ಮನುಷ್ಯತ್ವ, ನಂಬಿಕೆಗಳ ಜಾಗವನ್ನು ಇಂದು ಹಣ ಆಳುತ್ತಿದೆ’

ಎಂ.ಟಿ.ನಾಯ್ಕ

ಶಿಕ್ಷಕ, ಕವಿ  ಎಂ.ಟಿ.ನಾಯ್ಕ ಕುಮಟಾ ತಾಲ್ಲೂಕಿನ ಹೆಗಡೆ. ಹೈಸ್ಕೂಲ್ ಹಂತದಿಂದಲೇ ಬರವಣಿಗೆ ಪ್ರಾರಂಭಿಸಿದವರು. ತಾಲ್ಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯ ವಾಚನ, ಆಕಾಶವಾಣಿ ಧಾರವಾಡ ಮತ್ತು ಕಾರವಾರ ಕೇಂದ್ರಗಳಲ್ಲಿ ಸುಮಾರು ಐದು ಬಾರಿ ಕಾವ್ಯವಾಚನ ಮಾಡಿದ್ದಾರೆ. ಕ್ರೈಸ್ಟ್ ಕಾಲೇಜು ಬೆಂಗಳೂರು , ಜೆ ಎಸ್. ಎಸ್ ಕಾಲೇಜು ಧಾರವಾಡ ಗಳಲ್ಲಿ ನಡೆದ  ಬೇಂದ್ರೆ ಸ್ಮೃತಿ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಬಂದಿವೆ. ಬೆಂಗಳೂರಿನ  ಸಾಂಸ್ಕೃತಿಕ ಪತ್ರಿಕೆ ` ಸಂಚಯ ‘ ಪತ್ರಿಕೆಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಸಂದಿವೆ. ಸಂಯುಕ್ತ ಕರ್ನಾಟಕ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ದೊರೆತಿದೆ. ಪತ್ರಿಕೆಗಳಲ್ಲಿ ಕವನಗಳು, ಅಂಕಣ ಬರಹಗಳು ಪ್ರಕಟಗೊಂಡಿವೆ . ಕೆಲವು ಕಥಾಸಂಕಲನ ಹಾಗೂ ಕವನ ಸಂಕಲನಗಳ ಕುರಿತು ಬರೆದ ವಿಮರ್ಶೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಾಲೇಜು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಮತ್ತು ಎಂ . ಎ. ಮುಗಿಸಿ ಬಂದನಂತರ ಬೇರೆ ಬೇರ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಕಾಲ ಕೆಲಸ ಮಾಡಿದ್ದಾರೆ. ಹಾಲಿ ಶಿಕ್ಷಕನಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾವಿಕೊಡ್ಲ  ನಂ  ೨ ಯಲ್ಲಿ  ಸೇವೆ ಸಲ್ಲಿಸುತ್ತಿದ್ದಾರೆ.

 ಸದ್ಯ  ` ನೇಪಥ್ಯ ‘ ( ಕವನ ಸಂಕಲನ) ‘ ನನ್ನೊಳಗೆ ನಾನು ‘ ( ಕಥಾಸಂಕಲನ ) ‘ ಸಿಂಧುವಿನಿಂದ ಬಿಂದು ‘ ( ವಿಮರ್ಶಾ ಸಂಕಲ) ಪ್ರಕಟಣೆಯ ಹಾದಿಯಲ್ಲಿದೆ .

……………….

ಕಥೆ , ಕವಿತೆಗಳನ್ನು ಯಾಕೆ ಬರೆಯುತ್ತೀರಿ ?

ನಾನು ಕವಿ ಅಥವಾ ಕತೆಗಾರನಾಗಬೆಕೆಂಬ ತೆವಲಿಗೆ ಎಂದೂ ಒಳಗಾಗಿಲ್ಲ. ಬೇರೆ ಬೇರೆ ಹಿರಯ ಕವಿ ಕಥೆಗಾರರನ್ನು ಓದಿದ ಹಿನ್ನೆಲೆಯಲ್ಲಿ ಸುತ್ತಲಿನ ಸಮುದಾಯದ ನೋವು – ನನ್ನ ನೋವು ,ನಲಿವುಗಳೊಂದಿಗೆ ತಾದಾತ್ಮ್ಯ ಹೊಂದಿದಾಗ ನನ್ನೊಳಗಿನ ಸಹಜವಾದ ಕವಿತ್ವದ ಪ್ರಜ್ಞೆ ಜಾಗ್ರತ ಗೊಂಡು ಅದು ಭಾಷೆಯ ನೆಲೆಯಲ್ಲಿ ಅಕ್ಷರ ರೂಪ ಪಡೆದಾಗ ಅದು ಕವನವಾಗಬಹುದು , ಅಥವಾ ಅದು ಸಂಭಾಷಣೆ, ವಿವರಣೆ ,ವಿಶ್ಲೇಷಣೆ , ನೀರೂಪಣೆಗಳನ್ನೊಳಗೊಂಡ ಪಾತ್ರಗಳ ರೂಪವನ್ನು ಪಡೆದಾಗ ಅದು ಕಥೆ ಕೂಡಾ ಆಗಬಹುದು. ಆದರೆ ಕಥೆ ಅಥವಾ ಕವಿತೆಗಳಿಗೆ ಸಂಬಂಧಿಸಿದ ಸಂಗತಿಗಳು ಒಮ್ಮೆ ಹುಟ್ಟಿ , ಹಲವಾರು ದಿನಗಳವರೆಗೆ ಮತ್ತೆ ಮತ್ತೆ ಕಾಡಿದಾಗ ಅದು ಆಯಾ ರೂಪದಲ್ಲಿ, ಅನಾವರಣಗೊಂಡು ಸಫಲ ಪ್ರಸವದ ಆನಂದಾನುಭೂತಿಯನ್ನು ಆ ಕ್ಷಣಕ್ಕೆ ನೀಡುತ್ತದೆಯಷ್ಟೆ .

ಕಥೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು ?

ನನ್ನ ದೃಷ್ಟಿಯಲ್ಲಿ ಅದಕ್ಕೆ ಇಂತಹುದೇ ಕ್ಷಣ ಅಂತೇನೂ ಇಲ್ಲ. ನಾನು ಕ.ವಿ.ವಿ ಧಾರವಾಡದಲ್ಲಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿ ಎಂ. ಎ. ಮಾಡುತ್ತಿದ್ದ ಸಂದರ್ಭದಲ್ಲಿ ನಮ್ಮ ಗುರುಗಳಾದ  ದಿ. ಡಾ. ಎಂ. ಎಂ.ಕಲ್ಬುರ್ಗಿ ಸರ್ ರವರು ಒಮ್ಮೆ ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಮಾತನಾಡುತ್ತಾ ‘ ಜೀವನಾನುಭವವೇ ಸಾಹಿತ್ಯದ ಮೂಲ ದ್ರವ್ಯ ‘ ಎಂದಿದ್ದು ಈಗಲೂ ನೆನಪಿದೆ. ಅಂತಹ ಅನುಭವಗಳು ಕಥೆ ಅಥವಾ ಕವನವಾಗಬಲ್ಲ ಸಾಹಿತ್ಯಕ ಅನುಭೂತಿಯನ್ನು ಹೊಂದಿ ಗಾಢವಾಗಿ ಕಾಡಿದಾಗ ಅದು ಕತೆ ಅಥವಾ ಕವಿತೆಯಾಗಿ ರೂಪು ತಳೆಯುತ್ತದೆ ಅಷ್ಟೇ.

 ನಿಮ್ಮ ಕಥೆಗಳ ವಸ್ತು , ವ್ಯಾಪ್ತಿ ಹೆಚ್ಚಾಗಿ ? ಪದೇ ಪದೇ ಕಾಡುವ ವಿಷಯ ಯಾವುದು ?.

