ಕಸಾಪಗೆ ಮಹಿಳಾ ಅಧ್ಯಕ್ಷರು
ಒಂದು ಚರ್ಚೆ
ಇವತ್ತಿನ ಚರ್ಚೆಯಲ್ಲಿಅನಿಸಿಕೆ ತಿಳಿಸಿರುವವರು
ಸುಧಾ ಆಡುಕಳ
ಕ. ಸಾ. ಪ. ಕ್ಕೆ ,
ಮಹಿಳಾ ಅಧ್ಯಕ್ಷರು ಯಾಕಿಲ್ಲ!!?
ಕ. ಸಾ. ಪ. ಕ್ಕೆ ,
ಮಹಿಳಾ ಅಧ್ಯಕ್ಷರು ಯಾಕಿಲ್ಲ!!?
ಸ್ಥಾಪನೆಯಾಗಿ ಶತಮಾನಗಳಾದರೂ ಇನ್ನೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳಾ ಅಧ್ಯಕ್ಷರು ಯಾಕಿಲ್ಲ!? ಇಂಥದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಚರ್ಚೆಯನ್ನಾರಂಭಿಸಿದ ಸಂಗಾತಿ ಪತ್ರಿಕೆಯ ನಿಲುವನ್ನು ತುಂಬು ಹೃದಯದಿಂದ ವಂದಿಸುತ್ತಲೇ, ನನ್ನ ಕೆಲವು ವಿಚಾರಗಳನ್ನು ಸ್ಪಷ್ಟಗೊಳಿಸಬಯಸುತ್ತೇನೆ. ಸಮಾನತೆಯೆಂಬುದು ಸುಲಭವಾಗಿ ರೂಢಿಸಿಕೊಳ್ಳುವ ವಿಷಯವಾಗಿದ್ದರೆ ಮಾನವ ಜನಾಂಗ ನಾಗರಿಕತೆಯ ಉತ್ಕೃಷ್ಟ ಹಂತವನ್ನು ತಲುಪಿದ ಇಂದಿನ ದಿನಗಳಲ್ಲಿಯೂ ಅಸಮಾನತೆಯ ಭಾರದಿಂದ ಕುಸಿಯುತ್ತಿರಲಿಲ್ಲ. ದಿನನಿತ್ಯದ ಸಣ್ಣಪುಟ್ಟ ಅವಕಾಶಗಳಲ್ಲೆಲ್ಲ ಸಮಾನತೆಯನ್ನು ಪ್ರತಿಪಾದಿಸುತ್ತ ಅದನ್ನು ಸಾಧಿಸಿಯೇ ಬಿಟ್ಟೆವು ಎಂಬ ಭ್ರಮೆಯಲ್ಲಿ ತೇಲಾಡಿಸುವುದು ಅಸಮಾನತೆಯ ಲೋಕರೂಢಿಯೇ ಆಗಿದೆ.
ನಿಜವಾದ ಸಮಾನತೆಯ ಪರೀಕ್ಷೆಯಾಗಬೇಕಾದದ್ದು ಅಧಿಕಾರದ ಹಂಚಿಕೆಯ ವಿಷಯದಲ್ಲಿ ಎಂಬುದನ್ನು ಉಪಾಯವಾಗಿ ಮರೆಮಾಚುತ್ತಾ ಅಥವಾ ಅದಕ್ಕೆ ತನ್ನದೇ ಅನೇಕ ಸಮಜಾಯಿಸಿಗಳನ್ನು ನೀಡುತ್ತಾ ಹೋಗುವುದು ಅನೂಚಾನವಾಗಿ ನಮ್ಮ ಸಮಾಜದ ನಡೆಯೇಆಗಿದೆ.
