ಅಮ್ಮನ ಸೆರಗ ಬಿಡಿಸಿದ ಬೆರಳುಗಳು

ಅಮ್ಮನ ಸೆರಗ ಬಿಡಿಸಿದ ಬೆರಳುಗಳು

ಶಿಶುವಿಹಾರ ಮತ್ತು ಅಂಗನವಾಡಿಗಳ ಅಮ್ಮನಂತಹ

ಶಿಕ್ಷಕಿಯರಿಗೊಂದು ಸೆಲ್ಯೂಟ್

Women's care responsibilities | IDRC - International Development Research  Centre

ಪ್ರಜ್ಞಾ ಮತ್ತಿಹಳ್ಳಿ

ಎಳೆಬಿಸಿಲು ಹಾಕಿದ ರಂಗೋಲಿಯ ಚಿತ್ತಾರಗಳು ಅಂಗಳ ತುಂಬಿದ ಹೂಬಳ್ಳಿಗಳೊಂದಿಗೆ ಪೈಪೋಟಿಗಿಳಿದಿದ್ದಾವೆ. ಎಸಳು ಮೊಗ್ಗಿನಂತಹ ಪುಟಾಣಿಗಳ ದಂಡೊಂದು ಗೇಟಿನ ಬಳಿ ಬಂದು ರಾಗವಾಗಿ ಕರೆಯುತ್ತಿದೆ. “ಪುಟ್ಟೂ ಶಾಲೀಗ್ ಬಾ” ನಿದ್ದೆ ಬಿಟ್ಟೇಳದ ಕಣ್ಣಿನ ಮಗುವೊಂದನ್ನು ಅಳುವಿನ ರಾಗಾಲಾಪದ ಹಿನ್ನೆಲೆ ಸಂಗೀತದೊಂದಿಗೆ ಎತ್ತಿಕೊಂಡು ತಂದರು. “ಯಾಕೆ ಅಳೂದ್ಯಾಕೆ? ಜಾಣಲ್ಲ ನೀನು” ಎನ್ನುತ್ತ ಅಮ್ಮನ ಸೆರಗ ಬಿಗಿಯಾಗಿ ಹಿಡಿದುಕೊಂಡ ಬೆರಳುಗಳ ಮೆತ್ತಗೆ ಬಿಡಿಸುತ್ತ ಪುಸಲಾಯಿಸುವ ಮಾತುಗಳಿಂದ ಸಂತೈಸುತ್ತ ಹೊರಟವರು ಅಮ್ಮನಲ್ಲದ ಆದರೆ ಅಮ್ಮನಂತೆಯೇ ಇರುವ ಅಕ್ಕೋರು. (ಟೀಚರು)

ಶಾಲೆಯ ಬಾಗಿಲ ಬೀಗ ತೆಗೆದು ಚಿಲಿಪಿಲಿ ಹಿಂಡನ್ನು ಒಳಗೆ ಸಾಲಾಗಿ ಕೂರಿಸಿ, ಏರುದನಿಯಲ್ಲಿ ಅವರನ್ನೆಲ್ಲ ನಿಯಂತ್ರಿಸುತ್ತ, ಅಳುವ ಕೂಸುಗಳ ಎತ್ತಿಕೊಳ್ಳುತ್ತ, ಪುಂಡಾಟದವರ ಗದರಿಸುತ್ತ, ತಮ್ಮ ತಾಯಂದಿರಿಂದ ಸಂಭಾಳಿಸಲಾಗದೇ ಅವರನ್ನು ಸುಸ್ತು ಮಾಡುವ ಪ್ರತಿ ಮನೆಯ ಮುದ್ದು ರಕ್ಕಸರನ್ನು ಒತ್ತಟ್ಟಿಗೆ ಸೇರಿಸಿಕೊಂಡು ಬಾಲವಾಡಿ ಅಥವಾ ಶಿಶು ವಿಹಾರ ಎಂಬ ಚಿಲಿಪಿಲಿ ಕೇಂದ್ರ ನಡೆಸುವ ಸಹನೆಯ ಕಡಲೊಡತಿಯರಿಗೆ ಎಲ್ಲ ಮುದ್ದು ಮಕ್ಕಳ ವತಿಯಿಂದ ಹಾಗೂ ಪಾಲಕರ ವತಿಯಿಂದ ಶಿಕ್ಷಕರ ದಿನದ ಶುಭಾಶಯಗಳು.

