ಅಂಕಣ ಬರಹ

ಹವ್ಯಾಸವೆಂಬ ಮಂದಹಾಸ…

ಹವ್ಯಾಸಗಳಿಲ್ಲದ ಮನುಷ್ಯನೆಂದರೆ ಎಲೆ ಹೂವು ಹಣ್ಣು ಏನೊಂದೂ ಇಲ್ಲದ ಬೋಳು ಮರವೇ ಸರಿ. ಬದುಕು ದುರ್ಬರವೆನಿಸಿದ ಹೊತ್ತಲ್ಲೂ ಸಹನೀಯತೆ ತರುವ ಶಕ್ತಿ ಇದ್ದರೆ ಅದು ಹವ್ಯಾಸಗಳಿಗೆ ಮಾತ್ರ. ಹೊತ್ತು ಕಳೆಯಲು ವ್ಯರ್ಥ ಅಭ್ಯಾಸಗಳನ್ನು ಮಾಡಿಕೊಳ್ಳುವ ಬದಲು ಸಮಯವನ್ನು ಗೌರವಿಸುವಂತ ಅರ್ಥಪೂರ್ಣ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಹವ್ಯಾಸಗಳು ಬರಿದೆ ಮೂರ್ತಿಗೆ ಮಾಡಿದ ಅಲಂಕಾರದಂತೆ ನಮ್ಮನ್ನು ಚೆಂದಗಾಣಿಸುತ್ತದೆ. ಹವ್ಯಾಸವೆನ್ನುವ ಟಾರ್ಚು ನಮ್ಮ ಕೈಯಲ್ಲಿದ್ದರೆ ಅದು ದಟ್ಟ ಕಾಡಿನ ನಡುವೆಯೂ ಕೈಹಿಡಿದು ನಡೆಸಿ ಗುರಿ ಮುಟ್ಟಿಸಬಲ್ಲದು, ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದು, ನೋವನ್ನು ಮರೆಸಿ ಮಾಯಿಸಬಲ್ಲದು. ವ್ಯಕ್ತಿಯೊಬ್ಬನ ವ್ಯಕ್ತಿತ್ವವನ್ನು ಹವ್ಯಾಸಗಳ ಒರೆಗೆ ಹಚ್ಚುವುದರಿಂದ ಪುಟಕ್ಕಿಟ್ಟ ಚಿನ್ನವೆಂದು ಸಾಬೀತಾಗುತ್ತದೆ. ಸಾಯಲು ನಿಂತವನಲ್ಲೂ ಒಂದು ಸಣ್ಣ ಹಾಡು, ಒಂದು ಸಣ್ಣ ಕವಿತೆ, ಚೆಂದದ ಚಿತ್ರ ಬದುಕುವ ಆಸೆಯನ್ನು ಹುಟ್ಟಿಸುತ್ತದೆಯೆಂದರೆ ಅದರ ಶಕ್ತಿಯನ್ನು ಯಾರಾದರೂ ಊಹಿಸಬಹುದು. ಹವ್ಯಾಸಗಳೆಂದಾಕ್ಷಣ ನಾವದರಲ್ಲಿ ಅತೀತವಾದ್ದೇನನ್ನೋ ಸಾಧಿಸಲೇ ಬೇಕಂತಿಲ್ಲ. ಅದು ನಮ್ಮ ಆತ್ಮ ಸಂತೋಷಕ್ಕೆ ಒದಗಿ ಬಂದರೂ ಸಾಕು.

