ಕವಿತೆ
ದೇವರ ಲೀಲೆ
ಬಾಪು ಖಾಡೆ

ನೀಲಿಯ ಹಾಳೆಗೆ ಚಿತ್ರವ ಬರೆದು
ಮೇಲಕೆ ಎಸೆದಿರುವೆ
ಶಿವನೇ ಮೇಲಕೆ ಎಸೆದಿರುವೆ
ಮೂಡಣ ರವಿಗೂ ಹುಣ್ಣಿಮೆ ಶಶಿಗೂ
ಸ್ನೇಹವ ಬೆಸೆದಿರುವೆ
ಬೆಳಕಿನ ಸ್ನೇಹವ ಬೆಸೆದಿರುವೆ
ತುಂಬಿದ ಅಂಬುಧಿ ಅಲೆಗಳ ಮೇಲೆ
ನರ್ತನ ನಡೆಸಿರುವೆ
ಹರನೇ ನರ್ತನ ನಡೆಸಿರುವೆ
ಹಕ್ಕಿಯ ಹಿಂಡಿನ ಮೆತ್ತನೆ ಮೈಗೆ
ಅಂಗಿಯ ತೊಡಿಸಿರುವೆ
ರಂಗಿನ ಅಂಗಿಯ ತೊಡಿಸಿರುವೆ

ಬಳುಕುವ ಬಳ್ಳಿಗೆ ಬಣ್ಣದ ಹೂಗಳ
ಚಿತ್ರವ ಬಿಡಿಸಿರುವೆ
ಚಂದದ ಚಿತ್ರವ ಬಿಡಿಸಿರುವೆ
ಕೋಗಿಲೆ ಕಂಠದಿ ಕಾಣದೆ ಕುಳಿತು
ವೀಣೆಯ ನುಡಿಸಿರುವೆ
ಚೈತ್ರದ ವೀಣೆಯ ನುಡಿಸಿರುವೆ
ಎಲ್ಲೊ ಅವಿತು ಸೋಲು-ಗೆಲುವಿನ
ಸೂತ್ರವ ಹಿಡಿದಿರುವೆ
ಜೀವನ ಸೂತ್ರವ ಹಿಡಿದಿರುವೆ
ನಾಟಕವಾಡಿ ಪಾತ್ರವ ಮುಗಿಯಲು
ಪರದೆಯ ಸರಿಸಿರುವೆ
ಅಂಕದ ಪರದೆಯ ಸರಿಸಿರುವೆ
***********************************