ಜೀವಾತ್ಮ
ಕೊಟ್ರೇಶ್ ಅರಸೀಕೆರೆ
ಯಾವುದೋ ಹಕ್ಕಿ
ಹಾಕಿರುವ ಈ ಹಿಕ್ಕೆ
ಈಗ ಸಸಿಯಾಗಿದೆ!
ಉದರಾಂಬರದ ಕಾರಣ
ನುಂಗಿ,ನೀರು ಕುಡಿದುದೆಲ್ಲಾ
ಏನೆಲ್ಲಾ ಸಕಾರಣಗಳಿಗೆ ಕಾರಣ!!
ಜಗಕ್ಕೆ ಬಿದ್ದ ಕಿರಣ,ಮೇಲಿಂದ ಬಿದ್ದ ನೀರ
ಬಿಂದು,ಸುಯ್ಯನೇ ಬೀಸುವ ಗಾಳಿ……
ಯಾವ ಯಾವುದಕ್ಕೆ ಸಂಬಂಧ!!
ಅಲ್ಲೊಂದು ಜೋಡಿ ಹಕ್ಕಿ,
ಇಲ್ಲೊಂದು ಮಿಲನ,
ನಳ ನಳಿಸುತ್ತಿರುವ ಹೂ…
ಒಂಟಿಯಾಗಿ ಯಾವುದೋ ಶಿಖರ
ತೇಲಿ ಹೋಗುತ್ತಿರುವ ಮೋಡಗಳು
ಯಾವ ದಂಡಯಾತ್ರೆಗೆ…….
ಜೀವ ಇರಲೇಬೇಕಿಲ್ಲ ಚಲನೆಗೆ
ಸೃಷ್ಟಿಯ ಸಾರ ಯಾರು ಹೀರಿದ್ದಾರೆ?
ಯಾರೋ ಮೇಲೋ ಯಾರ ವಿಜಯ?
ಅವನು ಅವಳ ಮೇಲೆ,ಅವಳು ಇವನ…
ಬೆತ್ತಲ ದೇಹದ ತರತರ ತಡುಕುವಿಕೆಯಲ್ಲಿ ಕಾಲ…
ಹಿಂದಿಲ್ಲ…ಮುಂದಿಲ್ಲ
ಬರೀ ಸದ್ದು..ಸಾವು
ಜನನ ಜನೇಂದ್ರಿಯ!
ದೇಶ,ರಾಜ್ಯ,ರಾಜ
ಗಡಿಯಂತೆ…ಉಗಿ ಮುಖಕ್ಕೆ!
ಯಾವ ಸಾಮ್ರಾಜ್ಯ ಈ ಗ್ಯಾಲಾಕ್ಸಿಯಲ್ಲಿ
ಯಾವ ಪಥ,ಚಲನೆ,ಗಾಳಿ,ಅಣು ಅಣುವೂ
ಯಾರೂ ತೋರದ ಮಹಾನ್ ಕಪ್ಪು ಕುಳಿ
ಒಂದಷ್ಟು ಉಸಿರು,ಜೀವ…
ಸಾಕಷ್ಟೇ..
ಅಹಂಕಾರದ ಬುಗ್ಗೆಗೆ?
ಅದಕ್ಕೆ ಇದಿಯೋ ಮರುಳೇ
ಮರಳು ಮರಳು..ಮರಳುಗಾಡು
ಮರುಳೇ…ಮರುಳ ಜೀವ!
ಯಾವ ಹಕ್ಕಿಯ ಹಾಡು
ಯಾವ ಹಕ್ಕಿಯ ಹಿಕ್ಕೆ
ನಾವೆಲ್ಲಾ….. !!
ಆದರೂ ರುಜು ಬೇಕು
ಅವಳ ಒಳಗೆ!
ನನ್ನದೇ ಜೀವ ಅನ್ನುವ
ಚಪಲಕ್ಕೋ….ಅಹಂಕಾರಕ್ಕೋ..!!
ಮತ್ತದೇ ಹಕ್ಕಿ,ಹಿಕ್ಕೆ.
ನೀರ ಬಿಂದು…ಸರಸರನೇ
ಸರಸ…ಜೀವ ಜೀವಾತ್ಮ!
************************************
ಪರಿಚಯ:
ಕವಿ,ಸಾಹಿತ್ಯಾಸಕ್ತರು
ಅರಸೀಕೆರೆ,ಹಾಸನ ಜಿಲ್ಲೆ
ಚನ್ನಾಗಿದೆ.
ತುಂಬಾ ಚೆನ್ನಾಗಿದೆ ಸ್ನೇಹಿತರೆ.