ಅಂಕಣ ಬರಹ

ಕಬ್ಬಿಗರ ಅಬ್ಬಿ

 ಸಾಲುಗಟ್ಟಿದ  ಮನಸ್ಸುಗಳು

File:Stone house Spain01.jpg - Wikimedia Commons

ಮನೆ ಕಟ್ಟುವಾಗ ಮೊದಲು  ಕಲ್ಲಿನಿಂದ ಗಟ್ಟಿಯಾದ ಅಡಿಪಾಯ, ಆಮೇಲೆ ಕಟ್ಟುವುದೇ ಗೋಡೆ!. ತಳಪಾಯದ ನಾಲ್ಕೂ ಅಂಚುಗಳುದ್ದಕ್ಕೂ ನಾಲ್ಕು ಗೋಡೆಗಳು ಮಧ್ಯದಲ್ಲಿ ಸ್ಪೇಸ್ ಮತ್ತು ಗಾಳಿ ಬಂಧಿಸಲ್ಪಡುತ್ತದೆ. ಒಳಗೆ ಮತ್ತೊಂದಷ್ಟು ಗೋಡೆಗಳು. ಡ್ರಾಯಿಂಗ್ ರೂಂ ಮತ್ತು ಮಲಗುವ ಕೋಣೆ ನಡುವೆ ಗೋಡೆ, ಮನೆಗೆ ಬರುವ ಆಗಂತುಕರಿಂದ ಪ್ರೈವೆಸಿ ಅತ್ಯಗತ್ಯ.  ಆಮೇಲೆ ಅಡುಗೆ ಕೋಣೆ ಮತ್ತು ಡೈನಿಂಗ್ ರೂಂ ನಡುವೆ ಗೋಡೆಗಳು. ಮತ್ತೆ, ದೇವರ ಕೋಣೆ ಎನ್ನಲ್ಪಡುವ ಗೂಡಿನಂತಹ ಚಿಕ್ಕ ಕೋಣೆಗೂ ಗೋಡೆಗಳು, ಒಳಗೆ ದೇವರನ್ನು ಕೂರಿಸಲು. ಸಮಾಜವಾದಕ್ಕೇ ಸವಾಲು, ಈ ಪ್ರೈವೇಟ್ ಎನ್ನುವ ಮನೆ!.

ಮನೆಯ ಹೊರಗೆ, ಮನೆಯೂ ಸುರಕ್ಷಿತವಾಗಲಿ ಎಂದು ಕಾಂಪೌಂಡ್ ಗೋಡೆ. ಅದಕ್ಕೆ ಒಂದು ಗೇಟು. ಗೇಟಲ್ಲಿ ಬೋರ್ಡು, ‘ನಾಯಿಗಳಿವೆ ಎಚ್ಚರಿಕೆ’ !.

RCC Readymade Boundary Precast Compound Wall, Thickness: 100mm, Rs 85  /square feet | ID: 20333921348

 ಮನೆಯೊಳಗೆ ಸ್ವಂತ ಹಣ, ಚಿನ್ನ ಇತ್ಯಾದಿಗಳನ್ನು ನಗರದ ಕಳ್ಳರಿಂದ, ಢಕಾಯಿತರಿಂದ ಸುರಕ್ಷಿತವಾಗಿ ಬಚ್ಚಿಡಲು ಉಕ್ಕಿನ ಕಪಾಟುಗಳು, ಅದಕ್ಕೆ ದೊಡ್ಡ ಬೀಗ.

ಕಳ್ಳರು ಮನೆಯೊಳಗೆ ನುಗ್ಗದಂತೆ ಬಾಗಿಲು. ಅದನ್ನು ಒಳಗಿಂದ ಲಾಕ್ ಮಾಡಲು ಕದ, ಉಕ್ಕಿನ ಚಿಲಕ ಇತ್ಯಾದಿ.

ಮನೆ ಮನೆಗಳ ಸಾಲುಗಳು, ಅವುಗಳ ನಡುವೆ ಬೀದಿಗಳು. ಬೀದಿಗಳಿಗೆ ಸಂಖ್ಯೆಗಳು, ಹೆಸರುಗಳೂ ಬೇಕು,ವಿಳಾಸಕ್ಕಾಗಿ.

ಮನೆಗಳ ತ್ಯಾಜ್ಯಗಳನ್ನು ನಗರದ ಹೊರಗೆ ಹರಿಯುವ ನದಿಗೆ ಸಾಗಿಸಲು ಕೊಳಚೆ ಚರಂಡಿಗಳು ನೆಲದಡಿಯಲ್ಲಿ. ಆ ಚರಂಡಿಗಳನ್ನು ಮುಚ್ಚಿ ಸುಂದರವಾಗಿ ಕಲ್ಲು ಚಪ್ಪಡಿಗಳನ್ನು ಹಾಸಲಾಗಿದೆ!. ನಗರ ನಿರ್ಮಲವಾಗಿರಬೇಕಲ್ಲ!!.

