ಅಂಕಣ ಬರಹ
ಕರುಳು ಹಿಂಡುವ
ಬಡಪಾಯಿಯೊಬ್ಬನ ಕರುಣ ಕಥೆ
‘ಆಡು ಜೀವನ’
‘ಆಡು ಜೀವನ’
ಮೂಲ : ಬೆನ್ಯಾಮಿನ್
ಕನ್ನಡಕ್ಕೆ : ಡಾ.ಅಶೋಕ ಕುಮಾರ್
ಪ್ರಕಾಶಕರು : ಹೇಮಂತ ಸಾಹಿತ್ಯ
ಪ್ರಕಟಣೆಯ ವರ್ಷ: ೨೦೧೨
ಬೆಲೆ : ರೂ.೧೦೦
ಪುಟಗಳು : ೧೮೪
ಬಡತನದ ಬೇಗೆಯನ್ನು ತಾಳಲಾರದೆ ಉತ್ತಮ ಭವಿಷ್ಯದ ಕನಸು ಕಾಣುತ್ತ ಕೊಲ್ಲಿ ರಾಷ್ಟçಕ್ಕೆ ಹೋಗಿ ಅಲ್ಲೂ ದುರಾದೃಷ್ಟದ ಅನಿರೀಕ್ಷಿತ ಹೊಡೆತದಿಂದ ಅಸಹನೀಯ ವೇದನೆಯನ್ನನುಭವಿಸಿದ ಬಡಪಾಯಿಯ ಕರುಣ ಕತೆ ‘ಆಡು ಜೀವನ’. ಅಶಿಕ್ಷಿತನಾದ ಆತನ ಬಾಯಿಯಿಂದ ಕೇಳಿದ ಕತೆಗೆ ಲೇಖಕ ಬೆನ್ಯಾಮಿನ್ ಅವರು ಕಾದಂಬರಿಯ ರೂಪ ಕೊಟ್ಟಿದ್ದಾರೆ. ಈ ಕಾದಂಬರಿಯು ಬೆನ್ಯಾಮಿನ್ ಅವರಿಗೆ ಅಪಾರ ಜನಪ್ರಿಯತೆ – ಕೀರ್ತಿಗಳನ್ನು ತಂದು ಕೊಟ್ಟಿದೆ.
ಕೇರಳದಲ್ಲಿ ಮರಳುಗಾರಿಕೆಯ ಕಾರ‍್ಮಿಕನಾಗಿ ದುಡಿಯುತ್ತಿದ್ದ ನಜೀಬ್ ಎಂಬ ಬಡ ಯುವಕ, ತನ್ನ ಸ್ನೇಹಿತನ ಸಂಬಂಧಿಯ ಮೂಲಕ ಸಿಕ್ಕಿದ ವೀಸಾದ ಸಹಾಯದಿಂದ ಸಂಪಾದನೆ ಮಾಡುವ ಕನಸು ಕಾಣುತ್ತ ಸೌದಿ ಅರೇಬಿಯಕ್ಕೆ ಹೊಗುತ್ತಾನೆ. ಅವನ ಜತೆಗೆ ಅಲ್ಲಿಗೆ ಹೋಗಲು ಆಗಲೇ ವೀಸಾ ಪಡೆದುಕೊಂಡಿದ್ದ ಹಕೀಮ್ ಎಂಬ ಜತೆಗಾರನೂ ಸಿಗುತ್ತಾನೆ. ರಿಯಾದ್‌ನಲ್ಲಿ ವಿಮಾನದಿಂದಿಳಿದ ಅವರಿಬ್ಬರೂ ವಿಮಾನ ನಿಲ್ದಾಣದಲ್ಲಿ ಯಾರಿಗಾಗಿಯೋ ಕಾಯುತ್ತಿರುವಂತೆ ಕಂಡ ಅರಬಿಯನ್ನು ಕಂಡು ಆತನೇ ತಮ್ಮನ್ನು ಸ್ಪಾನ್ಸರ್ ಮಾಡಿದ ವ್ಯಕ್ತಿಯೆಂದು ತಪ್ಪಾಗಿ ತಿಳಿಯುತ್ತಾರೆ. ಭಾಷೆ ಗೊತ್ತಿಲ್ಲದ್ದರಿಂದ ಸಂವಹನ ಮಾಡಲಾಗದೆ ಇಬ್ಬರೂ ಆ ಅರಾಬ್ ( ಸಾಹುಕಾರ) ಜತೆಗೆ ಹೋಗಿಯೇ ಬಿಡುತ್ತಾರೆ. ಆದರೆ ಅವರು ಹೋಗಿ ತಲುಪಿದ್ದು ಎರಡು ಭಿನ್ನ ‘ಮಸ್ರಾ’( ತೋಟ) ಗಳಿಗಾಗಿತ್ತು.
