ದೀಪ್ತಿ ಭದ್ರಾವತಿ ಕವಿತೆಗಳು
ಲೂಟಿಯಾದವರು
ಅಗೋ
ಸಿಕ್ಕಿಯೇಬಿಟ್ಟ
ನಿನ್ನೆಯಷ್ಟೇ ಎಷ್ಟೆಲ್ಲ ಜನರ ಉಸಿರು ಕದ್ದು ನಡೆದವ ಇಂದಿಲ್ಲಿ
ಆಸ್ಪತ್ರೆಯ ಕಲ್ಲು ಬೆಂಚಿನ ಮೇಲೆ ಸದ್ದಿಲ್ಲದೆ ಮಲಗಿದ್ದಾನೆ
ಸೂರೆ ಹೋದವರು ಸೂರು ಹಾರುವಂತೆ
ಕಿರುಚುತ್ತಿದ್ದರೂ ಗಮನಿಸದೆ
ತನ್ನದೇ ಕನಸಲೋಕದಲ್ಲಿ ಹಾಯಾಗಿ
ಕನಸುಕಾಣುತ್ತಿದ್ದಾನೆ
ಲೂಟಿಯಾದವರು ಇದೀಗ ಇಲ್ಲಿ
ಒಳಗಡೆಗೆ ನುಗ್ಗಲಿದ್ದಾರೆ
ಎಬ್ಬಿಸಿ ಇವನನ್ನು ಬೀದಿಗೆಳೆದು
ತಂದು ಆರೋಪಪಟ್ಟಿಯ ಸಿದ್ದವಾಗಿಸಿ
ಕಂಬಕ್ಕೆ ಕಟ್ಟಿ ಥಳಿಸಲಿದ್ದಾರೆ
“ಆಳಿಗೊಂದು ಕಲ್ಲು, ತಲೆಗೊಂದು ಮಾತು”
ಕನ್ನ ಹಾಕುವುದೆ ಕಾಯಕ ಎಂದುಕೊಂಡವನಿಗೆ
ಯಾವುದೂ ಹೊಸತಲ್ಲ
ಪ್ರತಿ ಬಾರಿ ಆತ ಮಿಡಿತ ಹೊತ್ತು
ನಡೆದಾಗಲೂ ಗಲಾಟೆ ಭುಗಿಲೇಳುತ್ತದೆ
ಛಾವಣಿಗಳು ಬೊಬ್ಬೆ ಹಾಕುತ್ತವೆ
ಪಂಚಾಯ್ತುದಾರರು ಊರ ಒಳಗಿನ ಮೂಲೆ ಮೂಲೆಯನು
ಅವನಿಗಾಗಿ ತಡಕಿಸುತ್ತಾರೆ
ಅವನು ಕಣ್ಣು ತಪ್ಪಿಸಿ ಮತ್ತೆಲ್ಲಿಯೋ ದೋಚುತ್ತಾನೆ
ಹುಡುಕಿ ದಣಿದವರೆಲ್ಲ
“ಇನ್ನು ಬಿಡುವ ಪ್ರಶ್ನೆಯೇ ಇಲ್ಲ” ಎನ್ನುತ್ತ ಹಾಕಿದ
ಬಾಗಿಲು ಮುರಿಯುತ್ತಾರೆ
ಬಡಿವ ಸದ್ದಿಗೆ ಎಚ್ಚೆತ್ತ ಅವನೂ “ಕಸುಬು ಬಿಡುವುದಿಲ್ಲ”
ಕಿಚಾಯಿಸುತ್ತ ನುಗ್ಗುತ್ತಾನೆ
ಹೆರಿಗೆ ವಾರ್ಡಿನ
ಕಿಟಕಿಯೊಳಗೆ
ರೇವೆ
ಇಲ್ಲಿ ಹೀಗೆ ನಾನು ಒಂಟಿ ಕೂತಿರುವಾಗಲೇ
ನೆನಪಿನ ಹಕ್ಕಿಯೊಂದು
ಕಿಟಕಿಯಲಿ ಸರಳಿನಾಚೆಯಲಿ
ನಿಂತು ಕೂಗುತ್ತದೆ.
ನಕ್ಷತ್ರದ ನಡುವಿನಲ್ಲಿ ನೆರಳುಗಳ
ನೋಡುತ್ತೇನೆ ತೇವಗೊಂಡ ಆಗಸದ ಮುಗುಳೊಂದು
ಒದ್ದೆ ಕಣ್ಣಿನ ಅಂಚಿನಲ್ಲಿ ನಿಂತು
ಗೋಲಿಯಾಡುತ್ತದೆ…
ಬರಲೋ ಬೇಡವೋ
ಗೊತ್ತಾಗದೆ ಮತ್ತದೇ ಬಿಡುಗಣ್ಣಿನಲಿ
ಆಗಸ ನೋಡುತ್ತೇನೆ.