ಹೂಹೂವಿನ ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ನೀಲಿಚುಕ್ಕೆಯ ಬಳೆಗಳನ್ನು ಹಿಂದಕ್ಕೆ ಸರಿಸಿ ಕೈ ತಿರುಗಿಸುತ್ತ ಏರುದನಿಯಲ್ಲಿ ರಾಗವಾಗಿ ಹಾಡುತ್ತಿದ್ದಾರೆ. ಅಳು, ಗದ್ದಲ, ಕೇಕೆ ನಇಲ್ಲಿಸಿದ ಕಂದಮ್ಮಗಳು ಮಂತ್ರದ ಮೋಡಿಗೆ ಸಿಕ್ಕಿದ ಹಾವುಗಳಂತೆ ಬಟ್ಟಲು ಕಣ್ಣರಳಿಸಿ ತಾವೂ ಹಾಡುತ್ತಿವೆ. “ಪೊಂ ಪೊಂ ಗಾಡಿ, ಯಾರು ಬಂದಾರವ್ವ, ಮಾಮಾ ಬಂದಾನವ್ವ, ಏನ್ ತಂದಾನವ್ವ, ಹಂಡಿಯಂಥ ಹೊಟ್ಟೆ ಬಿಟ್ಕೊಂಡು ಹಾಂಗ ಬಂದಾನವ್ವ” ಹೊಟ್ಟೆಯ ಅಭಿನಯ ಮಾಡುವಾಗ ತರಗತಿಯಿಡೀ ಕ್ಕಿಕ್ಕಿಕ್ಕಿ ನಗೆಯ ಕಡಲಲ್ಲಿ ತೇಲುತ್ತದೆ. ಹಾಡುಗಳು ಹಾಗೆಯೇ ಅವ್ಯಾಹತವಾಗಿ ಮುಂದುವರೆಯುತ್ತವೆ. “ಬಾ ಬಾರೆ ಕಂದ ಬಾರೆ ಸುನಂದ ಬೇಸರ ಬಂದೈತಿ ಆಡೋಣ” ಹಾಡಿನ ಹಾದಿ ಹಿಡಿದು ಹೊರಟ ಹಸುಮನಸುಗಳೆಲ್ಲ ಮನೆ, ಅಳು, ರಗಳೆ ಮರೆತು ತರಗತಿಯಿಡೀ ಒಂದೇ ಶೃತಿಗೆ ಹದಗೊಂಡಾದ ಮೇಲೆ ಶುರುವಾಗುತ್ತದೆ “ಅ ಅಗಸ, ಆ ಆನೆ, ಇ ಇಲಿ” ಅದರ ಜೊತೆಗೆ ಒಂದು ಎರಡು ಬಾಳೆಲೆ ಹರಡು ಎಂಬ ಒಕ್ಕೊರಲಿನ ರಾಗ ಕೇಳಿದೊಡನೆ ರಸ್ತೆಯಲ್ಲಿ ಹೊರಟವರು ಕೂಡ ಒಮ್ಮೆ ತಿರುಗಿ ನೋಡುತ್ತಾರೆ. ಹೊತ್ತು ಮದ್ಯಾಹ್ನಕ್ಕೆ ತಿರುಗಿದ್ದೇ ತಿಂಡಿಯ ಸಮಯ. ಎಳೆ ಬಾಳೆ ಸುಳಿಯಂತಹ ಕೈಗಳಿಂದ ಉಪ್ಪಿಟ್ಟು, ದೋಸೆ ತಿನ್ನಲು ನೆರವಾಗುತ್ತಾರೆ ಟೀಚರ್. ಡಬ್ಬಿಯ ಮುಚ್ಚಳ ತೆಗೆದು ಕೊಡಬೇಕು. ಟಣ್ಣನೆ ಡಬ್ಬಿ ಬೀಳಿಸಿಕೊಂಡವರಿಗೆ ಎತ್ತಿ ಕೊಡಬೇಕು. ಒಂದು ಮಗುವಿಗೆ ತಿನ್ನಿಸಿ, ಒಂದಕ್ಕೆ ಬಾಯಿ ಒರೆಸಿ, ಇನ್ನೊಂದಕ್ಕೆ ಕೈ ತೊಳೆಸಿ ಮುಗಿಸುವುದರಲ್ಲಿ ಶುರುವಾಗುತ್ತದೆ ಒಂದಕ್ಕೆ ಕಾರ್ಯಕ್ರಮ. ಮತ್ತೆ ಟೀಚರ್ ಓಡಬೇಕು. ಗುಂಡಿ ಬಿಚ್ಚಿಕೊಡು, ಲಾಡಿ ಕಟ್ಟಿಕೊಡು ಇತ್ಯಾದಿ. ಅಷ್ಟರಲ್ಲಿ ಅವನು ಬಿದ್ದ, ಇವನು ಹೊಡೆದ ಇತ್ಯಾದಿ ಜಗಳ-ರಗಳೆಗಳು ಶುರು. ಯಾಕೆಂದು ಕಾರಣವೇ ಗೊತ್ತಿಲ್ಲದೇ ಒಂದು ಅಳುತ್ತದೆ, ಒಂದು ಕೂಗುತ್ತದೆ. ಚೈತ್ರ ಮಾಸದ ಮಾಮರದಂತೆ ಸದಾ ಸದ್ದಿನ ಜಾತ್ರೆ ತುಂಬಿದ ಸ್ವರ್ಗದ ತುಣುಕು ಈ ಶಿಶುವಿಹಾರ.

