ಜನ್ನತ್ ಮೊಹಲ್ಲಾ

ಕಥೆಗಾರ, ಕಾದಂಬರಿಕಾರ ಅಬ್ಬಾಸ ಮೇಲಿನಮನಿಯವರು ಇವತ್ತು ನಮ್ಮನ್ನಗಲಿದ್ದಾರೆ. ಅವರ ಜನ್ನತ್ ಮೊಹಲ್ಲಾ ಎಂಬ ಕಾದಂಬರಿ ಕುರಿತು ಸುನಂದಾ ಕಡಮೆ ಬರೆದಿದ್ದಾರೆ

ಜನ್ನತ್ ಮೊಹಲ್ಲಾ

ಸುನಂದಾ ಕಡಮೆ

ಅಬ್ಬಾಸ ಮೇಲಿನಮನಿಯವರ ಹೆಂಗರುಳು ತುಂಬಿದ ‘ಜನ್ನತ್ ಮೊಹಲ್ಲಾ’

    ಎರಡು ಓದಿನ ನಂತರ ಈ ಜನ್ನತ್ ಮೊಹಲ್ಲಾದಲ್ಲಿ ಎರಡು ದಿನ ಇದ್ದು ವಿಶ್ರಮಿಸಿ ಬಂದಂತೆ ಪಾತ್ರಗಳು ಸಂಭಾಷಣೆಗಳು ಘಟನೆಗಳು ಪುನಃ ಪುನಃ ಕಾಡತೊಡಗಿದವು. ಅಚ್ಚರಿಯೆಂದರೆ ಇಲ್ಲಿಯ ಹೆಣ್ಣು ಮಕ್ಕಳಿಗೆ ಹಿಂಸೆಯೆನಿಸದ ಸ್ವಾತಂತ್ರ್ಯವಿದೆ ಮತ್ತು ಕಕ್ಕುಲಾತಿಯ ಬಂಧನಗಳಿವೆ. ನಂಬಿಕೆಗಳಿಗೆ ಕಟ್ಟುಬೀಳದೇ ಸಹಜ ಬದುಕು ನಡೆಸುವಂತೆ ಹುಮ್ಮಸ್ಸು ನೀಡುವ ವಾತಾವರಣವಿದೆ. ಹೆಣ್ಣುಮಕ್ಕಳು ಅಪೇಕ್ಷೆ ಪಟ್ಟ ಬದುಕನ್ನು ಆಯುವ ಪ್ರಜ್ಞಾನೀತಿಯಿದೆ. ಇಲ್ಲಿ ಪ್ರೀತಿ ಪ್ರೇಮ ಹಟ ರೋಷ ದ್ವೇಷ ಅಸೂಯೆ ಅನುಕಂಪ ಅಂತಃಕರಣ ಮುಂತಾದ ಮನುಷ್ಯ ಸಹಜ ಸ್ಪಂದನೆಗಳೆಲ್ಲವೂ ಬಿಡಿಬಿಡಿಯಾದ ಆಕೃತಿಯಾಗಿ ಮೇಳೈಸಿವೆ. ನಮ್ಮ ಒಟ್ಟೂ ಸಮಾಜ ವ್ಯವಸ್ಥೆಯೇ ಪುರುಷ ಪ್ರಧಾನವಾಗಿರುವದರಿಂದ, ನಮ್ಮ ಶಿಕ್ಷಣ ನೀತಿ ಶಾಸ್ತç ಕಾನೂನು ಆಡಳಿತ ಉದ್ಯೋಗ ಈ ಎಲ್ಲ ಕ್ಷೇತ್ರಗಳಲ್ಲೂ ಗಂಡಿಗೊಂದು ಹೆಣ್ಣಿಗೊಂದು ಪ್ರತ್ಯೇಕ ಮಾನದಂಡ ಏರ್ಪಟ್ಟಿರುವದು ಕೃತ್ರಿಮ ಅನ್ನುವ ಗೋಜಿಗೇ ಹೋಗುವಂತಿಲ್ಲ ಎನ್ನುವಷ್ಟರ ಮಟ್ಟಿಗೆ ನಾವೂ ಹೊಂದಾಣಿಕೆ ಮಾಡಿಕೊಂಡುಬಿಟ್ಟಿದ್ದೇವೆ. ಎಲ್ಲ ಧರ್ಮಗಳಲ್ಲೂ ಹೆಣ್ಣಿನ ಪ್ರಜ್ಞೆಯನ್ನು ಸಾವಿರಾರು ವರ್ಷಗಳಿಂದ ಒಲೆ, ಅಡಿಗೆಮನೆ, ಕಸಬರಿಗೆ, ಕನ್ನಡಿ, ಮೆಹಂದಿ ಹೀಗೆ ಹೊಸ್ತಿಲೊಳಗೇ ಕಟ್ಟಿಹಾಕಿರುವದರಿಂದ ನಮಗೆ ವಿಕಾಸ ಎಂಬುದು ಒಂದು ವಿದೇಶೀ ಪರಿಕಲ್ಪನೆ. ಸ್ತ್ರೀಯರನ್ನು ಒಂದು ವಸ್ತು ಅಥವಾ ಒಂದು ಪದಾರ್ಥದಂತೆ ಭಾವಿಸಿರುವ ಈ ವ್ಯವಸ್ಥೆ, ಹೆಣ್ಣನ್ನು ಇಂದಿಗೂ ಎರಡನೇ ನಾಗರಿಕಳಾಗಿಯೇ ನೋಡುತ್ತ ಬಂದಿದೆ. ಆದರೆ ಈ ಕೃತಿಯಲ್ಲಿ ಅಲ್ಲಲ್ಲಿ ಅವಳಿಗೆ ತುಂಬಿದ ಚೈತನ್ಯದಾಯಕವಾಗಿ ಮಿಡಿಯುವ ಜೀವ, ಲೇಖಕರ ಔದಾರ್ಯವನ್ನೂ ಮೀರಿ ಬೆಳೆದು ನಿಂತಿರುವುದು ಒಂದು ಸೋಜಿಗವೇ ಸರಿ. ಇಲ್ಲಿಯ ಹೆಂಗರುಳು ತುಂಬಿದ ಜಗತ್ತು, ನನಗೆ ಈ ಕಾದಂಬರಿ ಇಷ್ಟವಾಗಲು ಕಾರಣ.

