ಮಕ್ಕಳಹಾಡು
ದೂರವಿರಲಾಗದ ಹಾಡು
ಶ್ರೀದೇವಿ ಕೆರೆಮನೆ
ಶಾಲೆಗೆ ಬರಲೇ ಬೇಕು ಅಂತ
ಕರೆದರೆ ಹೋಗದೇ ಏನು ಮಾಡೋದು
ದೂರದೂರ ಕುಳಿತುಕೋ ಅಂದರೆ
ಒಬ್ಬಳೇ ಹೇಗೆ ಕೂರೋದು
ಅಕ್ಕಪಕ್ಕ ಗೆಳತಿಯರಿಲ್ಲ ಅಂದ್ರೆ
ಅಕ್ಕೋರು ಹೇಳೋ ಪಾಠ ತಿಳಿಯೋದು?
ಅದು ಹೇಗೆ ನಾವು ಗೆಳತಿಯರೇ ಇದ್ರೆ
ಮಾತಾಡುವಾಗಲೂ ದೂರ ನಿಲ್ಲೋದು
ಮುಖಕ್ಕೆ ಮಾಸ್ಕು ಹಾಕ್ಕೋಂಡಿದ್ರೆ
ಗೊತ್ತಾಗಲ್ಲ ರಾಣಿ ನಗೋದು
ಮೂಗು ಬಾಯಿ ಮುಚ್ಕೊಂಡಿದ್ರೆ
ಶುದ್ಧಗಾಳಿ ಹೇಗೆ ಸಿಗೋದು
ಅಣ್ಣನಿಗೆ ಪರೀಕ್ಷೆಯಂತೆ ಮುಂದಿನವಾರ
ಹೆದರಿಕೆಲ್ಲಿ ಓದಿದ್ದು ಹೇಗೆ ನೆನಪಿರೋದು
ಪರೀಕ್ಷೆ ಬರೆಯೋಕೆ ಭಯ ಇಲ್ಲವಂತೆ
ಬರೋದಿಲ್ಲ ಮಾಸ್ಕು ಹಾಕಿ ಉಸಿರಾಡೋದು
ಶಾಲೆಗೆ ಹೋಗು ಅಂತ ಬೈಯ್ತಿದ್ದ ಅಮ್ಮಂಗೆ
ಬೇಡವಂತೆ ಶಾಲೆ ಶುರುವಾಗೋದು
ಮನೆಲಿರು ಸಾಕು ಕೇಳಿದ್ದು ಕೊಡಿಸ್ತೀನಿ
ಅಂತಿದ್ದಾರಪ್ಪ ಈಗೇನು ಮಾಡೋದು?
ಆಟ ಇಲ್ಲ, ಓಟ ಇಲ್ಲ, ಯಾವ ಖುಷಿಯೂ ಇಲ್ಲ
ಸುಮ್ಮನೆ ಕುಳಿತುರು ಅಂದರೇನು ಮಾಡೋದು
ಹಾಡೂ ಬೇಡ, ಕುಣಿತವೂ ಬೇಡ ಅಂತಾರಲ್ಲ
ಆಗೋದಿಲ್ಲ ದಿನವಿಡಿ ಪಾಠ ಕೇಳೋದು
ಗೆಳತಿಯರ ಮುಖ ನೋಡೋಕಾಗದೆ
ಮೊಬೈಲ್ ಪಾಠ ಹೇಗೆ ನೋಡೋದು
ಮುಟ್ಟಿ ಚಿವುಟಿ ಮಾಡಲಾಗದೇ
ಹೇಗೆ ಮುಸಿಮುಸಿ ನಗುವುದು?
ಮುಗಿದು ಹೋಗಿ ಬಿಡಲಿ ಒಂದ್ಸಲ
ಈ ಕರೋನಾ ಎಷ್ಟು ಕಾಡೊದು
ಬೇಗ ಬರಲಿ ಜೊತೆಗಿರುವ ಕಾಲ
ಒಟ್ಟಿಗೆ ಹಾಡಿ ಕುಣಿಯೋದು
***************************************