ತೀರಾ ದುರ್ಗಂಧಗಳಿಂದ ತುಂಬಿದ್ದ ಕೊಳಕು ಪರಿಸರದಲ್ಲಿ ಅವರಿಬ್ಬರೂ ಬೇರೆ ಬೇರೆ ಪ್ರದೇಶಗಳಲ್ಲಿ ಆಡುಗಳನ್ನೂ ಒಂಟೆಗಳನ್ನೂ ನೋಡಿಕೊಳ್ಳುವ ಕೆಲಸ ಮಾಡ ಬೇಕಾಗಿತ್ತು. ಕ್ರೂರ ಅರಬಾಬ್ ಅವರನ್ನು ಕತ್ತೆಗಳಂತೆ ದುಡಿಸಿಕೊಂಡು, ವಿರೋಧಿಸಿದರೆ ಹೊಡೆದು ಬಡಿದು ಮಾಡಿ ಶೋಷಿಸುತ್ತಾನೆ. ನಜೀಬ್ ಅಲ್ಲಿಗೆ ಹೋದಾಗ ಅಲ್ಲಿ ಇನ್ನೊಬ್ಬ ಕೆಲಸಗಾರನೂ ಇದ್ದ. ವರ್ಷಗಟ್ಟಲೆ ಧೀರ್ಘ ಕಾಲದ ಗುಲಾಮಗಿರಿಯು ಅವನನ್ನು ಒಂದು ಭೀಕರ ರೂಪಿಯನ್ನಾಗಿ ಮಾಡಿತ್ತು. ನಜೀಬ್ ಬಂದು ಕೆಲವು ಕಾಲವಾದ ನಂತರ ಅವನು ಕಾಣದಾದ. ಮುಂದೆ ಮಸ್ರಾದ ಎಲ್ಲ ಕೆಲಸಗಳೂ ನಜೀಬ್‌ನ ಮೇಲೆ ಬಿದ್ದವು. ಭಾಷೆಯೂ ಗೊತ್ತಿಲ್ಲದೆ ಅವನು ಏಕಾಂಗಿಯಾಗಿ ದಿನಗಳನ್ನು ಕಷ್ಟದಿಂದ ಕಳೆಯುತ್ತಾನೆ. ಹಸಿಹಾಲು ಮತ್ತು ಕುಬೂಸ್ ಅನ್ನುವ ಅರಬಿ ರೊಟ್ಟಿಯೂ ಸ್ವಲ್ಪವೇ ಸ್ವಲ್ಪ ನೀರೂ ಆಗಿದ್ದವು ಅವನಿಗೆ ಸಿಕ್ಕುತ್ತಿದ್ದ ಆಹಾರ.. ವಾಸಿಸಲು ಕೋಣೆಯಾಗಲಿ, ಸ್ನಾನಕ್ಕಾಗಲಿ, ಬದಲಿಸಲು ಬಟ್ಟೆಯಾಗಲಿ ಏನೂ ಸಿಗದ ಪರಿಸ್ಥಿತಿಯಲ್ಲಿ ಅವನ ಸ್ಥಿತಿ ಮೃಗಗಳಿಗಿಂತ ಕಡೆಯಾಗಿತ್ತು. ಹೆಚ್ಚು ದೂರವಿಲ್ಲದ ಇನ್ನೊಂದು ಮಸ್ರಾದಲ್ಲಿ ಅಂಥದೇ ಸ್ಥಿತಿಯಲ್ಲಿದ್ದ ಹಕೀಮನನ್ನು ನಜೀಬ್ ಕೆಲವೊಮ್ಮೆ ಭೇಟಿಯಾಗಲು ಹೋಗುವುದನ್ನು ಅರಬಾಬ್ ಯಾವಾಗಲೂ ತಡೆಯುತ್ತಿದ್ದ.