ನಾಗರೀಕತೆ ಅಥವಾ ಸಿವಿಲೈಸೇಷನ್ ಎಂಬ ಪದದ ಜತೆಗೆ ಒಂದು ವ್ಯವಸ್ಥೆ ಇದೆ. ಒಂದರ ಬಗುಲಲ್ಲಿ ಒಂದು ಹೀಗೆ ಅನುಶಾಸಿಸಿ, ಕಟ್ಟಿದ ಸಾಲುಗಳು, ಸಾಲು ಸಾಲುಗಳು , ಒಂದು ಸಾಲಿನ ಮೇಲೆ ಇನ್ನೊಂದಷ್ಟು ಸಾಲುಗಳಾಗಿ ಇಟ್ಟಿಗೆಗಳನ್ನು ಪೇರಿಸಿ ಸಿಮೆಂಟ್ ನಿಂದ ಚೆನ್ನಾಗಿ ಒಂದಕ್ಕೊಂದು ಅಂಟಿಸಿ ಗೋಡೆ ಕಟ್ಟಿ, ಬಾಗಿಲು  ಕೂಡಿಸಿ, ಅಂತಃಕರಣವನ್ನೂ ಒಳಗೆ ಬಂಧಿಸಿದರೆ ಅದು ನಗರದ ಮನೆಯಾಗುತ್ತೆ.

ನಗರದ ವ್ಯವಸ್ಥೆಯೊಳಗೆ ನಾಗರಿಕ ಸಮಾಜ ಸಂವಹಿಸಿ ಬದುಕುವಾಗ, ವ್ಯಾಪಾರಿಗಳು, ಕವಿಗಳು, ಕಾರ್ಮಿಕರು, ಆಫೀಸರುಗಳು, ಆಳುವವರು, ಆಳಿಸಿಕೊಳ್ಳುವವರು, ಕಳ್ಳರು, ಹೀಗೆ ಎಲ್ಲರೂ ಉಸಿರಾಡುವ ಪಟ್ಟಣದ ಗಾಳಿ ಒಂದೇ. ನಗರದ ನಿಯಮಗಳು,  ಒಂದು ರೀತಿ ಕವಿತೆಯ ವ್ಯಾಕರಣದ ಹಾಗೆ!. ಬಂಧ, ಛಂದದ ಕೋಶದೊಳಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸಲೇ ಬೇಕು.

ನಮ್ಮ ದೇಹದ ಕೋಟ್ಯಂತರ ಜೀವಕೋಶಗಳೂ ಒಂದು ಕ್ರಮಬದ್ಧತೆಗೇ ಒಳಪಟ್ಟು, ಜೀವಕೋಶಗಳ ನಗರವನ್ನೇ ಕಟ್ಟಿಕೊಂಡಿವೆ. ಅಂತಹಾ ದೇಹದ ಸುವ್ಯವಸ್ಥಿತ ಪಟ್ಟಣದೊಳಗೆ ಅಂತರ್ಗತವಾಗಿ ಮನುಷ್ಯ ಚೇತನ ಸದಾ ಕ್ರಿಯಾಶೀಲವಾಗಿದೆ. ಬಸವಣ್ಣ ಹೇಳಿದ ಸ್ಥಾವರದೊಳಗಿನ ಜಂಗಮವದು.

ಹಾಗಿದ್ದರೆ, ಹೊಸ ಹೊಸ ಯೋಚನೆಗಳು, ಸೃಜನಶೀಲ ತತ್ವಗಳು ರೂಪ ತಳೆಯುವುದು ಹೇಗೆ!. ಮನುಷ್ಯ ಪ್ರಜ್ಞೆಯ ಚೇತನ ಸ್ವರೂಪಕ್ಕೆ ಮನೆಯ ವ್ಯಾಖ್ಯೆ ಏನು?.

ವ್ಯವಸ್ಥೆಯ ಮಿತಿ, ನಿಯಮಗಳನ್ನು ಮೀರಿದ ಚೇತನ ಸ್ವರೂಪವನ್ನು ಕುವೆಂಪು ನೋಡುವ ಬಗೆ ಹೀಗಿದೆ ಅಲ್ಲವೇ.