ಯಾವುದೇ ಅಧಿಕಾರಯುತವಾದ ಹುದ್ದೆಯ ಆಯ್ಕೆ ಚುನಾವಣಾ ರಾಜಕೀಯಕ್ಕಿಂತ ಭಿನ್ನವೇನಲ್ಲ. ಗ್ರಾಮ ಪಂಚಾಯಿತಿಯಲ್ಲಿ ಹೆಣ್ಣು ಮಕ್ಕಳಿಗೆ ಮೀಸಲಾತಿ ನೀಡಲು ತೆರೆದ ಮನಸ್ಸನ್ನು ಹೊಂದಿರುವ ವ್ಯವಸ್ಥೆ ಶಾಸಕ ಮತ್ತು ಸಂಸದರನ್ನು ಆಯ್ಕೆ ಮಾಡುವಾಗ ತೋರುವ ಅಸಮಾನತೆಯನ್ನು ಗಮನಕ್ಕೆ ತಂದುಕೊಂಡರೆಸಾಕು, ನಮ್ಮ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ದೊರಕುತ್ತದೆ. ಜಾತಿತಾರತಮ್ಯವನ್ನು ಅಳಿಸಿಬಿಟ್ಟಿದ್ದೇವೆಂದು ಭಾಷಣಮಾಡುತ್ತ, ಮನೆಗೆ ಬಂದವರಿಗೆ ತಮ್ಮದೇ ಪಕ್ಕದಲ್ಲಿ ಊಟವಿಕ್ಕುವ ಮಂದಿ ಮಕ್ಕಳ ಮದುವೆಯ ವಿಚಾರಕ್ಕೆ ಬಂದಾಗ ನಡೆದುಕೊಳ್ಳುವ ರೀತಿಯನ್ನು ಗಮನಿಸದರೂ ಸಾಕು. ಇವೆಲ್ಲವೂ ಸಮಾನತೆಯೊಳಗಿನ ಪೊಳ್ಳುತನವನ್ನು ಬಯಲಿಗೆಳೆಯುತ್ತಲೇ ಇರುತ್ತವೆ. ಸಮಾಜದಲ್ಲಿ ಪುರುಷ ಪ್ರಾಧಾನ್ಯವು ಅಳಿದು ಸಮಾನತೆಯ ತಂಗಾಳಿ ಬೀಸುತ್ತಿದೆ ಎಂಬ ಭ್ರಮೆಯಲ್ಲಿರುವ ನಮಗೆ ಅಧಿಕಾರದ ಪ್ರಶ್ನೆಗಳು ಬಂದಾಗಲೆಲ್ಲ ವಾಸ್ತವದ ಬಿಸಿಧಗೆ ಸೋಕುತ್ತಲೇ ಇರುತ್ತದೆ. ಆದರೆ ಇದು ನಮ್ಮ ದೇಶಕ್ಕೋ ಅಥವಾ ಒಂದು ಲಿಂಗಕ್ಕೋ ಸೀಮಿತವಾದ ವಿಷಯವೆಂದು ಅನಿಸುತ್ತಿಲ್ಲ. ಪ್ರಮಾಣದಲ್ಲಿ ಹೆಚ್ಚು ಕಡಿಮೆಯಿದ್ದರೂ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಸ್ರ್ತೀಯರು ಇಡಿಯ ಪ್ರಪಂಚದಲ್ಲಿ ಪಡೆದಿರುವ ಅಧಿಕಾರಯುತ ವಾದಸ್ಥಾನವನ್ನು ಲೆಕ್ಕ ಹಾಕಿದರೆ ನಾಚಿಕೆಯಿಂದ ತಲೆತಗ್ಗಿಸುವಂತಾಗುತ್ತದೆ. ರಾಹುಲಸಾಂಕೃತ್ಯಾಯನರವೋಲ್ಗಾ-ಗಂಗಾ ದಂತಹ ಪುಸ್ತಕವನ್ನು ಓದಿದರೆ ಅಧಿಕಾರದ ಹಂಬಲಕ್ಕಾಗಿ ತಾಯಿಯನ್ನೇ ಪ್ರವಾಹಕ್ಕೆ ದೂಡುವ ನಿಶೆಯರನ್ನು ಕಾಣುತ್ತೇವೆ ಮತ್ತು ಸಂತಾನೋತ್ಪತ್ತಿಯ ಕಾರಣಕ್ಕಾಗಿಯೇ ಇಡಿಯ ಗಣದ ಮುಖ್ಯಸ್ಥಳಾಗಿರುವ ಹೆಣ್ಣನ್ನು ಅವಳ ಆ ಶಕ್ತಿಯನ್ನೇ ನಿಧಾನವಾಗಿ ದೌರ್ಬಲ್ಯವಾಗಿಸಿ ಮನೆಯ ಗೋಡೆಗಳ ನಡುವೆ ಬಂಧಿಸಿದ ಚರಿತ್ರೆಯನ್ನು ನಾವು ಅರ್ಥಮಾಡಿಕೊಳ್ಳಬಹುದು. ಇಷ್ಟೆಲ್ಲವನ್ನು ಯಾಕೆ ಪ್ರಸ್ತಾಪಿಸಿದೆನೆಂದರೆ ಈ ಶಕ್ತಿರಾಜಕೀಯ ಎಂಬುದು ದೇಶ, ಕಾಲಗಳನ್ನು ಮೀರಿ ಸಮಾಜಕ್ಕೆ ಹಿಡಿದ ವ್ಯಾಧಿಯಾಗಿದೆ, ಎಂಬುದನ್ನು ತಿಳಿಸುವಕಾರಣಕ್ಕಾಗಿ ಅಷ್ಟೆ.
