ಅಂಕಣ ಬರಹ

ಹೊದಬನಿ-ಹೊಸದನಿ-14

ಅಗತ್ಯಕ್ಕಿಂತ ಲಂಬಿಸಿಯೂ ಹ್ರಸ್ವವಾಗೇ

ಉಳಿಯುವ ಆಸ್ಪರಿಯವರ ಕವಿತೆಗಳು

ಚನ್ನಬಸವ ಆಸ್ಪರಿ

.

ಅವ್ವನೂ ಕಸೂತಿ ಹಾಕುತ್ತಿದ್ದಳು

ಅಪ್ಪನ ತೂತುಬಿದ್ದ ಬನಿಯನ್ನಿನ ಮೇಲೆ

ಉಟ್ಟರೆ ಅಂಡು ಕಾಣಿಸುವ ನನ್ನ ದೊಗಲೆ ಚಡ್ಡಿಗೆ

ಅಲ್ಲಲ್ಲಿ ಹರಿದ ಪಾಟೀಚೀಲಕ್ಕೆ

ಎಂದು ತನ್ನೊಳಗಿನ ಸಂಕಟಗಳನ್ನು ಕವಿತೆಯಾಗಿಸುವ ಚನ್ನಬಸವ ಆಸ್ಪರಿ ಫೇಸ್ಬುಕ್ಕಿನಲ್ಲಿ ಬರೆಯುತ್ತಿರುವ ಹಲವು ಹೆಸರುಗಳ ನಡುವೆ ಅನುಭವದ ಆಧಾರ ಪಡೆದ ಸಶಕ್ತ ಕವಿತೆಗಳನ್ನು  ಅಪರೂಪಕ್ಕೆ ಪ್ರಕಟಿಸುತ್ತಿರುತ್ತಾರೆ. ನಾವೆಲ್ಲ ಅವ್ವ ಎನ್ನುವ ಕವಿತೆಯ ಸರ್ವ ಸ್ವಾಮ್ಯವನ್ನೂ ಲಂಕೇಶರಿಗೆ ಅರ್ಪಿಸಿಬಿಟ್ಟಿರುವಾಗಲೂ ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಕಾಡುವ ಕಾಪಾಡಿದ ಅವ್ವನ ನೆನಪು ಅನನ್ಯ. ಅಸ್ಪರಿಯವರ ಈ ಕವಿತೆ ಅವಧಿಯಲ್ಲೂ ಪ್ರಕಟವಾಗಿತ್ತು. ಈ ಪದ್ಯದಲ್ಲೇ ಕವಿ ತಾಯಿಯನ್ನು ಹೀಗೂ ಕಾಣುತ್ತಾನೆ;

ನಂಜನೇ ಬಳುವಳಿಯಾಗಿ ಕೊಟ್ಟವರ

ಅಳುವ ಕೊರಳಿಗೂ

ಸಾಂತ್ವನದ ಹೆಗಲೊಡ್ಡಿದ ಅವ್ವ

ಶಿಲುಬೆಗಂಟಿದ ಹನಿ ಹನಿ ರಕ್ತದಲೂ

ಅಂತಃಕರಣದ ಕಡುಲಿಕ್ಕಿಸಿದ ಏಸು

ಅವರಿವರ ಬದುಕು ಸಿಂಗರಿಸುತ್ತಲೇ

ಕಾಲನ ಪಾದದಡಿ ನರಳಿದ

ಪಾಪದ ಹೂ

ಎಂದು ಬರೆಯುವಾಗ “ಪಾಪದ ಹೂ” ಎಂದು ಯಾಕಾಗಿ ಬರೆದರೋ ಏನೋ, ಹೊಸ ಕಾಲದ ಹುಡುಗರು ತಾವು ಬಳಸಿದ ಶಬ್ದಗಳ ಬಗ್ಗೆ ತುಂಬಾ ಎಚ್ಚರದಲ್ಲಿರುವ ಅಗತ್ಯತೆ ಇದ್ದೇ ಇದೆ. ಪ್ರಾಯಶಃ ಲಂಕೇಶರು ಬೋದಿಲೇರನನ್ನು ಅನುವಾದಿಸಿದ್ದ ಪಾಪದ ಹೂ ಎನ್ನುವ ಶೀರ್ಷಿಕೆ ಈ ಕವಿಗೆ ತಕ್ಷಣಕ್ಕೆ ಹೊಳೆದಿರಬೇಕು.

ಶ್ರೀ ಚನ್ನಬಸವ ಆಸ್ಪರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರಟಗಿಯವರು. ವೃತ್ತಿಯಿಂದ ಪ್ರೌಢ ಶಾಲಾ ಆಂಗ್ಲ ಭಾಷಾ ಶಿಕ್ಷಕ. ಪ್ರಸ್ತುತ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿ.ಅನುವಾದದಲ್ಲಿ ವಿಶೇಷ ಆಸಕ್ತಿ.ವಿಶ್ವವಾಣಿ, ವಿಜಯ ಕರ್ನಾಟಕ, ಅವಧಿ ಪತ್ರಿಕೆಗಳಲ್ಲಿ ಬಿಡಿ ಕವಿತೆಗಳು ಪ್ರಕಟವಾಗಿವೆ.ಸಂಕ್ರಮಣ ಕಾವ್ಯ ಪುರಸ್ಕಾರ ಹಾಗೂ ಪ್ರತಿಲಿಪಿ ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.