ಆಡುಗಳಿಗೆ ಊರಿನ ಕಥಾಪಾತ್ರಗಳನ್ನೂ ತನ್ನವರ ಹೆಸರುಗಳನ್ನೂ ಇಟ್ಟು ಅವುಗಳೊಂದಿಗೆ ಮಾತನಾಡುತ್ತ ನಜೀಬ್ ತನ್ನ ಒಂಟಿತನದ ನೋವಿಗೆ ಸಮಾಧಾನ ಹೇಳಿಕೊಳ್ಳುತ್ತಾನೆ. ಈ ನಡುವೆ ಹಕೀಮ್ ಕೆಲಸ ಮಾಡುತ್ತಿದ್ದ ಮಸ್ರಾದಲ್ಲಿ ಇಬ್ರಾಹಿಮ್ ಖಾದರಿ ಎಂಬ ಸೋಮಾಲಿಯದ ಒಬ್ಬ ಪ್ರಜೆ ಕೂಡಾ ಕೆಲಸಕ್ಕೆ ಸೇರುತ್ತಾನೆ. ಹೇಗಾದರೂ ತಪ್ಪಿಸಿಕೊಂಡು ಹೋಗಬೇಕೆಂದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ಹಕೀಮ್ , ಖಾದರಿ ಮತ್ತು ನಜೀಬರಿಗೆ ಒಂದು ಸಣ್ಣ ಸಂಧರ‍್ಭವೊದಗಿ ಬರುತ್ತದೆ. ಮಸ್ರಾದ ಅರಬಾಬ್ ತನ್ನ ಸಂಬಂಧಿಕರ ಮಗಳ ಮದುವೆಯ ಕೆಲಸಗಳಿಗೆ ಹೋಗುತ್ತಿದ್ದ ಅವಕಾಶವನ್ನು ಬಳಸಿಕೊಂಡು ಅವರು ತಪ್ಪಿಸಿಕೊಂಡು ಓಡತೊಡಗುತ್ತಾರೆ. ಮರುಭೂಮಿಯಲ್ಲಿ ಧೀರ್ಘ ದೂರದ ತನಕ ಓಡಿ ಓಡಿ, ಹಸಿವು ನೀರಡಿಕೆಗಳಿಂದ ಹೈರಾಣಾದ ಅವರಿಗೆ ಒಂದೆಡೆ ದಾರಿಯೂ ತಪ್ಪಿ ಹೋಗುತ್ತದೆ. ಓಟದ ನಡುವೆ ಹಕೀಮ್ ದಾಹ ತಡೆಯಲಾರದೆ ಸಾಯುತ್ತಾನೆ. ಮುಂದೆ ಖಾದರ್-ನಜೀಬರಿಗೆ ಒಂದು ಓಯಸಿಸ್ ಕಾಣಸಿಕ್ಕಿ ಅಲ್ಲಿ ದಾಹ ತೀರಿಸಿಕೊಂಡು ಅವರು ಓಟ ಮುಂದುವರೆಸುತ್ತಾರೆ. ಕೊನೆಗೆ ಒಂದು ಹೈವೇಗೆ ಬಂದು ತಲುಪುವಷ್ಟರಲ್ಲಿ ಇಬ್ರಾಹಿಮ್ ಕೂಡಾ ಕಾಣೆಯಾಗಿರುತ್ತಾನೆ. ಹೈವೇಯಲ್ಲಿ ಒಬ್ಬ ಸಭ್ಯ ಅರಬಿ ನಜೀಬ್‌ನನ್ನು ತನ್ನ ಕಾರಿನಲ್ಲಿ ಹತ್ತಿಸಿಕೊಂಡು ಮುಂದಿನ ಪಟ್ಟಣವಾದ ರಿಯಾದ್‌ನ ಬತ್‌ಹಕ್ಕೆ ತಲುಪಿಸುತ್ತಾನೆ.
