚಿಡುತ್ತಾರೆ. ಮಾತು ಹಿತವಾದಷ್ಟು ಒಳಿತು. ಅದಕ್ಕೆ ನಮ್ಮ ಹಿರಿಯರು ಮಾತು ಬೆಳ್ಳಿ ಮೌನ ಬಂಗಾರ ಎಂದಿದ್ದಾರೆ.ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ನಾಲಿಗೆ ಒಳ್ಳೇದು ಆದರೆ ನಾಡೆಲ್ಲ ಒಳ್ಳೇದು. ಅದಕ್ಕೆ ನಮ್ಮ ಹಿರಿಯರು ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಅಂತ ಹೇಳಿದರು.
ಮೃದುವಾದ ಮಾತು ಕಠೋರ ವ್ಯಕ್ತಿ ಗಳ ಹೃದಯವನ್ನು ಕರಗಿಸುತ್ತದೆ ಪ್ರಾಮಾಣಿಕ ಮಾತು ಮನುಷ್ಯನ ಕೀರ್ತಿಯನ್ನು ಹೆಚ್ಚಿಸುತ್ತದೆ.
************************