ಅಂಕಣ ಬರಹ

ಅಲೆಯ ಮೊರೆತ

ಅಲೆಯ ಮೊರೆತ( ಕಾದಂಬರಿ)
ತಮಿಳು ಮೂಲ : ಕಲ್ಕಿ
ಅನುವಾದ : ಶಶಿಕಲಾ ರಾಜ
ಪ್ರ : ಸಾಹಿತ್ಯ ಅಕಾಡೆಮಿ
ಪ್ರಕಟಣೆಯ ವರ್ಷ : ೨೦೧೭
ಬೆಲೆ : ರೂ.೪೨೦
ಪುಟಗಳು : ೬೯೨

ವಾಸ್ತವವಾದಿ ಶೈಲಿಯಲ್ಲಿರುವ ಈ ಕಾದಂಬರಿಯು ಒಂದು ಕಾಲ್ಪನಿಕ ಕಥೆಯನ್ನು ವಸ್ತುವಾಗಿ ಹೊಂದಿದ್ದರೂ  ಭಾರತಕ್ಕೆ ಸ್ವಾತಂತ್ರ್ಯ   ಸಿಗುವ ಮೊದಲು ನಡೆದ ಎಲ್ಲ ಸಂಗತಿಗಳನ್ನೂ ಐತಿಹಾಸಿಕ ಸತ್ಯಗಳೊಂದಿಗೆ ಯಥಾವತ್ತಾಗಿ ನಿರೂಪಿಸುತ್ತದೆ.

 

      ಪಟ್ಟಾಮಣಿಯಮ್ ಕಿಟ್ಟಾವಯ್ಯರ್, ಸರಸ್ವತಿ ಅಮ್ಮಾಳ್, ಪದ್ಮಾಚಲ ಶಾಸ್ತಿç ಅಯ್ಯರ್, ಕಾಮಾಕ್ಷಿ ಅಮ್ಮಾಳ್, ದೊರೆಸ್ವಾಮಿ ಅಯ್ಯರ್, ರಾಜಮ್ಮ, ಲಲಿತಾ, ಸೀತಾ, ಸೌಂದರ್ ರಾಜನ್, ಸೂರ್ಯ, ಪಟ್ಟಾಭಿರಾಮನ್, ಧಾರಿಣಿ, ಅಮರನಾಥ, ಚಿತ್ರಾ ಮೊದಲಾದವು ಇಲ್ಲಿ ಎದ್ದು ಕಾಣುವ ಪಾತ್ರಗಳು. ಇವರೆಲ್ಲರ ವೈಯಕ್ತಿಕ ಹಾಗೂ  ಕೌಟುಂಬಿಕ ಬದುಕಿನ ವಿವರಗಳು , ಗ್ರಾಮೀಣ ಹಾಗೂ ನಗರ ಬದುಕಿನ  ಚಿತ್ರಗಳು, ಸ್ವಾತಂತ್ರ್ಯ  ಹೋರಾಟ, ಬಿಳಿಯರ ಸರಕಾರದ ಆಡಳಿತ ವೃತ್ತಾಂತಗಳು, ಕಾಂಗ್ರೆಸ್ ಮತ್ತು ಸೋಷಲಿಸ್ಟ್  ಸಂಘಟನೆಗಳು ನಡೆಸಿದ ಹೋರಾಟದ ಚಿತ್ರಗಳು ಇಲ್ಲಿವೆ.  ಸರಕಾರದ ದೌರ್ಜನ್ಯದ ವಿರುದ್ಧ ಪ್ರತಿಭಟಿಸುವ ಕ್ರಾಂತಿವೀರ ಯುವಕರು ರಹಸ್ಯವಾಗಿ ನಡೆಸುವ ಸಿದ್ಧತೆಗಳು, ಅವರನ್ನು ಬಂಧಿಸಲು ಪೋಲಿಸರು ನಡೆಸುವ ಪ್ರಯತ್ನಗಳು,  ಬಂಧನ, ಜೈಲುವಾಸ, ಕೈದಿಗಳು ತಪ್ಪಿಸಿಕೊಳ್ಳಲು ಮಾಡುವ ಒದ್ದಾಟಗಳ ಚಿತ್ರಣಗಳಿವೆ.  ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಸ್ಥಾನೀಯ ರಾಜರುಗಳು ತಮ್ಮ ತಮ್ಮೊಳಗೆ ಕಾದಾಡಿ ಹೊರಗಿನಿಂದ ಮುಸಲ್ಮಾನರೂ ಆಂಗ್ಲರೂ ಬಂದು ಇಲ್ಲಿ ನೆಲೆಯೂರಲು ಕಾರಣರಾದದ್ದು ಹೇಗೆ ಎಂಬ ಬಗ್ಗೆ ಚರ್ಚೆಗಳಿವೆ.  ಮುಸಲ್ಮಾನರ ಆಕ್ರಮಣ, ಆಡಳಿತ ಮತ್ತು ಹಿಂದೂ ಧಾರ್ಮಿಕ ಕೇಂದ್ರಗಳನ್ನು ನಾಶ ಮಾಡಿ ಅವರು ಮಸೀದಿಗಳನ್ನು ಸ್ಥಾಪಿಸಿದ್ದು, ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ ಅವರನ್ನು ತಮ್ಮ ಜನಾನಾದಲ್ಲಿರಿಸಿಕೊಂಡದ್ದು, ಬಲಾತ್ಕಾರವಾಗಿ ಮತಾಂತರಗೊಳಿಸಿದ ವಿವರಗಳಿವೆ.  ಇವೆಲ್ಲದರ ಜತೆಗೆ ಬ್ರಿಟಿಷರ ದಾಸ್ಯದಿಂದ ಭಾರತವನ್ನು ಬಂಧಮುಕ್ತಗೊಳಿಸಲು ಉಪವಾಸ ಸತ್ಯಾಗ್ರಹ-ಅಹಿಂಸಾ ವ್ರತಗಳ ಮೂಲಕ ಹೋರಾಟ ನಡೆಸಿದ ಗಾಂಧೀಜಿಯವರ ಬಗ್ಗೆ ಇಲ್ಲಿ ಕೆಲವು ಪಾತ್ರಗಳಿಗೆ ಅಪಾರವಾದ ಭಕ್ತ-ಗೌರವಗಳಿದ್ದರೆ ಇನ್ನು ಕೆಲವು ಪಾತ್ರಗಳಿಗೆ ಅವರಿಂದಾಗಿಯೇ ಭಾರತವು ಎರಡು ಹೋಳಾಗಿ ಬಿಟ್ಟಿತು ಎಂಬ ಅಸಮಾಧಾನ ವ್ಯಕ್ತವಾಗಿದೆ.  ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ  ಮುಸಲ್ಮಾನರು ಪ್ರತ್ಯೇಕ ರಾಜ್ಯ ಬೇಕೆಂದು ಕೂಗಿದಾಗ  ಗಾಂಧೀಜಿಯವರು ಅವರನ್ನು ತಡೆಯಲಿಲ್ಲ, ಮತ್ತು ಪಾಕಿಸ್ತಾನದಲ್ಲಿ  ಹಿಂದೂಗಳ ಮೇಲೆ ದೌರ್ಜನ್ಯ ನಡೆದು ಲಕ್ಷ ಲಕ್ಷ ಮಂದಿ ಸಾವಿಗೀಡಾದಾಗ  ಗಾಂಧೀಜಿಯವರು ದೆಹಲಿಯಲ್ಲಿ ಪ್ರೇಮ ಬೋಧನೆ ಮಾಡುತ್ತಿದ್ದರು, ದೆಹಲಿಯಲ್ಲಿದ್ದ ಎಲ್ಲ ಹಿಂದೂ ದೇವಾಲಯಗಳನ್ನು ಮುಸಲ್ಮಾನರು ನಾಶಪಡಿಸಿ ಮಸೀದಿ ಕಟ್ಟಿಸಿದ್ದು ನಿಜವೆಂದು ಗೊತ್ತಿದ್ದರೂ ಹಿಂದೂ ನಿರಾಶ್ರಿತರು ದೆಹಲಿಯ ಮಸೀದಿಗಳಲ್ಲಿ ತಾತ್ಕಾಲಿಕ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿದಾಗ  ಅವರು ಅದನ್ನು ತಡೆದರು- ಇತ್ಯಾದಿ ಆರೋಪಗಳಿವೆ.

