ಅಂಕಣ ಬರಹ

ಏಕತಾರಿ ಕಣ್ಮರೆ

ektb.jpg (700×700) | Indian musical instruments, Folk instruments, Bass

ಹಲವು ವರುಷಗಳಿಂದ ತತ್ವಪದ ಗಾಯಕರನ್ನು ಭೇಟಿಮಾಡುತ್ತ, ಅವರು ಹಾಡುವ ಪದಗಳನ್ನು ಕೇಳುತ್ತ ತಿರುಗಾಡುತ್ತಿದ್ದೇನೆ. ಈ ಗಾಯನದಲ್ಲಿ ಜೀವಾಳದಂತೆ ಬಳಕೆಯಾಗುತ್ತಿದ್ದ ಏಕತಾರಿ ಮರೆಯಾಗುತ್ತಿರುವುದು ಕಾಣುತ್ತಿದೆ. ಯಾಕಿರಬಹುದು? ಇದರ ಪರಿಣಾಮ ಏನಾಗಿದೆ? ವಿಚಾರ ಮಾಡಬೇಕಿನಿಸಿತು.

ತಾಡಿಸಿದರೆ ನುಡಿವ ತೊಗಲಿನ ತಮಟೆ, ಡೋಲು, ಮೃದಂಗ, ಢಕ್ಕೆ, ಹಲಗೆ, ದಮಡಿ, ದಪ್ಪು, ಉರುಮೆಗಳಿವೆ; ಗಾಳಿ ವಾದ್ಯಗಳಾದ ಹಾರ್ಮೋನಿಯಂ, ಕೊಳಲು, ಶಹನಾಯಿಗಳಿವೆ; ಮೀಟಿದರೆ ನಾದ ಹೊರಡಿಸುವ ವೀಣೆ, ಕಿನ್ನರಿ, ಚೌಡಿಕೆ, ಏಕತಾರಿ, ಸಾರಂಗಿಯಂತಹ ತಂತಿವಾದ್ಯಗಳೂ ಇವೆ. ಇವುಗಳಲ್ಲಿ ಏಕತಾರಿಯದೇ ಒಂದು ವಿಶಿಷ್ಟ. ಇದು ಏಕ್‍ತಾರ್(ಒಂದು ತಂತಿ) ಎಂಬ ಹಿಂದೂಸ್ತಾನಿ ಪದದಿಂದ ಹುಟ್ಟಿದೆ. ಇದೇ ಶಬ್ದವಿನ್ಯಾಸದಲ್ಲಿ ಸಿತಾರ್ (ಛೇತಾರ್) ಹೆಸರೂ ಬಂದಿರಬೇಕು. ಬಿಗಿದು ಕಟ್ಟಿದ ತಂತಿ ತನ್ನ ಸೆಡವಿನಲ್ಲಿ ಕಡ್ಡಿಯೊ ಬೆರಳೊ ತಾಗಿದರೆ ಝುಂ ಎಂದು ನಾದ ಹೊಮ್ಮಿಸುತ್ತದೆ. ಭಾರತದಾದ್ಯಂತ ಇರುವ ತಂತಿವಾದ್ಯಗಳನ್ನು ದೆಹಲಿಯ ಸಂಗೀತ ಮತ್ತು ನಾಟಕ ಅಕಾಡೆಮಿ ಮ್ಯೂಸಿಯಮ್ಮಿನಲ್ಲಿ ಇಡಲಾಗಿದೆ. ಅವುಗಳ ಕೆಳಗೆ ಅವನ್ನು ಬಳಸುವ ಕಲಾವಿದರ ವಿವರಗಳೂ ಇವೆ. ಪರಿಶೀಲಿಸಿದರೆ, ಹೆಚ್ಚಿನವು ವಿವಿಧ ಗುರುಪಂಥಗಳಿಗೆ ಸಂಬಂಧಿಸಿದವು. ಬಾವುಲರು, ನಾಥರು, ತತ್ವಪದಕಾರರು, ಮಂಟೆಸ್ವಾಮಿಯ ಅನುಯಾಯಿಗಳಾದ ತಂಬೂರಿಯವರು ಇದರ ವಾದಕರು.