ಹಳ್ಳಿಗಳಲ್ಲಿ ಅದೆಷ್ಟೋ ಅನಕ್ಷರಸ್ಥರು ತಮಗರಿವಿಲ್ಲದೇ ತಮ್ಮ ವಿರಾಮದ ವೇಳೆಯಲ್ಲಿ ಸೋಬಾನೆ ಪದ ಹಾಡಿಕೊಳ್ಳುವುದು, ಹಸೆ ಹೊಯ್ಯುವುದು, ಜಾನಪದ ಕತೆಗಳನ್ನು ಹೇಳುವುದು, ಕೌದಿ, ದಟ್ಟ ಹೊಲೆಯುವುದು, ಹೊಲಿಗೆ, ಕಸೂತಿ, ರಂಗೋಲಿ, ಹಗ್ಗ ಹೆಣೆಯುವುದು, ಬುಟ್ಟಿ ಹೆಣೆಯುವುದು, ಮನೆ ಮುಂದೆ ಕೈತೋಟ ಮಾಡಿ ಅದರಲ್ಲಿ ನಾನಾ ಬಗೆಯ ಗಿಡಗಳನ್ನು ತಂದು ನೆಟ್ಟು ಬೆಳೆಸುವುದು…. ಇಂತಹ ಅದೆಷ್ಟೋ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ. “ಖಾಲಿ ಮೆದುಳು, ದೆವ್ವದ ಮನೆ” ಎನ್ನುವ ಹಾಗೆ ಖಾಲಿ ಕುಳಿತಾಗ ಅನವಶ್ಯಕ ಚಿಂತೆಗಳು ಮುತ್ತಿ ಆರೋಗ್ಯ ಹಾಳುಮಾಡುತ್ತವೆ. ಇಲ್ಲಾ ದೈಹಿಕ ಮತ್ತು ಮಾನಸಿಕ ನಿಷ್ಕ್ರಿಯತೆಯಿಂದಾಗಿ ದೇಹ ರೋಗಗಳ ಗೂಡಾಗುತ್ತದೆ.

ಹವ್ಯಾಸಗಳನ್ನು ಬೆಳೆಸಿಕೊಳ್ಳಲು ವಯಸ್ಸಿನ ಮಿತಿ ಅಂತ ಏನೂ ಇಲ್ಲ. ನಮ್ಮ ಆಸಕ್ತಿ ಅಭಿರುಚಿಗೆ ಅನುಗುಣವಾಗಿ ಯಾವುದಾದರೂ ಸರಿ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಯಾವುದೇ ವಯಸ್ಸಿನವರಾಗಲೀ ತಮ್ಮ ವಿರಾಮದ ವೇಳೆಯಲ್ಲಿ ಅನವಶ್ಯಕವಾಗಿ ಸಮಯ ಹಾಳುಮಾಡುವ ಬದಲು ಹವ್ಯಾಸಕ್ಕೆಂದು ಬಳಸಿಕೊಂಡರಾಯಿತು. ಈ ಅಭ್ಯಾಸ, ರೂಢಿ, ಚಟ ಎನ್ನುವ ಪದಗಳು ಹವ್ಯಾಸಕ್ಕೆ ಸಮೀಪದಲ್ಲಿದ್ದರೂ ಹವ್ಯಾಸವನ್ನು ಸರಿಯಾಗಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕಿದೆ ನಾವು.

Illustration of children with various hobbies and activities. With a light blue background, characterizes children`s happiness. Being a knight, a musician, a royalty free illustration

ಮಕ್ಕಳು ಏನನ್ನಾದರೂ ಸುಲಭವಾಗಿ ಬಹಳ ಬೇಗ ಕಲಿತುಬಿಡುತ್ತರೆ. ಹಾಗಾಗಿ  ರಜೆಯಲ್ಲಿ ಅವರು ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬಹುದು. ಸ್ವಲ್ಪ ದೊಡ್ಡ ಮಕ್ಕಳಿಗೆ ಸಣ್ಣ ಪುಟ್ಟ ತಿನಿಸು ಪಾನೀಯ ತಯಾರಿಸುವುದನ್ನೂ ಹೇಳಿಕೊಡಬಹುದು. ಮನೆಯನ್ನು ಸ್ವಚ್ಛವಾಗಿ ಒಪ್ಪವಾಗಿ ಇಟ್ಟುಕೊಳ್ಳುವುದು, ಹಿರಿಯರಿಗೆ ಸಹಾಯ ಮಾಡುವುದು, ಸಂಗೀತ,  ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ,  ಕತೆ-ಕವನ ಬರೆಯುವುದು, ಉತ್ತಮ ಪುಸ್ತಕಗಳನ್ನು ಓದುವುದು, ಆಟ ಆಡುವುದು, ಕೃಷಿ, ತೋಟಗಾರಿಕೆ, ಈಜು, ನಾಟಕ, ಯೋಗ, ಭಾಷಣ, ಗೀತಾ ಪಠಣ, ಕರಾಟೆ ಹೀಗೆ ನಾನಾ ಹವ್ಯಾಸಗಳಲ್ಲಿ ಮಕ್ಕಳು ತೊಡಗಿಕೊಳ್ಳಬಹುದು.