 ಬದುಕು ..! ಎಲ್ಲಾ ಲೇಖಕರ ಹಾಗೆಯೇ ನನ್ನ ಕಥೆಗಳ ವಸ್ತು ಮತ್ತು ವ್ಯಾಪ್ತಿ ಬದುಕಿಗೆ ಸಂಬಂಧಿಸಿದ ಸಂಗತಿಗಳೇ ಆಗಿವ. ಈ ಬದುಕಿನಲ್ಲಿ ಪ್ರೀತಿ ಯಿದೆ,ಪ್ರೇಮವಿದೆ,ನಂಬಿಕೆ – ವಿಶ್ವಾಸಗಳಿವೆ, ಅಲ್ಲಿ ವಂಚನೆ , ಮೋಸ , ದ್ರೋಹ , ಹಿಂಸೆ , ದೌರ್ಜನ್ಯಗಳಿವೆ .ಹಾಗೆನೆ ಪ್ರಾಮಾಣಿಕತೆ ಕೂಡ ಇವೆ . ಇವೆಲ್ಲವೂ ಸಂದರ್ಭಾನುಸಾರ ಕಥೆಯ ವಸ್ತುಗಳಾಗುತ್ತವೆ .

  ಇತ್ತೀಚಿನ ದಿನಗಳಲ್ಲಿ ಒಂದು ಹೊಸ ಟ್ರೆಂಡ್ ಸುರುವಾಗಿದೆ. ಅದೆಂದರೆ ಹೇಗಾದರೂ ಸರಿಯೆ ಹಣಮಾಡಬೇಕು . ಅದರಿಂದ ನಮ್ಮ ಸಮಾಜ ಅದರಲ್ಲೂ ನಮ್ಮ ಯುವ ಜನಾಂಗ ಹಣದ ಹಿಂದೆ ಬಿದ್ದಿದೆ . ಮನುಷ್ಯತ್ವ, ಮಾನವೀಯತೆ , ಪ್ರೀತಿ ,ನಂಬಿಕೆಗಳ ಜಾಗವನ್ನು ಇಂದು ಹಣ ಆಳುತ್ತಿದೆಯೆಂದರೆ ತಪ್ಪಾಗದು . ಮಾನವೀಯ ಮೌಲ್ಯಗಳ ಕುರಿತು ಮಾತನಾಡುವವರು ಎಂದರೆ ಒಂಥರಾ ಹುಚ್ಚರಹಾಗೆ ಅನ್ನುವ ಹಂತಕ್ಕೆ ನಮ್ಮ ಸಾಮಾಜಿಕ ಬದುಕು ತಲುಪಿದೆ . ಇದು ನಮ್ಮ  ಒಟ್ಟಾರೆ ವ್ಯವಸ್ಥೆಯ ದುರಂತವೇ ಸರಿ . ತಮ್ಮ ಮಕ್ಕಳ ಬದುಕನ್ನು ಗಟ್ಟಿಗೊಳಿಸಲು ಬದುಕಿನುದ್ದಕ್ಕೂ ಹೆಣಗಾಡುವ ತಂದೆತಾಯಿಗಳು , ಅದರೆ ಅದೇ ಮಕ್ಕಳು ವಯಸ್ಸಿಗೆ ಬಂದಾಗ ತಂದೆತಾಯಿಗಳನ್ನು ತಿರಸ್ಕರಿಸುವುದು ಒಂದುಕಡೆಯಾದರೆ , ವಯಸ್ಸಿಗೆ ಬಂದ ಮಗ ತನ್ನ ತಂದೆತಾಯಿ , ಸಹೋದರ, ಸಹೋದರಿಯರ ಬದುಕಿಗಾಗಿ ತನ್ನ ವಯಕ್ತಿಕ ಬದುಕನ್ನು ಮರೆತು ರಕ್ತವನ್ನು ಬೆವರಿನರೂಪದಲ್ಲಿ ಚೆಲ್ಲಿ ಜವಾಬ್ದಾರಿಯಿಂದ ನಿರ್ವಹಿಸುವ ಸಂದರ್ಭದಲ್ಲೂ ಅಂತವರಿಗೆ ಕುಟುಂಬದ ಎಲ್ಲರಿಂದಲೂ ಆಗುವ ವಂಚನೆ ನೀಡುವ ನೋವುಗಳು ಗಾಢವಾಗಿ ಕಾಡಿದಾಗ ಅವುಗಳು ಕಥೆಗಳಿಗೆ ಗಟ್ಟಿ ವಸ್ತುಗಳಾಗುತ್ತವೆ .

  ಎಲ್ಲಕ್ಕಿಂತಲೂ ಹೆಚ್ಚಾಗಿ ಪ್ರಾಮಾಣಿಕತೆ, ಪ್ರೀತಿ , ಪ್ರೇಮ, ವಿಶ್ವಾಸ, ನಂಬಿಕೆಗಳಿಗೆ ವಿರುದ್ಧವಾಗಿ ಎಸಗುವ ದ್ರೋಹ, ವಂಚನೆ , ಮೋಸ ಇದೆಯಲ್ಲಾ ..ಇವುಗಳು ಯಾವುದೇ ರೀತಿಯ ಹಿಂಸೆ, ದೌರ್ಜನ್ಯಗಳಿಗಿಂತಲೂ ಭೀಕರ ಎನಿಸುತ್ತವೆ . ಈ ಮುಂತಾದ ಸಂಗತಿಗಳೆಲ್ಲವೂ ನನ್ನ ಕಥೆಗಳಿಗೆ ವಸ್ತುವಾಗುತ್ತವೆ . ಹಾಗೇನೇ ಅತಿಯಾದ ಮದ್ಯಪಾನ ಮುಂತಾದ ದುಶ್ಚಟಗಳು , ಅವುಗಳಿಂದ ಬದುಕಿಗಾಗುವ ಹಾನಿ ಇವೆಲ್ಲವೂ ಕೆಲವು ಸಂದರ್ಭಗಳಲ್ಲಿ ವಸ್ತುವಾಗಿವೆ .

ಕಥೆ , ಕವಿತೆಗಳಲ್ಲಿ ಬಾಲ್ಯ , ಹರೆಯ ಇಣುಕಿದೆಯೇ  ?

ಯಾಕಿಲ್ಲ ..? ಪ್ರತಿಯೊಬ್ಬ ಬರಹಗಾರನ ಬರವಣಿಗೆಯಲ್ಲೂ ಕೂಡ ಅವನ ಬಾಲ್ಯ ಮತ್ತು ಹರಯದ ಅನುಭವಗಳು ಇಣುಕಿನೋಡುತ್ತವೆ . ನನ್ನ ಬರವಣಿಗೆಯೂ ಕೂಡ ಅದಕ್ಕೆ ಹೊರತಾಗಿಲ್ಲ . ನಾನು ಬರೆದ ಪ್ರೇಮ ಕವನವೊಂದನ್ನು ಓದಿದ ಬಿಜಾಪುರ ಜಿಲ್ಲೆಯ ನನ್ನ ಎಂ. ಎ. ಸಹಪಾಠಿಯೊಬ್ಬರು ಇದು ನನ್ನ ಬದುಕಿನ ಸಂದರ್ಭಕ್ಕೆ ಸಂಬಂಧಿಸಿದಂತೆ ಇದೆ , ಎಂದಾಗ ನಾನು ಆಶ್ಚರ್ಯಗೊಂಡಿದ್ದೆ. ನನ್ನ ಬಾಲ್ಲದ ದಿನಗಂಳಿದ ಹಿಡಿದು ನಾನು ಶಿಕ್ಷಣ ಪಡೆದು ವ್ರತ್ತಿ ಜೀವನಕ್ಕೆ ಬರುವಲ್ಲಿಯವರೆಗೆ ನನ್ನನ್ನು ,ನಮ್ಮ ಕುಟುಂಬವನ್ನು ಕಾಡಿದ ಅತ್ಯಂತ ನಿಕ್ರಷ್ಟ ಎನ್ನಬಹುದಾದ ಬಡತನ , ನಾನು ಶಿಕ್ಷಣ ಪಡೆಯುವುದಕ್ಕಾಗಿ ನಡೆಸಿದ ಹೋರಾಟ , ಆ ಸಂದರ್ಭಗಳಲ್ಲಿ ಮಹಾತ್ಮರೊಬ್ಬರು ನನ್ನನ್ನು ಕೈಹಿಡಿದು ನಡೆಸಿದ್ದು ಇನ್ನೂ ಮುಂತಾದ ಸಂಗತಿಗಳು, ಅಭವಗಳು , ನನ್ನ ಬರವಣಿಗೆಯಲ್ಲಿ ಇಣುಕಿಹಾಕಲೆಬೇಕಲ್ಲ.

