ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ – ಸಿ.ಎನ್. ರಾಮಚಂದ್ರನ್:

ಪುಸ್ತಕ ಪರಿಚಯ

ಮಹಿಳೆ ಮತ್ತು ಭಾರತೀಯ

ಕಾನೂನು ವ್ಯವಸ್ಥೆ

ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ – ಸಿ.ಎನ್. ರಾಮಚಂದ್ರನ್:

ಒಂದು ಅವಲೋಕನ (ಅಂಕಿತ ಪುಸ್ತಕ, ಬೆಂಗಳೂರು: ೨೦೨೦; ಪು.೧೬೦  ಬೆಲೆ: ರೂ.೧೫೦/-)

ಭಾರತೀಯ ಕಾನೂನುಗಳ – ಅದರಲ್ಲೂ ವಿಶೇಷವಾಗಿ ‘ಭಾರತೀಯ ದಂಡ ಸಂಹಿತೆ’ – ಕುರಿತು ಮಾತನಾಡುವಾಗ “ಮಹಿಳೆ” ಎನ್ನುವುದನ್ನು ಒತ್ತಿ ಹೇಳಬೇಕಾಗಿ ಬಂದಿರುವುದು ನಿಜಕ್ಕೂ ದುರದೃಷ್ಟಕರವಾದರೂ ಅದೊಂದು ನಿಷ್ಠುರ ಸಾಮಾಜಿಕ ಸತ್ಯ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ‘ಸರ್ವರ ಸಮಾನತೆ’ಯನ್ನು ನಮ್ಮ ಸಂವಿಧಾನ ಎತ್ತಿ ಹಿಡಿದಿದೆಯಾದರೂ ಅದೊಂದು ಅತೀ ಉದಾತ್ತ ಆಶಯವಾಗಿ ಮಾತ್ರ ಉಳಿದುಕೊಂಡಿದೆ; ವಾಸ್ತವದಲ್ಲಿ ಹಾಗಿಲ್ಲ ಎನ್ನುವುದಕ್ಕೆ ಯಾವ ದೊಡ್ಡ ಸಂಶೋಧನೆಯೂ ಬೇಕಾಗಿಲ್ಲ. ಪುರುಷ-ಪ್ರಧಾನ ಭಾರತೀಯ ಸಮಾಜದಲ್ಲಿ (ವಿಶ್ವದ ಎಲ್ಲೆಡೆಯೂ ಇದೊಂದು ಸಾಮಾಜಿಕ ಅಸಮತೋಲನದ ಅತ್ಯಂತ ಸಾಮಾನ್ಯ ಸಮಸ್ಯೆ – ತರ ತಮ ವ್ಯತ್ಯಾಸಗಳು ಇವೆ ಎನ್ನುವುದನ್ನು ಒಪ್ಪಿಕೊಂಡಾಗಲೂ!) ಮಹಿಳೆ ಲಿಂಗಾಧಾರಿತ ತಾರತಮ್ಯ ಹಾಗೂ ಅದರೊಂದಿಗೆ ಅನೂಚಾನವಾಗಿ ಬೆಸೆದುಕೊಂಡಿರುವ ಶೋಷಣೆಗೆ ತಲೆತಲಾಂತರಗಳಿಂದಲೂ  ಒಳಗಾಗುತ್ತಾಳೆ ಇದ್ದಾಳೆ. ಮಹಿಳೆಗೆ ನ್ಯಾಯ, ಸಾಮಾಜಿಕ ಭದ್ರತೆ ಹಾಗೂ ರಕ್ಷಣೆ   ಒದಗಿಸುವ ನಿಟ್ಟಿನಲ್ಲಿ ರಚಿಸಲ್ಪಟ್ಟ ಕಾನೂನುಗಳ ಮಾಹಿತಿ, ನಿರ್ವಚನ ಮತ್ತು ಅವುಗಳ ಮಿತಿಗಳನ್ನು ಈ ಪುಸ್ತಕ ಸಾಧಾರವಾಗಿ ಮಂಡಿಸುತ್ತದೆ. ಇಲ್ಲಿಯ ಭಾಷೆ ಕಾನೂನಿನ ಕ್ಲಿಷ್ಟತೆಯನ್ನು ನಿವಾರಿಸಿ ಅತ್ಯಂತ ಸರಳ ಹಾಗೂ ಸ್ಪಷ್ಟ ಮಾತುಗಳಲ್ಲಿ ವಿಷಯ ಮಂಡನೆ ಮಾಡುವುದರಿಂದ ಎಲ್ಲಾ ವರ್ಗದ ಓದುಗರಿಗೂ – ವಿಶೇಷತಃ ಸಾಮಾನ್ಯ ಮಹಿಳೆಯರಿಗೂ ಇದು “ನೀರಿಳಿಯದ ಗಂಟಲಲ್ಲಿ ಕಡುಬಂ ತುರುಕಿ”ದಂತಾಗದೆ ಇರುವುದು ಈ ಪುಸ್ತಕದ ಮೊದಲ ಹೆಗ್ಗಳಿಕೆ.

ಈ ಪುಸ್ತಕದ ಅಧ್ಯಾಯಗಳ ಶೀರ್ಷಿಕೆಗಳೇ ಗಮನ ಸೆಳೆಯುವಂತಿವೆ:

ಅಧ್ಯಾಯ ೧: ಮಹಿಳೆ ಮತ್ತು ವೈವಾಹಿಕ-ಕೌಟುಂಬಿಕ ವ್ಯವಸ್ಥೆ (ಪು.೧೮-೬೩)

ಅಧ್ಯಾಯ ೨: ಮಹಿಳೆಯ ಮೇಲಾಗುವ ಲೈಂಗಿಕ ಅಪರಾಧಗಳು (ಪು.೬೪-೮೬)

ಅಧ್ಯಾಯ ೩: ಮಹಿಳೆಯ ಘನತೆಗೆ ಕುಂದು ತರುವ ಅಪರಾಧಗಳು (ಪು.೮೭-೧೦೩)

ಅಧ್ಯಾಯ ೪: ಮಹಿಳೆಯ ಹಕ್ಕುಗಳು (೧೦೪-೧೧೦)

ಅಧ್ಯಾಯ ೫: ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಮಹಿಳೆಯರು (೧೧೧-೧೩೪)

ಅಧ್ಯಾಯ ೬: ಉಪಸಂಹಾರವಿಲ್ಲದ ಕಥನ (ಪು.೧೩೫-೧೩೭)   

