ಶಿಕ್ಷಣ

ಶಿಕ್ಷಣದ ಸವಾಲುಗಳ ಬೆಟ್ಟು ಯಾರ ಕಡೆಗೆ?

ಶೃತಿ ಮೇಲಿಸೀಮೆ

ಶಿಕ್ಷಣ ಎನ್ನುವುದು ಸಾಮಾಜಿಕ ಸಂರಚನೆಯಲ್ಲಿ ಮಹತ್ವದ ಪರಿವರ್ತನೆ ತರುವ ದಿವ್ಯಾಸ್ತ್ರವಾಗಿದೆ. ಈ ಶಿಕ್ಷಣವು ಮುಂದಿನ ಪೀಳಿಗೆಗೆ ಹಿಂದಿನ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ವಾಸ್ತವಿಕ ಮಾಹಿತಿಗಳನ್ನು ನೀಡುತ್ತಾ, ಯುವ ಪೀಳಿಗೆಯಲ್ಲಿ ಉತ್ತಮ ಆಲೋಚನೆ, ಭಾವನೆ, ನಿರಂತರತೆಯನ್ನು ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊತ್ತಿದೆ.

ಪೂರ್ವ ಭಾರತದಲ್ಲಿ ವಿದ್ಯಾವಂತರಿಗಿಂತ ಹೆಚ್ಚಾಗಿ ಜ್ಞಾನವಂತರು,ಸುಶಿಕ್ಷಿತರು ಇದ್ದರು. ಪ್ರಸ್ತುತ ಎಷ್ಟೇ ಪದವಿಗಳನ್ನು ಹೊತ್ತಿದ್ದರೂ ಅವರು ಪಡೆದ ವಿದ್ಯೆ ಅವರಿಗೆ ವಿನಯವನ್ನು ನೀಡುತ್ತಿಲ್ಲ .

‘ಶಿಕ್ಷಣ’ ಎಂದರೇನು? ಬೀದಿಗೊಂದು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಕಡ್ಡಾಯ ಶಿಕ್ಷಣವೆಂದು ಶಿಕ್ಷಣ ಕಲಿಯುವವರ ಪ್ರಮಾಣ ಹೆಚ್ಚಿಸಿ, ಹಣವನ್ನು ಕಿತ್ತು ಮಾರ್ಕ್ಸ್ ಕಾರ್ಡನಲ್ಲಿ ಡಿಗ್ರಿಗಳನ್ನು ಕೊಟ್ಟು ,ಸಂಬಳಕ್ಕಾಗಿ ವೃತ್ತಿ ಪಡೆಯುವಷ್ಟು ಸಾಕ್ಷರರನ್ನಾಗಿ ಮಾಡುವುದೇ? ಇಲ್ಲಾ ಅಲ್ಲವೇ ? ಯುವ ಪೀಳಿಗೆಯನ್ನು ವಿದ್ಯಾವಂತರಾಗಿಸುವ ಜೊತೆಗೆ ಜ್ವಲಂತ ಸವಾಲುಗಳನ್ನು ಅರಿತು, ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು,ಒದಗಿದ ಸವಾಲುಗಳನ್ನು ಎದುರಿಸಲು ಅನುವಾಗುವ ಸಂರಕ್ಷಣಾತ್ಮಕವಾದ ಜ್ಞಾನವನ್ನೂ, ವಿಚಾರವಂತಿಕೆಯನ್ನು ಬೆಳೆಸುವುದಾಗಿದೆ.