 ಧರ್ಮ , ದೇವರು ವಿಷಯದಲ್ಲಿ ನಿಮ್ಮ ನಿಲುವೇನು   ?

ಇದು ತೀರಾ ಕ್ಲಿಷ್ಟಕರ ಪ್ರಶ್ನೆ ಎನ್ನಬೇಕಾಗುತ್ತದೆ . ಯಾಕೆಂದರೆ ಧರ್ಮದ ಕುರಿತು ಮಾತನಾಡುವಷ್ಟು ಧರ್ಮ ಸೂಕ್ಷ್ಮವನ್ನರಿತ ಧರ್ಮಜ್ಞ ನಾನಲ್ಲ. ಹಾಗೆ ನೋಡಿದರೆ ಧರ್ಮಕ್ಕಿಂತಲೂ ಮೊದಲು ಹುಟ್ಟಿದವ ಮನುಷ್ಯ . ಅವನ ನಂತರ ಅವನಿಂದಲೇ ಅಂದರೆ ಮನುಷ್ಯನಿಂದ ಹುಟ್ಟಿದ್ದು ಧರ್ಮ. ಕಾಡಿನಿಂದ ನಾಡಿನೆಡೆಗೆ , ಅನಾಗರಿಕತೆಯಿಂದ ನಾಗರಿಕತೆಯೆಡೆಗೆ ಮಾನವ ಹೆಜ್ಜೆಯಿಟ್ಟು ಅಲ್ಲಿ ಸಾಕಷ್ಟು ಪ್ರವರ್ಧಮಾನಕ್ಕೆ ಬಂದಮೇಲೆ ಹುಟ್ಟಿಕೊಂಡದ್ದು ಧರ್ಮ. ಮನುಷ್ಯ ತನ್ನ ವಯಕ್ತಿಕ ಹಾಗೂ ಸಾಮುದಾಯಿಕ ಜೀವನವನ್ನು ಹೆಚ್ಚು ಸುಂದರಗೊಳಿಸಿಕೊಳ್ಳುವುದಕ್ಕಾಗಿ , ಹೆಚ್ಚು ಮೌಲ್ಯಯುತಗೊಳಿಸಿಕೊಳ್ಳುವುದಕ್ಕಾಗಿ ಒಂದರ್ಥದಲ್ಲಿ ಹೆಚ್ಚು ಅರ್ಥಪೂರ್ಣ ಗೊಳಿಸಿಕೊಳ್ಳುವುದಕ್ಕಾಗಿ ಆ ಕಾಲದಲ್ಲಿ ಅವನು ಕಂಡುಕೊಂಡ ಸುಲಭ ಸಾಧನ ಧರ್ಮ.

   ಆದರೆ ಇಂದು ಏನಾಗುತ್ತಿದೆ  ? ಧರ್ಮ ಮನುಷ್ಯನ ಜೀವನದಮೇಲೆ ಸವಾರಿಮಾಡುವಷ್ಟು ಪ್ರಭಲವಾಗಿ ಬೆಳೆದುನಿಂತಿದೆ . ಇದು ಕೇವಲ ನಮ್ಮ ದೇಶದ ವಿದ್ಯಮಾನವಷ್ಟೆ ಅಲ್ಲ. ಇದು ಜಾಗತಿಕ ವಿದ್ಯಮಾನವಾಗಿದೆ . ಇಂದು ಧರ್ಮದ ಕಾರಣದಿಂದಾಗಿ ನಮ್ಮ ವಯಕ್ತಿಕ ಹಾಗೂ ಸಾಮಾಜಿಕ ಬದುಕು ವಿಕ್ರತಗೊಳ್ಳುತ್ತಿವೆ …ಸಂದಿಗ್ಧತೆಗೆ ಒಳಗಾಗಿದೆ . ಇಂತಹ ಬೆಳವಣಿಗೆ ನಮ್ಮ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನಕ್ಕೆ ತಕ್ಕುದಾದ ಬೆಳವಣಿಗೆಯಂತೂ ಅಲ್ಲ. ಸ್ವಾಮಿ ವಿವೇಕಾನಂದರು ಧರ್ಮ ಮತ್ತು ದೇವರ ಕುರಿತು ಹೇಳುವಾಗ ..’ ವಿಧವೆಯರ ಕಣ್ಣೀರು ಒರೆಸದ , ಹಸಿದವನಿಗೆ ತುತ್ತು ಅನ್ನವ ನೀಡದ ದೇವರು ಮತ್ತು ಧರ್ಮದಲ್ಲಿ ನನಗೆ ನಂಬಿಕೆಯಿಲ್ಲ ಎಂದಿದ್ದಾರೆ. ಯಾವುದು ನಮ್ಮಲ್ಲಿಯ ಮಾನವೀಯ ಪ್ರಜ್ಞೆ ಯನ್ನು ಜಾಗ್ರತಗೊಳಿಸಲು ಶಕ್ತವಾಗುತ್ತದೆಯೋ ಅದು ಧರ್ಮ. ಪರಸ್ಪರ ಪ್ರೀತಿ , ವಿಶ್ವಾಸ , ನಂಬಿಕೆ , ಪ್ರಾಮಾಣಿಕತೆ ಇವೇ ಅದರ ತಳಹದಿ . ಇವುಗಳಿಗೆ ಧಕ್ಕೆತರುವಂತ ಸಂಗತಿಗಳೆ ಅಧರ್ಮ. ನಾನು ಬದುಕುತ್ತಾ ನನ್ನೊಂದಿಗೆ ಇನ್ನುಳಿದ ಎಲ್ಲರನ್ನೂ ಬದುಕಲು ಬಿಡುವುದೇ ಧರ್ಮ .ಇದಕ್ಕಿಂತ ಹೆಚ್ಚಿಗೆ ಇನ್ನೇನು ಹೇಳಲಾರೆ.

  ಇನ್ನು  ‘ ದೇವರು ‘ ಕುರಿತು ಹೇಳುವುದಾದರೆ ‘ ದೇವರು ‘ ಇದ್ದಾನೆ ಎಂಬ ನಂಬಿಕೆ ಹೊಂದಿದವರೆಲ್ಲಾ ಆಸ್ತಿಕ ಗುಂಪಿಗೆ ಸೇರಿದರೆ ‘ ದೇವರ ‘ ಅಸ್ತಿತ್ವದ ಕುರಿತು ಸಂಶಯಪಡುವವರೆಲ್ಲಾ ನಾಸ್ತಿಕ ಗುಂಪಿಗೆ ಸೇರಿಬಿಡುತ್ತಾರೆ . ಇದು ಪ್ರಪಂಚ ಇರುವತನಕ ಮತ್ತು ಈ ಪ್ರಪಂಚದಲ್ಲಿ ಕಟ್ಟಕಡೆಯ ಮನುಷ್ಯ ಇರುವಲ್ಲಿಯ ತನಕ ಮುಂದುವರೆಯುವ ಚರ್ಚೆಯಾಗಿದೆ . ‘ ದೇವರು ‘ ಇದ್ದಾನೆಯೇ ಎನ್ನುವುದು ಅವರವರ ಸ್ವಯಂ ಅನುಭವವೇದ್ಯವಾದ ಸಂಗತಿಯಾಗಿದೆ . ಇನ್ನು ನನ್ನ ದ್ರಷ್ಟಿಯಲ್ಲಿ ನಾನು ಕಷ್ಟದಲ್ಲಿದ್ದಾಗ ಯಾರು ನನ್ನನ್ನು ಕೈಹಿಡಿದು ನಡೆಸಲು ಪ್ರಯತ್ನಿಸುತ್ತಾರೋ , ನಾನು ಸಾವು ಬದುಕುಗಳನಡುವೆ ಹೋರಾಡುತ್ತಿರುವಾಗ ಕಾಳಜಿಯಿಂದ ನನ್ನನ್ನು ಉಳಿಸಲು ಪ್ರಾಮಾಣಿಕವಾಗಿ ಹೆಣಗಾಡುತ್ತಾರೆಯೋ ಅವರೇ ನನ್ನ ಪಾಲಿಗೆ ದೇವರು . ಯಾಕೆಂದರೆ ಅವರು ಮಾತ್ರ ನಾನು ಕಾಣಲು ಸಾಧ್ಯವಾಗುವ ಸತ್ಯದ ದೇವರಾಗಿರುತ್ತಾರೆ . ಇದಕ್ಕೆ ಹೊರತಾದ ಅನ್ಯ ವಿಚಾರ ‘ ದೇವರ ‘ ಕುರಿತಂತೆ ನನ್ನಲ್ಲಿಲ್ಲ.

 ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು  ?

ನಿಮ್ಮ ಈ ಪ್ರಶ್ನೆ ನನ್ನ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲ. ಆದರೂ ಈ ದೇಶದ ಪ್ರಜೆಯಾಗಿ , ಪ್ರಜಾಪ್ರಭುತ್ವದ ನಿಯಮಾವಳಿಗಳಿಗೆ ಒಳಪಟ್ಟ ಒಬ್ಬ ಜವಾಬ್ದಾರಿಯುತ ಮತದಾರನಾಗಿ ನಿಮ್ಮ ಪ್ರಶ್ನೆಗೆ ಕೆಲವು ಮಿತಿಗೆ ಒಳಪಟ್ಟು ಪ್ರತಿಕ್ರಿಯಿಸಬಹುದು ಎಂದುಕೊಳ್ಳುತ್ತೇನೆ .

  ಇತ್ತೀಚಿನ ದಿನಗಳಲ್ಲಿ ಬದುಕಿನ ಎಲ್ಲಾ ಸ್ತರಗಳಲ್ಲೂ ಮೌಲ್ಯಗಳು ಕುಸಿಯುತ್ತಿವೆ ಎಂದು ಹೇಳಲಾಗುತ್ತಿವೆ . ಅದು ರಾಜಕೀಯ ಕ್ಷೇತ್ರಕ್ಕೂ ಹೊರತಾಗಿಲ್ಲ. ಮಹಾನ್ ರಾಷ್ಟ್ರೀಯ ಚಿಂತಕರನ್ನು ,ಯಾವುದೇ ವಿಧದ ಧಾರ್ಮಿಕ, ಸಾಮಾಜಿಕ ತಾರತಮ್ಯವಿಲ್ಲದ ಸರ್ವಜನಾಂಗದ ಹಿತಚಿಂತಕರುಗಳನ್ನು ರಾಷ್ಟ್ರದ ರಾಜಕೀಯ ನೇತಾರರುಗಳನ್ನಾಗಿ ಪಡೆದ ದೇಶ ಇದು . ಆದರೆ ಇಂದು ಈ ದೇಶದ ರಾಜಕೀಯ, ಸಾಮಾಜಿಕ ಜೀವನ ಹಾಗಿದೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಲು ಶಕ್ತರಾದರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ .

  ಸದ್ಯದ ವಿದ್ಯಮಾನಗಳನ್ನು ಗಮನಿಸಿದರೆ ರಾಜಕೀಯದ ಮೂಲಕ ರಾಷ್ಟ್ರ ಸೇವೆ , ಸಮಾಜ ಸೇವೆ ಎನ್ನುವ ಮಾತು ಕೇವಲ ಸವಕಲು ನಾಣ್ಯಗಳಾಗಿವೆ ಎನಿಸುವುದಿಲ್ಲವೆ  ? ಅವರು ಅಷ್ಟು ಹಾಳುಗೆಡವಿದ್ದಾರೆ , ಅಕ್ಕಾಗಿ ಇವರು ಇಷ್ಟು ಕುಲಗೆಡಿಸುತ್ತಾರೆ …ಅದನ್ನೆಲ್ಲಾ ಪ್ರಶ್ನಿಸಲು ನೀವುಗಳು ಯಾರು  ? ಎಂಬ ಪ್ರಶ್ನೆಗಳು ಹೊರಬೀಳುತ್ತಿರುವುದನ್ನು ನಾವು ಕೇಳುತ್ತಿದ್ದೇವೆ .

  ಹಾಗೆ ನೋಡಿದರೆ ನಮಗೆ ತೀರಾ ಪುಕ್ಕಟೆಯಾಗಿ ದೊರೆತ ಮತದಾನದ ಹಕ್ಕೂ ಕೂಡ ಇಂದಿನ ವಿದ್ಯಮಾನಗಳಿಗೆ ಕೆಲಮಟ್ಟಿಗೆ ಕಾರಣವಾಗಬಹುದೇನೊ ? ಯಾಕೆಂದರೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಅಲ್ಲಿಯ ಪ್ರಜೆಗಳು ರಾಜಕೀಯ ಹಕ್ಕಿಗಾಗಿ ಹೋರಾಟ ನಡೆಸಿದ ಇತಿಹಾಸವನ್ನು ನಾವು ಓದುತ್ತೇವೆ. ಆದರೆ ನಮ್ಮಲ್ಲಿ ಪ್ರಜಾಪ್ರಭುತ್ವದ ನೆಲೆಯಲ್ಲಿ ರಾಜಕೀಯ ( ಮತದಾನದ ) ಹಕ್ಕು , ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಅತ್ಯಂತ ನಿರಾಯಾಸವಾಗಿ , ಒಂದರ್ಥದಲ್ಲಿ ಬಂಗಾರದ ಹರಿವಾಣದಲ್ಲಿ ಬಳುವಳಿಯಾಗಿ ದೊರಕಿದಂತೆ ಸಿಕ್ಕಿಬಿಟ್ಟಿವೆ . ಬ್ರಷ್ಟಾಚಾರವು ಚುನಾವಣೆಯ ಸಂದರ್ಭದಲ್ಲಿ ನ್ಯಾಯಯುತ ಮತದಾನ ಎಂಬ ಸಂಗತಿಯನ್ನು ಮಸುಕುಮಾಡಿದೆ . ಹೀಗಿರುವಾಗ ರಾಷ್ಟ್ರ , ಸಮಾಜ , ಅಭಿವೃದ್ಧಿ ಈ ಮುಂತಾದ ವಿಚಾರಗಳ ಕುರಿತು ಯಾರನ್ನು ಪ್ರಶ್ನಿಸುವುದು  ? ಯಾರಿಗೆ ಹೇಳುವುದು  ? ಯಾರನ್ನು ಕೇಳುವು ? ಎನ್ನುವಷ್ಟು ಸಂದಿಗ್ಧತೆ ಎದುರಾಗಿದೆ . ಇದು ಹಲವಾರು ವಿಷಯಗಳಲ್ಲಿ ವೈವಿಧ್ಯಮಯ ಸಂಗತಿಗಳನ್ನು ರೂಢಿಸಿಕೊಂಡು ಬಂದಿರುವ ನಮ್ಮ ರಾಷ್ಟ್ರೀಯ ಮತ್ತು ಸಾಮಾಜಿಕ ಜೀವನಕ್ಕೆ ಅಷ್ಟೊಂದು ಉತ್ತಮ ಬೆಳವಣಿಗೆಯಂತೂ ಅಲ್ಲ.

ಈ ದೇಶದ ಚಲನೆಯಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತಿದೆ  ?.