     ಕಾದಂಬರಿಕಾರ ಅಬ್ಬಾಸ್ ಮೇಲಿನಮನಿಯವರು ಅತ್ಯಂತ ಸಹಜವಾದ ಸ್ತ್ರೀಪರ ದೃಷ್ಟಿಕೋನವನ್ನು ಹೊಂದಿರುವವರಾದ್ದರಿಂದ ಈ ಮೊಹಲ್ಲಾ ಪರಂಪರೆಯ ಜಾಡ್ಯವನ್ನು ನಿವಾರಿಸಿಕೊಳ್ಳುತ್ತಲೇ ಮನುಷ್ಯತ್ವದ ಉನ್ನತಿಯನ್ನು ಇಡಿಯಾಗಿ ತನ್ನೊಡಲಲ್ಲಿಟ್ಟಿಕೊಂಡು ಸಮೃದ್ಧವಾಗಿ ಮೂಡಿ ಬಂದ ಕೃತಿ. ಹೀಗೆ ಅಮಿನೂರಿನಲ್ಲಿ ಮೈತೆತ್ತ ಪ್ರತಿಯೊಬ್ಬ ಮಹಿಳೆಯೂ ಮಾನವೀಯ ಅಂತಃಕರಣವುಳ್ಳವಳು. ವ್ಯವಸ್ಥೆಯ ಕಾರಸ್ಥಾನಕ್ಕೆ ಬಲಿಪಶುವಾಗುವ ಹೆಣ್ಣುಗಳು ತಂತಮ್ಮ ಮನೋಸ್ತೈರ್ಯದಿಂದಲೇ ಈ ಕಾದಂಬರಿಯ ಅಂತಃಸತ್ವವಾಗಿ ಬೆಳೆದು ನಿಂತಿದ್ದಾರೆ. ಕೆಲವು ಪುರುಷರ ಸಣ್ಣತನ ದುಷ್ಟತನ ಧರ್ಮಾಂಧತೆಯ ನಡುವೆಯೇ ಬೆಂದು ಬಸವಳಿದು ತಲ್ಲಣಿಸುವ ಈ ಮೊಹಲ್ಲಾದಲ್ಲಿಯ ಪ್ರತಿಯೊಬ್ಬ ಸ್ತ್ರೀ ತನ್ನ ಹೆಜ್ಜೆ ಹೆಜ್ಜೆಗೂ ಗೆಲುವಿನ ದಾರಿಯನ್ನೇ ಹಿಡಿಯುತ್ತಾಳೆ. ಇಲ್ಲಿ ಜೀವಿಸುವ ಹನ್ನೆರಡು ಪ್ರಮುಖ ಹೆಣ್ಣು ಜೀವಗಳಲ್ಲಿ ಒಬ್ಬೊಬ್ಬರದೂ ಒಂದೊಂದು ದಾರಿ. ಒಂದೊAದು ನಡೆ. ಬೇರೆ ಬೇರೆ ನೋಟ. ವಿವಿಧ ತರ್ಕಗಳು, ಪ್ರತ್ಯೇಕ ಸಂವೇದನೆಗಳು, ಎಲ್ಲ ಮನೋಭೂಮಿಕೆಗಳೂ ಸೇರಿ ಈ ನೆಲದ ನೆಮ್ಮದಿಯ ಬದುಕಿನ ಮಹತ್ತರವಾದೊಂದು ಆಕಾಂಕ್ಷೆಯೊಂದಿಗೆ ಜನ್ನತ್ ಮೊಹಲ್ಲಾ ರೂಪಿತವಾಗಿದೆಯೇನೋ ಅನಿಸುತ್ತದೆ.

