ಹೂ ಬೆಳಗು

ಕವಿತೆ

ಹೂ ಬೆಳಗು

ಫಾಲ್ಗುಣ ಗೌಡ ಅಚವೆ

ಸರಿಯುವ ಕತ್ತಲನ್ನು ಮರದ
ಎಲೆಗಳ ನಡುವೆ ಕುಳಿತ ಹಕ್ಕಿಗಳು
ತದೇಕ ಚಿತ್ತದಿಂದ ನೋಡುತ್ತಿವೆ

ಆಗಷ್ಟೇ ಕಣ್ಣು ಬಿಟ್ಟ ನಸುಕು
ದೊಸೆ ಹೊಯ್ಯಲು
ಬೆಂಕಿ ಒಟ್ಟುತ್ತಿದೆ ಹೊಂಗನಸ ನೆನೆದು
ಒಂದೇ ಸವನೆ ಮುಸುಕುವ ಮಂಜು
ಮರದ ಎಲೆಗಳ ತೋಯಿಸಿ
ಕಚಗುಳಿಯಿಡುತ್ತಿದೆ

ಆಗತಾನೇ ಹೊಳೆ ಸಾಲಿನಲ್ಲಿ
ಮುಖ ತೊಳೆದುಕೊಂಡ ಮೋಡಗಳ ಕೆನ್ನೆ
ಅರಳುವ ಎಳೆಬಿಸಿಲಿಗೆ
ಕೆಂಪಾಗುಗುತ್ತಿದೆ

ದಾಸಾಳದ ಹೂಗಳು
ಹೂ ಕೊಯ್ಯುವ ಪುಟ್ಟಿಯ
ಪುಟಾಣಿ ಕೈಯ ಮುದ್ದು ಮಾಡುತ್ತಿವೆ

ತಡವಾಗಿ ಎದ್ದ ಮುತ್ತುಮಲ್ಲಿಗೆ
ಹೂಗಳು ಮುಖಕ್ಕೆ ಇಬ್ಬನಿಯೆರಚಿ
ನಿದ್ದೆಗಣ್ಣುಗಳನ್ನು ತೊಳೆಯುತ್ತಿವೆ

ಕಣ್ಣು ತೆರೆದೇ ಸಣ್ಣ ನಿದ್ದೆಗೆ ಜಾರಿದ
ಅಬ್ಬಲಿ ಹೂಗಳನ್ನು
ಬೀಸಿ ಬಂದ ತಂಗಾಳಿ ಮುದ್ದಿಸಿ
ಎಬ್ಬಿಸುತ್ತಿದೆ

ಹೊದ್ದ ಚಾದರ ಸರಿಸಿ
ಮಗುವಿನ ಕನಸಿನ ಕದ ತೆರೆದು
ಕಣ್ಣೆವೆ ಉಜ್ಜಿಕೊಳ್ಳುತ್ತಲೇ ತೆರೆವ
ಕೂಸಿಗೆ ಕರವೀರದ ಹೂಗಳು ಮಂದಹಾಸ ಬೀರಿವೆ

ನೈದಿಲೆಯ ಮೊಗ್ಗುಗಳಿಗೆ
ಹೂ ಮುತ್ತನಿತ್ತ ಕ್ರೌಂಚ ಪಕ್ಷಿಗಳು
ಹಿಮದಂತಹ ನೀರಲ್ಲಿ ತೇಲುತ್ತಿವೆ
ಆವರಿಸಿದ ಚಳಿ ಲೆಕ್ಕಿಸದೆ

ಮೊಗ್ಗುಗಳು ನಾಳೆ ಅರಳುವ
ಖುಷಿ ಹಂಚಿಕೊಂಡರೆ
ಪಾತರಗಿತ್ತಿಗಳು ದಿನಪತ್ರಿಕೆ ಓದುತ್ತಿವೆ

ಹೂವಿನ ಪರಿಮಳವ ಹೊತ್ತೊಯ್ಯುವ ತಂಗಾಳಿಯ ರೀತಿ
ಅಲೌಕಿಕ ಬೆಳಗಲ್ಲಿ ಅಕಾರಣ ಪ್ರೀತಿ

ಎಲೆ ಎಲೆಗಳ ಮೇಲೆ
ಕುಳಿತಿಹ ಚಿಟ್ಟೆಯ ಕಂಡು
ಪ್ರತಿ ಗಿಡ ತೊಟ್ಟಿವೆ ಹೂವಿನ ಬಟ್ಟೆ!!

*********************************************************

7 thoughts on “ಹೂ ಬೆಳಗು

  1. ಪ್ರಕೃತಿಗೆ ಬೆಸುಗೆ ಹಾಕುವ ಕಲೆ ನಿಮಗೆ ಮಾತ್ರ ಹೊಳೆತದೆ ಮಾರಾಯ್ರೆ…

  2. ನಿಸರ್ಗವನ್ನು ಅಕ್ಷರಗಳಲ್ಲಿ ಕಟ್ಟಿ ಹಾಕ್ತಿರಿ ನೀವು

  3. ತಮ್ಮ ಬೆಳಗು ಕವನದಲ್ಲಿ ಮುಂಜಾನೆಯ ಸಮಯದಲ್ಲಿ ಪರಿಸರದ ಸುತ್ತೆಲ್ಲಾ ಆಗುವ ಬದಲಾವಣೆ ಸೊಗಸಾಗಿ ಹೆಣೆದಿದ್ದೀರಿ.ಧನ್ಯವಾದಗಳು

  4. ಪ್ರಕ್ರತಿಯಲ್ಲಿ ಉಸಿರು ಬೆಸೆದು ಅಕ್ಷರ ಪದವಾಗಿ ಪ್ರಕೃತಿಗೆ ಕಿರೀಟದಂತಿದೆ ಕವನ ಸರ್

  5. ಪೇಪರ್ ಓದೋ ಪಾತರಗಿತ್ತಿ.ಹೂವಿನ ಬಟ್ಟೆ ತೊಟ್ಟ ಗಿಡ.ಮುದ ನೀಡೋ ಶಬ್ದಗಳು.

  6. ಕವಿತೆ ಓದಿ ಪ್ರತಿಕ್ರಿಯಿಸಿದ ಎಲ್ಲ ಸಹೃದಯರಿಗೆ ವಂದನೆಗಳು..

  7. ಫಾಲ್ಗುಣ ಗೌಡ್ರೆ. ಕವನ ವಾಚಿಸಿದ ನನಗೆ ತುಂಬಾ ಖುಷಿಯಾಯಿತು. ಪ್ರಕೃತಿಯ ವರ್ಣನೆ ಸೊಗಸಾಗಿ ಮೂಡಿ ಬಂದಿದೆ. ಬೇಂದ್ರೆ ಅಜ್ಜನ, ಕುವೆಂಪುರವರ ಕವನಗಳನ್ನು ವಾಚಿಸಿದ ಅನುಭವವಾಯಿತು. ಧನ್ಯವಾದಗಳು.

Leave a Reply

Back To Top