ಅದೃಷ್ಟವೆಂದರೆ ನಮ್ಮ ದೇಶವು ವಿಪುಲವಾದ ಯುವಶಕ್ತಿಯನ್ನು ಹೊಂದಿದೆ. ಅರ್ಥಶಾಸ್ತ್ರದ ಪ್ರಕಾರ ಆರೋಗ್ಯವಂತ ದುಡಿಯುವ ಸಾಮರ್ಥ್ಯವನ್ನು ಹೊಂದಿರುವ ಜನಸಮುದಾಯವೂ ಕೂಡ ರಾಷ್ಟ್ರವೊಂದು ಹೊಂದಿರಬಹುದಾದ ಮೂಲಭೂತ ಸಂಪನ್ಮೂಲಗಳಲ್ಲಿ ಒಂದಾಗಿರುತ್ತೆ. ಆದ್ದರಿಂದ ಈ ದೇಶದ ಬಹುದೊಡ್ಡ ಪ್ರಮಾಣದ ಯುವಸಮುದಾಯವನ್ನು ರಾಷ್ಟ್ರಕ್ಕೆ ವರವಾಗುವ ರೀತಿಯಲ್ಲಿ ಮುನ್ನಡೆಸಬೇಕಾಗಿದೆ.ಅವರು ದುಡಿದು ಗೌರವಯುತವಾಗಿ ಬದುಕುವ ವಾತಾವರಣ ನಿರ್ಮಿಸಬೇಕಾದದ್ದು ಸರ್ಕಾರವನ್ನು ನಡೆಸುವವರ ಆದ್ಯಕರ್ತವ್ಯಗಳಲ್ಲೊಂದಾಗಿದೆ.

   ಬಹುತ್ವವು ಈ ದೇಶದ ಅಸ್ಮಿತೆಯಾಗಿದೆ ..ಹಾಗೂ ಜಗತ್ತಿಗೆ ಬಹುದೊಡ್ಡ ಕೊಡುಗೆಯಾಗಿದೆ. ದೇಶದಲ್ಲಿ ಯಾವುದೇ ವಿಧದ ಗೊಂದಲವಿಲ್ಲದೆ ಸರ್ವಜನಾಂಗದವರೂ ಕೂಡ ಪರಸ್ಪರ ಸ್ನೇಹ,ಸಹೋದರತೆ, ನಂಬಿಕೆಯಿಂದ ಗೌರವಯುತವಾಗಿ  ನೆಮ್ಮದಿಯಿಂದ ಜೀವನ ನಡೆಸುವ ವಾತಾವರಣ ಇರಬೇಕು. ಅಂದಾಗಮಾತ್ರ ದೇಶ ತನ್ನಷ್ಟಕ್ಕೆ ತಾನೇ ಅಭಿವೃದ್ಧಿಯ ಮಾರ್ಗದಲ್ಲಿ ಮುನ್ನಡೆಯಲು ಸಾದ್ಯ. ಯಾವುದೇ ಕಾರಣಕ್ಕೂ ಇತಿಹಾಸವನ್ನು ಬದಲಾಯಿಸುವ ಹುಚ್ಚು ಸಾಹಸಕ್ಕೆ ಕೈಹಾಕಬಾರದು.ಅಂತಹ ಸಾಹಸ ಈ ದೇಶದ ಮಟ್ಟಿಗೆ ಎಂದೂ ಫಲಿಸದು .

 ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ  ?

ಸಾಹಿತ್ಯ ಕ್ಷೇತ್ರ ಎಂದರೆ ಅದು ವಿದ್ವಾಂಸರ, ಸಮಾಜಮುಖಿ ಚಿಂತಕರ, ಪ್ರಬುದ್ಧರ , ಸ್ನೇಹ ಜೀವಿಗಳ ಕೂಟ ಇದ್ದಂತೆ . ಆದ್ದರಿಂದ ಈ ವಲಯದಲ್ಲಿ ರಾಜಕೀಯದ ವಾಸನೆ ಕೂಡ ಸುಳಿಯಬಾರದು.

  ಆದರೆ ಇಂದು ನಮ್ಮ ಜೀವನದ ಎಲ್ಲ ರಂಗಗಳಲ್ಲೂ ರಾಜಕೀಯ ನುಸುಳಿಕೊಂಡಿವೆ. ಇದಕ್ಕೆ ನಮ್ಮ ವಿಕ್ರತ ಮನಸ್ಥಿತಿಯೆ ಕಾರಣ ಎನ್ನಬೇಕಾಗುತ್ತವೆ. ಕೆಲವು ಸಂಘ ಸಂಸ್ಥೆಗಳು ನೀಡುವ ಸಾಹಿತ್ಯ ಪ್ರಶಸ್ತಿ , ಪುರಸ್ಕಾರಗಳಿಗೆ ಅನುಸರಿಸುವ ಮಾನದಂಡಗಳೇನು ಎಂದು ಅರಿವಾಗದ ಪರಿಸ್ಥಿತಿ ಇದೆ.ಹಾಗೆ ನೋಡಿದರೆ ಯಾವೊಂದು ಪ್ರಶಸ್ತಿ , ಪುರಸ್ಕಾರಗಳ ಬೆನ್ನು ಬೀಳದೆ ತಮ್ಮ ಮೌಲ್ಯಯುತ ಬರವಣಿಗೆಗಳ ಮೂಲಕ ಇಂದಿಗೂ ಜನಮಾನಸದಲ್ಲಿ ನೆಲೆನಿಂತ ನಮ್ಮ ಅನೇಕ ಹಿರಿಯ ಸಾಹಿತಿಗಳಿದ್ದಾರೆ . ಯಾಕೆಂದರೆ ಸ್ವಾಸ್ಥ್ಯ ಪೂರ್ಣ ಸಮಾಜ ರೂಪಿಸುವಲ್ಲಿ ಸಾಹಿತ್ಯ ಕ್ಷೇತ್ರದ ಕೊಡುಗೆಕೂಡ ಅನನ್ಯವಾದುದಾಗಿದೆ . ಸಮಾಜ ಸಾಹಿತ್ಯ ವಲಯದಿಂದ ಬಯಸುವುದು ಕೂಡ ಇದನ್ನೇ. ಆದಿಕ್ಕಿನಲ್ಲಿ ಬರಹಗಾರರು ತಮ್ಮ ಗುರುತರ ಜವಾಬ್ದಾರಿಯನ್ನು ಅರಿಯಬೇಕಾಗಿದೆ . ಆದ್ದರಿಂದ ಈ ವಲಯವನ್ನು ಆದಷ್ಟು ರಾಜಕೀಯದಿಂದ ಮುಕ್ತವಾಗಿಡಬೇಕಾಗಿದೆ .

  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕುರಿತು ನಿಮಗೆ ಏನನ್ನಿಸುತ್ತಿದೆ  ?

ಸಾಹಿತ್ಯಿಕ , ಸಾಂಸ್ಕೃತಿಕ ಸಂಗತಿಗಳ ಕುರಿತು ಕಳಕಳಿಯುಳ್ಳ ಯಾರಿಗಾದರೂ ಚಿಂತನೆಗೆ ಹಚ್ಚುವ ಪ್ರಶ್ನೆಯಿದು.ಸಾಹಿತ್ಯ, ಸಾಂಸ್ಕೃತಿಕ ವಾತಾವರಣವು ನಾಗರಿಕ ಸಮಾಜವೊಂದು ಸಾಗುತ್ತಿರುವ ದಿಕ್ಕನ್ನು ಸೂಚಿಸುತ್ತದೆಯೆಂದರೆ ಅತಿಶಯೋಕ್ತಿಯಾಗಲಾರದು. ನಮ್ಮಲ್ಲಿ ದೇಶದ ಪ್ರತಿಯೊಂದು ಹಳ್ಳಿ ಹಳ್ಳಿಗ ಮೂಲೆ ಮೂಲೆಯಲ್ಲಿಯೂ ಕೂಡಾ ನಮ್ಮ ಜನಪದರು ಪ್ರಾಚೀನ ಕಾಲದಿಂದಲೂ ತಮ್ಮದೇ ಕಲ್ಪನೆಯ ಹಾಡು, ಕುಣಿತ ,ನೃತ್ಯ ಗಳನ್ನು ರಕ್ತಗತವಾಗಿ ರೂಢಿಸಿಕೊಂಡು ಬಂದಿದ್ದಾರೆ. ಆದರೆ ಇಂದು ನಮ್ಮ ಬದುಕು ಜಾಗತೀಕರಣ, ಆಧುನೀಕರಣ ಹಾಗೂ ಆರ್ಥಿಕ ಸುಧಾರಣೆಯ ದಾವಂತಕ್ಕೆ ಸಿಕ್ಕಿ ಸ್ವಲ್ಪ ಮಟ್ಟಿಗೆ ನಮ್ಮ ಸಾಂಸ್ಕೃತಿಕ ಕ್ಷೇತ್ರ ನಲುಗಿದ್ದು ಸುಳ್ಳಲ್ಲ. ಆದರೆ ನಮ್ಮ ಸರ್ಕಾರವಾಗಲೀ , ಸರ್ಕಾರೇತರ ಸಂಘ ಸಂಸ್ಥೆಗಳು ಈ ಸಾಂಸ್ಕೃತಿಕ ಕ್ಷೇತ್ರವನ್ನು ತೀರಾ ಅವಗಣನೆಯಂತೂ ಮಾಡಿಲ್ಲ.