      ಆರಂಭದಲ್ಲಿ ನಿರಪರಾಧಿ ಮೆಹರುನ್ನಿಸಾ ತನ್ನ ಸುರುಳೀತ ದಾರಿಯಲ್ಲಿ ಅಕಾರಣ ಒದಗಿ ಬಂದ ಅನೇಕ ಸಂಧಿಗ್ಧಗಳನ್ನು ಮೆಟ್ಟಿ ನಿಲ್ಲುತ್ತಾಳೆ. ಕೊನೆಯಲ್ಲಿ ಗಂಡ ಜಾವೇದನೇ ಕ್ಷಮೆ ಕೇಳಿದರೂ ಅವನ ಮಾತನ್ನು ಧಿಕ್ಕರಿಸಿ ‘ಸ್ವಂತ ಬುದ್ಧಿ ಮತ್ತು ಮನುಷ್ಯತ್ವ ಇಲ್ಲದವನೊಂದಿಗೆ ನಾನು ಜಿಂದಗಿ ಮಾಡುವುದಿಲ್ಲ’ ಎಂದು ತಾನು ಹುಟ್ಟಿದ ಮನೆಯ ದಾರಿ ಹಿಡಿಯುವ ಮೆಹರುನ್ನೀಸಾ ವ್ಯವಸ್ಥೆಯ ತುಳಿತದಿಂದಲೇ ಸ್ವತಂತ್ರ ಬಾಳಿಗೆ ಮುನ್ನುಡಿ ಬರೆದವಳು. ಮಗುವನ್ನು ಕಳೆದುಕೊಂಡ ಸಂಕಟದಲ್ಲೂ ತನ್ನ ದಾರಿಯನ್ನು ನೇರವಾಗಿ ಗುರುತಿಸಿಕೊಂಡವಳು. ಕಷ್ಟ ಸಹಿಷ್ಣುವಾಗಿ ಬಾಳಿದ ರೆಹಮಾನನ ತಾಯಿ ಅಮೀನಾ ಕೂಡ ಇಡೀ ಬದುಕನ್ನು ಒಳ್ಳೆಯದರ ನಿರೀಕ್ಷೆಯಲ್ಲೇ ಕಳೆದವಳು. ಸಣ್ಣ ವಯದಲ್ಲೇ ಗಂಡನನ್ನು ಕಳಕೊಂಡು ಮಗ ಕೆಲಕಾಲ ದೂರವಾದಾಗ್ಯೂ ಏಕಾಂಗಿ ಜೀವಿಸಿದವಳು. ಆ ಮೂಲಕ ಇಡೀ ಸಮಾಜವನ್ನು ಕ್ಷÄಲ್ಲಕವಲ್ಲದ ರೀತಿಯಲ್ಲಿ ಮುನ್ನಡೆಸಬೇಕೆನ್ನುವವಳು. ವಿಧವೆ ತಾಹಿರಾಳನ್ನು ಸೊಸೆ ಮಾಡಿಕೊಂಡು ಸಂಪ್ರದಾಯದ ವಿರುದ್ಧವೂ ಒಂದು ಕಲ್ಲು ಎಸೆದವಳು. ಸಮಾಜ ಕೊಡಮಾಡದ ನೆಮ್ಮದಿಯನ್ನು ತನ್ನ ವೈಚಾರಿಕ ಬೆಳಕಿನಲ್ಲೇ ಪಡಕೊಂಡವಳು.