ಇಲಾಖೆಯಿಂದ ಪೂರ್ವಾನುಮತಿ ಪಡೆದು ಪಾರ್ಟ್ ಟೈಮ್ ಕ್ಯಾಂಡಿಡೇಟ್ ಆಗಿ ಪಿ.ಹೆಚ್.ಡಿ.ಮಾಡುತ್ತಿರುವ ಇವರು ಪಿ.ಯು.ಉಪನ್ಯಾಸಕರ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗಂಗಾವತಿ ತಾಲೂಕಿನ ಶ್ರೀರಾಮನಗರದ ಸರಕಾರಿ ಪ.ಪೂ.ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮೊದಲನೇ ರ್ಯಾಂಕ್ ಪಡೆದ ಪ್ರತಿಭಾಶಾಲಿ,  ಸರ್ಕಾರಿ ನೌಕರಿ ಸೇರಿದ ಕೂಡಲೇ ಸಂಬಳ ಸಾರಿಗೆ ಇಂಕ್ರಿಮೆಂಟೆಂದು ಲೆಕ್ಕ ಹಾಕುತ್ತ ಕಳೆದೇ ಹೋಗುವ ಬದಲು ಇಲಾಖೆಯು ಒದಗಿಸಿರುವ ಅವಕಾಶವನ್ನು ಉಪಯೋಗಿಸಿಕೊಂಡ ಮಾದರಿ ಯುವಕ.

ಕವಿತೆ ಬರೆಯುವುದೆಂದರೆ ಶಬ್ದದ ಧಾರಾಳ ಬಳಕೆ ಮತ್ತು ವಾಚಾಳಿತನವೇ ಆಗುತ್ತಿರುವ ಹೊತ್ತಲ್ಲಿ ಈ ಕವಿ ಶಬ್ದಗಳ ಶಬ್ದದ ಸಂತೆಯೊಳಗೂ ಮೌನವನ್ನು ಹುಡುವುದು ವಿಶೇಷ ಲಕ್ಷಣವೇ ಆಗಿದೆ. ಮಾತಾಗದೇ ಹೊರಬರಲು ಕಾತರಿಸಿ

ಮಾತಾಗಿ ಹೆಗಲು ನೀಡದ

ಮೌನವಾಗಿ ತಬ್ಬಿ ರಮಿಸದ

ಎಡಬಿಡಂಗಿ ಶಬ್ದಗಳ

ಹಡೆದ ಮನಸಿಗೆ

ಗೊತ್ತಾಗಲಿಲ್ಲವೇ

ಗಂಡಾಗಿ ಗುಡುಗದ

ಹೆಣ್ಣಾಗಿ ಮರುಗದ

ತನ್ನ ಸಂತಾನ ಕೇವಲ

ಚಟದ ಫಲವೆಂದು?

ಎಂದೆನ್ನುವಾಗ ಮಾತ ಪಾತಳಿಯ ಅಸ್ತಿವಾರವನ್ನೇ ಅಲುಗಿಸಿ ಆಳದಾಳದ ಗೊಂದಲವನ್ನು ಹೊರಹಾಕುತ್ತಾರೆ ಮತ್ತು ಕವಿತೆಯ ಅಂತ್ಯದಲ್ಲಿ ಶಬ್ದಕೆ ಅಂಟದ ಮಾತು ನಿಶ್ಯಬ್ದ ಮೀರಿದ ಮೌನ ದಾಟಬಹುದು ಅಂತಃಕರಣದ ನಾವೆ ಎದೆಯಿಂದ ಎದೆಗೆ ಎನ್ನುತ್ತಾರಲ್ಲ ಅದು ಸುಲಭಕ್ಕೆ ಸಿಗದ ಸಾಮಾನ್ಯ ಸಂಗತಿಗೆ ನಿಲುಕದ ವಸ್ತುವೂ ಆಗಿದೆ.

ಬೋಧಿಯಿಂದ ಬುದ್ಧನಿಗೆ ಜ್ಞಾನವೋ

ಬುದ್ಧನಿಂದ ಬೋಧಿಗೆ ಮುಕ್ತಿಯೋ !

ಹಸನು ದಾರಿಯಲಿ ನಡೆದವನದಿರಲಿ

ನಡೆದ ದಾರಿಯನೇ ಹಸನುಗೊಳಿಸಿದವನ

ಪಾದ ಧೂಳಿಗೂ ಮುಕ್ತಿ

ಎಂದು “ಮುಕ್ತಿ ಮಾಯೆ” ಎನ್ನುವ ಕವಿತೆಯಲ್ಲಿ ಕಚ್ಚಾ ರಸ್ತೆಯಲ್ಲಿ ನಡೆದೂ ಅದನ್ನೇ ಹಸನು ಮಾಡಿದವನ ಪಾದದ ಧೂಳಿಗೂ ಮುಕ್ತಿ ಸಿಕ್ಕಿತು ಎನ್ನುವಾಗ ಪದ್ಯದ ಆಶಯವನ್ನೇ ಗೊಂದಲದ ಗೂಡಾಗಿಸಿಬಿಟ್ಟಿದ್ದಾರೆ. ಇದು ಸಹಜವಾಗಿ ಆಗುವ ತಪ್ಪು. ಕವಿಯೊಬ್ಬ ತಾನು ಬರೆದುದನ್ನು ಕೆಲವು ದಿನ ಹಾಗೇ ಬಿಟ್ಟು ಕೆಲ ದಿದ ನಂತರ ಅದು ತನ್ನ ರಚನೆಯೇ ಅಲ್ಲವೆಂದುಕೊಂಡು ಓದಿದರೆ ತಪ್ಪು ಕಾಣಿಸುತ್ತದೆ. ಬರೆದ ಕೂಡಲೇ ಪ್ರಕಟಿಸಿ ಬಿಡುವ ಅವಸರ ಈ ಬಗೆಯ ತಪ್ಪನ್ನು ಮಾಡಿಸಿ ಬಿಡುತ್ತದೆ.

