ಅಂಕಣ ಬರಹ

ಪಡುವಣ ನಾಡಿನ ಪ್ರೇಮವೀರ

ಪಡುವಣ ನಾಡಿನ ಪ್ರೇಮವೀರ
ಇಂಗ್ಲಿಷ್ ಮೂಲ : ಜೆ.ಎಂ. ಸಿಂಜ್ ಕನ್ನಡಕ್ಕೆ : ಡಾ.ಬಸವರಾಜ ನಾಯ್ಕರ್
ಗೀತಾಂಜಲಿ ಪಬ್ಲಿಕೇಷನ್ಸ್
ಪ್ರಕಟಣಾ ವರ್ಷ : ೨೦೦೮
ಬೆಲೆ : ರೂ.೧೨೫
ಪುಟಗಳು : ೨೪೦

ಐರ್‌ಲ್ಯಾಂಡಿನ ಪ್ರಸಿದ್ಧ ನಾಟಕಕಾರ ಜೆ.ಎಂ.ಸಿಂಜ್‌ನ ಐದು ನಾಟಕಗಳು ಇಲ್ಲಿವೆ. ಸುಸಂಸ್ಕೃತ ಮನೆತನದಲ್ಲಿ ಹುಟ್ಟಿ ಬೆಳೆದ ಸಿಂಜ್ ತನ್ನ ಬಾಲ್ಯವನ್ನು ದಕ್ಷಿಣ ಡಬ್ಲಿನ್‌ನ ಗುಡ್ಡಗಾಡು ಪ್ರದೇಶದಲ್ಲಿ ಕಳೆದಿದ್ದ. ಆದ್ದರಿಂದಲೇ ನಿಸರ್ಗ ಸೌಂದರ್ಯದ ಬಗ್ಗೆ ಅಪಾರ ಒಲವನ್ನು ಅವನು ಬೆಳೆಸಿಕೊಂಡ. ಅವನ ನಾಟಕಗಳಲ್ಲಿ ಹಳ್ಳಿಯ ಬದುಕಿನ ಸನ್ನಿವೇಶಗಳು ಮತ್ತು ವರ್ಣನೆಗಳು ಯಥೇಚ್ಛವಾಗಿ ಕಾಣ ಸಿಗುತ್ತವೆ.  ಸಿಂಜ್ ಬದುಕಿದ್ದು ಮೂವತ್ತೇಳು ವರ್ಷಗಳ ಕಾಲ ಮಾತ್ರ. ಅದರೊಳಗೆ ಒಟ್ಟು ಆರು ನಾಟಕಗಳನ್ನು ಅವನು ಬರೆದ. ಅವುಗಳಲ್ಲಿ ಐದು ನಾಟಕಗಳು ಐರಿಷ್ ನ್ಯಾಷನಲ್ ಥಿಯೇಟರಿನಲ್ಲಿ ಪ್ರದರ್ಶನಗೊಂಡವು. ಅವು ಶಾಡೋ ಆಫ್ ದ ಗ್ಲೆನ್ , ರೈಡರ‍್ಸ್ ಟು  ದ ಸೀ, ದಿ ವೆಲ್ ಆಫ್ ದಿ ಸೇಂಟ್ಸ್, ದ ಪ್ಲೇಬಾಯ್ ಆಫ್ ದಿ ವೆಸ್ಟೆರ್ನ್ ವರ್ಲ್ಡ್ ಮತ್ತು ದಿ ಡೀಡ್ ಆಫ್ ದಿ ಸಾರೋಜ್. ಈ ಐದೂ ನಾಟಕಗಳನ್ನು ಬಸವರಾಜ ನಾಯ್ಕರ್ ಅವರು ಕನ್ನಡದ ಜಾಯಮಾನಕ್ಕೆ ಹೊಂದಿಕೊಳ್ಳುವಂತೆ  ರೂಪಾಂತರಿಸಿದ್ದಾರೆ.

 ದಿ ಶಾಡೋ ಆಫ್ ದಿ ಗ್ಲೆನ್( ಕೊಳ್ಳದ ನೆರಳು) ನಾಟಕವು ಒಂದು ಹಳ್ಳಿಯ ಒಂಟಿ ಮನೆಯಲ್ಲಿ ನಡೆಯುವ ಘಟನೆಯನ್ನು ಚಿತ್ರಿಸುತ್ತದೆ. ಈ ನಾಟಕವು ಸಿಂಜ್‌ನ ಆತ್ಮ ಚರಿತ್ರೆಯಂತಿದೆ. ಸಾವಿನ ಬಗೆಗಿನ ಆತನ ಭಯವನ್ನು ಇದು ಚಿತ್ರಿಸುತ್ತದೆ. ಹೊರನೋಟಕ್ಕೆ ಇದು ಹಾಸ್ಯನಾಟಕದಂತೆ ಕಂಡರೂ ಹೆಣ್ಣಿನ ಮನಸ್ಸನ್ನು ಕಾಡುವ ಅಭದ್ರತೆಯ ಭಾವನೆ ಮತ್ತು ಹೆಣ್ಣು ಸದಾ ಗಂಡಿನ ಮೇಲೆ ಅವಲಂಬಿಸುವ ಹಾಗೂ ಗಂಡು ಅವಳ ಬಗ್ಗೆ ತೋರಿಸುವ ತಾತ್ಸಾರದಿಂದಾಗಿ ಸಂಭವಿಸುವ ದುರಂತಗಳನ್ನು ಅದು  ಚಿತ್ರಿಸುತ್ತದೆ. ‘ರೈಡರ‍್ಸ್ ಟು ದ ಸೀ’( ಸಾವಿನೆಡೆಗೆ ಸವಾರಿ) ನಾಟಕವು ಸಿಂಜ್ ವಾಸಿಸಿದ್ದ ಆರನ್ ಎಂಬ ಹಳ್ಳಿಯ ಹಿನ್ನೆಲೆಯನ್ನು ಹೊಂದಿದೆ. ಅಲ್ಲಿನ ಒಂದು ಕುಟುಂಬದಲ್ಲಿ ಜನಿಸುವ ಎಲ್ಲ ಮಕ್ಕಳೂ ಸಮುದ್ರ ಪಾಲಾಗಿ, ತಾಯಿ ಅನುಭವಿಸುವ ಯಾತನೆಯನ್ನು ಚಿತ್ರಿಸುತ್ತದೆ. ಇಲ್ಲೂ ಸಿಂಜ್‌ನ ಸಾವಿನ ಭಯವೇ ಇದೆ.  ‘ದ ಥಿಂಕರ‍್ಸ್ ವೆಡ್ಡಿಂಗ್ ‘( ಕಲಾಯಿಗಾರನ ಮದುವೆ) ಎನ್ನುವುದು ಒಂದು ವೈನೋದಿಕ. ಇಲ್ಲಿನ ಮುಖ್ಯ ಪಾತ್ರಗಳು ಐರಿಷ್ ಕಲಾಯಿಗಾರರು.