ಆಗಿನ ಗುರುಕುಲ ಪದ್ದತಿಯು ಶಿಕ್ಷಣಕ್ಕಿಂತ ಇಂದಿನ ಶಿಕ್ಷಣವು ವ್ಯಾಪಕವಾಗಿ ಬೆಳದಿದೆ. ಈ ವ್ಯಾಪಕತೆ ಅವ್ಯವಸ್ಥಿತವಾಗಿ ತನ್ನ ರೆಂಬೆ ಕೊಂಬೆಗಳನ್ನು ಚಾಚಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಸವಾಲುಗಳು ನಮ್ಮೆದುರು ನಾಯಿಕೊಡೆಯಂತೆ ಬೆಳೆಯುತ್ತಿವೆ. ಶಿಕ್ಷಣ ವ್ಯವಸ್ಥೆಯು ಎದುರಿಸುತ್ತಿರುವ ಸವಾಲುಗಳಿಗೆ ಸರ್ಜರಿ ಮಾಡಲೇ ಬೇಕಾದ ತುರ್ತು ಇದೆ.

ಯಾವುದೇ ಶಾಲೆಯಿರಲಿ ಅಲ್ಲಿರುವ ಮೂಲ ಸೌಲಭ್ಯಗಳನ್ನು ಹೇಗೆ ಉಪಯೋಗಿಸಿಕೊಳ್ಳಲಾಗಿದೆ,ಅವುಗಳ ಬಳಕೆಯನ್ನು ದಿನನಿತ್ಯದ ಬದುಕಲ್ಲಿ ಹೇಗೆ ಮಕ್ಕಳಲ್ಲಿ ರೂಢಿಸಿಕೊಳ್ಳಲಾಗಿದೆ ಎಂಬುದು ಮುಖ್ಯ. ಕೆಲವು ಕಡೆ ಕುಡಿಯುವ ನೀರಿನ ಸೌಲಭ್ಯಗಳಿದ್ದರೂ,ನೀರಿನ ಟ್ಯಾಂಕುಗಳಿದ್ದರೂ,ಅವುಗಳ ಶುದ್ಧತೆ ಎಷ್ಟರಮಟ್ಟಿಗಿದೆ? ಶಾಲೆಗೆ ಕಾಂಪೋಂಡ್ ಇದ್ದರಾಯಿತೇ!? ಆಟದ ಮೈದಾನ ವಿದ್ದರಾಯಿತೇ? ಕೇವಲ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದು ಬೆಟ್ಟು ಮಾಡಿದರೆ ಸಾಲದು ಉಳಿದ ಸೌಲಭ್ಯದ ಬಳಕೆಯ ಮೇಲೂ ಬೆಳಕು ಬೀರಬೇಕಿದೆ.

ಶಿಕ್ಷಕರೆಂದರೆ ಸಾಕು ‘ಗಂಟೆ ಹೊಡಿ, ಸಂಬಳ ತಗೋ’ ಎನ್ನುವ ಮಾತಿದೆ. ಇದು ಎಷ್ಟರಮಟ್ಟಿಗೆ ಸತ್ಯವೋ ತಿಳಿಯದು ಆದರೆ ಇಂದಿನ ಶಿಕ್ಷಕ ಸಮುದಾಯವು ಶಿಕ್ಷಣ ನೀಡುವುದನ್ನು ಒಂದು ಸಂಬಳ ದೊರೆಯುವ ಕೆಲಸವನ್ನಾಗಿಯಷ್ಟೇ ಮಾಡುತ್ತಿದ್ದಾರೆ.
ಶಿಕ್ಷಕರಾಗುವವರೆಗೆ ಏನೆಲ್ಲಾ ಕಷ್ಟಪಟ್ಟು ಸ್ಪರ್ಧಾತ್ಮಕವಾಗಿ ಓದಿರುತ್ತಾರೆ. ಆದರೆ, ಶಿಕ್ಷಕರಾಗಿ ಸೇರಿದ ನಂತರ ನಮ್ಮ ವಿದ್ಯಾರ್ಥಿಗಳು ಸರಿಯಾಗಿ ಕಲಿಯುತ್ತಿಲ್ಲ, ತುಂಟಾಟ ಜಾಸ್ತಿ, ಶಾಲೆಗೆ ಸರಿಯಾಗಿ ಬರುತ್ತಿಲ್ಲ, ಶಾಲೆಯಲ್ಲಿ ಅದು ಇಲ್ಲ ಇದು ಇಲ್ಲ. ಅಬ್ಬಬ್ಬಾ! ಇಂತಹ ಸಾಲು ಸಾಲು ಸಬೂಬುಗಳನ್ನು ನೀಡಿ ತಮ್ಮ ಕರ್ತವ್ಯಗಳಿಂದ ನುಣಿಚಿಕೊಂಡು ತಮ್ಮ ಸುತ್ತಾ ರಕ್ಷಣಾತಂತ್ರ ಹೆಣೆದುಕೊಂಡು ಬಿಡುತ್ತಾರೆ.ಇಂತಹ ಸವಾಲುಗಳನ್ನು ಸ್ವೀಕರಿಸಿ ಮಗುವನ್ನು ಕಲಿಕೆಯಲ್ಲಿ ತೊಡಗುವಂತೆ ಹೇಗೆ ಮಾಡವುದು ಎಂದು ಪ್ರಾಥಮಿಕವಾಗಿಯು ಚಿಂತನೆ ನೆಡೆಸುವುದಿಲ್ಲ.