ನನ್ನ ಮುಖದ ಮೇಲೆ

ಥೇಟ್ ಅಪ್ಪನದೇ ಮೂಗು

ತುಟಿಗಳಿಗೆ ಅವ್ವನದೇ ನಗು

ಅವೇ ಚಿಕ್ಕ ಕಣ್ಣುಗಳು

ಚಿಕ್ಕಪ್ಪನಿಗಿರುವಂತೆಯೇ

ಮಾತಿನಲಿ ಅಜ್ಜನದೇ ಓಘ

ನಡೆದರೆ ಸೋದರಮಾವನ ಗತ್ತು

ನನ್ನದೇನಿದೆ? ಎನ್ನುವ ಕವಿತೆಯ ಸಾಲುಗಳು ಈ ಕವಿಯ ಭಿನ್ನ ಧ್ವನಿಗೆ ಪುರಾವೆಯಾಗಿವೆ. ಈ ನಡುವೆ ಅದರಲ್ಲೂ ಈ ಎಫ್ಬಿಯಲ್ಲಿ ಪದ್ಯಗಳೆಂದು ಪ್ರಕಟವಾಗುವ ೯೦% ಪದ್ಯಗಳು ಸ್ವಕ್ಕೆ ಉರುಳು ಹಾಕಿಕೊಳ್ಳುತ್ತಿರುವಾಗ ಈ ಕವಿ ತನ್ನ ಅಸ್ತಿತ್ವ ಅನ್ಯರ ಪ್ರಭಾವದಿಂದ ಆದುದು ಎಂಬ ಪ್ರಜ್ಞೆಯಿಂದ ಆದರೆ ಅದನ್ನು ನೆಗೆಟೀವ್ ಅರ್ಥದಲ್ಲಿ ಹೇಳದೇ ಇರುವುದು ಭಿನ್ನತೆ ಅಲ್ಲದೇ ಮತ್ತಿನ್ನೇನು?

ಹುಟ್ಟು ಪಡೆವ ಜೀವಕ್ಕೆ

ನೀಗದ ಪರಿಪಾಟಲು

ಜೀವ ಪಡೆವ ಕವಿತೆಗೆ

ಸಾವಿರ ಸವಾಲು

ಎಂದು ಸ್ಪಷ್ಟವಾಗಿ ಅರಿತಿರುವ ಈ ಕವಿಗೆ ಕವಿತೆಯ ರಚನೆ ಸುಲಭದ್ದೇನೂ ಅಲ್ಲ ಎನ್ನುವ ಸತ್ಯ ಗೊತ್ತಿದೆ. ಇದು ಕೂಡ ಅಪರೂಪವೇ. ಸದ್ಯದ ಬಹುತೇಕರು ಪದವೊಂದಕ್ಕೆ ಇರುವ ಅರ್ಥವನ್ನೇ ಅರಿಯದೇ ಚಡಪಡಿಸುತ್ತ ಇರುವಾಗ ಚನ್ನಬಸವ ಆಸ್ಪರಿಯವರು ತಮ್ಮನ್ನು ತಾವೇ ನಿಕಷಕ್ಕೆ ಒಡ್ಡಿ ಕೊಳ್ಳುತ್ತ ಪದ್ಯರಚನೆಯ ಸಂದರ್ಭ ಮತ್ತು ಸಮಯ ಅರಿತವರೂ ಹೌದೆಂದು ಇದು‌ ಪುರಾವೆ ನೀಡಿದೆ.

ಬುದ್ಧ ಕತ್ತಲು ಮತ್ತು ದೀಪಗಳ ಜೊತೆಗೆ ತನ್ನ ಒಳಗನ್ನು ತೋಯಿಸಿದ ಕುರಿತೇ ಪದ್ಯವನ್ನಾಗಿ ಬೆಳಸುವ ಆಸ್ಪರಿ ಒಮ್ಮೊಮ್ಮೆ ತೀವ್ರ ವಿಷಾದದ ಸುಳಿಗೂ ಸಿಕ್ಕಿ ಬೀಳುತ್ತಾರೆ ಮತ್ತು ಆ ಅಂಥ ಸುಳಿಯಿಂದ ಹೊರಬರುವುದು ದುಸ್ತರ ಎನ್ನುತ್ತಲೇ ಕಡು ಕಷ್ಟದ ಬದುಕು ತೋರುಗಾಣಿಸಿದ ಬೆಳಕ ದಾರಿಯನ್ನೂ ಸ್ಮರಿಸುತ್ತಾರೆ. ತನ್ನೊಳಗನ್ನೇ ಶೋಧಿಸದೇ ಅನ್ಯರ ಹುಳುಕನ್ನು ಎತ್ತಿಯಾಡುವ ಕಾಲದಲ್ಲಿ ಇದು ಭಿನ್ನ‌. ಆದರೂ ಅಗತ್ಯಕ್ಕಿಂತ ಹೆಚ್ಚು ವಿಸ್ತರಿಸುವ ಇವರ ಕವಿತೆಗಳಿಗೆ  ಸಂಕಲನಕ್ಕೆ (ಕತ್ತರಿ ಪ್ರಯೋಗ) ಅಂದರೆ ಅಗತ್ಯಕ್ಕಿಂತ ಉದ್ದವಾದುದನ್ನು ಹ್ರಸ್ವಗೊಳಿಸುವ ಅಗತ್ಯತೆ ಇದ್ದೇ ಇದೆ.