ಬತ್‌ಹ ತಲುಪಿದ ನಜೀಬ್ ಕುಞಕ್ಕ ಎಂಬವನಲ್ಲಿ ಚಾಕರಿಗೆ ನಿಂತು ಧೀರ್ಘ ಕಾಲದ ಬಳಿಕ ತನ್ನ ಹಿಂದಿನ ಮನುಷ್ಯರೂಪ ಮತ್ತು ಆರೋಗ್ಯವನ್ನು ಮರಳಿ ಪಡೆಯುತ್ತಾನೆ. ಊರಿಗೆ ಹಿಂದಿರುಗಲು ಪೋಲಿಸರಿಗೆ ವಿಷಯ ತಿಳಿಸಲಾಗುತ್ತದೆ. ಹಾಗೆ ಷುಮೇಸಿಯ ಸೆರೆಮನೆಯಲ್ಲಿ ಕೆಲವು ತಿಂಗಳುಗಳು ಕಳೆದ ನಂತರ ಒಂದು ದಿನ ನಜೀಬನ ಅರಬಾಬ್ ಕಳೆದು ಹೋದ ತನ್ನ ಗುಲಾಮರನ್ನು ಅರಸಿಕೊಂಡು ಬರುತ್ತಾನಾದರೂ ನಜೀಬನನ್ನು ಹಿಡಿದೊಯ್ಯುವುದಿಲ್ಲ, ಯಾಕೆಂದರೆ ಅವನ ವೀಸಾದಲ್ಲಿದ್ದ ವ್ಯಕ್ತಿ ನಜೀಬ್ ಆಗಿರಲಿಲ್ಲ. ಮುಂದೆ ಭಾರತೀಯ ದೂತಾವಾಸವು ಕೊಟ್ಟ ಔಟ್ ಪಾಸಿನ ಮೂಲಕ ನಜೀಬ ಊರಿಗೆ ತಲುಪುತ್ತಾನೆ.
ವ್ಯಕ್ತಿಯೊಬ್ಬನ ನಿಜ ಅನುಭವವನ್ನು ಆಧರಿಸಿ ಬರೆದದ್ದಾದರೂ ಇದು ಬರೇ ಒಂದು ಜೀವನ ಕಥೆಯಲ್ಲ. ಕಾದಂಬರಿಯ ನಜೀಬ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಬದುಕನ್ನು ಮುಂದುವರಿಸಬೇಕೆಂಬ ಇಚ್ಛಾಶಕ್ತಿ ಇದ್ದವನಾಗಿದ್ದರೆ ನಿಜ ಬದುಕಿನ ನಜೀಬ್ ಮರುಭೂಮಿಯಲ್ಲಿದ್ದಾಗ ಹಲವು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದವನೇ ಆಗಿದ್ದ. ಬದುಕಿನ ಬಗ್ಗೆ ಜುಗುಪ್ಸೆ ಹೊಂದಿದ್ದ. ರಿಯಾದಿನಲ್ಲಿ ಕಾಲೂರಿದ ದಿವಸದಿಂದ ಕಾದಂಬರಿಯಲ್ಲಿ ನಮೂದಿಸಿರುವ ೧೯೯೨ ಏಪ್ರಿಲ್ ೪ರಂದೇ ತಾನು ಅಲ್ಲಿಗೆ ಹೋಗಿ ತನ್ನ ವಲಸೆ ಬದುಕನ್ನು ಆರಂಭಿಸಿದ್ದೆಂದೂ ಲೇಖಕರು ಹೇಳುತ್ತಾರೆ. ಸೊಗಸಾದ ನಿರೂಪಣೆ, ಓದುಗರ ಕಣ್ಣುಗಳನ್ನು ಹನಿಗೂಡಿಸುವ ಸಂಕಟ ಮತ್ತು ಸಂಕಷ್ಟಗಳ ವಿವರಗಳು, ಅನುಭವ ಸಾಂದ್ರವಾದ ಕಥಾವಸ್ತು, ತನಿಮಲೆಯಾಳದ ಸೊಗಡುಗಳು ಮೇಳೈಸಿ ನಿಂತ ಕಾದಂಬರಿ ಇದು. ಡಾ.ಅಶೋಕ ಕುಮಾರ್ ಅವರ ಅನುವಾದ ಮೂಲಕ್ಕೆ ನಿಷ್ಠವಾಗಿದೆ.
********************************************************
ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಆಡುಜೀವನದ ಚಿಕ್ಕ ಚೊಕ್ಕ ನಿರೂಪಣೆ ನೀಡಿ ಆಸಕ್ತ ಓದುಗರತ್ತ ಅನುವಾದ ಸುಗಂಧವನ್ನು ಪಸರಿಸುತ್ತಿರುವ ತಮಗೆ ಧನ್ಯವಾದಗಳು ಮೇಡಮ್ .