‘ದ ಪ್ಲೇಬಾಯ್ ಆಫ್ ದ ವೆಸ್ಟೆರ್ನ್ ವರ್ಲ್ಡ್’ (ಪಡುವಣ ನಾಡಿನ ಪ್ರೇಮವೀರ) ಬಹಳ ಪ್ರಸಿದ್ಧ ನಾಟಕ.  ಇದು ವೈನೋದಿಕದಂತೆ ಕಂಡರೂ ಒಂದು ದುರಂತ ಕಥೆ. ಕ್ರಿಸ್ತಿ ಮ್ಯಾಹನ್ ಎಂಬ ಯುವಕ ಹೇಳುವ ಸುಳ್ಳುಗಳಿಂದ  ಅವನು ಹೋಗುವ ಸಾರಾಯಿ ಅಂಗಡಿಯ ಮಾಲೀಕ ಫ್ಲಾಹರ್ಟಿಯ ಮಗಳು ಪೆಗೀನ್ ಮೈಕಳನ್ನು ಮದುವೆಯಾಗುವ ಅವಕಾಶವನ್ನು ಅವನು ಕಳೆದುಕೊಳ್ಳುತ್ತಾನೆ. ಕಾನೂನಿನ ಭಯದಿಂದಾಗಿ ಅವನೂ ಊರು ಬಿಟ್ಟು ಹೋದ ನಂತರ ಅವನ ವ್ಯಕ್ತಿತ್ವದ ಪ್ರಭಾವದಿಂದ ಅವನಲ್ಲಿ ಮೋಹಿತಳಾದ ಪೆಗೀನ್ ದುಃಖಿಸುತ್ತಾಳೆ.  ಕೊನೆಯ ನಾಟಕ ‘ದ ವೆಲ್ ಆಫ್ ದ ಸೇಂಟ್ಸ್’ ( ಜೋಗೀಭಾವಿ) ಮೂರು ಅಂಕಗಳಿರುವ ಒಂದು ನಾಟಕ.  ಮಾರ್ಟಿನ್ ಮತ್ತು ಮೇರಿ ಡೌಲ್ ಎಂಬ ಕುರುಡ ದಂಪತಿಗಳು ಸಂತನೊಬ್ಬನ ಸಹಾಯದಿಂದ ದೃಷ್ಟಿ ಪಡೆದುಕೊಂಡರೂ ತಮ್ಮ  ಪ್ರಮಾ ದದಿಂದಾಗಿ ಬದುಕನ್ನು ಹಾಳು ಮಾಡಿಕೊಳ್ಳುವ ಕಥೆ ಇಲ್ಲಿದೆ. ನಾಟಕದ ವಸ್ತುವಿಗೆ ಐರ್‌ಲ್ಯಾಂಡಿನ ಹಿನ್ನೆಲೆಯಿದ್ದರೂ ಇದು ಸಾರ್ವತ್ರಿಕ ಮಹತ್ವ ಪಡೆದಂತಹ ಕತೆ. ಈ ಎಲ್ಲ ನಾಟಕಗಳು ಕಲಬುರ್ಗಿ ಮತ್ತು ಧಾರವಾಡಗಳಲ್ಲಿ ರಂಗದ ಮೇಲೆ ಬಂದಿವೆ ಮತ್ತು ಆಕಾಶವಾಣಿಯಲ್ಲೂ ಪ್ರಸಾರವಾಗಿವೆ. ಅನುಭವಿ ಅನುವಾದಕರು ಮಾತ್ರವಲ್ಲದೆ ಭಾಷಾ ವಿದ್ವಾಂಸರೂ ಆಗಿರುವ ನಾಯ್ಕರ್ ಅವರು ಮಾಡಿದ ರೂಪಾಂತರವು ನಾಟಕಗಳಿಗೆ ಕನ್ನಡದ್ದೇ ಮೆರುಗನ್ನು ನೀಡಿವೆ.

*****************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Leave a Reply

Back To Top