ನಿಜದ ಕವಿತೆಗಳು ಈ ಕವಿಯ ಒಳಗೇ ಉಳಿದಿವೆ. ಪ್ರಾಯಶಃ ಕಂಡ ಕಷ್ಟಗಳು ಉಂಡ ಸಂಕಟಗಳಾಚೆಯೂ ಇರುವ ಸಂತಸವನ್ನೂ ಇವರು  ಹೊರತಾರದೇ ಇದ್ದರೆ ಬರಿಯ ವಿಷಾದದಲ್ಲೇ ಈ ಕವಿತೆಗಳು ನರಳಬಹುದು. ಬದುಕೆಂದರೆ ವಿಷಾದ ಸಂತಸ ಭರವಸೆ ಆಸೆ ನಿರಾಸೆಗಳ ಒಟ್ಟು ಮೊತ್ತ. ಬರಿಯ ದುಃಖಾಗ್ನಿಯೇ ಅಲ್ಲದೆ ಸಂತಸದ ಸಂಭ್ರಮದ ಘಳಿಗೆಯ ದಾಖಲೆಯಾಗಿಯೂ ಇವರ ಕವಿತೆಗಳು ಹೊಮ್ಮಲೇ ಬೇಕಾದ ಅನಿವಾರ್ಯವನ್ನು ಈ ಕವಿ ಅರಿಯುವ ಅಗತ್ಯತೆ ಇದೆ.

ಚನ್ನಬಸವ ಆಸ್ಪರಿಯವರ ಉದ್ದೇಶಿತ ಸಂಕಲನ ಸದ್ಯವೇ ಹೊರ ಬರಲಿದೆಯಂತೆ. ಅದಕ್ಕೂ ಮೊದಲು ಅವರು ಅದರ ಹಸ್ತಪ್ರತಿಯನ್ನು ಪುಸ್ತಕ ಪ್ರಾಧಿಕಾರವು ಪ್ರತಿವರ್ಷ ಕೊಡುವ ಸಹಾಯಧನದ ಯೋಜನೆಯಲ್ಲಿ ಪ್ರಕಟಿಸಿದರೆ ಅವರ ಹೆಸರು ಕರ್ನಾಟಕದ ಉದ್ದಗಲಕ್ಕೂ ಗೊತ್ತಾಗುತ್ತದೆ ಎನ್ನುವ ಆಶಯದೊಂದಿಗೆ ಅವರ ಪದ್ಯಗಳನ್ನು ಕುರಿತ ಈ ಟಿಪ್ಪಣಿಗೆ ಅವರದೇ ಐದು ಕವಿತೆಗಳನ್ನು ಸೇರಿಸಿ ಮುಗಿಸುತ್ತೇನೆ.

೧. ಶಬ್ದ ಸಂತೆಯಲಿ ಮೌನದ ಮೆರವಣಿಗೆ

ಕೆಲವು ಶಬ್ದಗಳು ತುಂಬ ವಿಚಿತ್ರ

ಹೊರಬಂದು

ಮಾತಾಗುವುದೇ ಇಲ್ಲ !

ಕೇವಲ

ತುಟಿ ಕಿನಾರೆಗಳ ಅರಳಿಸಿಯೋ

ಮೂಗು ಮುರಿದೋ

ಹಣೆಗೆರೆಗಳ ಬರೆದೋ

ಕೆನ್ನೆಗುಳಿಗಳಲಿ ನರ್ತಿಸಿಯೋ

ಕಣ್ ಹುಬ್ಬು ಕೊಂಕಿಸಿಯೋ

ಇಲ್ಲಾ

ಕಣ್ಣು ತಿರುವಿಯೋ

ಹೊತ್ತು ತಂದ ಸಂದೇಶ

ರವಾನಿಸಿಬಿಡುತ್ತವೆ

ಅಖಂಡ ಮೌನದಲಿ…

ನಿರುಮ್ಮಳ ನಿದ್ದೆಗೆ ಹಿತದಿಂಬು

ಕೆಲವು ಸಲ

ಮತ್ತೆ ಹಲವು ಸಲ

ಬೂದಿ ಮುಚ್ಚಿದ ಕೆಂಡ

ಕೆಲವೊಮ್ಮೆ

ಶಬ್ದಗಳು ಅಬ್ಬರಿಸುತ್ತವೆ

ಮಾತು ಸೋಲುತ್ತದೆ

ಆದರೂ ಉದುರುತ್ತಲೇ ಹೋಗುತ್ತವೆ

ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ

ಅಹಂಕಾರದ ಕಣ್ಣಾಮುಚ್ಚಾಲೆಯಲಿ

ಮೈಮರೆವ ಮನಸಿಗೆ

ಚಾಟಿ ಏಟು ಯಾವ ಲೆಕ್ಕ?

