ಕಾದಂಬರಿ ಕುರಿತು

ಮಲೆಗಳಲ್ಲಿ ಮದುಮಗಳು

ಕುವೆಂಪು

ಚಂದ್ರಿಕಾ ನಾಗರಾಜ್ ಹಿರಿಯಡಕ

ಮಲೆಯ ಝೇಂಕಾರಗಳಿಗೆ ಕಿವಿಯಾಗುತ್ತಾ…

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅನೇಕ ಕಾದಂಬರಿಗಳು ಜೀವಂತಿಕೆ ಪಡಕೊಂಡಿವೆ. ಅನೇಕ ಸಾಹಿತಿಗಳು ತಮ್ಮ ಕೃತಿಗಳ ಮೂಲಕಾನೇ ಉಸಿರಾಡುತ್ತಿದ್ದಾರೆ. ಅಂತಹ ಮೇರು ಸಾಹಿತಿಗಳಲ್ಲಿ ಪ್ರಮುಖರು ಕುವೆಂಪು. ಪ್ರಕೃತಿಯೊಂದಿಗಿನ ನಂಟಿನಲ್ಲೇ ಸಂಬಂಧಗಳನ್ನು ಅರಳಿಸುತ್ತಾ ಸಾಗಿಸುವ ಶ್ರೇಷ್ಠ ಕವಿ ಕುವೆಂಪು. ಅವರ ಕೃತಿಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ್ದು “ಮಲೆಗಳಲ್ಲಿ ಮದುಮಗಳು”. ಕಣ್ಣಿಗೆ ದಣಿವೇ ನೀಡದೆ ಓದಿಸಿಕೊಂಡು ಹೋಗುವ ಕಾದಂಬರಿ. ಮಲೆಗಳಲ್ಲಿ ಕಾಡುವ ಮದುಮಗಳ ಬರಹ ಕಾವ್ಯವಿದು.
ಕಾದಂಬರಿಯ ಪ್ರತೀ ಪಾತ್ರವೂ ಮುಖ್ಯವೇ…ಒಂದೊಂದೂ ಕವಿತೆಯಂತೆ ಇಳಿಯುತ್ತವೆ. ಗುತ್ತಿ – ತಿಮ್ಮಿಯ ಪ್ರೇಮ, ಐತ – ಪೀಂಚಲುವಿನ ಮೋಹ, ಮುಕುಂದಯ್ಯ – ಚಿನ್ನಮ್ಮರ ಒಲವ ಚೆಲುವು ಎಲ್ಲವೂ ಇಲ್ಲಿ ದೊಡ್ಡ ಸೊಬಗು…ಈ ಸೊಬಗ ಹಿಂದೆ ಹಿಂದೆ ಹೋದಷ್ಟು ಎಲ್ಲಿಯೂ ನಿಲ್ಲಲಾಗುವುದಿಲ್ಲ…ದಾರಿ ಸಾಗಿದಂತೆ ಸಾಗುತ್ತಿರಬೇಕಷ್ಟೇ…ಪ್ರೇಮಕ್ಕೆ ಕೊನೆ ಎಂಬುವುದಿಲ್ಲ…ಅದು ಯಾರನ್ನೂ ಸೆಳೆಯಬಲ್ಲ ಸೂಜಿಗಲ್ಲು…
ಪ್ರಕೃತಿಯಂತೆ….ಇಲ್ಲಿ ಪ್ರೇಮ ಹಾಗೂ ಪ್ರಕೃತಿ ಒಂದಾಗಿ ಮೇಳೈಸಿದೆ..ಹಾಗಂದ ಮೇಲೆ ಬೇರೆ ದಿಗ್ಭ್ರಮೆಗಳು ಬೇಕೇ…!


ಪ್ರೀತಿಯೊಂದಿಗೆ ಬೆಸೆದ ಬಂಧಗಳ ನಡುವೆ ಜಾತಿಯ ನರಳಾಟ ಕಿವಿಗೆ ಕರ್ಕಶವಾಗುತ್ತದೆ.
ಜಾತಿ ಭೇದದ ವಾಸನೆ ಮೂಗಿಗೆ ಬಡಿಯುತ್ತದೆ. ದೈಹಿಕ ವಾಂಛೆಗಳಿಗೆ ಬಲಿಯಾದ ಮುಗ್ಧ ಪ್ರೇಮದ ಕಿರುಚಾಟ ಕಿವಿಗೆ ಅಡರುತ್ತದೆ.


