ವಾರ್ಷಿಕೋತ್ಸವದ ವಿಶೇಷ ಲೇಖನವಾರ್ಷಿಕೋತ್ಸವದ ವಿಶೇಷ ಲೇಖನ

ಅನುವಾದಕರ ಮುಂದಿರುವ

ಸವಾಲುಗಳು

ಪಾರ್ವತಿ ಜಿ.ಐತಾಳ್

ಅನುವಾದ ಅಥವಾ ಭಾಷಾಂತರವೆಂದರೆ ಭಾಷೆಯನ್ನು ಬದಲಾಯಿಸುವ ಕ್ರಿಯೆ ಎಂಬುದು ಸಾಮಾನ್ಯರ ಅಭಿಪ್ರಾಯ. ಇದು ಎರಡು ಭಾಷೆಗಳ ನಡುವೆ ಅನುವಾದಕ/ಕಿಯ ಮೂಲಕ ನಡೆಯುವ ಸಂವಹನ. ಇದಕ್ಕೆ ಮುಖ್ಯವಾಗಿ ಬೇಕಾದುದು ಎರಡು ಭಾಷೆಗಳ ಜ್ಞಾನ. ಯಾವ ಭಾಷೆಯಿಂದ ನಾವು ಅನುವಾದ ಮಾಡುತ್ತಿದ್ದೇವೋ ಅದನ್ನು ಮೂಲ ಭಾಷೆಯೆಂದೂ ಯಾವ ಭಾಷೆಗೆ ಮಾಡುತ್ತಿದ್ದೇವೋ ಅದನ್ನು ಉದ್ದಿಷ್ಟ ಭಾಷೆಯೆಂದೂ ಕರೆಯುತ್ತೇವೆ. ಅನುವಾದಕನಿ/ಕಿಗೆ ತನ್ನ ಮಾತೃಭಾಷೆ ಅಥವಾ ಶಿಕ್ಷಣ ಮಾಧ್ಯಮದ ಭಾಷೆ ಚೆನ್ನಾಗಿ ತಿಳಿದಿರುತ್ತದೆ. ನಂತರ ಕಲಿತ ಭಾಷೆಯ ಮೇಲೆ ಅಷ್ಟು ಒಳ್ಳೆಯ ಹಿಡಿತವಿರುವುದಿಲ್ಲ. ಆದ್ದರಿಂದ ಹೆಚ್ಚು ಹಿಡಿತವಿರುವ ಭಾಷೆಯನ್ನು ಉದ್ದಿಷ್ಟ ಭಾಷೆಯಾಗಿ ಆತ ತೆಗೆದುಕೊಳ್ಳುತ್ತಾನೆ. ಅದು ಸೂಕ್ತ ಕೂಡಾ. ಅನುವಾದಕನಿಗೆ ಭಾಷೆ ಮಾತ್ರ ತಿಳಿದಿದ್ದರೆ ಸಾಲದು.ಪ್ರತಿಯೊಂದು ಭಾಷೆಯೊಳಗೆ ಹಾಸು ಹೊಕ್ಕಾಗಿರುವ ಸಂಸ್ಕೃತಿ ಮತ್ತು ಜೀವನಕ್ರಮಗಳ ಬಗ್ಗೆ ಕೂಡಾ ಅರಿವಿರಬೇಕು. ಅದಕ್ಕಾಗಿ ಆ ಭಾಷೆಯನ್ನಾಡುವ ಜನರೊಂದಿಗೆ ಬೆರೆತ ಅನುಭವವೂ ಇರಬೇಕು. ಇವು ಅನುವಾದಕನ ಪ್ರಾಥಮಿಕ ಅಗತ್ಯಗಳು.

       ಈ ಪ್ರಾಥಮಿಕ ಅರ್ಹತೆಗಳಿರು ಓರ್ವ ಅನುವಾದಕ/ಕಿ ಕೂಡಾ ಅನುವಾದ ಪ್ರಕ್ರಿಯೆಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾನೆ/ಳೆ. ಇವುಗಳನ್ನು ಬಾಹ್ಯ ಸಮಸ್ಯೆಗಳು ಮತ್ತು ಆಂತರಿಕ ಸಮಸ್ಯೆಗಳು ಎಂದು ವಿಂಗಡಿಸ ಬಹುದು. ಭಾಷೆಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಾಹ್ಯ ಸಮಸ್ಯೆಗಳೆಂದೂ ಅನುವಾದಕ/ಕಿ ಮತ್ತು ಮೂಲ ಲೇಖಕ/ಕಿಯರ ವ್ಯಕ್ತಿತ್ವ ಗಳಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಆಂತರಿಕ ಸಮಸ್ಯೆಗಳೆಂದೂ ಹೇಳಬಹುದು.

