ಅಂಕಣ ಬರಹ

ದಂಗೆಯ ದಿನಗಳು
ಇಂಗ್ಲಿಷ್ ಮೂಲ : ಮನೋಹರ ಮಳಗಾಂವ್‌ಕರ್ ಕನ್ನಡಕ್ಕೆ : ರವಿ ಬೆಳಗೆರೆ
ಪ್ರ : ಭಾವನಾ ಪ್ರಕಾಶನ
ಪ್ರಕಟಣೆಯ ವರ್ಷ : ೨೦೦೮
ಬೆಲೆ : ರೂ.೧೮೫
ಪುಟಗಳು : ೩೦೪

ಪ್ರಸಿದ್ಧ ಭಾರತೀಯ ಆಂಗ್ಲ ಲೇಖಕ ಮನೋಹರ ಮಳಗಾಂವ್‌ಕರ್ ಅವರ ಐತಿಹಾಸಿಕ ಕಾದಂಬರಿಯ ಅನುವಾದವಿದು. ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಂಡ ನಂತರ ಈಸ್ಟ್ ಇಂಡಿಯಾ ಕಂಪೆನಿಯು ವ್ಯಾಪಾರದ ಹೆಸರಿನಲ್ಲಿ ಭಾರತದ ಒಂದೊಂದೇ ರಾಜ್ಯಗಳನ್ನು ಕಬಳಿಸಿಯಾದ ಮೇಲೆ ಭಾರತೀಯರನ್ನು ಹಿಂಸಿಸ ತೊಡಗಿದಾಗ ಅವರ ವಿರುದ್ಧ ಸೇಡು ತೀರಿಸಿ ಅವರನ್ನು ಭಾರತದಿಂದ ಹೊಡೆದೋಡಿಸಲು ೧೮೫೭ರಲ್ಲಿ ನಡೆಸಿದ ಐತಿಹಾಸಿಕ ‘ಮೊದಲ ಸ್ವಾತಂತ್ರ್ಯ ಸಮರ’ದ ಸಂದರ್ಭದಲ್ಲಿ ಸಂಭವಿಸಿದ ಘಟನಾವಳಿಗಳ ಆರ್ದ್ರ ಚಿತ್ರಣ ಇಲ್ಲಿದೆ.


ಸಮರದ ಪ್ರಮುಖ ರೂವಾರಿಯಾಗಿ ಕಾರ್ಯ ನಿರ್ವಹಿಸಿದ ನಾನಾ ಸಾಹೇಬನೇ ಇಡೀ ಕಾದಂಬರಿಯ ಕಥನ ಕ್ರಿಯೆಯ ನಿರೂಪಕನಾಗಿದ್ದಾನೆ. ಆಗ ಭಾರತದ ಬಹು ದೊಡ್ಡ ಭಾಗವನ್ನು ಆಳುತ್ತಿದ್ದ ಮರಾಠಾ ಸಾಮ್ರಾಜ್ಯದ ಎರಡನೇ ಪೇಶ್ವೆ ಬಾಜಿರಾಯನ ದತ್ತು ಪುತ್ರ ನಾನಾಸಾಹೇಬ ವಿಶಾಲ ಮನೋಭಾವದ ಸಂವೇದನಾಶೀಲ ವ್ಯಕ್ತಿ. ಇಂಗ್ಲಿಷ್ ವಿದ್ಯಾಭ್ಯಾಸ ಪಡೆದು ಸುಸಂಸ್ಕೃತ ವ್ಯಕ್ತಿಯಾಗಿ ರೂಪುಗೊಂಡ ನಾನಾಸಾಹೇಬನಿಗೆ ಬ್ರಿಟಿಷರು ಮತ್ತು ಭಾರತೀಯರ ನಡುವೆ ಸೌಹಾರ್ದಯುತ ಸಂಬಂಧ ನೆಲೆಗೊಳ್ಳಬೇಕೆಂಬ ಹಂಬಲ. ಆದರೆ ಅವನ ತಂದೆಯ ಕಾಲದಲ್ಲೇ ಅವರ ಮನೆತನಕ್ಕಿದ್ದ ಪೇಶ್ವೆಯೆಂಬ ಬಿರುದನ್ನೂ ವಿಶಾಲವಾದ ರಾಜ್ಯವನ್ನೂ ಕಸಿದುಕೊಂಡು ಅಂಥೋರವೆಂಬ ಚಿಕ್ಕ ಪ್ರದೇಶದ ಒಡೆತನವನ್ನು ಮಾತ್ರ ಬ್ರಿಟಿಷರು ಅವರಿಗೆ ಉಳಿಸಿಕೊಟ್ಟದ್ದು ನಾನಾಸಾಹೇಬನ ಅಸಮಾಧಾನಕ್ಕೆ ಕಾರಣವಾಗುತ್ತದೆ. ಇದು ಅವನ ಬದುಕನ್ನು ಬರಿಯ ಹೋರಾಟವನ್ನಾಗಿಸುತ್ತದೆ.