ಇನ್ನೂ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ತರುವ ಸವಾಲಿನ ಪ್ರಮುಖ ಕಾರಣ ‘ಪೋಷಕರ ನಿರಾಸಕ್ತಿ’ ಆಶ್ಚರ್ಯದಿಂದ ನೋಡದಿರಿ, ಶಾಲೆಗೆ ಕಳಿಸಲು ನಿರಾಸಕ್ತಿಯಂತೆ! ಇಡೀ ಸಮಾಜವೇ, ಬೆಳಗ್ಗೆ ಎದ್ದು ಮಕ್ಕಳಿಗೆ ಸ್ನಾನ ಮಾಡಿಸು, ಸಮವಸ್ತ್ರ ಹಾಕು, ಶಾಲೆಗೆ ಕಳುಹಿಸುವುದೇ ತಮ್ಮ ಬೆಳಗಿನ ಕರ್ತವ್ಯವೆನ್ನುವಂತೆ ಮಾಡುತ್ತಿರುವಾಗ ಪೋಷಕರ ನಿರಾಸಕ್ತಿಗೆ ಸಮಯವೆಲ್ಲಿದೆ ಹೇಳಿ? ಬಡತನ ವಿರಬಹುದು,ಮಕ್ಕಳಿಗೆ ಉಚಿತವಾಗಿ ಸಿಗುವ ಸೌಲಭ್ಯಗಳಿಂದ ಅವರನ್ನು ವಂಚಿಸುವ ಹಕ್ಕು ಪೋಷಕರಿಗಿಲ್ಲ. ಆದರೆ ಎಷ್ಟೋ ಪ್ರಕರಣಗಳಲ್ಲಿ ಮಗುವಿಗೆ ಕಲಿಯಲ್ಲಿ ಆಸಕ್ತಿ ಮೂಡುತಿಲ್ಲ. ‘ಕುದರೆಯನ್ನ ಕೆರೆವರೆಗೂ ಕರೆದುಕೊಂಡು ಬರಬಹುದು ಕೆರೆನೀರು ಕುಡಿಸೋಕೆ ಆಗುತ್ತಾ’,ಹಾಗೆಯೇ ಮಕ್ಕಳನ್ನು ಶಾಲೆಗೆ ಕರೆತರಬಹುದೇ ವಿನಃ ಹೆಚ್ಚಿನ ಆಸ್ಥೆ ವಹಿಸಿ ಶಾಲೆಯಲ್ಲಿ ಆ ಮಗುವನ್ನೇ ನೋಡಿಕೊಳ್ಳುವುದು ಸಾಧ್ಯವಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರ ವೃತ್ತಿ ಆಧಾರಿತವಾದ ಅಥವಾ ಕೌಶಲ್ಯ ಭರಿತ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೇ ಒದಗಿಸಿದ್ದೇ ಆದಲ್ಲಿ ಪೋಷಕರಿಗೂ, ಮಕ್ಕಳಿಗೂ ಅಔಪಚಾರಿಕ ಶಿಕ್ಷಣದ ನಿರಾಸಕ್ತಿ ಹೋಗಲಾಡಿಸ ಬಹುದಲ್ಲವೇ?