” ಓ! ನನ್ನ ಚೇತನ

ಆಗು ನೀ ಅನಿಕೇತನ ||

ರೂಪ ರೂಪಗಳನು ದಾಟಿ

ನಾಮ ಕೋಟಿಗಳನು ಮೀಟಿ

ಎದೆಯ ಬಿರಿಯ ಭಾವದೀಟಿ

ನೂರು ಮತದ ಹೊಟ್ಟ ತೂರಿ

ಎಲ್ಲ ತತ್ವದೆಲ್ಲೆ ಮೀರಿ

ನಿರ್ದಿಗಂತವಾಗಿ ಏರಿ

ಎಲ್ಲಿಯೂ ನಿಲ್ಲದಿರು

ಮನೆಯನೆಂದು ಕಟ್ಟದಿರು

ಕೊನೆಯನೆಂದು ಮುಟ್ಟದಿರು

ಓ! ಅನಂತವಾಗಿರು “

Kuvempu Biography - Facts, Family Life, Achievements

ದೇಹ, ಮನಸ್ಸು ಮತ್ತು ಚೇತನ ಇವುಗಳು ಒಂದಾಗಿ ಪ್ರಕಟವಾಗುವುದೇ ಮನುಷ್ಯನ ರೂಪದಲ್ಲಿ. ದೇಹ ಮತ್ತು ಮನಸ್ಸಿಗೆ ಮನೆ ಬೇಕು, ವ್ಯವಸ್ಥೆ ಬೇಕು, ಸಮಾಜ ಬೇಕು. ನಾಗರಿಗತೆಯ ಎಲುಬು ಗೂಡೊಳಗೆ ಸಿದ್ಧಾಂತಗಳೂ ಮನೆಮಾಡುತ್ತವೆ. ಇವುಗಳೆಲ್ಲವೂ ನಮ್ಮ ಬದುಕನ್ನು, ಬದುಕುವ ಬಗೆಯನ್ನು, ಚಿಂತನೆಯನ್ನು ಒಂದು ಚೌಕಟ್ಟಿನೊಳಗೆ ಕೂಡಿಸುವಾಗ, ಅದಕ್ಕೊಂದು ಸ್ಥಿರತೆ, ಸಮತೋಲನ ಪ್ರಾಪ್ತವಾಗುತ್ತೆ.

ಆದರೆ, ವಿಕಸನಕ್ಕೆ ತಹತಹಿಸುವ ಸೃಜನಶೀಲತೆಗೆ, ಚೇತನಕ್ಕೆ ಈ ಎಲ್ಲವೂ ಬಂಧನಗಳೇ. 

ರೂಪ ಮತ್ತು ಸ್ವರೂಪ ಎಂಬ ಡೆಫೆನಿಷನ್ ನನ್ನು ದಾಟಲು, ಹೆಸರಿನ ಅಚ್ಚೊತ್ತು ಎಂಬ ಸ್ವಚಿತ್ರ ರೇಖೆಗಳನ್ನು ಮೀರಿ, ಎಲ್ಲ ತತ್ವದ ಎಲ್ಲೆ ಮೀರಿ ಅನಂತವೇ ಗುರಿಯಾಗಿ ವಿಸ್ತರಿಸುವುದು ಚೇತನ.

 ಮನೆ ಕಟ್ಟುವುದು ಎಂದರೆ, ಈ ಚೈತನ್ಯದ ವಿಕಸನಕ್ಕೆ ಪೂರ್ಣವಿರಾಮ ಹಾಕಿದಂತೆ. ಸದಾ ಚಲನಶೀಲವೇ ಚೇತನ.

ಹಾಗಿದ್ದರೆ ಮನುಷ್ಯನಿಗೆ ಮನೆಯೇ ಬೇಡವೇ?.ಹಾಗೆಂದು ಕವಿಯ ಭಾವವಲ್ಲ.

 ಸ್ಥಿರ ಮತ್ತು ಚಲನಶೀಲ ಶಕ್ತಿಗಳು ನಮ್ಮೊಳಗೆ ಒಂದಕ್ಕೊಂದು ತಳಕು ಹಾಕಿಕೊಂಡು ಸದಾ ಟಗ್ ಆಫ್ ವಾರ್ ನಡೆಸುತ್ತಲೇ ಇರುತ್ತವೆ.  ಸೃಜನಶೀಲ ಪ್ರಜ್ಞೆ, ಕವಿಯಾಗುತ್ತದೆ, ಕಲಾವಿದನಾಗುತ್ತದೆ. ಸದಾ ವಿಕಸನದತ್ತ ತುಡಿಯುವ ಮನಸ್ಸು ರಾತ್ರೆ ಮನೆಯೊಳಗೆ ಬೆಚ್ಚಗೆ ನಿದ್ರಿಸುತ್ತೆ. ನೇಸರನ ಮೊದಲ ಕದಿರು ಕನಸುಗಾರನ ಕನಸಿಗೆ, ಕಲ್ಪನೆಗೆ,  ಸ್ಪೂರ್ತಿಯಾಗುತ್ತೆ.