ಯಾರೇನೇ ಹೇಳಿದರೂ ಹೆಣ್ಣು ಎಂಬ ಗೋಡೆಯೊಳಗಿನ ಜೀವ ಒಂಚೂರು ತನ್ನದೇ ಸಮಯವೆಂಬ ಬಿಡುವನ್ನು ಕಂಡುಕೊಂಡದ್ದು ವಿಜ್ಞಾನದ ಆವಿಷ್ಕಾರಗಳಿಂದಾಗಿ ಹುಟ್ಟಿಕೊಂಡ, ದೈನಂದಿನ ಕೆಲಸಗಳನ್ನು ಸುಲಭಗೊಳಿಸುವ ಅನೇಕ ಯಂತ್ರಗಳಿಂದ ಮಾತ್ರ. ಇಲ್ಲವಾದಲ್ಲಿ ಎಂಥಹ ಶಿಕ್ಷಣವೂ ಅವಳನ್ನು ಸಾಹಿತ್ಯ ರಚನೆಯೆಡೆಗೆ ಸೆಳೆಯುತ್ತಿತ್ತೆಂದು ನನಗನಿಸುತ್ತಿಲ್ಲ. ಹಾಗೆ ಸಿಕ್ಕಿದ ಬಿಡುವಿನ ವೇಳೆಯಲ್ಲಿ, ಅವಳ ಗಮ್ಯದ ಜಗತ್ತಿನ ಬಗ್ಗೆ ಬರೆಯುತ್ತಲೇ ಸ್ತ್ರೀಯರು ಇಂದು ಅದ್ಭುತವಾದ ಸಾಹಿತ್ಯದ ಕೃತಿಗಳನ್ನು ರಚಿಸಿದ್ದಾರೆ. ತಮ್ಮದೇ ಸಾಹಿತ್ಯಿಕ ಗುಂಪುಗಳನ್ನು ಮಾಡಿಕೊಂಡು ಇನ್ನಷ್ಟು ಜನರನ್ನು ತೆಕ್ಕೆಗೆ ಸೆಳೆದುಕೊಳ್ಳುತ್ತಿದ್ದಾರೆ. ಹೆಣ್ಣೊಬ್ಬಳು ಬರವಣಿಗೆಯಲ್ಲಿ ತೊಡಗಿರುವಳೆಂದು ಮನೆಯನ್ನು ಶಬ್ದಮುಕ್ತವಾಗಿಡುವ, ಅವಳ ಕೋಣೆಯಬಾಗಿಲನ್ನು ಶಬ್ದವಾಗದಂತೆ ದೂಡಿ ಕಾಲಕಾಲಕ್ಕೆ ಕಾಫಿತಿಂಡಿಗಳನ್ನು ಪೂರೈಕೆ ಮಾಡುವ, ಅವಳು ಬರೆದುದೆಲ್ಲವನ್ನು ಚಂದವಾಗಿ ಕೈಬರಹದಲ್ಲಿ ಅಥವಾ ಕಂಪ್ಯೂಟರ್ನಲ್ಲಿ ಕಾಪಿ ಮಾಡಿಕೊಡುವ ಎಷ್ಟು ಜನ ಸಂಗಾತಿಗಳಿದ್ದಾರೆಂದು ಚೂರು ಆತ್ಮ ವಿಮರ್ಶೆ ಮಾಡಿಕೊಂಡರೂ ಸಾಕು, ಮಹಿಳಾ ಸಾಹಿತ್ಯದ ಘನತೆ ತನ್ನಷ್ಟಕ್ಕೆ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತದೆ. ತಮ್ಮ ಎಲ್ಲ ಕರ್ತವ್ಯಗಳನ್ನು ಮುಗಿಸಿ ರಾತ್ರಿಯನ್ನು ಕರಗಿಸಿ ಸಾಹಿತ್ಯವಾಗಿಸಿರುವವರ ಸಂಖ್ಯೆಯೇ ಹೆಚ್ಚಿದೆ. ಇವೆಲ್ಲವನ್ನೂ ನಾನು ಮಹಿಳಾ ಸಾಹಿತ್ಯಕ್ಕೆ ಮೀಸಲಾತಿ ಬೇಕೆಂಬ ನೆಲೆಯಲ್ಲಿ ಪ್ರಸ್ತಾಪಿಸುತ್ತಿಲ್ಲ. ಇಷ್ಟಾಗಿಯೂ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಛಾಪನ್ನು ಸರಿಸಮಾನವಾಗಿ ಸ್ಥಾಪಿಸಿಕೊಳ್ಳುತ್ತಿರುವ ಮಹಿಳೆಯರು ಅಧಿಕಾರದ ವಿಷಯಕ್ಕೆ ಬಂದಾಗ ಪ್ರಸ್ಥಾಪವೇ ಆಗದಿರುವ ವಿಷಾದದ ಬಗೆಗಷ್ಟೆ ಈ ಮಾತು.
