ಹೀಗೇಕೆ ನನ್ನವ್ವ ?

ಲೇಖನ

ಹೀಗೇಕೆ ನನ್ನವ್ವ ?

ಸುಮಾ ಆನಂದರಾವ್

What is Hindu Widows Remarriage Act, 1856?

      ಇಂದೇಕೆ ನನ್ನವ್ವ ಪದೇ ಪದೇ ನೆನಪಾಗುತ್ತಿದ್ದಾಳೆ? ಅವಳೇಕೆ ಹಾಗಿದ್ದಳು?

                 ಜೆರ್ಮನಿಯಲ್ಲಿ  ಒಬ್ಬ  ವಯೋ ವೃದ್ಧೆಯ ಪರಿಚಯವಾದಂದಿನಿಂದ ಗಮನಿಸುತ್ತಿದ್ದೇನೆ.  ಅವಳ ದಿಟ್ಟತನ ಅಚ್ಚರಿ ಉಂಟುಮಾಡುತ್ತಿದೆ. ಅವಳು ತನ್ನೆಲ್ಲಾ  ಕರ್ತವ್ಯ ಮುಗಿಸಿದ್ದಳು, ಮಕ್ಕಳನ್ನು ಓದಿಸಿ ಅವರ ಕಾಲಮೇಲೆ ಅವರು ನಿಲ್ಲುವ ಹಾಗೆ ಮಾಡಿದ್ದಾಳೆ. ಆಗಾಗ ಮಕ್ಕಳು ಬಂದು ಹೋಗುತ್ತಿರುತ್ತಾರೆ. ತೊಂಬತ್ತು ವರ್ಷಆದರೂ ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಾಳೆ, ಕೈಯಲ್ಲಿ ಕೋಲು  ಹಿಡಿದು ಸಣ್ಣ ನೂಕುವ ಗಾಡಿಯಲ್ಲಿ ಅಗತ್ಯ ವಸ್ತುಗಳನ್ನು ಕೊಂಡು ತರುತ್ತಾಳೆ, ಇಲ್ಲಿ ಬಹಳಷ್ಟು ವಯಸ್ಸಾದವರು ನಡೆದೇ ಹೋಗುತ್ತಿರುತ್ತಾರೆ. ಅವರೆಲ್ಲರೂ ಬೈಸಿಕಲ್ ತುಳಿಯುವ ಪರಿ ನೋಡಿದರೆ ಗೊತ್ತಾಗುತ್ತದೆ ,  ಇದೆಲ್ಲ ಅವರಿಗೆ ಚಿಕ್ಕಂದಿನ ಅಭ್ಯಾಸ ಎಂದು. ಮೊಮ್ಮಕ್ಕಳನ್ನು ಅಜ್ಜ ಅಜ್ಜಿಯರು ಸುತ್ತಾಟಕ್ಕೆ ಕರೆದುಕೊಂಡು ಹೋಗಿ ಅಲ್ಲಿಯ ವಿಷಯಗಳನ್ನು ತಿಳಿಸುವ ಪರಿ ಬೆರಗು ಮೂಡಿಸುತ್ತದೆ. ಇಲ್ಲಿಯ ಸರಕಾರ ನಿವೃತ್ತಿ ವೇತನ ಕೈತುಂಬ ಕೊಡುತ್ತಾರೆ, ಅಂತೇಲೆವಯಸ್ಸಾದವರು  ಕಣ್ಣಗೆ ಕಂಡ ಬಟ್ಟೆ ತೊಟ್ಟು ಸಂತಸದಿಂದ ಉತ್ಸಾಹವಾದ ಜೀವನ ನಡೆಸುತ್ತಾರೆ. ಅವರಲ್ಲೂ ಮಮಕಾರಗಳು, ಅನುಬಂಧಗಳಿವೆ. ಮಕ್ಕಳು ಮೊಮ್ಮಕ್ಕಳು, ಅಕ್ಕ ತಂಗಿ ಹೀಗೆ ಸಂಬಂಧಗಳು ಗಟ್ಟಿಯಾಗಿರುತ್ತವೆ ಎಂದು ತಿಳಿದದ್ದು ಆ ಜರ್ಮನ್ ಮಹಿಳೆಯಿಂದ. ಆಕೆಗೆ ಬದುಕನ್ನು ಎದುರಿಸುವ ರೀತಿಯನ್ನು ಅವರಮ್ಮ ” ಕ್ರಿಸ್ಟಿನಾ”  ಹೇಳಿಕೊಟ್ಟಳಂತೆ.