      ತಂದೆಯಿಲ್ಲದ ಬಡ ಹುಡುಗ ರೆಹಮಾನನನ್ನು ತನ್ನ ಮಗನಂತೆಯೇ ನೋಡಿಕೊಂಡ, ಪ್ರಭಯ್ಯ ಹಿರೇಮಠ ಮಾಸ್ತರರ ಹೆಂಡತಿ ಮಲ್ಲಮ್ಮ,, ನಿಸ್ವಾಥದಿಂದ ಓದುಗರ ಮನಸ್ಸಿನಲ್ಲಿ ನಿಲ್ಲುತ್ತಾಳೆ. ಅನ್ಯ ಧರ್ಮೀಯ ಹುಡುಗನನ್ನು ಮನೆ ಸೇರಿಸುವ ತಾಯ ಮಮತೆಯನ್ನು ತನಗೆ ಸಿಕ್ಕ ಅವಕಾಶದಲ್ಲೇ ಸಾರ್ಥಕಪಡಿಸಿಕೊಳ್ಳಲು ಮೂಡಿ ಬಂದಂತಿರುವವಳು. ಅಮಿನೂರಿನ ಶಾಲೆಗೆ ಕನ್ನಡ ಶಿಕ್ಷಕಿಯಾಗಿ ಹೊಸ ಕದಿರು ತಂದ ಚಿಕ್ಕೋಡಿಯ ಧ್ಯಾನಸ್ಥ ಮನಸ್ಸಿನ ಹುಡುಗಿ ತಾಹಿರಾ ಪಟೇಲ್ ಸಹ ಚಿಕ್ಕ ವಯದಲ್ಲೇ ವೈಧವ್ಯದ ನೋವು ಅನುಭವಿಸಿದವಳಾದರೂ ಹೃದಯವಂತ ಸ್ವಭಾವದವಳು, ಅನಕ್ಷರಸ್ಥ ಮಹಿಳೆಯರಿಗೆ ಹೊಲಿಗೆ ಕಸೂತಿ ಕಲಿಸಿ ಪಾರತಂತ್ರದಿಂದ ನೇರ ನಿಲ್ಲಲು ಛಲ ತುಂಬಿದವಳು. ವೈಚಾರಿಕ ಪ್ರಜ್ಞೆಯ ಬೆಳಕನ್ನು ಚೆಲ್ಲುತ್ತ, ನತದೃಷ್ಟ ನಜಮಾಗೆ ಅಕ್ಷರ ಕಲಿಸುವವಳು, ಒಂದು ಕಡೆಯಿಂದ ‘ಮೊಹಲ್ಲಾದ ಹೆಂಗಸರ ತಲೆಕೆಡಿಸಿ ಪುರುಷರ ಮೇಲೆ ಎತ್ತಿಕಟ್ಟಿ ಅವಾಂತರ ಉಂಟು ಮಾಡುತ್ತಿದ್ದಾಳೆ’ ಎಂದು ತಿವಿಸಿಕೊಂಡರೂ, ಇನ್ನೊಂದು ಕಡೆಯಿಂದ ‘ಬಸವನ ಹುಳದಂಗ ತೆವಳೂದ್ರಾಗ ತೃಪ್ತಿ ಐತಿ ಹೊರತು ಹಕ್ಕಿ ಹಂಗ ಮುಗಿಲು ತುಂಬಾ ಹಾರಾಕ ಬಯಸೂದಿಲ್ಲ ಇವರು’ ಅಂತ ತನ್ನ ಜನರ ದುಗುಡ ದುಮ್ಮಾನ ಸ್ವಂತದ್ದಾಗಿಸಿಕೊಳ್ಳುವ ತಾಹಿರಾಳೇ ಈ ಕಾದಂಬರಿಯ ನಾಯಕಿಯಂತೆ ಮೇಲ್ನೋಟಕ್ಕೆ ಸೃಷ್ಟಿಯಾಗಿದ್ದಾಳೆ. ಹೆಣ್ಣುಮಕ್ಕಳ ಹತಾಷೆಯ ಬಾಳನ್ನು ಹಿಡಿದೆತ್ತಿ ಆತ್ಮಸ್ತೈರ್ಯ ತುಂಬುವದೂ ಅದರಂತೆ ಬದುಕುವುದೂ ಸಾಮಾಜಿಕ ಕಳಕಳಿಯ ಮನಸ್ಸಿಗೆ ಹಿಡಿದ ಘನತೆಯ ಕನ್ನಡಿಯಾಗಿದೆ.  

      ‘ಇನ್ಮೇಲೆ ನಜಮಾ ಶಾಲೀಗ ಹೊಕ್ಕಾಳ, ನಾನು ದುಡಿದು ಆಕೀಗ ಕಲಿಸ್ತೀನಿ’ ಎನ್ನುವ ನೂರಜಾನ ಕೂಡ ಕೌಟುಂಬಿಕ ವಲಯದಲ್ಲೇ ದಿಟ್ಟೆಯಾಗಿ ವರ್ತಿಸಿದವಳು. ಕುಡುಕ ಗಂಡ ಶಾಲೆ ಬಿಡಿಸಿ ಕೂಲಿಗೆ ಹಚ್ಚಿದ ಮಗಳನ್ನು, ಪುನಃ ಕೂಲಿ ಬಿಡಿಸಿ ಶಾಲೆಗೆ ಸೇರಿಸಿ ‘ಅವಳ ಕೆಲಸಾ ನಾನು ಮಾಡ್ತೀನಿ, ನನ್ನ ಕೂಸು ಓದು ಬರಹ ಕಲೀಲಿ’ ಎನ್ನುತ್ತ ತನ್ನ ಗಂಡನನ್ನೇ ಎದುರು ಹಾಕಿಕೊಂಡು ತನ್ಮೂಲಕ ಸಾಕ್ಷರದ ಮಹತ್ವವನ್ನು ಸ್ತಿçà ಸಮೂದಾಯಕ್ಕೆ ಅರುಹಿ, ಬಡವರ ಅವಶ್ಯಕತೆಗಳು ಹೆಣ್ಣುಮಗಳೊಬ್ಬಳ ಶಿಕ್ಷಣಕ್ಕೆ ಶಾಪವಲ್ಲ ಎಂಬುದನ್ನು ಕಾಣಿಸಿದವಳು. ಮುಂಬೈಗೆ ಮದುವೆಯಾಗಿ ಹೋಗಿ ಅಲ್ಪ ಕಾಲಾವಧಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ರೂಬಿಯಾ, ಪ್ರೀತಿಸಿದ ರೆಹಮಾನನನ್ನು ಅವನ ಬಡತನವೇ ಕಾರಣವಾಗಿ ಅವಳ ತಂದೆ ಎಸಗಿದ ದುರ್ವಿಧಿಯಿಂದ ಅತ್ತ ಮೆಚ್ಚಿದವನನ್ನು ಪಡೆಯಲಾರದೇ ಇತ್ತ ಅನ್ಯಾಯವನ್ನೂ ಸಹಿಸಲಾರದೇ ಜೀವ ತೆತ್ತವಳು. ರೆಹಮಾನನ ಸಖಿಯಾಗಬೇಕಾದವಳು ಸಾವಿನ ಸಖಿಯಾಗಿ ಹೋದ ದಾರುಣತೆಗೆ ಈಡಾದ ರೂಬಿಯಾ ವ್ಯವಸ್ಥೆಯ ಶೋಷಣೆಗೆ ಸಿಕ್ಕಿಹಾಕಿಕೊಂಡು ಅಸಹಾಯಕಳಾಗಿ ನಲುಗಿದಳು.

      ತಸ್ಲೀಮಾ, ಗಂಡ ಅಶ್ರಫ್ ನ ಸಂಶಯಕ್ಕೆ ಎಡೆ ಮಾಡಿಕೊಡುವಂತೆ ಕುಹಕಿಗಳ ವಂಚನೆಗೆ ಬಲಿಯಾಗಿ ಕಾಲೇಜು ವಿದ್ಯೆಗೆ ತೆರೆದುಕೊಂಡವಳು. ದೂರ ಇದ್ದ ಗಂಡನನ್ನೇ ಕಾಯುತ್ತ ಚಿಂತಿಸುತ್ತ, ಅಲ್ಲಿಂದ ಹರಿದು ಬರುವ ಕೇವಲ ಹಣದ ರಾಶಿಗಾಗಿಯೋ ಎಂಬ ಸಂಶಯಕ್ಕೆಡೆ ಮಾಡುವಂತೆ ತನ್ನ ಮನಸ್ಥಿತಿಯನ್ನು ಕಿಂಚಿತ್ತೂ ಸಡಿಲಿಸದೇ ಕೂತಿದ್ದಾಗ್ಯೂ ಮನೆಯಲ್ಲೇ ಇರುವ ಕಾಮುಕನ ಹಿಂಸೆಗೆ ಒಳಗಾಗಿ ಮಾನಸಿಕವಾಗಿ ಕುಗ್ಗಿ, ಆ ಹಿನ್ನೆಲೆಯಲ್ಲೇ ಅಗ್ನಿ ಪರೀಕ್ಷೆ ಎದುರಿಸುವ ಸಧೃಡ ಮನಸ್ಸಿನವಳಾಗಿ ರೂಪಗೊಂಡವಳು. ಹೊಟೇಲ್ ಮಾಲಿಕ ಹುಸೇನ್ ಮೀಯ್ಯಾನ ಹೆಂಡತಿ ಸುರಯ್ಯಾ, ವೃದ್ಧ ಪತಿಯ ಅನಾಸಕ್ತಿಯಿಂದ ಬೇಸತ್ತು ಆತ್ಮವಂಚಿತಳಾಗಿ ಯಾವುದೋ ಕ್ಷಣದಲ್ಲಿ ರೆಹಮಾನನ ಆಸರೆ ಬಯಸಿ ಬಂದು, ನಂತರ ಪಶ್ಚಾತ್ತಾಪದಿಂದ ನೇರ ಮನಸ್ಥಿತಿಗೆ ಮರಳಿದವಳು, ರೆಹಮಾನನ ಒಡತಿಯಾದ ಇವಳು ಕೊನೆಯಲ್ಲಿ ತೆಗೆದುಕೊಳ್ಳುವ ತೀರ್ಮಾನ ಪುನಃ ತನ್ನ ಗೋಡೆ ತಾನೇ ನಿರ್ಮಿಸಿಕೊಂಡ ಹಾಗೆ ಅನಿಸುತ್ತ ಸುರಯ್ಯಾ ತನ್ನ ಮನಸ್ಸನ್ನೇ ತಾನು ಸಮಾಧಿಮಾಡಿಕೊಂಡವಳಂತೆ ಕಾದಂಬರಿಯಿAದಲೇ ದೂರವಾಗುತ್ತಾಳೆ. ರೆಹಮಾನನ್ನು ಒಂದರೆಕ್ಷಣ ಬಯಸಿದ ಅಭೀಪ್ಸೆಯೇ ಅವಳ ಅಂತರAಗದ ಬಿಡುಗಡೆಯಂತೆ ಇಲ್ಲಿ ಧ್ವನಿತವಾಗಿದೆ.