ಒಮ್ಮೊಮ್ಮೆ ಶಬ್ದಗಳು

ಜಾರುತ್ತವೆ

ನಾಲಗೆಯಿಂದ

ಚಿಮ್ಮುತ್ತವೆ

ಬಾಯಿಂದ

ತಿವಿಯುತ್ತವೆ

ಒಲವ ಹನಿಗೆ ಬಾಯ್ದೆರೆದ

ದೈನೇಸಿ ಎದೆಯನು

ಇಂಥ ಶಬ್ದಗಳ

ಅನಾಯಾಸವಾಗಿ ಹಡೆದು

ಧ್ವನಿಬಟ್ಟೆ ತೊಡಿಸಿ ಸಿಂಗರಿಸಿ

ಮಾತು

ಎಂದು ಹೆಸರಿಟ್ಟು

ತೇಲಿಬಿಟ್ಟ ಮನಸಿಗೆ

ವೇಗ ರಭಸ ದಾರಿ ಗುರಿ

ಯೇ ಗೊತ್ತಿಲ್ಲದಿರುವಾಗ

ಅವು ಹಾದರಕ್ಕೆ ಹುಟ್ಟಿದ

ಮಕ್ಕಳಲ್ಲದೆ ಮತ್ತೇನು?

ಇನ್ನೂ ಕೆಲ ಶಬ್ದಗಳು

ಮೈಮುರಿಯುತ್ತವೆ

ಆಕಳಿಸುತ್ತವೆ

ತೂಕಡಿಸುತ್ತವೆ

ಜೋಲಿ ಹೊಡೆಯುತ್ತಲೇ

ನಾಲಿಗೆ ಪಲ್ಲಂಗದಲ್ಲಿ

ಪವಡಿಸುತ್ತವೆ

ಮತ್ತೆ ಕೆಲವು

ಗಂಟಲ ಕಣಿವೆಯಲ್ಲಿ

ಜಾರಿ ಬೀಳುತ್ತವೆ

ತುಟಿಸರಹದ್ದುಗಳಲಿ

ಸಿಕ್ಕಿ ನರಳುತ್ತವೆ

ಹಲ್ಲುಗಂಬಗಳಿಗೆ

ನೇಣು ಬಿಗಿದುಕೊಳ್ಳುತ್ತವೆ

ಮಾತಾಗಿ ಹೆಗಲು ನೀಡದ

ಮೌನವಾಗಿ ತಬ್ಬಿ ರಮಿಸದ

ಎಡಬಿಡಂಗಿ ಶಬ್ದಗಳ

ಹಡೆದ ಮನಸಿಗೆ

ಗೊತ್ತಾಗಲಿಲ್ಲವೇ

ಗಂಡಾಗಿ ಗುಡುಗದ

ಹೆಣ್ಣಾಗಿ ಮರುಗದ

ತನ್ನ ಸಂತಾನ ಕೇವಲ

ಚಟದ ಫಲವೆಂದು?

ಹೀಗೂ ಉಂಟು-

ಶಬ್ದಗಳನ್ನು ಒದ್ದು ಹೋದ ಬುದ್ಧ

ಲೋಕದ ಮಾತಾದ

ಬಹುಶಃ ಈ ಲೋಕದ

ಪಾಪಗಳೆಲ್ಲ ತೀರಿದ ದಿನ

ಅಥವಾ

ಮಾಡಿದ ಮಾಡುವ

ಪ್ರತಿ ಪಾಪಕ್ಕೂ

ವಿಮೋಚನಾ ಪತ್ರ

ದೊರೆತೀತೆಂಬ ಭರವಸೆ

ದಕ್ಕಿದ ದಿನ

ಅಥವಾ

ಪಾಪ ಪುಣ್ಯಗಳಾಚೆಯ

ನಿರ್ವಾತದಲ್ಲಿ

ನೆಲೆಯಾದ ದಿನ

ಉದುರಬಹುದು ಶಬ್ದಗಳು

ನಿಶ್ಯಬ್ದದ ಕೂಸುಗಳಾಗಿ

ಮಾರ್ದನಿಸಬಹುದು

ಆತ್ಮಗರ್ಭದಿಂದ

ಶಬ್ದಕೆ ಅಂಟದ ಮಾತು

ನಿಶ್ಯಬ್ದ ಮೀರಿದ ಮೌನ

ದಾಟಬಹುದು

ಅಂತಃಕರಣದ ನಾವೆ

ಎದೆಯಿಂದ ಎದೆಗೆ

            -ಚನ್ನಬಸವ ಆಸ್ಪರಿ

೨.ಮುಕ್ತಿ ಮಾಯೆ

ಕವಿತೆ ಒಡಲಿಂದ ಹಠಾತ್ತನೆ ಕಳಚಿದ

ಅನಾಥ ಸಾಲು

ಭಾವಕ್ಕೆ ಭಾರವೇ?

ಮುಕ್ತಿ ಕವಿತೆಗೋ

ದೈನೇಸಿ ಪದಗಳಿಗೋ !

ಟೊಂಗೆ ತೋಳಿಂದ ಹಗುರ ಕುಸಿದ

ಹಣ್ಣೆಲೆ

ಮರಬಸಿರಿಗೆ ಭಾರವೇ?

ಮುಕ್ತಿ ಟೊಂಗೆಗೋ

ಹಣ್ಣೆಲೆಯ ಜೀವಕೋ !

ಗಾಳಿ ಉಸಿರಿಂದ ಸರಕ್ಕನೆ ಸೂತ್ರ ಹರಿದ

ಗಾಳಿಪಟ

ದಾರಕ್ಕೆ ಭಾರವೇ?