ಈ ತಂತೀವಾದ್ಯಗಳಿಗೂ ಅನುಭಾವಕ್ಕೂ ಯಾವುದೊ ಬಗೆಯ ಸಂಬಂಧವಿದೆ. ಶಿಶುನಾಳರು ಕೂಡ ‘ತರವಲ್ಲ ತಗೀ ನಿನ ತಂಬೂರಿ’ ಎಂಬಲ್ಲಿ ಸೂಚಿಸುವುದು ತಂತಿವಾದ್ಯವನ್ನೇ. ತಂಬೂರಿ ಚೌಡಿಕೆ ಸಿತಾರ್ ಏಕತಾರಿ ವೀಣೆ ಸರೋದ್ ಮುಂತಾದ ತಂತಿವಾದ್ಯಗಳನ್ನು ಕಲಾವಿದರು ದೇಹಕ್ಕೆ ತಗುಲಿಸಿಕೊಂಡು ನುಡಿಸುವರು ಮತ್ತು ಹಾಡುವರು. ಇದು ಅವರ ದೇಹದಿಂದಲೇ ನಾದ ಹೊರಡುತ್ತಿರುವಂತೆ ತೋರುವುದು. ಮೊದಲಿಂದಲೂ ದೇಹಕ್ಕೂ ತಂತೀವಾದ್ಯಗಳಿಗೂ ಜೈವಿಕ ಸಮೀಕರಣವಿದೆ. ಇದನ್ನು ಬಸವಣ್ಣನವರ `ಎನ್ನ ಕಾಯವ ದಂಡಿಗೆಯ ಮಾಡಯ್ಯ’ ವಚನ ನಾಟಕೀಯವಾಗಿ ಸೂಚಿಸುತ್ತದೆ. ಅಲ್ಲಿ ಮನುಷ್ಯ ಕಾಯದ ಅಂಗಾಂಗಗಳಾದ ಕಾಯ ಶಿರ ಬೆರಳುಗಳು ದಂಡಿಗೆ ಸೋರೆಬುರುಡೆ ಕಡ್ಡಿಗಳಾಗಿ ಪಲ್ಲಟಗೊಂಡು ವಾದ್ಯವಾಗಿ ರೂಪಾಂತರ ಪಡೆಯುತ್ತವೆ. ಕೊನೆಯಲ್ಲಿ ಕೂಡಸಂಗಮದೇವನಿಗೆ ಬತ್ತೀಸರಾಗವನ್ನು ಹಾಡಲು ಕೋರಲಾಗುತ್ತದೆ. ಅಲ್ಲಿರುವುದು `ಉರದಲ್ಲಿ ಒತ್ತಿಬಾರಿಸು’ ಎಂಬ ವಿನಂತಿ. ಉರವು (ಎದೆ)ಭಾವನೆಗಳ ಆಗರವೆನ್ನಲಾಗುವ ಹೃದಯವಿರುವ ಜಾಗ. `ಒತ್ತಿಬಾರಿಸು’ ಎಂಬ ಸೂಚನೆಯಲ್ಲಿ ಶೃಂಗಾರದ ಛಾಯೆಯೂ ಇದೆ. 

ಮಾನವ ದೇಹವು ತಂತಿವಾದ್ಯವಾಗಿ ರೂಪಾಂತರಗೊಳ್ಳುವ ಈ ಕ್ರಿಯೆ ಎಲ್ಲಮ್ಮ ಸಂಪ್ರದಾಯದಲ್ಲಿ ಇನ್ನೂ ನಿಚ್ಚಳ. ದೇವಿಯು ಹಗೆಯಾದ ಕಾರ್ತವೀರ್ಯನನ್ನು ಕೊಂದು, ಅವನ ಬೆನ್ನೆಲುಬಿನಿಂದ ಚೌಡಿಕೆಯ ದಂಡವನ್ನೂ ನರದಿಂದ ತಂತಿಯನ್ನೂ ತ¯ಚೆಂಡಿನಿಂದ ಬುರುಡೆಯನ್ನೂ ಬೆರಳಿನಿಂದ ಕಡ್ಡಿಯನ್ನೂ ಮಾಡಿಕೊಂಡು ಹಾಡುತ್ತಾಳೆ. ಸಿದ್ಧರ ಕಥನಗಳಲ್ಲಿ ಅವರು ಕೊಲ್ಲಾಪುರದ ಮಾಯಿಯನ್ನು ಕೊಂದು ಅವಳ ಅಂಗಾಂಗಗಳಿಂದ ವಾದ್ಯಮಾಡಿ ನುಡಿಸುವರು. ಈಗಲೂ ಏಕತಾರಿಯಲ್ಲಿ ಬಳಸುವ ಒಣಸೋರೆಯನ್ನು ಬುರುಡೆ (ಕಪಾಲ) ಎಂದೇ ಕರೆಯುವುದು. ಕಿನ್ನರಿ  ಜೋಗಿಗಳು ಅಥವಾ ನಾಥರು ಕಪಾಲದಲ್ಲಿ ಆಹಾರ ಸ್ವೀಕರಿಸುವ ಪದ್ಧತಿಯಿತ್ತು. ಈಗ ಅವರ ಆಚರಣೆಗಳ್ಲಲಿ ಅದರ ಜಾಗದಲ್ಲಿ ಸೋರೆಯ ಬುರುಡೆ ಬಂದಿವೆ. 