ಅವರ ಕೈ ಹಿಡಿದು ಅಳುತ್ತ ಅಂಗಳ ಇಳಿದ ಚಿಣ್ಣರೆಲ್ಲ ಅರಿವಿನ ಅರಮನೆಯ ನೂರು ಬಾಗಿಲುಗಳ ಬೀಗ ತೆರೆದು ಜ್ಞಾನದಾರೋಗಣೆಯಲ್ಲಿ ಸೀಕರಣೆ ಸುರಿದುಂಡು ದೊಡ್ಡ ಹುದ್ದೆಗಳ ಹೂ ಮಾಲೆಗೆ ಕೊರಳೊಡ್ಡಿದ್ದಾರೆ. ಅವರ ಮಾನ-ಸನ್ಮಾನದ ಕ್ಷಣಗಳಲ್ಲಿ ತಪ್ಪದೇ ಹೆತ್ತವರ ಹೆಸರು ಹೇಳಿ, ಕಾಲಿಗೆರಗಿ, ಗದ್ಗದಗೊಳಿಸಿ ಪಿತೃಋಣ ತೀರಿಸಿದ್ದಾರೆ. ರ್ಯಾಂಕು-ಮೆಡಲು ಹಿಡಿದುಕೊಂಡಾಗಲೆಲ್ಲ ನನಗೆ ಲೆಕ್ಕ ಕಲಿಸಿದವರು, ಸಾಹಿತ್ಯ ಓದಿಸಿದವರು ಅಂತ ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಕರ ಹೆಸರು ಹೇಳಿ ಪುಳಕಗೊಳಿಸಿ ಗುರುಋಣವನ್ನೂ ತೀರಿಸಿದ್ದಾರೆ. ಆದರೆ ತೀರಾ ಚಿಕ್ಕ ವಯಸ್ಸಿನಲ್ಲಿ ಎಲ್ಲವೂ ಮಂಜು ಮುಸುಕಿದಂತಹ ಬಾಲ್ಯದಲ್ಲಿ ನಡೆದದ್ದು ಯಾರಿಗೂ ನೆನಪಿರುವುದಿಲ್ಲ. ಆ ನಂತರ ನಮ್ಮ ತಂದೆ-ತಾಯಿಗಳು ನೀನು ಚಿಕ್ಕವನಿದ್ದಾ ಹಾಗಿದ್ದಿ, ಹೀಗಿದ್ದಿ ಅಂತೆಲ್ಲ ಹೇಳಿದ ಕತೆಗಳಿಂದ ನಮ್ಮ ನಸ್ಮರಣೆಯ ಜಗತ್ತು ತುಂಬಿಕೊಳ್ಳುವಾಗ ಈ ಬಡಪಾಯಿ ಶಿಶುವಿಹಾರದ ಶಿಕ್ಷಕಿಗೆ ಯಾವ ಪಾತ್ರವೂ ಇರುವುದಿಲ್ಲ. ಪಾಪ ಇವರೆಲ್ಲ ಸರ್ಕಾರಿ ನಿಯುಕ್ತಿ-ಸಂಬಳ-ಸವಲತ್ತುಗಳನ್ನು ಕಂಡವರಲ್ಲ. ಹೆಚ್ಚಿನ ವಿದ್ಯೆಯೂ ಇಲ್ಲದ, ದೊಡ್ಡ ಕನಸುಗಳೂ ಇಲ್ಲದ ಈ ಬಡಜೀವಿಗಳು ಯಾರಿಂದ ಏನನ್ನೂ ನಿರೀಕ್ಷಿಸದೇ ತಮ್ಮ ಹೊಟ್ಟೆಪಾಡಿನ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿರುತ್ತಾರೆ. ಶಿಕ್ಷಕ ದಿನಾಚರಣೆಯಾಗಲೀ, ಶಿಕ್ಷಣ ಇಲಾಖೆ ಕೊಡುವ ಆದರ್ಶ ಶಿಕ್ಷಕ ಪ್ರಶಸ್ತಿಯಾಗಲೀ ಇವರಿಗೆ ಬಾನೆತ್ತರದ ನಕ್ಷತ್ರ. ತಮ್ಮ ಎದುರಿಗಿನ ಮಗುವಿನಿಂದಲೂ ಇವರು ಒಂದು ದಿನವೂ ನಮಸ್ತೆ ಟೀಚರ್ ಅಂತ ಅನ್ನಿಸಿಕೊಂಡಿರುವುದಿಲ್ಲ. ಸರಿಯಾಗಿ ಮಾತಾಡಲು ಬರದಿರುವ ವಯಸ್ಸಿನಲ್ಲಿ ಎತ್ತಿ ಆಡಿಸಿದ ಈ ಅಮ್ಮನಲ್ಲದ ಅಮ್ಮಂದಿರನ್ನು ಯಾರು ಎಷ್ಟು ನೆನಪಿಟ್ಟುಕೊಂಡಿರುತ್ತಾರೆ? ಪೊಮೊಶನ್, ಟ್ರಾನ್ಸಫರ್ ಇಂತಹುದು ಏನೊಂದೂ ಇಲ್ಲದ ಅವರು ಅದೇ ನಾಲ್ಕು ಗೋಡೆಗಳ ನಡುವೆ ಚಿಣ್ಣರೆದುರು ಕುಣಿಯುತ್ತಲೇ ಮುದುಕರಾಗುತ್ತಾರೆ. ಕೆಲವು ಕಡೆ ತಾಯಿಗೆ ಕಲಿಸಿದ ಟೀಚರ್ ಮಗಳಿಗೂ ಕಲಿಸುತ್ತಾರೆ. ಅಲ್ಪ ಸಂಬಳದ, ಸವಲತ್ತು ರಹಿತ ಟೀಚರು ಅಕ್ಕರೆಯಿಂದ ಕೈ ಹಿಡಿದು ಅಕ್ಷರ ಜಗತ್ತಿಗೆ ನಮ್ಮನ್ನು ಪರಿಚಯಿಸಿದ ಜಾಗ ನಮ್ಮ ಸ್ಮರಣೆಯಲ್ಲೇ ಇರುವುದಿಲ್ಲ. ತಮ್ಮ ತಾಯಂದಿರ ಸೆರಗಲ್ಲಿ ಮುಖ ಮರೆಸಿಕೊಂಡ ಮಗುವನ್ನು ಹಗೂರಕೆ ಎತ್ತಿಕೊಂಡು ಹಾಡು, ಹಕ್ಕಿ, ಆಟ, ಪಾಠಗಳ ಕಲಿಕೆಯ ರುಚಿ ತೋರಿಸುತ್ತ ಬೆಳವಣಿಗೆ ದಾರಿಯಲ್ಲಿ ಮೊದಲ ಹೆಜ್ಜೆ ಹಾಕಿಸಿದ ತಾಣವಿದು. ಅಮ್ಮನ ಸೆರಗಿನಾಚೆಗೂ ಒಂದು ಜಗತ್ತಿರುತ್ತದೆ ಎಂಬ ಸತ್ಯವನ್ನು ಅರಿವಿನ ಆಲ್ಬಂ ದಲ್ಲಿ ಮೂಡಿಸಿದ ಜಾಗ. ಇಲ್ಲಿ ಅತ್ತು ಇವರ ಸೆರಗಲ್ಲಿ ಕಣ್ಣೊರೆಸಿಕೊಂಡ ಮಗು ಶಾಲೆ-ಕಾಲೇಜು-ವಿಶ್ವವಿದ್ಯಾಲಯ ಎಂದು ಆಕಾಶದ ಅನಂತದಲ್ಲಿ ಹಾರಾಡುತ್ತಿದ್ದರೆ ಈ ಟೀಚರ್ ಇನ್ನೂ ಇಲ್ಲೇ ಬಾ ಬಾ ಗಿಳಿಯೇ ಬಣ್ಣದ ಗಿಳಿಯೇ ಎಂದು ಕುಣಿಯುತ್ತಿದ್ದಾರೆ. ಅಳುವ ಕಂದನನ್ನು ಸೊಂಟಕ್ಕೆ ಸಿಗಿಸಿಕೊಂಡು ಗೇಟಿನ ಹತ್ತಿರ ಕರೆಯುತ್ತಿದ್ದಾರೆ. “ಬಾರೆ ಪುಟ್ಟೂ, ಶಾಲೆಗೆ ಹೋಗ್ವಾ” ಶಿಕ್ಷಕರ ಸ್ನ್ಮಾನ ಪಟ್ಟಿಯಲ್ಲಿ ಹೆಸರೇ ಇಲ್ಲದ ಆ ಎಲ್ಲ ಮುಗ್ಧ ಅಮ್ಮನಂತಹ ಶಿಕ್ಷಕಿಯರಿಗೆ ಹೃದಯ ತುಂಬಿದ ಅಕ್ಷರ ನಮನಗಳು.

**********************************

2 thoughts on “ಅಮ್ಮನ ಸೆರಗ ಬಿಡಿಸಿದ ಬೆರಳುಗಳು

Leave a Reply

Back To Top