ನೋವಮೌನ-ಅನಾಥನಲಿವು

ಕವಿತೆ

ನೋವಮೌನ-ಅನಾಥನಲಿವು

ಮಮತ ಅರಸೀಕೆರೆ

The "Pain" Sculpture

ಸುಡುವ ಆಲೋಚನೆಗಳ ಹೊರೆಭಾರದಲ್ಲಿ ಮಗ್ಗುಲು ಬದಲಾಯಿಸಿದ ಅವಳ ನಿಟ್ಟುಸಿರು ಅತ್ಯಾಚಾರದ ಕನಸು ಕಂಡು ದಡಕ್ಕನೆ ಎಚ್ಚರಗೊಂಡ ಬೆಲೆವೆಣ್ಣ ಸಾಂದ್ರಗೊಂಡ ನಿರಾಳತೆ

ಗದರಿಕೆಗೆ ಬೆದರಿ ಕೈಮುಷ್ಟಿ ಹಿಡಿದು ಸ್ಥಂಭೀಭೂತವಾಗಿ ನಿಂತ ಅಬೋಧ ಬಾಲನ ಬೆರಗು ಕಣ್ಣು
ಮೊಲೆಹಾಲು ಕುಡಿದು ಕಟುವಾಯಿಯಲ್ಲಿ ಇಳಿಯುವಾಗಲೇ ಅಂಗಾತವಾದ ನಿದ್ದೆಗಣ್ಣ ಬೊಮ್ಮಟೆ ನಗು

ಬವಣೆಗಳನ್ನೆಲ್ಲ ಬರಹವಾಗಿಸಿದ ಅಪೂರ್ಣ ಡೈರಿಯ ಇನ್ನರ್ಧ ಖಾಲಿಪುಟಗಳ ಚಡಪಡಿಕೆ
ಬರೆಯುತ್ತಲೇ ಅತ್ಯುತ್ಸಾಹಕ್ಕೆ ಸ್ತಬ್ಧವಾದ ಸಾಲುಗಳ ನಡುವಿನ ರೂಪಣಾತ್ಮಕ ಧ್ವನ್ಯಾರ್ಥ

ಪ್ರಯಾಣದ ನಡುವೆಯೇ ತಿರುವು ರಸ್ತೆಯಲ್ಲಿ ತಟಕ್ಕನೆ ಕೆಟ್ಟು ನಿಂತ ಬದುಕ ಬಂಡಿಯ ಚಲನೆ
ಕಕ್ಷೆಯ ತಂತು ಕಡಿದು ಆಳಕ್ಕೆ ಜಾರುವಾಗಲೇ ಖಿನ್ನ ಉಪಗ್ರಹದ ಕೈಹಿಡಿದ ಭೂಮಿ ಗುರುತ್ವ

ಬತ್ತಿದ ಮೈಯ ತುಂಬ ಮರಳು ಹೊತ್ತು ಸಾಗುತ್ತಲೇ ಮರುಗಿ ತಟ್ಟಾಯಿಸುವ ನದಿಯ ಅಳಲು
ಧುಮುಕು ಜಲಪಾತದ ಮೆರುಗು ಕಳೆದ ಖಾಲಿಬಂಡೆಗಳ ಸವರುವ ಬಳ್ಳಿ, ಹೂಜಾಲ ನವಿರು

ಯಾರೊ ಬೀಸಿದ ಕಲ್ಲು ಮತ್ತಾರಿಗೊ ತಾಗಿದಂತೆ, ಕಾಲು ಕಳೆದುಕೊಂಡು ಕುಂಟುವ ನಾಯಿ ಆರ್ತತೆ
ಸೋಲನ್ನೇ ಕನವರಿಸಿ ಸದಾ ಸವಾರಿ ಮಾಡುವ ಜೂಜು ಕುದುರೆಯ ಮೊದಲ ಬಾರಿಯ ಗೆಲುವಿನ ಕೆನೆತ

*******************************************

5 thoughts on “ನೋವಮೌನ-ಅನಾಥನಲಿವು

  1. ಇದು ನೋವಿನ ಮೌನ ಮತ್ತು ನಲಿವಿನ ಅನಾಥ ಭಾವದ ಅನಾವರಣವೇ ಸಾಲು ಸಾಲು ಚಿತ್ರಗಳ ಮೂಲಕ ದಟ್ಟವಾಗಿ ಮೈತಳೆದ ಕವಿತೆ.ಚಂದವಿದೆ ಮಮತಾ..

Leave a Reply

Back To Top