ಮನೆ ಹಳೆಯದಾದಾಗ ಹೊಸ ಮನೆ ಕಟ್ಟ ಬೇಕಾದರೆ, ಮೊದಲು ಹಳೆಯ ಅಡಿಪಾಯ, ಗೋಡೆಗಳನ್ನು ಮುರಿದು ತೆಗೆದು, ಹೊಸ ಮನಸ್ಥಿತಿಗನುಗುಣವಾಗಿ, ಕನಸು,ಕಲ್ಪನೆಗಳಿಗನುಗುಣವಾಗಿ ಪುನಃ ಇಟ್ಟಿಗೆಗಳನ್ನು ಒಂದೊಂದೇ ಜೋಡಿಸಿ-

“ಕಟ್ಟುವೆವು ನಾವು ಹೊಸ ಮನೆಯೊಂದನು!”

ನಗರವನ್ನು ಕಟ್ಟುವ ಪ್ರಕ್ರಿಯೆ, ನಗರದ ವ್ಯವಸ್ಥೆ ಇವುಗಳೆಲ್ಲಾ, ಮನಸ್ಸಿನ, ನಾಗರಿಕ ಸಮಾಜಪ್ರಜ್ಞೆಗೆ ಹಿಡಿಯುವ ಕನ್ನಡಿ ತಾನೇ. ಕಂಬಾರರ ಇಟ್ಟಿಗೆಯ ಪಟ್ಟಣದ ಎದೆಬಡಿತ ಹೀಗಿದೆ.

 ಇಟ್ಟಿಗೆಯ ಪಟ್ಟಣ

ಹಸಿರನಲ್ಲ,

ಈ ನಗರದಲ್ಲಿ ಬಿತ್ತಿ ಬೆಳೆಯುತ್ತಾರೆ

ಮಣ್ಣಿನಿಟ್ಟಿಗೆಯನ್ನ.

ಇಟ್ಟಿಗೆ ಬೆಳೆಯುತ್ತದೆ,

ಕಟ್ಟಡವಾಗುತ್ತದೆ.

ಕಟ್ಟಡ ಆಕಾಶದವಕಾಶವನ್ನ

ಚುಚ್ಚಿ ಬಿಸಿ ಮಾಡುತ್ತದೆ.

ಸೂರ್ಯನ ಬಿಸಿಲಿಗೆ ದೀಪದ ಬೆಳಕಿಗೆ

ಕಿಸಕ್ಕಂತ ಹಲ್ಲು ಕಿರಿದು ಹಳದಿಯ ನಗು ನಗುತ್ತದೆ.

ಕಟ್ಟಡದ ಇಕ್ಕಟ್ಟು ಸಡಿಲಿ, ಬಿರುಕಿನಲ್ಲಿ

ಹಸಿರು ಇಣುಕಿದರೆ,

ಇಟ್ಟಿಗೆ ಅದರ ಕತ್ತು ಹಿಸುಕಿ ಕೊಲ್ಲುತ್ತದೆ.

ಪಾಪಾತ್ಮ ಹಸಿರು ಹುತಾತ್ಮನಾಗದೆ

ಸಾಯುತ್ತದೆ.

ಗೊತ್ತಾ ನಿಮಗೆ- ಈ ಸಿಟಿಯೊಳಗೆ

ಆತ್ಮದ ಮಾರ್ಕೆಟ್ಟಿದೆ.

ತಲೆಯ ಕೊಯ್ದು, ತೊಗಲ ಸುಲಿದು

ತಿಪ್ಪರಲಾಗ ತೂಗು ಹಾಕಿದರೆ ತಗೊ, ಹಲೊ

ಕಾಸಿಗೊಂದು ಕಿಲೊ ಕೊಸರಿಗೊಂದು ಕಿಲೊ.

ತಲೆ ತಿಂಬವರಿಗೆ ಸೂಚನೆ:

ಅದು ಹಲ್ಕಿರಿದು ಅಣಕಿಸಿದರೆ

ಹೆದರಬೇಡಿರಿ.

The New Golden Age of Skyscrapers | WSP

***  ***  ***

ಮಣ್ಣು, ಹಸಿರು ಮತ್ತು ಜನಪದ, ಇವಗಳ ನಡುವೆ ಆತ್ಮಸಂಬಂಧ. ಯಾವ ಶಾಸ್ತ್ರದ, ತಂತ್ರಜ್ಞಾನದ, ಲಿಪಿಯ ಸಹಾಯ ಇಲ್ಲದೇ 