ಮಕ್ಕಳಿಗೆ ಸ್ಫೂರ್ತಿ ಮತ್ತು ಮಾದರಿಯಾಗುವಂತೆ ಹಿರಿಯರೂ ಸಹ ಹವ್ಯಾಸಗಳಲ್ಲಿ ತೊಡಗಿಕೊಳ್ಳಬಹುದು. ಇಂದಿನ ಜಗತ್ತು ನಮ್ಮ ಹವ್ಯಾಸಗಳನ್ನೇ ವೃತ್ತಿಯಾಗಿಸಿಕೊಳ್ಳಲು ಅನುಕೂಲಕರವಾಗಿದೆ. ಅದೆಷ್ಟೋ ಜನ ಹಾಗೆ ತಮ್ಮ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡು ಯಶಸ್ಸೂ ಕಂಡಿದ್ದಾರೆ. ಕರಕುಶಲ ವಸ್ತು ತಯಾರಿಕೆ, ಹೊಲಿಗೆ ಮತ್ತು ಕಸೂತಿ ಕೆಲಸ, ಸಂಗೀತ, ನೃತ್ಯ, ನಟನೆ, ಬರಹ, ಅಡುಗೆಯಂತಹ ಹವ್ಯಾಸಗಳು ಜೀವನದ ನಿರ್ವಹಣೆಗೂ ಆಧಾರವಾಗಿವೆ. ಅದೆಷ್ಟೋ ಮಹಿಳೆಯರು ಇಂತಹ ಗೃಹಾಧಾರಿತ ಉದ್ದಿಮೆಗಳಿಂದಾಗಿ ಸಾಕಷ್ಟು ಸಾಧನೆ ಮಾಡಿ ಹೆಸರುವಾಸಿಯಾಗಿದ್ದಾರೆ ಕೂಡ.

orange blue and white yarn

ಇದಲ್ಲದೆ ಆರೋಗ್ಯದ ದೃಷ್ಟಿಯಿಂದ ಪ್ರತಿ ನಿತ್ಯ ಮುಂಜಾನೆ ಮತ್ತು ಸಂಜೆಗಳಲ್ಲಿ ನಡಿಗೆ, ಓಟ, ವ್ಯಾಯಾಮ, ಹಗ್ಗದಾಟ, ಶಟಲ್, ಟೆನ್ನಿಕಾಯ್ಟ್ ನಂತಹ ಅಲ್ಪ ದೈಹಿಕ ಶ್ರಮ ಬೇಡುವಂತಹ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಇದು ಬದಲಾದ ನಮ್ಮ ಜೀವನ ಶೈಲಿಗೆ ಮತ್ತು ಕೋವಿಡ್ 19 ನಂತಹ ಪ್ಯಾಂಡಾಮಿಕ್ ಕಾಯಿಲೆಗಳ ವಿರುದ್ಧ ಪರಿಹಾರವಾಗಿಯೂ ತೋರುತ್ತದೆ. ನಾವಿರುವ ಪ್ರದೇಶದಲ್ಲೇ ಸಣ್ಣ ಪುಟ್ಟ ಸಂಘ ಮಾಡಿಕೊಂಡು ಸ್ವಚ್ಛತೆ, ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆ ಹೀಗೆ ಹಲವಾರು ಅಂಶಗಳನ್ನಿಟ್ಟುಕೊಂಡು ಜನರನ್ನು ಒಟ್ಟಾಗಿ ಸೇರಿಸಿ ರಚನಾತ್ಮಕ ಕಾರ್ಯಗಳಲ್ಲಿಯೂ ತೊಡಗಿಕೊಳ್ಳಬಹುದು. ಹವ್ಯಾಸಹಳಿಂದ ಚಿಂತೆ ದೂರವಾಗುತ್ತದೆ. ಆತ್ಮವಿಶ್ವಾಸ ಬೆಳೆಯುತ್ತದೆ. ಬುದ್ಧಿ ಮನಸ್ಸು ವಿಕಸನಗೊಳ್ಳುತ್ತದೆ. ಬದುಕಿನಲ್ಲಿ ಹೊಸ ಜೀವನೋತ್ಸಾಹ ತುಂಬಿಕೊಳ್ಳುತ್ತದೆ. ಧನಾತ್ಮಕ ಚಿಂತನೆ, ಪ್ರೀತಿ, ನಂಬಿಕೆ, ವಿಶ್ವಾಸ, ಸಹಕಾರದಂತಹ ಮೌಲ್ಯಗಳು ಬೆಳೆದು ಮನುಷ್ಯ ಪ್ರಬುದ್ಧನಾಗುತ್ತಾನೆ. ಹಾಗಾಗಿ ಯಾರೇ ಆಗಲಿ ಮನುಷ್ಯರಾಗಿ ಹುಟ್ಟಿದ ಮೇಲೆ ಒಂದಾದರೂ ಹವ್ಯಾಸ ಇಟ್ಟುಕೊಳ್ಳಲೇ ಬೇಕು.

