ಡಾ.ಪಾರ್ವತಿ ಜಿ.ಐತಾಳ್ ಅವರು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಈ ಅಂಕಣದಲ್ಲಿ ಅನ್ಯವಾಷೆಗಳಿಂದ ಕನ್ನಡಕ್ಕೆಅನುವಾದಗೊಂಡ ಕೃತಿಗಳ ಓದಿಗೆ ಪೂರಕವಾಗಿ ಅವುಗಳ ಪರಿಚಯ ಮಾಡಿಕೊಡಲಿದ್ದಾರೆ

ಕೊಸಿಮೊ

ಕೊಸಿಮೊ ( ಕಾದಂಬರಿ)
ಮೂಲ : ಇಟಾಲೋ ಕಾಲ್ವಿನೊ
ಕನ್ನಡಕ್ಕೆ : ಕೆ.ಪಿ.ಸುರೇಶ
ಪ್ರ : ಅಭಿನವ
ಪ್ರಕಟಣೆಯ ವರ್ಷ : ೨೦೦೮
ಬೆಲೆ : ರೂ.೧೦೦ ಪುಟಗಳು : ೨೧೬

ಜಗತ್ಪ್ರಸಿದ್ದ  ಲೇಖಕ ಇಟಾಲೋ ಕಾಲ್ವಿನೋ ಅವರ  ಕಾದಂಬರಿಯ ಇಂಗ್ಲಿಷ್ ಅನುವಾದ ‘ದಿ ಬ್ಯಾರನ್ ಇನ್ ದ ಟ್ರೀಸ್’ ಇದನ್ನು ಸುರೇಶ್ ಅವರು ‘ಕೊಸಿಮೋ’ಎಂಬ ಅದರ ನಾಯಕನ ಹೆಸರಿನ ಶೀರ್ಷಿಕೆಯಿಂದ ಅನುವಾದಿಸಿದ್ದಾರೆ. ಬಹಳ ವಿಶಿಷ್ಟವಾದ ಒಂದು ಕಥಾವಸ್ತುವನ್ನು ಹೊಂದಿದ ಕಾದಂಬರಿಯಿದು.  ಮಹಾ ಛಲವಾದಿ ಕೊಸಿಮೊ ತನ್ನ ಹನ್ನೆರಡನೆಯ ವಯಸ್ಸಿನಲ್ಲೇ ಯಾವುದೋ ಕಾರಣಕ್ಕೆ ತಂದೆಯ ಮೇಲೆ ಮುನಿಸಿಕೊಂಡು ಮರವೇರಿ ಕುಳಿತು, ಇನ್ನು ಮುಂದೆ ಎಂದಿಗೂ ನೆಲದ ಮೇಲೆ ಕಾಲಿಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದವನು ಕೊನೆಯ ತನಕವೂ ತನ್ನ ಮಾತನ್ನು ಉಳಿಸಿಕೊಳ್ಳುತ್ತಾನೆ.  ಮನುಷ್ಯನೊಬ್ಬ ನೆಲದ ವ್ಯವಹಾರಗಳನ್ನು ಪೂರ್ತಿಯಾಗಿ ಬಿಟ್ಟು  ಮರದ ಮೇಲೆಯೇ, ನಿಸರ್ಗದ ಒಂದು ಅವಿಭಾಜ್ಯ ಅಂಗವಾಗಿ ಹೇಗೆ ಯಶಸ್ವಿಯಾಗಿ ಬದುಕಲು ಸಾಧ್ಯವೆಂಬುದನ್ನು ಈ ಕಥೆ ತೋರಿಸಿ ಕೊಡುತ್ತದೆ.

ಕೊಸಿಮೊ ಹುಟ್ಟಿದ್ದು ಪ್ರತಿಷ್ಠಿತ ಜಮೀನ್ದಾರಿ ಕುಟುಂಬದಲ್ಲಿ. ಅಧಿಕಾರ-ಪ್ರತಿಷ್ಠೆಗಳೇ ಮುಖ್ಯವೆಂದು ತಿಳಿದುಕೊಂಡ ತಂದೆಯ ಅಹಂಕಾರವನ್ನು ಮೆಟ್ಟಿ ಮೇಲೇರಿ ನಿಂತು, ಬಡವರ ಬಂಧುವಾಗಿ, ಅಸಹಾಯಕರಿಗೆ ಸಹಾಯ ಮಾಡುತ್ತ ಆಕಾಶದೆತ್ತರಕ್ಕೆ ಬೆಳೆಯುವ ಕೊಸಿಮೋನ ಬದುಕಿನ ಕಥೆ ಬಹಳ ರೋಮಾಂಚಕ. ಮರದ ಮೇಲಿನ ಮನುಷ್ಯನೆಂದು ಇಡಿಯ ಭೂಖಂಡದಲ್ಲಿ ಪ್ರಸಿದ್ಧಿ ಪಡೆಯುವ ಕೊಸಿಮೊ ಎಂದರೆ ಆತನ ತಮ್ಮ ( ಈ ಕಥೆಯ ನಿರೂಪಕ) ನಿಗೂ ಎಲ್ಲಿಲ್ಲದ ಹೆಮ್ಮೆ.