ನಿಜವಾಗಿ ನೋಡಿದರೆ ಇಂಥದೊಂದು ಪ್ರಸ್ತಾಪ ಪುರುಷ ಸಾಹಿತಿಗಳಿಂದಲೇ ಒಕ್ಕೊರಲಿನಿಂದ ಬರಬೇಕಾದುದು ಇಂದಿನ ತುರ್ತು. ಮಹಿಳೆಯೊಬ್ಬರನ್ನು ಕ. ಸಾ. ಪ. ದ ಅಧ್ಯಕ್ಷಸ್ಥಾನದಲ್ಲಿ ಈ ಸಲವಾದರೂ ನಾವು ಕಾಣಬೇಕು ಎಂದು ಎಲ್ಲರಿಗೂ ಅನಿಸಲೇಬೇಕು. ಚುನಾವಣೆಯ ಹಂಗೇಕೆಂದು ಬಲಾವಣೆಗಾಗಿ ಅವಿರೋಧವಾಗಿ ಮಹಿಳಾ ಅಧ್ಯಕ್ಷರನ್ನು ಆರಿಸಬಹುದು. ಒಬ್ಬರಿಗಿಂತ ಹೆಚ್ಚು ಮಹಿಳಾ ಸ್ಪರ್ಧಿಗಳಿದ್ದರೆ ಅದೂ ಒಳಿತೆ. ಚುನಾವಣೆ ನಡೆಯಲಿ. ಮಹಿಳಾ ಸ್ಪರ್ಧಿಗಳ ನಡುವೆ ನಡೆವ ಸ್ಪರ್ಧೆಯಲ್ಲಿ ಆಯ್ಕೆಯಾದವರು ಅಧ್ಯಕ್ಷರಾಗಲಿ. ಶತಮಾನದಿಂದ ನಡೆದು ಬಂದಿರುವ ಗಂಡಾಳ್ವಿಕೆಯನ್ನು ಬಿಡುವುದರಲ್ಲಿರುವ ಸುಖವನ್ನು ನಮ್ಮ ಪುರುಷರು ಒಮ್ಮೆ ಅನುಭವಿಸಲಿ ಎಂಬುದು ನನ್ನಾಸೆ.ಅದರ ಬದಲು ಮಹಿಳೆಯರ ಆಯ್ಕೆಗೆಂದು ಮೀಸಲಾತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ತರುವುದು ಬೇಡ. ಹಾಗೆ ತರಲೇಬೇಕೆಂದಾದಲ್ಲಿ ಅದು ಮೊದಲು ಪ್ರಜಾಪ್ರಭುತ್ವದ ಚುನಾವಣೆಯಲ್ಲಿ ಬರಲಿ.ಪ್ರಜ್ಞಾವಂತರೆಂದು ಜನರಿಂದ ಗುರುತಿಸಲ್ಪಡುವ ಸಾಹಿತ್ಯ ಕ್ಷೇತ್ರವೂ ಯಾಕೆ ಮೀಸಲಾತಿಯ ಹೇರಿಕೆಯಿಂದ ಸಮಾನತೆಯನ್ನು ಸಾಧಿಸಬೇಕು?