ಹೀಗೆ ದೇಹದ ಜತೆ ಸಮೀಕರಣಗೊಳ್ಳುವ ಕಿನ್ನರಿ ಇಲ್ಲವೇ ಏಕತಾರಿ ಹೊರಡಿಸುವ ನಾದವು, ತನ್ನನ್ನು ನುಡಿಸುತ್ತಿರುವ ಕಲಾವಿದನ ದೇಹದ ಜತೆ ಏಕೀಭವಿಸುತ್ತದೆ. ಅವರಿಬ್ಬರ ಮಿಲನದಿಂದ ಹುಟ್ಟುವ ನಾದವು ಯೌಗಿಕ ಪರಿಭಾಷೆಯಲ್ಲಿ ವಿಶಿಷ್ಟ ಅರ್ಥವನ್ನೂ ಪಡೆದಿದೆ. ಏಕತಾರಿ ನುಡಿಸುತ್ತ ಹಾಡುವಾಗ ಹಾಡಿನೊಳಗಿನ ತತ್ವವು ಅಂತರಂಗೀಕರಣಗೊಳ್ಳುತ್ತ, ಕಣ್ಮುಚ್ಚಿ ಹಾಡುವವರು ತಮ್ಮೊಳಗೇ ಸಂವಾದಿಸುತ್ತ  ಮೈಮರೆಯುವರು. ತಮ್ಮನ್ನು ತಾವು ಅರಿತು ತಾವೇ ದೈವವಾಗುವುದು ತತ್ವಪದಗಳ ಒಳಗಿರುವ ತತ್ವಾಶಯ. ಸಾಧನೆಯಲ್ಲಿ ತೊಡಗಿರುವವರು ಉಸಿರಾಟವನ್ನು ನಿಯಂತ್ರಿಸುತ್ತ ಮನಸ್ಸನ್ನು ಗೊತ್ತಿನಲ್ಲಿ ನಿಲ್ಲಿಸುವ ಅವಸ್ಥೆ ತಲುಪಿದಾಗ- ಅಂದರೆ ಸಮಾಧಿ ಅವಸ್ಥೆಯಲ್ಲಿ ಬಗೆಬಗೆಯ ನಾದಗಳು ಕೇಳಿಸುತ್ತವೆಯಂತೆ. ಅಲ್ಲಮ ಈ ಅನುಭವವನ್ನು `ತಾಳೋಷ್ಟ್ರ ಸಂಪುಟವೆಂಬುದು ನಾದಬಿಂದು ಕಳಾತೀತ’ ಎಂದು ಹೇಳುವನು. ಯೋಗದ ಪರಿಭಾಷೆಯಲ್ಲಿ `ಅನಾಹತ ನಾದ’ವೆಂಬ ಮಾತಿದೆ. ನಾದದ ಪ್ರಸ್ತಾಪವು ಯೌಗಿಕ ಸಾಧಕರಲ್ಲಿ ನಾನಾ ಅರ್ಥಗಳಲ್ಲಿ ಕಾಣಿಸುವ ನುಡಿಗಟ್ಟಾಗಿದೆ. ಸಾಧಕರು ತಮ್ಮನ್ನು ತಾವು ಅರಿಯುವ ಸಾಧನೆಯಲ್ಲಿ ಭಾಷಾತೀತವಾದ ನಾದವು ಟ್ರಾನ್ಸ್ ಅವಸ್ಥೆಗೆ ಒಯ್ಯುವ ಸಾಧನವಾಗಿ ದುಡಿಯುತ್ತ ಬಂದಿರುವುದು. ಸೂಫಿಗಳಲ್ಲೂ ಸಂಗೀತವನ್ನು ಸಾಧನೆಯ ಉಪಕರಣವಾಗಿ ಬಳಸುವರು. ಆದರೂ ಅಲ್ಲಿ ತಂತೀವಾದ್ಯ ಕಡಿಮೆ. ಇರಾನ್ ಆಫಘಾನಿಸ್ಥಾನ್ ಬಲೂಚಿಸ್ಥಾನ್‍ಗಳ ಸೂಫಿಗಾಯನದಲ್ಲಿ ತಂತೀವಾದ್ಯವಿದೆ. ಬಂಗಾಲದ ಬಾವುಲರನ್ನು ತಂತೀವಾದ್ಯ ಹೊರತುಪಡಿಸಿ ಕಲ್ಪಿಸಿಕೊಳ್ಳುವಂತೆಯೇ ಇಲ್ಲ.