ಎಷ್ಟೋ ಶಿಕ್ಷಕರು ಶಾಲೆಗಳಲ್ಲಿ ನಮಗೆ ಹೆಚ್ಚಿವರಿಯಾಗಿ ಜನಗಣತಿ,ಚುನಾವಣಾ ಕರ್ತವ್ಯ, ಮಗುವಿನ ವಿದ್ಯಾರ್ಥಿ ವೇತನ, ಆಧಾರ್ ಕಾರ್ಡ್, ಪಾಸ್ ಬುಕ್ ಮಾಡಿಸುವುದು ಸಾಲದಕ್ಕೆ ಇಲಾಖೆಗೆ ಮಾಹಿತಿ ನೀಡುವುದು, ವರದಿ ತಯಾರಿಸುವುದು ,ಬಿಸಿಯೂಟ ಹೀಗೆ ಸಮಯದ ವ್ಯರ್ಥವಾಗುತ್ತಿರುವುದರ ಬಗ್ಗೆ ದೂರುಗಳು ನೀಡುತ್ತಿರುತ್ತಾರೆ, ಆದರೇ ಎಷ್ಟು ಜನ ಶಿಕ್ಷಕರು ಶಾಲಾ ಸಮಯವನ್ನು ಶಾಲೆಗಾಗಿ ,ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ? ಶಾಲೆಗೆ ಸಮಯಕ್ಕೆ ಸರಿಯಾಗಿ ಹಾಜರಿರುತ್ತಾರೆಯೇ? ಶಾಲಾ ವಿಶೇಷ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆಯೇ? ಪ್ರತಿ ವರ್ಷ ಶೈಕ್ಷಣಿಕ ಪ್ರಗತಿಯ ಬಗ್ಗೆ ಬೊಬ್ಬೆ ಹೊಡೆಯುವರು ತಮ್ಮ ಬೋಧನಾ ಕೌಶಲ್ಯಗಳಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಿದ್ದಾರೆಯೇ? ಎಂಬುದನ್ನೂ ಗಮನಿಸಬೇಕಿದೆ.

ಗುಣಮಟ್ಟದ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಧಾವಂತದಲ್ಲಿ ದಿನಕ್ಕೊಂದು ಹೊಸ ನಿಯಮಗಳನ್ನು ತರುತ್ತಿರುವುದಲ್ಲದೆ, ಅನಿಯಮಿತ ನೇಮಕಾತಿಯಿಂದಾಗಿ ಎಲ್ಲಾ ಹಂತದಲ್ಲೂ ಭ್ರಷ್ಠತೆಗೆ ಮಣೆ ಹಾಕುತ್ತಿದೆ. ನೇಮಕವಾದ ಶಿಕ್ಷಕರು ವಿಷಯವಾರುವಾಗಿರದೆ ಮಕ್ಕಳ ಅನುಪಾತಕ್ಕೆ ಅನುಗುಣವಾಗಿದೆ.ಸಾಲದಕ್ಕೆ ದೈಹಿಕ ಶಿಕ್ಷಣ, ಕಲಾ ಶಿಕ್ಷಕರು, ಕಂಪ್ಯೂಟರ್ ಶಿಕ್ಷಣ ಇವುಗಳು ಕೇವಲ ಅಂಕಪಟ್ಟಿ ವಹಿಯ ದಾಖಲೆಗೆ ಸೀಮಿತವಾಗಿಯೇ ಉಳಿದಂತಿದ್ದು ಈ ವಿಷಯದ ಶಿಕ್ಷಕರ ನೇಮಕ ಕನ್ನಡಿಯೊಳಗಿನ ಗಂಟಂತಾಗಿದೆ.