ತೀರ ಮುಜುಗರದಿಂದಲೇ ನಾನಿದನ್ನು ಪ್ರಸ್ತಾಪಿಸುತ್ತಿರುವೆ. ಶಾಲಾ, ಕಾಲೇಜುಗಳ ಹಂತದಿಂದ ಹಿಡಿದು ನಡೆಯುವ ಸಭೆ, ಸಮಾರಂಭಗಳನ್ನು ಗಮನಿಸಿದರೂ ಸಾಕು. ಸಾರ್ವಜನಿಕ ಕಾರ್ಯಕ್ರವಗಳಲ್ಲಿ ಸ್ರ್ತೀ ಯರಿಗೆ ನಾವು ಕೊಡುವ ಪ್ರಾಧಾನ್ಯತೆಯ ಅರಿವಾಗುತ್ತದೆ. ಎಲ್ಲೋ ಸಭೆಯ ಮೂಲೆಯಲ್ಲೊಂದು ಕುರ್ಚಿಯಲ್ಲಿ ಮಹಿಳೆಯೊಬ್ಬರು ಕುಳಿತಿದ್ದರೆ ಹೆಚ್ಚು. ನಡುವೆ ಕುಳಿತಿದ್ದಾರೆಂದರೆ ಅದು ಅವರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಸಫಲತೆಯ ಕಾರಣದಿಂದ ಮಾತ್ರ. ಆದರೆ ಸಾಹಿತ್ಯದಂತಹ ಸೃಜನಶೀಲ ಮತ್ತು ಭಿನ್ನ ಶಾಖೆಗಳನ್ನೊಳಗೊಂಡ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದೂ ಅಷ್ಟು ಸಮಂಜಸವೆನಿಸದು. ಬಾಲ್ಯದಿಂದಲೂ ಪುರುಷ ಪ್ರಾಧಾನ್ಯದ ಛತ್ರದಡಿಯಲ್ಲಿಯೇ ಬೆಳೆದು ಬಂದ ನಮ್ಮ ತಲೆಮಾರಿನಲ್ಲಿ ಅಧ್ಯಕ್ಷ ಆಯ್ಕೆಯ ಬಗೆಗೂ ಆಂದೋಲನವೇ ನಡೆಯಬೇಕೇನೊ?ಆಸ್ತಿ ಮತ್ತು ಅಧಿಕಾರ ತಮ್ಮ ಹಕ್ಕು ಎಂಬುದನ್ನು ಮೈಗೂಡಿಸಿಕೊಳ್ಳದ ಈ ತಲೆಮಾರಿನ ಸ್ತ್ರೀ ಯರಿಂದ ಅದನ್ನು ನಿರೀಕ್ಷಿಸುವುದೂ ಅತಿ ಮಹತ್ವಾಕಾಂಕ್ಷೆಯೆನಿಸುತ್ತದೆ. ಆದರೆ ಖಂಡಿತವಾಗಿಯೂ ಕೆಲವು ಪುರುಷರಾದರೂ ಈ ಆಂದೋಲನಕ್ಕೆ ಜೊತೆಯಾಗುವರೆಂಬ ನಿರೀಕ್ಷೆಯೂ ಬೆಳಕಿನ ಕೋಲಿನಂತೆ ಮಿಂಚುತ್ತದೆ.
ಇಂದಿನ ಯುವ ತಲೆಮಾರು ನಿಜಕ್ಕೂ ಲಿಂಗಸೂಕ್ಷ್ಮತೆಯನ್ನು ಹೊಂದಿದೆಯೆಂದು ಪದೇ ಪದೇ ಸಾಬೀತುಗೊಳ್ಳುತ್ತಿದೆ. ತಮ್ಮ ಸಹ ಬರಹಗಾರರನ್ನು ಹೆಣ್ಣು ಗಂಡುಗಳೆಂಬ ಬೇಧವಿಲ್ಲದೇ ಪರಿಗಣಿಸುವ ಮತ್ತು ಅಧಿಕಾರದಿಂದ ಹಿಡಿದು ಎಲ್ಲವನ್ನೂ ಸಮಾನವಾಗಿ ಪ್ರೀತಿಯಿಂದ ಹಂಚಿಕೊಳ್ಳುವ ವಿಶಾಲ ಮನೋಭಾವವನ್ನು ಇಂದಿನ ಯುವ ಸಾಹಿತಿಗಳು ಹೊಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಹೀಗೆಯೇ ಮುಂದುವರೆದಲ್ಲಿ ಕೆಲವೇ ವರ್ಷಗಳಲ್ಲಿ ಸಾಹಿತ್ಯದ ಎಲ್ಲ ಶಕ್ತಿ ಕೇಂದ್ರಗಳಲ್ಲಿ ಲಿಂಗತ್ವದ ಗೆರೆ ಅಳಿಸಿ ಹೋಗಲಿದೆ. ಅದು ಸಂಭವಿಸುವ ಮೊದಲೇ ನಮ್ಮ ತಲೆಮಾರು ಎಚ್ಚೆತ್ತುಕೊಂಡರೆ ಮುಂದಿನ ಪೀಳಿಗೆಗೆ ನಾವು ಮಾರ್ಗದರ್ಶಕರೆನಿಸಿಕೊಳ್ಳುತ್ತೇವೆ. ಏನೇ ಬರೆದರೂ ಅಧಿಕಾರವೆಂಬುವುದು ಅಮಲಾಗಿರುವಾಗ ಅಮಲಿನಲ್ಲಿರುವವರನ್ನು ಎಚ್ಚರಿಸುವುದು ಕಠಿಣ ಕೆಲಸವೆ.