ಮುಕ್ತಿ ಆಕಾಶಕ್ಕೋ

ತಲೆಮರೆಸಿಕೊಂಡ ಗಾಳಿಪಟಕ್ಕೋ !

ಬಾನಗೊಂಚಲಿಂದ ಧುತ್ತನೆ ಉದುರಿದ

ನಕ್ಷತ್ರ

ಬೆಳಕಿಗೆ ಭಾರವೇ?

ಮುಕ್ತಿ ಬೆಂಕಿಗೋ

ಕುದಿಕುದಿದು ಆರಿದ ನಕ್ಷತ್ರದೊಡಲಿಗೋ !

ಬೋಧಿಯಿಂದ ಬುದ್ಧನಿಗೆ ಜ್ಞಾನವೋ

ಬುದ್ಧನಿಂದ ಬೋಧಿಗೆ ಮುಕ್ತಿಯೋ !

ಹಸನು ದಾರಿಯಲಿ ನಡೆದವನದಿರಲಿ

ನಡೆದ ದಾರಿಯನೇ ಹಸನುಗೊಳಿಸಿದವನ

ಪಾದ ಧೂಳಿಗೂ ಮುಕ್ತಿ

                           -ಚನ್ನಬಸವ ಆಸ್ಪರಿ

೩. ಅವ್ವ ಎಂಬ ರೇಖಾಚಿತ್ರ

ಅವ್ವ

ಆಡಿ ಬಂದ ನನ್ನ ಅಂಗಾಲ ತೊಳೆಯಲಿಲ್ಲ

ಕೇಕು ಕತ್ತರಿಸಿ ಮೋಂಬತ್ತಿ ಆರಿಸುವ

ನನ್ನ  ಸಂಭ್ರಮಕ್ಕೆ ಸಾಕ್ಷಿಯಾಗಲಿಲ್ಲ

ಅಪ್ಪ ಮನೆ ಕಟ್ಟಲಿಲ್ಲ

ಅವ್ವ ಮನೆಯ ಗೌಡತಿ ಆಗಲಿಲ್ಲ

ಗುಳೇ ಹೊರಟ ಅಪ್ಪನ ಹಿಂದೆ

ಗಂಟು ಮೂಟೆ ಕಟ್ಟಿ

ಊರೂರು ಅಲೆದಳು

ಮರುಮಾತನಾಡದೆ

ಸಾಕಿದ ನಾಯಿ ಯಜಮಾನನ್ನು ಹಿಂಬಾಲಿಸಿದಂತೆ

ಸುಮ್ಮನೆ ಬಾಲ ಅಲ್ಲಾಡಿಸಿಕೊಂಡು

ಅಪ್ಪನಿಗೆ ಬಣ್ಣ ಬಣ್ಣದ ನಿಲುವಂಗಿ ತೊಡಿಸಿ

ತಾನೇ ಬಣ್ಣದ ಪತಂಗವಾಗುತ್ತಿದ್ದ

ಅವ್ವನ ಮಾಸಿದ ಸೀರೆ ಸೆರಗಿನ ತುಂಬ

ಹಳಸಿದೆದೆಯ ಕನಸುಗಳು

ಉಳಿದರ್ಧ ಬದುಕು

ನೀರ ಮೇಲೆ ತೇಲಿ ಬಿಟ್ಟ

ಬಾಗಿನಕ್ಕೆ ಮಾಡಿದ ಸಿಂಗಾರ

ಅವ್ವನೂ ಕಸೂತಿ ಹಾಕುತ್ತಿದ್ದಳು

ಅಪ್ಪನ ತೂತುಬಿದ್ದ ಬನಿಯನ್ನಿನ ಮೇಲೆ

ಉಟ್ಟರೆ ಅಂಡು ಕಾಣಿಸುವ ನನ್ನ ದೊಗಲೆ ಚಡ್ಡಿಗೆ

ಅಲ್ಲಲ್ಲಿ ಹರಿದ ಪಾಟೀಚೀಲಕ್ಕೆ

ಪುಸ್ತಕದಲ್ಲಿಟ್ಟ ನವಿಲುಗರಿ

ಇನ್ನೂ ಮರಿ ಹಾಕಿಲ್ಲ

ಪಾಟೀಚೀಲದ ಹೊಲಿಗೆಗಂಟಿದ

ಅವ್ವನ ಬೆರಳ ತುದಿಯ ಬಿಸಿ

ಇನ್ನೂ ಆರಿಲ್ಲ

ನಂಜನೇ ಬಳುವಳಿಯಾಗಿ ಕೊಟ್ಟವರ

ಅಳುವ ಕೊರಳಿಗೂ

ಸಾಂತ್ವನದ ಹೆಗಲೊಡ್ಡಿದ ಅವ್ವ

ಶಿಲುಬೆಗಂಟಿದ ಹನಿ ಹನಿ ರಕ್ತದಲೂ

ಅಂತಃಕರಣದ ಕಡುಲಿಕ್ಕಿಸಿದ ಏಸು

ಅವರಿವರ ಬದುಕು ಸಿಂಗರಿಸುತ್ತಲೇ

ಕಾಲನ ಪಾದದಡಿ ನರಳಿದ

ಪಾಪದ ಹೂ

ವಿಚಿತ್ರ ನರಳಿಕೆಗಳನುಂಡು ತೇಗುವ

ವಾರ್ಡಿನ ಬಿಳಿ ಗೋಡೆಗಳ ಮಧ್ಯೆ

ಮಗನ ಕೈ ನೇವರಿಸಿ

ಹುಸಿನಗೆಯ ಮಿಂಚು ಹಾರಿಸುವ