ಪೀಳಿಗೆಯಿಂದ ಪೀಳಿಗೆಗೆ ಬಾಯಿಮಾತುಗಳಿಂದ ದಾಟುತ್ತಾ, ಜನಜೀವನದ ಅನುಭವದ ಸತ್ವವನ್ನೂ ಹೀರಿ ಬೆಳೆಯುವ ಜ್ಞಾನ ಪ್ರಕಾರ, ಜಾನಪದ. ಜಾನಪದದ ಒಂದೊಂದು ಹೆಜ್ಜೆಗಳೂ ಒಂದೊಂದು ಪೀಳಿಗೆ. ಇದೆಲ್ಲಾ ಯಾಕೆ ಹೇಳಿದೆ ಎಂದರೆ,

ಚಂದ್ರಶೇಖರ ಕಂಬಾರ ಅವರು ಜನಪದದಲ್ಲೇ ಬೇರು ಕಂಡ ಬರಹಗಾರರು. ಅವರ ಕವಿತೆಗಳಲ್ಲಿ, ಅಂತರ್ಗತ ಜನಪದ ಧ್ವನಿಯಿದೆ.

Kambara chosen Kannada Sahitya Samelana president | Deccan Herald

ಈ ಕವಿತೆಗಾಗಿ, ಜಾನಪದದ ಇನ್ನೊಂದು ಮುಖವನ್ನೂ ಹೇಳಬೇಕು. ಸಾಮಾನ್ಯವಾಗಿ ಹಳ್ಳಿಯ ಜನ ಮುಗ್ಧರು, ಮನುಷ್ಯ ಮನುಷ್ಯನ ನಡುವೆ ಇರುವ ಸಂಬಂಧ, ಪ್ರೀತಿ ಗೌರವಗಳನ್ನು ಅತ್ಯಂತ ಶುಧ್ಧ ಅಂತಃಕರಣದಿಂದ ಅನುಭವಿಸುವ ಮಂದಿ ಇವರು.

ಇಟ್ಟಿಗೆಯ ಪಟ್ಟಣ ಈ ಕವಿತೆಯಲ್ಲಿ, ಇಟ್ಟಿಗೆ ಮೇಲೆ ಇಟ್ಟಿಗೆ ಬೆಳೆದು ಪಟ್ಟಣವಾಗಿ, ಆಕಾಶದವಕಾಶ ನುಂಗುವುದು ಮೊದಲ ಚರಣ. ಬೆಳೆವ ಹಸಿರಿನ ಅವಕಾಶವನ್ನೂ ಆಕಾಶದ ಮೂರೂ ಸ್ವತಂತ್ರ ಆಯಾಮಗಳನ್ನು ಪಟ್ಟಣ ನುಂಗಿದೆ. ಒಂದುಕಡೆ ಜಗತ್ತಿಗೇ ಉಸಿರು ಕೊಡುವ ಹಸಿರು ಕಳೆಯಿತು ಎಂದಾದರೆ, ಅದರ ಜತೆಗೆ ನ್ಯಾಚುರಲ್ ಆದ ಮನುಷ್ಯ ಪ್ರಜ್ಞೆಯೂ, ಮತ್ತು ಜೀವಜಾಲದ ನೈಸರ್ಗಿಕ ವಿಕಾಸಕ್ಕೆ ಅಗತ್ಯವಾದ ಫ್ರೀ ಸ್ಪೇಸ್ ( ಆಕಾಶದವಕಾಶ) ಕೂಡಾ ಸಂಕುಚಿತವಾಗಿದೆ.

  ಅಷ್ಟು ಮಾತ್ರವಲ್ಲದೆ, ಕಿಸಕ್ಕನೆ ಹಲ್ಕಿರಿದು ಹಳದಿ ನಗು ನಗುತ್ತದೆ! ಕಾಮಾಲೆ ರೋಗ ಬಂದವರಿಗೆ, ಎಲ್ಲವೂ ಹಳದಿಯಾಗಿ ಕಂಡು, ಹಳದಿಯೇ ಜಗತ್ತು,ಹಳದಿಯೇ ಸತ್ಯ. ಇಟ್ಟಿಗೆ,ಪಟ್ಟಣವಾದಾಗ, ಅದಕ್ಕೆ ಅದರ ಮಾರ್ಗವೇ ಸರಿ ಎನ್ನುವ ಕಾಮಾಲೆ ದೃಷ್ಟಿಯೇ, ಅದಕ್ಕೇ ಹಳದಿ ನಗುವೇ !!

ಸಾಧಾರಣವಾಗಿ ಅಶುಭ್ರ ಹಲ್ಲುಗಳು ಹಳದಿಯಾಗಿರುತ್ತವೆ. ಹಾಗೆ ನಕ್ಕಾಗ, ನಗುವಿನಲ್ಲಿ,ಹಳದಿ ಹಲ್ಲು ಇಣುಕುತ್ತವೆ. ಇದು ಹಳದಿ ನಗುವೇ?. ಇಟ್ಟಿಗೆಯ ಪಟ್ಟಣ ಮತ್ತು ಹಾಗೆ ಮೋನೋಕ್ರೊಮ್ಯಾಟಿಕ್, ಬೆಳವಣಿಗೆ, ಅಶುಬ್ರ ಅನ್ನುವ ಧ್ವನಿಯೇ?

