ಮಲ್ಲಿಗೆ-ಸಂಪಿಗೆ
ಅನು ಮಹಾಲಿಂಗ
ಅಂಗಳದಿ ಹರಡಿತ್ತು ಹಸಿರಿನ ಮಲ್ಲಿಗೆ ಚಪ್ಪರ
ಮಳೆಹೊಯ್ದು ತಂಪಾಗೆ ಸೊಂಪಾದ ಹಂದರ
ಬಳ್ಳಿಯ ತುಂಬೆಲ್ಲ ಮಲ್ಲಿಗೆ ಹೂ ರಾಶಿ
ಸಂಜೆಗೆ ಕೊಯ್ದರೆ ಮನೆತುಂಬ ಘಮ ಸೂಸಿ
ಮನದೊಡೆಯ ತಂದಿರುವನು ಘಂಗುಡುವ ಮಲ್ಲಿಗೆ
ನಾರಿಯ ಮುಡಿಯೇರಿ ನಗುತಿರಲು ಮೆಲ್ಲಗೆ
ಹಿತ್ತಲ ಮರದಲ್ಲಿ ಬಿರಿದಾಳು ಸಂಪಿಗೆ
ಘಮನವಾ ಸೂಸ್ಯಾಳು ಸುತ್ತೆಲ್ಲಾ ಸುಮ್ಮಗೆ
ಬಾಲೆಯ ಮನ ಸೆಳೆಯೊ ಗಗನದ ಸಂಪಿಗೆ
ಮುಡಿಸೇರಿಸಲು ಪರದಾಟ ಪಕ್ಕದ ಮನೆ ಕೆಂಪನಿಗೆ
ಮಲ್ಲಿಗೆ ಸಂಪಿಗೆ ಪ್ರತ್ಯೇಕ ರಾಣಿಯರು
ಅವರವರ ಕಕ್ಷೆಯಲಿ ಅವರವರೆ ಬೀಗುವರು.
******************************