      ಜಾಹೀರಾ, ಖತೀಜಾ ಬೀಬಿಯ ಮಗ ನೌಷಾದನನ್ನು ಪ್ರೇಮಿಸಿ ಮನೆ ಬಿಟ್ಟೇ ಬರುವ ಧೈರ್ಯ ತೋರಿದವಳು. ರಾತ್ರಿಯ ಕತ್ತಲನ್ನು ಸಹ ಹಿಮ್ಮೆಟಿಸಿ ಬೆಳಕಿಗೆ ಮುಖ ಮಾಡಿ ನಿಂತು ಬದುಕಿನ ಪಯಣದಲ್ಲಿ ಗಂಡಾಂತರವನ್ನೇ ಎದುರಿಸುವ ಛಾತಿಯುಳ್ಳವಳು. ಇಂಥ ಕತ್ತಲನ್ನು ಎದುರಿಸದ ರೂಬಿಯಾ ಪುನಃ ನೆನಪಾಗುತ್ತಾಳೆ. ಸೈರಾ, ಜಿಲಾನಿಯವರ ಒಳಕತ್ತಲನ್ನು ತೆರೆದು ತೋರಿದ್ದಷ್ಟೇ ಅಲ್ಲದೇ ಅವನ ನೆಚ್ಚಿನ ಹುಡುಗಿಯಾಗಿ ತನ್ನ ಒಂಟಿ ಬಾಳಿಗೆ ನಾಂದಿ ಹಾಡಲು ಹೊರಟಿರುವವಳು. ಸೈರಾಳ ಸೂಕ್ಷ್ಮಮತಿ ಬುದ್ಧಿವಂತಿಕೆ ಚಾಣಾಕ್ಷ್ಯತೆ ಧೈರ್ಯವಂತಿಕೆ ಗಮನಿಸಿದರೆ ಇವಳೇ ಈ ಕೃತಿಯ ನಿಜವಾದ ನಾಯಕಿಯಂತೆ ಮೂಡಿಬಂದಿದ್ದಾಳೆ. ಇವಳು ತಾನು ಅನುಭವಿಸಿದ ನೋವಿನ ಘರ್ಷಣೆಗಳಿಂದಲೇ ಪಾಕಗೊಂಡು ಬೆಳೆದ ಮನಸ್ಸುಳ್ಳವಳು. ಸೈರಾ ಮುಂದೊಂದು ದಿನ ತಾಹಿರಾಳಂತೆ ಜನ್ನತ್ ಮೊಹಲ್ಲಾವನ್ನಷ್ಟೇ ಅಲ್ಲ ಇಡೀ ಭೂಮಿಯನ್ನು ತಾಯಂತೆ ಪೊರೆಯುವ ಶಕ್ತಿಯುಳ್ಳವಳಂತೆ ಕಾಣುತ್ತಾಳೆ. ಕೌಸರ್ ಭಾನು, ತನ್ನ ಅನಾರೋಗ್ಯಕ್ಕೆ ಆಸ್ಪತ್ರೆಯ ವೈಜ್ಞಾನಿಕ ಔಷಧಿಯಿಂದಲೇ ಗುಣಪಡಿಸುವ ಶಕ್ತಿಯಿದೆಯೆಂದು ನಂಬಿದ್ದವಳು. ವೈಜ್ಞಾನಿಕ ದೃಷ್ಟಿಕೋನದಲ್ಲಿ ಯಾವ ಮಹಿಳೆ ಯೋಚಿಸಲು ತೊಡಗುತ್ತಾಳೋ ಅಂದಿನಿಂದಲೇ ಅವಳ ವಿಕಾಸದ ಮೆಟ್ಟಿಲುಗಳು ಆರಂಭಗೊಳ್ಳುತ್ತವೆ ಅಂದಿದ್ದರು ಲೋಹಿಯಾ. ಖತೀಜಾ ಬೀಬಿ, ಗಂಡನಿಗೆ ಒಂದು ಮಗುವನ್ನು ಹೆತ್ತುಕೊಡುವಲ್ಲಿ ಯಶಸ್ವಿಯಾಗಿ ಅವನ ಆಸ್ತಿಯಲ್ಲೇ ಸಂಸಾರ ನಡೆಸುವ ಪಯಣದಲ್ಲಿ ದಾಯಾದಿಗಳಿಂದ ಅನ್ಯಾಯವಾಗಿ ನೋವು ಅನುಭವಿಸುತ್ತಿರುವವಳು. ಖತೀಜಾ ಬೀಬಿಯ ನಂಬಿಕೆಗಳು ಕೂಡ ಅವೈಜ್ಞಾನಿಕವಾದುದಲ್ಲ. ಇದು ಸುರಯ್ಯಾಳ ಧಾರ್ಮಿಕ ನಂಬಿಕೆಗಳಿಗಿAತ ತೀವ್ರವಾದದ್ದು ಮತ್ತು ಅಷ್ಟೇ ಪ್ರಾಮಾಣಿಕವಾದದ್ದು.

