ಕಾದಂಬರಿ ಕುರಿತು

ಚೋಮನ ದುಡಿ

ಡಾ.ಶಿವರಾಮ ಕಾರಂತ

ತಿಲಕ ನಾಗರಾಜ್ ಹಿರಿಯಡಕ

ಚೋಮನ ದುಡಿಯ ಮೋಡಿಗೆ ಮನಸೋತಿರುವೆ...

 ಯಾವುದೇ ಕೃತಿ ಓದಿದರೂ ನನ್ನನ್ನು ಮತ್ತೆ ಮತ್ತೆ ಕಾಡುವುದು ನೆಚ್ಚಿನ ಸಾಹಿತಿ ಕಾರಂತಜ್ಜರ ‘ಚೋಮನ ದುಡಿ’

ಅಂದಿನ ಕಾಲದ ಕಾರ್ಗತ್ತಲ ಸ್ವರೂಪ, ಆ ಕತ್ತಲನ್ನು ಲೆಕ್ಕಿಸದೆ ಜನರು ಊರ ಜಾತ್ರೆಯನ್ನು ಸಂಭ್ರಮಿಸುತ್ತಿದ್ದ ಪರಿ, ಇಂದು ಹಗಲಿನಂತೆ ಬೆಳಗುವ ರಾತ್ರಿಯ ಕಾಣುವ ನಮನ್ನು ಬೇರಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ.

ಚೋಮನ ದುಡಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಮನಸ್ಸಿಗಿಳಿಯುತ್ತವೆ.

ನಮಗಿವತ್ತು ಕೇವಲವೆನಿಸುವ  ಇಪ್ಪತ್ತು ರೂಪಾಯಿ ಈ ಕಾದಂಬರಿಯಲ್ಲಿ ಒಗ್ಗಟ್ಟಾಗಿದ್ದ ಚೋಮನ ಸಂಸಾರವನ್ನು ಛಿದ್ರಗೊಳಿಸಿಬಿಡುತ್ತದೆ.

ಹೇಗೋ ಗಂಜಿ,ಉಪ್ಪು, ಕಾಳುಕಡಿ ತಿಂದುಂಡಿದ್ದ ಸಂಸಾರ ಚೋಮ ಮಾಡಿದ್ದ ಸಾಲದ ಸುಳಿಯೊಳಗೆ ಸಿಲುಕಿ ನಲುಗುತ್ತದೆ. ಅಪ್ಪನ ಸಾಲ ತೀರಿಸ ಹೊರಟ ಗುರುವ, ಚನಿಯರಲ್ಲಿ ಗುರುವ ತನ್ನ ವಯೋ ಸಹಜ ಬಯಕೆಯಿಂದ ಅವಳಾರನ್ನೋ ಕಟ್ಟಿಕೊಳ್ಳುತ್ತಾನೆ. ಚನಿಯ ಜ್ವರಕ್ಕೆ ಬಲಿಯಾಗುತ್ತಾನೆ.

ಇಷ್ಟಾಗಿದ್ದರೆ ಸಾಕಿತ್ತೇನೋ ಇಪ್ಪತ್ತು ರೂಪಾಯಿ ಯಿಂದ ಇಪ್ಪತ್ತೈದಕ್ಕೇರಿದ ಅಪ್ಪನ ಸಾಲದ ಹೊರೆಯನ್ನು ಬೆಳ್ಳಿ ಹೊರುತ್ತಾಳೆ , ಕೊನೆಗೆ ತೀರಿಸುತ್ತಾಳೆ ಕೂಡ. ಆದರೆ ಅಲ್ಲೊಂದಷ್ಟು ನಡೆಯುವ ಘಟನಾವಳಿಗಳು ಮನ ಕಲಕುತ್ತವೆ‌. ಎಷ್ಟಂದರೂ ಹೆಣ್ಣುಮಗಳಲ್ಲವೇ?

ನೀಲನ ಘೋರ ಅಂತ್ಯಕ್ಕೆ ಛೆ! ಎಂಬ ಉದ್ಗಾರ ನಮಗರಿವಿಲ್ಲದೆ ಹೊರಬರುತ್ತದೆ.

ಇಲ್ಲಿ ಬೆಳ್ಳಿ ಮತ್ತು ಚೋಮನ ಪಾತ್ರಗಳು ಬಹುವಾಗಿ ಕಾಡುತ್ತವೆ.

ತಂದೆಯನ್ನು, ಅಣ್ಣತಮ್ಮಂದಿರನ್ನು ಬಹುವಾಗಿ ಪ್ರೀತಿಸುವ, ತಾಯಿ, ತಂಗಿ,ಅಕ್ಕ , ಜವಾಬ್ದಾರಿಯುತ ಹೆಣ್ಣುಮಗಳು ಹೀಗೆ ವಿವಿಧ ಪಾತ್ರಗಳನ್ನು ನಿಭಾಯಿಸುವ ಬೆಳ್ಳಿ ಹಾದಿ ತಪ್ಪಿದಳೆ? ಎಂದುಕೊಳ್ಳುವಾಗ ಇಲ್ಲ ವಯೋ ಸಹಜ ಬಯಕೆಗೆ ಬಲಿಯಾದಳೆ? ಎಂಬ ಪ್ರಶ್ನೆ ಹುಟ್ಟುತ್ತದೆ. ಆದರೂ ಬೆಳ್ಳಿಯ ಬಗ್ಗೆ ಮನಸ್ಸಿನ ಮೂಲೆಯಲ್ಲಿ ಮರುಕವೊಂದು ಹುಟ್ಟಿಕೊಳ್ಳುತ್ತದೆ.

ಇನ್ನು ಚೋಮನೇನಾದರೂ ಸಿಕ್ಕಿದರೆ ” ಅಯ್ಯೋ ಚೋಮ ಹೆಂಡದಂಗಡಿಗೆ ಹಾಕೊ ದುಡ್ಡಿಂದ ಸಾಲಾನಾದ್ರು ತೀರಿಸ್ಬಾರ್ದಾ? ” ಅಂತ ಕೇಳಿಬಿಡಬೇಕು ಎನ್ನುವಷ್ಟು ನೈಜವಾಗಿ ಮೂಡಿಬಂದಿರುವ ಪಾತ್ರ ಚೋಮನದು. ಮೊದಲಿನಿಂದ ಕೊನೆಯವರೆಗೂ ಚೋಮನ ಜೊತೆಗಾರನಾಗಿ ಕಾದಂಬರಿಯುದ್ದಕ್ಕೂ ಸದ್ದು ಮಾಡೋ  ದುಡಿ ಕೊನೆಯಲ್ಲಿ  ತನ್ನ ಸದ್ದಿನೊಂದಿಗೆ ಚೋಮನ ಉಸಿರನ್ನೂ ಜೊತೆಗೆ ಚೋಮನ ಬೇಸಾಯದ ಕನಸನ್ನೂ ಕರೆದೊಯ್ದು ಕಣ್ಣಂಚನ್ನು ತೇವಗೊಳಿಸುತ್ತದೆ.

ಬದುಕಿನುದ್ದಕ್ಕೂ ಚೋಮನ ದುಡಿಯ “ಡಮ ಡಮ್ಮ ಢಕ ಢಕ್ಕ” ಸದ್ದು ಸದಾ ಕರ್ಣಗಳಲ್ಲಿ  ಅನುರಣಿಸುತ್ತಲೇ ಇರುತ್ತದೆ.

*******************************

ತಿಲಕ ನಾಗರಾಜ್ ಹಿರಿಯಡಕ

One thought on “

Leave a Reply

Back To Top