ಸಿ.ಎನ್. ರಾಮಚಂದ್ರನ್ ಅವರು ಇಂಗ್ಲೀಷ್ ಪ್ರಾಧ್ಯಾಪಕರಾಗಿ, ತಮ್ಮ ವಿಸ್ತಾರವಾದ ಓದು, ಬರೆಹ, ಅಧ್ಯಯನಗಳಿಂದ   ಮಹತ್ವಪೂರ್ಣ ಒಳನೋಟಗಳನ್ನು ಕೊಡಬಲ್ಲ ಸಾಹಿತ್ಯ-ಸಂಸ್ಕೃತಿ ವಿಮರ್ಶಕರಾಗಿ, ಉತ್ತಮ ಲೇಖಕರಾಗಿ, ಅನುವಾದಕರಾಗಿ ಖ್ಯಾತನಾಮರು. ಅವರು ಕಾನೂನಿಗೆ ಸಂಬಂಧಪಟ್ಟ ಈ ಪುಸ್ತಕ ಬರೆಯಲು ಕಾರಣ, ಪ್ರೇರಣೆ ಏನು ಎನ್ನುವುದು ಒಂದು ಕುತೂಹಲಕ್ಕೆ ಕಾರಣವಾಗಬಹುದಾಗಿದೆ. ಇದಕ್ಕೆ ಉತ್ತರ ಹೀಗಿದೆ: ಸಾಹಿತ್ಯ ಎಂದರೆ ಜೀವನ ಪ್ರೀತಿ, ಜೀವಪರ ನೀತಿ ಎಂದೇ ಅರ್ಥ ಅಲ್ಲವೇ? ಅಂದ ಮೇಲೆ ಜೀವನವನ್ನು ಸಹ್ಯವಾಗಿಸುವ, ಬದುಕನ್ನು ಕಟ್ಟಿಕೊಡುವ ಎಲ್ಲಾ ಕ್ರಿಯೆಗಳೂ ಅದರ ವ್ಯಾಪ್ತಿಯೊಳಗೆ ಸಹಜವಾಗಿ ಬರುತ್ತವೆ. ಜೊತೆಗೆ ಅವರ ಕಾನೂನು ಆಧ್ಯಯನದ ಪದವಿ ಕೂಡಾ ಈ ಪುಸ್ತಕಕ್ಕೊಂದು ಅಧಿಕೃತ ಮುದ್ರೆಯನ್ನೂ ಒತ್ತಿದೆ ಎಂಬುದೂ ಸತ್ಯ. ಪದ್ಮರಾಜ ದಂಡಾವತಿಯವರು ಪುಸ್ತಕಕ್ಕೆ ಬರೆದ ತಮ್ಮ ಮುನ್ನುಡಿಯಲ್ಲಿ ಇದನ್ನು ಸರಿಯಾಗಿಯೇ ಗುರುತಿಸಿದ್ದಾರೆ: “ಸಾಹಿತ್ಯಕ್ಕೂ, ಕಾನೂನಿಗೂ ಎಲ್ಲಿಯೋ ಒಂದು ಆಳವಾದ ಸಂಬಂಧ ಇರುವಂತೆ ಕಾಣುತ್ತದೆ ಮತ್ತು ಸಾಹಿತ್ಯ ಕೊಡುವ ತಿಳುವಳಿಕೆ ಕಾನೂನಿನ ತಪ್ಪುಗಳ ಜೊತೆಗೆ ಸದಾ ಸಂಘರ್ಷ ಮಾಡುತ್ತಾ ಇರುವಂತೆಯೂ ಕಾಣುತ್ತದೆ… ಈ ಸಂಘರ್ಷದ ಮುಂದುವರಿಕೆಯಾಗಿಯೇ ರಾಮಚಂದ್ರನ್ ಅವರು ಈ ಪುಸ್ತಕವನ್ನು ಬರೆದಿದ್ದಾರೆ. ಅವರು ಕೇವಲ ಕಾನೂನಿನ ವಿದ್ಯಾರ್ಥಿಯಾಗಿದ್ದರೆ ಈ ಪುಸ್ತಕ ಈಗಿನ ಸ್ವರೂಪದಲ್ಲಿ ಇರುತ್ತಿರಲಿಲ್ಲ ಎಂದೂ ಧೈರ್ಯವಾಗಿ ಹೇಳಬಹುದು. ಅಂದರೆ ಪ್ರೊ. ಸಿ.ಎನ್.ಆರ್. ಅವರು ಸಾಹಿತ್ಯದ ವಿದ್ಯಾರ್ಥಿ ಎಂಬ ಕಾರಣಕ್ಕಾಗಿಯೇ ಈ ಪುಸ್ತಕದ ವಸ್ತು ಅವರನ್ನು ಹೆಚ್ಚು ಕಾಡಿದೆ ಎಂದೂ ನಾವು ಅರ್ಥೈಸಬಹುದು. ಏಕೆಂದರೆ ಸಾಹಿತ್ಯ ನಮಗೆ ಕಲಿಸುವುದು ಮನುಷ್ಯ ಪ್ರೀತಿಯನ್ನು ಮತ್ತು ಜೀವಪರತೆಯನ್ನು. ಬರೀ ಕಾನೂನಿನ ಜ್ಞಾನ ಇದನ್ನು ಕಲಿಸುವುದಿಲ್ಲ. ಶಾಸನ ರೂಪಿಸುವ ರಾಜಕಾರಣಿ ಸಾಹಿತ್ಯವನ್ನು ಓದಬೇಕಾದುದು ಈ ಕಾರಣಕ್ಕಾಗಿ, ಈ ಜೀವಪರತೆಯನ್ನು ಗಳಿಸಬೇಕಾದ ಅಗತ್ಯಕ್ಕಾಗಿ.”          