ಇನ್ನೊಂದು ವಿಷಯ, ಇಟ್ಟಿಗೆಗೆ ನಿರ್ದಿಷ್ಟ ಆಕಾರ, ಇದೆ. ಇಟ್ಟಿಗೆ, ವೆಲ್ ಡಿಫೈನ್ಡ್. ಹಸಿರಿಗೆ ಯಾವಾಗಲೂ ಫ್ರೀ ಡೆಫಿನಿಷನ್.  ಇದೇ ಎಂಬ ಆಕಾರ, ಚಚ್ಚೌಕಾರದ ಆಕೃತಿಗಳಿಂದ ಚೂಪು ಮೂಲೆಗಳಿಂದ ಮೀರಿದ್ದು ಹಸಿರು. ಅದಕ್ಕೇ ಹಸಿರು,ಸ್ವಾತಂತ್ರ್ಯದ ಪ್ರತೀಕ. ಇಟ್ಟಿಗೆ,ಮನುಷ್ಯ ನಿರ್ಮಿತ. fixed ಆಕಾರ, fixed ಚಿಂತನಾವಕಾಶ.

ಕಟ್ಟಡದ ಬಿರುಕಿನಲ್ಲಿ, ಹಸಿರು ಚಿಗುರಿದರೆ ಅದನ್ನೂ ಈ ಇಟ್ಟಿಗೆ ನುಂಗಿ ಹಾಕುತ್ತದೆ!. ಕೋಡಗಾನ ಕೋಳಿ ನುಂಗಿತ್ತಾ ಅಂತ ಸಿಕ್ಕಿದ್ದೆಲ್ಲಾ ನುಂಗುತ್ತಾ ಸಾಗುವ ಇಟ್ಟಿಗೆ, ತನ್ನ, ಮತ್ತು ಇನ್ನಿತರ ಇಟ್ಟಿಗೆಗಳ ಅಮಾನುಷ ಬಂಧದಲ್ಲಿ ನೈಸರ್ಗಿಕ ತತ್ವಕ್ಕೆ, ಪ್ರೀತಿ,ಸ್ವಾತಂತ್ರ್ಯಕ್ಕೆ ಜಾಗವನ್ನು ಕೊಡುವುದಿಲ್ಲ, ಮಾತ್ರವಲ್ಲ, ಅದನ್ನು ಕತ್ತು ಹಿಸುಕಿ ಕೊಲ್ಲುತ್ತದೆ. ಪಟ್ಟಣದಲ್ಲಿ ಮನುಷ್ಯಮುಖೀ,ಜೀವನ್ಮುಖೀ ಸತ್ವಕ್ಕೆ ಜಾಗವಿಲ್ಲ, ಮನುಷ್ಯಸಹಜ ಬೆಳವಣಿಗೆಗೆ ಸ್ವಾತಂತ್ರ್ಯವೂ ಇಲ್ಲ. ಹುತಾತ್ಮನಾಗದೆ ಸಾಯುತ್ತದೆ, ಪಾಪಾತ್ಮ ಹಸಿರು!. ಹಸಿರು ಪಾಪಾತ್ಮವಾಗಿ ಕಾಣುವುದು, ಮೇಲಿನ ಚರಣದ ಕಾಮಾಲೆ ದೃಷ್ಟಿಗೆ.  ಯಾವುದೇ ಉದ್ದೇಶ ಸಾಧಿಸದೇ ಕೊಲ್ಲಲ್ಪಟ್ಟಾಗ, ಅ ಸಾವಿಗೆ ಹುತಾತ್ಮ ಪಟ್ಟವೂ ಸಿಗಲ್ಲ.

Little plant growing in the hole of dirty old cement wall. Vintage to show vintage concept royalty free stock image