              ” ಕ್ರಿಸ್ಟಿನಾ” ಆಕೆಯ ಫೋಟೋ ನೋಡಿದಾಗ ತಟ್ಟನೆ ನನಗೆ ನನ್ನವ್ವ ನೆನಪಾದಳು. ಈಗ್ಗೆ ಆಕೆ ಇದ್ದರೆ ೧೩೦ ವರ್ಷ. ಬಹುಶಃ ನನ್ನವ್ವನ ಆಸುಪಾಸಿನವಳೇ. ಕ್ರಿಸ್ಟಿನಾ ಎಷ್ಟು ಚೆಂದ ಇದ್ದಾಳೆ! ಆಧುನಿಕ ಮಹಿಳೆಯಂತೆ ಅಲಂಕಾರ! ವಿದ್ಯಾವಂತಳು, ವಿಜ್ಜ್ನಾನಿ,  ಸಬಲೆ. ಇಲ್ಲಿ ಹೆಣ್ಣುಮಕ್ಕಳಿಗೆ ಶತ ಶತಮಾನಗಳಿಂದಲೂ ಸಮಾನತೆ, ಸ್ವತಂತ್ರತೆಯ ಹಕ್ಕು ಇತ್ತು. ಆದರೆ ನನ್ನವ್ವ ಏಕೆ ಹಾಗಿದ್ದಳು?

              ಅವ್ವ ಎಂದರೆ ನಮ್ಮ ತಂದೆಯ ತಾಯಿ ಹನುಮಕ್ಕ. ಅವಳದು ನಾಗಸಮುದ್ರ ತವರು ಮನೆ, ಗಂಡನ ಮನೆ ಸಂಡೂರು ತಾಲೂಕಿನ ಬಂಡ್ರಿ . ಆಕೆಗೆ ಐದು ಗಂಡುಮಕ್ಕಳು ಎರೆಡು ಹೆಣ್ಣು ಮಕ್ಕಳು. ತುಂಬು ಕುಟುಂಬ, ಗಂಡ ಶಾನುಭೋಗರು ರಾಘಪ್ಪ ದತ್ತು ಪುತ್ರ. ಆತನ ಅಜ್ಜಿಪುಟ್ಟಮ್ಮ ಮಗಳ ಮಗ ಅಂದರೆ  ಮೊಮ್ಮಗನನ್ನು ತನ್ನ ಸಮಸ್ತ ಆಸ್ತಿಗೂ ವಾರಸುದಾರನನ್ನಾಗಿ ಮಾಡಿದ್ದಳು.