                 

ಭಾರತೀಯ ದಂಡ ಸಂಹಿತೆ ಬ್ರಿಟಿಷರಿಂದ ನಮಗೆ ಬಂದ ಬಳುವಳಿ! ತಮ್ಮ ಸ್ವಾರ್ಥ-ಸಾಧನೆಗಾಗಿ ಇಲ್ಲಿ ಬಂದ ಬ್ರಿಟಿಷರು ಆಡಳಿತದ ಜೊತೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾನೂನುಗಳನ್ನು ರಚಿಸಿದ್ದು (ರೈಲ್ವೆ, ಪೋಸ್ಟಲ್ ವ್ಯವಸ್ಥೆಯನ್ನು ಸ್ಥಾಪಿಸಿದ್ದು ಇತ್ಯಾದಿ) ಮತ್ತು ನಮಗೆ ಅವು ಇಂದಿಗೂ ಪ್ರಮಾಣಗಳಾಗಿ ಉಳಿದಿವೆಯೆಂದರೆ ಅದು ನಮ್ಮ ಆತ್ಮವಿಮರ್ಶೆಗೆ ಒಡ್ಡಿದ ಸವಾಲು ಎಂದೇ ಅರ್ಥವಲ್ಲವೇ? ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತೈದು ವರ್ಷಗಳಾದರೂ ಇಂದಿನ ಪರಿಸ್ಥಿತಿಗನುಗುಣವಾಗಿ ಈ ಕಾನೂನುಗಳ ಸಮಗ್ರ ಪರಿಷ್ಕರಣೆ ಆಗಬೇಕೆಂದು ಕಾನೂನು ಪಂಡಿತರಾದಿಯಾಗಿ ಪರಿಣಿತರೆಲ್ಲರೂ ಹೇಳುತ್ತಿದ್ದರೂ ಅದು ಈ ವರೆಗೂ ತೃಪ್ತಿಕರವಾಗಿ ಸಾಧ್ಯವಾಗಿಲ್ಲ ಎನ್ನುವುದು ಸತ್ಯ. ಈ ಕುರಿತು ಲೇಖಕರಿಗೂ ವಿಷಾದವಿದೆ. ನಮ್ಮ ಕೋರ್ಟು ಕಛೇರಿಗಳು ‘justice delayed is justice denied’ ಎನ್ನುವ ಮಾತಿಗೆ ಪುಷ್ಟೀಕರಣ ನೀಡುವ ತಾಣಗಳಾಗಿವೆ ಎಂಬುದಕ್ಕೆ ಬಾಕಿ ಉಳಿದಿರುವ ಖಟ್ಲೆಗಳ ಸಂಖ್ಯೆಯೇ ನಿರ್ವಿವಾದ ಪುರಾವೆ. ಒಂದು ಅಂದಾಜಿನ ಪ್ರಕಾರ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಣಾಧೀನ ಕೈದಿಗಳಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರಿಗೆ ತಾವು ಮಾಡಿದ ಅಪರಾಧವೇನು ಎಂಬುದೇ ಗೊತ್ತಿಲ್ಲ, ಜೊತೆಗೆ ಅವರಲ್ಲಿ ಹೆಚ್ಚಿನವರು ಅತ್ಯಂತ ಕೆಳವರ್ಗದ ಬಡಜನರು ಎನ್ನುವ ವಿಡಂಬನೆಯೂ ಇರುವುದು ಕಹಿ ಸತ್ಯ. ದೇಶದ ಅತೀ ದೊಡ್ಡ ಕಾರಾಗ್ರಹ ದೆಹಲಿಯ ತಿಹಾರ್ ಜೈಲು ಇದಕ್ಕೆ ಸಾಕ್ಷಿ. ಕಿರಣ್ ಬೇಡಿಯವರು ಇಲ್ಲಿನ ಮುಖ್ಯಸ್ಥರಾಗಿದ್ದ ಸಮಯದಲ್ಲಿ ಅವರು ಕೈಗೊಂಡ ಸುಧಾರಣೆಗಳ ಹೊರತು ಬೇರೇನೂ ಇಂದಿಗೂ ಆಗಿಲ್ಲ. ನಮ್ಮಲ್ಲಿ ಕಾನೂನುಗಳ ಕೊರತೆಗಿಂತ ಇರುವ ಅಸಂಖ್ಯಾತ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸದಿರುವುದೇ ಅತೀ ದೊಡ್ಡ ಸಮಸ್ಯೆ. ಇದನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ಏನೆಂದರೆ ಈ ಹಿನ್ನೆಲೆಯ ಅರಿವಿಲ್ಲದೇ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸಲಾಗಲಿ, ಅರ್ಥೈಸಿಕೊಳ್ಳಲಾಗಲಿ ಸಾಧ್ಯವಿಲ್ಲ. ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡ ನ್ಯಾಯದೇವತೆ justice without discrimination ಗೆ ಸಮರ್ಥ ರೂಪಕವಾಗಿದ್ದೂ –- ಮಹಾಭಾರತದ ಗಾಂಧಾರಿಯಂತೆ — ವಸ್ತುಸ್ಥಿತಿಗೂ ಅಷ್ಟೇ  ಕುರುಡಾಗಿರುವುದೂ ಒಂದು ವ್ಯಂಗ್ಯವಲ್ಲದೆ ಮತ್ತೇನು?