      ರಾಜಕೀಯ ಸ್ವಾರ್ಥ ವಂಚನೆ ತುಳಿತ ಹಿಂಸೆ ಏನೆಲ್ಲವುಗಳ ಮಧ್ಯೆಯೇ ಈ ಮೊಹಲ್ಲಾದಲ್ಲಿ ಹನ್ನೆರಡು ಸ್ತ್ರೀಪಾತ್ರಗಳು ಜೀವಂತಿಕೆಯಿಂದ ನಳನಳಿಸುತ್ತವೆ, ಸ್ತ್ರೀಯರನ್ನು ತಿಳಿವಳಿಕೆಯುಳ್ಳವರು ಸಂಸ್ಕಾರವಂತರು ಸುಸಂಸ್ಕೃತರು ಎಂಬುದನ್ನು ಒಪ್ಪಿಕೊಳ್ಳುತ್ತ ಸಾಗುವುದು ಕೂಡ ಕಾದಂಬರಿಕಾರ ಅಬ್ಬಾಸರ ದೊಡ್ಡತನವೇ ಆಗಿದೆ. ಈ ವಿಶಾಲ ಮನೋಭಾವ ಎಲ್ಲ ಲೇಖಕರಲ್ಲಿ ಇರುವುದಿಲ್ಲ. ಇಲ್ಲಿ ಹಣಕಿ ಹಾಕುವ ಮನುಷ್ಯ ಸಹಜ ಹಿಂಸೆಯಲ್ಲೇ ನಿಗೂಢವಾಗಿರುವ ಇನ್ನೊಂದು ಸ್ತರದಲ್ಲಿ ಅಹಿಂಸೆ ಮಾನವೀಯತೆಗಳು ಪ್ರತಿಬಿಂಬಿಸುತ್ತವೆ. ಮುಸ್ಲಿಂ ಸಮುದಾಯದ ನಿತ್ಯದ ಬದುಕನ್ನು ನಿರೂಪಿಸುತ್ತ ಅಬ್ಬಾಸರು ಈ ನೆಲದ ಕತೆಯನ್ನು ಆಪ್ತವಾಗಿ ಹೇಳುತ್ತಾ ಹೋಗುತ್ತಾರೆ. ಅಬ್ಬಾಸರ ದೃಷ್ಟಿಯಿರುವುದು ಸಾಮಾಜಿಕ ನ್ಯಾಯಗಳ ಬಗ್ಗೆ. ಮನುಷ್ಯ ಸಂಬಂಧಗಳನ್ನು ಸಮುದಾಯಿಕ ನೆಲೆಯಲ್ಲಿ ತಂದು ನಿಲ್ಲಿಸಿ ಪರಸ್ಪರ ಕೊಂಡಿ ಬೆಸೆಯಲು ಕಾದಂಬರಿಯುದ್ದಕ್ಕೂ ಯತ್ನಿಸುತ್ತಾರೆ.

      ಪುರುಷರ ಬದುಕಿನಲ್ಲಿ ಸ್ತ್ರೀಯರ ಅಗತ್ಯವನ್ನು ಮನಗಂಡವರು ಅಬ್ಬಾಸರು. ಹಾಗೂ ಸ್ತಿçÃಯರ ದೈನಿಕಕ್ಕೆ ಇರುವ ಆತ್ಮವಿಶ್ವಾಸಗಳ ಕೊರತೆಯನ್ನು ಕಾಣಿಸುತ್ತಲೇ ಅಬ್ಬಾಸರು ಅದಕ್ಕೆ ಪರ್ಯಾಯವಾಗಿ ಕೆಲವು ಬಿಡುಗಡೆಯ ನೋಟಗಳನ್ನು ತೋರಿಸುತ್ತಾರೆ. ನೆಲದ ನೆಮ್ಮದಿಗೆಡದಂತೆ ಬದುಕು ನೀಡಬಹುದಾದ ಅನೇಕ ಎಚ್ಚರಗಳನ್ನು ಮೊಹಲ್ಲಾದ ಪಾತ್ರಗಳು ಸಾಧಿಸುತ್ತವೆ, ಮೊಹಲ್ಲಾದ ಲೋಕವು ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಗತ ಘನತೆಯನ್ನು ಎಲ್ಲೂ ಭಂಜಿಸದ ಹಾಗೆ ಕಾದುಕೊಳ್ಳುತ್ತದೆ. ಶ್ರಮಿಕ ವರ್ಗದ ಹಿತದ ದೃಷ್ಟಿಯಿಂದ ಇಲ್ಲಿಯ ಸಂದರ್ಭಗಳು ಘಟನೆಗಳು ಮೊನಚಾಗಿಯೂ ಹರಿತವಾಗಿಯೂ ಮೂಡಿ ಬಂದಿವೆ. ದುರ್ಬಲ ಮನಸ್ಥಿತಿಯ ಪ್ರಾಣಿ ಬುದ್ಧಿಯ ಬೆರಳೆಣಿಕೆಯಷ್ಟೇ ವ್ಯಕ್ತಿಗಳೂ ಹಂತಹಂತವಾಗಿ ಉನ್ನತಿಯ ಮಟ್ಟಕ್ಕೇರುವ ಸಕಾರಣ ಸನ್ನಿವೇಶಗಳ ಸರಪಳಿ ಆಪ್ಯಾಯಮಾನವಾಗಿದೆ.