    ೬೯೦ ಪುಟಗಳಿರುವ ಈ ಬೃಹತ್ ಕಾದಂಬರಿಯ ಕನ್ನಡ ಅನುವಾದ ಬಹಳ ಸೊಗಸಾಗಿ ಬಂದಿದೆ. ತಮಿಳು ಭಾಷೆಯ ಕೆಲವು ಪದಗಳನ್ನು ಹಾಗೆಯೇ ಉಳಿಸಿಕೊಂಡು ಅವಕ್ಕೆ ಅಡಿ ಟಿಪ್ಪಣಿ ಕೊಟ್ಟದ್ದು ಕನ್ನಡದ ಓದುಗರಿಗೆ ತಮಿಳು ಸಂಸ್ಕೃತಿಯ ಪರಿಚಯ ಮಾಡಿಕೊಳ್ಳುವಲ್ಲಿ  ಉಪಯುಕ್ತವಾಗಿದೆ.  ತಮಿಳಿನ ಕೆಲವು ಗಾದೆ ಮಾತು- ನುಡಿಕಟ್ಟುಗಳಿಗೆ ಸಮಾನಾರ್ಥಕವಾದ ಅಭಿವ್ಯಕ್ತಿಗಳು ಕನ್ನಡದಲ್ಲಿ ಇಲ್ಲದಿದ್ದರೂ ಅವುಗಳನ್ನು ಅಷ್ಟೇ ಪ್ರಾಸಬದ್ಧವಾಗಿ ರಚಿಸಿ ಕನ್ನಡಕ್ಕೆ ಕೊಡುಗೆಯಾಗಿ ನೀಡಿದ್ದು ಸ್ವಾಗತಾರ್ಹ. ಒಟ್ಟಿನಲ್ಲಿ ಇದು ಬಹಳ ಸೃಜನಶೀಲ ಅನುವಾದ.

**********************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

One thought on “

Leave a Reply

Back To Top