ಇತ್ತೀಚಿನ ದಿನಗಳಲ್ಲಿ ಶಾಲೆಗಳು, ಶಿಕ್ಷಕರು, ಹಾಗೂ ಪೋಷಕರು ಮಕ್ಕಳ ಹವ್ಯಾಸಗಳ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಶಾಲೆಗಳಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಅಳವಡಿಸಿಕೊಂಡ ಮೇಲೆ ಸಹಪಠ್ಯ ಚಟುವಟಿಕೆಗಳು ಮತ್ತು ಪಠ್ಯೇತರ ಚುಟುವಟಿಕೆಗಳೂ ಸಮಾನ ಪ್ರಾಶಸ್ತ್ಯ ಪಡೆದುಕೊಳ್ಳುತ್ತಿವೆ. ಇದರಿಂದಾಗಿ ಎಳೆವಿನಲ್ಲೇ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡುವುದು ಸಾಧ್ಯವಾಗಿದೆ. ಪ್ರತಿಭಾ ಕಾರಂಜಿಯಂತಹ ವೇದಿಕೆಗಳೂ ಸಹ ಮಕ್ಕಳ ಹವ್ಯಾಸಗಳನ್ನು ಬೆಳೆಸುತ್ತಿವೆ. ಮಾಧ್ಯಮಗಳು ಮತ್ತು ವಿವಿಧ ಚ್ಯಾನಲ್ಲುಗಳೂ ಸಹ ಹಲವಾರು ಬಗೆಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳು ಮತ್ತು ಹಿರಿಯರಿಬ್ಬರ ಪ್ರತಿಭೆಗೂ ಪ್ರಚಾರ ಮತ್ತು ವೇದಿಕೆ  ಕಲ್ಪಿಸಿಕೊಡುತ್ತಿವೆ.

ಅಕ್ಬರನ ಆಸ್ಥಾನದಲ್ಲಿದ್ದ ಸಂಗೀತ ವಿದ್ವಾಂಸರಾದ ತಾನಸೇನರು ತಮ್ಮ ಗುರು ಹರಿದಾಸರು ತಮಗಿಂತಲೂ ಶ್ರೇಷ್ಠ ಗಾಯಕರು ಎಂದು ಹೇಳುತ್ತಿದ್ದರು. ಕಾರಣ ತಾನಸೇನರು ಅಕ್ಬರರನ್ನು ಮೆಚ್ಚಿಸಲು ಹಾಡುವವರಾಗಿದ್ದರು. ಆದರೆ ಹರಿದಾಸರು ಆತ್ಮ ಸಂತೋಷಕ್ಕಾಗಿ ಮಾತ್ರ, ಜಗತ್ತಿನಲ್ಲಿ ನಾದ ಹುಟ್ಟುವಷ್ಟೇ ಸಹಜವಾಗಿ ಹಾಡುತ್ತಿದ್ದರು. ಇಬ್ಬರೂ ಶ್ರೇಷ್ಠರೇ. ಆದರೆ ನಮ್ಮ ಲಕ್ಷ್ಯ ಯಾವುದು ಎಂಬುದು ನಮಗೆ ಸ್ಪಷ್ಟವಿರಬೇಕು.

ಇನ್ನಾದರೂ ಸಮಯವಿಲ್ಲ, ಕೆಲಸ ಜಾಸ್ತಿ, ನಂಗ್ಯಾವುದರಲ್ಲೂ ಆಸಕ್ತಿ ಇಲ್ಲ ಅಂತೆಲ್ಲ ಸಬೂಬು ಹೇಳುವ ಬದಲು ಯಾವುದಾದರೊಂದು ಹವ್ಯಾಸವನ್ನು ಬೆಳೆಸಿಕೊಂಡು ಜೀವನ್ಮುಖಿಯಾಗಿ ಹವ್ಯಾಸದ ಮಂದಹಾಸ ಬೀರಬೇಕಿರುವುದು ಈ ಕಾಲದ ತುರ್ತು.

****************************************

ಆಶಾಜಗದೀಶ್

ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Leave a Reply

Back To Top