ಮಹಿಳೆಯ ದುಸ್ಥಿತಿಗೆ ಎರಡು ಕಾರಣಗಳನ್ನು ಪ್ರೊ. ಸಿ.ಎನ್.ಆರ್. ನೀಡುತ್ತಾರೆ: “ಮೊದಲಿಗೆ ಮಹಿಳೆ ತನ್ನ ಆರ್ಥಿಕ ಸ್ವಾತಂತ್ರ್ಯವನ್ನು ಕಳೆದುಕೊಂಡಳು (ಕ್ರಿ.ಶ. ಮೂರನೆಯ ಶತಮಾನದಿಂದ); ನಂತರ, ಶಿಕ್ಷಣಾವಕಾಶಗಳಿಂದ ವಂಚಿತಳಾದಳು. ಪರಿಣಾಮತಃ ಸಮಾಜದಲ್ಲಿಯೂ ತನ್ನ ಸ್ಥಾನ-ಮಾನಗಳನ್ನು ಕಳೆದುಕೊಂಡು ಸಂಪೂರ್ಣವಾಗಿ ಪರಾವಲಂಬಿಯಾದಳು.” ಇವೆರಡೂ ಸಾಧನಗಳಿದ್ದೂ ಮಹಿಳೆ ಸುರಕ್ಷಿತಳಲ್ಲ ಎನ್ನುವುದಕ್ಕೆ ‘ರೂಪನ್ ಬಜಾಜ್ – ಕೆ.ಪಿ.ಎಸ್. ಗಿಲ್ ಪ್ರಕರಣ’ (ಪು.೯೦) ಮತ್ತು ‘ರೀನಾ ಮುಖರ್ಜಿ – ಸ್ಟೇಟ್ಸ್ ಮನ್ ಪತ್ರಿಕಾ ಸಂಸ್ಥೆ’ (ಪು.೦೩-೯೫) ಕೇಸ್-ಗಳೇ ಸಾಕ್ಷಿ. ಹಾಗಿದ್ದರೆ ಇದಕ್ಕೆ ಆತ್ಯಂತಿಕವಾದ ಕಾರಣವೇನೆಂದು ಹುಡುಕಿದರೆ ಅದು ಆಕೆ ‘ಮಹಿಳೆ’ಯಾಗಿರುವುದೇ, ಅಂದರೆ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ‘ಲೈಂಗಿಕತೆ – sexually desirable, and vulnerable too – ಭೋಗವಸ್ತು’ವಾಗಿ  ಎಂಬ ಸಾರ್ವಕಾಲಿಕ ಸತ್ಯ ಮುಖಕ್ಕೆ ರಾಚುವಂತೆ ಎದ್ದು ಕಾಣುತ್ತದೆ. ಇದು ಎಲ್ಲಾ ಕಾಲಕ್ಕೂ, ಎಲ್ಲಾ ಸಮಾಜಗಳಲ್ಲಿಯೂ ಇದ್ದಂತಹ, ಇರುವಂತಹ ಸಮಸ್ಯೆ. ಹಾಗಿದ್ದಾಗಲೂ ಕೂಡಾ ಮಹಿಳೆಯರ ಸಬಲೀಕರಣಕ್ಕೆ ಒತ್ತು ಕೊಡುವ, ಜೊತೆಗೆ ಅವರಿಗೆ ರಕ್ಷಣೆ ಕೊಡುವ ಕೆಲಸ ಜೊತೆ ಜೊತೆಯಾಗಿ ಸಾಮಾಜಿಕ-ನೈತಿಕ-ಕಾನೂನಾತ್ಮಕ ನೆಲೆಗಳಲ್ಲಿ ಸಾಗಬೇಕಾದ ಅನಿವಾರ್ಯತೆ ಎಲ್ಲಾ ನಾಗರೀಕ ಸಮಾಜದ ಜವಾಬ್ದಾರಿ ಎನ್ನುವುದನ್ನು ಮರೆಯಲಾಗದು. ಈ ನಿಟ್ಟಿನಲ್ಲಿ ರಚಿತವಾಗಿರುವ ಕಾನೂನುಗಳ ಪರಿಚಯ ಹಾಗೂ ಜ್ಞಾನ ಎಲ್ಲರಿಗೂ ಇರಬೇಕಾದ ಆವಶ್ಯಕತೆ ಇದೆ. ಹಾಗಾಗಿ ಈ ಪುಸ್ತಕದ ಪ್ರಸ್ತುತತೆ, ಮೌಲಿಕತೆ ಪ್ರಶ್ನಾತೀತ.  ಯಾಕೆಂದರೆ ignorance of law is not an excuse to violate law nor it is a license to commit any crime! ಕಾನೂನಿನ ಕುರಿತು ಅಜ್ಞಾನಿಯಾಗಿರುವುದು ಅಪಾಯಕ್ಕೆ ಆಹ್ವಾನವಿತ್ತಂತೇ ಸರಿ.

‘ಸೆಕ್ಷನ್ ೪೯೪ ಮತ್ತು ೪೯೮ ಎ’ – ವರದಕ್ಷಿಣೆ ಮತ್ತು ಕೌಟುಂಬಿಕ ಹಿಂಸೆಗೆ ಸಂಬಂಧಿಸಿದ ಕಾನೂನುಗಳ ಉಪಯುಕ್ತತೆ ಹಾಗೂ ವ್ಯತಿರಿಕ್ತ ಪರಿಣಾಮಗಳ ಕುರಿತು ಸಾಕಷ್ಟು ಉದಾಹರಣೆಗಳ ಮೂಲಕ ವಿವರಿಸುತ್ತಾ ಸಿ.ಎನ್.ಆರ್. ಅವರು ಹೇಳುವ ಈ ಮಾತು ಮಾರ್ಮಿಕವಾಗಿದೆ: “ಈ ಜಗತ್ತಿನಲ್ಲಿ ಲೈಂಗಿಕ ಕಾಮದಂತೆಯೇ ಅರ್ಥ ಕಾಮವೂ ಕೂಡಾ ಎಂದಿಗೂ ಶಮನವಾಗದ ವ್ಯಸನವೆಂದು ಕಾಣುತ್ತದೆ.” ಲೈಂಗಿಕತೆ ಜೀವಿಯ ಆದಿಮ ಪ್ರವೃತ್ತಿಯಾಗಿಯೂ ಗುರುತಿಸಲ್ಪಟ್ಟಿದೆ ತಾನೇ?

“ಆಹಾರ, ನಿದ್ರಾ, ಭಯ, ಮೈಥುನಂಚ ಸಾಮಾನ್ಯಮೇತತ್ ಪಶುಭಿಃ ನರಣಾಮ್ |

ಧರ್ಮೋಹಿ ತೇಷಾಂ ಅಧಿಕೊ ವಿಶೇಷಃ ಧರ್ಮೇಣ ಹೀನಃ ಪಶುಭಿಃ ಸಮಾನಃ||

ಸಕಲ ಚರ ಜೀವಿಗಳಿಗೆ ಅನ್ವಯವಾಗುವ ‘ಪ್ರಕೃತಿ ಧರ್ಮ ಚತುಷ್ಟಯ’ಗಳೆಂದರೆ ಆಹಾರ, ನಿದ್ರಾ, ಭಯ, ಮತ್ತು ಮೈಥುನ. ಹಾಗಾದರೆ ಪ್ರಾಣಿಗಳನ್ನೂ ಮನುಷ್ಯರನ್ನೂ ಪ್ರತ್ಯೇಕವಾಗಿಸುವಂಥದ್ದು ಏನು? ಅದೇ ಧರ್ಮ = ವಿವೇಕ = ಸರಿ, ತಪ್ಪುಗಳ ವಿವೇಚನೆ; ಅದೊಂದಿಲ್ಲದಿದ್ದರೆ ಮನುಷ್ಯನೂ ಪಶುವೇ ಸರಿ.’ ಯಾವಾಗ ಮನುಷ್ಯ ವಿವೇಚನಾರಹಿತನಾಗುತ್ತಾನೋ ಆಗೆಲ್ಲಾ ಅವನನ್ನು ಕಾನೂನಿನ ಅಂಕುಶದಿಂದ ನಿಯಂತ್ರಿಸುವ ಕೆಲಸ ಆಗಬೇಕಾದದ್ದೇ. 