ಈ ಪಟ್ಟಣದಲ್ಲಿ ಆತ್ಮದ ಮಾರ್ಕೆಟ್ ಇದೆ! ಪಟ್ಟಣದ ವ್ಯಾಪಾರೀ ಮನೋಭಾವ, ಆತ್ಮವನ್ನೂ ಮಾಡಿಕೊಳ್ಳಲು ಸಿಧ್ಧ. ವ್ಯಾಪಾರ ಕೇಂದ್ರಿತ, ಬಂಡವಾಳಶಾಹಿ ವ್ಯವಸ್ಥೆ, ಹಣಕ್ಕಾಗಿ, ಆತ್ಮವನ್ನೂ ಮಾರಬಲ್ಲದು. ಆತ್ಮ ಎಂದರೆ ಇಲ್ಲಿ, ಅಧ್ಯಾತ್ಮಿಕ ಅರ್ಥವೇ ಆಗಬೇಕೆಂದಿಲ್ಲ, ಆತ್ಮ ಎಂದರೆ, ಮನುಷ್ಯನೊಳಗಿನ ಜೀವಪ್ರಜ್ಞೆ, ಸ್ವಂತಿಕೆ  ಅಂತಲೂ ಅಂದುಕೊಳ್ಳಬಹುದು. ಅಂತಹ ವ್ಯವಸ್ಥೆಯಲ್ಲಿ, ತಲೆ ಕಡಿದು, ಸಿಪ್ಪೆ ಸುಲಿದು, ಉಲ್ಟಾ ನೇತು ಹಾಕಿದರೂ ಯಾರಿಗೂ ಏನೂ ವೇದನೆಯಿಲ್ಲ, ಸಂವೇದನೆಯೂ ಸತ್ತಿದೆ.

ತಲೆ ಕಡಿದದ್ದರಿಂದ, ಯೋಚನಾಶಕ್ತಿಯೂ ವಿವೇಚನಾಶೀಲತೆಯೂ ಗತವಾಗಿದೆ. ‘ಇಟ್ಟಿಗೆಯ ಪಟ್ಟಣ’ ಇಲ್ಲಿ ನಿರ್ದಯೀ, ಅಮಾನುಷ ವ್ಯಾಪಾರೀ ಜಗತ್ತನ್ನು ಪ್ರತಿಧ್ವನಿಸುತ್ತದೆ. ‘ತಲೆ ತಿಂಬವಗೆ’ ಎಂಬ ಪದ, ಅನೇಕ ಯೋಚನೆಗಳಿಗೆ ಮನದ ಕದ ತೆರೆಯುತ್ತದೆ.

ಜಾನಪದಕ್ಕೆ ಮನೆ ಕಟ್ಟುವ, ಮನೆಯೊಳಗಿನ ಕಟ್ಟುಪಾಡುಗಳ ಜರೂರತ್ತಿಲ್ಲ. ಅದು ಕುವೆಂಪು ಅವರ ಕವಿತೆಯ, ಚೇತನ ಸ್ವರೂಪಿ. ಹಾಗೆಯೇ ಪ್ರೇಮಸ್ವರೂಪಿ,ಸಂವೇದನಾ ಸ್ವರೂಪಿ ಕೂಡಾ. ಕಂಬಾರರ ಕವಿತೆಯ ಇಟ್ಟಿಗೆಯ ಪಟ್ಟಣ, ಶಿಷ್ಟ ಮನಸ್ಸಿನ ಹಿಡಿತದ  ಮತ್ತು ಜಾನಪದದ ಚೋಮನ ದುಡಿಯ ಬಡಿತದ ನಡುವಿನ ಸಂಘರ್ಷ.

ನಗರ ಕಟ್ಟುತ್ತಾ ತನ್ನದೇ ವರ್ತುಲ ಬೆಳೆಸುವ ಮಹತ್ವಾಕಾಂಕ್ಷೆಯ ದಾರಿಯಲ್ಲಿ ಪ್ರಕೃತಿಯ ಇತರ ಎಲ್ಲಾ ಜೀವ ವೇತನಗಳನ್ನು ಶೋಷಿಸುವ, ಕೊಲ್ಲುವ ನಾಗರಿಕ ಸಮಾಜದ ವಿಕೃತ ಮನಸ್ಸನ್ನು ಕವಿತೆ ಚಿತ್ರಿಸುತ್ತದೆ. ಕೊನೆಗೆ “ನಾಗರಿಕತೆ” ಎಂದರೇನು ಎಂಬ ಮೂಲಭೂತ ಪ್ರಶ್ನೆ ನಮ್ಮನ್ನು ತೀವ್ರವಾಗಿ ಕಾಡುತ್ತೆ.

**************************************************

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

10 thoughts on “

  1. ಒಳ್ಳೆಯ ಬರಹ. ನಾಗರೀಕತೆಯ ಜೊತೆಗೆ ಮನಸ್ಸುಗಳ ಪಲ್ಲಟಗಳು. ಸುಂದರ ಕವಿತೆಗಳೊಂದಿಗೆ

    1. ಕವಯಿತ್ತಿಯ ನುಡಿಗಳಿಗೆ ತುಂಬಾ ಮಹತ್ವವಿದೆ. ಧನ್ಯವಾದಗಳು ಪೂರ್ಣಿಮಾ ಅವರೇ

  2. ನಿಮ್ಮ ಕವಿತೆಗಳ ಕುರಿತ ಬರಹ ಓದುವುದೇ ಒಂದು ಸೊಗಸು. ಕವಿತೆಯ ಮತ್ತೊಂದು ಹೊಳಹನ್ನು ತೆರೆದಿಡುತ್ತದೆ..ಒಳ್ಳೆಯ ಓದಿಗಾಗಿ ಅಭಿನಂದನೆ ಸರ್