     ಪ್ರೇಮ, ಮದುವೆ, ಹೊಂದಾಣಿಕೆ ಇವನ್ನು ಮೀರಿದ ಲಾಕ್ಷಣಿಕ ಬದುಕು ದೊರೆತ ದಿನ, ಇಲ್ಲಿಯ ಹೆಣ್ಣು ಜೀವಗಳ ಆತಂಕಗಳು ತಲ್ಲಣಗಳು ತೋರತೊಡಗುವವು. ಬಡ ಮಧ್ಯಮ ವರ್ಗದ ಜಗತ್ತಿನ ಸಂಬಂಧಗಳ ವಿಪರೀತಗಳನ್ನು ಬೆಸೆಯಲು ಹೋಗದೇ ಅದರ ನಡುವಿನ ಅನಾಮಿಕತೆಯನ್ನು ಅದು ಇದ್ದಂತೆಯೇ ಬೆಳೆಯಲು ಬಿಟ್ಟು ನಿರೂಪಿಸಿದ ಕಾರಣದಿಂದ ಒಂದು ರೀತಿಯ ಲೋಕಾರೂಢಿಯ ದೃಶ್ಯ ವಿಸ್ತಾರ ಇಲ್ಲಿ ತಾನೇ ತಾನಾಗಿ ಒಲಿದು ಬಂದಿದೆ. ರೆಹಮಾನನ ಬಾಯಲ್ಲಿ ಬರುವ ಸಂಭಾಷಣೆಗೆ ಬುದ್ಧನ ಅಹಿಂಸಾ ನೀತಿಗೆ ಬದ್ಧವಾದ ಶ್ರೇಷ್ಠತಮ ತೂಕವಿದೆ. ಆದರೆ ಸ್ತ್ರೀಯೊಬ್ಬಳಿಗೆ ತನ್ನ ಮೂಲ ಸ್ವಭಾವದಲ್ಲಿ ಬಿಂಬಿತವಾದ ದೋಷದಂತೆ, ತಣ್ಣಗಿರುವದು, ಒಳ್ಳೆಯವಳೆನಿಸಿಕೊಳ್ಳುವುದು ಆಯಾ ಧರ್ಮಗಳ ಸಂಕಟವನ್ನು ಮೀರುವಂಥದ್ದು. ಧರ್ಮ ಸಂಕಟಗಳು ಯಾವ ಧರ್ಮದ ಹೆಣ್ಣುಗಳನ್ನೂ ಬಿಡದ ಪ್ರಾರಬ್ಧವಾಗಿ ಆವರಿಸಿಕೊಂಡ ಇಂದಿನ ವ್ಯವಸ್ಥೆಗಳು, ಭವಿಷ್ಯತ್ತಿನಲ್ಲಿ ಸ್ತ್ರೀ ಸಂಕುಲಕ್ಕೆ ಎಂಥ ಬಾಗಿಲುಗಳನ್ನು ತೆರೆಯಲಿದೆಯೋ ಕಾದು ನೋಡಬೇಕು. ಆದರೆ ಲಿಂಗಭೇದವಿಲ್ಲದೆ ಎಲ್ಲರಿಗೂ ಸಮಬಾಳು, ಸಮಕನಸು, ಸಮಸ್ಥಾನ ನೀಡುವ ಆರೋಗ್ಯಕರ ಮನಸ್ಸಿನ ಸೃಷ್ಟಿಯೇ ‘ಜನ್ನತ್ ಮೊಹಲ್ಲಾ ‘ ಕಂಡುಕೊಂಡ ಸತ್ಯವಾಗಿದೆ ಅಂತ ನನಗಂತೂ ಅನ್ನಿಸಿದೆ.  

-****************************************************************

3 thoughts on “ಜನ್ನತ್ ಮೊಹಲ್ಲಾ

  1. ಅಬ್ಬಾಸ್ ಅವರು ಇನ್ನಿಲ್ಲವೆಂದು ತಿಳಿದು ತುಂಬಾ ದುಃಖವಾಯ್ತು. ಅವರ ಕಥೆ ” ಅಕ್ಷರ- ರಾಕ್ಷಸ” ನಾನು ತೆಲುಗು ಭಾಷೆಗೆ ಅನುವಾದ ಮಾಡಿದ್ದೆ. ಆ ಸಂದರ್ಭದಲ್ಲಿ ಅವರ ಜೊತೆ ಒಂದೆರಡು ಸಲ ಮಾತಾಡಿದ್ದೇನೆ. ತುಂಬಾ ಸೌಜನ್ಯಯುತ ವ್ಯಕ್ತಿ ಅವರು. ಅವರ ಅಕ್ಷರ ರಾಕ್ಷಸ ಕತೆ ಸಹ ಸ್ತ್ರೀ ಪರ ಕತೆಯೇ. ದೇವರು ಅವರಿಗೆ ಸದ್ಗತಿಯನ್ನೀಯಲಿ ಎಂದು ಪ್ರಾರ್ಥಸುತ್ತೇನೆ.

  2. ಥ್ಯಾಂಕ್ಯೂ ರಮೇಶಬಾಬು ಸರ್.
    ಥ್ಯಾಂಕ್ಯೂ ಸಂಗಾತಿ.

  3. ಸರಳತೆ ಸೌಜನ್ಯತೆ ಆತ್ಮೀಯತೆ ಗಳನ್ನು ಮೈಗೂಡಿಸಿಕೊಂಡಿದ್ದ ಯಾವುದೇ ಹಮ್ಮು ಬಿಮ್ಮು ಗಳಿರದ ತೆರೆದ ಮನಸ್ಸಿನವರಾದ ನಮ್ಮ ನಾಡಿನ ಪ್ರಮುಖ ಸಾಹಿತಿಗಳು ಅಬ್ಬಾಸ ಮೇಲಿನಮನಿಯವರು
    ಅವರ ನಿಧನ ನಮಗೆಲ್ಲ ತೀವ್ರ ಆಘಾತವನ್ನುಂಟು ಮಾಡಿದೆ
    ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಅನನ್ಯ
    ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಅವರ ಈ ಲೇಖನ ಅತ್ಯಂತ ಪ್ರಸ್ತುತ ಮೇಡಂ ಅವರಿಗೆ ವಂದನೆಗಳು

Leave a Reply

Back To Top