‘ಸೆಕ್ಷನ್ ೪೯೮ ಎ’ ಅಡಿಯಲ್ಲಿ ಮಹಿಳೆಗೆ ನೀಡಿದ ಸ್ವಾತಂತ್ರ್ಯದ ದುರುಪಯೋಗ ನಡೆದು “ಗಂಡನನ್ನು ಹಾಗೂ ಗಂಡನ ಮನೆಯಲ್ಲಿರುವ ಅವನ ತಂದೆ, ತಾಯಿ, ಅಣ್ಣ, ತಮ್ಮಂದಿರು, ಅಕ್ಕ, ತಂಗಿಯರು ಎಲ್ಲರನ್ನೂ ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಅವರ ಮೇಲೆ ಸುಳ್ಳು ದೂರು ಕೊಟ್ಟು ಅವರೆಲ್ಲರನ್ನೂ ಜೈಲಿಗೆ ಅಟ್ಟುವ ಘಟನೆಗಳು ಮರುಕಳಿಸಲಾರಂಭಿಸಿದುವು.” (ಪು.೪೩). ಇದು ಸತ್ಯಸ್ಯ ಸತ್ಯ. ಹೆಚ್ಚನ ವಿವರಗಳಿಗೆ ‘ನಿಶಾ ಶರ್ಮ ಮೊಕದ್ದಮೆ’ (ಪು.೪೩-೪೬) ಮತ್ತು ‘ಅರ್ಣೆಶ್ ಕುಮಾರ್ ವರ್ಸಸ್ ಸ್ಟೇಟ್ ಆಫ್ ಬಿಹಾರ್’ ಮತ್ತು ‘ರಾಜೇಶ್ ಶರ್ಮಾ ಮೊಕದ್ದಮೆ’ (ಪು.೪೬-೪೯) ನೋಡಿ. 

ಆದರೆ ಈ ‘ಆತಿರೇಕ’ವನ್ನು ಶತಮಾನಗಳಿಂದ ಶೋಷಣೆಗೆ ಪರ್ಯಾಯ ಹೆಸರೇ ಆದ ‘ಮಹಿಳೆ’ ತನ್ನಲ್ಲಿ ಅಂತಸ್ಥವಾಗಿದ್ದ, ಮಡುಗಟ್ಟಿದ್ದ ನೋವನ್ನು ಹೊರಹಾಕಿದ ಒಂದು ಸಾಮಾಜಿಕ ಸಂಕಥನವಾಗಿ (ವೃಥಾ ಶೋಷಿತರನ್ನು ಹೊರತುಪಡಿಸಿ) ನೋಡಿದರೆ ಆ ನೋವಿನ ಆಳ, ಅಗಲ, ವಿಸ್ತಾರ ಮನವರಿಕೆಯಾದೀತು! ಇದು ಮಹಿಳೆಯರ ಅತಿರೇಕ ವರ್ತನೆಗೆ ಸಮಜಾಯಿಷಿಕೆ ಅಲ್ಲ ಎನ್ನುವುದನ್ನು ಒತ್ತಿ ಹೇಳುತ್ತಿದ್ದೇನೆ. ಇದನ್ನು ಸಿ.ಎನ್.ಆರ್. ಅವರು ಗುರುತಿಸುವುದು ಹೀಗೆ: “ಯಾವುದೇ ಅವಕಾಶವಾಗಲಿ ಕಾನೂನು ಆಗಲಿ ಅದರ ಉದ್ದೇಶವನ್ನು ಮರೆತು ಅದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಮನುಷ್ಯ ಸ್ವಭಾವ. ಈ ಹೇಳಿಕೆ ಸ್ತ್ರೀ-ಪರ ಕಾನೂನುಗಳಿಗೂ – ವಿಶೇಷವಾಗಿ ೪೯೮-ಎ ಸೆಕ್ಷನ್ ಗೆ – ಅನ್ವಯಿಸುತ್ತದೆ. (ಪು.೪೩)” ಅಂತೆಯೇ “ಮಹಿಳೆಯನ್ನು ನೋಡುವ, ಸ್ವೀಕರಿಸುವ ಸ್ತ್ರೀ-ಪುರುಷರ ಮನೋಭಾವ ಬದಲಾಗದಿದ್ದರೆ ಯಾವ ಕಾನೂನೂ ಅಥವಾ ಯೋಜನೆಯೂ ಸಂಪೂರ್ಣವಾಗಿ ಯಶಸ್ವಿಯಾಗುವುದಿಲ್ಲ ಎಂಬ ಖೇದಕರ ಸತ್ಯ ಸ್ಪಷ್ಟವಾಗುತ್ತದೆ. (ಪು.೫೪)”. ಈ ಒಳನೋಟಗಳು ಕೇವಲ ಶುಷ್ಕ ಕಾನೂನು ಪಾಂಡಿತ್ಯದಿಂದ ಸಾಧಿತವಾಗಲಾರದು; ಅದು ಸಾಹಿತ್ಯಮೂಲದ ಸಂವೇದನೆ – ಮನುಷ್ಯ ಸ್ವಭಾವಕ್ಕೊಂದು ಭಾಷ್ಯ ಎನ್ನುವುದೇ ಸರಿಯಾದ ಮಾತು.