ಅವ್ವನ ಅರೆ ತೆರೆದ ಕಂಗಳು

ಆಕಾಶಕ್ಕೆ ಜೋತುಬಿದ್ದ

ಜೋಡಿ ನಕ್ಷತ್ರಗಳು

ಅವ್ವನೆಂದರೆ

ಕರುಳ ಸೀಳು ಸೀಳುಗಳಲಿ

ಓಡುವ ಕಕ್ಕುಲಾತಿಯ ನದಿ

ಮಡಿಲ ಕುಡಿಗಳ ಸಲಹುತ್ತ

ಎಲುವು ಕೀಲುಗಳ ಸಂದು ಗೊಂದಿನಲಿ

ಸೋರಿ ಹೋದ ಯೌವನ

ಅವ್ವ ಎಂದರೆ

ಬದುಕು ಹೊಸೆದ ಬತ್ತಿ

ಬೆಳಕದ್ರವ್ಯದಲಿ ಕರುಳ ಬಳ್ಳಿಯ ಕಾಯ್ದು

ಉರಿದುಹೋದ ಪಣತಿ

ಎಲ್ಲ ಹೇಳಿಯೂ

ಏನೂ ಹೇಳಿಯೇ ಇಲ್ಲವೆಂದೆನಿಸುವ

ಮಾತಿನ ಚೌಕಟ್ಟಿಗೆ ಸಿಗದ

ಅವ್ವ

ನನ್ನ ಪಾಲಿಗಿನ್ನೂ

ಅಸ್ಪಷ್ಟ ಆಕೃತಿ

ಶಾಲೆಯ ವಿರಾಮದ ಘಳಿಗೆಯಲ್ಲಿ 

ಹುಡುಗ

ಬಿಳಿ ಹಾಳೆಯ ಮೇಲೆ ಗೀಚಿದ

ತೃಪ್ತಿಯಾಗದ್ದಕ್ಕೆ

ಹಾಗೆಯೇ ಮುದ್ದೆ ಮಾಡಿ

ಡಸ್ಟ್ ಬಿನ್ನಿಗೆ ಎಸೆದ

ರೇಖಾಚಿತ್ರ

೪. ಕವಿತೆ ಹಡೆವುದು ಹಗುರದ ಮಾತಲ್ಲ

ವಕ್ರ ಬಾಲದ ಶುಕ್ರ ಬಾಣಗಳು

ಮಿಲಿಯಗಟ್ಟಲೆ ಸೇರಿ

ಎದ್ದೆವೋ ಬಿದ್ದೆವೋ ಎಂದು

ಅವುಡುಗಚ್ಚಿ

ಓಡುತ್ತಲೇ ಇರುತ್ತವೆ

ಅಂಡಾಣು ಕೋಟೆಯ ಭೇದಿಸಿ

ಹೊಕ್ಕುಳ ಬಳ್ಳಿಗೆ

ಜೀವಕಣವಾಗಿ ಕಣ್ಬಿಡಲು

ಕಂಡು ಕೇಳಿದ

ಮುಟ್ಟಿ ಮೂಸಿದ

ಸಾವಿರ ಸಾವಿರ

ವಿಚಾರ ತೆರೆಗಳು

ದುಬುಗುಡುತ್ತ

ಮೆದುಳ ದಂಡೆಗೆ

ಅಪ್ಪಳಿಸುತ್ತಲೇ ಇರುತ್ತವೆ

ಎದೆ ಬಳ್ಳಿಯಲಿ ಅರಳಿ

ಪದ ಬೆರಗುಗಳಾಗಿ

ಮೆರುಗು ಪಡೆಯಲು

ಜೀವಬೀಜಗಳ ಓಟದಲಿ

ನಾ ಮುಂದು ತಾ ಮುಂದು

ಬಾಜಿ ಕಟ್ಟಿದವರಂತೆ

ಹಪಹಪಿಸಿ ಓಡಿ

ಉಳಿದವೆಲ್ಲ ಸೋತು

ಒಂದೇ ಒಂದು ಸರಕ್ಕನೆ

ಒಳನುಗ್ಗಿ

ನಾಳದೊಳಗಿಳಿದು

ಪುಳಕ್ಕನೆ

ಅಂಡದೊಳಗೆ ಬೆರೆತರೆ

ಆಟ ಮುಗಿದಂತಲ್ಲ

ಜಿದ್ದಿನ ಕಾಳಗದಲಿ

ಕೊಬ್ಬಿದ ಕಲ್ಪನೆ

ಗೆಲುವ ಗರಿ ಮುಡಿಯಲು

ಏದುಸಿರಿನಲಿ ಓಡಿ

ಓರಗೆಯವರನು ಮೀರಿ

ಕುಬ್ಜರ ನೆತ್ತಿ ಹಾರಿ

ಮೆದುಳ ಕವಾಟವ

ಖಟಖಟಿಸಿ ಪುಟನೆಗೆದು

ಮಸ್ತಿಷ್ಕದೊಳು

ತಾನೊಂದೇ ಜಿಗಿದು

ಬುದ್ಧಿ ಪುಷ್ಕರಣಿಯಲಿ

ಮುಳು ಮುಳುಗೆದ್ದರೆ

ಎಲ್ಲ ಮುಗಿದಂತಲ್ಲ

ಭ್ರೂಣ ಬಲಿತು

ಮಜ್ಜೆ ಮೂಳೆಯ

ಮಾಂಸಬಿದಿರಲಿ

ಕೈಕಾಲು ಕಿವಿ ಚಿಗಿತು

ಹೊಟ್ಟೆಯುಬ್ಬು ಹೊಕ್ಕುಳಕುಳಿ