ಹೀಗೆ ಯೋಗಲೋಕದ ಹಾಡಿಕೆಯಲ್ಲಿ ವಿಶಿಷ್ಟ ಸ್ಥಾನವುಳ್ಳ ಏಕತಾರಿ ಕಣ್ಮರೆಯಾಗುತ್ತಿದೆ. ಹಳೇಮೈಸೂರು ಭಾಗದಲ್ಲಿ ಅದು ಉಳಿದುಕೊಂಡಿದ್ದು, ಉತ್ತರ ಕರ್ನಾಟಕದಲ್ಲಿ ಗಾಯಬ್ ಆಗಿದೆ. ಅಪರೂಪಕ್ಕೆ ಏಕತಾರಿಗಳು ಕಂಡರೂ ಅವು ಬುರುಡೆ ಒಡೆದ, ದಂಡ ಮುರಿದ, ತಂತಿ ಹರಿದ ಅವಸ್ಥೆಯಲ್ಲಿವೆ. ಅವುಗಳ ಜಾಗದಲ್ಲಿ ಯೂರೋಪಿನಿಂದ ಆಗಮಿಸಿರುವ ಹಾರ್ಮೋನಿಯಂ ವಿರಾಜಮಾನವಾಗಿದೆ. ಹಳಬರನ್ನು ಕೇಳಿದರೆ, ತಮ್ಮ ಕಾಲದಲ್ಲಿ ಇದ್ದುದು ಏಕತಾರಿ ಮಾತ್ರ ಎನ್ನುವರು.  “ನಾವು ಫಸ್ಟಿಗೆ ತಂಬೂರಿ ಕಾಯೊಳಗೆ ಹಾಡತಿದ್ದಿವಿ. ಈಗ ಅದನ್ನ ಬಿಟ್ಟು 15-20 ವರ್ಷವಾಯಿತು. ತಂಬೂರಿ ಕಾಯೀನೂ ಈಗ ಸಿಗದಂಗಾಗಿದೆ’’ ಎಂದು ಬಲ್ಲಟಗುಡ್ಡದಿಂದ ಬಂದಿದ್ದ ಗಾಯಕ ಅಂಬಾಮಠದ ಜಾತ್ರೆಯಲ್ಲಿ ಹೇಳಿದ. ಆದರೆ ಈಗ ತಂಬೂರಿ ಇಲ್ಲವಾದ ಬಗ್ಗೆ ಅವನಲ್ಲಿ ಆತಂಕವೇನಿರಲಿಲ್ಲ.  