              ನನ್ನವ್ವ ಹನುಮಕ್ಕನಿಗೆ  ಕೊನೆಯ ಮಗ ನಮ್ಮಪ್ಪ.  ಹಾಗಾಗಿ ಅವ್ವನಿಗೆ ವಯಸ್ಸಾಗಿತ್ತು. ನಾನು ಹನ್ನೆರೆಡು ವಯಸ್ಸಿಗೆ ಬರುವವರೆಗೂ ಮಾತ್ರ ಇದ್ದಳು. ತಂಗಿ ತಮ್ಮಂದಿರು ಹುಟ್ಟುವವರೆಗೂ ಅವ್ವನೇ ಗೆಳತಿ. ನನ್ನಮ್ಮ , ಅವ್ವನಿಗೆ ತಮ್ಮನ ಮಗಳು ಸೋದರ ಸೊಸೆಯನ್ನೇ ಮಗನಿಗೆ ತಂದುಕೊಂಡಿದ್ದಳು. ಅವ್ವ  ಒಳ್ಳೆಯ ಬಣ್ಣ. ಉದ್ದನೆಯ ಮೂಗು, ಪುಟ್ಟ ಬಾಯಿ  ನಿಜಕ್ಕೂ ಸುಂದರಿ. ಆದರೆ ಮಡಿ ಹೆಂಗಸು. ಅಂತಹವರು ಉಡುವ ಸೀರೆಗಳು ಬೇರೆ ರೀತಿಯೇ ಇರುತ್ತಿದ್ದವು . ಯಾವಾಗಲು ಸೆರಗು ಹೊದ್ದು ತಲೆ ಮುಚ್ಚಿಕೊಂಡಿರುತ್ತಿದ್ದಳು .  ನಾನು ಅವ್ವನ ಪಕ್ಕ ಮಲಗುತ್ತಿದ್ದೆ ರಾತ್ರಿ ಹೊತ್ತು ಅವಳನ್ನು ಹತ್ತಿರದಿಂದ ನೋಡಿ ನನ್ನ ಮುಗ್ದ ಮನಸ್ಸಿಗೆ ನೂರಾರು ಯೋಚನೆ ಬರುತ್ತಿತ್ತು. ಅವ್ವನೇಕೆ ಎಲ್ಲರಹಾಗಿಲ್ಲ?

              ಅವಳ ಆ ವಿರೂಪವು ಪ್ರಶ್ನಾರ್ಥಕ ಚಿನ್ಹೆ ಯಾಗಿರುತ್ತಿತ್ತು. ಒಂದೊಮ್ಮೆ ನಾನು ”ಅವ್ವ ನೀ ಹೀಗೇಕೆ? ಎಲ್ಲರಂತೇಕಿಲ್ಲ? ಎಂದಾಗ ಏನು ಹೇಳದೆ ಕಣ್ಣ ತುಂಬ ನೀರು ತುಂಬಿದಳು. ಅದೆಷ್ಟು ನೋವನುಂಗಿದ್ದಳೋ ಕಣ್ಣೀರನ್ನು ಹೊರಗೆ ಬಿಡದೆ ತಡೆಯುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ. ನನಗೆ ಅವ್ವನ ಮೇಲೆ ಅಪಾರ ಪ್ರೀತಿ. ಪ್ರತಿದಿನ ರಾತ್ರಿ ನನ್ನ  ತಲೆಸವರುತ್ತಾ ಬಂಡ್ರಿ  ಕತೆಯನ್ನೆಲ್ಲ ಹೇಳುತ್ತಿದ್ದಳು.

              ಬಂಡ್ರಿಯ ಜಮೀನ್ದಾರ  ಸಾಹುಕಾರ ರಾಗಪ್ಪನಿಗೆ ತನ್ನಪ್ಪ ತನ್ನನ್ನು ಮದುವೆ  ಮಾಡಿ ಕೊಟ್ಟಿದ್ದು, ಅಜ್ಜಿ ಮೊಮ್ಮಗ ಇಬ್ಬರೇ ಇದ್ದ ಆ ಮನೆಗೆ ತಾನು ಕಾಲಿಟ್ಟಿದ್ದು, ಆ ಸಿರಿವಂತಿಕೆ, ಮರ್ಯಾದೆ ಎಲ್ಲವನ್ನು ಕಂಡು ಕೊನೆ ಕಾಲಕ್ಕೆ  ಊರಿನ ವ್ಯಾಜ್ಯದಲ್ಲಿ ಮುಗ್ದ ರಾಗಪ್ಪನ ಕರಗಿದ ಆಸ್ತಿ  ಎಲ್ಲವನ್ನು ಸಹಿಸಿ  ಗಟ್ಟಿಯಾದ ಬಂಡೆಯಂತಾಗಿದ್ದಳು ನನ್ನವ್ವ.

              ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿ, ಐದು ಗಂಡುಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ತಮ್ಮ ಕಾಲ

ಮೇಲೆ ತಾವು ನಿಲ್ಲುವಂತೆ ಮಾಡಿದ ಚತುರೆ ಅವ್ವ. ಊರಲ್ಲಿ ನಡೆಯುವ ಯಾವ ಕಲುಷಿತ ಗಾಳಿ ತನ್ನ ಮಕ್ಕಳ ಮೇಲೆ ಬೀಳದಂತೆ ತಡೆದು ಅವರನ್ನೆಲ್ಲ ಉಚ್ಛ ಹುದ್ದೆಗೆ ಸೇರಿಸಿದ ಧೈರ್ಯ ಮೆಚ್ಚಲೇಬೇಕು.

              ತಾತ ತುಂಬಾ ಮೆದುಸ್ವಭಾವದವರಂತೆ ನಾನು ನೋಡಿರಲಿಲ್ಲ. ನನ್ನಪ್ಪನಿಗೆ ಕೆಲಸ ಸಿಕ್ಕ ಸಂತಸವನ್ನು ಊರೆಲ್ಲ ಹಂಚಿ  ಅಂದೇ ಇಹಲೋಕ ತ್ಯೆಜಿಸಿದರಂತೆ.  ಮಕ್ಕಳಿಗೆ ಹಾಸಿಗೆ ಇದ್ದುದರಲ್ಲಿ ಕಾಲು ಚಾಚು ರೀತಿ ಹೇಳಿಕೊಟ್ಟಿದ್ದು ಅವ್ವ. ಐದು ಜನರು ಒಳ್ಳೆಯ ಹುದ್ದೆಯಲ್ಲಿದ್ದರು. ಅವರ ವಿದ್ಯೆಯೇ ಅವರಿಗೆ ದಾರಿದೀಪವಾಗಿತ್ತು. ಅವ್ವ ಒಂದು ಮಾತು ಹೇಳುತ್ತಾ ಇದ್ದಳು “ಆಸ್ತಿ ಯಾವತ್ತೂ ಶಾಶ್ವತ  ಅಲ್ಲ ವಿದ್ಯೆ ಯಾವತ್ತೂ ಯಾರು ಕಸಿದುಕೊಳ್ಳದ ಆಸ್ತಿ”. ಅವ್ವನಿಗೆ ಆ ಊರು ಅಲ್ಲಿಯ ವ್ಯಾಜ್ಯಗಳು ಎಷ್ಟೊಂದು ಹೈರಾಣಗೊಳಿಸಿತ್ತೆಂದರೆ ತನ್ನ ಮಕ್ಕಳು ಯಾರು ಅಲ್ಲಿ ನೆಲೆಸಿಲ್ಲ ಎಂದು ಯಾವತ್ತೂ  ಕೊರಗುತ್ತಿರಲಿಲ್ಲ. ಬದಲಿಗೆ ಐದು ಜನರು ತಮ್ಮ ಕಾಲ ಮೇಲೆತಾವು ನಿಂತು ಅಚ್ಚುಕಟ್ಟಾಗಿ ಸಂಸಾರ ನಡೆಸುವುದ ಕಂಡು ಹೆಮ್ಮೆಪಟ್ಟುಕೊಳ್ಳುತ್ತಿದ್ದಳು.

              ನಾಗಸಮುದ್ರದಿಂದ ನನ್ನವ್ವನ ತಮ್ಮ , ನನ್ನ ಅಮ್ಮನ ತಂದೆ  ತಾತ ಬಂದರೆ ಅಕ್ಕ ತಮ್ಮನ ಮಾತಿನ ಧಾಟಿ, ಉಭಯಕುಶಲೋಪರೀ, ಮಕ್ಕಳ ಬಳಿ ಹೇಳಲಾಗದ್ದನ್ನು ತಮ್ಮನ ಬಳಿ ಹೇಳುವುದು, ತಾತನೋ ಮಗಳು ಮೊಮ್ಮಕ್ಕಳ ಜೊತೆ ಅಕ್ಕನಿಗೂ ತವರು ಮನೆಗೆ ಕರೆದೊಯ್ಯುವುದು ಎಷ್ಟು ಚೆಂದ ಇತ್ತು! ತಾತನ ಪ್ರಭಾವ ಎಷ್ಟಿತ್ತೆಂದರೆ ಅಪ್ಪ ದೊಡ್ಡಪ್ಪಂದಿರೆಲ್ಲ ಅವ್ರಮ್ಮನನ್ನು ತಾತ ಕರೆದಂತೆ ತಾವು ಅಕ್ಕ ಅಂತೇಲೇ ಕರೆಯುತ್ತಿದ್ದರು.