ಮೂಗುಸುರಂಗ ಹೊಳ್ಳೆಗವಿ

ನೆತ್ತಿಶಿಖರ ಕೂದಲಚಿಗುರು

ಚಾಚಿದ ಬೆರಳು ಸಪಾಟು ಉಗುರು

ಕೊರೆದ ಬಾಯಿ ತೆರೆದ ಕಣ್ಣು

ಕಪ್ಪು ಹುಬ್ಬು ಕಾಯ್ವ ರೆಪ್ಪೆ

ಒಪ್ಪವಾಗಿ ಮೂಡಿ

ಕಿಟಾರನೆ ಕಿರುಚಿ

ಹೊರಬೀಳುತ್ತದೆ

ಮಗುವಾಗುತ್ತದೆ

ಪ್ರಸವ ವೇದನೆಯಲಿ

ಬದುಕಾಗುತ್ತದೆ

ಬದುಕಿ ಬಾಳಿದರೆ

ಮನಮಡಕೆ ಮಥಿಸಿ

ಬುದ್ಧಿಕುಲುಮೆಯಲಿ

ಹದವಾಗಿ ಬೆಂದು

ಭಾವಬಾಣಲೆಯಲಿ

ಕೊತ ಕೊತನೆ ಕುದಿದು

ಪದಬೆಲ್ಲದಲಿ ಪಂಕ್ತಿಪಾಕವಾಗಿ

ನುಡಿರಸಾಯನ ಪಲ್ಲವಿಸಿ

ಚರಣಗಳಲಿ ಚೆಲ್ಲಾಡಿ

ಉಪಮೆತೋರಣ ಕಟ್ಟಿ

ಒಳಹೊರಗು ಸಿಂಗರಿಸಿ

ಲಯದ ಲಾಲಿ ಹಾಡಿ

ಕಣ್ಣು ಬಿಡುತ್ತದೆ

ಕವಿತೆಯಾಗುತ್ತದೆ

ಅಕ್ಷರಗಳಚ್ಚರಿಯಲಿ

ಉಸಿರಾಡುತ್ತದೆ

ದಾಟಿದರೆ ಎದೆಯಿಂದ ಎದೆಗೆ

ಹುಟ್ಟು ಪಡೆವ ಜೀವಕ್ಕೆ

ನೀಗದ ಪರಿಪಾಟಲು

ಜೀವ ಪಡೆವ ಕವಿತೆಗೆ

ಸಾವಿರ ಸವಾಲು

೫. ಬುದ್ಧಂ ಶರಣಂ ಗಚ್ಛಾಮಿ

ಬುದ್ಧನೆದೆಯ ಬೆಳದಿಂಗಳ

ಕಿಡಿಯೊಂದ ತಂದು

ನನ್ನ ಮನೆಯ ದೀಪ ಬೆಳಗಿಸಿಟ್ಟೆ

ದೀಪ ಆರಿಹೋಗಿದೆ

ಬೆಳಕು ಬೆಳೆಯುತ್ತಲೇ ಇದೆ

        ******

ಮೈಮರೆಯಬೇಡ

ನಿನ್ನೆ ನಾಳೆಗಳಲಿ

ಬದುಕು ಇಂದನ್ನು

ಪರಿಪೂರ್ಣವಾಗಿ-

ಬುದ್ಧನ ಈ ಮಾತು

ಕೇಳುತ್ತಾ ಕೇಳುತ್ತಾ ಮೈಮರೆತೆ

        ******

 ಬುದ್ಧನನ್ನು ಎದುರುಗೊಂಡ

 ಅವನು ಕೇಳಿದ-

“ಏನಿದೆ ಹೊಸದು  ನಿಮ್ಮಲ್ಲಿ?

ಎಲ್ಲಿ ಹೋದರೂ ಹೇಳಿದ್ದನ್ನೇ ಹೇಳುತ್ತಿದ್ದೀರಿ”

 ಬುದ್ಧ ಮುಗುಳ್ನಕ್ಕು ನುಡಿದ –

 “ನಿಜ ನೀವು ನನ್ನಂತೆಯೇ

 ಮಾಡಿದ್ದನ್ನೇ ಮಾಡುತ್ತಿದ್ದೀರಿ”

         ******

ಗೆಲ್ಲಬೇಕೆಂಬ ಛಲ

ಗೆಲ್ಲದಿದ್ದರೆ ಎಂಬ ಭಯ

ನಡುವೆ ನುಸುಳಿ ಬಂದ

“ಗೆಲ್ಲಲು ಏನಿದೆ ಇಲ್ಲಿ?”

 ಎಂಬ ಬುದ್ಧನ ನಿರ್ಲಿಪ್ತತೆಗೆ

 ಭವದ ಮೂಟೆ ಹಗುರ

         *****************************************

ಡಿ ಎಸ್ ರಾಮಸ್ವಾಮಿ

ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ

Leave a Reply

Back To Top