ಈ ಕಾದಂಬರಿಯಲ್ಲಿ ಕೇವಲ ಐತಿಹಾಸಿಕ ಘಟನೆಗಳ ನಿರೂಪಣೆ ಮಾತ್ರವಲ್ಲದೆ ಹಲವು ಪ್ರಮುಖ ಪಾತ್ರಗಳ ಸೃಜನಶೀಲ ಚಿತ್ರಣವಿದೆ. ನಾನಾಸಾಹೇಬನ ಮನೋಭೂಮಿಕೆಯಲ್ಲಿ ನಡೆಯುವ ಎಲ್ಲ ವ್ಯಾಪಾರಗಳ ವಿವರಣೆಯಿದೆ. ದೇಶಭಕ್ತಿ ಮತ್ತು ಧಾರ್ಮಿಕ ದ್ವೇ಼ಷದ ಜ್ವಾಲೆಗಳಿಗಿಂತಲೂ ಮನುಷ್ಯ ಸಂಬಂಧಗಳನ್ನು ಅರ್ಥಪೂರ್ಣವಾಗಿ ಬೆಸೆಯುವುದೇ ಹೆಚ್ಚು ಮಹತ್ವದ ಕೆಲಸವೆಂಬುದನ್ನು ತನ್ನ ಮಾತು, ಯೋಚನೆ ಮತ್ತು ಕೃತಿಗಳ ಮೂಲಕ ತೋರಿಸಿ ಕೊಡುವ ನಾನಾಸಾಹೇಬ ಓರ್ವ ಆದರ್ಶ ವ್ಯಕ್ತಿಯಾಗಿ ನಮ್ಮ ಮುಂದೆ ಬಂದು ನಿಲ್ಲುತ್ತಾನೆ. ಆತನ ವ್ಯಕ್ತಿತ್ವದಲ್ಲಿ ಅಡಕವಾಗಿರುವ ಸದ್ಗುಣಗಳು ಮತ್ತು ಸದಾಚಾರಗಳು ನಮ್ಮ ಮೆಚ್ಚುಗೆಯನ್ನು ಪಡೆಯುತ್ತವೆ ಮಾತ್ರವಲ್ಲದೆ ರಾಜ ಮನೆತನದ ಅನೇಕರಲ್ಲಿರುವ ಲೈಂಗಿಕ ದೌರ್ಬಲ್ಯಗಳ ಬಗ್ಗೆ ಮುಚ್ಚುಮರೆಯಿಲ್ಲದೆ ಹೇಳುವ ನಾನಾಸಾಹೇಬನ ಕಥನವು ಒಂದು ಆತ್ಮ ನಿವೇದನೆಯಂತಿದೆ.
ವಸಾಹತೀಕರಣದ ಕಾಲದಲ್ಲಿ ಭಾರತೀಯರು ಅನುಭವಿಸಿದ ಸಂಕಷ್ಟಗಳ ಯಥಾವತ್ತಾದ ಚಿತ್ರಣವೀಯುವ ಈ ಕಾದಂಬರಿ ದಾಖಲೆಯ ದೃಷ್ಟಿಯಿಂದ ಅತ್ಯಂತ ಪ್ರಸ್ತುತವಾಗಿದೆ. ರವಿ ಬೆಳಗೆರೆಯವರ ಅನುವಾದದ ಶೈಲಿಯು ಸುಂದರವೂ ಹೃದ್ಯವೂ ಆಗಿದ್ದು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.

*************************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

One thought on “

  1. ಓದಲೇಬೇಕಾದ ಪುಸ್ತಕದ ಚಂದದ ಪರಿಚಯ ಮಾಡಿದ್ದೀರಿ ಮೇಡಂ ಧನ್ಯವಾದಗಳು ನಿಮಗೆ

Leave a Reply

Back To Top