ಅಸ್ಥಿರಗೊಂಡ ಎದೆಯ ಕವಾಟದ ಚೂರೊಂದು
ಮುಗ್ಗಲು ಗೋದಾಮಿನಲಿ ಸೇರಿ ನರಳುತ್ತದೆ.
ಇಲ್ಲ ಬಿಡು ಭೇಟಿಯಿನ್ನು ಸಾಧ್ಯವಿಲ್ಲ
ಹರಕು ಕನಸೊಂದು ಯಾವುದೋ
ವಿಳಾಸ ಹುಡುಕಿ ತಿರುಗುತ್ತದೆ..
ಇನ್ನು ಆ ನೆರಳು, ನೆನಪು, ಮುಗಿದ ರೇವೆ
ಎಲ್ಲವೂ ನನ್ನ ಕಾಲುಂಗರದ ನಡುವಿನಲಿ
ಎದ್ದ ಕುರುಗಳಲ್ಲಿ
ಯಾವುದೋ ಸನ್ನೆಗಾಗಿ ಕಾಯತೊಡಗುತ್ತವೆ..
ಗೋದಾಮು
ಅಸಲಿಗೆ ಹೇಳುವುದು ಎನೂ ಇರಲಿಲ್ಲ
ನಡು ಮಧ್ಯಾಹ್ನವೊಂದು ತೆವಳು ಗಾಳಿಯಲಿ
ತೇಲುತ್ತ ಫೌಂಡೇಶಿನ ಕ್ರೀಮುಗಳಲಿ
ಸುಕ್ಕು ಮರೆಸುವಾಗ
ಉಗುರು ಕಚ್ಚುವುದಲ್ಲದೆ
ಮತ್ತೇನಿರುತ್ತದೆ ಹೇಳು
ತೀಡುವ ಬೆಳ್ಳಿಚಾಮರಕ್ಕೆ ಇರುಳ ಲೇಪಿಸುವಾಗ
ಬಣ್ಣ ಹೀರಿದ ಬ್ರಶ್ಶಿನಂತೆ
ತಿರು ತಿರುಗಿ ಮತ್ತದೇ ಕನಸುಗಳ ಒಪ್ಪ ಮಾಡುವಾಗ
ಹಳೆಯ ಗೋದಾನಿನ ಮುಗ್ಗುಗಟ್ಟಿದ
ಜೋಳ ಸುಮ್ಮನೆ ನಗುವಾಗ
ಏನೆಲ್ಲ ಹೇಳುವ
ಶಕುನದವನ ಹಾಗೇಕೆ ನಿಂತೆ ಹೇಳು
ಒಣ ತುಟಿಗಳಲ್ಲಿ ಮಾತುಗಳ ಹೆಕ್ಕುವೆನೆಂಬ
ನಿನ್ನ ಹುಂಬತನಕ್ಕೆ
ನನ್ನ ಲಿಪ್ ಸ್ಟಿಕ್ಕಿನ ತೇರು ಹೊಳೆದದ್ದು
ಸುಳ್ಳಲ್ಲ
ಸುಡುವ ಕೆಂಡ ಹಾಯ್ದ ಮಿಡತೆ ಒಳಗೊಳಗೆ
ಕಣ್ಣಿನಲಿ
ಕನಸು ನಕ್ಕಿದ್ದು ಖರೆ
ಕುತ್ತಿಗೆಯಲ್ಲೊಂದು ಕರಿ ಇರುವೆಗಳ
ಸಾಲು ಕಾಲುಗಟ್ಟಿದ
ಗೂಟದ ಬೇಲಿ
ಮತ್ತೆ ಮತ್ತೆ ತಡೆ ಹಿಡಿಯುತ್ತ
ಉಗ್ಗುಗಳ ಲೋಕದಲ್ಲಿ ನನ್ನ ಉಗುಳು ನುಂಗಿಸುವಾಗ
ಎಲ್ಲ ಬಲ್ಲವನಂತೆ ನಿಂತದ್ದು ನಿನ್ನದೇ
ತಪ್ಪು ಇದೀಗ ಮಾತಾಡಬೇಡೆಂದು
ನಾನು ಹೇಳುವ ಸ್ಥಿತಿಯಲ್ಲಿ ಇಲ್ಲ
ಆದರೆ ನೀನು..
************************************
ಚೆಂದದ ಕವಿತೆಗಳು ದೀಪ್ತಿ
ಚಂದ ಇದೆ ದೀಪ್ತಿ