  ಹಾಗೆನೋಡಿದರೆ ಸರ್ಕಾರಕ್ಕಿಂತಲೂ ಹೆಚ್ಚಾಗಿ ಸರ್ಕಾರೇತರ ಸಂಘಟನೆಗಳು ಅತ್ಯಂತ ಕಾಳಜಿಯಿಂದ ನಮ್ಮ ಸಾಹಿತ್ಯ , ಸಾಂಸ್ಕೃತಿಕ ರಂಗಕ್ಕೆ ವಿಪುಲ ಕೊಡುಗೆಯನ್ನು ನೀಡುತ್ತಿವೆ . ನಮ್ಮ ಹಳ್ಳಿ ಹಳ್ಳಿಗಳಲ್ಲಿ ನಡೆಯುವ ಜಾತ್ರೆ , ನಾಟಕ , ಬಯಲಾಟ, ಡೊಳ್ಳು ಕುಣಿತ, ಆರ್ಕೆಸ್ಟ್ರಾ ,ಸುಗ್ಗಿಕುಣಿತ , ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸಲೆಂದೇ ನಡೆಯುವ ಸಂಗೀತ , ನೃತ್ಯ ಕಾರ್ಯಕ್ರಮಗಳ ,ರಸಮಂಜರಿ ಕಾರ್ಯಕ್ರಮಗಳು ,ಸಾಹಿತ್ಯ ಗೋಷ್ಠಿಗಳೆಲ್ಲವೂ ನಮ್ಮಲ್ಲಿ ಸಾಹಿತ್ಯ ಸಾಂಸ್ಕೃತಿಕ ವಾತಾವರಣವು ಹೆಚ್ಚು ಕ್ರಿಯಾಶೀಲವಾಗಿದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನಗಳಾಗಿವೆ.

   ಆದರೂ ನಮ್ಮ ಹಳ್ಳಿಗಳಲ್ಲಿ ಆಧುನೀಕರಣ, ಅಭಿವೃದ್ಧಿ, ಆರ್ಥಿಕ ಪ್ರಗತಿ , ಟಿ.ವಿ.ಶೈಕ್ಷಣೀಕರಣದ ಕಾರಣಗಳಿಂದಾಗಿ ನಮ್ಮ ಯುವ ಜನಾಂಗ ತಮ್ಮ ಹಿರಿಯರು ಜತನದಿಂದ ಕಾಯ್ದುಕೊಂಡು ಬಂದ ಜನಪದ ಕಲೆಗಳನ್ನು ಮರೆಯುತ್ತಿದ್ದಾರೆ ಎಂದರೆ ತಪ್ಪಾಗದೇನೊ. ಆದ್ದರಿಂದ ನಮ್ಮ ಸರ್ಕಾರ ಮತ್ತು ಸಾಂಸ್ಕೃತಿಕ ,ಸಾಮಾಜಿಕ ಸಂಘಟನೆಗಳು ಆಕುರಿತು ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಇದೆ ಎಂದೆನಿಸುತ್ತದೆ.

 ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು  ?

ಕಾಲೇಜು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲೇ ಒಂದು ಕವನ ಸಂಕಲನ, ಕಥಾಸಂಕಲನ , ಪ್ರಬಂಧ ಸಂಕಲನಗಳನ್ನು ಹೊರತರುವ ಆಲೋಚನೆ ಇತ್ತು. ಯಾಕೆಂದರೆ ಆಗ ಅಷ್ಟೇ ವೇಗವಾಗಿದ್ದೆ. ಆಗಲೇ ಕೆಲವು ಕವನಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬಹುಮಾನಿತವಾಗಿತ್ತು.ಆಕಾಶಣಿಗಳಲ್ಲೂ ಪ್ರಸಾರಗೊಂಡಿತ್ತು. ಆದರೆ ಆಗಲೇ ಅನಿಸಿದ್ದು ಹಿರಿಯರನ್ನು ಓದಬೇಕು. ಅಲ್ಲಿಂದ ಕುವೆಂಪು ರವರ ಎರಡೂ ಮಹಾಕಾದಂಬರಿಗಳನ್ನು ,ಕಾರಂರ ಕಾದಂಬರಿಗಳನ್ನು , ಚಿತ್ತಾಲರ ಕಾದಂಬರಿ , ಭಾರತೀ ಸುತರ ಕಾದಂಬರಿ , ಹಿಂಬದಿಯಿಂದ ಕನ್ನಡಕ್ಕೆ ಅನುವಾದಗೊಂಡ ‘ ಯಶ್ ಪಾಲರ ಕಾದಂಬರಿ , ಚಿತ್ತಾಲರು , ಡಿ.ವಿ.ಜಿ.ಯವರು ,ಅನಂತ ಮೂರ್ತಯವರು – ಅದರಲ್ಲೂ ಅವರ ‘ ಸಂಸ್ಕಾರ ‘ ವನ್ನು ೨-೩   ಬಾರಿ ಓದಿದೆ. ಹಾಗೆಯೇ ನಮ್ಮ ಹೆಮ್ಮೆಯ ಜಯಂತ ಕಾಯ್ಕಿಣಿಯವರ ಕ್ರತಿಗಳನ್ನು , ಯಂಡಮುರಿ , ಸಾಯಿಸುತೆ , ತ.ರಾ.ಸು , ಮಾಸ್ತಿ , ಗಿರಡ್ಡಿ ಗೋವಿಂದರಾಜ , ಈ ಜಿಲ್ಲೆಯ ಸಾಹಿತ್ಯದ ಕಣಜ ವಿಷ್ಣು ನಾಯ್ಕರ ಕ್ರತಿಗಳನ್ನು , ಗಿರೀಶ್ ಕಾರ್ನಾಡ್ ರವರ ನಾಲ್ಕು ನಾಟಕಗಳನ್ನು , ಲಂಕೇಶ್ , ರೋಹಿದಾಸ ನಾಯಕ, ಎಲ್ . ಆರ್ .ಹೆಗಡೆ. ಎನ್.ಆರ್ .ನಾಯಕ.ತೇಜಸ್ವಿ ..ಹೀಗೆ ಹಿರಿಯರನ್ನು ಓದಿ ಖುಷಿಪಡಲು ಪ್ರಾರಂಭಿಸಿದೆ .ಹೀಗಾಗಿ ಬರಬರುತ್ತಾ ನನ್ನದೇ ಕಾರಣಗಳಿಂದ ಕ್ರತಿಗಳನ್ನು ಪ್ರಕಟಿಸುವ ಹುಮ್ಮಸ್ಸು ಕರಗಿಹೋಯಿತು.

   ಆದರೆ ಈಗ ಒಂದು ಕವನಸಂಕಲನ, ಕಥಾಸಂಕಲನ ಹಾಗೂ ವಿಮರ್ಶಾ ಸಂಕಲನ ಹೊರತರುವ ವಿಚಾರಕ್ಕೆ ಗೆಳೆಯ ಫಾಲ್ಗುಣ ಗೌಡರು ಒತ್ತಾಸೆಯಾಗಿದ್ದಾರೆ.