ಹಿಂದೂಸ್ತಾನಿ ಸಂಗೀತ ಪದ್ಧತಿಯು ಉತ್ತರ ಕರ್ನಾಟಕದಲ್ಲಿ ಪ್ರವೇಶಿಸಿದ ಬಳಿಕ, ಅದರ ಜತೆ ಹಾರ್ಮೊನಿಯಂ ನುಗ್ಗಿ ಏಕತಾರಿಯನ್ನು ಹಿಂತಳ್ಳಿತು. ಇದರಿಂದ ತತ್ವಪದ ಹಾಡಿಕೆಗೆ ಹಿಂದೂಸ್ತಾನಿ ಸಂಗೀತಗಾರರ ಹಾಗೆ ಕಛೇರಿಯ ರೂಪ ಸಿಕ್ಕಿತು. ಕಲಬುರ್ಗಿ ಸೀಮೆಯ ಬಹಳಷ್ಟು ತತ್ವಪದ ಗಾಯಕರು, ಹಿಂದೂಸ್ತಾನಿ ಸಂಗೀತಗಾರರಂತೆ, ಬೆಂಗಳೂರಿನ ಸುಗಮ ಸಂಗೀತ ಕಲಾವಿದರಂತೆ, ತಾವೇ ಪೇಟಿ ಬಾರಿಸುತ್ತ, ತತ್ವಪದ ಹಾಡುತ್ತ ದೊಡ್ಡ ಸಭೆಗಳಲ್ಲಿ ಹಾಡುವರು. ಏಕತಾರಿಯು ಸಣ್ಣಗುಂಪಿನ ಸಾಧಕರ ನಡುವಿದ್ದರೆ, ಹಾರ್ಮೊನಿಯಂ ತತ್ವಪದಗಳನ್ನು ದೊಡ್ಡ ಸಭಾ ಕಾರ್ಯಕ್ರಮಗಳಿಗೆ ವಿಸ್ತರಿಸಿದೆ. ಏಕತಾರಿ ಹಾಡುವವರಿಗೆ ತತ್ವದೊಳಗಿನ ಅರ್ಥವನ್ನು ಒಳಬಿಟ್ಟುಕೊಂಡು ಅಂತರ್ಮುಖಿಯಾಗಿಸುತ್ತಿದೆ; ಹಾರ್ಮೊನಿಯಂ ತಬಲಗಳು ಹಾಡುವವರನ್ನು ವೃತ್ತಿಪರನನ್ನಾಗಿಸುತ್ತಿವೆ. ಇದಕ್ಕೆ ತಕ್ಕಂತೆ ಸಂಸ್ಕøತಿ ಇಲಾಖೆಯು ಗ್ರಾಮೀಣ ಕಲಾವಿದರನ್ನು ಉತ್ತೇಜಿಸುವ ಭಾಗವಾಗಿ ಹಾರ್ಮೊನಿಯಂ ವಿತರಿಸುತ್ತಿದೆ. ಇವೆಲ್ಲವೂ ಏಕತಾರಿಯ ನಿರ್ಗಮವನ್ನು ತೀವ್ರಗೊಳಿಸಿವೆ.

Most Melodies Bhajan Ever on Street Meera Tode and Dayanand Tode. #Ektari  bhajan #Talent on Street - YouTube

ಒಂದು ವಾದ್ಯದ ಕಣ್ಮರೆಯಿಂದ ಅಥವಾ  ಆಗಮನದಿಂದ ಹಾಡು ಪರಂಪರೆಯಲ್ಲಿ ಏನಾಗುತ್ತದೆ? ತತ್ವಪದ ಸಾಹಿತ್ಯವು ಏಕತಾರಿಯ ಜತೆಗೆ ಸಂಹವನವಾಗುವಂತೆ, ಹಾರ್ಮೊನಿಯಂ ಗದ್ದಲದಲ್ಲಿ ಸಂಹವನವಾಗುವುದಿಲ್ಲ. ಜನ ಕೂಡ ತತ್ವಪದಗಳ ಅರ್ಥದ ಹಂಗಿಲ್ಲದೆ ಒಟ್ಟಾರೆ ಸದ್ದನ್ನು ಆಲಿಸುವಂತೆ ತೋರುತ್ತಿದೆ. ವಾದ್ಯಗಳ ಈ ಆಗಮನ ಇಲ್ಲವೇ ಕಣ್ಮರೆಯು ಸಾಹಿತ್ಯ ಸಂಗೀತ ಮತ್ತು ಅನುಭಾವ ದರ್ಶನದ ಮೂರೂ ಸ್ತರಗಳಲ್ಲಿ  ಪಲ್ಲಟಗಳನ್ನು ತಂದಿದೆ. ಇಂತಹ ಸನ್ನಿವೇಶದಲ್ಲಿ ಏಕತಾರಿಯನ್ನು ಬಿಡದೆಯೂ ಸಾಹಿತ್ಯದ ಅರ್ಥಕ್ಕೆ ಚ್ಯುತಿತಾರದೆ ಕಲಾವಿದರಾಗಿ ವಿಸ್ತರಣೆ ಪಡೆದಿರುವ ಮರೆಪ್ಪದಾಸರ ತಂಡ ವಿಶಿಷ್ಟವೆನಿಸುತ್ತದೆ. ಯಲಬುರ್ಗ ಸೀಮೆಯ ಮಾರೆಪ್ಪ ತಂಡ ಏಕತಾರಿ ಬಳಸುವ ಬಗೆ ಅಪೂರ್ವ. ಅವರು ತಂತಿಗಳನ್ನು ಬೆರಳು ಇಲ್ಲವೇ ಕಡ್ಡಿಯಿಂದ ಮೀಟದೆ, ಸಣ್ಣದೊಂದು ಕೋಲಿಂದ ಬಾರಿಸುತ್ತ ಹಾಡುವರು. ಮತ್ತೂ ವಿಶೇಷವೆಂದರೆ, ಇದರ ಜತೆ ಪಶ್ಚಿಮದ ವಯಲಿನನ್ನು(ಪಿಟೀಲು) ಬಳಸುವುದು. ನಾನು ಕಂಡಂತೆ ಪಿಟೀಲು ಬಳಸಿ ಹಾಡುವ ಏಕೈಕ ತತ್ವಪದ ಗಾಯಕರ ತಂಡವಿದು. ಒಂದೆಡೆ ಯೂರೋಪಿನಿಂದ ಬಂದ, ಹೆಸರಲ್ಲೇ ಸಾಮರಸ್ಯ ಅರ್ಥವುಳ್ಳ ಹಾರ್ಮೋನಿಯಂ, ಏಕತಾರಿಯ ಗಂಟಲನ್ನು ಹಿಸುಕಿದೆ; ಇನ್ನೊಂದೆಡೆ ಯೂರೋಪಿನ ವಯಲಿನ್, ಏಕತಾರಿಯ ಜತೆ ಅಪೂರ್ವ ಗೆಳೆತನ ಸಾಧಿಸಿದೆ.