              ” ನನ್ನಕ್ಕ ತೆಳ್ಳಗೆ ಬೆಳ್ಳಗೆ ಹಣೆತುಂಬಾ ಕುಂಕುಮ ಇಟ್ಟು, ಜಡೆಹೆಣೆದ ಕೂದಲನ್ನು ತುರುಬು ಕಟ್ಟಿ, ಸಿಹಿ ನೀರ ಬಾವಿಯಿಂದ ತಲೆ ಮೇಲೊಂದು ಕೊಡ ಕೈಯ್ಯಲ್ಲೊಂದು ಕೊಡ ಹಿಡಿದು ಬರುತ್ತಿದ್ದಳು, ಆಗ ಎಷ್ಟು ಗಟ್ಟಿಮುಟ್ಟಾಗಿದ್ದಳು ಬಹಳ ಸುಂದರಿ ” ಎಂದು ತಮ್ಮ ಹೇಳುತ್ತಿದ್ದರೆ ನನ್ನವ್ವ ವಿಷಾದದ ನಗೆ ಬೀರುತ್ತಿದ್ದಳು. ಆ ನಗೆಯ ಹಿಂದೆ ಅದೆಷ್ಟು ನೋವಿತ್ತೋ

              ಅವ್ವನಿಗೆ ಯಾರು ಹಾಗಿರಲು ಒತ್ತಾಯಮಾಡಿರಲಿಲ್ಲ, ಅಂದಿನ ಸಮಾಜಕ್ಕೆ ಹೆದರಿಯೋ ತನ್ನ ಗೆಳತಿಯರು ಅಕ್ಕತಂಗಿಯರಂತೆ  ತಾನಿರಬೇಕೆಂಬ ಭ್ರಮೆಯೋ ಒಟ್ಟಿನಲ್ಲಿ ವಿರೂಪಿಯಾಗಿದ್ದಳು.

              ಇಂದು ಕ್ರಿಸ್ಟಿನಾಳ ಫೋಟೋ ನೋಡಿದಾಗಿಂದ ಮನದಲ್ಲೇನೋ ಹೊಯ್ದಾಟ. ನನ್ನವ್ವನಲ್ಲೂ ಅವಳಷ್ಟೇ ದಿಟ್ಟತನ, ಮಕ್ಕಳನ್ನು  ಸನ್ಮಾರ್ಗದಿ ಬೆಳೆಸುವ ಅಗಾಧ ಶಕ್ತಿ,ಕಷ್ಟಗಳನ್ನು ಸಹಿಸಿ ಕುಟುಂಬವನ್ನು ಮೇರು ಮಟ್ಟಕ್ಕೆ ತರುವಛಲ ಇವೆಲ್ಲ ಗಮನಿಸಿದಾಗ  ಅವಳೊಬ್ಬ ಕೌಟುಂಬಿಕ ವಿಜ್ಜ್ಞಾನಿಯಾಗಿದ್ದಳಲ್ಲವೇ ?

ಮತ್ತೇಕೆ ಅವಳಿಗೆ ಆ ವಿರೂಪ?  ಅದು ಅವಳಿಗೆ ಹಿಡಿದ ಗ್ರಹಣವೇ?  ಗ್ರಹಣವಾಗಿದ್ದರೆ ಬಿಡಬೇಕಿತ್ತಲ್ಲವೇ? ಇಲ್ಲ ಅದು ಶಾಪ ಹೌದು ನನ್ನವ್ವ ಶಾಪಗ್ರಸ್ತೆ.

******************************************

Leave a Reply

Back To Top