ಇಲ್ಲಿ ಕಾಡುವ ದುರಂತಗಳಿವೆ..ಒಂದು, ಎಳಸು ಪ್ರೇಮವೊಂದರ ದುರ್ಮರಣ, ಮತ್ತೊಂದು ಮೂಕ ಪ್ರೇಮದ ಸಾವು…ಸಿರಿವಂತನಾದ ದೇವಯ್ಯನಿಗೆ ಇಟ್ಟುಕೊಂಡವಳಾಗಿಯಾದರೂ ಜೊತೆಯಾಗ ಬೇಕೆಂಬೋ ಕಾವೇರಿಯ ಉತ್ಕಟ ಪ್ರೇಮವಿಲ್ಲಿ ಭಯಂಕರ ಅಂತ್ಯ ಕಾಣುತ್ತದೆ ನೋಡಿ…ಅದು ಹೆಣ್ಣು ಬಾಕತನವನ್ನು ತೋರಿಸಿದೆ. ಆಕೆಗೆ ಬೇಕಾಗಿದ್ದು ದೇವಯ್ಯ…ಪ್ರೇಮ…ಅದಕ್ಕಾಗಿ ಚೀಂಕ್ರನೆಂಬೋ ನಂಬಿಕೆಯ ಹಿಂದೆ ಹೊರಡುತ್ತಾಳೆ. ಹೆಣ್ಣೆಂಬ ಕಾರಣಕ್ಕೆ ಭಕ್ಷಣೆಗೊಳ ಪಡುತ್ತಾಳೆ…ತನ್ನನ್ನು ತಾನು ಕೊಂದು ಕೊಳ್ಳುತ್ತಾಳೆ…
ಕಾದಂಬರಿಯ ಆರಂಭ ಭಾಗದಲ್ಲಿ ಬರೋ ‘ಹುಲಿಯಾ’ ನಾಯಿಗುತ್ತಿಯ ಬದುಕಿನ ಪ್ರತೀ ಹೆಜ್ಜೆಗಳನ್ನು ಮೂಸುತ್ತಾ ಹಿಂಬಾಲಿಸುವ ನಿಯತ್ತಿನ ಜೀವಿ…ಒಂದರ್ಥದಲ್ಲಿ ಈ ಕಾದಂಬರಿಯಲ್ಲಿ ಅದರ ಪಾತ್ರವೂ ಖುಷಿ ಕೊಡುತ್ತದೆ…ಕೊನೆಗೆ ನೋಯಿಸುತ್ತದೆ…ನಿಯತ್ತು…ಪ್ರೀತಿ ಎಲ್ಲದಕ್ಕೂ ಹುಲಿಯಾ ಸಾಕ್ಷಿ…ಮಲೆ ಪ್ರೇಮದ ಗಂಧ ಹುಲಿಯಾನ ಏದುಸಿರಿನೊಂದಿಗೆ ಬೆರೆತಂತೆ ಭಾಸವಾಗುತ್ತದೆ. ಅದೊಂದು ಪ್ರೇಮಭರಿತ ಒಡನಾಟವಲ್ಲದೇ ಮತ್ತೇನು…ಅಕ್ಕಣಿಯ ಮೇಲೆ ಅಕ್ಕರೆ ಹೊಂದಿದ್ದ ಚೀಂಕ್ರ ಪಿಜಿಣನ ಸಾವನ್ನು ಬಯಸಿ ಸ್ವಾರ್ಥಿಯಾದ…ಆದರೆ….ಮೂಕ ಪ್ರಾಣಿ ಹುಲಿಯಾದು ಯಾವ ಸ್ವಾರ್ಥವಿರದ, ನಿಷ್ಕಲ್ಮಶ ನಿಷ್ಠೆಯ ಪ್ರೇಮದ ಕುರುಹಾಗಿ ಉಳಿಯುತ್ತದೆ.


ಕೊನೆಗೊಂದು ಪ್ರೇಮಮಯ ಅಂತ್ಯ…ಕ್ಷಮಿಸಿ, ಅಂತ್ಯವೆಲ್ಲಿಂದ ಬಂತು..! ಒಂದಷ್ಟು ವಿಚಾರಗಳನ್ನ, ಪಾತ್ರಗಳನ್ನು ಒಳಗೆ ಕಾಡಲು ಬಿಟ್ಟ ಮೇಲೆ ಅಲ್ಲಿ ಅಂತ್ಯವೆಂಬುದು ಇರುತ್ತದೆಯೇ…ಕೊನೆ ಎಲ್ಲಿಂದ ಅಲ್ಲವೇ…ಒಂದರ ಅಂತ್ಯವೆಂಬಂತೆಯೇ ಮತ್ತೊಂದರ ಆರಂಭ…ಇಲ್ಲೂ ಕಾದಂಬರಿ ಕೊನೆಯ ಪುಟ ತಲುಪಿದೆಯಷ್ಟೇ ಮಳೆಯಲ್ಲಿ ಮಿಂದು ಎದ್ದ ಮಲೆಯ ಹಸಿರೊಂದಿಗೆ ಬೆರೆತ ಝೀರುಂಡೆಗಳ ಸದ್ದಿನಂತೆ ಸದಾ ಅನುರಣಿಸುತ್ತದೆ…ನಮ್ಮನ್ನೂ ಮಲೆಯ ದೃಶ್ಯ ಕಾವ್ಯದೊಳಗೆ ಬಂಧಿಸುತ್ತದೆ.

*********************************

ಚಂದ್ರಿಕಾ ನಾಗರಾಜ್ ಹಿರಿಯಡಕ

Leave a Reply

Back To Top