ಯೂರೋಪು ಭಾರತದ ಜತೆ ಸಾವು ಬದುಕಿನ ಆಟವನ್ನು ವಾದ್ಯಗಳ ಜತೆ ಮಾತ್ರವಲ್ಲ, ಇಡೀ ಸಂಸ್ಕøತಿಯ ಜತೆಯೇ ಮಾಡಿದೆ. ಎಂತಲೇ ನಾವದನ್ನು ಇಡಿಯಾಗಿ ದ್ವೇಷಿಸುವ ಇಲ್ಲವೇ ಪ್ರೀತಿಸುವ ಸರಳ ಸನ್ನಿವೇಶದಲ್ಲಿ ನಾವಿಲ್ಲ. ಅಸಮ್ಮತಿ-ಸಮ್ಮತಿಗಳನ್ನು ವಿಷಯವಾರು ಹಾಗೂ ಸಂದರ್ಭಾನುಸಾರ ಮಾಡುವ ಇಕ್ಕಟ್ಟಿನೊಳಗೆ ಸಿಲುಕಿದ್ದೇವೆ. ಈ ಇಕ್ಕಟ್ಟು ಸಾವು ಬದುಕಿನ ಅನುಭವ ಕೊಡುತ್ತಿದೆ. ಚೋದ್ಯವೆಂದರೆ, ಕೆಲವರಿಗೆ ಸಾವಿನ ಅನುಭವವಾಗುವ ಅಂಶವು, ಉಳಿದವರಿಗೆ ಮರುಹುಟ್ಟಿಗೆ ಕಾರಣವಾಗುವುದು. ಎಲ್ಲ ಸಮಾಜಗಳಲ್ಲೂ ಜೀವಂತ ಪರಂಪರೆಗಳು ಕಳೆದುಕೊಳ್ಳುವ ಪಡೆದುಕೊಳ್ಳುವ ದ್ವಂದ್ವಾತ್ಮಕ ಪ್ರಕ್ರಿಯೆಯಲ್ಲಿಯೇ ರೂಪುಗೊಳ್ಳುತ್ತಿರುತ್ತವೆ. ಕಳೆತ ಮತ್ತು ಪಡೆತಗಳ ಫಾಯದೆ ಲುಕ್ಸಾನುಗಳು ಲೆಕ್ಕಕ್ಕೆ ಸಿಗದಷ್ಟು ಸಂಕೀರ್ಣವಾಗಿರುತ್ತವೆ.

**********************************************

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

One thought on “

Leave a Reply

Back To Top