ಇನ್ನೂ ಶಿಕ್ಷರ ವರ್ಗಾವಣೆ ರಾಜ್ಯಾದ್ಯಂತ ಸುದ್ದಿಯಲ್ಲಿದ್ದ,ಸುದ್ದಿಯಲ್ಲಿರುವ ಸಂಗತಿಯಾಗಿದೆ. ನಿರ್ದಿಷ್ಟ ನಿಯಮ ನಿರೂಪಿಸಿ, ನಿಯಮಿತವಾಗಿ ಕ್ರಮಗಳನ್ನು ಕೈಗೊಂಡಿದ್ದೇ ಆದಲ್ಲಿ, ತನು ಮನ ಸಮರ್ಪಣಾ ಭಾವದಿಂದ ಕೆಲವಾರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾರೆ.

ಇದೆಲ್ಲದರ ಮಧ್ಯೆ ಮಾಹಿತಿ ತಂತ್ರಜ್ಞಾನದ, ಜಾಗತೀಕರಣದ, ಓಟದ ಜೊತೆ ಜೊತೆಗೆ ಗುಣಾತ್ಮಕ ಶಿಕ್ಷಣ ನೀಡುವ ಗುರುತರ ಜವಾಬ್ದಾರಿ ಹೊತ್ತ ಶಿಕ್ಷಣ ವ್ಯವಸ್ಥೆ ಭಾರಕ್ಕೆ ಬಾಗಿದೆ.

ಒಟ್ಟಿನಲ್ಲಿ ಶಿಕ್ಷಣ ಎನ್ನುವುದು ಎಲ್ಲಕ್ಕಿಂತ ಭಿನ್ನ ಮತ್ತು ವಿಶಾಲ ವ್ಯಾಪ್ತಿ ಹೊಂದಿರುವ ವ್ಯವಸ್ಥೆ .ಭಾರತದ ಭವಿಷ್ಯ ತರಗತಿ ಕೋಣೆಗಳಲ್ಲಿ ಮೂಲೆಗುಂಪಾಗದೆ, ನ್ಯೂನತೆಗಳೊಂದಿಗೆ ಬೆಳೆದರೂ, ಕೇಸರಲ್ಲಿ ಬೆಳೆದ ಕಮಲದಂತೆ ತನ್ನ ಪ್ರಾಮುಖ್ಯತೆ ಗಳಿಸಿ ಉಳಿಸಿಕೊಳ್ಳಬೇಕಿದೆ.

*******************************************************************

ಪರಿಚಯ:

ಶೃತಿ ಮೇಲಿಸೀಮೆ, ಹವ್ಯಾಸಿ ಬರಹಗಾರರು. ಗೆಣಿಕೆಹಾಳು( ಪೋಸ್ಟ್), ಕುರುಗೋಡು ತಾಲೂಕು, ಬಳ್ಳಾರಿ ಜಿಲ್ಲೆ

7 thoughts on “ಶಿಕ್ಷಣ

  1. ಆತ್ಮೀಯ… ಗೆಳತಿಯೇ….ನಿಮ್ಮ ಅಮೂಲ್ಯ ಬರಹಕ್ಕೆ…. ನನ್ನ ಧನ್ಯವಾದಗಳು…. ಪ್ರಸ್ತುತ ಪರಿಸ್ಥಿಯಲ್ಲಿ ವ್ಯವಸ್ಥೆಯನ್ನು ದೂರುತ್ತಾ ಕುರುವುದುಕ್ಕಿಂತ…. ವ್ಯವಸ್ಥೆಯ ಬದಲಾವಣೆಗೆ… ನಮ್ಮಿಂದಾದ…. ಸಹಾಯ ಮಾಡುವುದು ಉತ್ತಮ.

  2. ಇಂದಿನ ನಮ್ಮ ಶೈಕ್ಷಣಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.ಶೃತಿ ಚೆನ್ನಾಗಿದೆ.

Leave a Reply

Back To Top