ಗೌರಿ.ಚಂದ್ರಕೇಸರಿ.
ಭಾಷೆಯ ಮೇಲೆ ಗಾಢವಾದ ಪ್ರಭಾವ ಬೀರುವ ಸಂಸ್ಕøತಿಯು ಭಾಷೆಯ ಹರಿವನ್ನು ಬದಲಾಯಿಸುತ್ತ ಹೋಗುತ್ತದೆ. ಕೊರಕಲಿನಗುಂಟ ನೀರು ಹರಿಯುವಂತೆ ಸಮಯ ಸಂದರ್ಭಕ್ಕೆ ತಕ್ಕಂತೆ ಹೊಸತನವನ್ನು ಪಡೆಯುತ್ತಲೇ ಹೋಗುತ್ತದೆ. 2500 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ನಮ್ಮದು. ಬದಲಾವಣೆ ಆರೋಗ್ಯಕರವಾದದ್ದೇ. ಆದರೆ ಪರಕೀಯ ಶಬ್ದಗಳು ಕನ್ನಡದೊಡನೆ ಮಿಳಿತಗೊಂಡು ಹಾಡಿನ ರೂಪದಲ್ಲಿ ಕಿವಿಗೆ ಬೀಳುತ್ತಿದ್ದರೆ ಕೇಳಲು ಅಸಹನೀಯವೆನಿಸುತ್ತದೆ.
ತಳಹದಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಓದುವ ಇಂದಿನ ಮಕ್ಕಳು ಕನ್ನಡದ ಮೇಲೆ ಪ್ರಭುತ್ವವನ್ನು ಸಾಧಿಸಲು ಹೇಗೆ ಸಾಧ್ಯ? ಸರಳಗನ್ನಡದ ಎಷ್ಟೋ ಶಬ್ದಗಳ ಅರ್ಥವೇ ಗೊತ್ತಿಲ್ಲದ ಇಂದಿನ ಯುವಜನಾಂಗ ಕನ್ನಡ ಸಾಹಿತ್ಯವನ್ನು ಎಷ್ಟರ ಮಟ್ಟಿಗೆ ಅರ್ಥೈಸಿಕೊಳ್ಳಲು ಸಾಧ್ಯ? ಮನೋರಂಜನೆ ನೀಡುವಲ್ಲಿ ಅಗ್ರ ಸ್ಥಾನವನ್ನು ಹೊಂದಿರುವ ಸಿನಿಮಾ, ದೂರದರ್ಶನಗಳು ಇಂದಿನ ಯುವಜನಾಂಗದ ಆಶಯಕ್ಕೆ ಬದ್ಧರಾಗಿಬೇಕಾದ ಅನಿವಾರ್ಯತೆ ಬಂದೊದಗಿದೆ. ಅರ್ಥವಿಲ್ಲದ ಶಬ್ದಗಳು ಸಿನಿಮಾ ಸಾಹಿತ್ಯದಲ್ಲಿ ಜಾಗ ಪಡೆದು ಕನ್ನಡವೊಂದು ಕಲಬೆರಕೆ ಭಾಷೆಯಾಗಿ ಬೆಳೆಯುತ್ತಿದೆ. ವಿಪರ್ಯಾಸವೆಂದರೆ ಇಂತಹ ಹಾಡುಗಳೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತವೆ. ಬುದ್ಧಿಜೀವಿಗಳಾದ ಸಾಹಿತಿಗಳು, ಕವಿಗಳೂ ಇದಕ್ಕೆ ಒಗ್ಗಿ ಹೋಗಿದ್ದಾರೆ.
ಕನ್ನಡಕ್ಕೊಂದು ಹೊಸ ಕಾಯಕಲ್ಪ ಕೊಡುವ ಪ್ರಯತ್ನ ಎಂಬ ಯುವ ಜನಾಂಗದ ಅಂಬೋಣವನ್ನು ಹಿಂದಿನ ತಲೆಮಾರಿನವರು ಒಪ್ಪುವುದಾದರೂ ಹೇಗೆ? ಕನ್ನಡಕ್ಕೊಂದು ತನ್ನದೇ ಆದಂತಹ ಸೊಗಡಿದೆ. ಇಂಪು,ಕಂಪಿದೆ. ಕನ್ನಡದ ಗಂಧ ಗಾಳಿ ಇಲ್ಲದವರು ತಿಣುಕಾಡಿ ಬರೆಯುವ ಹಾಡುಗಳೇ ಇಂದು ಚಿತ್ರರಂಗದಲ್ಲಿ ಕೇಳಿಬರುತ್ತಿವೆ. ನಮ್ಮ ಅಕ್ಕ-ಪಕ್ಕದ ಮೂರ್ನಾಲ್ಕು ಭಾಷೆಯ ಶಬ್ದಗಳನ್ನು ಕಡ ಪಡೆದು ಒಂದು ಕವನವನ್ನು ಗೀಚಿ ಅದಕ್ಕೊಂದು ಕಿವಿಗಡಚಿಕ್ಕುವ ಸಂಗೀತವನ್ನು ಅಳವಡಿಸಿಬಿಟ್ಟರೆ, ಬೆಳಗಾಗುವುದರಲ್ಲಿ ಅದು ಚಿಕ್ಕ ಮಕ್ಕಳಾದಿಯಾಗಿ ಎಲ್ಲರ ಬಾಯಲ್ಲೂ ಕೇಳಿಬರುತ್ತದೆ.
ಹೊಸತನವನ್ನು ತರುವ ಹೆಸರಿನಲ್ಲಿ ಕನ್ನಡವನ್ನು ಕಂಗ್ಲೀಷ್ ಮಾಡುವುದಾಗಲಿ ಇಲ್ಲ, ಬೀದಿಯಲ್ಲಾಡುವ ಟಪೋರಿ ಭಾಷೆಯನ್ನು ಎತ್ತಿಕೊಂಡು ಕನ್ನಡಕ್ಕೆ ಸುರಿಯುವುದನ್ನು ಮಾಡಿದರೆ ಅದೊಂದು ಬರಹವಾಗಲಿ ಅಥವಾ ಹಾಡಾಗಲಿ ಆಗಲಾರದು. ಕನ್ನಡವನ್ನು ಕನ್ನಡ ಭಾಷೆಯನ್ನಾಗಿಯೇ ಉಳಿಸುವದು ಇಂದಿನ ಪೀಳಿಗೆಯ ಜವಾಬ್ದಾರಿಯಾಗಿದೆ. ಅನೇಕ ಪ್ರಕಾರಗಳಲ್ಲಿರುವ ಕನ್ನಡದ ಕೃತಿಗಳನ್ನು ಓದಿದಾಗ ಕನ್ನಡದ ಶ್ರೀಮಂತಿಕೆಯ ಅರಿವಾಗುತ್ತದೆ, ನಮ್ಮ ಶಬ್ದ ಸಂಗ್ರಹ ಬೆಳೆಯುತ್ತದೆ. ಹೊರಹೊಮ್ಮುವ ಭಾವನೆಗಳು ಕನ್ನಡಮಯವಾಗಿರುತ್ತವೆ ಆಗ ಮಾತ್ರ ಕನ್ನಡ ಭಾಷೆ ಕನ್ನಡವಾಗಿರಲು ಸಾಧ್ಯ.
*******
.
.