ಮಹಿಳೆಯ ಮೇಲೆ ನಡೆಯುವ ಅತ್ಯಂತ ಹೀನಾಯ, ಹೇಯ, ಅಮಾನವೀಯ, ಬರ್ಬರ ಕೃತ್ಯವೆಂದರೆ ಅತ್ಯಾಚಾರ. ನಮ್ಮ ನ್ಯಾಯಿಕ ವ್ಯವಸ್ಥೆ ಸಾಕ್ಯಾಧಾರಿತವಾದದ್ದು – evidence-based. ಇದೊಂದೇ ಕಾರಣಕ್ಕೆ, ಅಂದರೆ ಸಾಕ್ಷಿಯ ಕೊರತೆಯಿಂದ  ಅತ್ಯಾಚಾರದ ಕೇಸುಗಳು ಹೆಚ್ಚಿನ ಸಂದರ್ಭಗಳಲ್ಲಿ ಬಿದ್ದು ಹೋಗುತ್ತವೆ. ಈ ಕೇಸುಗಳ ವಿಚಾರಣಾ ವಿಧಾನ, ವೈದ್ಯಕೀಯ ಪರೀಕ್ಷಾ ವಿಧಾನ (ಈಗ ನಿಷೇಧಿಸಲ್ಪಟ್ಟ ಕುಖ್ಯಾತ  two finger-test) ಎಲ್ಲವೂ ಆ ದುರ್ಘಟನೆಯನ್ನು ಮತ್ತೆ ಮತ್ತೆ ಮಾನಸಿಕವಾಗಿ ಪುನರಾವರ್ತಿಸುತ್ತ, ಮಹಿಳೆಯ ಆತ್ಮಾಭಿಮಾನವನ್ನೇ ನಾಶಮಾಡುತ್ತವೆ. ಕಾನೂನಿಗೆ ಆದ ಹಲವು ತಿದ್ದುಪಡಿಗಳಲ್ಲಿ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ, ನನಗೆ ಮಹತ್ವದ್ದೆಂದು ಕಂಡು ಬಂದದ್ದು ಇದು: ಸಾಕ್ಷ್ಯ ಶಾಸನ, ಸೆಕ್ಷನ್ ೧೪೬ ಕ್ಕೆ ಕೇಂದ್ರ ಸರಕಾರ ೨೦೦೨ರಲ್ಲಿ ಮಾಡಿದ ತಿದ್ದುಪಡಿ. ಸಿ.ಎನ್.ಆರ್. ಅವರು ದಪ್ಪಕ್ಷರಗಳಲ್ಲಿ ನಮೂದಿಸಿದ ವಾಕ್ಯ ಈ ತಿದ್ದುಪಡಿಯ ಮುಖ್ಯ ಅಂಶಕ್ಕೆ ಒಟ್ಟು ಕೊಟ್ಟಿದೆ -– “ಅತ್ಯಾಚಾರಕ್ಕೆ ಅಥವಾ ಅತ್ಯಾಚಾರ ಪ್ರಯತ್ನಕ್ಕೆ ಸಂಬಂಧಿಸಿದ ಮೊಕದ್ದಮೆಗಳಲ್ಲಿ, ವಾದಿಯ ತಥಾಕಥಿತ ಅನೈತಿಕ ವ್ಯಕ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ನಿಷಿದ್ಧ. ದೂರುದಾರಳ ನೈತಿಕತೆಗೂ ಅವಳ ಮೇಲಾದ ಲೈಂಗಿಕ ದೌರ್ಜನ್ಯಕ್ಕೂ ಏನೂ ಸಂಬಂಧವಿಲ್ಲ.” (ಪು.೭೧) ಸಾಮಾನ್ಯವಾಗಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಚಾರಿತ್ರ್ಯ ಹನನ ಪ್ರತಿವಾದಿ ವಕೀಲರ ಪ್ರಮುಖ ಅಸ್ತ್ರ. ಈ ತಿದ್ದುಪಡಿ ಮಹಿಳೆಯ ತಥಾಕಥಿತ ಅಥವಾ ನೈಜ ಅತ್ಯಾಚಾರ-ಪೂರ್ವದ ಲೈಂಗಿಕ ಅನುಭವವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅತ್ಯಾಚಾರಕ್ಕೆ ಒಳಗಾದ ಮಹಿಳೆ ಒಂದು ವೇಳೆ ವೇಶ್ಯೆಯಾಗಿದ್ದರೂ ಅವಳ ಇಚ್ಛೆಗೆ ವಿರುದ್ಧವಾಗಿ, ಬಲಾತ್ಕಾರದಿಂದ ಲೈಂಗಿಕ ಸಂಪರ್ಕ ಸಾಧಿಸುವುದು ಕೂಡಾ ಅಪರಾಧವೇ ಸರಿ.

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಎಲ್ಲರಿಗೂ ಗೊತ್ತಿರುವ ಎರಡು ಪ್ರಕರಣಗಳು: ೨೦೧೨ರಲ್ಲಿ ನಡೆದ ಜ್ಯೋತಿ ಸಿಂಗ್ – ‘ನಿರ್ಭಯಾ’ ರೇಪ್ ಕೇಸ್ ಮತ್ತು ೧೯೭೩ರಲ್ಲಿ ನರ್ಸ್ ಅರುಣಾ ಶಾನುಭಾಗ್ ಮೇಲೆ ನಡೆದ ರೇಪ್. (ಪು.೭೧/೭೭). ನಿರ್ಭಯಾ ಕೇಸ್ ನಲ್ಲಿ ಆರನೆಯ ಆರೋಪಿ ಕೃತ್ಯ ನಡೆದಾಗ ‘ಬಾಲಕ’ನಾಗಿದ್ದ ಎಂಬ ಕಾರಣಕ್ಕೆ ಗಲ್ಲು ಶಿಕ್ಷೆಯಿಂದ ವಿನಾಯಿತಿ ಪಡೆಯುತ್ತಾನೆ. ಆರೂ ಮಂದಿ ಅಪರಾಧಿಗಳಲ್ಲಿ ಈತನ ಕೃತ್ಯ ಅತ್ಯಂತ ಅಮಾನುಷವಾದದ್ದು. ಇಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ ‘ಬಾಲಕ’ನೋರ್ವ ತನ್ನ ಪ್ರಾಯಕ್ಕೆ ಮೀರಿದ ಕ್ರೌರ್ಯ ಎಸಗಲು ಸಾಧ್ಯವಿದ್ದರೆ ಅವನಿಗೆ ಶಿಕ್ಷೆಯಿಂದ ವಿನಾಯಿತಿ ಯಾಕೆ ಕೊಡಬೇಕು? ದುರಾದೃಷ್ಟಕ್ಕೆ ನ್ಯಾಯಾಲಯವೂ ಪ್ರಚಲಿತವಿರುವ ಕಾನೂನಿನ ಮಿತಿಯನ್ನು ಮೀರುವಂತಿಲ್ಲ ಮತ್ತು ತೀರ್ಪು ಆ ಕಾನೂನಿನ ವ್ಯಾಪ್ತಿಯೊಳಗೇ ಇರಬೇಕಾದ ಅನಿವಾರ್ಯತೆಯನ್ನು ಹೊಂದಿರುವುದು. ಇಲ್ಲಿ ನಡೆದಿರುವುದು  JJ Act – Juvenile Justice Act – ನ gross misuse ಎಂದೇ ನನ್ನ ವೈಯಕ್ತಿಕ ಪ್ರಾಮಾಣಿಕ ಅನಿಸಿಕೆ. ಸುಪ್ರೀಂ ಕೋರ್ಟ್-ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಕೃಷ್ಣ ಅಯ್ಯರ್ ಹೇಳಿದ ಈ ಮಾತು ತುಂಬಾ ಮಾರ್ಮಿಕ ಎಂದು ನನಗೆ ಅನಿಸುತ್ತದೆ: The judgment of the Supreme Court is final and binding, but not necessarily correct! 