   ಇನ್ನು ‘ ಕುವೆಂಪು ‘ ರವರು ನನ್ನ ಆರಾಧ್ಯ ಕವಿ . ಅವರ ಕುರಿತಂತೆ ಇನ್ನಷ್ಟು ಆಲೋಚನೆಗಳಿವೆ. ಆಕುರಿತು ಹೆಚ್ಚಿಗೆ ಏನನ್ನೂ ಹೇಳಲಾರೆ .

  ನೀವು ಈಚೆಗೆ ಓದಿದ ಕೃತಿ ..?

 ಪ್ರಾಚೀನ ಭಾರತದ ಚರಿತ್ರೆ, ಡಿ. ಡಿ .ಕೋಸಾಂಬಿಯವರ ಚಿಂತನೆಗಳು. ಜ್ಞಾನ ಪೀಠ ಪ್ರಶಸ್ತಿ ಭಾಜನರಾದ ಮೇರು ಸಾಹಿತಿಗಳಿಂದ ಹಿಡಿದು , ತೀರಾ ಇತ್ತೀಚಿನ ವರೆಗಿನ ಲೇಖಕರ , ಕವಿಗಳ ಕಾವ್ಯಗಳ ಕುರಿತು ಯಾವುದೇ ಪೂರ್ವಾಗ್ರಹಕ್ಕೊಳಗಾಗದೆ , ಒಂದರ್ಥದಲ್ಲಿ ಸ್ಥಿತ ಪ್ರಜ್ಞರಂತೆ ಚರ್ಚಿಸಿರುವುದು ಕಂಡುಬರುತ್ತದೆ. ಸಾಹಿತ್ಯ ವಿಮರ್ಶಕರಾಗಲು ಹಂಬಲಿಸುವ ಯುವ ಬರಹಗಾರರು ಓದಲೇಬೇಕಾದ ಕೃತಿ ಇದಾಗಿದೆ .

ನಿಮಗೆ ಇಷ್ಟವಾದ ಕೆಲಸ ಯಾವುದು   ?

ಒಬ್ಬ ಸಮರ್ಥ ಮಾರ್ಗದರ್ಶಕನಾಗಿ ನನ್ನ ವಿದ್ಯಾರ್ಥಿಗಳಿಗೆ ಶ್ರದ್ಧೆಯಿಂದ , ಪ್ರೀತಿ ಮತ್ತು ಕಾಳಜಿಯಿಂದ ಮಾರ್ಗದರ್ಶನ  ಮಾಡುವುದು. ಇದು ನನಗೆ ಇಷ್ಟವಾದ ಕೆಲಸವೂ ಹೌದು.

   ಯಾಕೆಂದರೆ ಪ್ರತಿಯೊಬ್ಬ ಪಾಲಕರೂ ಕೂಡ ತಮ್ಮ ಮಗುವಿನ ಉನ್ನತ ಹಾಗೂ ಸುಂದರ ಭವಿಷ್ಯಕ್ಕಾಗಿ ಹಲವಾರು ಕನಸುಗಳನ್ನು ಕಟ್ಟಿಕೊಂಡು  , ಅದನ್ನು ಸಾಕಾರಗೊಳಿಸಲು ನಮ್ಮ ಮೇಲಿನ ಭರವಸೆಯಿಂದ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುತ್ತಾರೆ. ಆದ್ದರಿಂದ ಅವರುಗಳ ಭರವಸೆ ಮತ್ತು ನಂಬಿಕೆಗಳು ಹುಸಿಯಾಗದಂತೆ ನೋಡಿಕೊಳ್ಳುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ನಂಬಿದವರಲ್ಲಿ ನಾನೂ ಒಬ್ಬ . ಆದ್ದರಿಂದ ಇದು ನನಗೆ ಇಷ್ಟವಾದ ಕೆಲಸವೂ ಹೌದು . ಯಾಕೆಂದರೆ ಹಿಂದೆ ಯಾರ್ಯಾರೆಲ್ಲ ಸೇರಿ ನನ್ನ ಭವಿಷ್ಯವನ್ನು ರೂಪಿಸಿದರು . ಇಂದು ಹಲವಾರು ಕುಟುಂಬಗಳ ಭವಿಷ್ಯ ರೂಪಿಸುವ ಅವಕಾಶವನ್ನು ದೇವರು ನನಗೆ ಕಲ್ಪಿಸಿದ್ದಾನೆ . ಆ ಪ್ರಜ್ಞೆ ಕೂಡಾ ನನ್ನಲ್ಲಿ ಸದಾ ಜಾಗೃತವಾಗಿರುತ್ತದೆ. ಆಕುರಿತು ನನ್ನಿಂದಾದ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿರುವೆ .

ನಿಮಗೆ ತುಂಬಾ ಇಷ್ಟವಾದ ಸಿನಿಮಾ ಯಾವುದು  ?

ನನಗೆ ಇಷ್ಟವಾದ ಸಿನಿಮಾ ಅಂತ ಯಾವುದು ಇಲ್ಲ. ನನಗೆ ಸಿನಿಮಾದ ಗೀಳು ಎಂದೂ ಕಾಡಿಲ್ಲ.ನಾನು ನೋಡಿದ ಮೊದಲ ಸಿನಿಮಾ ‘ ಕವಿರತ್ನ ಕಾಳಿದಾಸ ‘ . ನಮ್ಮ ತಂದೆಯವರಿಗೆ ಯಾರೋ ಒಳ್ಳೆಯ ಸಿನಿಮಾ ಬಂದಿದೆ ಬಂದಿದ್ದರಿಂದ , ಒಳ್ಳೆಯ ಸಿನಿಮಾ ಬಂದಿದೆ ಯಂತೆ, ಹೋಗಿ ನೋಡಿ ಬಾ ..ಅಂತ ಅವರೇ ಹಣಕೊಟ್ಟು ಕಳುಹಿಸಿದ್ದರು. ಆನಂತರ ಮೈಸೂರು ಮಲ್ಲಿಗೆ, ಎಕೆ೪೭ ಮುಂತಾದ ಕೆಲವು ಸಿನಿಮಾಗಳನ್ನು ನೋಡಿರುವೆ. ಮನೆಯಲ್ಲಿ  ಟಿ. ವಿ. ಇದ್ದರೂ ಸಿನಿಮಾ ನೋಡುವುದಿಲ್ಲ….ದಾರವಾಹಿ ..ಕ್ರಿಕೆಟ್ ಕೂಡಾ ..ಅಷ್ಟೇ.

  ನಿಮಗೆ ಇಷ್ಟವಾದ ಸ್ಥಳ ಯಾವುದು  ?

ಶಾಲೆ ಮತ್ತು ಮನೆ ಇವೆರಡೂ ನನಗೆ ಅತ್ಯಂತ ಆಪ್ತವಾದ ಸ್ಥಳವಾಗಿದೆ. ಶಾಲೆ ಯಾಕೆ ಇಷ್ಟ ಅಂದರೆ ಅದು ನನ್ನ ವ್ಯಕಿತ್ವವನ್ನು ಅನಾವರಣಗೊಳಿಸುವ ಹಾಗೂ ಸಮಾಜೀಕರಣಗೋಳಿಸುವ ಸ್ಥಳವಾಗಿದೆ . ಅಲ್ಲಿ ನನ್ನೆದುರಿಗೆ ಇರುವ ಪ್ರತಿಯೊಂದು ಮಗುವೂ ಕೂಡ ನನ್ನ ವ್ಯಕ್ತಿತ್ವವನ್ನು ವಿಮರ್ಶೆಯ ಒರೆಗೆ ಹಚ್ಚುತ್ತಿರುತ್ತದೆ. ಒಂದರ್ಥದಲ್ಲಿ ನನ್ನ ವ್ಯಕ್ತಿತ್ವ ರೂಪುಗೊಳ್ಳುವ ಸ್ಥಳವೂ ಕೂಡ ಅದೇ ಆಗಿದೆ.  ಮನೆ ಯಾಕೆ ಇಷ್ಟ ಎಂದರೆ , ಅಲ್ಲಿ ನನ್ನ ಆರಂಭವು ಕೊನೆಗೊಳ್ಳುವ ಸ್ಥಳವೂ ಔದು . ಇತ್ತೀಚಿನ ೮-೧೦ ವರ್ಷಗಳಿಂದ ನಾನು ನನ್ನ ಬಾಲ್ಯದಲ್ಲಿ ಅನುಭವಿಸಲು ಸಾದ್ಯವಾಗದ ಸಂಭ್ರಮವನ್ನು ನನ್ನ ಮಗಳ ಬಾಲ್ಯದಿಂದ ತುಂಬಿಕೊಳ್ಳುತ್ತಿದ್ದೇನೆ. ಇತ್ತೀಚೆಗೆ ಅವಳೇ ನನ್ನ ಕನಸೂ ಕೂಡ .