    ಭಾಷೆ ಮತ್ತು ಸಂಸ್ಕ್ರತಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಸತತ ಅಧ್ಯಯನ-ಅವಲೊಕನ-ಚಿಂತನಗಳ ಮೂಲಕ ನಿವಾರಿಸಿಕೊಳ್ಳ ಬಹುದು. ನಾವು ಒಂದು ಕೃತಿಯನ್ನು   ಅನುವಾದಕ್ಕೆ  ಎತ್ತಿಕೊಂಡಾಗ ಮೂಲಭಾಷೆ ತಿಳಿದಿದ್ದರೂ ಕೆಲವು ಕ್ಲಿಷ್ಟ ಪದಗಳು ಅರ್ಥವಾಗದಿದ್ದಾಗ ಶಬ್ದಕೋಶವನ್ನು ತೆರೆದು ನೋಡುತ್ತೇವೆ. ಆದರೆ ಶಬ್ದ ಕೋಶವು ನಮಗೆ ಅಗತ್ಯವಿರುವ ಎಲ್ಲಾ ಶಬ್ದಗಳ ಅರ್ಥ ಕೊಡುವುದಿಲ್ಲ. ಅಲ್ಲದೆ ಕೆಲವೊಮ್ಮೆ ಅಲ್ಲಿ ಒಂದು ಶಬ್ದಕ್ಕೆ ಎರಡು ಮೂರು ಅಥವಾ ಹೆಚ್ಚು ಅರ್ಥಗಳಿರುತ್ತವೆ. ಆಗ ನಾವು ಮೂಲ ಶಬ್ದಕ್ಕೆ ಸಮನಾಗಿ ನಿಲ್ಲ ಬಲ್ಲ ಪರ್ಯಾಯ ಪದವನ್ನು ಆಯ್ದುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆಗ ನಾವು ಮೂಲವಾಕ್ಯದ ಸಂದರ್ಭದ ಕುರಿತು   ಚೆನ್ನಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದು ಸಾಧ್ಯವಾಗುವುದು ಅನುವಾದಕನ ವಿಶೇಷವಾದ ಗ್ರಹಣ ಸಾಮರ್ಥ್ಯದ ಮೂಲಕ ಮಾತ್ರ. ಅದನ್ನು ರೂಢಿಸಿಕೊಳ್ಳದೆ ಇದ್ದರೆ ಅನುವಾದಕ ತನ್ನ ಕೆಲಸದಲ್ಲಿ ವೀಫಲನಾಗುತ್ತಾನೆ.ಉದಾಹರಣೆಗೆ   ಇಂಗ್ಲಿಷ್ ನ ಒಂದು ವಾಕ್ಯ ಹೀಗಿರುತ್ತದೆ ಅಂತಿಟ್ಟುಕೊಳ್ಳಿ :  The novel experience of watching Shakespeare’s play was highly thrilling.. ಇಲ್ಲಿ novel ಅನ್ನುವುದಕ್ಕೆ ಎರಡು ಅರ್ಥಗಳಿವೆ. ಒಂದು ಹೊಸತು ಇನ್ನೊಂದು ಕಾದಂಬರಿ. ಇಲ್ಲಿ ಅರ್ಥದ ಬಗ್ಗೆ ಅನುವಾದಕ ಹೆಚ್ಚು ತಲೆಕೆಡಿಸಿಕೊಳ್ಳದೆ ಕಾದಂಬರಿಯ ಅನುಭವ ಎಂದು ಹೇಳಿದರೆ ಅನರ್ಥವಾಗುತ್ತದೆ. ಅನೇಕ ಅನುವಾದಕ ಇಂಥ ಗೊಂದಲಗಳನ್ನುಂಟು ಮಾಡುವುದಿದೆ. ಇಂಥ ಸಾವಿರಾರು ಉದಾಹರಣೆಗಳನ್ನು ಕೊಡಬಹುದು. ಅದೇ ರೀತಿ ಮೂಲಭಾಷೆಯಲ್ಲಿರುವ ಪದಪುಂಜ ಅಥವಾ phrase ಗಳ ಅರ್ಥ ಕೂಡಾ ಆ ಸಂದರ್ಭದಲ್ಲಿ ಯಾವುದು ಸೂಕ್ತ ಅನ್ನುವುದನ್ನು ಆಲೋಚಿಸುವ ಹೊಣೆ ಅನುವಾದಕ/ಕಿಯದ್ದು. ಕನ್ನಡದಲ್ಲೇ ನೋಡಿ.ಕೈ ಅನ್ನುವ ಶಬ್ದ ಇನ್ನೊಂದು ಶಬ್ದದೊಂದಿಗೆ ಸೇರಿ phrase ಆಗಿ ಯಾವ ರೀತಿ ಅರ್ಥ ಬದಲಾಗುತ್ತ ಹೋಗುತ್ತದೆ ನೋಡಿ. ಕೈಕೊಡು, ಕೈ ಮಾಡು, ,ಕೈಯೆತ್ತು, ಕೈನೀಡು, ಕೈಬಿಡು ಕೈಹಚ್ಚು ಇತ್ಯಾದಿ. ಇನ್ನೊಂದು ಭಾಷೆಯಲ್ಲಿ ಈ ರೀತಿಯ phrase ಗಳು ಇಲ್ಲದಿರಲೂ ಬಹುದು. ಅದು ಅಲ್ಲಿನ ಭಾಷಾ ಬಳಕೆಯ ರೀತಿಯನ್ನು ಅವಲಂಬಿಸಿರುತ್ತದೆ. ಅದೇ ರೀತಿ ಗಾದೆ ಮಾತುಗಳು. ಭಿನ್ನ ಸಂಸ್ಕೃತಿಗಳಲ್ಲಿ ಗಾದೆ ಮಾತುಗಳು ಭಿನ್ನವಾಗಿರುತ್ತವೆ. ಅದು ಅನುವಾದಕನಿ/ಕಿಗೆ ಮೊದಲೇ ತಿಳಿದಿರಬೇಕು.  ಉದ್ದಿಷ್ಟ ಭಾಷೆಯಲ್ಲಿ ಅದೇ ಸಂದರ್ಭದಲ್ಲಿ ಯಾವ ಗಾದೆಮಾತನ್ನು ಬಳಸಬಹುದು, ಯಾವದು ಹೆಚ್ಚು ಸಹಜ ಮತ್ತು ಸೂಕ್ತ ಅನ್ನುವುದರ ಬಗ್ಗೆ ಅನುವಾದಕ/ಕಿ  ಗ್ರಹಿಸುವ ಸಾಮರ್ಥ್ಯವನ್ನು ರೂಪಿಸಿಕೊಳ್ಳಬೇಕು. ಉದಾಹರಣೆಗೆ ಇಂಗ್ಲಿಷ್ ನಲ್ಲಿರುವ ಒಂದು ಗಾದೆ ಮಾತು Make hay while the sun shines ಅಂತ. ಅಂದರೆ ಸೂರ್ಯನ ಬಿಸಿಲು ಇದ್ದಾಗಲೇ ಹುಲ್ಲು ಒಣಗಿಸಿಕೋ ಅಥವಾ ಸರಿಯಾದ ಅವಕಾಶ ಮುಂದೆ ಇದ್ದಾಗ ಅದನ್ನು ಸರಿಯಾಗಿ ಬಳಸಿಕೋ ಎಂದರ್ಥ. ಇದಕ್ಕೆ ಪರ್ಯಾಯವಾಗಿ ‘ಬೆಂಕಿ ಇದ್ದಾಗ ಚಳಿ ಕಾಯಿಸಿಕೋ’ ಎಂದು ಹೇಳಬಹುದು. ಇಂಥ ಸಂದರ್ಭಗಳಲ್ಲೆಲ್ಲ ಅನುವಾದಕ/ಕಿ ಅತ್ಯಂತ ಸೃಜನಶೀಲನಾ/ಳಾಗಿರಬೇಕಾಗುತ್ತದೆ.