ಅತ್ಯಾಚಾರದಷ್ಟೇ ಕುಪ್ರಸಿದ್ಧವಾದುದು ಲೈಂಗಿಕ ದಂಧೆಗಾಗಿ ಹೆಣ್ಣುಮಕ್ಕಳ ಕಳ್ಳಸಾಗಾಣಿಕೆ – illegal human trafficking. ೨೦೧೩ರಲ್ಲಿ ಹಳೆಯ ಸೆಕ್ಷನ್ ೩೭೦ರ ಬದಲಾಗಿ ತಂದ ವಿಸ್ತೃತ ಸೆಕ್ಷನ್ ೩೭೦-೩೭೦ಎ ಕುರಿತು ಪ್ರೊ.  ಸಿ.ಎನ್.ಆರ್. ವಿವರವಾಗಿ ಬರೆದಿದ್ದಾರೆ (ನೋಡಿ:ಪು.೮೦-೮೪). ಕ್ಷಮಿಸಿ, ಅನುಷಂಗಿಕವಾಗಿಯಾದರೂ, ಈ ಬಗ್ಗೆ ಮಾತನಾಡುವಾಗ ವೈಯಕ್ತಿಕವಾಗಿ ನಾನು ಹೆಮ್ಮೆಯಿಂದ ದಾಖಲಿಸಲೇಬೇಕಾದ ದಿಟ್ಟ ಸಾಮಾಜಿಕ ಹೋರಾಟಗಾರ್ತಿ ಅಂದರೆ ಡಾ. ಸುನೀತಾ ಕೃಷ್ಣನ್. ಈಕೆ ನಮ್ಮ ಕಾಲೇಜಿನ – ಸ್ಕೂಲ್ ಆಫ್ ಸೋಶಿಯಲ್ ವರ್ಕ್, ಮಂಗಳೂರು – ಇಲ್ಲಿ  ಸ್ನಾತಕೋತ್ತರ ಪದವೀಧರೆಯಾಗಿ (ಎಂ.ಎಸ್.ಡಬ್ಲ್ಯು.) ಹಳೆವಿದ್ಯಾರ್ಥಿ. ಈಕೆ ಸ್ವತಃ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಗಳು. ತನ್ನ ವಿದ್ಯಾಭ್ಯಾಸದ ಸಮಯದಲ್ಲೇ ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಕ್ಷೇತ್ರಕಾರ್ಯ ನಡೆಸಿದಾಕೆ. ಸುನೀತಾ ಕೃಷ್ಣನ್ ಇಂದು ಹೈದರಾಬಾದಿನಲ್ಲಿ “ಪ್ರಜ್ವಲಾ” ಎಂಬ ಸರಕಾರೇತರ ಸಂಸ್ಥೆ ನಡೆಸುತ್ತಿದ್ದು ಈ ವರೆಗೆ ಹದಿನಾರು ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳನ್ನು ಈ ಕಳ್ಳಸಾಗಾಣಿಕೆ ಹಾಗೂ ದಂಧೆಯಿಂದ ರಕ್ಷಿಸಿ ಅವರ ಬಾಳಿಗೆ ಆಸರೆಯಾಗಿದ್ದಾರೆ ಮತ್ತು ಇದಕ್ಕಾಗಿ ಭಾರತ ಸರಕಾರದಿಂದ ‘ಪದ್ಮಶ್ರೀ’ ಪ್ರಶಸ್ತಿಯನ್ನೂ ಗಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ https://www.prajwalaindia.com/ ಈ ಜಾಲತಾಣಕ್ಕೆ ಭೇಟಿ ಕೊಡಿ.

ಈ ಪುಸ್ತಕದಲ್ಲಿ ಗಗನಸಖಿಯರ ಲಿಂಗಾಧಾರಿತ ಸೇವಾ ತಾರತಮ್ಯದ ವಿರುದ್ಧ ಕಾನೂನು ನೀಡಿದ ಸೇವಾ ಭದ್ರತೆ, ಮರ್ಯಾದಾ (ಮರ್ಯಾದೆಗೇಡು!) ಹತ್ಯೆ, ಅಂತೆಯೇ ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಸಮುದಾಯಗಳಿಗೆ ಸೇರಿದ ಹೆಣ್ಣುಮಕ್ಕಳ ವೈವಾಹಿಕ ಜೀವನದ ಆಯ್ಕೆಗೆ, ವಿಚ್ಛೇದನಕ್ಕೆ ಸಂಬಂಧಿಸಿದಂತೆ ಇರುವ ಕಾನೂನುಗಳ ಬಗ್ಗೆಯೂ ಪ್ರೊ.  ಸಿ.ಎನ್.ಆರ್. ವಿಸ್ತೃತ ಚರ್ಚೆ ನಡೆಸುತ್ತಾರೆ. ಅದರಲ್ಲೂ ತ್ರಿವಳಿ ತಲಾಕ್ ಅನ್ನು ಕಾನೂನು ಅಸಿಂಧು ಎಂದು ಘೋಷಿಸಿದ್ದು ಸಾಕು ಅದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿದ್ದರ ದುಷ್ಪರಿಣಾಮಗಳ ಬಗ್ಗೆಯೂ ನಮ್ಮ ಗಮನ ಸೆಳೆಯುತ್ತಾರೆ (ಪು.೧೨೫-೧೨೬). ಹೆಣ್ಣುಮಕ್ಕಳ ಪರವಾಗಿ ಈ ರೀತಿ ಯೋಚಿಸುವ ಲೇಖಕರ ಮನೋಭಾವವನ್ನು “ಕಾನೂನು ಮಾನವೀಯವಾಗಬೇಕು ಮತ್ತು ಅದು ಜನರ ಸಂಕಟಗಳಿಗೆ ಸ್ಪಂದನ ಗುಣ ಬೆಳೆಸಿಕೊಳ್ಳಬೇಕು ಎಂಬ ಸದಾಗ್ರಹ” ಎಂದು ದಂಡಾವತಿಯವರು ಸರಿಯಾಗಿಯೇ ಗುರುತಿಸಿದ್ದಾರೆ. ಅಂತೆಯೇ ಶ್ರೀ ರಘುನಾಥ್ ಅವರು ‘ಪ್ರಜಾವಾಣಿ’ ಪತ್ರಿಕೆ (ದಿ.೦೬.೦೯.೨೦೨೦)ಯಲ್ಲಿ ಈ ಪುಸ್ತಕದ ವಿಮರ್ಶೆ ಮಾಡುತ್ತಾ ಹೇಳಿದ ಮಾತುಗಳನ್ನು ಇಲ್ಲಿ ಉಲ್ಲೇಖಿಸುವುದು ಪ್ರಸ್ತುತ ಎನಿಸಿತು: ”… ಪುರುಷ ಓದುಗರಲ್ಲಿ ತಳಮಳ ಹಾಗೂ ಪಾಪಪ್ರಜ್ಞೆಯನ್ನು ಹುಟ್ಟಿಸಬಲ್ಲ ಶಕ್ತಿ ಸಿಎನ್ನಾರ್  ಅವರ ಕೃತಿಗಿದೆ. ಅದು ಈ ಕೃತಿಯ ಯಶಸ್ಸೂ ಹೌದು.” ಈ ಮಾತಿನಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಈ ಪುಸ್ತಕ ಖ್ಯಾತ ನ್ಯಾಯವಾದಿ ಹಾಗೂ ಲೇಖಕಿ ಶ್ರೀಮತಿ ಹೇಮಲತಾ ಮಹಿಷಿ ಅವರ ಮೆಚ್ಚುಗೆಯ ನುಡಿಗಳೊಂದಿಗೆ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಈ ಕೊಂಡಿಯನ್ನು ಬಳಸಿ:

.

https://www.facebook.com/BookBrahma/videos/801206947286681/?epa%20SEARCH_BOX (Book Release Function  Live on FaceBook – August 16, 2020)

ಕೊನೆಯದಾಗಿ, ಭಾರತ ಎಂದೂ ಯಾವುದೇ ಒಂದು ‘ಏಕಸೂತ್ರ’ದ ನೆಲೆಯಲ್ಲಿ ನಿರ್ವಚಿಸಲಾಗದ ವಿಶಿಷ್ಟ ‘ಬಹುತ್ವ’ದ ಸಾಕಾರಮೂರ್ತಿಯಾಗಿಯೇ ಉಳಿದಿದೆ. ಮತ್ತು ಭಾರತದ ಅಂತ:ಸತ್ವವೇ ಇದು ಆಗಿರುವಾಗ ಬಹು ಭಾಷಿಕ, ಬಹು ಮತ, ಧರ್ಮ, ಆಚರಣೆಗಳ, ಬಹುಮುಖೀ ಸಂಸ್ಕೃತಿಗಳ ನೆಲೆವೀಡಾದ ಇಲ್ಲಿನ ಕಾನೂನುಗಳೂ ಈ ‘ಬಹುತ್ವ’ವನ್ನೇ ಪ್ರತಿಫಲಿಸುತ್ತವೆ ಎಂಬುದಾಗಿ ಈ ಪುಸ್ತಕದ ಒಟ್ಟಾರೆ ಆಶಯವನ್ನು ಗ್ರಹಿಸಬಹುದು ಎಂದು ನನಗೆ ಅನಿಸುತ್ತದೆ. “ದುರದೃಷ್ಟವಶಾತ್ ತಾತ್ವಿಕತೆ ಹಾಗೂ ವಾಸ್ತವ ಇವೆರಡರ ನಡುವೆ ಅಗಾಧ ಕಂದಕವಿದೆ (ಪು.೧೦೫) ಎಂಬುದನ್ನು ಒತ್ತಿ ಹೇಳುತ್ತಾ, ಕಾನೂನು-ಸಮಾಜ-ಅಪರಾಧಗಳ ನಡುವೆ ಮನುಕುಲದ ಸಂಘರ್ಷ ನಿರಂತರ ಎಂಬುದನ್ನು “ಉಪಸಂಹಾರವಿಲ್ಲದ ಕಥನ” ಎಂದು ಮುಕ್ತಾಯ ಮಾಡುವ ಪ್ರೊ. ಸಿ.ಎನ್.ಆರ್. ನಮ್ಮ ನಡುವಿನ ಅಪರೂಪದ ವ್ಯಕ್ತಿಗಳಲ್ಲಿ ಅಗ್ರಗಣ್ಯರು ಎಂಬುದಕ್ಕೆ ಈ ಪುಸ್ತಕ ಮತ್ತೊಂದು ಪುರಾವೆ ಎಂದು ನನ್ನ ಮಾತು ಮುಗಿಸುತ್ತೇನೆ. ನಮಸ್ಕಾರ.  

********************************************** 

          ಲಕ್ಷ್ಮೀನಾರಾಯಣ ಭಟ್ ಪಿ.   

 

One thought on “ಮಹಿಳೆ ಮತ್ತು ಭಾರತೀಯ ಕಾನೂನು ವ್ಯವಸ್ಥೆ – ಸಿ.ಎನ್. ರಾಮಚಂದ್ರನ್:

  1. ಸವಿವರವಾದ ಮತ್ತು ಸಮರ್ಪಕವಾದ , ಪುಸ್ತಕ ಪರಿಚಯದ ವ್ಯಾಪ್ತಿಯನ್ನು ವಿಸ್ತರಿಸಿದ ವಿಮರ್ಶೆಯನ್ನು ಬರೆದಿರುವ ಗೆಳೆಯ ಎಲ್ ಎನ್ ಭಟ್ ಅವರಿಗೆ ಅಭಿನಂದನೆಗಳು. ಕಾನೂನು ಮತ್ತು ಸಾಹಿತ್ಯದ ತಿಳುವಳಿಕೆಯನ್ನು ಬಳಸಿ ಈ ಗ್ರಂಥವನ್ನು ಬರೆದಿರುವ ಹಿರಿಯರಾದ ಪ್ರೊ. ಸಿ. ಯನ್. ರಾಮಚಂದ್ರನ್ ಅವರಿಗೆ ಗೌರವಪೂರ್ವಕ ಅಭಿನಂದನೆಗಳು..
    ಕೆ. ಚಿನ್ನಪ್ಪ ಗೌಡ

Leave a Reply

Back To Top