ಮಹಿಳಾ ಶಕ್ತಿಯೆಂಬುದು ಇಂದು ಕಟ್ಟೆಯೊಡೆದ ಪ್ರವಾಹ. ಎಂತಹ ತಡೆಯೇ ಬಂದರೂ ಅದರ ಮುನ್ನುಗ್ಗುವಿಕೆಯನ್ನು ಪ್ರತಿಬಂಧಿಸಲಾಗದು. ಅಧಿಕಾರದ ಚುಕ್ಕಾಣಿ ಹಿಡಿಯಲು ನೀವು ಹೋರಾಡುತ್ತಲೇ ಇರಿ. ನಾವು ಸಾಹಿತ್ಯದ ಹಸಿರುಕ್ಕಿಸುತ್ತಲೇ ಸಾಗುತ್ತೇವೆ. ನಮ್ಮ ತೆಕ್ಕೆಯಲ್ಲಿ ಮುಂದಿನ ಜನಾಂಗವನ್ನು ಕಾಪಿಟ್ಟುಕೊಳ್ಳುತ್ತಲೇ ಅರಿವಿನ ಹಣತೆಯನ್ನು ಬೆಳಗುತ್ತೇವೆ. ಕೈಯಲ್ಲಿ ಬೀಜ ಹಿಡಿದವರಷ್ಟೇ ಕಾಡಿನ ಕನಸು ಕಾಣಬಲ್ಲರು. ಇಂದು ನೀವು ಕೇಳಿದ ಪ್ರಶ್ನೆ ಸ್ವಲ್ಪವೇ ವರ್ಷಗಳಲ್ಲಿ ಉತ್ತರ ಪಡೆದುಕೊಂಡೀತು. ಚುನಾವಣೆಯ ಮೂಲಕವೇ ಅಧ್ಯಕ್ಷ ಸ್ಥಾನ ಮಹಿಳೆಯರಿಗೊಲಿಯಲಿ.
*****************************************
***********************
–
ಬಹಳ ಸತ್ವಯುತವಾದ ಮಾತುಗಳು ಸುಧಾ ಅವರೆ. ಬಾಯಿಯಿಂದ ಏನೆಲ್ಲಾ ಜೇನು ಸುರಿಸಿದರೂ ಸ್ಥಾನ ಪದವಿ ಎಂದು ಕೂಡಲೇ ಗಂಡಸರು ಒಟ್ಟಾಗಿ ಬಿಡುತ್ತಾರೆ. ಏನೇ ಪ್ರತಿಭೆಯಿದ್ದರೂ ಆಕೆ ಕೇವಲ ಅಲಂಕಾರಿಕ ಮಾತ್ರ ಎನ್ನುವಲ್ಲಿಗೆ ಮುಗಿಸಿ ಬಿಡುತ್ತಾರೆ.
ಕಾದಿದ್ದು , ಕೇಳಿದ್ದು ಸಾಕು. ಆಗ್ರಹಿಸಿ ಮಾತ್ರ ಪಡೆಯ ಬಹುದೇನೋ.
ಧನ್ಯವಾದಗಳು
ಬಹಳ ಅರ್ಥಗರ್ಭಿತ.ನಿಮ್ಮ ಮಕ್ಕಳು ಅನ್ಯಧರ್ಮೀಯರಿಗೆ ಮದುವೆ ಮಾಡಿಸಿ ಆದರ್ಶ ತೆರೆಯಿರಿ.