Pile of colorful hardcover books. Stacked on a green stained wooden table with a green book on the top with copy space, overhead closeup view royalty free stock images

 ಇನ್ನು ಒಂದೇ ಮೂಲದ ಭಾಷೆಯಿಂದ ಹುಟ್ಟಿಕೊಂಡ ಹಲವು ಭಾಷೆಗಳು ನಮ್ಮ ಭಾರತದಂಥ ಬಹುಭಾಷಾ ದೇಶದಲ್ಲಿ ಬೇಕಾದಷ್ಟು ಇವೆ. ಇಂದು ಚಾಲ್ತಿಯಲ್ಲಿರುವ ಅನೇಕ ಬಾಷೆಗಳು ಸಂಸ್ಕೃತ ಜನ್ಯ ಅನ್ನುತ್ತೇವೆ. ಈ ವಿಚಾರದಲ್ಲಿ ಅನುವಾದದ ಒಂದು ಸಮಸ್ಯೆಯೆಂದರೆ ಬೇರೆ ಬೇರೆ ಭಾಷೆಗಳಲ್ಲಿ ಒಂದೇ ಶಬ್ದವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥದಲ್ಲಿ ಬಳಸಲಾಗುತ್ತದೆ ಅನ್ನುವುದು. ಉದಾಹರಣೆಗೆ ಹಿಂದಿಯಲ್ಲಿ ಉಪನ್ಯಾಸ ಅಂದರೆ ಕಾದಂಬರಿ. ಕನ್ನಡದಲ್ಲಿ ಅದೇ ಶಬ್ದದ ಅರ್ಥ ಬೇರೆ. ಮಲೆಯಾಳದಲ್ಲಿ ಅವಕಾಶಂ ಅಂದರೆ ಹಕ್ಕು.ಕನ್ನಡದ ಅರ್ಥ ಬೇರೆ.  ಹಿಂದಿಯಲ್ಲಿ ಸಂಸಾರ್ ಅಂದರೆ ಜಗತ್ತು.ಮಲೆಯಾಳದಲ್ಲಿ ಸಂಸಾರಂ ಅಂದರೆ ಮಾತು. ಇಂಥ ಶಬ್ದಗಳಿಗೆ ಸಾವಿರಾರು ಉದಾಹರಣೆಗಳನ್ನು ಕೊಡುತ್ತ ಹೋಗಬಹುದು.  ಇಂಥ ಸಂದರ್ಭಗಳಲ್ಲಿ ಅನುವಾದಕ/ಕಿ ಎಚ್ಚರಿಕೆಯಿಂದಿಲ್ಲದಿದ್ದರೆ ಅನುವಾದವು ಗೊಂದಲದ ಗೂಡಾಗಬಹುದು.

   ವ್ಯಕ್ತಿತ್ವದ ಸಮಸ್ಯೆಗಳು ಅಂತ ಹೇಳಿದೆ. ಒಬ್ಬ ಸೃಜನಶೀಲ ಅನುವಾದಕ/ಕಿಗೆ ಉಂಟಾಗುವ ಸಮಸ್ಯೆ ಇದು.ಒಂದು ಕೃತಿಯನ್ನು ಅನುವಾದಕ್ಕೆ ಎತ್ತಿಕೊಂಡಕೂಡಲೇ ಮೂಲಕೃತಿಯಲ್ಲಿ ಹೇಳಿದ ಕೆಲವು ವಿಚಾರಗಳ ಬಗ್ಗೆ ತನ್ನ ಅಭಿಪ್ರಾಯ/ಅನ್ನಿಸಿಕೆಗಳು ಭಿನ್ನವಾಗಿವೆಯೆಂದು ಅನ್ನಿಸಬಹುದು. ಒಬ್ಬ ಆದರ್ಶ ಅನುವಾದಕ/ಕಿ ಅನುವಾದಕ್ಕೆ ಕೈಹಚ್ಚಿದ ಕೂಡಲೇ ತನ್ನ ಚಿಂತನೆಗಳನ್ನು ಸ್ಥಗಿತಗೊಳಿಸಿ ಮೂಲ ಲೇಖಕನ ಸ್ಥಾನದಲ್ಲಿ ನಿಂತು ಆಲೋಚಿಸಲು ಕಲಿಯಬೇಕು. ಮುಲಲೇಖಕ ಯಾವ ಸಂದರ್ಭ ಸನ್ನಿವೇಶ ಪರಿಸರಗಳಲ್ಲಿ ಬರೆದನೋ ಅಂಥದ್ದೇ ವಾತಾವರಣವನ್ನು ತನ್ನ ಮನಸ್ಸಿನೊಳಗೆ ಸೃಷ್ಟಿಸಿ ಕೊಳ್ಳಬೇಕು. ಅನುವಾದವೆನ್ನುವುದು ಒಂದು ರೀತಿಯಲ್ಲಿ ಪರಕಾಯ ಪ್ರವೇಶವಿದ್ದಂತೆ.ಅನುವಾದಕನ ವ್ಯಕ್ತಿತ್ವವು ಮೂಲ ಲೇಖಕನ ವ್ಯಕ್ತಿತ್ವದೊಳಗೆ ಮಿಳಿತಗೊಳ್ಳಬೇಕು. ಹಾಗೆ ಆದಾಗಲಷ್ಟೇ ಮೂಲಕೃತಿಯ ಸತ್ವವು ಅನುವಾದದಲ್ಲಿ ಮರುಸೃಷ್ಟಿಯಾಗುತ್ತದೆ.  ಅನುವಾದಕನು ಅನುವಾದದಲ್ಲಿ ಮೂಲಲೇಖಕನ ಮಟ್ಟಕ್ಕೆ ಏರಲು ಸಾಧ್ಯವಾಗದೇ ಹೋದರೆ ಅದನ್ನು ಅಧೋನುವಾದ(under translation) ಅನ್ನುತ್ತಾರೆ. ಇದಕ್ಕೆ ಇವತ್ತು ಅನುವಾದಗೊಳ್ಳುತ್ತಿರುವ ಅನೇಕ ಅನುವಾದಿತ ಕೃತಿಗಳನ್ನು ಉದಾಹರಣೆಯಾಗಿ ಕೊಡಬಹುದು. ಹಾಗೆಯೇ ಕೆಲವೊಮ್ಮೆ ಅನುವಾದಕನ ಸೃಜನ ಸಾಮರ್ಥ್ಯ ಮತ್ತು ವಿದ್ವತ್ತುಗಳು ಮೂಲ ಲೇಖಕನನ್ನು ಮೀರಿಸುವಂತಿದ್ದರೆ ಕೆಲವೊಮ್ಮೆ ಅನುವಾದವು ಮೂಲಕೃತಿಯ ಉದಾತ್ತತೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಹುದು. ಇದನ್ನು ಊರ್ಧ್ವಾನುವಾದ(over translation) ಅನ್ನುತ್ತಾರೆ.ಇದಕ್ಕೆ ಸೃಜನಶೀಲ ಲೇಖಕರಾಗಿ ಯಶಸ್ವಿಗಳಾದವರು ಮಾಡಿದ ಅನುವಾದಿತ ಕೃತಿಗಳನ್ನು ಉದಾಹರಣೆಯಾಗಿ ಕೊಡಬಹುದು. ಆದರೆ ಇವು ಎರಡೂ ಅತಿಗಳೇ.  ಆದ್ದರಿಂದ   ಸಮರ್ಥ ಅನುವಾದಕ ಈ ಅತಿಗಳನ್ನು ಮೀರಿ ಮೂಲ ಕೃತಿಯ ಯಥಾವತ್ತಾದ  ಪ್ರತಿಕೃತಿಯನ್ನು ಕೊಡುವ ಜವಾಬ್ದಾರಿ ತನ್ನದು ಎಂಬುದನ್ನು ಅರಿತಿರಬೇಕು.