    1. ಸ್ಮಿತಾ ಅಮೃತರಾಜ್ ಅವರೇ.
      ಕವಿತೆ ಏನು ಹೇಳಬೇಕೋ,ಅದು ಕವಿತೆ ಒಳಮಾತುಗಳಲ್ಲಿ ಹೇಳುತ್ತೆ.
      ನಾನು ಕವಿತೆಯ ಸುತ್ತ ಅಲೆದಾಡಿ, ನನ್ನ ಅನುಭವದ ಪರಿಧಿಗೆ ಬಂದ ವಿಚಾರಗಳನ್ನು ಹಂಚಿಕೊಳ್ಳುತ್ತೇನೆ.
      ನಿಮ್ಮ ನಲ್ನುಡಿಗೆ ತುಂಬಾ ಧನ್ಯವಾದಗಳು

  3. ತುಂಬಾ ಚೆನ್ನಾಗಿದೆ ಮಹಾದೇವ ಅವರೆ ಪೀಠಿಕೆ ಬಹಳ. ಸುಂದರವಾಗಿದೆ. ಇಟ್ಟಿಗೆಯ ಪಟ್ಟಣ ಬಹಳಹಿಡಿಸಿತು. ಸಾಮಾಜಿಕ. ನಾಗರೀಕತೆ ನಮ್ಮದೇಹವೆ ಮನೆ ಇವೆಲ್ಲಾ ಬಹಳ ಹಿಡಿಸಿತು ಸೂಪರ ಲೆಖನ

    1. ಸಂಪತ್ ಸರ್
      ಮನಸ್ಸು ಹರಿದ ದಾರಿಯಲ್ಲಿ ಬರೆಯುತ್ತಾ ಹೋದೆ. ಉತ್ತರಕ್ಕಿಂತ ಪ್ರಶ್ನೆಗಳೇ ಹೆಚ್ಚು.
      ನಿಮ್ಮ ಒಲವಿಗೆ ನಮಿಪೆ

  4. ಸ್ವಚ್ಛಂದ ಮನಸ್ಸಿನ ಎಲ್ಲೆಗೆ ನಿಲುಕದ ಹಾರಾಟದ ಬಗ್ಗೆ ನಿಮ್ಮ ನೀವು ಕೊಟ್ಟ ಚೌಕಟ್ಟಿನ ಬಂಧನದ ರೂಪಕ ತುಂಬಾ ಸಮರ್ಪಕವಾಗಿದೆ. ಎಷ್ಟೇ ಕಟ್ಟಡ ಕಟ್ಟಿದರೂ ಎಷ್ಟೇ ಕಟ್ಟಳೆ ಹಾಕಿದರೂ ಮನ, ಚೇತನ ಅವುಗಳನ್ನು ಲೆಕ್ಕಿಸುವುದಿಲ್ಲ. ಹಾರುವುದೇ ಅವುಗಳ ಗುಣ, ಲಕ್ಷಣ. ಇದಕ್ಕೆ ಪೂರಕವಾದ ಕುವೆಂಪುರವರ ಓ ನನ್ನ ಚೇತನ ಕವಿತೆ/ ಹಾಡು ಆ ಲಕ್ಷಣವನ್ನು ಸಾರಿ ಹೇಳುತ್ತದೆ. ಎಲ್ಲ ತತ್ತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಹಾರಿ ಎಷ್ಟು ಸಶಕ್ತ ಸಾಲುಗಳು ! ಹಾಗೆಯೇ ಕಂಬಾರರ ಪದ್ಯವಂತೂ ಅನೇಕ ರೂಪಗಳೊಳಗೊಂಡು ನಗ್ನ ಸತ್ಯಕ್ಕೆ ಕನ್ನಡಿಯಾಗುತ್ತದೆ.

    1. ರಮೇಶ್ ಸರ್.
      ಕಾವ್ಯದ ಒಳಗೂ ಹೊರಗೂ ವಿಶ್ವವಿದೆ. ಕಾವ್ಯದೊಳಗೆ ಆತ್ಮವಿದೆ. ಬಂಧನ ಮತ್ತು ಮುಕ್ತಿಯ ನಡುವೆ ಜೀವನವಿದೆ. ಹಾಗೆಯೇ ಕಾವ್ಯವೂ!.
      ನಿಮ್ಮ ಆತ್ಮೀಯ, ಗಹನ ಪ್ರತಿಕ್ರಿಯೆ ನನ್ನ ಬೆನ್ನಿಗೆ ನಿಂತದ್ದು ಧೈರ್ಯ.

Leave a Reply

Back To Top