ತಮ್ಮನ ಸಹಾಯದಿಂದ ಮರದ ಮೇಲಿನ ಬದುಕಿಗೆ ಎಲ್ಲ ಸೌಕರ್ಯಗಳನ್ನು ಮಾಡಿಕೊಳ್ಳುವ ಕೊಸಿಮೊ ಮರದಿಂದ ಮರಕ್ಕೆ ಕೋತಿಯಂತೆ ಹಾರುತ್ತ, ನೇತಾಡುತ್ತ ಸರಾಗವಾಗಿ  ಓಡಾಡುತ್ತ, ದೂರಗಳನ್ನು ಕ್ರಮಿಸಲು ಕಲಿಯುವುದೇ ಒಂದು ಸೋಜಿಗ. ನೆಲವನ್ನು ಮುಟ್ಟಲು ಬಂದೂಕು-ಕಠಾರಿಗಳನ್ನು ಹಿಡಿದು ಯುದ್ಧವನ್ನೂ ಮಾಡಬಲ್ಲ, ಎದುರಾಳಿಗಳನ್ನು ಕಾಳಗದಲ್ಲಿ ಸೋಲಿಸ ಬಲ್ಲ ಆತನ ಧೈರ್ಯ-ಸಾಹಸ-ಸಾಮರ್ಥ್ಯಗಳು ಬೆರಗು ಹುಟ್ಟಿಸುತ್ತವೆ.  ಆತನಿಂದ ಆಕರ್ಷಿತರಾಗುವ ಅನೇಕ ಹೆಣ್ಣುಮಕ್ಕಳೊಂದಿಗೆ ಪ್ರಣಯದ ಅನುಭವಗಳನ್ನೂ ಕೊಸಿಮೊ ಪಡೆಯುತ್ತಾನೆ. ಸಂಸಾರ ಸುಖವೊಂದನ್ನು ಬಿಟ್ಟರೆ  ನೆಲದ ಮೇಲಿನ ಮನುಷ್ಯರಷ್ಟೇ ಸುಖ ಪಡೆದು, ಮಾತ್ರವಲ್ಲ, ಸಾಮಾನ್ಯ ಮನುಷ್ಯರಿಗಿಂತ ಹೆಚ್ಚಿನ ಸಾಧನೆಗಳನ್ನು ಅವನು ಮಾಡುತ್ತಾನೆ. ಒಂದಾದ ನಂತರ ಇನ್ನೊಂದರಂತೆ ವಿವಿಧ ವಿಷಯಗಳಿಗೆ ಸಂಬಂಧ ಪಟ್ಟ ಪುಸ್ತಕಗಳನ್ನೂಓದುವ ಕೊಸಿಮೊ ಮಹಾಜ್ಞಾನಿಯೂ ಆಗುತ್ತಾನೆ. ತನ್ನ ಓದಿನ ಹುಚ್ಚನ್ನು ಕುಪ್ರಸಿದ್ಧನಾದ ಒಬ್ಬ ದರೋಡೆಕೋರನಿಗೂ ಅಂಟಿಸಿ ಅವನನ್ನೊಬ್ಬ ಒಳ್ಳೆಯ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತಾನೆ.  ಆದರ್ಶ ರಾಜ್ಯವೆನಿಸಿದ ಯುಟೋಪಿಯಾವನ್ನು ಪುನರ್ನಿರ್ಮಿಸುವ ಪ್ರಯತ್ನವನ್ನು ಇಟಾಲೋ ಕಾಲ್ವಿನೋ ಇಲ್ಲಿ ಮಾಡುತ್ತಾರೆ. ಆದ್ಯಕಾಲದ ಇಂಗ್ಲಿಷ್ ಕಾದಂಬರಿಕಾರರಾದ ರಿಚರ್ಡ್ಸನ್ ಮತ್ತು ಫೀಲ್ಡಿಂಗರ ನೈತಿಕತೆ ಮೇಲೆ ಒತ್ತುನೀಡುವ ಕಾದಂಬರಿಗಳ ನಾಜೂಕಾದ ಅಣಕವೂ ಇಲ್ಲಿದೆ. ಒಟ್ಟಿನಲ್ಲಿ ಕೊಸಿಮೊನ ಕಥೆ  ಒಂದು ರೀತಿಯ ಫ್ಯಾಂಟಸಿ ಶೈಲಿಯಲ್ಲಿ  ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.

 ಕೆ.ಪಿ.ಸುರೇಶ ಅವರು ಕಾದಂಬರಿಯನ್ನು ಬಹಳ ಸುಂದರವಾಗಿ ಅನುವಾದಿಸಿದ್ದಾರೆ.  ಅವರ ಭಾಷಾ ಶೈಲಿ, ವಾಕ್ಯ ಸರಣಿ, ಪದಬಳಕೆಗಳಲ್ಲಿ ಕನ್ನಡದ ಸಹಜತೆ ಬಹಳ ಆಪ್ಯಾಯಮಾನವಾಗಿ ಮೂಡಿ ಬಂದಿದೆ.

**********************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Leave a Reply

Back To Top