       ಇವೆಲ್ಲವೂ ಅನುವಾದಕ/ಕಿಯ ಮುಂದಿರುವ ಸಮಸ್ಯೆಗಳು ಮತ್ತು ಸವಾಲುಗಳು ಎನ್ನಬಹುದಾದರೂ ಇವು ಯಾವುವೂ ಅಪರಿಹಾರ್ಯವಾದವುಗಳಲ್ಲ. ತಾನು ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ,   ಶಿಸ್ತು, ಸತತ ಅಧ್ಯಯನ, ಚಿಂತನ,  ಪರಿಶ್ರಮ ಪಡುವ ಬುದ್ದಿ, ಸಮಯಪ್ರಜ್ಞೆ ಮೊದಲಾವುಗಳನ್ನು ತನ್ನಲ್ಲಿ ಬೆಳೆಸಿಕೊಳ್ಳುವುದರ ಮೂಲಕ ಒಳ್ಳೆಯ ಅನುವಾದಕನಾಗಿ/ಅನುವಾದಕಿಯಾಗಿ ಯಶಸ್ಸು ಪಡೆಯಲು ಸಾಧ್ಯ.

*****************************

Library books. Photo of Library books, close up royalty free stock image

4 thoughts on “

  1. ಅಧ್ಬುತ ಲೇಖನ ಅನುವಾದಕರು ‌ಮೂಲ ಸಾಹಿತ್ಯದ ತಿರುಳ ಹೇಗೆ ಅನುಭವಿಸಬೇಕೆಂದು ಮಾರ್ಮಿಕವಾಗಿ,ಸಯೋಗ್ಯವಾಗಿ ತಿಳಿಸಿರುವಿರಿ ಮೇಡಂ…

  2. ಅರ್ಥಗರ್ಭಿತ ಸಾಹಿತ್ಯಾಕ್ಷರಗಳಿಂದ ಮೂಡಿಬಂದಿದೆ
    ಅಭಿನಂದನೆಗಳು ತಮಗೆ

  3. ಸರಳವಾಗಿ ಉತ್ತಮ ಮಾರ್ಗ ದರ್ಶನ ನೀಡುವ ಲೇಖನ.
    ಧನ್ಯವಾದಗಳು.

Leave a Reply

Back To Top