   ನಿಮ್ಮ ಜೀವನದಲ್ಲಿ ಮರೆಯಲಾರದ ಘಟನೆ ಯಾವುದು  ?

ಅಂತಹ ಘಟನೆಗಳು ಕೆಲವು ಇವೆ. ಅವುಗಳಲ್ಲಿ ಒಂದು …೫-೬ ವರ್ಷಗಳ ಹಿಂದಿನ ಘಟನೆ. ಆಗ ನಾನು ಗೋಕರ್ಣದ ದಂಡೆಭಾಗ ಕಿ.ಪ್ರಾ.ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದೆ.ಅಂದು ಕುಮಟಾಕ್ಕೆ ಬಂದವನಿಗೆ ಹೊರಡಲು ಸ್ವಲ್ಪ ರಾತ್ರಿಯಾಗಿತ್ತು .ಅದೇ ವೇಳೆ ಸಣ್ಣದಾಗಿ ಮಳೆ ಸುರಿಯುತ್ತಿತ್ತು. ಮಿರ್ಜಾನ್ ಹತ್ತಿರ ಹೋಗುತ್ತಿದ್ದಾಗ ಹೆದ್ದಾರಿಯಲ್ಲಿದ್ದ ಹೊಂಡದಿಂದಾಗಿ ನನ್ನ ಬೈಕ್ ಬಿದ್ದಿದೆ .ಅಷ್ಟೇ ನೆನಪು. ಮೋಹನ್ ನಾಯಕರು ಕೂಡಲೇ ಆ ಪ್ರಾಥಮಿಕ ಆರೋಗ್ಯ ಕೇಂದ್ರದ ಜನಪರ ಕಾಳಜಿಯ  ವೈದ್ಯರಾದ ಡಾ.ಜಗದೀಶ್ ನಾಯ್ಕರನ್ನು ಅವರ ಮನೆಗೆ ಹೋಗಿ ಕರೆತಂದಿದ್ದರು. ಅವರೂ ಕೂಡಾ ಅತ್ಯಂತ ಕಾಳಜಿಯಿಂದ ಗಾಯಿಂದ ಗಾಯ ಸ್ವಚ್ಛ ಗೊಳಿಸಿ ಹೊಲಿಗೆಹಾಕಿದರು. ಅಲ್ಲಿಗೆ ರಾತ್ರಿ ೨-೩೦ ರಿಂದ ೩-೦ ಗಂಟೆ .ನಾನು ಅರೆ ಪ್ರಜ್ಞೆ ಯಲ್ಲಿ ಮಲಗಿದ್ದರೆ , ಪಕ್ಕದ ೨ ಕುರ್ಚಿ ಯಮೇಲೆ ನನ್ನ ಮುಖ್ಯಾಧ್ಯಾಪಕರಾದ ಮದುಕರ ನಾಯಕರು ಹಾಗೂ ಅವರ ಗೆಳೆಯರು ಬೆಳಗಾಗುವ ವರೆಗೆ ಎಚ್ಚರವಾಗಿ ಕುಳಿತೆ ಬೆಳಗುಮಾಡಿದ್ದರು. ಮುಂಜಾನೆಯಾಗುವವೇಳೆಗೆ ನನಗೂ ಪ್ರಜ್ಞೆ ಬಂದಿತ್ತು . ಅದೇ ತಾನೇ ತಂದಿದ್ದ ತಮ್ಮ ಹೊಸ ಕಾರಿನಲ್ಲಿ ಸುರಿದ ರಕ್ತವನ್ನು ಕಿಂಚಿತ್ತೂ ಬೇಸರಗೊಳ್ಳದೆ ರಾತ್ರಿ ೩-೪ ಗಂಟೆಗಳವರೆಗೆ ಸ್ವಚ್ಛ ಗೊಳಿಸಿದ ಮೋಹನ್ ನಾಯಕರ ಹೃದಯ ವೈಶಾಲ್ಯತೆಯನ್ನು ಎಂದೂ ಮರೆಯಲಾಗದು. ಅಂದು ಮಧುಕರ ನಾಯಕರಾಗಲಿ , ಮೋಹನ್ ನಾಯಕರಾಗಲಿ ಅಥವಾ ವೈದ್ಯರಾದ ಡಾ. ಜಗದೀಶ್ ನಾಯ್ಕ ರಾಗಲೀ ಕಿಂಚಿತ್ ಅಲಕ್ಷ್ಯ ಮಾಡಿದ್ದರೂ ಕೂಡಾ ಅಂದು ಸಾವಿನ ಬಾಗಿಲವರೆಗೆ ಸಾಗಿದ್ದ ನಾನು ಉಳಿಯುತ್ತಿರಲಿಲ್ಲ. ಆದ್ದರಿಂದ ನನ್ನ ಜೀವನದಲ್ಲಿ ಈ ಘಟನೆ ಜೀವನದ ಕೊನೆಯ ಕ್ಷಣಗಳ ವರೆಗೂ ಎಂದೂ ಮರೆಯಲಾಗದು.ಮಾನವ ಸಹಜವಾದ ವ್ಯಕ್ತಿ ಗತವಾದ ಅಭಿಪ್ರಾಯ ಭೇದ ಏನೇ ಇದ್ದರೂ ನನ್ನ ಜೀವದ ಉಸಿರಿನ ಕೊನೆಯ ಕ್ಷಣದವರೆಗೂ ಈ ನಾಲ್ವರನ್ನು ಎಂದೂ ಮರೆಯಲಾರೆ .ನನ್ನ ಅಂತರಂಗದಲ್ಲಿ ಆ ನೆನಪು ಚಿರಂತನವಾಗಿದೆ .

***********************************************************

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

3 thoughts on “

  1. ನನ್ನ ಸಂದರ್ಶನವನ್ನು ನಮ್ಮ ನೆಚ್ಚಿನ’ ಸಂಗಾತಿ ‘ ಯಲ್ಲಿ ಬಳಸಿ ಕೊಂಡಿದ್ದಕ್ಕಾಗಿ ಆತ್ಮೀಯರಾದ ‘ ನಾಗರಾಜ್ ಹರಪನಹಳ್ಳಿ ಸರ್ ‘ ರವರಿಗೆ , ಸಂಗಾತಿ ಬಳಗಕ್ಕೆ ಹಾಗೂ ಗೌರವಾನ್ವಿತ ಸಂಪಾದಕರಿಗೆ ನನ್ನ ಗೌರವ ಪೂರ್ವಕ ನಮನಗಳು . .

  2. ಬಹಳ ಚೆನ್ನಾಗಿದೆ.
    ಕಲ್ಬುರ್ಗಿಯವರಂಥ ಗುರುಗಳ ಭಾಗ್ಯ ನಿಮ್ಮದು. ಜೀವನಾನುಭವವೇ ಸಾಹಿತ್ಯದ ಜೀವನ ದೃವ್ಯ ಎಂಬ ಅವರ ಮಾತು ದಾರಿದೀಪ.
    ನಾಗರಾಜ ಹರಪನಹಳ್ಳಿ ಅವರೇ, ನಿಮ್ಮ ಈ ಸಂದರ್ಶನಗಳು ಬಹಳ ಚೆನ್ನಾಗಿರುತ್ತವೆ.

Leave a Reply

Back To Top